ಅಕ್ಕ ಸುಬ್ಬಕನ ಪ್ರವಚನ (ಲಲಿತ ಪ್ರಬಂಧ)
– ಮಚ್ಚೇಂದ್ರ ಪಿ ಅಣಕಲ್.
ಉದಯೋನ್ಮಖ ಕವಯತ್ರಿಯಾದ ಸುಬ್ಬಕ್ಕ ಕಳೆದಾರು ವರ್ಷಗಳಿಂದ ಕೆಲ ಕವನ ಸಂಕಲನಗಳನ್ನು ಪ್ರಕಟಿಸಿದ ಮಾತ್ರಕ್ಕೆ ಆಕೆ ಖ್ಯಾತ ಸಾಹಿತಿ, ಪ್ರಖ್ಯಾತ ಸಾಹಿತಿ, ಮಹಿಳಾ ಲೇಖಕಿ ಅಂತ ಇನ್ನೂ ಏನೇನೆಲ್ಲ ಅನ್ವರ್ಥನಾಮಗಳು ತನ್ನ ಹೆಸರಿನ ಮುಂದೆ ಸೇರಿಸಿ ಯಾವುದೋ ಒಂದು ಸಾಂಸ್ಕೃತಿಕ ಸಾಹಿತ್ಯ ಸಂಘಟನೆಯ ರಾಜ್ಯ ಅಧ್ಯಕ್ಷರೆಂದು ಜಿಲ್ಲಾ ಬಸ್ ನಿಲ್ದಾಣದ ಎದುರಿಗೆ ದೊಡ್ಡ ಕಟೌಟ ಹಾಕಿ ರಾಜಕಾರಣಿಗಳಿಗೆ *’ಹಾರ್ದಿಕ ಶುಭಾಶಯಗಳು’* 😁 ಅಂತ ಹಲ್ಲು ಕಿರಿದು ನಗುಮೊಗದ ಪೋಟೊದೊಂದಿಗೆ ಕೈ ಮುಗಿದು ಹೊಸ ವರ್ಷಕ್ಕೋ ಅಥವಾ ದಸರಾ, ಯುಗಾದಿ ಮೊದಲಾದ ರಾಷ್ಟ್ರೀಯ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಈ ರೀತಿ ತನ್ನ ಹೆಸರಿನೊಂದಿಗೆ ಆ ಪದಗಳನ್ನು ಸೇರಿಸಿ ಜನರಿಗೆ ಶುಭ ಕೋರುತ್ತಾಳೆ. ಮತ್ತು ಆಕೆ ಆ ಕಟೌಟಿನ ಪೋಟೋ ತೆಗೆದು ಫೇಸ್ ಬುಕ್, ವಾಟ್ಸಪ ಟ್ವಿಟರ್ ಮೊದಲಾದ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಚಾರ ಪಡೆಯುವ ಗೀಳು ಬೆಳೆಸಿಕೊಂಡಳು ಕಾರಣ ತನಗೆ ಬೇಗ ಕರ್ನಾಟಕ ತುಂಬೆಲ್ಲ `ದೊಡ್ಡ ಸಾಹಿತಿ’ ಅಂತ ಗುರ್ತು ಹಿಡಿಯಲಿ ಅಂತ. ಹಾಗೇನಾದ್ರೂ ಆದರೆ ನಾನೇ ನಮ್ ಜಿಲ್ಲೆಯೊಳಗೆ ಹೆಸರುವಾಸಿ ಸಾಹಿತಿ ಅನ್ನೋದು ಅವಳ ಕಲ್ಪನೆ. ಆದರೆ ಈ ಕೊರನಾ ಮಹಾಮಾರಿ ಬಂದು ಈಗ ತಾನೆ ಬಾಟಿಗೆ ಬಂದ ಬೀಳಿ ಜೋಳದ ದಾಂಟಿಗೆ ರೋಗ ಬಡಿದು ಬೆಳೆಯೆಲ್ಲ ನಾಶವಾದಂತೆ ಇವಳ ಪ್ರಚಾರ ಕಾರ್ಯ ಸ್ಥಗಿತವಾಗಿತ್ತು. ಎಲ್ಲ ಕಟೌಟಗಳು ನೆಲಕುರುಳಿದವು. ಯಾವುದೇ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಭೆ ಸಮಾರಂಭಗಳು ಮಾಡದಂತೆ ಭಾರತ ಸರ್ಕಾರ ನಿರ್ಭಂದ ಹೆರಿದರಿಂದ ಚಿಂತೆಗಿಡದ ಸುಬ್ಬಕ್ಕ ಮಾಡುವುದೇನೆಂದು ಯೋಚಿಸುತ್ತಾ ವಾಟ್ಸಪ, ಫೇಸ್ ಬುಕ್ ನಲ್ಲಿ ಕೈಯಾಡಿಸುತ್ತಾ ಕಾಲ ಕಳೆಯುತ್ತಿರುವಾಗ ನಗರದ ಗವಿಮಠದ ಅಕ್ಕ ಮಹಾದೇವಿಯವರು ಫೇಸ್ ಬುಕ್ ಲೈವ್ ನಲ್ಲಿ ಪ್ರವಚನ ಹೇಳುತ್ತಿರುವುದು ಕಂಡು ಬಂದಿದೆ.
