ಅಥ್ಲೆಟಿಕ್ಸ್ ನ ಭರವಸೆಯ ಆಶಾಕಿರಣ…. ಮೇಘ ಮುನವಳ್ಳಿಮಠ.
-ವೀಣಾ ಹೇಮಂತ್ ಗೌಡ ಪಾಟೀಲ್
ಕಳೆದ ವಾರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಅಂತರ ಕಾಲೇಜು ಅಥ್ಲೆಟಿಕ್ ಕ್ರೀಡಾಕೂಟದಲ್ಲಿ 400 ಮೀಟರ್ ಹರ್ಡಲ್ಸ್ ವಿಭಾಗದಲ್ಲಿ ಮತ್ತು 400 ಮೀಟರ್ ಓಟದಲ್ಲಿ ಎರಡೆರಡು ದಾಖಲೆಗಳನ್ನು ನಿರ್ಮಿಸಿದ ಗದುಗಿನ ಪ್ರಭು ರಾಜೇಂದ್ರ ಶಾರೀರಿಕ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿನಿ ಕುಮಾರಿ ಮೇಘ ಮುನವಳ್ಳಿಮಠ ಉತ್ತರ ಕರ್ನಾಟಕದ ಅಥ್ಲೆಟಿಕ್ ಕ್ರೀಡೆಯ ಭರವಸೆಯ ಕ್ರೀಡಾಪಟುವಾಗಿ ಹೊರಹೊಮ್ಮಿದ್ದಾರೆ.
ಇತ್ತೀಚೆಗೆ ಧಾರವಾಡದ ಆರ್ ಎನ್ ಶೆಟ್ಟಿ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಪ್ತಿಯ ಅಂತರ ಕಾಲೇಜು ಅಥ್ಲೆಟಿಕ್ ಕ್ರೀಡಾಕೂಟದಲ್ಲಿ 400 ಮೀಟರ್ ಹರ್ಡಲ್ಸ್ ವಿಭಾಗದಲ್ಲಿ ಕೇವಲ 1:00:08 ಸಮಯದಲ್ಲಿ ಓಡಿ ಈ ಹಿಂದಿನ(1:03) ದಾಖಲೆಯನ್ನು ಅಳಿಸಿ ಹಾಕಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ ಮೇಘ ಮರುದಿನ ನಡೆದ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಕೇವಲ 55 ಸೆಕೆಂಡುಗಳಲ್ಲಿ ಓಡಿ ಈ ಹಿಂದಿನ ದಾಖಲೆ (58ಸೆಕೆಂಡ್)ಯನ್ನು ಮುರಿದು ಹೊಸ ದಾಖಲೆಯನ್ನು ಸೃಷ್ಟಿಸಿ ಚಿನ್ನದ ಪದಕವನ್ನು ಪಡೆದಿದ್ದು ಅಥ್ಲೆಟಿಕ್ ಕ್ಷೇತ್ರದಲ್ಲಿ ಸಂಚಲನವನ್ನು ಸೃಷ್ಟಿಸಿದ್ದಾಳೆ.
ಮೂಲತಹ ಗದಗ ಜಿಲ್ಲೆಯ ಮುಂಡರಗಿಯ ನಿವಾಸಿಯಾಗಿರುವ ಮೇಘ ಮುನವಳ್ಳಿ ಮಠ ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಮಾಡಿಕೊಂಡಿದ್ದು ಹೈಸ್ಕೂಲಿನಲ್ಲಿದ್ದಾಗ ಕ್ರೀಡೆಯಲ್ಲಿ ತೊಡಗಿಸಿಕೊಂಡಳು. ಮುಂದೆ ಪಿಯುಸಿಗೆ ಧಾರವಾಡದ ಜೆ ಎಸ್ಎಸ್ ಕಾಲೇಜಿನಲ್ಲಿ ವಿಜ್ಞಾನ ವಿಭಾಗವನ್ನು ಆಯ್ದುಕೊಂಡ ಆಕೆ ವೃತ್ತಿಪರ ಅಥ್ಲೆಟಿಕ್ ತರಬೇತಿಯನ್ನು ಕೋಚ್ ಶಾಮಲಾ ಪಾಟೀಲ್ ಅವರ ಬಳಿ ಪಡೆದಳು. ಒಂದು ವರ್ಷದ ಕಠಿಣ ತರಬೇತಿಯ ನಂತರ ಆಕೆ ಮೊದಲ ಬಾರಿಗೆ ರಾಜ್ಯಮಟ್ಟದ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಯುನಿವರ್ಸಿಟಿ ಬ್ಲೂ ಎಂದು ಘೋಷಿಸಲ್ಪಟ್ಟಳು, 2019 ರಲ್ಲಿ ಆಳ್ವಾಸ್ ಕಾಲೇಜಿನಲ್ಲಿ ನಡೆದ ಅಖಿಲ ಭಾರತೀಯ ಅಂತರ ವಿಶ್ವವಿದ್ಯಾಲಯಗಳ ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದಳು.
