Oplus_131072

ಬರಿಗೈಲಿ ಬಂದಿಲ್ಲ ನಾವೀ ಭೂಮಿಗೆ (ಚಿಂತನೆ)

ಹುಟ್ಟುವಾಗ ಬೆತ್ತಲೆ ಸತ್ತಾಗ ಬೆತ್ತಲೆ, ಮೂರು ದಿನದ ಬಾಳು, ಬರುವಾಗ ಏನನ್ನು ತಂದಿಲ್ಲ ಹೋಗುವಾಗ ಏನನ್ನು ಒಯ್ಯುವುದಿಲ್ಲ ಎಂಬ ಮಾತು ಅಲ್ಲಲ್ಲಿ ಕೇಳಿ ಬರುತ್ತವೆ. ನಾವು ಕೂಡ 100% ಇದನ್ನು ನಿಜವೆಂದು ನಂಬುತ್ತೇವೆ. ಆದರೆ ನಮಗೆ ಗೊತ್ತಿಲ್ಲ ನಾವು ಬರುವಾಗ ನಮ್ಮ ಜೊತೆಗೆ ಈ ಐದು ವಿಷಯಗಳನ್ನು ಹೊತ್ತು ತರುತ್ತೇವೆ

ಪಂಚೈತಾನಪೀ ಶ್ರುಜ್ಯನ್ತೇ
ಗರ್ಭಸ್ತೈವ ದೇಹಿನಃ
ಆಯುಕರ್ಮಾಚ ವಿತ್ತನ್ತೇ
ವಿದ್ಯಾ ನಿಧನ ನೇವಚ ॥

ಎಂದು ಹೇಳಲಾಗಿದೆ. ಮನುಷ್ಯ ಭ್ರೂಣಾವಸ್ಥೆಯಲ್ಲಿರುವಾಗಲೇ ಮೇಲಿನ ಐದು ವಿಷಯಗಳನ್ನು ಹೊತ್ತು ಈ ಭೂಮಿಗೆ ಬರುತ್ತಾನೆ. ಆ ಐದು ವಿಷಯಗಳು ಆಯುಷ್ಯ, ಕರ್ಮ ಅಥವಾ ಉದ್ಯೋಗ, ವಿತ್ತ ಅಂದರೆ ಹಣ, ವಿದ್ಯೆ ಮತ್ತು ಸಾವು.

ಆಯುಷ್ಯ. ….ಮನುಷ್ಯ ಹುಟ್ಟುವಾಗಲೇ ಆತನ ಆಯುಷ್ಯ ನಿರ್ಧಾರ ಎಂದು ನಮ್ಮ ಹಿರಿಯರು ಹೇಳಿದ್ದಾರೆ ಇದು ಅಕ್ಷರಶಃ ನಿಜ. ಹುಟ್ಟುಹಬ್ಬದ ಪ್ರತಿಯೊಬ್ಬರಿಗೂ ನಾವು ಒಂದೊಂದು ನಿಮಿಷವೂ ಸಾವಿಗೆ ಹತ್ತಿರವಾಗುವುದು ಎಂಬುದು ಸಾರ್ವಕಾಲಿಕ ಸತ್ಯ. ನಾವು ಭೂಮಿಯ ಮೇಲೆ ಬದುಕಿರುವುದು ಆ ದೈವದ ನಿಯಾಮಕದಂತೆ.

ಕರ್ಮ… . ಅಂದರೆ ಕಾಯಕ, ಕೆಲಸ ಎಂದರ್ಥ. ನಾವು ಮಾಡುವ ಕೆಲಸ ಪೂರ್ವ ನಿರ್ಧರಿತವಾದದ್ದು. ಯಾವುದೇ ಕೆಲಸ ನನ್ನ ಕೈಗೆ ಹತ್ತುತ್ತಿಲ್ಲ ಎಂದು ಕೆಲವರು ಗೋಳಾಡುವುದನ್ನು ನೋಡುತ್ತೇವೆ. ಇನ್ನೂ ಕೆಲವೆಡೆ ಎಷ್ಟು ಕೆಲಸ ಮಾಡಿದರೂ ತೃಪ್ತಿ ನೀಡುವುದಿಲ್ಲ. ಹಿಂದೆ ವೃತ್ತಿಯಾಧಾರಿತ ಕೆಲಸ ಕಾರ್ಯಗಳು ಇದ್ದವು.
ಪೂರ್ವಜನ್ಮಂ ಕೃತಂ ಕರ್ಮ….. ಅಂದರೆ ನಾವು ಮಾಡುವ ಕರ್ಮಗಳು ನಮ್ಮ ಪೂರ್ವಜನ್ಮದ ಪಾಪ ಪುಣ್ಯಗಳ ಮೇಲೆ ಅವಲಂಬಿಸಿರುತ್ತವೆ ಎಂದು ಹೇಳಲಾಗಿದೆ.

