Oplus_131072
  • ಬಡ ಸಾಹಿತಿಗಳಿಗೆ ಸರ್ಕಾರದ ಸಹಾಯ ಹಸ್ತ ಚಾಚ ಬೇಕಾಗಿದೆ.

ವೀರಣ್ಣ ಮಂಠಾಳಕರ್. ಬಸವಕಲ್ಯಾಣ

 

ಸಾಹಿತಿ ಪತ್ರಕರ್ತರ,  ಸಮಸ್ಯೆ ಕುರಿತು ಶಾಸಕರು, ಸಚಿವರುಗಳು,  ಅಸೆಂಬ್ಲಿಯಲ್ಲಿ ಚರ್ಚೆ ಮಾಡುವುದಿಲ್ಲ. ಇವರ ದೈನಂದಿನ ಜೀವನದ ಬಗ್ಗೆ ಚಕಾರ ಎತ್ತುವುದಿಲ್ಲ. ಅಂದರೆ ನಿರುದ್ಯೋಗಿಯಂತೆ ಜೀವನ  ಸಾಗಿಸುತ್ತಿರುವ ಇವರಿಗೆ ಹುಟ್ಟಿ ಬಂದ ಬಳಿಕ, ಬದುಕುವ ಹಕ್ಕಿಲ್ಲವೆ…? ಸಮಾಜಕ್ಕಾಗಿ ಕೊಡುಗೆ ಕೊಡುವ, ಜೀವನಪರ್ಯಂತ ಒಬ್ಬ ಶ್ರಮಜೀವಿ ರೈತನಂತೆ ಸಾಮಾಜಿಕ ಚಿಂತನೆಯನ್ನು ಮಾಡುತ್ತಾ ಬರೆಯುವನಿಗೆ ಸರ್ಕಾರದಿಂದ ಹೇಳಿಕೊಳ್ಳುವಂತ ಜೀವನಾಧಾರಕ್ಕೆ ಏನಿದೆ..? ಬರಹಗಾರರಿಗೆ ಯಾವ ಕನಸು, ಆಸೆ, ಸಾಧನೆ, ಗುರಿ ಎಂಬುದು ಇರೋದಿಲ್ಲವೋ..? ಈ ವಿಷಯ ರಾಜಕೀಯವಾಗಿ, ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಲಿ.

 

ಬರಹಗಾರರು, ಸಾಹಿತಿಗಳು, ಪತ್ರಕರ್ತರು ಏನಾದರೂ ಬರೆಯುತಿರುತ್ತಾರೆ ಎಂದರೆ ಅವರಿಗೆ ಬೇರೆ ಕೆಲಸವಿಲ್ಲ ಅಂತಲ್ಲ. ಹೊಟ್ಟೆಪಾಡಿಗಾಗಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಅವರಲ್ಲಿರುವ ಸೃಜನಶೀಲತೆಯನ್ನು ಸದಾ ಜೀವಂತವಾಗಿ ಇಡುವ ಉದ್ದೇಶದಿಂದ ಸಾಮಾಜಿಕ ಸ್ಪಂಧನೆಯ ಮನೋಭಾವ ಹೊಂದಿರುತ್ತಾರೆ. ಸಮಾಜದಲ್ಲಿರುವ ಯಾವುದೇ ಕ್ಷೇತ್ರದ ಜನರೊಂದಿಗೆ ಬೆರೆತು ಅವರಲ್ಲಿರುವ ಕಳಕಳಿಗೆ ನೇರ ಸ್ಪಂಧನೆಗಾಗಿ ಕಾಯುತಿರುತ್ತಾರೆ. ಸಮಾಜದ ಜನತೆಯೊಂದಿಗೆ ಬೆರೆತು ಸಮಾಜ ಹೇಗೆ, ಜನಜೀವನ ಹೇಗೆ ಎಂಬುದನ್ನು ಅವಲೋಕನ ಮಾಡಿಕೊಳ್ಳುತ್ತಾ ಸಮಾಜವನ್ನು ಆಳವಾಗಿ ಅರಿಯುವ ಕುತೂಹಲ ಒಬ್ಬ ಬರಹಗಾರ ಮತ್ತು ಪತ್ರಕರ್ತನಿಗೆ ಮಾತ್ರ ಇರಲು ಸಾಧ್ಯ.