ಪ್ರತಿದಿನ ಮುಂಜಾನೆ ಮತ್ತು ಸಾಯಂಕಾಲ ಮೂರರಿಂದ ನಾಲ್ಕು ಗಂಟೆಗಳ ಕಾಲ ಕಠಿಣ ತರಬೇತಿಯಲ್ಲಿ ತೊಡಗಿಸಿಕೊಳ್ಳುವ ಮೇಘ ಓಟದ ಪ್ರಾಕ್ಟೀಸ್ನ ಜೊತೆ ಜೊತೆಗೆ, ಸ್ಟ್ರೆಂತ್ ವರ್ಕೌಟ್ ಗಳನ್ನು ಕೂಡ ನುರಿತ ತರಬೇತುದಾರರ ಅಡಿಯಲ್ಲಿ ನಿರ್ವಹಿಸುತ್ತಿದ್ದು ಕಳೆದ ಐದಾರು ವರ್ಷಗಳಿಂದ ಉತ್ತಮ ಪ್ರದರ್ಶನ ತೋರುತ್ತಿರುವ ಮೇಘ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿಯಾಗಲಿ ಎಂಬುದು ಆಕೆಯ ಎಲ್ಲ ಬೆಂಬಲಿಗರ ಆಶಯ.
ಹಲವಾರು ರಾಜ್ಯಮಟ್ಟದ ಪ್ರಶಸ್ತಿ ಪದಕಗಳನ್ನು ತನ್ನ ಮುಡಿಗೇರಿಸಿಕೊಂಡಿರುವ ಮೇಘಾಳ ತನ್ನ ಶ್ರದ್ಧೆ ಮತ್ತು ಗಮನವನ್ನು 400 ಮೀಟರ್ ಓಟ ಮತ್ತು 400 ಮೀಟರ್ ಹರ್ಡಲ್ಸ್ ನಲ್ಲಿ ಇರಿಸಿ ಸತತ ಪ್ರಯತ್ನ ಜಾರಿಯಲ್ಲಿಟ್ಟಳು. ರಾಜ್ಯ ಮತ್ತು ರಾಷ್ಟ್ರಮಟ್ಟದ ಸೀನಿಯರ್ ಅಥ್ಲೆಟಿಕ್ ಚಾಂಪಿಯನ್ಶಿಪ್‌ನಲ್ಲಿ ಭಾಗವಹಿಸಿದ ಆಕೆ ನಾನೂರು ಮೀಟರ್ ಹರ್ಡಲ್ಸ್ ನಲ್ಲಿ ಆರನೇ ಸ್ಥಾನವನ್ನು ಮತ್ತು 400 ಮೀಟರ್ ಓಟದಲ್ಲಿ ಎಂಟನೇ ಸ್ಥಾನವನ್ನು ಪಡೆದುಕೊಂಡಳು.
ಈ ಹಿಂದೆ ನಾನೂರು ಮೀಟರ್ ಹರ್ಡಲ್ಸ್ ನಲ್ಲಿ ಆಕೆಯ ಅತ್ಯುತ್ತಮ ಸಮಯ 1.03 ಸೆಕೆಂಡ್ ಗಳಾಗಿದ್ದರೆ ಇದೀಗ ಕೇವಲ ಒಂದು ನಿಮಿಷದಲ್ಲಿ ಆಕೆ ಈ ದೂರವನ್ನು ಕ್ರಮಿಸಿದ್ದಾಳೆ. 400 ಮೀಟರ್ ಓಟದಲ್ಲಿ ಈ ಹಿಂದೆ ಆಕೆಯ ದಾಖಲೆಯ ಸಮಯ 57 ಸೆಕೆಂಡ್ ತೆಗೆದುಕೊಳ್ಳುತ್ತಿದ್ದು ಇದೀಗ 55 ಸೆಕೆಂಡ್ ನಲ್ಲಿ ಯಾಕೆ ಗುರಿಯನ್ನು ತಲುಪುತ್ತಿದ್ದು ಈ ಮೂಲಕ ಆಕೆ ರಾಷ್ಟ್ರಮಟ್ಟದ ಕ್ರೀಡೆಗಳಲ್ಲಿ ಮಿಂಚುವ ಎಲ್ಲ ಭರವಸೆಗಳನ್ನು ಹೊಂದಿರುವ ಕ್ರೀಡಾಪಟುವಾಗಿ ಹೊರಹೊಮ್ಮಿದ್ದಾಳೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನನ್ನು ತಾನು ಗುರುತಿಸಿಕೊಂಡು ಒಲಂಪಿಕ್ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು ಎಂಬುದು ಆಕೆಯ ಆಶಯವಾಗಿದೆ.
