Oplus_131072

ಅಮ್ರಪಾಲಿ

ಜಿ ಎಲ್ ನಾಗೇಶ್

ಅವಳು ಮಾತಾಡಿದರೆ ಕೋಗಿಲೆ ವಸಂತ ರಾಗ ಹಾಡಿದಂತೆ…
ಅವಳು ನಕ್ಕರೆ ಮುತ್ತಿನ ಹರಳು ಉದುರಿದಂತೆ!
ಅವಳ ನಡಿಗೆ… ಹಂಸನಡಿಗೆ!
ಅವಳು ನಡೆದುಕೊಂಡು ಬರುತ್ತಿದ್ದರೆ ಬೆಳದಿಂಗಳು ಚಲಿಸಿಕೊಂಡು ಬಂದಂತೆ ಭಾಸವಾಗುತ್ತದೆ.
ಎಂತಹ ಅದ್ಭುತ ಸೌಂದರ್ಯ ಅವಳದು!
ಪದಗಳಲ್ಲಿ ವರ್ಣಿಸಲಾಗದಂತಹ ಅತ್ಯದ್ಭುತ ಸೌಂದರ್ಯವಳದು!
ಸೃಷ್ಟಿಯ ಇನ್ನೊಂದು ಅದ್ಭುತವೇ ಅವಳ ಸೌಂದರ್ಯ…!
ಸೌಂದರ್ಯದ ಆದಿದೇವತೆ ಅವಳು!
ಅವಳ ಅಂದದ ಮುಖದಲ್ಲಿ ಹೊಳೆಯುವ ನಕ್ಷತ್ರ ಕಣ್ಣುಗಳು, ತಿದ್ದಿ ತೀಡಿ ವಿಶೇಷವಾಗಿ ಪುರುಷೋತ್ತಿನಿಂದ ರೂಪಿಸಲಾದ ನೀಳನಾಸಿಕ, ರಾಗ ರಂಜನೆಯ ಹೊಳಪಿರುವ ಸೇಬು ಕೆನ್ನೆಗಳು, ತನಿರಸ ತುಂಬಿರುವ ಗುಲಾಬಿ ರಂಗಿನ ಜೇನುತುಟಿಗಳು, ದಾಳಿಂಬೆ ದಂತಪಕ್ತಿಗಳು, ಬೆಳ್ಳನೆಯ ಸೊಗಸಾದ ಕತ್ತು, ಯೌವ್ವನ ತುಂಬಿ ತುಳುಕುತ್ತಿರುವ ಅವಳ ಆಕರ್ಷಕ ಎದೆ ಸೌಂದರ್ಯ… ಒಮ್ಮೆ ನೋಡಿದರೆ ಸಾಕು ಮದುವೆಯಾದ-ಮದುವೆಯಾಗದ ಮುದುಕನೇ ಆಗಿರಲಿ, ಹದಿಹರಿಯದ ಯುವಕರೇ ಆಗಿರಲಿ… ಯಾರೇ ಆಗಿರಲಿ ಅವರಿಗೆ ಹುಚ್ಚು ಹಿಡಿಯುತ್ತದೆ.
ಅವಳ ಹುಚ್ಚು!
ಅವಳ ಪ್ರೀತಿಯ ಹುಚ್ಚು!
ಅವಳ ಸೌಂದರ್ಯದ ಹುಚ್ಚು ಹಿಡಿಯುತ್ತದೆ…!
ಇಡೀ ಪುರುಷ ಜಾತಿಗೆಲ್ಲ ಆ ರೀತಿ ಹುಚ್ಚು ಹಿಡಿಸಿದ ಆ ಅಪರೂಪದ ಅಪ್ಸರೆ ಯಾರು?
ಅವಳ ಹೆಸರೇನು?
ಅವಳ ಹೆಸರು…ಆಮ್ರಪಾಲಿ!

