Oplus_131072

ಬಸವಕಲ್ಯಾಣದ ಗವಿಮಠದಲ್ಲೊಂದು ವಿಸ್ಮಯ ದೃಶ್ಯ.

ಘನಲಿಂಗ ರುದ್ರಮುನಿ ಗವಿಮಠದೊಳಗಿನ ಮೂರ್ತಿಯ ಮೇಲೆ ಬಂಗಾರದ ಬೆಳಕು”

ಸೂರ್ಯನ ಚಿತ್ರ ತೆಗೆಯಬೇಕು, ಬೆಳಕಿನ ಕಿರಣಗಳು ಸೆರೆ ಹಿಡಿಯಬೇಕೆಂದು ಕ್ಯಾಮರಾ ಬ್ಯಾಗು ಹೆಗಲಿಗೇರಿಸಿ ಬೆಳಗ್ಗೆ ಮತ್ತು ಸಂಜೆ ಸುಮಾರು ಕಡೆ ಸುತ್ತಾಡಿದಾಗ ನನ್ನ ದೃಷ್ಟಿಗಿಂದ ಕ್ಯಾಮರ ಕಣ್ಣಲ್ಲಿ ವಿಭಿನ್ನವಾಗಿ ಗೋಚರಿಸಿ, ಕಣ್ಣುಗಳಿಗೆ ಮುದ ನೀಡಿತು. ಸೂರ್ಯನಿಗೆ ಕೂದಲುಗಳಿವೆ ಮತ್ತು ಚಿನ್ನದ ತೋಳುಗನಿದ್ದು ವಿಜಯ ರಥದಲ್ಲಿ ಸ್ವರ್ಗದಿಂದ ಬರುತ್ತಾನೆ. ಸಪ್ತ ಅಶ್ವಗಳ ರಥ ಅಥವಾ ಒಂದೇ ಅಶ್ವದ ಏಳು ಶಿರಗಳಿರುವಂತೆ ಕಾಮನ ಬಿಲ್ಲಿನ ಏಳು ಬಣ್ಣಗಳು, ಏಳು ಚಕ್ರಗಳೆಂದು ಹೇಳಲಾಗುವ ಈತ ರವಿವಾರ ಪ್ರತಿನಿಧಿಸುತ್ತಾನೆ. ಆ ದಿನದ ಬೆಳಕು ಹಳದಿ, ಕೆಂಪು ಬಣ್ಣಗಳು ವಿಭಿನ್ನವಾಗಿ ಕಾಣಿಸುತ್ತದೆ. ಸೂರ್ಯ ನಿತ್ಯ ಕಣ್ಣಿಗೆ ಕಾಣುವ ದೇವರೆಂದು ತಿಳಿದು ಬರುತ್ತದೆ. ಸೂರ್ಯನ ಬಗ್ಗೆ ವಿಜ್ಷಾನಿಗಳು

