ಬರ್ಬರಿಕ ( ನಾಟಕ ರಂಗ ವಿಮರ್ಶೆ)
– ವಿಮಲ ಆದರ್ಶ.ಹೆಬ್ರಿ.ಉಡುಪಿ ಜಿಲ್ಲೆ.
ಸರ್ಕಾರಿ ನೌಕರರಿಗೆ ಆಯೋಜಿಸಲ್ಪಡುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಒಂದಾದ ಕಿರುನಾಟಕ ಸ್ಪರ್ಧೆಯಲ್ಲಿ ಭಾಗವಹಿಸಲು ಸಜ್ಜಾಗಿದೆ ಉಡುಪಿ ಜಿಲ್ಲೆಯ ಶಿಕ್ಷಕ ಮಿತ್ರರ ಬಳಗ. ತಾಲ್ಲೂಕುಗಳ ಎಲ್ಲೆಯನ್ನು ಮೀರಿ ರಾಮ್ ಶೆಟ್ಟಿಯವರ ದಕ್ಷ ನಿರ್ದೇಶನದಲ್ಲಿ ಮೂಡಿ ಬರುವ ‘ಬರ್ಬರಿಕ’ ನಾಟಕ ಮಹಾಭಾರತ ಕತೆಯಲ್ಲಿ ಬರುವ ಒಬ್ಬ ವೀರ ಕಾಡಿನ ಬಾಲಕನ ಕತೆ. ಶಿಕ್ಷಕರೆ ವಿವಿಧ ಪಾತ್ರಗಳಿಗೆ ಜೀವ ಕೊಟ್ಟು ಅಭಿನಯಿಸುವ ಪರಿ ಎಂತವರಿಗಾದರೂ ನಾಟಕದ ಕುರಿತು ಆಸಕ್ತಿಯನ್ನು ಕೆರಳಿಸಬಲ್ಲ, ನವರಸಗಳನ್ನು ಹದವಾಗಿ ಬೆರೆಸಿದ ಒಂದು ಪಾಕದಂತೆ ಭಾಸವಾಗುತ್ತದೆ. ಈ ನಾಟಕ ರಾಷ್ಟ್ರ ಮಟ್ಟದ ಚಿನ್ನದ ಪದಕ ಪಡೆಯುವಂತಾಗಲೆಂಬುದು ಪತ್ರಿಕೆಯ ಆಶಯವಾಗಿದೆ – ಸಂ.
ವನವಾಸದ ಸಮಯದಲ್ಲಿ ಹಿಡಿಂಬೆಯನ್ನು ವರಿಸಿದ ಭೀಮಸೇನನಿಗೆ ಜನಿಸಿದ ಘಟೋತ್ಕಚ ಮತ್ತು ಮೌರ್ವಿಯ ಮಗ ‘ಬರ್ಬರಿಕ’ ಈ ಕತೆಯ ನಾಯಕ. ವನದಲ್ಲಿ ಸಣ್ಣ ತಂಡದ ಒಡೆಯನಾಗಿದ್ದ ಅಪ್ಪ ಮತ್ತು ಅಮ್ಮನ ಮಡಿಲಿನಲಿ ಅಜ್ಜಿಯ ಕೈಯ ಆಸರೆಯಲ್ಲಿ ಜತನದಲಿ ಬೆಳೆಯುವ ಬಾಲ ವೀರನಾಗಿ ಅನೇಕ ಶೌರ್ಯ ಕೆಲಸಗಳನ್ನು ಮಾಡುತ್ತಾ ಬೆಳೆಯುತ್ತಾ ಸಾಗುತ್ತಿರುತ್ತಾನೆ. ಕಾಡಿನಲ್ಲಿರುವ ಋಷಿ ಮುನಿಗಳ ಯಜ್ಞ ಯಾಗಾದಿಗಳಿಗೆ ತೊಂದರೆ ಉಂಟು ಮಾಡುವ ರಾಕ್ಷಸರ ದಂಡನ್ನು ಹೆಡೆಮುರಿ ಕಟ್ಟುತ್ತಾ ಕಾಡಿನ ರಕ್ಷಕನಾಗುತ್ತಾನೆ.