ಹಾಗಂತ ಯಾರ ಬಗ್ಗೆಯೇ ಆಗಲಿ, ಗಾಳಿ ಮಾತಿನಿಂದ, ಊಹಾಪೂಹ, ನಮ್ಮ ಮನಸ್ಸಿನೊಳಗೆ ಸದಾ ಕಾಡುತ್ತಿರುವ ಒಬ್ಬ ಪ್ರಭಾವಿ ವ್ಯಕ್ತಿಯ ಬಗ್ಗೆಯಾಗಲಿ, ಸಂಘ ಸಂಸ್ಥೆಗಳ ಅಭಿಮಾನಕ್ಕೆ ಏನೇ ಬರೆದರೂ ಅದು ಅರ್ಧ ಸತ್ಯ ಮಾತ್ರ ಆಗಿರುತ್ತದೆ. ಕೆಲವೊಮ್ಮೆ ಪೂರ್ವಾಪರ ಯೋಚಿಸಿ ಬರೆಯುತಿರುತ್ತಾರೆ. ಪರಿಪೂರ್ಣವಾದ ಸತ್ಯವೆಂಬುದು ನಮ್ಮ ನಮ್ಮ ಅನುಭವಕ್ಕೆ ನೇರಾ ನೇರವಾಗಿ ಬಂದಾಗ ಮಾತ್ರ ಅರಿವಾಗುತ್ತದೆ.

ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲಿ ಎಲ್ಲಾರು ಅವರವರ ಒಂದಲ್ಲ ಒಂದು ರೀತಿಯ ಸ್ವಾರ್ಥವನ್ನು ಇಟ್ಟುಕೊಂಡೇ ಸಮಾಜದೊಂದಿಗೆ ನೇರ ಮುಖಾಮುಖಿಯಾಗಲು ಹವಣಿಸುತ್ತಾರೆ. ತಪ್ಪಿರಲಿ, ಸರಿಯಿರಲಿ ಸಮಾಜವನ್ನು ಅರಿಯಲು ಸೃಜನಶೀಲವೆಂಬುದು ಸದಾ ಜಾಗೃತವಾಗಿರಬೇಕು. ಭಾವನಾತ್ಮಕ ಮನಸ್ಸಿನ ಸೃಜನಶೀಲ ವ್ಯಕ್ತಿಗಳಲ್ಲಿ ಜಾಗೃತ ಅಜಾಗೃತ ಎರಡೂ ಏಕಕಾಲಕ್ಕೆ ಕೆಲಸ ಮಾಡುವಾಗ ಹಲವು ಸಲ ಎಡವಿ ಬೀಳುವುದುಂಟು. ಹಾಗಂತ ಪ್ರಯತ್ನ ಬಿಡಬಾರದು. ಬಿದ್ದರೂ ಫಿನಿಕ್ಸ್ ಹಕ್ಕಿಯಂತೆ ಎದ್ದು ಮೈ ಕೊಡವಿ ಎದ್ದೇಳುವುದು ಬದುಕಿನ ಸಹಜ ನಿಯಮ.