ಸಾಕಷ್ಟು ಸಂಶೋಧನೆ ನಡೆಸಿದ್ದಾರೆ. ಇನ್ನೂ ನಿಗೂಢವಾಗಿಯೇ ಇದೆ. ಸೂರ್ಯ ಪೂರ್ವದಲ್ಲಿ ಉದಯಿಸಿ, ಪಶ್ಚಿಮದಲ್ಲಿ ಮುಳುಗುವಂತೆ ನಮ್ಮ ಕಣ್ಣಿಗೆ ಕಾಣುತ್ತದೆ. ಆದರೆ, ಮೂಡುವಾಗ ಮುಳುಗುವಾಗ ಉತ್ತರಾರ್ಧ ದಕ್ಷಿಣಾರ್ಧದಲ್ಲಿ ಸುಳಿದಾಡುವ ಭಾಸ ನಮಗೆ ಮೂಡಿಸುತ್ತಾನೆ. ಜಗತ್ತಿನಲ್ಲಿ ಪೂರ್ವಾಭಿಮುಖ ದೇವಾಲಯಗಳು ಸಾಕಷ್ಟಿವೆ. ಸೂರ್ಯೋದಯದ ಸಮಯದಲ್ಲಿ ಕಿರಣಗಳು ನೇರವಾಗಿ ದ್ವಾರದಿಂದ ಗರ್ಭ ಗೃಹದ ಮೂರ್ತಿಯ ಮೇಲೆ ಬೀಳುವದು ಅಪರೂಪ. ಕೆಲವು ಕಡೆ ಬೆಳಕು ಬೀಳುವ ಸಾಧ್ಯತೆ ಇದ್ದರೂ ಎದುರು ದೊಡ್ಡ ಕಟ್ಟಡ, ಗಿಡಮರಗಳಿಂದ ಆ ಅವಕಾಶ ತಪ್ಪಿ ಹೋಗುತ್ತದೆ. ಬೆಳಕು ಬೀಳುವ ದೃಶ್ಯ ಸುರಂಗ ಮಾರ್ಗದ ಗವಿಯ ದ್ವಾರದಿಂದ ಹಾದು ಘನಲಿಂಗ ರುದ್ರಮುನಿ ಮೂರ್ತಿಯ ಮೇಲೆ ಬೆಳಕಿನಾರುತಿ.

ನಮ್ಮ ಸಾಹಿತ್ಯದಲ್ಲಿ ಹೇಳುವದಾದರೆ ಬೆಂಕಿಯ ಪಕ್ಷಿ ವರ್ಷದಲ್ಲಿ ನವರಾತ್ರಿ, ಹಾಗೂ ಶಿವರಾತ್ರಿ ಸಂದರ್ಭದಲ್ಲಿ ಮಾತ್ರ ಕಾಣುವ ಅದ್ಭುತ ದೃಶ್ಯ.
ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಅವಳಿ ಗ್ರಾಮ ತ್ರಿಪೂರಾಂತದಲ್ಲಿ ೧೨ನೇ ಶತಮಾನದ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಗವಿ ಮಠದಲ್ಲಿ ಈ ಅದ್ಭುತವನ್ನು ಕಾಣಬಹುದು..

ಪೂಜ್ಯ ಶ್ರೀ ಷ.ಬ್ರ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಗವಿಮಠ ಬಸವಕಲ್ಯಾಣ

ಗವಿಮಠದ ಸ್ವರೂಪ :
ಗವಿ ಮಠದ ಮುಂಭಾಗದಲ್ಲಿ ವಿಶಾಲವಾದ ಸಭಾ ಭವನ ನಿರ್ಮಿಸಲಾಗಿದೆ. ಇದರ ಹಿಂಬದಿಗೆ ೧೩/೪೯ ಅಂಗುಲ ನವರಂಗ, ಮಧ್ಯದ ಗೋಡೆಗೆ ೨/೪ ಅಂಗುಲದ ಪೂರ್ವಾಭಿಮುಖವಾಗಿ ಗರ್ಭಗ್ರಹದ ಒಂದು ಚಿಕ್ಕ ದ್ವಾರವಿದೆ ಮೇಲಭಾಗದಲ್ಲಿ ಶಿವಲಿಂಗದ ಕೆತ್ತನೆಯಿದೆ. ಅದರ ಮೇಲೆ ರುದ್ರಾಕ್ಷಿಯ ತೋರಣವಿದೆ ಗರ್ಭಗ್ರಹ ದ್ವಾರದಿಂದ ಒಳಗಡೆ ಪ್ರವೇಶಿಸಿದರೆ, ಕೆಂಪು ಬಂಡೆಗಲ್ಲಿನಲ್ಲಿ ಕೊರೆದಿರುವ ಸುಮಾರು ೫೦ ಅಡಿ ಉದ್ದದ ಸುರಂಗ ಮಾರ್ಗ ಇರುವದು. ಸಪ್ತ ಮೆಟ್ಟಿಲಗಳನಿಳಿದು ಮುಂದೆ ಹೋದಂತೆ ಅಗಲ ೬ ಅಡಿ, ಎತ್ತರ ೯ ಅಡಿ, ಅರ್ಧದಿಂದ ಮುಂದೆ ಹೋದರೆ ಎತ್ತರ ೬ ಅಡಿಗೆ ಇಳಿಯುತ್ತದೆ.ಇದುವೇ ಘನಲಿಂಗ ರುದ್ರಮುನಿಯವರ ಗವಿ ಎನ್ನುವರು. ಮುಂದೆ ಮಠ ಕಟ್ಟಿರುವದರಿಂದ ಗವಿಮಠವೆಂದು ಕರೆಯುತ್ತಾರೆ. ಗರ್ಭಗ್ರಹದ ದ್ವಾರದ ಎಡಭಾಗದ ಗೋಡೆಗೆ ಚಿಕ್ಕ ಗರುಡ ವಿಗ್ರಹವಿದೆ ಇದರಂತೆ ದೊಡ್ಡ ಶಿಲ್ಪ ನುಣುಪಾಗಿರುವ ಬಸವಕಲ್ಯಾಣದ ವಸ್ತುಸಂಗ್ರಹಾಲಯದಲ್ಲಿದೆ.