ಒಮ್ಮೆ ಋಷಿಯೊಬ್ಬರು ಅವನ ಶಕ್ತಿ ಸಾಮರ್ಥ್ಯದ ಪರೀಕ್ಷೆಗೆ ಒಡ್ಡುವ ಪರಿಯೂ ವಿಸ್ಮಯ. ಹೇರಳವಾದ ಎಲೆಗಳಿರುವ ಮರವೊಂದಕ್ಕೆ ಒಂದೇ ಬಾಣವನ್ನು ನೆಟ್ಟು ಅದರ ಎಲ್ಲಾ ಎಲೆಗಳನ್ನು ಸ್ಪರ್ಶಿಸಿ ಧರೆಗುರುಳ ಬೇಕು. ಈ ಪರೀಕ್ಷೆಯನ್ನು ಜಯಿಸಿ ಅವರ ಕೃಪಾಕಟಾಕ್ಷಕ್ಕೆ ಒಳಪಡುವ ವೀರವೇಶದ ಲವಲವಿಕೆಯ ಶೂರ ಬರ್ಬರಿಕನಿಗೆ ಶತ್ರುಗಳ ಮರ್ಮ ಸ್ಥಾನವನ್ನು ಅರಿತು ಯುದ್ದ ಮಾಡುವ ಕಲೆಯು ಸಿದ್ದಿಸುತ್ತದೆ. ಇದರಿಂದ ಅವನು ಬಿಡುವ ಒಂದು ಬಾಣವೂ ನಿರರ್ಥಕ ಆಗದಿರುವಂತೆ. ಮಹಾಭಾರತ ಯುದ್ಧದಲ್ಲಿ ಬರ್ಬರಿಕನ ಪಾತ್ರ. ಈತ ಪಾಂಡವರಿಗೆ ತಿಳಿಸಿದ್ದ ಕೌರವ ಪಕ್ಷದ ವೀರ ಯೋಧರ ಮರಣಕ್ಕೆ ಸಾಕ್ಷಿಯಾಯಿ ತೆನ್ನಬಹುದು.
ಪಾಂಡವ ಮತ್ತು ಕೌರವರಿಗೆ ಮಹಾಭಾರತ ಯುದ್ದವು ನಿಗದಿಯಾದಾಗ ಪಾಂಡವರು ತಮ್ಮ ಕಡೆಯವರನ್ನೆಲ್ಲಾ ಸೇರಿಸುವ ಕ್ರೀಯೆಯಲ್ಲಿ ವೀರ ಘಟೋತ್ಕಜನೂ ಸೇರುತ್ತಾನೆ. ಭೀಮಸೇನರ ಬಾಹುಬಲ ಮತ್ತು ಹಿಡಿಂಬೆಯ ಮಾಯಾಶಕ್ತಿಯ ಬಲವೂ ಮೇಳೈಸಿದ ಘಟೋತ್ಕಜನೂ ನಿಜ ಶೂರನೆ. ಅವನೊಂದಿಗೆ ಚರ್ಚಿಸುವಾಗ ಬರ್ಬರಿಕನ ಬಗ್ಗೆ ತಿಳಿದು ದೂತರಿಂದ ಅವನನ್ನು ಕರೆಸುವ ಕೆಲಸ ಶ್ರೀ ಕೃಷ್ಣನ ನಾಯಕತ್ವದಲ್ಲಿ ನಡೆಯುತ್ತದೆ.
ಬಾಲಕನ ಯುದ್ಧ ಪರಿಣತಿಯ ಬಗ್ಗೆ ತಿಳಿದಿದ್ದ ಕೃಷ್ಣ ತನ್ನ ಚಾರನ ಮೂಲಕ ಬರ್ಬರಿಕನ ಕರೆಸಲು ಕಳುಹುತ್ತಾನೆ. ಅಲ್ಲಿ ಕಾಡಿನ ಬಾಲಕರು ಮತ್ತು ಆ ದೂತನ ನಡುವೆ ನಡೆಯುವ ಸಂಭಾಷಣೆ ಮನಸ್ಸಿಗೆ ಮುದ ನೀಡುತ್ತದೆ. ತಾನು ವಿದ್ಯಾವಂತನೆಂಬ ಹೆಮ್ಮೆ ದೂತನದ್ದು ಆದರೆ ಕಾಡಿನ ಬಾಲಕರ ಕುತೂಹಲ, ಮುಗ್ಧತೆ ಅವರ ನಡುವೆ ನಡೆಯುವ ಸಂಭಾಷಣೆ ರಸದೌತಣ ಉಣ ಬಡಿಸುತ್ತದೆ. ಬರ್ಬರಿಕನನ್ನು ಕಳುಹಿಸಲು ಇಚ್ಛಿಸದ ಅಜ್ಜಿ ಮತ್ತು ತಾಯಿ ಯುದ್ಧ ನಡೆಯುವ ವಿಷಯ ಆತನಿಗೆ ತಿಳಿಯದಂತೆ ಎಚ್ಚರವಹಿಸುತ್ತಾರೆ. ಆದರೂ ತನ್ನ ಓರಗೆಯವರಿಂದ ತಿಳಿದು ಅಜ್ಜಂದಿರ ಬಳಿಗೆ ಓಡೋಡಿ ಬರುತ್ತಾನೆ.