ಬರಹಗಾರ ಪತ್ರಕರ್ತ ಸಾಹಿತಿ ಯಾವುದೇ ಒಂದು ವಿಷಯದ ಬಗ್ಗೆ ಬರೆಯುವಾಗ ಆತ ಏನಾದರೂ ನಿರೀಕ್ಷಿಸುವುದು ಸಹಜ. ಯಾಕೆಂದರೆ ನಿರೀಕ್ಷೆಯಿಲ್ಲದೇ, ಸ್ವಾರ್ಥಪರ ಯೋಚನೆ, ಯೋಜನೆ ಇಲ್ಲದೇ ಯಾರೊಬ್ಬರೂ ಮುಂದೆ ಬರಲು, ಅವರವರ ನಿರ್ಧಿಷ್ಟ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸುವುದಕ್ಕೆ ಸಾಧ್ಯವೇ ಇಲ್ಲ.

ಯಾವುದೇ ಒಬ್ಬ ರಾಜಕೀಯ ವ್ಯಕ್ತಿ ತನ್ನೊಳಗೆ ಸ್ವಾರ್ಥವಿಲ್ಲದೇ ಜನಸೇವೆಯಲ್ಲಿ ತೊಡಗುವುದಿಲ್ಲ. ಮುಂದಿನ ತನ್ನ ಅಧಿಕಾರದ ಆಸೆ, ಹಣಗಳಿಕೆ, ಐಶಾರಾಮಿ ಜೀವನ ಅನುಭವಿಸುವುದು ಅವನ ಕನಸಾಗಿರುತ್ತದೆ. ಜನಸೇವೆಯಲ್ಲಿ ಅವನ ಜೀವನಕ್ಕೊಂದು ಸಾರ್ಥಕತೆ ಅನುಭವದ ಜರೂರತು ಇರುತ್ತದೆ. ಹಾಗೇ ಸಾಮಾನ್ಯ ಸರ್ಕಾರಿ ನೌಕರ, ಅಧಿಕಾರಿ, ವಕೀಲ, ಉದ್ಯಮಿ, ಕೂಲಿಕಾರ್ಮಿಕರು, ರೈತರು, ಖಾಸಗಿ ವಲಯದ ಯಾವುದೇ ನೌಕರರು ಸಹ ತನ್ನ ಮನೆ, ಮಡದಿ,ಮಕ್ಕಳು, ಸಂಸಾರ ಎಂಬ ಸ್ವಾರ್ಥದಿಂದಲೇ ಬದುಕುತಿರುತ್ತಾರೆ. ಸ್ವಾರ್ಥವಿಲ್ಲದವನು ಏನನ್ನು ಸಾಧಿಸಲಾರ.

ಸ್ವಾರ್ಥವಿಲ್ಲದೇ ಯಾರ ಬದುಕು ಜೀವಂತವಾಗಿ ಉಳಿಯುವುದಿಲ್ಲ. ಸ್ವಾರ್ಥಪರತೆ ಇರದೇ ಹೋಗಿದ್ದಿದ್ದರೆ ಈ ಸಮಾಜದಲ್ಲಿ ಕಾಮ, ಕ್ರೋಧ, ಮೋಹ, ಮದ, ಮತ್ಸರಗಳೆಲ್ಲ ಎಂದೋ ಅಳಿಸಿ ಹೋಗುತ್ತಿದ್ದವು. ಸ್ವಾರ್ಥ ಎಲ್ಲರೊಳಗೂ ಇರುವುದರಿಂದಲೇ ಅವು ಇಂದಿಗೂ ಜೀವಂತ. ಅವು ಎಂದೆಂದಿಗೂ ಅಳಿಸಿ ಹೋಗಲಾಗದಂತೆ ಮನುಷ್ಯನಿಗೆ ಜನ್ಮತಃ ಅಂಟಿಕೊಂಡಿವೆ.