ಈ ಗವಿ ಅಷ್ಟೇನು ನುಣುಪು ಸುಂದರ ಕೆತ್ತನೆ ಇಲ್ಲದಿದ್ದರೂ ಅಂಕುಡೊಂಕು ಇರುವ ಈ ಗವಿ ಪ್ರಶಾಂತ ವಾತವರಣ. ಒಂದೇ ಕಡೆ ಕೇಂದ್ರಿಕರಿಸುವಂಥಹ ರೋಮಾಂಚನ ಮೂಡಿಸುವ ಸ್ಥಳ. ಈ ಗವಿಯ ಕೊನೆಗೆ ಪಾಣಿ ಪೀಠವಿದ್ದು ಮೇಲೆ ಶಿವಲಿಂಗ ಪ್ರತಿಷ್ಠಾಪಿಸಿ ಅದರ ಮೇಲೆ ತಾಮ್ರಪಟದ ಘನಲಿಂಗ ರುದ್ರಮನಿಯ ಮೂರ್ತಿ ತಾಮ್ರಪಟದಿಂದ ಮಾಡಿ ಶಿವಲಿಂಗದ ಮೇಲೆ ಕೂಡಿಸಲಾಗಿದೆ. ಅರ್ಧ ಚಂದ್ರಾಕೃತಿಯ ಇರುವ ಈ ಸುರಂಗ ಮಾರ್ಗದ ಗವಿಯಲ್ಲಿದ್ದ ಮೂರ್ತಿಯ ಮೇಲೆ ಸೂರ್ಯೋದಯದ ಕಿರಣಗಳು ಬೀಳುವ ಹೊನಲು ಬೆಳಕಿನ ವಿಶೇಷತೆ ಇಲ್ಲಿ ಕಾಣಬಹುದು.

ಇಡೀ ಮಠದ ತುಂಬ ಚಿನ್ನ ಲೇಪನದಂತೆ ಗೋಚರಿಸಿಸುತ್ತದೆ. ಈ ದೃಶ್ಯ ನೋಡುವ ಭಾಗ್ಯ ಶಿವರಾತ್ರಿ ಮತ್ತು ನವರಾತ್ರಿ ಹಬ್ಬದಲ್ಲಿ ಮಾತ್ರ ಸಾಧ್ಯ.
ಈ ಸಮಯದಲ್ಲಿ ನೂರಾರು ಸದ್ಭಕ್ತರು ಬರುತ್ತಾರೆ. ತಮ್ಮ ಮನಃಪೂರ್ವಕವಾಗಿ ಏನು ಬೇಕಾದರೂ ಬೇಡಿಕೊಂಡರು ಫಲ ಪ್ರಾಪ್ತಿವಾಗುತ್ತದೆಂಬ ಅಚಲ ನಂಬಿಕೆ. ಗವಿಯ ಅರ್ಧಭಾಗದಲ್ಲಿ ಎರಡು ಬದಿಗೆ ಕುಳಿತುಕೊಳ್ಳಲು ಜಗುಲಿಗಳಿವೆ. ಒಳಗೆ ಬಂದು ನಮಸ್ಕರಿಸಿ ಈ ಜಗುಲಿಯೊಳಗೆ ಕುಳಿತು ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ಕುಳಿತುಕೊಂಡು ಧ್ಯಾನಸ್ತರಾಗುತ್ತಾರೆ. ಹೀಗೆ ಮಾಡಿದರೆ ಮನಸ್ಸಿನೊಳಗೆ ಏನೋ ಒಂದು ಪರಿವರ್ತನೆ ಆಗುವದೆಂದು ನಂಬಿಕೆ.

