ಅರಳದ ತಾವರೆಗಳು.
– ರವಿ ಎಸ್.ಮೊಘಾ.ಕಿಣ್ಣಿ ಸಡಕ ಕಲಬುರಗಿ
ಅಧ್ಯಾಯ-1.
ಹಳ್ಳಿಯ ಮಕ್ಕಳು ಗುಂಪು ಗುಂಪಾಗಿ, ಹುಲಿ ಮತ್ತು ಹಸುವಿನ ಆಟವನ್ನು ಆಡುತ್ತಿದ್ದರು. ಇನ್ನೊಂದು ಕಡೆ ಮಕ್ಕಳು ಉತ್ಸಾಹದಿಂದ ಕಬ್ಬಡಿ ಯನ್ನು ಆಡುತ್ತಿದ್ದರು. ಹೀಗೆ ಆಲದ ಮರದ ಕೆಳಗೆ ಹೆಚ್ಚಿನ ಸಂಖ್ಯೆಯಲ್ಲಿ ಆಡುತ್ತಾ ನಲಿಯುತ್ತಿದ್ದರು. ಹೀಗೆ ಆಟದ ಮೈದಾನದಲ್ಲಿ ಗೊಂದಲಮಯ ತುಂಬಿ ಮಕ್ಕಳ ಕಿರುಚಾಟ,ಕಿವಿಗೆ ಕೇಳಿ ಸಾಕಾಗಿ ಕಣ್ಣಿಗೆ ಬೇಸರವನುಂಟು ಮಾಡಿತ್ತು.
ಇದ್ದಕ್ಕಿದ್ದ ಹಾಗೆ ಸಾರಿಗೆ ಬಸ್ಸು ಆಗಮನ ಕಂಡು….
ಎಲ್ಲ ಹುಡುಗರು ಮತ್ತು ಹುಡುಗಿಯರು ಬಸ್ಸಿಗೆ ಮುತ್ತಿಗೆ ಹಾಕಿದರು. ಕೈ ಕೈ ಹಾಕಿ ಒಂದೇ ಸವನೇ ಕೂಗಾಡುತ್ತಿದ್ದರು.
ಹತ್ತಿರದ ಗದ್ದೆಯಲ್ಲಿರುವ ರಾಜೇಶ,ಸಾರಿಗೆ ಬಸ್ಸ ನಿಂತಿದ್ದನು ಕಂಡು ಗದ್ದೆಗೆ ನೀರು ಬಿಡುವುದನ್ನು ಅಲ್ಲಿಗೆ ನಿಲ್ಲಿಸಿ ಅವಸರದಿಂದ ಓಡಿ ಬಂದು, ದಣಿದ ಶರೀರದ ಬೆವರಿನ ಹನಿಗಳನ್ನು ಸವರುತ್ತಾ, ಬಸ್ಸಿನ ಕಿಟಕಿಯಲ್ಲಿ ಇಣುಕಿ ಇಣುಕಿ ,ಹಾರಿ ಹಾರಿ ಎಲ್ಲ ಕಡೆಗೆ ಒಮ್ಮೆ ನೋಡಿ ಬೇಸರಗೊಂಡನು.
ಬಸ್ಸಿನ ಮೆಟ್ಟಿಲು ಇಳಿದು ಬರುವವರನು ಒಂದೇ ಸಮನೆ ,ದಿಟ್ಟಿಸಿ ನೋಡತೊಡಗಿದ್ದನು.