“ನಾನ್ಯಾಕೆ ಈ ರೀತಿ ಪ್ರವಚನ ಸುರು ಮಾಡಬಾರದು ?
ಅಂತ ಯೋಚಿಸುತ್ತಾ ಒಂದು ನಿರ್ಧಾರಕ್ಕೆ ಬಂದು
‘ಅವ್ವಾ ! ಸುಬ್ಬಕ್ಕನ ಪ್ರವಚನ’* ಅಂತ ಹೆಸ್ರು ಕೊಟ್ಟು ನಾನು ಲೈವ್ ನಲ್ಲಿ ಪ್ರವಚನ ಹೇಳಬಹುದಲ್ಲಾ ? ಬೇಡ ಬೇಡ. ಈ ಅವ್ವಾ ! ಅನ್ನೋ ಪದ ಬೇಡ ನನಗಿನ್ನೂ ಅಷ್ಟೊಂದು ವಯಸ್ಸಾಗಿಲ್ಲ. `ಅಕ್ಕ ಸುಬ್ಬಕ್ಕನ ಪ್ರವಚನ’* ಅಂತ ಟೈಟಲ್ ಕೊಟ್ಟು ದಿನ ರಾತ್ರಿ ಊಟವಾದ ಮೇಲೆ 8 ಗಂಟೆಗೆ ಪ್ರವಚನ ಸುರುಮಾಡಿದರಾತು” ಅಂತ ನಿರ್ಧರಿಸಿ ಬ್ಯಾನರ್ ಬರೆಸಿ ಮನೆಯ ಮಧ್ಯದ ಮಾಡು ಮುಚ್ಚುವಂತೆ ಕಟ್ಟಿ ಪ್ರವಚನ ಸುರು ಮಾಡುವುದಕ್ಕೂ ಮೊದಲೆರಡು ಗಂಟೆಗಳ ಕಾಲ ತನಗೆ ಬೇಕಾದವರಿಗೆ ರಾತ್ರಿ ಫೇಸ್ ಬುಕ್ ಲೈವ್ ಗೆ ಜೋಯಿನ್ ಆಗಲು ಹೇಳಿ ವಾಟ್ಸಪ ಗುಂಪುಗಳಲ್ಲಿ ‘ಅಕ್ಕ ಸುಬ್ಬಕ್ಕನ ಪ್ರವಚನ’ ಅಂತ ಸಂದೇಶ ಹರಿಯ ಬಿಟ್ಟು ಹೆಚ್ಚು ಲೈಕ್ ಮತ್ತು ಶೇರ್ ಮಾಡಿ ಕಾಮೆಂಟ್ ಮಾಡಿ ಮರೆಯದಿರಿ. ಅಂತ ಕೇಳಿಕೊಂಡಳು. ಮತ್ತೇ ತನಗೆ ತೀರ ಆಪ್ತರಾದವರಿಗೆ ಕರೆ ಮಾಡಿ “ನೀವು `ಲೈವ್’ ನಲ್ಲಿ ಬರಲೇ ಬೇಕು. ನೀವು ಲೈವ್ ನಲ್ಲಿ ಬಂದು ನನಗೆ ಸಪೋರ್ಟ ಮಾಡದೇ ಹೋದ್ರೆ ಇನ್ಯಾರು ಸಪೋರ್ಟ ಮಾಡ್ತಾರೆ ? ಅಂತ ದುಂಬಾಲು ಬಿದ್ದು ಕೇಳಿಕೊಂಡಾಗ ಕೆಲವರು ಅನಿವಾರ್ಯವಾಗಿ ಒಪ್ಪಿಗೆ ಸೂಚಿಸಿದ್ದರು.
ರಾತ್ರಿ ಸರಿಯಾಗಿ 8 ಗಂಟೆ. ಸುಬ್ಬಕ್ಕ ಮೊದಲ ದಿನವಾದರಿಂದ ಹೊಸ ಸೀರೆ ಉಟ್ಟುಕೊಂಡು, ಹಣೆ ಮೇಲೆ ವಿಭೂತಿ ಧರಿಸಿ ಸ್ವಲ್ಪ ಮೇಕಪ್ ಮಾಡಿಕೊಂಡು `ಲೈವ್’ ನಲ್ಲಿ ಬಂದು “ಎಲ್ಲರಿಗೂ ನಮಸ್ಕಾರಗಳು ! ನಾನು ಸುಭದ್ರ ಸಿ ಪೋದ್ದಾರ. ಪ್ರಖ್ಯಾತ ಸಾಹಿತಿಗಳು, ಪ್ರಗತಿಪರ ಚಿಂತಕರು ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತರು. ಅಂತ ಎರಡು ಕೈ ಜೋಡಿಸಿ ಹುಸಿ ನಗೆಯ ಮುಗುಳ್ನಗೆ ಬೀರಿ ಮಾತು ಸುರು ಮಾಡಿದಳು.
“ನಾನು ಇವತ್ತೊಂದು ಹೊಸ ವಿನೂತನ ಪ್ರಯೋಗ ಸುರು ಮಾಡಿದ್ದೀನಿ. ಅದೇನಂದ್ರ ಈ ಕೋರನಾ `ಲಾಕ್ ಡೌನ್’ ಸಮಯದಲ್ಲಿ ಎಲ್ಲರೂ ಮನೆಯಿಂದ ಹೊರ ಹೋಗದೆ ನಾನು ಪ್ರತಿದಿನ ಒಂದು ವಿಷಯದ ಕುರಿತು ಪ್ರವಚನ ಮಾಡುತ್ತಿದ್ದೇನೆ.