ಈ ಗವಿಯೊಳಗೆ ಮತ್ತೆ ಉತ್ತರ ದಕ್ಷಿಣಕ್ಕೆ ಎರಡು ಚಿಕ್ಕ ದ್ವಾರಗಳಿವೆ. ದಕ್ಷಿಣ ದ್ವಾರದ ಒಳಗಡೆ ಬಂದರೆ ಮತ್ತೆ ಪೂರ್ವಾಕ್ಕೆ ತೆರೆದ ಬಾಗಿಲು ಇದ್ದಂತೆ ಕಾಣುತ್ತದೆ. ಆದರೆ ಅದು ಮುಚ್ಚಲಾಗಿದೆ. ಇಲ್ಲಿಂದ
ಅಕ್ಕನಾಮ್ಮನ ಗವಿಗೆ ಹೋಗುವ ದಾರಿ ಇದೆ ಎಂದು ಹೇಳುತ್ತಾರೆ. ಎಂದೋ ಒಂದು ಸಲ ಒಂದು ಕುರಿ ಒಳಗಡೆ ಬಿಟ್ಟಾಗ ಆ ಕುರಿ ಅಮೃತಕುಂಡದ ಗವಿಯಲ್ಲಿ ಬಂದಿತಂತೆ. ಗವಿಯ ಮುಂಭಾಗದಲ್ಲಿ ನಿರ್ಮಾಣವಾಗಿರುವ ಉತ್ತರ ದಕ್ಷಿಣಕ್ಕೆ ಎರಡು ಕೋಣೆಗಳಿವೆ. ದಕ್ಷಿಣದ ಕೋಣೆಯಲ್ಲಿ ಮರಿದೇವರ ಗದ್ದುಗೆ ಇದೆ. ಇದು ಬೆಟ್ಟದಲ್ಲಿ ಅಥವಾ ಗುಡ್ಡದಲ್ಲಿ ಕೊರೆದಿರುವದರಿಂದ ಈ ಮಠಕ್ಕೆ ಇಂದಿಗೂ ಕೂಡ ಮರಿದೇವರ ಗುಡ್ಡ ಎಂದು ಕರೆಯುವ ಕೆಲವರಲ್ಲಿ ರೂಢಿಯಲ್ಲಿದೆ. ಮಠದ ಮುಂಭಾಗದಲ್ಲಿ ಚಾಲುಕ್ಯರ ಕಾಲದ ಕಲ್ಲಿನ ಸ್ತಂಬವಿದೆ ಮೇಲ್ಭಾಗದ ಮಾತ್ರ ಉಳಿದದ್ದು ಅದರ ಮೂರು ಭಾಗದಲ್ಲಿ ಕನ್ಯೆಯರ ಶಿಲ್ಪ ಕೆತ್ತಲಾಗಿದೆ. ಕನ್ನಡಿ ಹಿಡಿದು. ಸಿಂಗರಿಸಿಕೊಳ್ಳುವುದು, ಡಮರು ಭಾರಿಸುವುದು, ಮತ್ತು ನಿಂತಿರುವ ಭಂಗಿಯಲ್ಲಿವೆ. ಈ ಸ್ತಂಬದ ಮೇಲೆ ಕಬ್ಬಿಣದ ಸ್ತಂಬ ಕೂಡಿಸಿ ಅದರ ಮೇಲೆ ಪಂಚಾಚಾರ್ಯರ ಪಂಚ ವರ್ಣದ ಧ್ವಜ ಸದಾ ಹಾರಾಡುತ್ತಲಿರುತ್ತದೆ.