ಇದ್ದಕ್ಕಿದ್ದ ಹಾಗೆ ಹೆಗಲಿಗೆ ಹೇರ್ ಬ್ಯಾಗ್ ಹಾಕಿಕೊಂಡು ಕೈಯಲ್ಲಿ ದೊಡ್ಡದಾದ ಸೂಟಕೇಸ್ ಹಿಡಿದುಕೊಂಡು ಬಸ್ಸಿನ ಮೇಟಿಲುಗಳನ್ನು ಇಳಿಯಿವುದನ್ನು ಕಂಡು,
“ಏಕೆ ! ಶಿವಾನಂದ ನಮ್ಮ ತಮ್ಮ ಕಾಲೇಜು ಮುಗಿಸಿಕೊಂಡು ನಿನ್ನ ಬರಲಿಲ್ಲವೇನು ? ಎಂದು ರಾಜೇಶ ತನ್ನ ಸ್ನೇಹಿತನಿಗೆ ಪ್ರಶ್ನಿಸಿದಾಗ,
” ಅವನು ಸ್ನೇಹಿತರ ಜೋತೆಗೆ ಮೈಸೂರಿಗೆ ಹೋಗಿದ್ದಾನೆ.ಇನ್ನೂ ಎರಡು ತಿಂಗಳು ಬರುವುದಿಲ್ಲವೆಂದು ಹೇಳಿದ್ದಾನೆ. ” ಎಂದು ಹೇಳಿದಾಗ ಮನಸ್ಸಿಗೆ ಜಿಗುಪ್ಸೆಗೊಂಡು ಮನೆಕಡೆಗೆ ಹೊರಟು ಹೋಗುವನು.
ರಾಜೇಶ ಕುರ್ಚಿಯ ಮೇಲೆ ಉಸ್ ! ಅಂತ ಕುಳಿತ.ಅಡುಗೆ ಮನೆಯಲ್ಲಿ ಗಂಡನಿಗೆ ಊಟ ಬಡಿಸುವುದನ್ನು ಅರ್ಧಕ್ಕೆ ನಿಲ್ಲಿಸಿ, ಕಲಾವತಿಯು ಬಾಗಿಲ ಹೊರಗೆ ಬಂದು,…
” ಯಾಕಪ್ಪಾ, ! ರಾಜೇಶ ! ನಿನ್ನ ತಮ್ಮ ಸಂತೋಷನು ಕಾಲೇಜು ಮುಗಿಸಿ ಕೊಂಡು ಇನ್ನೂ ಬರಲಿಲ್ಲವೇನು ? ನಮ್ಮ ಮನೆಯ ಪಕ್ಕದ ಎಲ್ಲ ಹುಡುಗರು ಕಾಲೇಜು ಮುಗಿಸಿಕೊಂಡು ಬಂದು ಬಿಟ್ಟಿದ್ದಾರೆ.ಇವನು ಯಾವಾಗ ಬರುತ್ತಾನೋ ! ಯೇನೋ ! ಆ ದೇವರಿಗೆ ಗೊತ್ತು. ” ಅಂತ ತಾಯಿ ಕಲಾವತಿ ನೋಡಿದಾಗ,
“ಈಗ ತಾನೇ ಶಿವಾನಂದ, ಕಾಲೇಜು ಮುಗಿಸಿಕೊಂಡು ಬಂದು ಬಿಟ್ಟನಮ್ಮ..! ” ಎಂದಾಗ. ಅವಸರದ ಹಂಬಲದಿಂದ ತಾಯಿ ಮಗನ ಹತ್ತಿರ ಬಂದು
“ಏನೋ..! ರಾಜೇಶ ! ನಮ್ಮ ಸಂತೋಷ ಇನ್ನೂ ಯಾವಾಗ ಬರತ್ತಾನಂತೆ ?”
“ಇಲ್ಲಮ್ಮಾ, ಅವನು ತನ್ನ ಗೆಳೆಯರ ಜೊತೆ ಮೈಸೂರಿಗೆ ಹೋಗಿದ್ದಾನಂತೆ, ಅವನು ಇನ್ನೂ ಎರಡು ತಿಂಗಳ ರಜೆ ಮುಗಿಸಿ ಕೊಂಡು ಬರುತ್ತಾನಂತೆ” ಎಂದು ಹೇಳಿದಾಗ.