‘ಅಕ್ಕ ಸುಬ್ಬಕ್ಕನ ಪ್ರವಚನ’* ಅಂತ ಕೂಡ ಇದಕ್ಕೆ ಹೆಸರಿಡಲಾಗಿದೆ. ಹಾಗಾದರೆ ಈ ಪ್ರವಚನ ಅಂದ್ರೆ ಏನು ? ಅಂತ ನಾ ಈಗಲೇ ಹೇಳೋಲ್ಲ. ದಿನಾ ಒಂದು ಟಾಪಿಕ್ ತಗೊಂಡು ನಾ ಮಾತಾಡಕಿ ಇದ್ದೀನಿ. ನೀವು ಈ ನನ್ ಮಾತುಗಳನ್ನು ಕೇಳಿ ಬದಲಾದರೆ ಸಾಕು. ನಾ ಪ್ರತಿದಿನ ಒಂದೊಂದು ವಿಷಯ ತಗೊಂಡು ನಿಮ್ಮ ಮುಂದೆ ಬರ್ತಿನಿ. ಲೈವ್ ನಲ್ಲಿ ಬಂದು ಮಾತಾಡೋದು ಅಷ್ಟೊಂದು ಸಾಮಾನ್ಯ ಮಾತಲ್ಲ. ಅದು `ಮಾತು ಬೆಳ್ಳಿ, ಮೌನ ಬಂಗಾರ’ ಅಂತಾರಲ್ಲ ? ಹಾಗೆ.
ಮತ್ತೇ “ಮಾತು ಮನೆ ಕೆಡಿಸಿತ್ತು –” ಅಂತಾರೆ ಯಾವ ಮಾತು ಆಡಬೇಕು ಯಾವ ಮಾತು ಆಡಬಾರದು ಅನ್ನೋದು ಇಲ್ಲಿ ಹೇಳಿಕೊಡ್ತಿನಿ. “ಮಾತು ಮುತ್ತು, ಮಾತೇ ಮೃತ್ಯು” ಅಂತಾರೆ. ಇಲ್ಲದಿದ್ದರೆ ಒಮ್ಮೊಮ್ಮೆ ಮಾತಿನಿಂದ ಜೀವ ಹೋಗಬಹುದು. ಹುಷಾರಾಗಿರಿ.
ನಿಮ್ಮ ಒಳ್ಳೆ ಮಾತಿನಿಂದ ಇನ್ನೊಬ್ಬರ ಜೀವಕ್ಕೆ ಅಪಾಯ ಇದೆ ಅಂತ ಗೊತ್ತಾದ್ರೆ ಖಂಡಿತ ನೀವು ಸುಳ್ಳನ್ನೇ ಸತ್ಯವೆಂದು ಜೋರಾಗಿ ಹೇಳಬೇಕು.
“ನುಡಿದರೆ ಮುತ್ತಿನ ಹಾರದಂತಿರಬೇಕು…….” ಅಂತ ಅಣ್ಣ ಬಸವಣ್ಣ ಹೇಳಿಲ್ವಾ ? ಅದಕ್ಕೆ ನಮ್ಮ ಮಾತುಗಳು ಮುತ್ತಿನಂತೆ ಹೊಳೆಯುತ್ತಿರಬೇಕು.
“ಮಾತು ಬಲ್ಲವನಿಗೆ ಜಗಳವಿಲ್ಲ–” ಅಂತ ಗಾದೆ ಮಾತೊಂದಿದೆ. ಅದು ನೀವು ಕೇಳಬೇಕು. ಆದ್ದರಿಂದ ಒಳ್ಳೆಯ ಮಾತುಗಾರನಾಗಬೇಕು.
“ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ಧಿಯ ಬೀಡು ನಾಲಿಗೆ ” ಅಂತ ದಾಸವಾಣಿಯು ನೀನು ಕೇಳಬೇಕು. ಇರ್ಲಿ. “ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ” ಅಂತ ಮತ್ತೊಂದು ಗಾದೆ ಮಾತಿದೆ. ಹೀಗೆ ಮಾತಿನ ಬಗ್ಗೆ ಒಂದೇ ! ಎರಡೇ ? ಹೇಳ್ತಾ ಹೋದ್ರೆ ನೂರಾರು ಉದಾಹರಣೆ ಕೊಡಬಹುದು. ಆದ್ದರಿಂದ ಇಂದು ನಾವು ಒಳ್ಳೆಯ ಮಾತಾಡಿ ಗೆಳೆಯರಾಗೋಣವೆಂದು ಈ ಫೇಸ್ ಬುಕ್ `ಲೈವ್’ ನಲ್ಲಿ ಎಲ್ಲಾ ಬಿಟ್ಟು ಬಂದು ನಿಂತಿದ್ದೇನೆ.” ಅಂತ ಆಕೆ ಹೇಳುತ್ತಿರುವಾಗ ಕೆಲವು ಕಳ್ಳ ಬೆಕ್ಕು ಕಿಟಿಕಿ ತೆರೆದು ಒಳ ಬಂದಂತೆ ಸುಬ್ಬಕ್ಕನ ಲೈವ್ ಗೆ ನುಸುಳಿದರು.
