ಅಮೆರಿಕಾದ ಭಾಷಾ ಶಾಸ್ತ್ರದ ಪಿತಾಮಹ ನೋವಮ್ ಚೋಮ್ ಸ್ಕೀ.
ಆ ವ್ಯಕ್ತಿ ಬರೆದ ಒಂದು ವಾಕ್ಯ ಆತನ ಕುರಿತಾದ ಹುಡುಕಾಟಕ್ಕೆ ಕಾರಣವಾಗಿ ಮೂಡಿಬಂದಿದ್ದು ಈ ಲೇಖನ.
ನೋವೋಮ್ ಚೋಮಸ್ಕೀ ಓರ್ವ ನಿವೃತ್ತ ಪ್ರೊಫೆಸರ್ ಮತ್ತು ತತ್ವಜ್ಞಾನಿ. ತನ್ನ 95ನೇ ವಯಸ್ಸಿನಲ್ಲಿ ಮಾತನಾಡುವ ಶಕ್ತಿಯನ್ನು ಕಳೆದುಕೊಂಡ ಆತ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಬರೆಯಲಾರಂಭಿಸಿದ. ಜಾಗತಿಕ ವ್ಯವಸ್ಥೆಯ ಕುರಿತಾದ ಆತನ ನೇರ ಮತ್ತು ಸ್ಪಷ್ಟ ಮಾತುಗಳು ಆತನನ್ನು ಜಾಗತಿಕವಾಗಿ ಪ್ರಸಿದ್ಧವಾಗಿಸಿದವು.
ಆತ ಹೇಳುವ ಪ್ರಕಾರ ಜಗತ್ತಿನಲ್ಲಿ ಯಾವುದೂ ಬಡದೇಶ ಅಲ್ಲ.. ತಮ್ಮ ದೇಶದ ನೈಸರ್ಗಿಕ ಸಂಪನ್ಮೂಲಗಳನ್ನು ಸರಿಯಾಗಿ ನಿರ್ವಹಣೆ ಮಾಡಲಾಗದ ವಿಫಲ ವ್ಯವಸ್ಥೆಯನ್ನು ಹೊಂದಿರುವ ದೇಶ ಮಾತ್ರ ಬಡತನದಿಂದ ಬಳಲುತ್ತದೆ ಎಂಬ ಆತನ ಹೇಳಿಕೆಯನ್ನು ಕೇಳಿದಾಗ ಹೌದಲ್ಲವೇ ಎಂದು ಅನಿಸಿ ಆತನ ಕುರಿತು ಮತ್ತಷ್ಟು ವಿವರವಾಗಿ ತಿಳಿಯಲು ಹೋದಾಗ ದೊರೆತ ಮಾಹಿತಿಗಳು ಇಂತಿವೆ. ನೊವೊಮ್ ಡಿಸೆಂಬರ್ 7 1928 ರಲ್ಲಿ ಅಮೆರಿಕ ದೇಶದ ಪೆನ್ಸಿಲ್ವೇನಿಯ ರಾಜ್ಯದ ಫಿಲಡೆಲ್ಫಿಯದಲ್ಲಿ ಜನಿಸಿದ. ಭಾಷಾ ಶಾಸ್ತ್ರದಲ್ಲಿ ಪರಿಣತನಾಗಿದ್ದ ಆತ ಓರ್ವ ರಾಜಕೀಯ ಚಳುವಳಿಗಾರನೂ ಆಗಿದ್ದ. ಆತನನ್ನು ‘ಆಧುನಿಕ ಭಾಷಾ ಶಾಸ್ತ್ರದ ಪಿತಾಮಹ’ ಎಂದು ಕೂಡ ಕರೆಯುತ್ತಾರೆ. ಮೆಸಾಚುಸೆಟ್ಸ್ ಮತ್ತು ಅರಿಜೋನ ವಿಶ್ವವಿದ್ಯಾಲಯಗಳಲ್ಲಿ ಭಾಷಾ ಶಾಸ್ತ್ರವನ್ನು ಕಲಿಸುತ್ತಿದ್ದ ಆತ ಭಾಷಾಶಾಸ್ತ್ರ, ರಾಜಕೀಯ ನೀತಿ ನಿಯಮಾವಳಿಗಳು ಮತ್ತು ತನ್ನ ರಾಜಕೀಯ, ಸಾಮಾಜಿಕ ಚಿಂತನೆಗಳಿಂದ ಕೂಡಿದ ಸುಮಾರು 150ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾನೆ.