“ಅವನಿಗೆ ಎರಡು ತಿಂಗಳೇನು ? ಆರು ತಿಂಗಳೇನು ? ಯಾವಾಗ ಬರತ್ತಾನೋ ಏನೋ ! ಆ ದೇವರಿಗೆ ಗೋತ್ತು.” ಎಂದು ಕಲಾವತಿ ನಿರಾಸೆಯಿಂದ ನುಡಿದಾಗ.
” ನನಗೆ ಗೊತ್ತು….! ಯಾರಾದರೂ ಸ್ನೇಹಿತರು ಸಿಕ್ಕರೆ ಸಾಕು ನಾಯಿಯ ಹಾಗೆ ಅವರ ಹಿಂದೆ ಸುತ್ತುತ್ತಾ ಇರುತ್ತಾನೆ.” ಎಂದು ಕೋಪದಿಂದ ಇವರ ಮಾತು ಕೇಳಿಸಿಕೊಂಡ ಅವನ ತಂದೆ ಶಂಕರೆಪ್ಪ ಬೇಸರವ್ಯಕ್ತ ಪಡಿಸಿದರು.
” ನೀವು ಸುಮ್ಮನೆ ಕೂಡ್ರಿ ..! ಯಾರರ ಜೋತೆಗೆ ಹೋದ್ರೆ ಸಾಕು ಹುಲಿಯ ಹಾಗೆ ಸಿಟ್ಟಿಗೆ ಏಳುತ್ತಿರಿ” ಎಂದು ರಾಜೇಶ ತಂದೆಯನ್ನು ಸಮಧಾನ ಪಡಿಸಿ ಊಟ ಮಾಡಲು ಹೇಳಿದ.
ಶಂಕರೆಪ್ಪನವರು ಊಟವನ್ನು ಮುಗಿಸಿ,ಕೈಯನ್ನು ತೊಳೆದು ಕೊಂಡು ಟಾವೆಲಿನಿಂದ ಒರೆಸಿಕೊಳ್ಳುತ್ತಾ,
“ನೀನು ಮುದ್ದಾಗಿ ಬೆಳೆಸಿ ಸಾಕಿದಕ್ಕೆ ಪ್ರತಿಫಲ ಕೊಡುತ್ತಿದ್ದಾನೆ. ಎಲ್ಲಾದರೂ ಆಳಾಗಿ ದುಡಿಯುವುಕ್ಕೆ ಸೇರಿಸಿದರೆ ಚನ್ನಾಗಿರತ್ತಿತ್ತೇನೋ !”
“ನಿಲ್ಲಸ್ರೀ ! ನಿಮ್ಮ ಮಾತು. ಒಂದು ಸಣ್ಣ ವಿಷಯಕ್ಕೆ ದೊಡ್ಡ ಭಾಷಣವೇ ಬಿಗಿಯುತ್ತಿರಲ್ಲ ?” ಎಂದು ಕಲಾವತಿ ಗಂಡನ ಮಾತಿಗೆ ಪ್ರಶ್ನಿಸಿದಾಗ ಇವರಿಬ್ಬರ ನಡುವೆ ರಾಜೇಶ ..
” ಅಮ್ಮಾ, ನೀನಾದರೂ ಸ್ವಲ್ಪ ಸುಮ್ಮನೆ ಕೂಡಮ್ಮಾ ! ಅಪ್ಪಾ, ಏನಾದರೂ ಸ್ವಲ್ಪ ಅಂದ ಮಾತ್ರಕ್ಕೆ ನೀನು ಇಷ್ಟೊಂದು ರೇಗಿ ಜಗಳ ತೆಗೆಯೋದು ಸರಿಯಲ್ಲ. ”
” ರಾಜೇಶ, ಇವರ ವಿಷಯ ನಿನಗೆ ಗೊತ್ತಿಲ್ಲಪ್ಪಾ ” ಎಂದು ಆಕೆ ನುಡಿಯುತ್ತಿದಂತೆ,
“ಅಮ್ಮಾ, ನೀನಾದರೂ ಸ್ವಲ್ಪ ಸಮಾಧಾನ ಮಾಡಿಕೊಳ್ಳಮ್ಮಾ ! ಗಂಡ- ಹೆಂಡತಿ ನಡುವೆ ಕೂಸು ಬಡವಾಯಿತು ಅಂತಾರಲ್ಲ ! ಹಾಗೆ ಮಾಡ್ತಿದ್ದಿರಿ ನನ್ನ ನೀವು ” ಎಂದಾಗ ಇಬ್ಬರು ಒಂದಾಗಿ ಒಮ್ಮೆ ನಗುವಿನ ಅಲೆ ಹರಿಸಿದರು. ಆಗ ರಾಜೇಶನು ಸ್ವಲ್ಪ ಅವರೊಂದಿಗೆ ಮುಗಳ್ನಗೆ ಬಿರಿ.
” ಅಮ್ಮಾ ! ಏನು ನೀನು ಮಾತಿನಲ್ಲೇ ಸಮಯ ಕಳೆಯುತ್ತಿಯೋ ! ಅಥವಾ ಹೊತ್ತಾಯ್ತು ಹೊಟ್ಟೆ ಹಸಿದಿದೆ ಏನಾದರೂ ಊಟ ಬಡಿಸ್ತಿಯೋ ಹೇಗೆ ?” ಎಂದಾಗ.
ಕಲಾವತಿಯವರು
” ಸರಿಯಪ್ಪಾ ! ನಡಿ ಒಳಗೆ ಊಟ ಬಡಿಸುವೆ” ಅಂತ ಆಕೆ ಕುಳಿತು ಕೊಳ್ಳಲು ಮಣೆ ಹಾಕಿ ಊಟ ಬಡಿಸುತ್ತಾ ಬಿಸಾಕಿಣಿಯನ್ನು ಬಿಸುವಳು.
“ಅಮ್ಮಾ, ನಿನ್ನ ಕೈಯಿಂದ ಊಟ ಮಾಡಬೇಕಾದರೆ ನಾನು ಏಳೇಳು ಜನ್ಮದಲ್ಲಿ ಪುಣ್ಯ ಮಾಡಿರಬೇಕು ” ಎಂದೆನಿಸುತ್ತದೆ. ಎಂದು ರಾಜೇಶ ಬಾಯಿ ಚಪ್ಪರಿಸುತ್ತಾ ನುಡಿದಾಗ.
” ಮಗಾ, ರಾಜೇಶ ಈಗ ನಾನು ಇದ್ದಿನಿ ಹಿಗಂತಿಯಾ ! ನಾಳೆ ನಿನ್ನ ಹೆಂಡತಿ ಬಂದಾಗ ಹೆಂಡತಿ ಮಾಡಿದ ಅಡುಗೆಯನ್ನೆ ರುಚಿ ಅಂತಿಯಾ ! ” ಎಂದು ಆಕೆ ಮಗನ ತಲೆಯನ್ನು ಸವರುತ್ತಾ ಮುಗಳ್ನಗೆ ಬಿರಿದಾಗ,