ವಿತ್ತ ಅಥವಾ ಹಣ…

ಎಷ್ಟು ದುಡಿದರು ಅವರ ಬಳಿ ಹಣ ಉಳಿಯುವುದಿಲ್ಲ ಇನ್ನು ಎಷ್ಟೋ ಖರ್ಚು ಮಾಡಿದರೆ ಹಣವನ್ನು ದಂಡಿಯಾಗಿ ಸಂಪಾದಿಸುತ್ತಾರೆ. ಕೆಲವು ಶ್ರೀಮಂತರಾಗಿಯೂ, ಬಡವರಾಗಿಯೂ ಇನ್ನೂ ಕೆಲವರು ನಿರ್ಗತಿಕರಾಗಿಯೂ ಬದುಕುತ್ತಾರೆ. ಇದು ಕೂಡ ನಮ್ಮ ಬದುಕಿನಲ್ಲಿಯೂ ಬಂದ ಪೂರ್ವ ನಿರ್ಧರಿತ ಭಾಗ್ಯ. ಇದಕ್ಕೆ ವ್ಯತಿರಿಕ್ತವಾಗಿ ಕೆಲವೊಮ್ಮೆ ಅನಿರೀಕ್ಷಿತ ಸೌಭಾಗ್ಯ ದೊರೆಯುತ್ತದೆ. ಇದಕ್ಕೇನು ಹೇಳುತ್ತೀರಿ ಎಂದು ಕೇಳಬಹುದು.ಆದರೆ ಅದು ಕೂಡ ಪೂರ್ವ ನಿರ್ಧರಿತವೇ ಎಂದರೆ ನಂಬಲಿಕ್ಕಿಲ್ಲ. ನಮ್ಮ ಸ್ವಪ್ರಯತ್ನಕ್ಕೆ ಸಿಕ್ಕ ಪ್ರತಿಫಲ ಎಂದು ನಾವು ಅಂದುಕೊಂಡರೂ ಆ ಪ್ರಯತ್ನಕ್ಕೆ ಕೂಡ ಒತ್ತಾಸೆಯಾಗುವುದು ಪೂರ್ವ ನಿರ್ಧರಿತ ಕರ್ಮವೇ ಎಂದು ಮೇಲಿನ ಶ್ಲೋಕದಲ್ಲಿ ಹೇಳಲಾಗಿದೆ.

ವಿದ್ಯೆ ……ವಿದ್ಯೆಯನ್ನು ಕೂಡ ನಾವು ನಮ್ಮ ಹುಟ್ಟಿನೊಂದಿಗೆ ಪಡೆದು ಬಂದಿರುತ್ತೇವೆ. ಅತ್ಯಂತ ವಿದ್ಯಾವಂತ ಕುಟುಂಬದಲ್ಲಿ ಬುದ್ಧಿಹೀನ ಮಗು ಮತ್ತು ವಿದ್ಯೆಯ ಗಂಧವೇ ಅರಿಯದ ಮನೆಯಲ್ಲಿ ಚಾಣಾಕ್ಷಮತಿ ಮಕ್ಕಳು ಹುಟ್ಟುವುದು ಕೂಡ ಪೂರ್ವಜನ್ಮದ ಕರ್ಮಫಲ. ಕೆಲವು ಮಕ್ಕಳು ಏಕ ಪಠ್ಯ ಗ್ರಾಹಿಗಳಿದ್ದರೆ ಇನ್ನೂ ಎಷ್ಟೋ ಹಗಲು ರಾತ್ರಿ ಒಂದು ಬಾರಿ ಓದಿ ಓದಿದ್ದು ನೆನಪಿನಲ್ಲಿ ಉಳಿದಿರುವವರು. ಎಲ್ಲವೂ ಅವರವರಿಗೆ ಬಂದದ್ದು.

….. ನಾವು ಹೇಗೆ,ಯಾವಾಗ, ಏಕೆ ಮತ್ತು ಎಲ್ಲಿ ಸಾಯುತ್ತೇವೆ ಎಂಬುದು ಯಾರಿಗೂ ಗೊತ್ತಿಲ್ಲದ ನಿಗೂಢ ಸತ್ಯ . ಅದಷ್ಟೇ ಹಣವಿದ್ದರೂ ಅದೆಷ್ಟೇ ಆರೋಗ್ಯವಾಗಿದ್ದರೂ ಅದೆಷ್ಟೇ ಅನಾರೋಗ್ಯವಿದ್ದರೂ ಕೂಡ ಕಾಲನ ಕರೆ ಬಂದಾಗ ನಾವೆಲ್ಲರೂ ಹೋಗಲೇಬೇಕು. ಭೂಮಿಯ ಋಣ ಮುಗಿದಿದ್ದರೆ ಮಾತ್ರ ನಮಗೆ ಇಹಲೋಕದಿಂದ ಬಿಡುಗಡೆ.
ಅದಕ್ಕೆ ಒಂದು ಲೋಕಾರೂಢಿಯ ಮಾತು ಪ್ರಚಲಿತದಲ್ಲಿದೆ. ಹಿಂದಿನ ಜನ್ಮದ ಪಾಪ ಮುಂದಿನ ಜನ್ಮಕ್ಕೆ ಬುತ್ತಿಯ ಗಂಟಾಗಿ ಬರುತ್ತದೆ. ಇದನ್ನೇ ಗರುಡ ಪುರಾಣದಲ್ಲಿ
ನ ಭುಕ್ತಾಂ ಶ್ರೀಯತೇ ಕರ್ಮ
ಕಲ್ಪಕೋಟಿ ಶತೈರಪಿ”  ಎಂದು ಹೇಳಿದ್ದಾರೆ. ಸಾವಿರಾರು ಕೋಟಿ ಧನರಾಶಿ ಇದ್ದರೇನು ಕರ್ಮಫಲ ತಪ್ಪದು ಎಂಬುದು ಇದರ ಅರ್ಥ.

