ಅಪರಾಧ!
– ಜಿ ಎಲ್ ನಾಗೇಶ್
“ಬಲಭದ್ರ…”
“ಹೇಳಿ ಮೇಡಂ…”
“ನನ್ನ ಗಂಡನ ಎದುರಿಗಷ್ಟೇ ನಾನು ನಿನಗೆ ಮೇಡಂ. ನಾನೀಗ ಕೇವಲ ನಿನ್ನ ಸಾವಿತ್ರಿ.. ಸಾವಿತ್ರಿ ಅಂತ ಹೆಸರು ಹಿಡಿದು ಮಾತಾಡು ಬಲಭದ್ರ ಪರ್ವಾಗಿಲ್ಲ.”
“ಅದೇನು ಅಂತ ಹೇಳು ಸಾವಿತ್ರಿ.”
“ನನ್ನ ನಾದಿನಿ ನವ್ಯಳ ಹೆಸರಿನಲ್ಲಿ ಐದು ಕೋಟಿಗಿಂತಲೂ ಹೆಚ್ಚಿಗೆ ಬೆಲೆಬಾಳುವ ಆಸ್ತಿ ಇದೆ.ಅವಳು ಮದುವೆ ಮಾಡಿಕೊಂಡು ಹೋದರೆ ಐದು ಕೋಟಿ ಆಸ್ತಿ ಸಹ ಅವಳ ಜೊತೆಗೆ ಹೊರಟು ಹೋಗುತ್ತದೆ. ಅದಕ್ಕೆ ಅವಳು ಬದುಕಿರಬಾರದು. ಅದಕ್ಕೆ ನಾನೊಂದು ಸಂಚು ಮಾಡಿದ್ದೇನೆ. ನೀನು ನನಗೆ ಸಹಾಯ ಮಾಡಬೇಕು. ನೀನು ಹೆಲ್ಪ್ ಮಾಡಿದರೆ ನೀನು ಕೇಳಿದಷ್ಟು ಹಣ- ಸುಖ ಕೊಡ್ತೇನೆ. ನಿನಗೆ ಯಾವುದಕ್ಕೂ ಕಡಿಮೆ ಮಾಡಲ್ಲ ನಾನು. ನೀನು ನನಗೆ ಹೆಲ್ಪ್ ಮಾಡ್ತೀಯಾ ಬಲಭದ್ರ?”
“ನನ್ನಿಂದ ನಿನಗೆ ಯಾವ ರೀತಿ ಹೆಲ್ಪ್ ಬೇಕು ಅಂತ ಹೇಳ್ತೀಯಾ ಸಾವಿತ್ರಿ?”ಎಂದು ಕೇಳಿದಾಗ ಸಾವಿತ್ರಿ ತನ್ನ ಪ್ಲಾನ್ ಬಗ್ಗೆ ಹೇಳಿದಳು-
“ನವ್ಯ ಒಬ್ಬ ಹುಡುಗನನ್ನು ಪ್ರೇಮಿಸಿ ಮದುವೆಗೆ ಮುಂಚೆನೇ ಈಗ ಗರ್ಭಿಣಿಯಾಗಿದ್ದಾಳೆ. ಇನ್ನೇನು ಕೆಲವೇ ಕೆಲವು ದಿನಗಳಲ್ಲಿಯೇ ಅವಳು ಮದುವೆಯಾಗಲಿದ್ದಾಳೆ. ಅವಳ ಮದುವೆ ನಡೆಯಕೂಡದು…! ಮದುವೆಯ ಮುಂಚೇ ಗರ್ಭಿಣಿ ಯಾಗಿದ್ದರಿಂದ ಮರ್ಯಾದೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡು ಸತ್ತು ಹೋಗಿದ್ದಾಳೆ ಅನ್ನುವ ರೀತಿ ಸಂದರ್ಭ ಸೃಷ್ಟಿ ಮಾಡಬೇಕು. ನವ್ಯ ಸಾಯಬೇಕು. ಅವಳ ಐದು ಕೋಟಿ ಆಸ್ತಿ ನನ್ನ ಮತ್ತು ನನ್ನ ಗಂಡನ ಹೆಸರಿಗೆ ಸೇರಬೇಕು!”ಎಂದು ತನ್ನ ಪ್ಲಾನ್ ಬಗ್ಗೆ ಇನ್ನೂ ಅದೇನೇನೋ ಹೇಳಿ ಮುಗಿಸಿದಳು ಸಾವಿತ್ರಿ.