 

“ಪಾಲಿ… ಆಮ್ರಪಾಲಿ! ನನ್ ಚಿನ್ನ! ನನ್ ಬಂಗಾರ… ನನಗೆ ನೀನು ಬೇಕು. ನಿನ್ನ ಪ್ರೀತಿ ಬೇಕು ನನಗೆ. ಕೊಡ್ತೀಯಾ ಸೋನಾ? ನೀನು ನನ್ನವಳು ಆಗ್ತೀಯ ಬಂಗಾರ?”ಎಂದು ಅನೇಕ ಜನ ಯುವಕರು ಅವಳನ್ನು ಪ್ರಪೋಸ್ ಮಾಡಿದರು.
ಅದಕ್ಕೆ ಆಮ್ರಪಾಲಿ-
“ದಯವಿಟ್ಟು ಕ್ಷಮಿಸಿ, ಈಗಾಗಲ್ಲ. ಮುಂದೆ ನೋಡೋಣ” ಎಂದು ನಯವಾಗಿ ನಿರಾಕರಿಸಿದಳು.
ಆದರೆ, ನಗರದ ಶ್ರೀಮಂತ ಕಾಮುಕ ಚಪಲಗಾರ ಮುದಿ ಮುಂಡೆ ಮಕ್ಕಳೂ ಸಹ-
“ಹೊಲ ಮನೆ ಹಣ ಆಸ್ತಿ ಅಂತಸ್ತು ಮಾನ ಮರ್ಯಾದೆ ಹೋದರು ಚಿಂತೆ ಇಲ್ಲ!ಪ್ರಾಣ ಹೋದರೂ ಪರವಾಗಿಲ್ಲ!! ಅವಳ ಸೌಂದರ್ಯ ಒಂದು ಸಲವಾದರೂ ತನ್ನದಾಗಬೇಕು”ಎಂಬ ಕೀಳು ಮಟ್ಟಕ್ಕೆ ಇಳಿದಾಗ ನಿಜಕ್ಕೂ ಆಮ್ರಪಾಲಿಗೆ ಭಯ ಉಂಟಾಗಿತ್ತು.
ಆಮೇಲೇನಡಿತು…?
ಆಮ್ರಪಾಲಿಗಾಗಿ ಹೊಡೆದಾಟ ಬಡೆದಾಟ ನಡೆಯಿತು.
ಆಮ್ರಪಾಲಿ ಎಂಬ ಒಂದು ಸುಂದರ ಹೆಣ್ಣಿಗಾಗಿ ಯುದ್ಧವೇ ನಡೆದು ಪುರುಷ ಜಾತಿ ವಿನಾಶದ ಅಂಚಿನಲ್ಲಿತ್ತು.
ಆಗ ಎಚ್ಚೆತ್ತುಕೊಂಡ ಪುರುಷ ಜಾತಿಯ ಎಲ್ಲಾ ದುಷ್ಟರು ಸೇರಿಕೊಂಡು ಒಂದು ಸಭೆ ಮಾಡಿದರು.
ಅನೇಕ ರಾಜರು, ಮಂತ್ರಿಗಳು-ಕಂತ್ರಿಗಳು, ಪಂಡಿತ ಮಹನೀಯರೆನಿಸಿಕೊಂಡವರೆಲ್ಲರೂ ಸಭೆಯಲ್ಲಿ ಏನು ಮಾಡಬೇಕು ಎಂದು ಸುಧೀರ್ಘವಾದ ಚರ್ಚೆ ಮಾಡಿದರು.
ಕೊನೆಗೆ ಒಂದು ನಿರ್ಧಾರ ಮಾಡಿದ್ದರು.