೧೨ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು
ಅಪ್ಪದು… ಬಪ್ಪದು ತಪ್ಪದು’
….
ಇನ್ನೇ ಮುಂದೆ ಮಂಕುತಿಮ್ಮನ ಕಗ್ಗದಲ್ಲಿ ಡಿ ವಿ ಗುಂಡಪ್ಪನವರು
“ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ ಅವನೇಳ್ ನಾವಿದ್ದಂತೆ ಪಯಣಿಗರು ಮಸಣಕೊ ಹೋದೆಂದ ಕಡೆ ಹೋಗು ಪದ ಕುಸಿಯೆ ನೆಲವಿಹುದು ಮಂಕುತಿಮ್ಮ”

ವಿಧಾತನ ಆಯತಿಯಂತೆ ನಮ್ಮ ಬದುಕು ನಡೆಯುತ್ತಿದೆ… ವಿಧಿಯು ನಡೆಸುತ್ತಿರುವ ಬದುಕೆಂಬ ಜಟಕಾ ಬಂಡಿ ಏರಿರುವ ನಾವು ಕಷ್ಟ ಸುಖ ನಲಿವುಗಳನ್ನು ಅನುಭವಿಸಿ ಜೀವನದಲ್ಲಿ ಹೇಗೆ ಹೋಗಬೇಕು ಎಂದು ಮದುವೆಗೆ ಹೋಗುತ್ತೇವೆಯೋ ಮಸಣಕ್ಕೆ ಹೋಗುತ್ತೇವೆ ಎಂದು ಸೂಚ್ಯವಾಗಿ ಹೇಳಿದ್ದಾರೆ. ಆದ್ದರಿಂದ ನಮ್ಮ ಮುಂದಿನ ಜೀವನ ಚೆನ್ನಾಗಿ ಇರಬೇಕಾದರೆ ನಾವು ಸ್ವಸ್ಥ ಆರೋಗ್ಯ ಮತ್ತು ಸಾತ್ವಿಕರಾಗಿ ಬದಲಾಗಲೇಬೇಕು. ನಮ್ಮ ಮಕ್ಕಳಿಗೆ ಮಾದರಿಯಾಗಿ ನಡೆದುಕೊಳ್ಳಲೇಬೇಕು…. ಆ ದೆಸೆಯಲ್ಲಿ ಜೊತೆಗೂಡಿ ಹೆಜ್ಜೆ ಹಾಕುವ ಪ್ರಯತ್ನ ಮತ್ತು ಸದಾ ನಮ್ಮದಾಗಿರಲಿ.

ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ,ಗದಗ- 9945789377

ಲೇಖಕಿಯರ ಪರಿಚಯ:

ವೀಣಾ ಹೇಮಂತ್ ಗೌಡ ಪಾಟೀಲ್

ವೀಣಾ ಹೇಮಂತ್ ಗೌಡ ಪಾಟೀಲ್ , ರವರು ಗದಗ ಜಿಲ್ಲೆ ಮುಂಡರಗಿ ನಿವಾಸಿ. ಇವರು ಮನಃಶಾಸ್ತ್ರ ಮತ್ತು ಮಾನವ ಶಾಸ್ತ್ರಗಳ ಪದವಿಧರರು. ‘ಚೈತನ್ಯ’ ಎಂಬ ಶಿಕ್ಷಣ ಸಂಸ್ಥೆ ಹೊಂದಿರುವ ಇವರು ಅಬಾಕಸ್ ಮತ್ತು ವೇದ ಗಣಿತಗಳನ್ನು ಮಕ್ಕಳಿಗೆ ಕಲಿಸುತ್ತಾರೆ. ನರ್ಸರಿ ಟೀಚರ್ಸ್ ಟ್ರೈನಿಂಗ್ ತರಗತಿ ಹಾಗೂ ನುರಿತ ಶಿಕ್ಷಕರಿಂದ ಭರತ ನಾಟ್ಯ ಶಾಸ್ತ್ರೀಯ ನೃತ್ಯ ಮತ್ತು ಪಾಶ್ಚಾತ್ಯ ನೃತ್ಯಗಳಲ್ಲಿ ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿರುವ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿ ಸುತ್ತಾರೆ. ವೀಣಾಂತರಂಗ ‘ ಎಂಬ ಪುಸ್ತಕ ಪ್ರಕಟಿಸಿದ್ದಾರೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