” ಹೋಗಮ್ಮಾ ! ಯಾವಾಗ ನೋಡಿದ್ರೂ ಇದೆ ಮಾತು ಅಂತಿಯಾ ? ” ಎಂದು ರಾಜೇಶ ಕೈ ತೊಳೆದು ಎದ್ದಾಗ ಕುರ್ಚಿಯ ಮೇಲೆ ಆರಾಮವಾಗಿ ಪೇಪರ್ ಓದುತ್ತಾ ಕುಳಿತ ಶಂಕರೆಪ್ಪನವರು ಓದುವುದನ್ನು ಅಲ್ಲಿಗೆ ನಿಲ್ಲಿಸಿ,
“ತಾಯಿ ಮಗನ ಮಾತುಗಳು ಇಲ್ಲಿಗೆ ಮುಗಿಸುತ್ತಿರೋ ! ಅಥವಾ ತೋಟದ ಕಡೆಗೆ ಹೊಗ್ತಿರೋ ! ” ಎಂದು ಅವರು ಹೆಂಡತಿ ಕಲಾವತಿ ಕಡೆಗೆ ಮುಖಮಾಡಿ ನುಡಿದಾಗ
“ಏನ್ರೀ ! ಯಾವಾಗಲೂ ತೋಟ ತೋಟ ಅಂತ್ತಿರಲ್ಲ ? ತೋಟದಲ್ಲಿ ಬಂಗಾರ ಬೆಳ್ಳಿ ಬಚ್ಚಿಟ್ಟಿರೇನು ? ” ಅಂತ ಕಲಾವತಿ ವ್ಯಂಗ್ಯವಾಗಿ ಮಾತಾಡಿದಾಗ
“ನಮ್ಮ ಗದ್ದೆ, ತೋಟ ಏನಂತ ತಿಳ್ಕೊಂಡಿದ್ದಿ ನೀನು ? ಅದೇ ನಮಗೆ ಬೆಳ್ಳಿ ಅದೇ ನಮಗೆ ಬಂಗಾರ ಅನ್ನೊದು ತಿಳಿದಿರಲಿ.” ಎಂದು ಶಂಕರೆಪ್ಪ ಸ್ವಲ್ಪ ಖಾರವಾಗಿಯೇ ನುಡಿದಾಗ
“ನಮ್ಮ ಮನೆಯ ಪಕ್ಕದಲ್ಲಿರುವ ಬೀರಪ್ಪನ ನೋಡಿ, ಅವಾ ತೋಟ ಗದ್ದೆ , ಹೋಲವನ್ನೆಲ್ಲ ಮಾರಿ ಬಂದಿದ ದುಡ್ಡಲ್ಲಿ ಒಂದು ದೊಡ್ಡದಾದ ಬಂಗಲೇ ಕಟ್ಟಿ ಆರಾಮವಾಗಿ ಉಳಿದ ಹಣದಲ್ಲಿ ಜೀವನ ಸಾಗಿಸುತ್ತಿದ್ದಾನೆ.” ಕಲಾವತಿ ಪ್ರತಿಯಾಗಿ ನುಡಿದಾಗ.
“ಅವನಿಗೇನು ಗೊತ್ತು ಸಂಸಾರದ ಸಾರ ? ಹೆಂಡತಿ ಮಕ್ಕಳು ಇದ್ದರೆ ತಾನೆ ಸಂಸಾರದ ತಾಪತ್ರೆಯ ? ಇರುವುದು ಒಂಟಿ ಜೀವ ಎಲ್ಲಿಯಾದರೂ ಹೆಂಡ ಕುಡಿದು ಬಿದ್ದರೆ ಅಲ್ಲೆ ಬೆಳಗಾಗುತ್ತದೆ ಅವನಿಗೆ. ನನ್ನ ಹಾಗೆ ಹೆಂಡತಿ ಮಕ್ಕಳು ಇದ್ರೆ ತಾನೆ ಅವನಿಗೆ ಎಲ್ಲಾ ಗೊತ್ತಾಗೊದು ? ” ಅಂತ ಶಂಕರೆಪ್ಪನವರು ಹೆಂಡತಿ ಮಾತಿಗೆ ಸಿಡಿಮಿಡಿಗೊಂಡು ಆಕೆಯ ಬಾಯಿ ಮುಚ್ಚುವಂತೆ ಮಾಡಿದನು.
