ಅಪರೂಪದ ಸಾಹಿತಿ- ಮುಡಬಿ ಗುಂಡೇರಾವಗೆ ಹರಳಯ್ಯ ಪ್ರಶಸ್ತಿ.
ಕಲ್ಯಾಣ ಕರ್ನಾಟಕದ ಸಾಹಿತಿಗಳ ಬಳಗದಲ್ಲಿ ಸರಳ ಸಜ್ಜನಿಕೆಯ ಸ್ನೇಹ ಜೀವಿಯಾಗಿ ಎಲ್ಲರೊಂದಿಗೂ ಅಪರೂಪದಿಂದ ಸಂಶೋಧನಾ ಸಾಹಿತಿಯಾಗಿ ಗುರ್ತಿಸಿಕೊಂಡಿರುವ ಲೇಖಕರೆಂದರೆ ಗುಂಡೇರಾವ್ ಮುಡಬಿಯವರು. ಇವರಿಗೆ ಈ ವರ್ಷದ ಸೇಡಂ ತಾಲೂಕಿನ ಬಿಜನಳ್ಳಿ ಸುಕ್ಷೆತ್ರದಿಂದ ಶರಣ ಹರಳಯ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಇವರು ಮೂಲತಃ ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ
ಮುಡಬಿಯವರಾಗಿರುವುದಿಂದ ಇವರು ತಮ್ಮ ಹೆಸರು ‘ಮುಡಬಿ ಗುಂಡೇರಾವ ‘ ಎಂದೇ ಚಿರಪರಿಚಿತರು ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಖ್ಯಾತನಾಮರಾಗಿ ಸಂಶೋಧನಾ ಸಾಹಿತ್ಯ ರಚಿಸಿ, ಮೂರು ದಶಕಗಳಿಂದ ಸಂಶೋಧನಾ ಸಾಹಿತಿಗಳಾಗಿ ಗುರುತಿಸಿಕೊಂಡಿದ್ದಾರೆ.
ಕಲಬುರಗಿ ಜಿಲ್ಲೆ ನೂತನ ಕಮಲಾಪೂರ ತಾಲ್ಲೂಕಿನ ಹೊಡಲ್ ಗ್ರಾಮದ ಅಂಬಾರಾಯ ಪೋಲಿಸ್ ಪಾಟೀಲ್. ಮತ್ತು ಮಹಾಂತಬಾಯಿ ದಂಪತಿಗಳಿಗೆ ದಿನಾಂಕ 1-6-1967ರಲ್ಲಿ ಜನಿಸಿದ್ದು. ಎಂ.ಎ. ಎಂ.ಫೀಲ್ ಪದವಿಧರರು. ವೃತ್ತಿಯಲ್ಲಿ ಶಿಕ್ಷಕರಾದ ಇವರು ಸೇಡಂ ತಾಲೂಕಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ 27 ವರ್ಷಗಳಿಂದ ಆದರ್ಶ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಧ್ಯ ಸೇಡಂ ತಾಲೂಕಿನ ಕೋಡ್ಲಾ ಗ್ರಾಮದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ‘ಸೇಡಂ ತಾಲ್ಲೂಕಿನ ಸ್ಮಾರಕಗಳ ಸಾಂಸ್ಕೃತಿಕ ಒಂದು ಅಧ್ಯಯನ‘ ಎಂಬುದು ಇವರ ಎಂ.ಫೀಲ್ ಪ್ರಬಂಧವಾಗಿದೆ.
ವಿದ್ಯಾರ್ಥಿಯಾಗಿರುವಾಗಲೇ ಸಂಶೋಧನಾ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು ‘ಸೇಡಂ ಐತಿಹಾಸಿಕ ಸಾರಕಗಳು, ಸೇಡಿಂಬ ದುರ್ಗದ ಶಾಸನಗಳು, ಸೇಡಂ
ತಾಲ್ಲೂಕು ದರ್ಶನ, ಮನ್ನೆದಡಿ ಸಾಸಿರ ನಾಡು, ಮಾನ್ಯಖೇಟದ ಸಿರಿ, ಆಳಂದ ಸಾಸಿರ ನಾಡು, ಕಾಳಗಿ ಕಾಳೇಶ್ವರ, ಮಾನ್ಯಖೇಟಿ, (ಸಂಶೋಧನಾ ಕೃತಿಗಳು)
‘ಸ್ವಾಭಿಮಾನ- 1.2, ‘ನಡೆದಾಡುವ ದೇವರು ಡಾ.ಶಿವಕುಮಾರ ಸ್ವಾಮಿಜಿ, ಮತ್ತು
‘ಆಲ್ಲೂರಿನ ಕೆಂಚ ವೃಷಭೇಂದ್ರ ಶ್ರೀಗಳು’ (ಚರಿತ್ರೆಗಳು) ‘ಸಂಗೀತ ಸಂಪದ
(ವ್ಯಕ್ತಿ ಚಿತ್ರಗಳು) ‘ಭಾವೈಕ್ಯದ ಕ್ಷೇತ್ರ ಮಳಖೇಡ ದರ್ಗಾ’ (ಲೇಖನ) ‘ಸಾಹಿತ್ಯ ಚಿಲುಮೆ‘ (ಸಂಪಾದನೆ) ಇತ್ಯಾದಿ 20ಕ್ಕೂ ಹೆಚ್ಚು ಕೃತಿಗಳು ಪ್ರಕಟಿಸಿದ್ದಾರೆ.