ದಿನಾ ಸುಬ್ಬಕ್ಕ ತನ್ನ ಪ್ರವಚನ ಸಮಯಕ್ಕೆ ಸರಿಯಾಗಿ ರಾತ್ರಿ 8 ರ ಸುಮಾರಿಗೆ ಫೇಸ್ ಬುಕ್ `ಲೈವ್’ ನಲ್ಲಿ ಬಂದು ಮಾತಾಡುವುದು ಜಗಜಾಹಿರಾಗಿ ಬಿಟ್ಟಿತ್ತು. ಆಕೆ ಒಮ್ಮೊಮ್ಮೆ ಪ್ರವಚನ ಸುರು ಆಗುವುದಕಿಂತ ಮುಂಚೆ “ಹಲ್ಲೋ ! ಕೇಳಸ್ತಾ ಇದೆ ಏನ್ರೀ ?” ಅಂತ ಸಭೆ ಸಮಾರಂಭದಲ್ಲಿ ಮೈಕ್ ಹಿಡಿದು ಓದುವಂತೆ ಚಿರುವಳು. ಆಗ ಲೈವ್ ವಿಕ್ಷಕರೆ ! ಚಾಟ್ ಮಾಡಿ
“ಕೇಳುತ್ತಿದೆ ಮಾತಾಡಿ ಅಕ್ಕಾ ! ” ಅನ್ನೋರು. ಮತ್ತೆ ಮುಂಬೈಯಿಂದ ವೀರೇಶ ಅನ್ನೋರು “ಕೇಳುತ್ತಿದೆ ಅಕ್ಕಾ. ! ” ಅಂತ ಕಾಮೆಂಟ್ ಮಾಡಿದ.
ಆಗ ಆಕೆ “ಅಗೋ ! ಅಗೋ ! ನನ್ ಮಾತು ಮುಂಬೈವರೆಗೂ ಹೋಯ್ತು ಅಂತ ಖುಷಿಯಾಗಿ ಕುಣಿದಾಡುತ್ತಿದ್ದಳು.
ಆಗ ಒಬ್ಬ ಹೈದ್ರಾಬಾದನಿಂದ ಮತ್ತೊಬ್ಬ ದೆಹಲಿಯಲ್ಲಿ ಬೆಂಗಳೂರು ರಾಯಚೂರ್ ಯಾದಗಿರಿ. ಬೀದರ, ಹುಬ್ಬಳಿ ಬೆಳಗಾಂವ ಧಾರವಾಡ ಉಡಪಿ, ಕಲ್ಕತ್ತಾ, ಚೆನೈ, ಪುಣೆ, ನಾಸಿಕ್ ಗೋವಾಬೈ, ಮಸ್ಕತ್, ಅಮೇರಿಕಾ ಮೊದಲಾದ ಕಡೆಯ ಅವಳ ಫೇಸ್ ಬುಕ್ ಪ್ರೆಂಡ್ಸ್ ಲೈವ್ ಗೆ ಬಂದು ಚಾಟಿಂಗ ಮಾಡೋದನ್ನ ನೋಡಿ ನಾನು ಎಲ್ಲೋ ಸಾಹಿತಿಯಾಗಿ ಜಗತ್ತಿನಾದ್ಯಂತ ಪರಿಚಯವಾದೆ ಅಂತ ಒಳಗೊಳಗೆ ಖುಷಿಯಾಗಿ ಮಾತಾಡಿದೆ.
“ನೋಡಿ ಮನುಷ್ಯನಿಗೆ ಏನೇ ಕಷ್ಟ ಬಂದ್ರು ಯಾರು ಹೆದರಬಾರದು. ನಮಗ ಆಗಲಾರದವು ಏನಾದ್ರೂ ಹೊಟ್ಟೆ ಕಿಚ್ಚಿನಿಂದ ಬರೆದ್ರು ಅವರ ಕೈಲಿ ಏನೂ ಮಾಡಲಾಕ್ ಆಗೋದಿಲ್ಲ. ಹೆಚ್ಚೇಂದ್ರ ಅವ್ರು ಒಬ್ಬ ಲಲಿತ ಪ್ರಬಂಧ ಬರಿಬೋದು. ಅದ ಹೆಚ್ಚಿ ಅವರ ಕೈಯಿಂದ ಏನೂ ಮಾಡಲಾಕ್ ಆಗೋಲ್ಲ. ನಾನು ನೋಡ್ರೀ ಐದಾರು ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ನಾಕಾರು ಪುಸ್ತಕ ಬರೆದು ನಿಮ್ ಮುಂದೆ ಬಂದ ನಿಂತ್ತಿನಿ. ಸುಮ್ಮ ಸುಮ್ನೆ ಆಗೋಲ್ಲ. ಎಲ್ಲದಕ್ಕೂ ಶ್ರಮ ಬೇಕು. ಮತ್ತ ನಿಮ್ಮಗ ಮನಸ್ಸಿನ್ಯಾಗ ಆಗೋಲ್ಲ ಅಂತ ಏನಾದ್ರೂ ಅನಿಸಿದ್ರ ಮೊದ್ಲ ಅದು ನಿಮ್ ಮೈಂಡ್ ಸೆಟ್ ನಿಂದ ತೆಗೆದು ಹಾಕ್ರಿ. ನಾನಂತು ನನ್ನ ಮೈಂಡ ಸೆಟ್ ಪೀಟ್ ಮಾಡಿಕೊಂಡೆ ಇದ್ದೀನಿ. ಯಾರಾದ್ರು ಅದು ಹಾಂಗಲ್ಲ ಹಿಂಗೆ ಅಂತ ಬುದ್ದಿ ಹೇಳಿದ್ರೆ ನಾ ಕೇಳಾಕಿ ಅಲ್ಲ . ಯಾಕೆಂದ್ರೆ ನನ್ ಮೈಂಡ್ ಸೆಟ್ಟೇಟ್ ಮಾಡಲಿಕ್ಕೆ ಬರೋದಿಲ್ಲ. ಅದು ಮೊದಲು ಸೆಟ್ ಆಗಿದೆ. ಅಂತ ತಲೆ ಬುಡು ಒಂದೂ ಅರ್ಥವಾಗದಂತೆ ಮಾತು ಸುರು ಮಾಡಿದಳು . ಇದನ್ನು ಕೇಳಿದವರಲ್ಲಿ ಒಬ್ಬ `ಬಕ್ವಾಸ್’ ಅಂತ ಚಾಟ್ ಮಾಡಿ ಲೈವನಿಂದ ಹೊರಟು ಹೋಗಿರುವುದು ಕಂಡುಬಂದಿದೆ, ಆಕೆ ಪ್ರವಚನದ ಮಧ್ಯದಲ್ಲಿ ತನಗೆ ಆಗದವರ ಕುರಿತು ಪರೋಕ್ಷವಾಗಿ ವಿವಾದದ ಮಾತುಗಳನ್ನಾಡಿ ವಿಕ್ಷಕರಿಗೆ ಗೊಂದಲ ಸೃಷ್ಠಿ ಮಾಡಿದ್ದು ಇದನ್ನು ನೋಡಿದ ಕೆಲವರು ಸಿಡಿಮಿಡಿಯಾಗಿ ಲೈವ್ ನಿಂದ ಎಗ್ಶಿಟ್ ಆಗುತ್ತಿರುವುದು ಅವಳ ಅನುಭವಕ್ಕೆ ಬರಲಿಲ್ಲ.
ಮತ್ತೆ ಕೆಲವರು “ಇವಳಿಗ್ಯಾಕ್ ಬಂತು ಇಂಥಹ ಬುದ್ಧಿ ? ಗಂಡ-ಹೆಂಡ್ತಿ, ಮಕ್ಕಳು-ಮರಿ, ತುಂಬಿದ ಸಂಸಾರ. ಕೈ ತುಂಬ ಸಂಬಳ ಇರುವಾಗ ಈ `ಲಾಕ್ ಡೌನ್’ ನಲ್ಲಿ ಹಾಯಾಗಿ ಮನೆಯಲ್ಲಿ ಕುಳಿತು ಧಾರಾವಾಹಿನೋ ಅಥವಾ ಸಿನಿಮಾನೋ ನೋಡ್ತಾ ಕಾಲ ಕಳೆಬಾರದೆ ? ಅಥವಾ ಆಕೆ ಸಾಹಿತಿ ಅಂತ ಆದ್ರೆ ಬರವಣಿಗೆಯಾದ್ರೂ ಮಾಡಬಾರದೆ ? ಸಾಹಿತಿಯಾದವರು ಬರೆಯಬೇಕು . ಕಂಡ ಕಂಡ ಹಾಗೆ ಬಾಯಿಗೆ ಬಂದಂತೆ ತಲೆ ಬುಡ ಇಲ್ಲದೆ ಮಾತು ಆಡಿದಳು. ಮಾತು ಆಡುವವರಿಗೆ ಪ್ರವಚನ ಹೇಳೋರಿಗೆ ಸಾಹಿತಿ ಅನ್ನೋಲ್ಲ.“ ಅಂತ ಕೆಲವರು ಬೆಸತ್ತು `ಲೈವ್’ ಗೆ ಬೈ ಹೇಳಿದ್ರು. ಮತ್ತೆ ಕೆಲವರು ಅವಳ ಲೈವ್ ಗೆ ಜೋಯಿನ್ ಆಗಿ ಮನಸ್ಸಿಲ್ಲದಿದ್ದರು ಆಕೆ ಗಮನಿಸಲಿ ಅಂತ ಒಮ್ಮೆ ಸುಮ್ಮನೆ ಲೈಕ್ ಕೊಟ್ಟು “ಹಾಯ್ ! ಸುಪರ್ ! ” ಅಂತ ಇನ್ನೂ ಏನೇನೋ ! ಬರೆದು ಖುಷಿ ಪಡಿಸಿದ.