ಗಂಡನ ಈ ಮಾತುಗಳನ್ನು ಕೇಳುತ್ತಾ ಇದ್ದಕ್ಕಿದ್ದ ಹಾಗೆ
“ಸಾಕ್ರೀ ! ..ನಿಮ್ಮ ಭಾಷಣ .ಒಂದು ಸಣ್ಣ ವಿಷಯಕ್ಕೆ ಮಾತಿನ ಮಳೆಯನ್ನೇ ಸುರಿಸುತ್ತಿರಿ. ” ಎಂದು ಕಲಾವತಿ ರೇಗಿದಾಗ
” ನಿಮಗೆ ಏನು ಹೇಳಬೇಕೆಂಬುದೆ ನನಗೆ ಗೊತ್ತಾಗುತ್ತಿಲ್ಲ ” ಅಂತ ಮಗ ರಾಜೇಶ ನಡುವೆ ಬಾಯಿ ಹಾಕಿ ಬೇಸರ ವ್ಯಕ್ತಪಡಿಸಿದನು. ಅವನ ಮಾತು ಆಲಿಸಿದ ಶಂಕರೆಪ್ಪನವರು
” ನೋಡಪ್ಪಾ , ರಾಜೇಶ ತೋಟದ ಕಡೆಗೆ ದನಗಳ ಹಾವಳಿ ಹೆಚ್ಚಾಗಿದೆ. ಆದಷ್ಟು ಬೇಗ ಹೊಗಿ ತೋಟದಲ್ಲಿಯೇ ಇದ್ದು ಬಿಡು.ನಾವು ಕೂಡ ಬರುತ್ತಿವಿ ” ಅಂದಾಗ
ರಾಜೇಶ ತಂದೆಯ ಮಾತಿಗೆ ಮರು ಮಾತಾಡದೆ ಅಲ್ಲಿಂದ ತೋಟದ ದಾರಿಯನ್ನು ತುಳಿಯುತ್ತಾ ನಡೆದನು.
ಶಂಕರೆಪ್ಪನವರಿಗೆ 60 ಎಕರೆ ಫಲವತ್ತಾದ ಭೂಮಿಯಿದ್ದು, ಅದರಲ್ಲಿ 50 ಎಕರೆಯಲ್ಲಿ ದ್ರಾಕ್ಷಿ ಬೆಳೆಯುತಿದ್ದಾರೆ . ಅಂದಮೇಲೆ ಅವರಿಗೇನು ಕೊರತೆಯಿದೆ ? ಎಂದ ಎನಿಸದು. ಯಾವುದರಲ್ಲಿಯೂ ಅವರಿಗೆ ಕಡಿಮೆ ಇದ್ದಂತಿಲ್ಲ.
ಅವರಿಗೆ ವಾಸಿಸಲು ಸುಂದರವಾದ ಮನೆ ಅದಕ್ಕೆ ತಕ್ಕಂತೆ ತಡೆಗೊಡೆಯ ಆವರಣ ಮನೆಯ ಸುತ್ತಲೂ ಕಂಗೊಳಿಸುತ್ತದೆ.
…………
ತೋಟದಲ್ಲಿ ರಾಜೇಶ ನಿಂತಿದ್ದ.