ಕಾರ್ಲ್ ಮಾರ್ಕ್ಸ್ ನ ಸಮಾಜವಾದದಿಂದ,ಬಟ್ರಂಡ್ ರಸೇಲ್,ಚಾರ್ಜ್ ಬೋರ್ವೆಲ್ ಮತ್ತು ರೋಮನ್ ಜಾಕ್ಸನ್ ಅವರಿಂದಲೂ ಪ್ರಭಾವಿತನಾಗಿದ್ದ ಚೋಮ್ ಸ್ಕೀ ತಮ್ಮ 95 ರ ಹರೆಯದಲ್ಲಿಯೂ ಸಕ್ರಿಯವಾಗಿದ್ದಾರೆ.
ಭಾಷಾ ಶಾಸ್ತ್ರದ ಪಿತಾಮಹ ಎಂದೆನಿಸಿರುವ ಅವರು ಎಲ್ಲ ಭಾಷೆಗಳು ಒಂದೇ ರೀತಿಯ ರಚನೆ ಮತ್ತು ನಿಯಮಗಳನ್ನು ಹೊಂದಿದ್ದು ವ್ಯಾಕರಣವು ಕೂಡ ಒಂದೇ ಆಗಿರುವುದು ಭಾಷೆಯ ಸತ್ವವನ್ನು ತೋರುತ್ತದೆ ಎಂದು ಹೇಳಿದ್ದಾರೆ.
ಯುದ್ಧ ವಿರೋಧಿ ಕೃತ್ಯಗಳ ಕುರಿತಾದ ಆತನ ಲೇಖನ ಅತ್ಯಂತ ಪ್ರಸಿದ್ಧವಾಗಿದ್ದು ಅಮೆರಿಕಾದ ಪ್ರಸಿದ್ಧ ರಾಜಕೀಯ ವಿಡಂಬನಕಾರರಲ್ಲಿ ಆತ ಒಬ್ಬನಾಗಿದ್ದರು. ಮಾಧ್ಯಮಗಳಲ್ಲಿಯೂ ಕೂಡ ಆತ ನೇರವಾಗಿ ಸರ್ಕಾರದ ನೀತಿ ನಿಯಮಾವಳಿಗಳನ್ನು, ಅವುಗಳು ಜನರ ಮೇಲೆ ಬೀರುವ ಅಡ್ಡ ಪರಿಣಾಮಗಳ ಕುರಿತು ಎಚ್ಚರಿಕೆಯ ಸಂದೇಶಗಳನ್ನು ನೀಡುತ್ತಿದ್ದರು. ಅಮೆರಿಕ ಸರ್ಕಾರದ ಆಡಳಿತಾರೂಢ ಪಕ್ಷಗಳು ಆತನ ಹೇಳಿಕೆಗಳನ್ನು ತೀವ್ರವಾಗಿ ಪರಿಗಣಿಸುತ್ತಿದ್ದವು ಎಂದರೆ ಚೋಮ್ ಸ್ಕೀಯ ಹೇಳಿಕೆಗಳ ಮಹತ್ವದ ಅರಿವು ನಮಗೆ ಉಂಟಾಗುತ್ತದೆ.
. ಚೋಮ್ ಸ್ಕೀ ಬರೆದ ಅಮೆರಿಕಾದ ವಿದೇಶಾಂಗ ನೀತಿ, ಸಮಕಾಲೀನ ಬಂಡವಾಳಶಾಹಿ ಪದ್ಧತಿ, ರಾಜಕೀಯ ವಿಡಂಬನಾತ್ಮಕ ಹೇಳಿಕೆಗಳು ಹೀಗಿದೆ.