ಧರ್ಮರಾಯನು ತನ್ನ ಪಡೆಯ ಪ್ರತಿಯೊಬ್ಬ ವೀರರ ಶಕ್ತಿ ಸಾಮರ್ಥ್ಯ ತಿಳಿಯಲು ಇಚ್ಛಿಸಿದಾಗ ಬರ್ಬರಿಕ ಬಲು ಹರ್ಷದಿಂದ ತಾನು ಈ ಯುದ್ಧವನ್ನು ಕೇವಲ ಒಂದು ಬಾಣದಲ್ಲಿ ಮುಗಿಸುದಾಗಿ ತಿಳಿಸುತ್ತಾನೆ. ತನ್ನ ಬಾಣದ ತುದಿಗೆ ಯೋಗಿಯೊಬ್ಬರಿಂದ ಪಡೆದ ಭಸ್ಮವನ್ನು ಪೂಷಿಸಿ ಬಿಡುತ್ತಾನೆ. ಕರ್ಣ, ದುರ್ಯೋಧನ, ಭೀಷ್ಮ ಹೀಗೆ ಪ್ರತಿಯೊಬ್ಬರ ಮರ್ಮ ಸ್ಥಾನವನ್ನು ತಿಳಿಸಿ ಮುಂದೆ ನಡೆಯಲಿರುವ ಯುದ್ಧದಲ್ಲಿ ಪಾಂಡವರಿಗೆ ಒಳಿತಾಗುವಂತೆ ಮಾಡುತ್ತಾನೆ.
ಹೀಗೆ ಬಿಟ್ಟ ಬಾಣವು ಕೊನೆಯಲ್ಲಿ ಶ್ರೀ ಕೃಷ್ಣನ ಪಾದಕ್ಕೆ ರಗುತ್ತದೆ. ಕ್ಷಣಾರ್ಧದಲ್ಲಿ ಶ್ರೀ ಕೃಷ್ಣನ ಸುದರ್ಶನವು ಅವರ ಕತ್ತನ್ನು ಅರಿಯುತ್ತದೆ. ಪಾಂಡವರೆಲ್ಲರೂ ಮೂಕ ವಿಸ್ಮಿತ ರಾಗುತ್ತಾರೆ. ತನ್ನ ಮೊಮ್ಮಗನ ಸಾವನ್ನು ಅರಗಿಸಿಕೊಳ್ಳದ ಭೀಮ ಸೇನ ಮತ್ತು ಧರ್ಮಾತ್ಮನಾದ ಧರ್ಮರಾಯ ಈ ಸಾವು ನ್ಯಾಯವೇ ಎಂದು ಪ್ರಶ್ನಿಸುತ್ತಾರೆ. ಘಟೋತ್ಕಚನು ತನ್ನ ಪ್ರೀತಿಯ ಪುತ್ರನ ಕಳೇಬರವನ್ನು ನೋಡಿ ಭಾವಪರವ ಶನಾಗುತ್ತಾನೆ.
