Oplus_131072

ಅಪ್ಪ, ನನಗಾಗಿ ನೀನು ಏನು ಮಾಡಿದ್ದೀಯಾ ?

 

ಬಿರು ಬಿಸಿಲ ತಾಪಕ್ಕೆ ಶರ್ಟ್ ಮೇಲೆ ಹಾಕಿದ್ದ ಖಾಕಿ ಅಂಗಿಯನ್ನು ತೆಗೆದು ಮನೆ ಒಳಗೆ ಬರುತ್ತಿದ್ದಂತೆಯೇ, ತಾಯಿ ಮಗನ ಏರು ಧ್ವನಿ ಕೇಳಿ ಪಿತ್ತ ನೆತ್ತಿಗೇರಿತ್ತು ರಾಜುವಿಗೆ. ಹೊರಗಿನಿಂದ ನೂರಾರು ತಲೆನೋವುಗಳನ್ನು ಹೊತ್ತು, ಬೇಸತ್ತು ಮನೆಗೆ ಬಂದರೆ ಇದೊಂದು ಅಂದುಕೊಂಡು ಏನು ನಿಮ್ಮದು ಗಲಾಟೆ?ಎಂದು ಕೇಳಬೇಕಾದವನು ದಿನಾ ಇದ್ದದ್ದೆ ಅನಿಸಿ, ಸುಮ್ಮನೆ ಬಚ್ಚಲಿಗೆ ಹೋದ.

ಕೈ-ಕಾಲು, ಮುಖ ತೊಳೆದು ಸುಧಾರಿಸಿಕೊಳ್ಳೋಣ ಅನ್ನುವಷ್ಟರಲ್ಲಿ ರೀ ಏನ್ರೀ ಇವತ್ ಯಾಕೋ ಬೇಗ ಬಂದಿದೆ ಸವಾರಿ ಎಂದು ವ್ಯಂಗ್ಯವಾಡಿದಳು ಹೆಂಡತಿ.
ಹೆಣ್ಣು ಮಕ್ಕಳಿಗೆ ಬಸ್ನಲ್ಲಿ ಫ್ರೀ ಆದಾಗಿಂದ ಆಟೋ ಹತ್ತೋರು ಕಡಿಮೆ ಆಗಿದ್ದಾರೆ ಕಣೆ, ದಿನ ಇದೇ ಗೋಳು, ಬಿಸಿಲು ಬೇರೆ,ಕಾದು ಕಾದು ಸಾಕಾಯ್ತು ಅದಕ್ಕೆ ಊಟ ಆದರೂ ಮಾಡಿ ಹೋಗೋಣ ಅಂತ ಮನೆಗೆ ಬಂದೆ ಎನ್ನುತ್ತಾ ಗೋಡೆಗೆ ಒರಗಿ ಕೂತ ರಾಜು.