ಈ ಮಠಕ್ಕೆ ೨೮-೯-೨೦೦೫ ರಲ್ಲಿ ನೂತನವಾಗಿ ಶ್ರೀ ಷ.ಬ್ರ. ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಪೀಠಾಧಿಪತಿಗಳಾಗಿ ಬಂದರು. ಪ್ರತಿ ವರ್ಷ ಮಾರ್ಚ ತಿಂಗಳನಲ್ಲಿ ಬರುವ ರೇಣುಕಾಚಾರ್ಯರ ಜಯಂತೋತ್ಸವ ದಿನದಂದು ಇಲ್ಲಿ ಉತ್ಸವ ನೆಡೆಯುತ್ತದೆ. ಬಸವಕಲ್ಯಾಣದಿಂದ ಗವಿಮಠದವರೆಗೆ ರೇಣುಕಾಚಾರ್ಯ ಭಾವ ಚಿತ್ರದ ಭವ್ಯ ಮೆರವಣಿಗೆ, ಪೀಠಾಧಿಪತಿಗಳೊಂದಿಗೆ ನಡೆಯುವ ಧರ್ಮ ಸಭೆ ಗೋಷ್ಠಿಗಳಲ್ಲಿ ಸಾವಿರಾರು ಸದ್ಭಕ್ತರು ಪಾಲ್ಗೊಳ್ಳುತ್ತಾರೆ. ಈ ಸಂದರ್ಭದಲ್ಲಿ ಒಬ್ಬರಿಗೆ ಮಾತ್ರ ಆಯ್ಕೆ ಮಾಡಿ ಅಭಿನವ ಘನಲಿಂಗ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ಮಠದಲ್ಲಾಗಲಿ ಮಠದ ಸುತ್ತಮುತ್ತಲೂ ಹಲವಾರು ಗಿಡಮೂಲಿಕೆಗಳ ರಹಸ್ಯಗಳಿವೆ. ಮತ್ತು ಅವರವರಿಗೆ ಸಂಬಂಧ ಪಟ್ಟಂತೆ ಉತ್ತಮವಾದ ರಹಸ್ಯಗಳಿವೆ. ಈ ರಹಸ್ಯ ಅರ್ಥೈಸಿಕೊಂಡವರಿಗೆ ಮಾತ್ರ ಅರ್ಥೈಸುತ್ತದೆ. ಈ ಮಠ ಯಾರನ್ನೂ ಕೈ ಬಿಸಿ ಕರೆಯುವದಿಲ್ಲ ಬಂದವರನ್ನು ಕೈ ಬಿಡುವುದಿಲ್ಲ. ಒಂದೇ ಮಾತಿನಲ್ಲಿ ಹೇಳುವದಾದರೆ ಈ ಮಠ `ಮಾತು ಬೆಳ್ಳಿ ಮೌನ ಬಂಗಾರ’ ಇನ್ನೊಂದು ಮಾತಿನಲ್ಲಿ ಹೇಳುವದಾದರೆ `ಕೊಟ್ಟರೆ ವರ ಇಟ್ಟರೆ ಶಾಪ’ ಎಂಬ ಮಾತಿದೆ.