“ಆಮ್ರಪಾಲಿ ಎಂಬ ಅಪರೂಪದ ಚೆಲುವೆಯಿಂದ ಉಂಟಾದ, ಮುಂದೆ ಉಂಟಾಗಲಿರುವ ಘನ ಘೋರ ವಿನಾಶದಿಂದ ತಪ್ಪಿಸಿಕೊಳ್ಳಬೇಕು ಅಂದರೆ ಒಂದೇ ಒಂದು ಮಾರ್ಗವಿದೆ; ಅದು ಏನು ಎಂದರೆ-‘ಆಮ್ರಪಾಲಿ ಎಂಬ ಸುಂದರ ಸ್ತ್ರೀ ಕೇವಲ ಒಬ್ಬ ಮಾತ್ರ ಪುರುಷನಿಗೆ ಸೇರಿದರೆ ದೊಡ್ಡ ದುರಂತ ಸಂಭವಿಸುತ್ತದೆ. ಆ ದುರಂತದಿಂದ ತಪ್ಪಿಸಿಕೊಳ್ಳುವುದಕ್ಕಾಗಿ-ನಾಡಿನ ಜನತೆಯ ಸುಖ ಸಂತೋಷಕ್ಕಾಗಿ ಇಂದಿನ ಈ ಸಭೆಯಲ್ಲಿ ಆಮ್ರಪಾಲಿ ನಗರವಧು ಆಗಬೇಕೆಂದು ನಿರ್ಣಯಿಸಲಾಗಿದೆ. ಈ ನಿರ್ಣಯಕ್ಕೆ ಎಲ್ಲರೂ ಭದ್ಧರಾಗಬೇಕೆಂದು’ ಆದೇಶಿಸುತ್ತಾ ಈ ಸಭೆಯನ್ನು ಮುಕ್ತಾಯಗೊಳಿಸುತ್ತೇವೆ. ನಮಸ್ಕಾರ!”
ಅಯ್ಯೋ… ಇದೆಂಥ ತೀರ್ಮಾನ! ಇದೆಂಥ ಆದೇಶ!!
ಕೊಳಕು ಕಾಮುಕರ ಸುಖ ಸಂತೋಷಕ್ಕಾಗಿ ತಾನು ನಗರವಧು ಆಗಬೇಕಂತೆ… ಅಂದರೆ ತಾನು ಸೂಳೆ ಆಗಬೇಕಂತೆ!
ಅಯ್ಯೋ ಇದೆಂಥ ಮೋಸ! ಇದೆಂಥ ಅನ್ಯಾಯ ತನಗೆ!?
ಥೂ… ಧಿಕ್ಕಾರ ಇರಲಿ ಇಂಥ ಕೊಳಕು ಕಚಡ ಪಾಪಿ ಪ್ರಪಂಚಕ್ಕೆ!”
ಆಮ್ರಪಾಲಿಗೆ ದುಃಖ ಒತ್ತರಿಸಿ ಬಂದಿದ್ದರಿಂದ ಕಣ್ಣಂಚಿನಲ್ಲಿ ಕಂಬನಿ ಕಾಣಿಸಿಕೊಂಡಿತ್ತು.
ಅವಳ ಕಂಬನಿ ವರಿಹಿಸುವುದಕ್ಕೆ ಅಲ್ಲಿ ಯಾರೂ ಸಹ ಇರಲಿಲ್ಲ.
ಆಮ್ರಪಾಲಿಯ ಸುಂದರ ಕನಸುಗಳು ನುಚ್ಚು ನುರಿಯಾಗಿದ್ದವು.
ಅವಳ ಬದುಕು ಕಗ್ಗತ್ತಲೆಯಲ್ಲಿ ಮುಳುಗಲಾರಂಭಿಸಿತ್ತು.
ನಂತರ ಏನು ನಡೀತು?
***
ಆಮ್ರಪಾಲಿ ಈಗ…ಮೊದಲಿನ ಆಮ್ರಪಾಲಿ ಅಲ್ಲ!
ಅವಳೀಗ ನಗರವಧುವಾಗಿ ಬದಲಾಗಿದ್ದಾಳೆ.
ಅಂದರೆ ಒಂದು ವೇಶ್ಯೆಯಾಗಿ ಬದಲಾಗಿದ್ದಾಳೆ.