ಶ್ರೀಕೃಷ್ಣನ ಪ್ರಾಣವು ಆತನ ಪಾದದುಂಗುಷ್ಟದಲ್ಲಿ ಇರುವುದರಿಂದ ಬರ್ಬರಿಕನ ಬಾಣವು ಶ್ರೀ ಕೃಷ್ಣನ ಪಾದತಲದಲ್ಲಿ ಬಿದ್ದಾಗ ಗೊಂದಲಕ್ಕೆ ಒಳಗಾಗುವ ಕೃಷ್ಣ ದೇವನಾಗಿದ್ದರೂ ಮಾನವನಂತೆ ಕೋಪದ ಕೈಯಲ್ಲಿ ಬುದ್ದಿ ಕೊಡುವುದನ್ನು ನೋಡಿ ದಂಗಾಗಲೇ ಬೇಕು. ಆದರೆ ಕೃಷ್ಣ ಈ ಕತೆಯಲ್ಲಿ ದ್ವಂದಾರ್ಥದಲ್ಲಿ ಮಾತನಾಡುವ ಪರಿ, ಅವನ ನಟನೆಯನ್ನು ನೋಡಿ ಕೃಷ್ಣನನ್ನೂ ದ್ವೇಷದ ಭಾವ ಬಿಡದನ್ನು ನೋಡಿ ಮಾನವರಾದ ನಮಗೆ ಈ ಕೋಪ ತಾಪದ ದ್ವೇಷ ಭಾವವನ್ನು ಮೀರಿ ಬೆಳೆಯುವ ಪರಿಯೆಂತು ತಿಳಿಯದು.ಶ್ರೀಕೃಷ್ಣನ ಪಾತ್ರಕ್ಕೆ ಜೀವತುಂಬುವಲ್ಲಿ ನಮ್ಮ ಸತೀಶ ಮಾಸ್ಟ್ರು ಸೈ ಎನ್ನಿಸಿಕೊಳ್ಳುತ್ತಾರೆ.
ಶ್ರೀಕೃಷ್ಣ ನ ಮುಖದಲ್ಲಿನ ಮಾಸದ ನಗು, ಕಣ್ಣಿನ ಹೊಳಪು ಪರಮಾತ್ಮನನ್ನೆ ನೆನಪಿಸುತ್ತದೆ. ಹಿಂದಿನ ಬಾರಿ ನಮ್ಮ ಈ ಮಾಸ್ಟ್ರು ರಾಷ್ಟಮಟ್ಟದಲ್ಲಿ ನಟನೆಗಾಗಿ ಬೆಳ್ಳಿಯ ಪದಕವನ್ನು ಪಡೆದಿದ್ದರು. ಶ್ರೀಕೃಷ್ಣನು ಮೌರ್ವಿಯ ತಂದೆಯಾದ ಮುರನನ್ನು ಕೊಂದ ದ್ವೇಷದಿಂದ ಕುದಿಯುತ್ತಿದ್ದ
ಮೌರ್ವಿಯ ಉದರದಲ್ಲಿ ಜನಿಸಿದ್ದ ಬರ್ಬರಿಕನೂ ತನ್ನ ದ್ವೇಷಿಯೆಂದು ಸಾಬೀತು ಪಡಿಸಲೆಂದು ಬರ್ಬರಿಕನ ಬಳಿ ಕೇಳುವಂತೆ ಪಾಂಡವರಿಗೆ ಆದೇಶಿಸುತ್ತಾನೆ. ಆದರೆ ಬರ್ಬರಿಕ ಸಾವಿನ ಯಾತನೆಯಲ್ಲೂ ನೀಡುವ ಉತ್ತರ ಪ್ರೇಕ್ಷಕರ ಕಣ್ಣಂಚು ಒದ್ದೆಯಾಗಿಸುತ್ತದೆ. ಈಗಷ್ಟೆ ಬಿರಿದು ಕಂಪನ್ನು ಸೂಸುತ್ತಿರುವ ಸುಂದರವಾದ ಸುಮವೊಂದು ಬಿರುಸಾಗಿ ಸುರಿಯುವ ಮಳೆಗೆ ಮೈಯೊಡ್ಡಿ ಹರಿದು ಸಾವಿರ ಚೂರಾಗಿ ಧರೆಗುದುರುವಂತೆ ಬರ್ಬರಿಕನ ದೇಹವು ಧರೆಗುದುರುತ್ತದೆ. ಶ್ರೀ ಕೃಷ್ಣನ ಪ್ರಶ್ನೆಗೆ ನೀಡುವ ಉತ್ತರವೂ ಬರ್ಬರಿಕನ ಸದ್ದುದ್ದೇಶವನ್ನು ಬಣ್ಣಿಸುತ್ತದೆ.