ಎರಡು ತುತ್ತು ಅನ್ನ ಬಾಯಿಗೆ ಇಟ್ಟುಕೊಂಡಿದ್ದನೇನೋ ಅಷ್ಟರಲ್ಲಿ ಮಗ,ಅಪ್ಪ! ಹೋದ ವಾರ ಕೇಳಿದ್ದೆನಲ್ಲ ನೆನಪಿದೆಯಾ? ನನ್ನ ಫ್ರೆಂಡ್ಸ್ ಎಲ್ಲಾ ನನ್ನ ನೋಡಿ ಆಡಿಕೊಳ್ಳುತ್ತಾರೆ. ನೀನು ಇವತ್ತೇ ನನಗೆ ಕೊಡಿಸಬೇಕು ಎಂದ.ಅದಕ್ಕೆ ರಾಜು, ಅಲ್ಲಾ ಕಣೋ ನೀನು ಕಾಲೇಜಿಗೆ ಓದಕ್ಕೆ ಹೋಗ್ತಿಯೋ? ಇಲ್ಲ ಯಾರು ಎಂಥ ಬಟ್ಟೆ,ಚಪ್ಪಲಿ ಹಾಕೋತ್ತಾರೆ, ಯಾರಹತ್ರ ಯಾವ ಫೋನ್ ಇದೆ ಅಂತ ನೋಡೋಕ್ಹೋಗ್ತಿಯೋ ? ಎಂದು ಬೈದ. ನಮ್ಮ ಅಪ್ಪ ಅಮ್ಮ ನನ್ನನ್ನ ಓದಿಸಿದ್ರೆ ನಾನು ಡಾಕ್ಟರೋ,ಇಂಜಿನಿಯರೋ ಆಗಿರ್ತಿದ್ದೆ.ಏನ್ ಮಾಡ್ಲಿ? ಮನೆ ಜವಾಬ್ದಾರಿ,ತಂಗಿಯರ ಮದುವೆ ಅದು ಇದು ಅಂತ ಓದು ಬಿಟ್ಟು ಆಟೋ ಓಡಿಸೋಕೆ ನಿಂತೆ. ನೀನು ನಿಂತ ಹೆಜ್ಜೇಲಿ ಕ್ರಾಕ್ಸ್ ಬೇಕು,ಅದು ಬೇಕು,ಇದು ಬೇಕು ಅಂದ್ರೆ ನಾ ಎಲ್ಲಿಂದ ತರಲಿ ? ಅಂದ. ಇತ್ತೀಚೆಗಂತೂ ಜೀವನ ನಡೆಸೋದೆ ಕಷ್ಟ ಆಗಿದೆ, ಪೆಟ್ರೋಲ್ ರೇಟ್ ಹೆಚ್ಚಾಗಿದೆ ಬಸ್ ಫ್ರೀ ಆದ್ಮೇಲ್ ಅಂತೂ ನನಗೆ ವ್ಯಾಪಾರ ಆಗ್ತಿಲ್ಲ. ನೀನು ಚೆನ್ನಾಗಿ ಓದಿ ಕೆಲಸ ತಗೋಳಪ್ಪ, ನಮ್ಮ ಕಷ್ಟ ನಿನಗೆ ಬೇಡ ಎನ್ನುತ್ತಾ ಕಣ್ಣೊ ರೆಸಿಕೊಂಡ ರಾಜು. ಅದೇನೆನ್ನಿಸಿತೋ ಮಗ ಮಂಜನಿಗೆ ಹಠ,ಜಗಳ ಮಾಡಿ ಸಾಕಾಗಿದ್ದನೇನೋ ಸುಮ್ಮನಾದ. ಇನ್ನು ಪಂಚಾಯಿತಿ ತೀರಿಸಬೇಕು ಎಂದು ಮಾನಸಿಕವಾಗಿ ತಯಾರಾಗಿದ್ದ ಹೆಂಡತಿಗೆ ಮಗ ಸುಮ್ಮನಾಗಿದ್ದು ಸಂತೋಷ ತಂತು.

ಹರಿದ ಶರ್ಟ್ ಮುಚ್ಚಿಕೊಳ್ಳಲು ರಾಜವಿಗೆ ಗೆ ಖಾಕಿ ಅಂಗಿ ಆಸರೆಯಾಗಿತ್ತು. ಫುಟ್ಪಾತ್ನಲ್ಲಿ ನೂರು ಇನ್ನೂರು ಕೊಟ್ಟು ತಗೊಂಡಿದ್ದ ಚಪ್ಪಲಿ ಹಾಕಿಕೊಂಡು ದಿನ ಬೆಳಗ್ಗೆ ಆಟೋ ಓಡಿಸೋಕೆ ಹೋಗೋದೆ ಅವನ ದಿನಚರಿ, ಬಂದ ದುಡ್ಡಲ್ಲಿ ಬಾಡಿಗೆ ಕಟ್ಟಿ ಹೆಂಡತಿ ಮಗನನ್ನು ಸಾಕುವುದೇ ಸಾಧನೆ ಅವನದು.