ಸುಬ್ಬಕ್ಕ ಇದಕ್ಕೂ ಮೊದಲು ತಮ್ಮೂರಿನಲ್ಲಿ ಸಾಹಿತ್ಯ ಕಾರ್ಯಕ್ರಮ ನಡೆಯುವಾಗ ನೀರೂಪಣೆ ಕಾರ್ಯ ಕೈಗೆತ್ತಿಕೊಂಡು ಉತ್ತಮ ಮಾತುಗಾರಳಾಗಿದ್ದಳು. ಇಲ್ಲ ಆಕೆ ಕೆಲ ಟಿ.ವಿ. ನೀರೂಪಕರಿಗೆ ಮೀರಿ ಮುಂದೆ ಸಾಗಬೇಕೆಂದು ಅದೇಷ್ಟೋ ಸಲ ಅಂದುಕೊಂಡು ಜಿಲ್ಲಾ, ತಾಲೂಕು ಸಾಹಿತ್ಯ ಸಮ್ಮೇಳನಗಳ ಸಭೆ ಸಮಾರಂಭಗಳಲ್ಲಿ ನಿರೂಪಣೆ ಮಾಡಿ ಸೈ ಎನಿಸಿಕೊಂಡಳು. ಮತ್ತೆ ಇವಳ ನೀರೂಪಣೆ ನೋಡಿ ಕೆಲ ಯೂಟ್ಯೂಬ್ ಚಾನೆಲ್ ನವರು ಕಾರ್ಯಕ್ರಮ ನಡೆಸಿಕೊಡಲು ಆಹ್ವಾನ ನೀಡಿದರಿಂದ ಅದಕ್ಕೆ ತಯಾರಿ ನಡೆಸಿಕೊಂಡು ಹೋಗಬೇಕೆನ್ನುವಷ್ಟರಲ್ಲಿ ದುರಾದೃಷ್ಠ ಕೋವಿಡ್-19 ನಿಂದಾಗಿ `ಲಾಕ್ ಡೌನ್’ ಬೀಳಬೇಕೆ ? 2020 ಮಾರ್ಚ್ ತಿಂಗಳಿನಲ್ಲಿ ಭಾರತ ಸರ್ಕಾರ ಎಲ್ಲಾ ಸಭೆ ಸಮಾರಂಭಗಳಿಗೆ ಕಡಿವಾಣ ಹಾಕುವ ಮೂಲಕ ಸುಬ್ಬಕ್ಕನ ಬಾಯಿಗೂ ಬೀಗ ಹಾಕಿದಂತಾಗಿತ್ತು. ಆದರೆ ಅವಳಿಗೆ ಈ ಫೇಸ್ ಬುಕ್ ಲೈವ್ ಬರೋ ಐಡಿಯಾ ತಲೆಗೆ ಹೊಳೆದದ್ದೆ ತಡ ಒಳಗೊಳಗೆ ಖುಷಿ ಪಟ್ಟಳು. ಮತ್ತು ಮಾತಿನ ಮಲ್ಲಿಯಂತೆ ಅರಳು ಹುರಿದಂತೆ ಪಟಪಟ ಮಾತಾಡಲು ಸುರು ಮಾಡಿದಳಂದ್ರೆ ಅವಳ ಬಾಯಿ ಆಲಮಟ್ಟಿ ಡ್ಯಾಂನಂತೆ ತೆರೆದುಕೊಳ್ಳುವುದು ಮತ್ತೆ ಅವಳ ಮೂಗಿನ ಹೊರಳೆಗಳು ಚಿಟ್ಟೆ ರೆಕ್ಕೆಯ ತರಹ ಪುಟ್ಟಿ ಹಾರುವುದು ಸುಂದರವಾದ ಮುಖ ಸ್ವಲ್ಪ ಕುರೂಪವಾಗಿ ನೋಡುಗರಿಗೆ ಅಸಹ್ಯವಾದರು ಒಮ್ಮೊಮ್ಮೆ- ಮುದ್ದಾಗಿ ಮಾತಾಡುತ್ತಿರುತ್ತಾಳೆ. ಆಗ ಅವಳ ಮಾತಿಗೆ ಮರುಳಾದ ಪಡ್ಡೆ ಹುಡುಗರು “ಹಾಯ್ ! ಅಕ್ಕಾ ! ಸುಪರ್ ಅಕ್ಕಾ ! ” ಅಂತ ಕಾಮೆಂಟ್ ಹಾಕೋದು. ಮತ್ತು ಲೈಕ್ ಗಳ ಸುರಿ ಮಳೆ ಧಾರಾಕಾರವಾಗಿ ಹರಿದು ಬರುವುದು ದಿನಾ ಹೆಚ್ಚುತ್ತಲೇ ಇತ್ತು. ಆಕೆಗಾಗಿ “ನಾನೀಗ ಉತ್ತಮ ಸಾಹಿತಿಯಷ್ಟೇ ಅಲ್ಲ. ಉತ್ತಮ ಪ್ರವಚನಕಾರ್ತಿ । ಅದಕ್ಕೆ ದಿನಾ ಇಷ್ಟು ಜನಾ ನನ್ ಪ್ರವಚನದ ಲೈವ್ ಗೆ ಬರ್ತಾ ಇದ್ದಾರೆ.” ಅಂತ ಸುಬ್ಬಕ್ಕನಲ್ಲಿ ಅಹಂ ಮನೆ ಮಾಡಿತ್ತು. ಮತ್ತು ಅವಳ ಪ್ರವಚನ ಎಷ್ಟು ಪ್ರಚಾರದಲ್ಲಿದೆ ಎಂದರೆ ಕರ್ನಾಟಕ, ಆಂಧ್ರ, ತೆಲಂಗಾಣ, ಗೋವಾ, ಬೆಂಗಳೂರು, ಮುಂಬೈ, ದೆಹಲಿ, ಚೆನೈ, ದುಬೈ, ಮಸ್ಕಟ್ ಮೊದಲಾದ ಕಡೆಗಳೆಲ್ಲ ಅವಳ ಫೇಸ್ ಬುಕ್ ಪ್ರೆಂಡ್ಸಗಳಿಗೆ ಈಕೆ ತುಂಬಾ ಫೇಮಾಸ್ ಆಗಿದ್ದಾಳೆ.