ಮಾನವ ರೂಪಿನಲ್ಲಿರುವ ಕೃಷ್ಣನ ಪಾದದ ಬುಡದಲ್ಲಿ ಬೀಳುವ ಬಾಣವು ಪರಮಾತ್ಮನ ಪಾದತಲಕ್ಕೆ ಸುಮದಂತೆ ಸಮರ್ಪಣೆ ಎಂದು ನಿಟ್ಟಿಸುರು ಬಿಡುತ್ತಾ ಕೊನೆಯು ಸಿರೆಳೆಯುತ್ತಾನೆ. ಬರ್ಬರಿಕನ ಪಾತ್ರಕ್ಕೆ ಜೀವ ತುಂಬುವ ರವಿ ಪೂಜಾರಿ ಸರ್ (ಶಿಕ್ಷಕರು ಆಲಡ್ಕ ನೂಜಿ) ಮೆಲು ಮಾತಿನ ಮೃದು ಮನಸ್ಸಿನ ಧೀರನಂತೆ ಮನಸ್ಸಿನ ಮೂಲೆಯಲ್ಲಿ ಅಚ್ಚೊತ್ತಿ ನೆಲೆಯಾಗುತ್ತಾರೆ.
ಕರುವನ್ನು ಅರಸಿ ಬರುವ ಆಕಳ ತೆರದಿ ಓಡೋಡಿ ಬರುವ ಹಿಡಿಂಬೆ ಮತ್ತು ಮೌರ್ವಿ ತನ್ನ ಪುಟ್ಟ ಕಂದಮ್ಮನ ಕಳೇಬರವನ್ನು ಹಿಡಿದು ರೋಧಿಸುವ ಹಿಡಿಂಬೆ ಮತ್ತು ಮೌರ್ವಿಯ ರೋಧನವು ನಮ್ಮ ತಾಯಿ ಮನಸ್ಸನ್ನು ಮುಟ್ಟುತ್ತದೆ. ಹೆತ್ತ ಕಂದಮ್ಮನ ಸಾವು ಯಾವ ತಾಯಿಗೂ ಸಹಿಸಲು ಅಸಾಧ್ಯ. ಮುದ್ದು ಕಂದನ ವೀರತನದ ಭವ್ಯ ಭವಿಷ್ಯದ ಸುಂದರ ಕನಸು ಹಣೆದಿದ್ದ ಹಿಡಂಬೆಯ ಪಾತ್ರವು ಈ ನಾಟಕಕ್ಕೆ ಒಂದು ಪ್ರಮುಖ ಆಯಾಮವನ್ನು ತಂದು ಕೊಡುತ್ತದೆ.ಮೌರ್ವಿಯ ಪಾತ್ರವೂ ಸುಂದರವಾಗಿ ಚಿತ್ರಿಸಲ್ಪಟ್ಟಿದೆ. ನಾಗರತ್ನ ಟೀಚರ್ ಮತ್ತು ವನಿತಾ ಟೀಚರ್ ಮನೋಜ್ಞ ಅಭಿನಯ ಯಾವ ರಂಗಭೂಮಿ ಕಲಾವಿದರಿಗೂ ಕಮ್ಮಿ ಏನಲ್ಲ.
ಶ್ರೀ ಕೃಷ್ಣನ ಅಂತ್ಯವೂ ಕಾಡಿನ ಬೇಟೆಗಾರನಿಂದ ಆಗಬೇಕು ಮತ್ತು ತನ್ನ ಮಗುವನ್ನು ಯದ್ದಕ್ಕೆಂದು ಕರೆಯಿಸಿ ಅವನನ್ನು ವಧಿಸಿದ ಪಾಂಡವರಿಗೆ ಪುತ್ರ ಶೋಕವು ಶಾಪವಾಗಿ ದೊರೆಯುತ್ತದೆ.