ಪುಣ್ಯಕ್ಕೆ ಮಗನಿಗೆ ವಿದ್ಯೆ ಚೆನ್ನಾಗಿಯೇ ಇತ್ತು,ಗೆಳೆಯರಂತೆ ನಾನು ಒಳ್ಳೆಯ ಬಟ್ಟೆ, ಚಪ್ಪಲಿ ಫೋನು,ಬೈಕು ಇಟ್ಕೊಬೇಕು ಅನ್ನೋ ಆಸೆ ಬಿಟ್ಟರೆ ಮತ್ತೆ ಯಾವ ಕೆಟ್ಟ ಚಟ ಇರಲಿಲ್ಲ. ಹೇಗೋ ಓದಿ ಇಂಜಿನಿಯರ್ ಆದ. ನಾಲ್ಕೈದು ವರ್ಷ ಕಂಪನಿಯಲ್ಲಿ ದುಡಿದು ಒಳ್ಳೆಯ ಸಂಬಳ ಗಿಟ್ಟಿಸಿಕೊಂಡ. ತಿಂಗಳಿಗೆ ಲಕ್ಷದವರೆಗೂ ಗಳಿಸತೊಡಗಿದ. ರಾಜುಗೆ ಅದೇ ಖುಷಿ.ಸದ್ಯ ಮಗ ಒಂದು ದಾರಿ ಕಂಡುಕೊಂಡನಲ್ಲ ಅಂತ. ಇನ್ನೇನು ಅವನಿಗೆ ಮದುವೆ ಮಾಡಿದರೆ ಬೆಂಗಳೂರಿನಲ್ಲಿ ಸೆಟಲ್ ಆಗ್ತಾನೆ, ನನ್ನ ಜವಾಬ್ದಾರಿ ಮುಗೀತು. ನಾವಿಬ್ಬರು ಹೇಗೋ ಬದುಕುತ್ತೇವೆ ಎನ್ನುತ್ತಿದ್ದನು. ಕೈಗೆ ಹಣ ಬರುತ್ತಿದ್ದಂತೆ ಮಂಜುವಿಗೆ ತನ್ನ ತಂದೆಯ ಹಳೆಯ ದಿನಗಳು, ಅವರು ಪಡುತಿದ್ದ ಕಷ್ಟ,ದಿನಕ್ಕೆ 300, 400 ದುಡಿಯಲು ಅವರು ಮಾಡುತ್ತಿದ್ದ ಕೆಲಸ, ಹರಿದ ಚಪ್ಪಲಿ, ಆ ಖಾಕಿ ಅಂಗಿ ಎಲ್ಲವೂ ಕಣ್ಮುಂದೆ ಬಂದವು. ಅವರ ಕಷ್ಟ ಅರ್ಥ ಮಾಡಿಕೊಳ್ಳದೆ, ಆ ದಿನಗಳಲ್ಲಿ ತಾನು ಹಠ ಮಾಡಿ ಕೊಡಿಸಿಕೊಂಡ ಕ್ರಾಕ್ಸ್,ಅಪ್ಪನ ಕಾಲಲ್ಲಿ ಹರಿದ ಚಪ್ಪಲಿ ಇದ್ದರೂ ನಾನು ಎಷ್ಟು ಹಠ ಮಾಡಿದ್ದೆ ಎಂದೆನಿಸಿ ತನ್ನ ಮೇಲೆ ತನಗೆ ಬೇಸರ ತಂದಿತ್ತು. ಅಮ್ಮ ಎಂದೂ ತನಗೆ ಇಂತಹದ್ದು ಬೇಕು ಎಂದು ಕೇಳಿದವಳಲ್ಲ. ಬರಿ ನನ್ನ ಜಗಳ ತೀರಿಸೋದೇ ಆಯ್ತು. ಮಾತಿನ ಬರದಲ್ಲಿ ಅಪ್ಪ ನನಗಾಗಿ ನೀನು ಏನು ಮಾಡಿದ್ದೀಯಾ? ಎಂದು ಕೇಳಿದ್ದ ಆ ಮಾತು ಮಂಜುನಾಥನ ಕಿವಿಯಲ್ಲಿ ಕೊರೆಯುತ್ತಿದ್ದವು.