ಸುಬ್ಬಕ್ಕ ಬರಿ ಸಾಹಿತಿಯಷ್ಟೇಯಲ್ಲ ಆಕೆ ಪಿ.ಎಚ್.ಡಿ.ಸಂಶೋಧನ ಅಭ್ಯಾರ್ಥಿಯು ಹೌದು . ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ.ನೊಂದಣಿ ಮಾಡಿ 5 ವರ್ಷ ಮುಗಿಲಿಕ್ ಬಂದ್ರೂನೂ ಆಕೆ ಪ್ರಬಂಧ ಅರ್ಧಕ್ಕೆ ಇರುವುದನ್ನು ಕಂಡು ಬೆಸತ್ ಆಕೆ ಗೈಡು
“ ಏನ್ರೀ ! ನಮ್ ಸುಭದ್ರ ಬೇಗ ಪಿ.ಎಚ್.ಡಿ.ಪ್ರಬಂಧ ಬರೆದು ಸಬ್‌ಮಿಟ್ ಮಾಡ್ತಾಳೇನೋ ಅಂತ ಅಂದ್ರೆ ಲೈವ್ ನಲ್ಲಿ ಕುಳಿತು ಪ್ರವಚನ ಹೇಳಲಾಕ್ ಸುರು ಮಾಡ್ಯಾಳಲ್ರ್ರೀ ! ಅಂತ ಬೇಸರ ವ್ಯಕ್ತಪಡಿಸಿದರೆ. ಮತ್ತೆ ಅವರು ಆಕೆ ಪ್ರವಚನ ಆದ್ರೂ ಹೇಗೆ ಹೇಳ್ತಾಳೆ ನೋಡೋಣ ಅಂತ ಒಮ್ಮೆ ಅವಳ ಫೇಸ್ ಬುಕ್ ಓಪನ್ ಮಾಡಿ ಲೈವ್ ನಲ್ಲಿ ಇರೋದನ್ನ ಗಮನಿಸಿ ಒಳಬಂದರು .
ಆಗ ಆಕೆ “ಹಾಯ್ ! ಎಲ್ಲರಿಗೂ ನಮಸ್ಕಾರಗಳು ” ಅಂತ ಕೈ ಮುಗಿದು ಮತ್ತೆ ಮಾತು ಮುಂದುವರೆಸಿದಳು. “ ಸ್ನೇಹಿತರೆ ! ಒಂದಿನ ಸೂರ್ಯ ತಡವಾಗಿ ಮುಳುಗಬಹುದು. ಆದರೆ ನಾನು ಪ್ರತಿದಿನ ಟೈಂಗೆ ಸರಿಯಾಗಿ ಕರೆಕ್ಟಾಗಿ ಬಂದು ಕೂಡತ್ತಿನಿ ನೋಡ್ರಿ. ಯಾಕೆಂದ್ರೆ ನನಗೆ ಸಮಯ ವ್ಯರ್ಥ ಮಾಡೋದು ಅಂದ್ರೆ ಆಗೋಲ್ಲ . ನಾ ದಿನಾ ಇಷ್ಟೋತ್ತಿಗೆ ಲೈವ್ ಬರ್ತಿನಂತ ನನ್ ಲಕ್ಷಾಂತರ ಅಭಿಮಾನಿಗಳು ಕಾಯ್ತಾ ಇರ್ತಾರೆ. ಅವರಿಗೆ ನಿರಾಸೆ ಮಾಡ್ತೀನಿ ಅಂತಲೇ ನಾನು ಎಲ್ಲ ಕೆಲಸ ಮಾಡಲಿಕ್ಕೆ ಆಗದಿದ್ದರೂ ಅಲ್ಲಲ್ಲಿ ಸಂದಿ ಗೊಂಡಿಗಳಲ್ಲಿ ಒತ್ತಿ ಇಲ್ಲಿ ಬಂದು ಕುಂತಿನಿ ನೋಡ್ರಿ . ಈ ಪ್ರವಚನ ಹೇಳಾದೇನು ಸುಮ್ನೆ ಅದಾ ಏನ್ರೀ ? ಎಲ್ಲಾ ತಯಾರಿ ಮಾಡ್ಕೊಂಡು ಲೈವ್ ನಲ್ಲಿ ಹೇಳಬೇಕಾದರ ಭಾಳ ಕಷ್ಟದ ಕೆಲಸ ಅದಾ ನೋಡ್ರೀ . ನಿನ್ನೆ ನಾ ಪ್ರವಚನ ಮಾಡಿದಕ್ಕೆ ಹುಬ್ಳಿಯಿಂದ ಒಬ್ಬ ಹುಡುಗ ಸಿಗರೇಟ್ ಸೇದಿದ್ದು ಬಿಟ್ಟಾನ. ಮತ್ತೊಬ್ಬ ಹುಡುಗ ಬೆಂಗಳೂರಿನಿಂದ ಕರೆ ಮಾಡಿ ಹೇಳಿದ ನಾ ಶೇರಿ ಕುಡಿಯೋದು ಬಿಟ್ಟಿನಂತ. ಮುಂಬೈಯಿಂದ ಕರೆ ಮಾಡಿ