ಆದರೆ ಈ ಮೇಲ್ಕಂಡವರ ಹೊರತು ಪಡಿಸಿ ಅದೇ ಸಮಾಜದಲ್ಲಿರುವ ಒಬ್ಬ ಬರಹಗಾರ, ಸಾಹಿತಿ, ಕವಿ, ಪತ್ರಕರ್ತನಾದವನು ಸ್ವಾಭಿಮಾನದಿಂದ ಬದುಕಬೇಕು, ಯಾರಿಂದಲೂ ಏನನ್ನು ನಿರೀಕ್ಷಿಸಬಾರದು ಎಂಬುದು ಯಾವ ನ್ಯಾಯ…? ಅವರಿಗೆ ಯಾವ ಮೂಲದಿಂದ ಆದಾಯ ಬರುತ್ತದೆ..? ಖಾಯಂ ಕೆಲಸವಿಲ್ಲದೇ ಬರೆಯುವ ಹುಚ್ಚಿನಿಂದ, ಪ್ರಚಾರದ ಸಮಾಜದಲ್ಲಿ ಆತನಿಗೆ ಸಿಗುವ ಗೌರವ, ಸ್ಥಾನಮಾನದ ಗುಂಗಲ್ಲೇ ತೇಲಾಡುತಿರುತ್ತಾನೆ. ಆರ್ಥಿಕ ಭದ್ರತೆಯ ದಾರಿಗಳು ಸಿಗದೇ ಪರದಾಡುತಿರುತ್ತಾನೆ. ಹೇಳಿ. ಬಹುತೇಕರಿಗೆ ಅದು ಗೊತ್ತಿಲ್ಲ. ರಾಜಕೀಯ ಜನರಂತೂ ಸಾಹಿತಿ, ಕವಿ, ಬರಹಗಾರರಿಗಾಗಿ ಒಂದು ಉದ್ಯೋಗ ಸೃಷ್ಟಿಸಬೇಕು ಎಂಬುದು ಯಾವ ಘನ ಸರ್ಕಾರವೂ ಪ್ರಶ್ನೆ ಎತ್ತುವುದಿಲ್ಲ.

ಯಾವುದೇ ಜಿಲ್ಲೆ, ತಾಲೂಕಿನ ಪತ್ರಕರ್ತರ, ಸಾಹಿತಿಗಳ ಸಮಸ್ಯೆ ಕುರಿತು ಶಾಸಕರು, ಸಚಿವರುಗಳು, ರಾಜಕೀಯ ಮುಖಂಡರಾರು ಅಸೆಂಬ್ಲಿಯಲ್ಲಿ ಚರ್ಚೆ ಮಾಡುವುದಿಲ್ಲ. ಇವರುಗಳ ಬಗ್ಗೆ, ಇವರ ದೈನಂದಿನ ಜೀವನದ ಬಗ್ಗೆ ಚಕಾರ ಎತ್ತುವುದಿಲ್ಲ. ಅಂದರೆ ನಿರುದ್ಯೋಗಿಯಂತೆ ಜೀವನ ಹೇಗೋ ಸಾಗಿಸುತ್ತಿರುವ ಇವರಿಗೆ ಹುಟ್ಟಿ ಬಂದ ಬಳಿಕ, ಬದುಕುವ ಹಕ್ಕಿಲ್ಲವೆ…? ಸಮಾಜಕ್ಕಾಗಿ ಕೊಡುಗೆ ಕೊಡುವ, ಜೀವನಪರ್ಯಂತ ಒಬ್ಬ ಶ್ರಮಜೀವಿ ರೈತನಂತೆ ಸಾಮಾಜಿಕ ಚಿಂತನೆಯನ್ನು ಮಾಡುತ್ತಾ ಬರೆಯುವನಿಗೆ ಸರ್ಕಾರದಿಂದ ಹೇಳಿಕೊಳ್ಳುವಂತ ಜೀವನಾಧಾರಕ್ಕೆ ಏನಿದೆ..? ಬರಹಗಾರರಿಗೆ ಯಾವ ಕನಸು, ಆಸೆ, ಸಾಧನೆ, ಗುರಿ ಎಂಬುದು ಇರೋದಿಲ್ವ…? ಈ ವಿಷಯ ರಾಜಕೀಯವಾಗಿ, ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಲಿ.