ಅವಳ ವಾಸವಾಗಿದ್ದ ಆ ಸಾಧಾರಣ ಮನೆ ಈಗ ಅರಮನೆಯ ರೀತಿ ಬದಲಾಗಿದೆ.
ದೊಡ್ಡ ದೊಡ್ಡ ಶ್ರೀಮಂತರು, ವ್ಯಾಪಾರಿಗಳು ಮತ್ತು ಕಾಮುಕ ಮಂತ್ರಿಗಳಿಂದ ಹಿಡಿದು ರಾಜರವರಿಗೂ ಆಮ್ರಪಾಲಿಯ ಸಂಪರ್ಕವಿದೆ.
ಆಮ್ರಪಾಲಿಯ ಸೌಂದರ್ಯದ ಸವಿ ಸವಿಯುವ ಆಸೆಯಿಂದಾಗಿ ಪ್ರತಿದಿನ ಹಗಲು ರಾತ್ರಿ ಎನ್ನದೆ ಹತ್ತಾರು ಜನ ಕಾಮುಕರು ಅವಳ ಮನೆಗೆ ಬರುತ್ತಾರೆ..
ಹಣದ ಹೊಳೆ ಹರಿಸುತ್ತಾರೆ.
ಹುಚ್ಚು ನಾಯಿ ರೀತಿ ಆಡುತ್ತಾರೆ.
ಆಮ್ರಪಾಲಿಯ ಕೈ ಕಾಲುಗಳಿಗೆಲ್ಲದಕ್ಕೂ ಸಹ ಆಳುಗಳಿದ್ದಾರೆ.
ಹಣ ಒಡವೆ ವಸ್ತ್ರ ಆಸ್ತಿ ಅಂತಸ್ತು ಐಶಾರಾಮ… ಏನಿಲ್ಲ ಇದೆ ಅವಳಲ್ಲಿ!
ಆದರೆ ಅದು ಅವಳಿಗೆ ಬೇಡವಾಗಿದೆ.
ಅದೇಕೋ ಅವಳ ಮನಸಿಗೆ ಸುಖ ಶಾಂತಿ ನೆಮ್ಮದಿ ಅನ್ನೋದಿಲ್ಲವಾಗಿದೆ.
***

ಒಂದು ದಿನ ಆಮ್ರಪಾಲಿ ತನ್ನ ಮನೆಯ ಅಂಗಳದಲ್ಲಿ ಆ ವ್ಯಕ್ತಿಯನ್ನು ಕಂಡು ಆಶ್ಚರ್ಯಗೊಂಡಳು.

ಆ ವ್ಯಕ್ತಿ ಬೌದ್ಧ ಭಿಕ್ಕು ಗೌತಮ್ ಬುದ್ಧ ಆಗಿದ್ದನು.
“ಒಬ್ಬ ಬೌದ್ಧ ಭಿಕ್ಕು ಸಹ ನನ್ನ ಸೌಂದರ್ಯಕ್ಕೆ ಮರುಳಾಗಿ, ನನ್ನನ್ನು ಹುಡುಕಿಕೊಂಡು ಬಂದಿದ್ದಾನೆ ಅಂದರೆ ನಿಜಕ್ಕೂ ನನ್ನ ಸೌಂದರ್ಯಕ್ಕೆ ಮೆಚ್ಚಲೇಬೇಕು. ಒಬ್ಬ ಭಿಕ್ಕು ಒಂದು ವೇಶ್ಯೆಯ ಸಂಗ ಬಯಿಸಿ ಬರುವುದೆಂದರೇನು? ಥೂ ಕಾಮುಕ ನಾಯಿ. ನಾಚಿಕೆ ಆಗ್ಬೇಕು”ಅಂದುಕೊಳ್ಳುತ್ತಾ ಆ ಬೌದ್ಧ ಭಿಕ್ಕುವಿನತ್ತ
ನೋಡಿದಳು ಆಮ್ರಪಾಲಿ.
ನೋಡಲು ತುಂಬ ಸುಂದರವಾಗಿದ್ದಾನೆ.