-ಯಾರೊಬ್ಬರೂ ನಿಜವನ್ನು ನಿಮ್ಮ ಮನಸ್ಸಿನಲ್ಲಿ ತಂದು ಹಾಕುವುದಿಲ್ಲ. ಸತ್ಯದ ಅನ್ವೇಷಣೆಯನ್ನು ನೀವು ಮಾಡಬೇಕು ( ಇದು ಎಲ್ಲಾ ಕಾಲಕ್ಕೂ ಎಲ್ಲ ವ್ಯಕ್ತಿಗಳಿಗೂ ಅನ್ವಯವಾಗುತ್ತದೆ )
– ಜನರ ಮನಸ್ಸನ್ನು ನೀವು ಆಳಬೇಕೆಂದಿದ್ದರೆ ಜನರ ಮನಸ್ಸಿನಲ್ಲಿ ನಿಮಗಿಂತ ಅಪಾಯಕಾರಿ ಕಾಲ್ಪನಿಕ ವ್ಯಕ್ತಿಯನ್ನು ಸೃಷ್ಟಿಸಿ… ನಂತರ ಅವರನ್ನು ಕಾಪಾಡಿ( ಇತ್ತೀಚಿಗಿನ ಕೆಲ ಪತ್ರಿಕೆಗಳಲ್ಲಿನ ವರದಿಗಳನ್ನು ನೋಡಿದಾಗ, ರಾಜಕೀಯ ಪಕ್ಷಗಳು ಪರಸ್ಪರ ಕೆಸರೆರಚಾಟವನ್ನು ವೀಕ್ಷಿಸಿದಾಗ ಈ ಹೇಳಿಕೆ ವಿಡಂಬನಾತ್ಮಕವಾಗಿದ್ದರೂ ವಾಸ್ತವ ಎನಿಸುತ್ತದೆ ಅಲ್ಲವೇ)
-(ಹಕ್ಕುಗಳನ್ನು ನಿಮಗೆ ಯಾರೂ ಕೊಡುವುದಿಲ್ಲ ಅವುಗಳನ್ನು ಒತ್ತಾಯಪೂರ್ವಕವಾಗಿ ನೀವು ಗಳಿಸಬೇಕಾಗುತ್ತದೆ. ಇದು ಸಾರ್ವಕಾಲಿಕ ಸತ್ಯವಾದರೂ ಇಷ್ಟೊಂದು ಶಕ್ತಿಯುತವಾದ ವ್ಯಾಖ್ಯಾನ ಮತ್ತೆಲ್ಲೂ ಸಿಗೋದಿಲ್ಲ ಅಲ್ಲವೇ )
– ಇತಿಹಾಸವನ್ನು ತಿರುಚಿ ಮಹಾನ್ ವ್ಯಕ್ತಿಗಳು ಹೀಗೆ ಮಾಡಿದರು ಎಂದು ಹೇಳಲು ಕಾರಣವಿದೆ.. ಇದರ ಅರ್ಥ ಇಷ್ಟೇ, ಕೈಯಲ್ಲಿ ಅಧಿಕಾರ ಮತ್ತು ಶಕ್ತಿ ಇಲ್ಲದವರು ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂಬ ಪಾಠವನ್ನು, ಇಂತಹ ಮಹಾನ್ ಕಾರ್ಯಗಳು ಆಗಲು ಮಹಾನ್ ವ್ಯಕ್ತಿಗಳೆ ಹುಟ್ಟಿ ಬರಬೇಕು ಎಂದು ಕಾಯುವುದನ್ನು ಕಲಿಸುತ್ತದೆ ( ವಿಪರ್ಯಾಸ ಎನಿಸಿದರೂ ಈ ಮಾತು ನೂರು ಪ್ರತಿಶತ ಸತ್ಯ. ತಂತಮ್ಮ ಬದುಕನ್ನು ಹಸನಗೊಳಿಸಿಕೊಳ್ಳಲು ಅರಿಯದ, ಕಿಂಚಿತ್ ಪ್ರಯತ್ನವನ್ನೂ ಮಾಡದ ಸಾಕಷ್ಟು ಜನರು ನಮ್ಮಲ್ಲಿ ಇದ್ದು ಯಾವುದೋ ಒಂದು ಶಕ್ತಿ ಯಾವುದೋ ಒಬ್ಬ ವ್ಯಕ್ತಿ ತಮ್ಮ ಬದುಕನ್ನು ಉದ್ಧಾರಗೊಳಿಸಲು ಬರುತ್ತಾನೆ ಎಂದು ಕಾಯುವುದು ನಿಜವಲ್ಲವೇ )
-ಈ ಜಗತ್ತು ಅತ್ಯಂತ ರಹಸ್ಯ ಮತ್ತು ಗೊಂದಲಮಯವಾದ ಸ್ಥಳ… ನೀವು ಗೊಂದಲಕ್ಕೆ ಒಳಗಾದರೆ ನೀವು ಮತ್ತೊಬ್ಬರ ಮನಸ್ಸಿನ ತಂತ್ರಗಳ ಹಿಂಬಾಲಕರಾಗಲು ಸಾಧ್ಯವಿಲ್ಲ.