ಬರಹಗಾರ, ಸಾಹಿತಿ, ಪತ್ರಕರ್ತ ಯಾರ ಬಗ್ಗೆಯಾದರೂ ಏನಾದರೂ ಬರೆದು ಪ್ರಕಟಿಸಿದರೆ ಯಾರಿಂದಲೂ ಏನನ್ನು ನಿರೀಕ್ಷಿಸಬಾರದು. ಒಂದು ವೇಳೆ ಬರೆದರೂ ಮೊದಲೇ ಕಮಿಟ್ಮಿಂಟ್ ಮಾಡಿಕೊಳ್ಳಿ ಎನ್ನುವರಿದ್ದಾರೆ. ಯಾರದೋ ಅಭಿಮಾನಕ್ಕಾಗಿ ಅನಿರೀಕ್ಷಿತವಾಗಿ ಏನನ್ನಾದರೂ ಬರೆದು ಒಂದು ವೇಳೆ ಪ್ರಕಟಿಸುದರೂ ತಪ್ಪಾಗುತ್ತದೆ. ಪ್ರಕಟಿಸುವುದು ತಪ್ಪಾ.? ಹೌದು ತಪ್ಪು ಅಂತ ನಮ್ಮ ಅನುಭವಕ್ಕೆ ಬಂದಾಗ ಮಾತ್ರ ನಾವು ಎಲ್ಲಿ ಎಡವಿದ್ದೇವೆ ಎಂಬುದು ಗೊತ್ತಾಗುತ್ತದೆ. ಪ್ರಮುಖವಾಗಿ ರಾಜಕೀಯ ಜನಗಳಿಂದ ಏನೋ ಒಂದು ನಿರೀಕ್ಷೆ ಇಟ್ಟುಕೊಂಡು ಇನ್ನೇನೋ ಬರೆಯುವುದಕ್ಕೆ ಹೋಗಬಾರದು. ಯಾಕೆಂದರೆ ಅಧಿಕಾರದ ಗದ್ದುಗೆ ಏರುವತನಕ ಅವರು ಮಾಧ್ಯಮ, ಬರಹಗಾರರನ್ನು ಬಳಸಿಕೊಳ್ಳುತ್ತಾರೆ. ಹಲವರ ಅನುಭವಕ್ಕೆ ಬಂದಿರಬಹುದಾದ ಅಕ್ಷರಶಃ ಸತ್ಯ ಕೂಡ.

ಯಾಕೆಂದರೆ ಯಾವೊಬ್ಬ ನಿಜವಾದ ಬರಹಗಾರ, ಸಾಹಿತಿ, ಪತ್ರಕರ್ತ ಶ್ರೀಮಂತನಾಗಿ ಇರುವುದಿಲ್ಲ. ಸಾಹುಕಾರ, ಸಾಹೇಬನಂತೆ ತಿಗುಗಾಡುವುದಿಲ್ಲ. ತಿರಪೆ ಎತ್ತುವವರ ಜೀವನ ಅವನಿಗಿಂತ ಅದೆಷ್ಟೋ ಮೇಲು. ಯಾವುದೇ ರೀತಿಯಲ್ಲಿ ಆರ್ಥಿಕ ಸ್ಥಿತಿವಂತನಾಗಿ ಇರುವುದಿಲ್ಲ….ಸಮಾಜದ ಜನರೊಂದಿಗೆ ಸ್ಪಂಧಿಸುವ, ಅವರ ನೋವು, ನಲಿವುಗಳಲ್ಲಿ ಒಂದಾಗುವ, ಕಣ್ಮುಚ್ಚಿ ಕುಳಿತ ಸರ್ಕಾರಕ್ಕೆ ಬಡಿದೆಬ್ಬಿಸಿ, ಜನಪ್ರತಿನಿಧಿಗಳ ಕಣ್ತೆರೆಸಿ ಜನರ ಸಮಸ್ಯೆ ಬಗೆ ಹರಿಸುವುದಕ್ಕೆ ಪಣ ತೊಡುವವರು ಸಾಹಿತಿ, ಪತ್ರಕರ್ತರು ಎನ್ನಲಡ್ಡಿಯಿಲ್ಲ.