ಆರು ಅಡಿ ಎತ್ತರವಾಗಿದ್ದಾನೆ.
ಎದೆ ಅಗಲವಾಗಿದೆ.
ತುಳುಗಳು ಬಲಿಷ್ಠವಾಗಿವೆ.
ಸುದೃಢ ಶರೀರ ಅವನದಾಗಿದೆ.
ಕಣ್ಣುಗಳಲ್ಲಿ ಹೊಳುಪಿದೆ.
ಮುಖದಲ್ಲಿ ಅದೇನೋ ತೇಜಸಿದೆ.
“ನನ್ನ ಮನೆಗೆ ಬಂದು, ನನಗೆ ಬೇಟೆಯಾಗದೆ ಯಾಕೆ ಈ ರೀತಿ ಹಾಗೆ ಹೋಗುತ್ತಿದ್ದೀಯಾ? ಆಳು ಏನಾದ್ರು ಬೈದ್ನಾ?”
“ಇಲ್ಲ.. ನನಗೆ ಯಾರು ಬೈಲಿಲ್ಲ.”
“ಮತ್ತೆ ಯಾಕೆ ನನ್ನ ದರ್ಶನ ಪಡೆಯದೆ ಹಾಗೆ ಹೊರಟು ಹೋಗುತ್ತಿದ್ದೀಯಾ?”
“ತಮ್ಮ ಮಾತು ನನಗೆ ಅರ್ಥ ಆಗ್ಲಿಲ್ಲ…”
“ನೀನ್ಯಾಕೆ ಇಲ್ಲಿಗೆ ಬಂದೆ?”
“ಮೂರು ದಿನಗಳಿಂದ ಸರಿಯಾಗಿ ಊಟ ಮಾಡಿರಲಿಲ್ಲ. ಹೊಟ್ಟೆ ತುಂಬ ಹಸಿತಾ ಇತ್ತು. ಭಿಕ್ಷೆಗಾಗಿ ಇಲ್ಲಿಗೆ ಬಂದೆ. ತಮ್ಮವರು ಭಿಕ್ಷೆ ನೀಡಿದರು ಅದನ್ನು ತೆಗೆದುಕೊಂಡು ಹೊರಡುತ್ತಿದ್ದೆ…”
“ನನ್ನ ಮನೆಗೆ ಬರುವರೆಲ್ಲರೂ ಕಾಮದ ಹಸಿವಿನಿಂದ ಬರುತ್ತಾರೆ: ನೀನು ನೋಡಿದರೆ ಹೊಟ್ಟೆ ಹಸಿವಿನಿಂದ ಹಸ್ಕೊಂಡ್ಬಂದಿದ್ದೀಯ? ಬಾ ನನ್ನ ಕೋಣೆಗೆ”
“ಅದು.. ಅಲ್ಲಿಗೆ.. ಯಾಕೆ ಬರಗ್ಬೇಕು?”
“ಊಟ ಮಾಡೋಕ್ಕೆ”
“ಪರ್ವಾಗಿಲ್ಲ ನಾನು ಹೊರಗಡೆ ಎಲ್ಲಾದರೂ ಮರದ ಕೆಳಗಡೆ ಕುಳಿತುಕೊಂಡು ಇದನ್ನೇ ತಿಂತೇನೆ.”ತನ್ನ ಬಳಿ ಇದ್ದ ಭಿಕ್ಷೆಯಾಗಿ ಪಡೆದ ಆಹಾರ ತೋರಿಸುತ್ತಾ ಹೇಳಿದನು ಬೌದ್ದ ಭಿಕ್ಕು.