ಬಲಭದ್ರ ಸಾವಿತ್ರಿ ಮೇಲಿರುವ ಕಾಮದ ಕ್ರೇಜಿನಿಂದಾಗಿ ದುಡ್ಡಿನ ಆಸೆಗಾಗಿ ಹಿಂದೆ ಮುಂದೆ ಯೋಚಿಸದೆ ಒಪ್ಪಿಕೊಂಡಿದ್ದನು.
ಸಾವಿತ್ರಿಯ ಗಂಡ ವೀರೇಂದ್ರ ಮನೆಯಲ್ಲಿ ಇಲ್ಲದಿರುವಾಗ ಸಾವಿತ್ರಿ ಮತ್ತು ಬಲಭದ್ರ ರೆಡಿಯಾಗಿ ನವ್ಯಳ ಕೋಣೆಗೆ ಪ್ರವೇಶಿಸಿದರು.
ಅಲ್ಲಿ ಬೆಡ್ಡಿನ ಮೇಲೆ ನವ್ಯ ಮಲಗಿಕೊಂಡಿದ್ದಳು.
ಬಲಭದ್ರ ಸಾವಿತ್ರಿ ಜೊತೆಗೂಡಿ ಮಲಗಿರುವ ನವ್ಯಳ ಮೇಲೆ ನುಗ್ಗಿದರು.
ಅಲ್ಲಾಡದಂತೆ ನವ್ಶಳ ಕಾಲು ಹಿಡಿದಳು ಸಾವಿತ್ರಿ.
ಬಲಭದ್ರ ತಲೆದಿಬ್ಬಿನಿಂದ ನವ್ಯಳ ಮುಖಕ್ಕೆ ಕೆಲ ನಿಮಿಷ ಅದಮಿದನು.
ನವ್ಯ ಅಲ್ಲಾಡದೆ ಹೆಣವಾಗಿದ್ದಳು.
ಸತ್ತಿರುವ ನವ್ಶಳನ್ನು ಎತ್ತಿಕೊಂಡು ತಂದು ಅಲ್ಲೇ ಇದ್ದ ಫ್ಯಾನಿಗೆ ನೇಣು ಬಿಗಿದು, ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬಂತೆ ಸೊಗಸಾದ ನಾಟಕವಾಡಿದರು.
ಆದರೆ… ಸ್ವಲ್ಪದರಲ್ಲಿಯೇ ಸಾವಿತ್ರಿಯ ಪ್ಲಾನ್ ಫ್ಲಾಪ್ ಆಗಿತ್ತು!
ಲೇಡಿ ಇನ್ಸ್ಪೆಕ್ಟರ್ ಸುಹಾಸಿನಿ ಬೂಟ್ಗಾಲಿನಿಂದ ಒದ್ದು ಠಾಣೆಗೆ ಎಳೆತಂದು ಸತ್ಯ ಬಾಯಿಬಿಡಿಸಿದಳು.
ಬಲಭದ್ರ ಮತ್ತು ಸಾವಿತ್ರಿ ಎಲ್ಲವನ್ನು ಬಾಯಿಬಿಟ್ಟಿದರು.
ಅಪರಾಧವನ್ನು ಒಪ್ಪಿಕೊಂಡಿದ್ದರು.
ಪೋಸ್ಟ್ ಮಾರ್ಟಂ ರಿಪೋರ್ಟ್ ಬಂದಿತು.