ಜನರ ಸಮಸ್ಯೆಗೆ ಮೊಟ್ಟ ಮೊದಲು ಧ್ವನಿಯಾಗುವವನು ಪತ್ರಕರ್ತ, ಬರಹಗಾರ ಮಾತ್ರ. ಯಾವ ಶಾಸಕ, ರಾಜಕೀಯ ಮುಖಂಡ ಎಲ್ಲಿ ಏನು ಸಮಸ್ಯೆ ಇದೆ ಅಂತ ಹೋಗಿ ನೋಡುವುದಿಲ್ಲ. ಮಾಧ್ಯಮಗಳಲ್ಲಿ, ಅಂಕಣ ಬರಹಗಳಲ್ಲಿ ಲೇಖನಗಳು ಪ್ರಕಟವಾದಾಗಲೇ ಎಲ್ಲರು ಕಣ್ತೆರೆದು ನೋಡುತ್ತಾರೆ. ಹಾಗಾಗಿ ‌ಯಾವುದೋ ಒಂದು ನಿರೀಕ್ಷೆಯನ್ನಿಟ್ಟುಕೊಂಡು ರಾಜಕೀಯ ವ್ಯಕ್ತಿಗಳ ಬಗ್ಗೆಯಾಗಲಿ, ಸಾಮಾಜಿಕ ಓರೆಕೋರೆ, ಹಲವು ಸಮಸ್ಯೆಗಳ ಬಗ್ಗೆ ಅವರು ಬರೆಯುವುದೂ ತಪ್ಪಾ…? ಒಂದು ನಿಟ್ಟಿನಲ್ಲಿ ಬರೆಯುವುದು ತಪ್ಪು ಅಂತ ಅನ್ನಿಸ್ತಿದೆ. ಪತ್ರಕರ್ತರು ಸಾಹಿತಿಗಳು ಹುಟ್ಟಿಕೊಳ್ಳುತಿರಲಿಲ್ಲ ಅಂದ್ರೆ “ಊರಿನ ಊಸಾಬರಿ” ನಮಗ್ಯಾಕೆ ಅಂತ ಕುಳಿತರುತಿದ್ದರೆ, ದೇಶದ ಗತಿ ಏನಾಗುತಿತ್ತು.? ಯೋಚನೆ ಮಾಡಿ ನೋಡಿ. ಹಾಗೊಂದು ವೇಳೆ ಆದರೆ ಒಂದೇ ಒಂದು ದಿನದಲ್ಲಿ ಇಡೀ ದೇಶ ಲೂಟಿಯಾಗುತಿತ್ತು. ಇದರಿಂದ ಯಾವ ವರ್ಗವೂ ಸಮಾಜದಲ್ಲಿ ಯಾರೂ ನೆಮ್ಮದಿಯಿಂದ ಬದುಕುತಿರಲಿಲ್ಲ. ನಾವು ಅನ್ಕೊಂಡ ಹಾಗೆ ರಾಜಕೀಯ ವ್ಯಕ್ತಿಗಳು ಮೂರು ಮುಖದ ಹಾವುಗಳಂತೆ. ಯಾವಾಗ ಯಾವ ರೂಪದಲ್ಲಿ ಬದಲಾಗ್ತಾರೋ ಗೊತ್ತಿಲ್ಲ. ಯಾವ ಹುತ್ತದಲ್ಲಿ ಯಾವ ಹಾವಿದೆ ಯಾರಿಗೆ ಗೊತ್ತು…?