ಅದಕ್ಕೆ ಆಮ್ರಪಾಲಿ ಅದೇನೇನೋ ಹೇಳಿ ಒತ್ತಾಯದಿಂದ ಆ ಭಂತುಜೀಯನ್ನು ತನ್ನ ಕೋಣೆಗೆ ಕರೆದೊಯ್ದು ಅರಮನೆಯಂಥ ಅರಸೊತ್ತಿಗೆ ಮೇಲೆ ಕೂರಿಸಿ ತನ್ನ ಕೈಯಾರೆ ವಿವಿಧ ಬಗೆಯ ರುಚಿಕರವಾದ ಭೋಜನ ಉಣಪಡಿಸಿದ ನಂತರ –
“ಭಂತುಜಿ… ನಿನ್ನ ಜೊತೆಗೆ ಮುಖ್ಯವಾದ ವಿಷಯ ಮಾತಾಡಬೇಕು.”
“ಮಾತಾಡಿ..”
“ಇಲ್ಲಿವರೆಗೂ ನಾನು ನನ್ನ ಜೀವನದಲ್ಲಿ ಲೆಕ್ಕ ಇಲ್ಲದಷ್ಟು ಕಾಮುಕರ ಜೊತೆ ಮಲಗಿದ್ದೇನೆ ನಿಜ; ಆದರೆ ನಿನ್ನಂಥ ಸುರು ಸುಂದರಾಂಗ ನೋಡಿರಲಿಲ್ಲ ನಾನು.ಮೊದಲ ನೋಟದಲ್ಲಿಯೇ ನಾನು ನಿನಗೆ ಸೋತು ಹೋದೆ.ನನ್ನ ಹತ್ತಿರ ಬೇಕಾದಷ್ಟು ಹಣ ಆಸ್ತಿ ಅಂತಸ್ತು ಶ್ರೀಮಂತಿಕೆ ಸೌಂದರ್ಯ ಏನೆಲ್ಲ ಇದೆ.ಇವತ್ತಿನಿಂದ ನನ್ನದೆಲ್ಲ ನಿನ್ನದೇ. ಇನ್ನೂ ಮೂರು ದಿನಗಳಲ್ಲಿ ಮಳೆಗಾಲ ಪ್ರಾರಂಭವಾಗುವುದರಲ್ಲಿದೆ. ಮಳೆಗಾಲ ಮುಗಿಯುವವರೆಗೂ ನಾಲ್ಕು ತಿಂಗಳು ನೀನು ನನ್ನ ಜೊತೆಗೆ ಇರ್ತಿಯ ಅಂದರೆ, ನೀನು ಒಪ್ಪುವುದಾದರೆ ನನ್ನ ಇಡೀ ಆಸ್ತಿಯೆಲ್ಲ ನಿನ್ನ ಭಿಕ್ಕು ಸಂಘಕ್ಕೆ ಕೊಟ್ಟು ಬಿಡುತ್ತೇನೆ.ಏನಂತೀಯಾ?”
“ಒಬ್ಬ ಭಿಕ್ಷು ಜೊತೆಗೆ ಈ ರೀತಿ ತಮಾಷೆ ಮಾಡ್ತೀಯಾ?”
“ತಮಾಷೆ ಅಲ್ಲ ರಸಿಕ, ದೇವರಾಣೆಗೂ ಸತ್ಯ ಹೇಳುತ್ತಿದ್ದೇನೆ…”ಎಂದಿನ್ನೂ ಸಹ ಅದೇನೇನೋ ಹೇಳಿದಳು.
ಅದಕ್ಕೆ ಅವನೂ ಸಹ ಅದೇನೇನೋ ಹೇಳಿದನು.
ಅವರಿಬ್ಬರ ಮಧ್ಯೆ ಅರ್ಧಗಂಟೆ ಸಂಭಾಷಣೆ ನಡೆಯಿತು.