ಎಲ್ಲದರ ಪ್ರಾಯಶ್ಚಿತಕ್ಕೆ ಮೊದಲು ಅಪ್ಪ ಅಮ್ಮನ ಹತ್ತಿರ ಹೋಗಿ ಅವರಿಗೆ ಬೇಕಾದದ್ದನ್ನೆಲ್ಲಾ ಕೊಡಿಸಿ ಜೊತೆ ಇದ್ದು ಬರಬೇಕು ಎಂದು ಬಂದ ಸಂಬಳದಲ್ಲಿ ಅಪ್ಪನಿ ಗಾಗಿ ಒಳ್ಳೆ ಬಟ್ಟೆಗಳು, ಅಮ್ಮನಿಗಾಗಿ ಸೀರೆ,ಸಿಹಿ ತಿಂಡಿ ತಿನಿಸು ತೆಗೆದುಕೊಂಡು ಬೆಂಗಳೂರಿನಿಂದ ಊರಿನ ಕಡೆಗೆ ಹೊರಟ. ದಾರಿಯ ಮಧ್ಯದಲ್ಲಿ ಗೆಳೆಯನಿಂದ ಫೋನ್ ಒಂದು ಬಂದಿತ್ತು ಮಂಜು ಬೇಗ ಬಾ ಊರಿಗೆ.. ನಿನ್ನಪ್ಪನ ಆಟೋ ಗೆ ಆಕ್ಸಿಡೆಂಟ್ ಆಗಿದೆ ಆಸ್ಪತ್ರೆಗೆ ಸೇರಿಸಿದ್ದೇವೆ ಎಂದು. ಮಂಜು ಬಸ್ಸಿನ ಸೀಟ್ನಲ್ಲಿ ಕುಳಿತಿದ್ದ ಜಾಗದಲ್ಲೇ ಕುಸಿದು ಹೋದ. ಮಗನ ಮುಖ ನೋಡಲು ಜೀವ ಹಿಡಿದಿದ್ದ ರಾಜು ಅವನು ಬಂದ ತಕ್ಷಣ ತಬ್ಬಿಕೊಂಡು ಕೊನೆಯುಸಿರೆಳೆದ. ಅಮ್ಮನು ಗಂಡನ ಕಳೆದುಕೊಂಡು ಮಂಕಾದಳು. ಮಂಜುವಿನ ಹತ್ತಿರ ಈಗ ತಿಂಗಳಿಗೆ ನಾಲ್ಕು ಜೊತೆ ಕ್ರಾಕ್ಸ್ ತೆಗೆದುಕೊಳ್ಳಲು ಹಣವಿದೆ ಆದರೆ ಅಪ್ಪನಿಲ್ಲ.
ದಿನ ಕಂಪನಿಗೆ ಹೊರಡುವಾಗ ದಿನಕ್ಕೊಂದು ಬ್ರಾಂಡೆಡ್ ಶರ್ಟ್ ಪ್ಯಾಂಟ್ ಧರಿಸಿ ಚಪ್ಪಲಿ ಹಾಕಿಕೊಳ್ಳುವಾಗಲೆಲ್ಲಾ ಅವನಿಗೆ ಕಾಡುತ್ತಿದ್ದದ್ದು ಅಪ್ಪ ನೀನು ನನಗಾಗಿ ಏನು ಮಾಡಿದ್ದೀಯ?ಎಂದು ಕೇಳಿದ್ದ ಆ ಪ್ರಶ್ನೆ.
ತನ್ನನ್ನೇ ತಾನು ಕೊಂದುಕೊಳ್ಳುವಷ್ಟು ಕೋಪ ಬರುತ್ತಿತ್ತು. ಪಶ್ಚಾತಾಪ ದಲ್ಲಿ ಬೆಂದು,ಮತ್ತೆ ಇದ್ದ ಅಮ್ಮನನ್ನಾದರೂ ಚೆನ್ನಾಗಿ ನೋಡಿಕೊಳ್ಳಬೇಕು ಎಂದೆನಿಸಿ ಮುಂದಕ್ಕೆ ಹೆಜ್ಜೆ ಹಾಕಿದನು ಮಂಜು..

– ಎ ಆರ್ ಇಂದಿರಾ ಸಿದ್ದೇಶ್
ಆಂಗ್ಲ ಶಿಕ್ಷಕರು
ಸ ಹಿ ಪ್ರಾ ಶಾಲೆ. ಜರೇಕಟ್ಟೆ
ದಾವಣಗೆರೆ ( ದ ವ )

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