ಅದನ್ನು ಓದಿ ಈ ರೀತಿ ಹೇಳಿದಳು ಇನ್ಸ್ಪೆಕ್ಟರ್ ಸುಹಾಸನಿ-
“ನೇಣು ಹಾಕಿಕೊಂಡಿದ್ದರಿಂದ ಅಥವಾ ಉಸಿರುಗಟ್ಟಿಸಿದರಿಂದ ಸಾವು ಸಂಭವಿಸಿಲ್ಲ. ಡೆತ್ ಕಿಲ್ ಡ್ರಗ್ಸ್ ಎಂಬ ಪಾಯಿಸನ್ ನಿಂದ ಸಾವು ಉಂಟಾಗಿದೆ ಎಂದು ಹೇಳುತ್ತಿದೆ ಪೋಸ್ಟ್ ಮಾರ್ಟಮ್ ರಿಪೋರ್ಟ್. ಮದುವೆಗೆ ಮುಂಚೆನೆ ಗರ್ಭಿಣಿಯಾದ ನವ್ಯ , ಪ್ರೀತಿಯಲ್ಲಿ ಮೋಸ ಹೋಗಿದ್ದಾಳೆ. ಮೋಸ ಹೋದ ನವ್ಯ ಡೆತ್ ಕಿಲ್ ಡ್ರಗ್ ಎಂಬ ಪಾಯಿಸನ್ ಸೇವಿಸಿ ಆತ್ಮಹತ್ಯೆ ಮಾಡ್ಕೊಂಡು ಸತ್ತೋಗಿದ್ದಾಳೆ. ಆಸ್ತಿ ಆಸೆಗಾಗಿ ಸಾವಿತ್ರಿ ಮತ್ತು ಬಲಭದ್ರ ಎಂಬ ಹೆಸರಿನ ಈ ಪಾಪಿಗಳು ಸತ್ತಿರುವ ನವ್ಯಳನ್ನು ಮತ್ತೊಮ್ಮೆ ಸಾಯಿಸಿದ್ದಾರೆ. ಈ ಪಾಪಿಗಳಿಗೆ ಶಿಕ್ಷೆ ಆಗಬೇಕು. ಆಗುತ್ತದೆ!” ಎಂದು ಹೇಳಿದಳು.
***
ದಿನಗಳು ಉರುಳಿದವು.
ವಾರಗಳು ಕಳೆದವು.
ಬಲಭದ್ರ ಸಾವಿತ್ರಿ ಎಂಬ ಹೆಸರಿನ ಅಪರಾಧಿಗಳಿಗೆ ಈಗ ಶಿಕ್ಷೆಯಾಗಿತ್ತು.
ಸಾವಿತ್ರಿ ಬಲಭದ್ರ ಈಗ ಕಂಬಿಗಳ ಹಿಂದೆ ಇದ್ದರು.
ಎಲ್ಲಾ ಮುಗೀತು ಅಂತ ಅಂದುಕೊಳ್ಳುತ್ತಿರುವಾಗಲೇ ಇನ್ಸ್ಪೆಕ್ಟರ್ ಸುಹಾಸನಿಗೆ ಮತ್ತೊಂದು ಆಶ್ಚರ್ಯದ ಸಂಗಾತಿ ಕಾದಿತ್ತು!
ಅದೇನು ಅಂತ ಈಗ ನೋಡಿ…
***
ಪೋಲಿಸ್ ಜೀಪ್ ಬಂದು ಅಲ್ಲಿ ನಿಂತುಕೊಂಡಿತು.
ಇನ್ಸ್ಪೆಕ್ಟರ್ ಸುಹಾಸನಿ ಮತ್ತು ಕೆಲ ಜನ ಪಿಸಿಗಳು ಜೀಪಿನಿಂದ ಕೆಳ ಇಳಿದು ಬಂಗಲೆ ಒಳ ಪ್ರವೇಶಿಸಿದರು.
ಈ ಮೊದಲೇ ಅಕ್ಕ- ಪಕ್ಕದ ಜನ ಬಂದು ಅಲ್ಲಿ ಜಮಾಯಿಸಿದರು.
ಅಲ್ಲಿ ಬಂಗಲೆಯ ಕೋಣೆ ಒಂದರ ಮಂಚದ ಮೇಲೆ ವೀರೇಂದ್ರ ಬಿದ್ದಿದ್ದನು.
ಅವನ ಪಕ್ಕದಲ್ಲೇ ವಿಷದ ಬಾಟಲ್ ಮತ್ತು ಆತ್ಮಹತ್ಯೆ ಪತ್ರ ಇತ್ತು.
ಸುಹಾಸಿನಿ ಡೆತ್ ನೋಟ್ ಎತ್ತುಕೊಂಡು ಓದಲಾರಂಭಿಸಿದಳು.