ನಂತರ ಬೌದ್ಧಭಿಕ್ಕು ಹೇಳಿದನು-
“ಆಮ್ರಪಾಲಿ… ನಿನ್ನ ಹಣ ಆಸ್ತಿ ಅಂತಸ್ತಿನ ಅವಶ್ಯಕತೆ ನಮ್ಮ ಭಿಕ್ಕು ಸಂಘಕ್ಕೆ ಇಲ್ಲ. ನಿನ್ನ ಹಣ ಆಸ್ತಿ ಅಂತಸ್ತಿನಿಂದ, ನಿನ್ನ ಶ್ರೀಮಂತಿಕೆ- ಸೌಂದರ್ಯದಿಂದ ನನ್ನನ್ನು ಕೊಂಡುಕೊಳ್ಳಲು ನಿನ್ನಿಂದ ಸಾಧ್ಯವಿಲ್ಲ. ನೀನು ಭ್ರಮೆ! ನಾನು ವಾಸ್ತವ!! ನಿನ್ನ ಶ್ರೀಮಂತಿಕೆ ಸೌಂದರ್ಯ ಕೇವಲ ಒಂದು ಭ್ರಮೆ! ನಿನ್ನ ಶ್ರೀಮತಿ-ಸೌಂದರ್ಯ, ನಿನ್ನ ಜೊತೆಗೆ ಬರೋಲ್ಲ. ಈ ನಿನ್ನ ಯೌವ್ವನ ಒಂದು ದಿನ ಅಳಿಸಿ ಹೋಗುತ್ತದೆ. ಈ ನಿನ್ನ ಸೌಂದರ್ಯ ಒಂದು ದಿನ ಬಾಡಿ ಹೋಗುತ್ತದೆ. ಈ ನಿನ್ನ ಸೌಂದರ್ಯದ ಸವಿ ಸವಿಯಲು ಹುಚ್ಚು ನಾಯಿಗಳಂತೆ ಅಲೆದಾಡುತ್ತಿರುವ ಆ ಕಾಮುಕರು ಯಾರೂ ಸಹ ನಿನ್ನತ್ತ ಮುಸಿ ನೋಡಲ್ಲ.ಬಯಸಿದೆಲ್ಲ ಪಡಿಯಬೇಕು, ಎಲ್ಲವೂ ನನಗೆ ಸೇರಬೇಕು, ಎಲ್ಲವೂ ನನ್ನದೆಬುವುದೊಂದು ಭ್ರಮೆಯಾಗಿದೆ.ನನ್ನದು ಯಾವದೂ ಸಹ ನನ್ನದಲ್ಲ ಎಂಬುವುದು ವಾಸ್ತವದ ನಿಜ ಸಂಗತಿಯಾಗಿದೆ.

ಬೌದ್ಧಧಮ್ಮ ದರ್ಶನವಾದಗ ವಾಸ್ತವದ ಅರಿವು ನಿನಗೆ ಉಂಟಾಗುತ್ತದೆ ಆಮ್ರಪಾಲಿ!. ನೀನೊಂದು ಭ್ರಮೆಯ ಲೋಕದಲ್ಲಿ ಇದ್ದೀಯ. ಈ ನಿನ್ನ ಭ್ರಮೆ ಲೋಕ ಬಿಟ್ಟು ವಾಸ್ತವ ಲೋಕದತ್ತ ಬಾ ಆಗ ನಿನಗೆ ಬದುಕು ಅಂದರೆ ಏನು ಅಂತ ಅರ್ಥವಾಗುತ್ತದೆ. ನಿಜ ಬದುಕಿನ ದರ್ಶನವಾಗುತ್ತದೆ”ಎಂದು ಹೇಳಿದಾಗ ಆಮ್ರಪಾಲಿಯ ಬದುಕಿನಲ್ಲಿ ಮಹಾನ್ ಪರಿವರ್ತನೆ ಉಂಟಾಗಿತ್ತು.

ಆಮ್ರಪಾಲಿ ಕೊನೆಗೆ ಎಲ್ಲವನ್ನೂ ತ್ಯಜಿಸಿ ಬೌದ್ಧ ಭಿಕ್ಕಿಣಿಯಾಗಿ ಬದಲಾಗಿದ್ದಳು.

ಜಿ.ಎಲ್.ನಾಗೇಶ
ಧನ್ನೂರ್ (ಆರ್)
ಬಸವಕಲ್ಯಾಣ

.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