-ಜನರನ್ನು ತಮ್ಮ ಆಧೀನದಲ್ಲಿ ಮತ್ತು ನಿಯಂತ್ರಣದಲ್ಲಿ ಇಡಲು ಆತನ ಎಲ್ಲ ತೊಂದರೆಗಳಿಗೆ ಆತನ ಅಜ್ಞಾನವೇ ಕಾರಣ ನಿಮ್ಮಿಂದ ಮಾತ್ರ ಆತನನ್ನು ರಕ್ಷಿಸಲು ಸಾಧ್ಯ ಎಂದು ನಂಬಿಸುವುದು ಅತ್ಯಂತ ಚಾಣಾಕ್ಷ ರಾಜಕೀಯ ಕ್ರಿಯೆಯಾಗಿದೆ.
-ಪಾಶ್ಚಿಮಾತ್ಯ ದೇಶಗಳು ಮನುಷ್ಯನ ಮೂಲಭೂತ ಗುಣವಾದ ಮಾನವೀಯತೆಯಿಂದ ಆತನನ್ನು ವಿಮುಖಗೊಳಿಸುತ್ತಿರುವುದಕ್ಕೆ ಮುಂದೊಂದು ದಿನ ಪಶ್ಚಾತಾಪ ಪಡಬೇಕಾಗುತ್ತದೆ. ಜನರು ಕಡ್ಡಾಯವಾಗಿ ತಮ್ಮ ಧರ್ಮ ಮತ್ತು ನಂಬಿಕೆಗಳ ಅರಿವನ್ನು ಹೊಂದಿರಬೇಕು.
ರಾಜಕೀಯದ ಕುರಿತಾದ ನಿಷ್ಟುರ ಸತ್ಯಗಳನ್ನು
ವಿಡಂಬನಾತ್ಮಕವಾಗಿ ಹೇಳುತ್ತಿದ್ದ ಚೋಮ್ ಸ್ಕೀ ಮಾತುಗಳಲ್ಲಿನ ಕಟುತ್ವ ಸರ್ಕಾರಗಳು ತೆಗೆದುಕೊಳ್ಳುವ ನಿರ್ಧಾರಗಳನ್ನು ಬದಲಿಸುವ ಶಕ್ತಿಯನ್ನು ಹೊಂದಿದ್ದವು.
ಸೂತ್ರ ಹರಿದ ಗಾಳಿಪಟದಂತಿರುವ ಇಂದಿನ ರಾಜಕೀಯ ವ್ಯವಸ್ಥೆಗೆ ಚೋಮ್ಸ್ ಸ್ಕೀಯಂತಹ
ವ್ಯಕ್ತಿಗಳು ಸೂತ್ರದ ಪಾತ್ರವನ್ನು ವಹಿಸಿ ಸರ್ಕಾರವನ್ನು ಸುಸೂತ್ರವಾಗಿ ನಡೆಸಲು ಚೋಮ್ ಸ್ಕೀ ಯಂತವರ ಅವಶ್ಯಕತೆ ಪ್ರತಿಯೊಂದು ದೇಶಕ್ಕೂ ಇದೆ. ಅಂತಹ ಪ್ರಬುದ್ಧತೆಯನ್ನು ಹೊಂದಿರುವ ಸರ್ಕಾರಗಳಿಗೆ ಕಟು ಮಾತಿನ ಮೂಲಕ ವಾಸ್ತವವನ್ನು ತೋರಿಸುವ, ಸರ್ಕಾರದ ಕಾರ್ಯವೈಖರಿಗಳನ್ನು ವಿಮರ್ಶಿಸುವ ಮೂಲಕ ಅವರನ್ನು ಸರಿದಾರಿಗೆ ತರುವಂತಹ ಚೋಮ್ ಸ್ಕೀ ಯಂತಹ ರಾಜಕೀಯ ವಿಶ್ಲೇಷಣಕಾರರು ನಮ್ಮ ಇಂದಿನ ಅವಶ್ಯಕತೆ.
ಅಂತಹ ಉತ್ತಮ ವಿಶ್ಲೇಷಣಕಾರರು ಪ್ರಪಂಚದ ಎಲ್ಲೆಡೆ ತಮ್ಮ ಛಾಪನ್ನು ಸ್ಥಾಪಿಸುವ ಮೂಲಕ ಉನ್ನತ ಪ್ರಜಾ ಸತ್ತಾತ್ಮಕ ಧೋರಣೆಗಳನ್ನು ಜಾರಿಗೆ ತರುವಲ್ಲಿ ತಮ್ಮ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಲಿ ಎಂಬ ಆಶಯದೊಂದಿಗೆ
– ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್.