ಭೂಮತಾಯಿ ಹಸಿರು ಚೆಲುವನ್ನು ಸೂಸುತ್ತಿತ್ತು.ಅಲ್ಲಿ ವಿಭಿನ್ನ ರಾಶಿಯ ಹಲವಾರು ಬಣ್ಣ ಬಣ್ಣದ ಹೂಗಳು, ಗಗನಕ್ಕೆ ಏರಿದ ಗಿರಿಯನ್ನು ಚಾಮರ ಬೀಸುವ ಮರಗಳು, ನೋಡುತ್ತಾ ಆ ಪ್ರಕೃತಿಯ ಸೌಂದರ್ಯದ ಆನಂದವನ್ನು ಅನುಭವಿಸುತ್ತಿದ್ದ. ಆ ಪರಿಸರದ ತಣ್ಣನೆಯ ತಂಪಾದ ತಂಗಾಳಿ,ಅವನ ಮೈಯನ್ನು ತಾಗುತ್ತಿತ್ತು.ನೀಲಿ ಆಕಾಶದಲ್ಲಿ ತೇಲಿ ತೇಲಿ ಹೋಗುವ ಬೆಳ್ಳಿ ಮೋಡಗಳು, ಬಾನಿನ ಆಗಲಕ್ಕೂ ತೇಲಿ ಹೋಗುವ ಬಾನಾಡಿಗಳು, ಹೂವಿಂದ ಹೂವಿಗೆ ಹಾರುವ ದುಂಬಿಗಳು, ಇವೆಲ್ಲವೂ ಅವನಿಗೆ ಆನಂದವನ್ನುಂಟು ಮಾಡುತ್ತಿದ್ದ ಹಾಗೆ ನೀಶಬ್ದದ ಪ್ರಕೃತಿಯಲ್ಲಿ ಅವನ ಮನಸ್ಸು ಮಧುರ ಗಾನವನ್ನು ಹಾಡಿ ನಲಿಯುತ್ತಿತ್ತು. ಚಿಲಿಪಿಲಿ ಎಂದೊದುವ ಹಕ್ಕಿಗಳ ಕಲರವ,ಮಾಮರದಲ್ಲಿ ಕುಳಿತು ಹಾಡುವ ಕೋಗಿಲೆಯ ಸುಮಧುರ ಕಂಠ ಕೇಳುವ ಕಿವಿಗೆ ಎಂದೂ ಕಾಣಲಾರದಷ್ಟು ಹಿತವನ್ನು ನೀಡುತ್ತಿತ್ತು.ಈ ಸೃಷ್ಟಿಯ ಸೊಬಗನ್ನು ನೋಡುತ್ತಿದ್ದ ಹಾಗೆ ಸ್ವರ್ಗವೇ ಇಲ್ಲಿಯೇ ಧರೆಗಿಳಿದಂತೆ ಕಾಣುತ್ತಿತ್ತು.
(ಮುಂದುವರೆಯುತ್ತದೆ……..)
– ರವಿ ಎಸ್.ಮೋಘಾ. ಮೋ- 9008921341
ಲೇಖಕರ ಪರಿಚಯ:
ರವಿ ಎಸ್. ಮೋಘಾ ರವರು ಕಲಬುರಗಿ ಜಿಲ್ಲೆಯ ಕಮಲಾಪೂರ ತಾಲ್ಲೂಕಿನ ಕಿಣ್ಣಿ ಸಡಕ ಗ್ರಾಮದವರಾಗಿದ್ದು ಚಿಂಚೋಳಿ ತಾಲೂಕಿನ ನೇಮುನಾಯಕ ತಾಂಡಾದ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಲನಚಿತ್ರ ಡಿಪ್ಲೊಮಾ ತರಬೇತಿ ಪಡೆದ ಇವರು ಪ್ರಾರಂಭದಲ್ಲಿ ಸಿನಿಮಾ ಕ್ಷೇತ್ರದಲ್ಲಿ ಗುರ್ತಿಸಿ ಕೊಂಡಿದ್ದರು. ಮತ್ತು ಬಾಲ್ಯದಿಂದಲೂ ಕತೆ,,ಕವನ ,ಕಾದಂಬರಿ ಬರವಣಿಗೆಯ ಹವ್ಯಾಸ ಬೆಳೆಸಿಕೊಂಡ ಇವರು 1990 ರಲ್ಲಿಯೇ ಬರೆದ ಇವರ ಈ ‘ಅರಳದ ತಾವರೆಗಳು’ ಎಂಬ ಕಾದಂಬರಿ ಇಲ್ಲಿ ಧಾರವಾಹಿಯಾಗಿ ಪ್ರಕಟಿಸಲಾಗುತ್ತಿದೆ. ಇವರ ಕತೆ ಕವನ ಲೇಖನ ಬರಹಗಳು ಅಂದಿನ ‘ನಟರಾಜ’ ಎಂಬ ಸಿನಿಮಾ ಮಾಸ ಪತ್ರಿಕೆ ಸೇರಿದಂತೆ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.