ಕಳೆದ ಹಲವಾರು ವರ್ಷಗಳಿಂದ ದಸರಾ ಕ್ರೀಡಾಕೂಟಗಳಲ್ಲಿ ಭಾಗವಹಿಸುತ್ತಿರುವ ಮೇಘಾಳ
ಪ್ರಯತ್ನ ಹುಸಿ ಹೋದದ್ದಿಲ್ಲ. 200 ಮೀಟರ್, 400 ಮೀಟರ್ ಮತ್ತು 4*100 ಮೀಟರ್ ರಿಲೇ ಸ್ಪರ್ಧೆಗಳಲ್ಲಿ ಸತತವಾಗಿ ಭಾಗವಹಿಸುತ್ತಿರುವ ಆಕೆ ಒಂದಲ್ಲ ಒಂದು ಪದಕಗಳನ್ನು ಗಳಿಸಿರುವುದು ಆಕೆಯ ಹೆಗ್ಗಳಿಕೆ. ಕಳೆದ ಎರಡು ವರ್ಷಗಳಿಂದ ಆಕೆ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರೂ ಆರು ಮತ್ತು ಎಂಟನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಗಿದೆ. ತನ್ನ ಓಟದ ವೇಗವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಅವಶ್ಯಕವಾದ ತರಬೇತಿಗೆ ಮತ್ತು ಒಳ್ಳೆಯ ದೈಹಿಕ ಚೈತನ್ಯವನ್ನು ಪಡೆಯಲು ಅಗತ್ಯವಾದ ಪೋಷಕಾಂಶಗಳುಳ್ಳ ಆಹಾರ ಸೇವನೆಗೆ ಆಕೆಗೆ ಸಾಕಷ್ಟು ಹಣದ ಅವಶ್ಯಕತೆ ಇದ್ದು ಆಕೆಗೆ ಕಳೆದ 5 ವರ್ಷಗಳಿಂದ ಮುಂಡರಗಿಯ ಚೈತನ್ಯ ಶಿಕ್ಷಣ ಸಂಸ್ಥೆಯು ಆಕೆಗೆ ಸಹಾಯ ಹಸ್ತವನ್ನು ಚಾಚಿದೆ. ತಂದೆ ರೇವಣಸಿದ್ದಯ್ಯ ಎಕ್ಸ್ ಮಿಲಿಟರಿ ಸರ್ವಿಸ್ ಮ್ಯಾನ್ ಆಗಿದ್ದು ಇದೀಗ ನಿವೃತ್ತಿಯ ನಂತರ ಹತ್ತಿರದ ಶುಗರ ಫ್ಯಾಕ್ಟರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ ಶಾರದಾ ಗೃಹಿಣಿಯಾಗಿದ್ದು ಸೋದರಿ ಮಂದಾರ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ತಮ್ಮೆಲ್ಲ ತೊಂದರೆಗಳ ನಡುವೆಯೂ ಮಗಳ ಕ್ರೀಡಾಸಕ್ತಿಗೆ ನೀರೆರೆಯುತ್ತಿರುವ ಪಾಲಕರು ಆಕೆಗೆ ಎಲ್ಲ ರೀತಿಯ ಸಹಾಯ ಸಹಕಾರಗಳನ್ನು ನೀಡುತ್ತಿರುವುದು ಆಕೆಗೆ ಆತ್ಮಸ್ಥೈರ್ಯವನ್ನು ತಂದು ಕೊಟ್ಟಿದೆ. ಗಾಯದ ಸಮಸ್ಯೆಯಿಂದಲೂ ಒಂದಷ್ಟು ಬಾರಿ ನರಳಿದ ಮೇಘ ಆರೋಗ್ಯ ಸುಧಾರಿಸಿದ ಮೇಲೆ ಮತ್ತೆ ಪುನಶ್ಚೇತನ ಶಿಬಿರಗಳಿಗೆ ಹಾಜರಾಗಿ ತನ್ನ ತರಬೇತಿಯನ್ನು ಮುಂದುವರೆಸಿ ಈ ಹಂತವನ್ನು ತಲುಪಿದ್ದಾಳೆ.
ಮುಂದಿನ ತಿಂಗಳಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಮೇಘ ಮುನವಳ್ಳಿಮಠ ತನ್ನ ಅತ್ಯುತ್ತಮ ಪ್ರಯತ್ನವನ್ನು ಮುಂದುವರೆಸಿ ವಿಜಯಮಾಲೆಯನ್ನು ಧರಿಸಲಿ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಜಯ ದುಂದುಭಿಯನ್ನು ಮೊಳಗಿಸಲಿ, ಇನ್ನಷ್ಟು ಪದಕಗಳಿಗೆ ಕೊರಳೊಡ್ಡಲಿ ಎಂಬ ಆಶಯದೊಂದಿಗೆ.
–ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್.