“ನಾ ನಿಮ್ ಮಾತ ಕೇಳಿ ಗಾಯಿ ಚಾಪ್ ತುಂಬಾಕು ತಿನ್ನೋದು ಮತ್ತ `ಪಿಚಕ್’ ಅಂತ ಉಗುಳೋದು ಬಿಟ್ಟಿದಿನಿ ನೋಡ್ರೀ ” ಅಂದ. ಮಗನೊಬ್ಬ ಹೈದ್ರಾಬಾದನಿಂದ “ಅಕ್ಕಾ ! ನಿನ್ ಮಾತಿನಾಗ ಭಾಳ ಶಕ್ತಿ ಅದಾ” ಅಂದ. ಆದ್ರ ನಾ ಇವತ್ತು ಯಾರ ಬಗ್ಗೆ ಮಾತಾಡಬೇಕು.” ಅಂತ ಯೋಚಿಸ್ತಾ ಇದ್ದೇನೆ . ನೀವೇ ಹೇಳಿ. ಅಂತ ಮುಗುಳ ನಗೆ ಬೀರಿದಳು. ಆಗ ಯಾರೋ ಒಬ್ಬ `ನಾಣಿ ‘ ಅನ್ನೋ ಹೆಸರಿನವ ಕಾಮೆಂಟ್ ಹಾಕಿದ.
`ಅಕ್ಕಾ ! ನಿನ್ನ ಮುಗುಳ ನಗು ಚಂದ,
ನಿನ್ನ ಮಾತು ಚಂದವೋ ಚಂದ ! ” ಅಂತ ಕವನದ ಸಾಲಿನ ತರಹ ಕಾಮೆಂಟ ಹಾಕಿದ
ಆಗ ಆಕೆ “ಅಗೋ ! ಅಗೋ ! ಅಲ್ನೋಡಿ. ನನ್ ಬಗ್ಗೆ ಅವರೇಷ್ಟು ಚನ್ನಾಗಿ ತಿಳಕೊಂಡಿದ್ದಾರೆ” ಅಂತ ಸ್ವಲ್ಪ ಮುಖದಲ್ಲಿ ಖಳ ತಂದುಕೊಂಡು ಮಂದಹಾಸ ಬೀರಿ ಮತ್ತೆ ಮಾತು ಸುರು ಮಾಡಿದಳು.
“ ಖರೆ ಅದಾ ! ನನ್ ಮಾತಿಗಿ ಇಷ್ಟೊಂದು ಜನ ಮನಃಪರಿವರ್ತನೆ ಮಾಡಿಕೊಂಡು ಸಾರಾಯಿ ಕುಡಿಯೋದು, ಸಿಗರೇಟು ಸೇದೋದು, ತುಂಬಾ ತಿನ್ನೋದು ಬಿಟ್ಟು ಬಿಟ್ಟಿದ್ದಾರೆ ಅಂದಾಗ, ನಾನು ಕಟ್ಟಿಕೊಂಡಿರೋ ಗಂಡನೇ ಸಾರಾಯಿ ಕುಡಿಯೋದು ಬಿಡಲ್ಲ ? ಅವರನ್ನು ಹ್ಯಾಂಗ್ ಬಿಡಿಸೋದು ? ಹ್ೂಂ ! ನನ್ ಗಂಡಗೆ `ಲೈವ್’ ನಲ್ಲಿ ಬರಲು ಹೇಳಬೇಕು.” ಅಂತ ಯೋಚಿಸುತ್ತಿರುವಾಗಲೇ
“ಸುಬ್ಬಿ, ಏ ಸುಬ್ಬಿ ! ನಾ ನಿನ್ನ ಗಂಡ್ ಬಂದಿನಂಬೊದು ಖಬರ್ ಐತ್ತಿಲ್ಲೇ ! ಖಬರಗೇಡಿ. ಹೊರ್ಗ ಬಂದು ತರಂಡ್ಕೊಂಡು ಬೀಳೋನಿಗೆ ಬೇಗ ಹಿಡ್ಕೊಬೇಕಂತ ತಿಳ್ಯಾಲ್ಲ ನಿಂಗೆ ? ” ಅಂತ ಜೋಲಿ ಹೊಡೆಯುತ್ತಾ ಒದರಾಡುತ್ತಿರುವ ಗಂಡನ ಶಬ್ದ ಕೇಳಿ ಸುಬ್ಬಕ್ಕ ಫೇಸ್ ಬುಕ್ ಲೈವ್ ನಿಂದ ಹೊರಡಿದಳು.
– ಮಚ್ಚೇಂದ್ರ ಪಿ.ಅಣಕಲ್.
(ವಿಶೇಷ ಸೂಚನೆ: ಈ ಲಲಿತ ಪ್ರಬಂಧದಲ್ಲಿ ಬರುವ ಪಾತ್ರಗಳು ಮತ್ತು ಸನ್ನಿವೇಶಗಳು ಕಾಲ್ಪನಿಕವಾಗಿದೆ.)