ಭೀಮನಾಗಿ ಮಿಂಚುವ ಹರೀಶ ಮಾಸ್ಟ್ರು, ಘಟೋತ್ಕಚನಾಗಿ ಅಭಿನಯಿಸುವ ಸದಾಶಿವ ಮಾಸ್ಟ್ರು, ಬರ್ಬರಿಕನ ಒಡನಾಡಿಯಾಗಿ ನಾಟಕದಲ್ಲಿ ಕಾಡಿನ ಮುದ್ದು ಮನುಷ್ಯರ ಮುಗ್ಧ ಮನಸ್ಸನ್ನು ಬಿಚ್ಚಿಡುವ ಸುರೇಂದ್ರ ಮಾಸ್ಟ್ರು ಮನನಸ್ಸಿನ ಕದ ಬಡಿದು ಶಾಶ್ವತವಾಗಿ ನೆಲೆಸುತ್ತಾರೆ. ವಿಜಯ ಮಾಸ್ಟ್ರ ಸಾಹಿತ್ಯ, ಗುರು ಪ್ರಸಾದ್ ಮಾಸ್ಟ್ರ ಸಂಗೀತ ಅಭಿನಯದ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಈ ಗುರುಗಳಿಗೆ ಜೊತೆಯಾಗಿ ಕಾರ್ಕಳ ತಾಲ್ಲೂಕಿನ ದಿನೇಶ್‌ಸರ್ ಮತ್ತು ಲಕ್ಷ್ಮಿ ನಾರಾಯಣ ಪೈ ಸರ್ ರವರು ಅಭಿನಯಿಸಿದ್ದಾರೆ. ಭೂಮಿಕಾ ಹಾರಾಡಿ ತಂಡದೊಂದಿಗೆ ವಿವಿಧ ಕಡೆಗಳಲ್ಲಿ ಪ್ರದರ್ಶನ ನೀಡುತ್ತಾ ಕಲಾವಿದರು ಗಟ್ಟಿಯಾಗಿ ರೂಪುಗೊಳ್ಳುತ್ತಾ ಭಾರತಾಂಬೆಯ ಮಡಿಲಲಿ ವೀರ ಮಗುವಾಗಿ ನಮ್ಮ ಬರ್ಬರಿಕ ಕಂಗೊಳಿಸಲಿ. ಇನ್ನಷ್ಟು ಮಗದಷ್ಟು ಅವಕಾಶಗಳು ಈ ಪ್ರತಿಭಾವಂತ ಗುರು ಸಮುದಾಯಕ್ಕೆ ಒದಗಿ ಬರಲಿ. ಮಹಾಭಾರತ ಕಥೆಯಲ್ಲಿ ವ್ಯಥೆಯಾಗಿ ಉಳಿಯುವ ಬರ್ಬರಿಕನ ಧೀರತನ ನಮ್ಮೆಲ್ಲರಿಗೆ ಆದರ್ಶವಾಗಲಿ.ಈ ನಾಟಕ ರಾಷ್ಟ್ರಮಟ್ಟದ ಚಿನ್ನದ ಪದಕಕ್ಕೆ ಆಯ್ಕೆಯಾಗಲು ಎಲ್ಲ ಅರ್ಹತೆಯನ್ನು ಪಡೆದಿದೆ ಇದು ಆ ನಿಟ್ಟಿನಲ್ಲಿ ಆಯ್ಕೆಯಾಗಲೆಂದು ಬಯಸೋಣ.
– ವಿಮಲ ಆದರ್ಶ.ಹೆಬ್ರಿ.ಉಡುಪಿ ಜಿಲ್ಲೆ.
ನಾಟಕವನ್ನು ರಂಗಭೂಮಿ ಉಡುಪಿಯ ಸ್ಪರ್ಧೆಯಲ್ಲಿ ನೋಡಿದ್ದ ನೀವು ಅಲ್ಲಿ ಅಭಿನಯಿಸಿದವರ ಪಾತ್ರ ಪರಿಚಯ ನೀಡಿದರೆ ಒಳ್ಳೆಯದಿತ್ತು. ಆ ದಿನ ನಾಟಕದಲ್ಲಿ ಭಾಗವಹಿಸದೇ ಇದ್ದವರನ್ನೂ ಸೇರಿಸಿ ಬರೆದಿದ್ದು ಹಾಸ್ಯಾಸ್ಪದ. ಆದರೂ ನಾಟಕದ ಒಟ್ಟು ಭಾವನೆಯನ್ನು ಚೆನ್ನಾಗಿ ಬರೆದಿದ್ದೀರಿ.