ತನ್ನಲ್ಲಿರುವ ಬರವಣಿಗೆಯ ಕಲೆಯನ್ನು ಸಾಮಾಜಿಕವಾಗಿ ಗುರುತಿಸಿಕೊಳ್ಳುವ ಒಂದೇ ಒಂದು ಹುಚ್ಚಿನಿಂದ ಸಾಹಿತಿ ತಾನು ಸತ್ತರೂ ಮತ್ತೊಬ್ಬರನ್ನು ಬರವಣಿಗೆ ಮೂಲಕ ವ್ಯಕ್ತಿಗತ ಲೇಖನಗಳು ಬರೆದು ಬದುಕಿಸಿರುತ್ತಾನೆ. ಸಮಾಜವನ್ನು ಸುಸ್ಥಿತಿಯ ಹಾದಿಯಲ್ಲಿ ತಂದಿರುತ್ತಾನೆ. ಅದರಿಂದ ಹಲವರು ಸಾಕಷ್ಟು ಪ್ರಯೋಜನವೂ ಪಡೆದಿರುತ್ತಾರೆ. ಆದರೆ ಬರಹಗಾರ, ಪತ್ರಕರ್ತ, ಸಾಹಿತಿ, ಅನಿವಾರ್ಯಕ್ಕೆ ಯಾವುದೋ ಒಂದು ತೊಂದರೆಯಲ್ಲಿದ್ದಾಗ ರಾಜಕೀಯ ಜನಗಳ ಹತ್ತಿರ ಸಮಸ್ಯೆ ಹೇಳಿ ಪರಿಹಾರ ಕೇಳಿದರೆ ನಾನೇನು ಕಮಿಟ್ಮಿಂಟ್ ಮಾಡಿದ್ದೀನೇನ್ರಿ… ನೀವು ನನ್ ಬಗ್ಗೆ ಬರೆದರೆ ಇಂತಿಷ್ಟು ಕೊಡ್ತಿನಂತ…? ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಈ ಮಾಧ್ಯಮ, ಸಾಹಿತ್ಯ ವರ್ಗದವರೂ ಹುಷಾರಾಗಿ ಎಚ್ಚರದಿಂದ ಬರೆಯಬೇಕು ಅನ್ನಸ್ತಿದೆ…. ಅವರಿಗೆ ಎಲ್ಲರಂತೆ ಬದುಕುವ ಹಕ್ಕು ಸರ್ಕಾರ ಕಲ್ಪಿಸಿ ಕೊಡಬೇಕು.

ನಿಗದಿತ ಮಾಸಿಕ ವೇತನ ನೀಡಬೇಕು. ಆದರೆ ಯಾವ ಪತ್ರಿಕೆಯವರೂ ಕೂಡ ಒಬ್ಬ ತಾಲೂಕಾ ಪತ್ರಕರ್ತನಿಗೆ ಕನಿಷ್ಠ ವೇತನ ನೀಡುವುದಿಲ್ಲ. ದಿನದ 12 ಗಂಟೆಗಿಂತ ಹೆಚ್ಚು ಸಮಾಜದಲ್ಲಿ ನಡೆಯುವ ಆಗು ಹೋಗುಗಳಿಗೆ ಧ್ವನಿಯಾಗುತ್ತಾರೆ. ಇವರ ಮಧ್ಯೆ ಬದುಕುತ್ತಿರುವ ಬಹುತೇಕ ಬರಹಗಾರರು ಕೂಡ ಪತ್ರಕರ್ತರಾಗಿದ್ದಾರೆ. ಆದರೆ ಕೇವಲ ಬರಹಗಾರರಾಗಿ ಬದುಕುತ್ತಿರುವವರ ಬವಣೆ ಆ ದೇವರೇ ಬಲ್ಲ.

