ಬಾ ಕಟ್ಟೋಣ ಕವಿತೆ
ನಿನ್ನೆದೆಯ ಗೂಡಲಿ ಅವಿತಿಟ್ಟ
ಶತಶತಮಾನದ ವ್ಯಥೆ – ಕಥೆ
ಇಣುಕುತ್ತಿವೆ! ನೋಡು ಬಾ
ನನ್ನ ಕಣ್ಣಲಿ!!
ಒಂದೆದೆಯ ಹಾಲ ಕುಡಿದವರೆಲ್ಲ
ಕೌರವರೋ, ಇಲ್ಲ ಪಾಂಡವರೋ…
ಕುರುಕ್ಷೇತ್ರದ ಕಥೆಗೆ
ಮುನ್ನುಡಿ ಬರೆದವರು!!
ಸಜ್ಜನರಿಲ್ಲದ ಬೀದಿಯಲ್ಲಿ
ಬರೀ ನಾಯಿ – ನರಿ!
ಹಾಡಹಗಲೇ ನಡು ಕೇರಿಯಲ್ಲಿ
ದ್ರೌಪದಿ ಮಾನಭಂಗ… ಯಾರು ಹೊಣೆ ಇಲ್ಲಿ?
ಮದ್ದು ಗುಂಡುಗಳು
ಸಾಲು ಸಾಲು ಮರದಂತೆ ನೆಟ್ಟರು
ಒಳನುಸುಳುತ್ತಿವೆ, ರಕ್ತದಾಹಿ …
ನರಹಂತಕ – ಹರಿದ ರಕ್ತ ಪ್ರವಾಹ!!
ನಿನ್ನೆದೆಯ ನೆಲದಲ್ಲಿ… ಬಿತ್ತಿದ್ದು
ಯಾವ ಬೀಜ, ಬೆಳೆದಿದ್ದು ಏನು?
ಒಬ್ಬನ ಗೋರಿಯ ಮೇಲೆ..
ಮಗದೊಬ್ಬನ ಸೌಧ ನಿಂತಿದೆ ಇಲ್ಲಿ!!
ಕವಿತೆ ಕಟ್ಟುವ ಹೊಣೆಗಾರಿಕೆಗೆ
ಮಾತಿಲ್ಲ, ಬರಿ ಮೌನ…
ಹಳೆ, ಹೊಸತು ಎನ್ನಲಾದೀತೆ…
ಎಲ್ಲರೆದೆಯಲ್ಲಿ ಚಿಮ್ಮುವ
ಹಸಿ ಹಸಿ ಭಾವಕ್ಕೆ!!
ಅಂಗದ ಗಂಡು ಹೆಣ್ಣೆಂಬ ರೂಪಕ್ಕೆ
ಜೀವದ ಹಂಗ್ಯಾಕೆ!
ದುಡಿಯುವ ಮೈ ಮನಸ್ಸಿಗೆ…
ಪರಲೋಕದ ಚಿಂತೆಯಾಕೆ!!
ಬಾ… ಕಟ್ಟೋಣ ಕವಿತೆ
ಹೊಸ, ಹಳತುಗಳ ಮರೆತು,
ಹೊಸ ಸಂಬಂಧದ, ಹೊಸ ಚಿಗುರಿಗೆ
ಬಣ್ಣ ಬಣ್ಣದ, ಬೆರಗು ಭಿನ್ನಾಣ ಕವಿತೆ!!
ಅಶೋಕ ಎಮ್. ಬಿ.
ಕವಿ / ಕಲಾವಿದ
ಜ. ನ. ವಿ. ದಕ್ಷಿಣ ಕನ್ನಡ