ಆತ್ಮಹತ್ಯೆ ಪತ್ರದಲ್ಲಿ-
“ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನನ್ನು ಕ್ಷಮಿಸಿ…. ಈ ಆತ್ಮಹತ್ಯೆಗೆ ಕಾರಣ? ನಾನು ಪಾಪಿ… ಪರಮ ಪಾಪಿ ನಾನು! ಮಾಡಬಾರದ ಅಪರಾಧ ಮಾಡಿದ್ದೇನೆ ನಾನು. ನಾನು ಮಾಡಿರುವ ಅಪರಾಧವಾದರೂ ಏನು ಅಂತ ಕೇಳ್ತೀರಾ? ಹೇಳುತ್ತೇನೆ… ನನ್ನ ಅಂತರಾತ್ಮ ನನ್ನನ್ನು ಕ್ಯಾಕರಿಸಿ ಉಗಿಯುತ್ತಿದ್ದರಿಂದ ಈಗ ನಾನು ಈ ಮೂಲಕ ಎಲ್ಲವನ್ನು ಹೇಳುತ್ತಿದ್ದೇನೆ. ಈ ನನ್ನ ಕೊಳಕು ಬದುಕಿನ ಹಿನ್ನೆಲೆ ಕೇಳಿ ನನ್ನಂಥ ಅನೇಕ ದುಷ್ಟರಿಗೆ ನೀತಿ ಪಾಠ ಆಗಲಿ ಅಂತ ಹೇಳುತ್ತಿದ್ದೇನೆ. ಕೋಟ್ಯಾಧಿಪತಿಯಾದ ನಮ್ಮ ತಂದೆ ಸಾಯುವ ಮುನ್ನ ನನ್ನ ತಂಗಿ ನವ್ಯಳ ಹೆಸರಿಗೆ ಕೆಲವು ಕೋಟಿ ರೂಪಾಯಿಗೆ ಬೆಲೆಬಾಳುವ ಆಸ್ತಿ ಬರೆದಿದ್ದರು. ಆ ಆಸ್ತಿಗಾಗಿ… ಹೆಂಡತಿ ಮಾತು ಕೇಳಿ; ಮಾನವೀಯತೆ ಮರೆತು ಒಡ ಹುಟ್ಟಿದ ಸ್ವಂತ ತಂಗಿಯನ್ನೇ ವಿಷ ನೀಡಿ ಸಾಯಿಸಿದ ಪರಮ ಪಾಪಿ ನಾನು. ನಾನು ಮಾಡಿರುವ ಈ ಪರಮ ಪಾಪಕ್ಕೆ ಆ ದೇವರು ನನಗೆ ಸರಿಯಾದ ಶಿಕ್ಷೆ ನೀಡಿದ್ದಾನೆ. ನನ್ನ ಪಾಪಿ ಹೆಂಡತಿ ನನಗೆ ಮೋಸ ಮಾಡಿದ್ದಾಳೆ. ನನ್ನ ಹಾಸಿಗೆಯಲ್ಲಿಯೇ ನನಗೆ ತಿಳಿಯದಂತೆ ನನ್ನ ಜೊತೆಗೆ ತೆರೆ ಹಿಂದೆ ಆಟ ಆಡಿದ್ದಾಳೆ. ನನ್ನಂಥ ಕಚಡ ಪಾಪಿಗೆ ಸರಿಯಾದ ತಕ್ಕ ಹೆಂಡತಿ ಅವಳು! ಥೂ… ಧಿಕ್ಕಾರ ಇರಲಿ ನನ್ನ ಹೆಂಡತಿ ಸಾವಿತ್ರಿ ಮತ್ತು ನನ್ನಂಥ ಕಚಡ ಪಾಪಿಗಳಿಗೆ! ನನ್ನ ಅಂತರಾತ್ಮ ನನ್ನನ್ನು ಕ್ಷಣ ಕ್ಷಣಕ್ಕೂ ಕ್ಯಾಕರ್ಸಿ ಉಗಿಯುತ್ತಿದೆ. ಈ ನನ್ನ ಪಾಪಕ್ಕೆ ಪ್ರಾಯಶ್ಚಿತವಾಗಬೇಕು. ಅದಕ್ಕೆ ನಾನು ಸಾಯಬೇಕು…! ನಾನು ಸಾಯುತ್ತಿದ್ದೇನೆ. ಗುಡ್ ಬೈ…! ಇಂತಿ ನಿಮ್ಮ ವೀರೇಂದ್ರ.
ಬರಹ ಪೂರ್ಣಗೊಂಡಿತ್ತು. ಸುಹಾಸಿನಿ ವೀರೇಂದ್ರನ ಹೆಣದ ಕಡೆಗೆ ದೃಷ್ಟಿ ಹಾಯಿಸಿದಳು ಬಾಯಲ್ಲಿ ರಕ್ತ ಒಸರಿ ಪ್ರಾಣ ಬಿಟ್ಟಿದ.
ಜಿ.ಎಲ್.ನಾಗೇಶ
ಧನ್ನೂರ್ (ಆರ್)
ಬಸವಕಲ್ಯಾಣ.