ಇಲ್ಲಿನ ರಾಜ್ಯ, ರಾಜಕಾರಣಕ್ಕೆ ನಾಚಿಕೆಯಾಗಬೇಕು… ದೇಶ ಅಭಿವೃದ್ಧಿ ಮಂತ್ರ ಪಠುಸುವವರು ಮಾಧ್ಯಮ ಮತ್ತು ಸಾಹಿತ್ಯ ಕ್ಷೇತ್ರದ ಸಮಸ್ಯೆಗಳೇನು ಅಂತ ಚರ್ಚಿಸುವುದಿಲ್ಲ. ಬರಹವನ್ನೇ ನೆಚ್ಚಿಕೊಂಡು ಹೀನಾಯವಾದ ಜೀವನ ನಡೆಸುತ್ತಿರುವ ಅದೇಷ್ಟೋ ದೇಶದೆಲ್ಲೆಡೆಯ ಲಕ್ಷಾಂತರ ಬರಹಗಾರರನ್ನೇ ಬದಿಗಿಟ್ಟು ರಾಜ್ಯ, ದೇಶದಲ್ಲಿ ರಾಜಕೀಯ ನಡೆಸುತ್ತ, ಆಡಳಿತ ಮಾಡುತ್ತಿರುವ ಸರ್ಕಾರಕ್ಕೆ ಮತ್ತು ಆ ಎಲ್ಲಾ ರಾಜಕೀಯ ಶಾಸಕರಿಗೆ, ಸಚಿವರುಗಳಿಗೆ…. ರಾಜಕೀಯ ಮುಖಂಡರುಗಳಿಗೆ ಕೇಳಿಕೊಳ್ಳುವುದಿಷ್ಟೇ. ಈ ಒಂದು ಲೇಖನದಲ್ಲಿರುವ ಕಳಕಳಿಯ ಮನವಿಯನ್ನು ಗಂಭೀರವಾಗಿ ತುರ್ತಾಗಿ ಪರಿಗಣಿಸಬೇಕಾಗಿದೆ.

ಎಲ್ಲಾ ಕ್ಷೇತ್ರದಲ್ಲಿರುವರಿಗೆ ಸರ್ಕಾರದ ಸೌಲಭ್ಯ ಇರುವಂತೆ, ಜೀವನಾಧಾರಕ್ಕೆ ಏನೆಲ್ಲ ವೇತನ, ಸಾಲ ಸೌಲಭ್ಯ ಹೇಗೆ ಕಲ್ಪಿಸಿ ಕೊಟ್ಟಿದ್ದಿರೋ ಅದೇ ನಿಟ್ಟಿನಲ್ಲಿ ಮಾಧ್ಯಮ ಮತ್ತು ಸಾಹಿತ್ಯ ಕ್ಷೇತ್ರದವರಿಗೆ ಎಲ್ಲಾ ತರಹದ ಸೌಲಭ್ಯಗಳು ದೊರೆಯಬೇಕಿದೆ. ಇದಕ್ಕಾಗಿ ರಾಜ್ಯ, ದೇಶದ ಎಲ್ಲಾ ಬರಹಗಾರರು, ಸಾಹಿತಿಗಳು, ಕವಿಗಳು, ಪತ್ರಕರ್ತರು ಗಟ್ಟಿಯಾದ ಧ್ವನಿಯೆತ್ತಬೇಕಿದೆ. ಸಮಾಜದ ಒಂದು ಅಂಗವಾಗಿರುವ ಮಾಧ್ಯಮ, ಸಾಹಿತ್ಯ ಕ್ಷೇತ್ರಕ್ಕೆ ಕನಿಷ್ಠ ಮಾಸಿಕ ವೇತನ ಸೇರಿದಂತೆ ಎಲ್ಲಾ ರೀತಿಯ ಸರ್ಕಾರಿ ಸೌಲಭ್ಯಗಳು ದೊರೆಯುವಂತೆ ಆದೇಶ ಜಾರಿ ಮಾಡಲಿ….

ವೀರಣ್ಣ ಮಂಠಾಳಕರ್, ಬಸವಕಲ್ಯಾಣ