ಇವರ ಸಂಶೋಧನ ಲೇಖನ ಬರಹಗಳು ಕೆಲ ಪ್ರಮುಖ ಪತ್ರಿಕೆ ಹಾಗೂ ಆಕಾಶವಾಣಿಯಲ್ಲಿ ಪ್ರಕಟ ಪ್ರಸಾರವಾಗಿವೆ. ಇವರು 20 ವರ್ಷಗಳಿಂದ ಸೇಡಂ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ, ಮತ್ತು ಒಂದು ಅವಧಿಗೆ ಕಲಾಪ ಸೇಡಂ ತಾಲೂಕಾ
ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಕಸಾಪ ಅವಧಿಯಲ್ಲಿ ಒಂದು ತಾಲ್ಲೂಕು
ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಹಲವು ಹೋಬಳಿ, ಗ್ರಾಮ ಮಟ್ಟದ ಸಾಹಿತ್ಯ ಸಮ್ಮೇಳನ ಹಾಗೂ ಹಲವಾರು ಗ್ರಾಮೀಣ ಪ್ರದೇಶದಲ್ಲಿ ಸಾಹಿತ್ಯ ಕಾರ್ಯಕ್ರಮಗಳನ್ನು
ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ, ಒಂದು ಅವಧಿಗೆ ಕಸಾಪ ತಾಲೂಕು ಅಧ್ಯಕ್ಷರಾಗಿ ಗಡಿಯಂಚಿನಲ್ಲಿ ಕನ್ನಡ ಕಹಳೆ ಊದಿದ್ದಾರೆ. ಶಾಲೆ. ಕಚೇರಿ. ಕಂಪನಿ.ಮನೆ. ಊರುಕೇರಿಗಳಲ್ಲಿ ಕನ್ನಡ ಝೆಂಕಾರ ಮೊಳಗಿಸಿದ್ದಾರೆ.
‘ಹಳ್ಳಿಯಡೆಗೆ ಕಸಾಪ ನಡಿಗೆ’ ಮುಂತಾದ ಕಾರ್ಯಕ್ರಮಗಳ ಮೂಲಕ ರಾಜ್ಯದಲ್ಲಿಯೇ ಮಾದರಿ ಕಸಾಪವನ್ನಾಗಿ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಮೂರುವರೆ ದಶಕಗಳಿಂದ ಸಾಹಿತ್ಯ. ಸಂಶೋಧನೆ. ಅಧ್ಯಾಪನ ಸಂಘಟನೆ ಮತ್ತು ಅಧ್ಯಾತ್ಮಿಕದಲ್ಲಿ ಹೆಸರು ಮಾಡಿದ್ದಾರೆ. ಉತ್ತಮ ವಾಗ್ಮಿಗಳು. ಕಲಬುರ್ಗಿ ಜಿಲ್ಲೆಯಲ್ಲಿ ಸ್ಪಷ್ಟ. ನಿಖರವಾಗಿ ಸಂಶೋಧನೆ ಲೇಖನ. ಸಾಮಾಜಿಕ ಅಂತರ್ಜಾಲ ಮಾಧ್ಯಮಗಳ ಮೂಲಕ ಜನರಲ್ಲಿ ಐತಿಹಾಸಿಕ ಪ್ರಜ್ಞೆ ಮತ್ತು ಜಾಗೃತಿಯನ್ನು ಮೂಡಿಸುತ್ತಿದ್ದಾರೆ.
ಇವರಿಗೆ 2009ರಲ್ಲಿ ಕಲಬರಗಿ ಜಿಲ್ಲಾ ಪ್ರಥಮ ಯುವ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ, 2019ರಲ್ಲಿ ಸೇಡಂ ತಾಲ್ಲೂಕಿನ 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ.
ಅಷ್ಟೆಯಲ್ಲದೆ ಇವರಿಗೆ ನಾಡಿನಾದ್ಯಂತ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಸದ್ಯ ಇವರು ಸೇಡಂ ತಾಲ್ಲೂಕಿನಲ್ಲಿ ವಾಸವಾಗಿದ್ದಾರೆ.
ಇತ್ತೀಚೆಗೆ ಇವರಿಗೆ ಇವರ ಸಾಹಿತ್ಯ ಮತ್ತು ಸಂಶೋಧನಾ ಕಾರ್ಯಚಟುವಟಿಕೆಗಳನ್ನು ಕಂಡು ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಬಿಜನಳ್ಳಿ ಸುಕ್ಷೇತ್ರದ ವತಿಯಿಂದ 2024ನೇ ವರ್ಷದ ‘ಹರಳಯ್ಯ ರತ್ನ ಪ್ರಶಸ್ತಿ ‘ ಪುರಸ್ಕಾರ ನೀಡಿ ಗೌರವಿಸಿರುವುದು ನೋಡಿದರೆ ಇವರ ವ್ಯಕ್ತಿತ್ವದ ಘನತೆಗೆ ಈ ಪ್ರಶಸ್ತಿ ಸಾಕ್ಷಿಯಾಗಿ ಕಂಡು ಬರುತ್ತದೆ. ಇವರಿಗೆ ಈ ಪ್ರಶಸ್ತಿ ಬಂದಿರುವುದರಿಂದ ನಮ್ಮ ‘ಕಲ್ಯಾಣ ಸಿರಿಗನ್ನಡ’ ಅಂತರ್ಜಾಲ ಕನ್ನಡ ಸಾಹಿತ್ಯ ಪತ್ರಿಕೆಯ ವತಿಯಿಂದ ಲೇಖಕರಿಗೆ ತುಂಬು ಹೃದಯದ ಹಾರ್ದಿಕ ಅಭಿನಂದನೆ ಸಲ್ಲಿಸುತ್ತದೆ.
– ಮಚ್ಚೇಂದ್ರ ಪಿ.ಅಣಕಲ್.