(ಇಂದು ದಿನಾಂಕ ೯-೧೦-೨೦೨೪ ಬುಧುವಾರ
ನಮ್ಮೂರು ಹುಣಸಗೇರಾ ದಿಂದ ಬಸವಕಲ್ಯಾಣಕ್ಕೆ ಬಂದಾಗ ನವರಾತ್ರಿ ಹಬ್ಬದಲ್ಲಿ ಮೂರ್ತಿ ಮೇಲೆ ಬೆಳಕು ಬೀಳುವುದು ನೆನಪಾಯಿತು. ತಕ್ಷಣ ಕ್ಯಾಮರಾ ಹೆಗಲಿಗೇರಿಸಿ ಗವಿಮಠಕ್ಕೆ ಒಂದಿಷ್ಟು ಫೋಟೋಗಳು ಕ್ಲಿಕ್ಕಿಸಿದೆ. ಹಿಂದೊಮ್ಮೆ ಇದರ ಬಗ್ಗೆ ಲೇಖನ ಬರೆದಿರುವೆ. ಅದೇ ಲೇಖನ ಇಲ್ಲಿರುವುದು)

ಚಿತ್ರ ಲೇಖನ- ವೀರಶೆಟ್ಟಿ ಎಂ. ಪಾಟೀಲ,
ಬಸವಕಲ್ಯಾಣ.

ಲೇಖಕರ ಪರಿಚಯ:

ವೀರಶೆಟ್ಟಿ ಎಂ.ಪಾಟೀಲ್‌ ರವರು ಹುಮನಾಬಾದ ತಾಲೂಕಿನ ಹುಣಸಗೇರಾದವರು. ಎಂ.ಎಫ್.ಎ.ಪದವಿಧರರಾದ ಇವರು ಚಿತ್ರಕಲಾ ಶಿಕ್ಷಕರಾಗಿ,   ಫೋಟೊಗ್ರಾಫರ, ಲೇಖಕರಾಗಿ ಗುತಿಸಲ್ಪಡುತ್ತಾರೆ. ಇವರ   ಚಿತ್ರಕಲೆ ಹಾಗೂ ಫೋಟೊಗ್ರಾಫಿಗಳಿಗೆ ರಾಜ್ಯ, ರಾಷ್ಟ್ರ,   ಮಟ್ಟದ ಪ್ರಶಸ್ತಿಗಳು ಲಭಿಸಿವೆ. ‘ಓ ನನ್ನ ಕನ್ನಡ’ ‘ಮೂರನೇ ಮಹಾಯುದ್ಧ‘  (ಕವನ ಸಂಕಲನಗಳು) ‘ನಾರಾಯಣಪೂರ ವಾಸ್ತು ಶಿಲ್ಪ ಕಲೆಗಳ ವೈಭವ’, ‘ವ್ಯಸನಮುಕ್ತ ಸಮಾಜಕ್ಕಾಗಿ ಅಭಿನವ ಘನಲಿಂಗ ಜೋಳಿಗೆ’ (ಲೇಖನ)  ‘ಸಾತ್ವಿಕ’, ‘ಸಾತ್ವಿಕ-ಸಾರ್ಥಕ’ ‘ವೈರಾಣು ಹೈರಾಣು, ವಿಶ್ವ ಮಹಾಯುದ್ಧ’ (ಹನಿಗವನ ಗಳು) ‘ಕಲ್ಯಾಣದ ಶ್ರೀಗುರು ಘನಲಿಂಗ‌ ರುದ್ರಮುನಿ ಗವಿಮಠ,’  ‘ನಗುಮೊಗದ ಜನ್ಮೋತ್ಸವ,ನೋಡ ಬನ್ನಿ ಗವಿಮಠ,ಪೋಟೋ ಗ್ರಾಫಿ, ಕಲಿಯುಗ ಮುಗಿಯುವ ಮುನ್ನ, ಅಭೀನವ ಶ್ರೀಗಳ ಮೊಬೈಲ್ ಜಾಗ್ರತಿ ಪಾದಯಾತ್ರೆ’  ಎಂಬ ಒಟ್ಟು 13 ಕೃತಿಗಳು  ಪ್ರಕಟಿಸಿದ್ದಾರೆ.

One thought on “ಬಸವಕಲ್ಯಾಣದ ಗವಿಮಠದಲ್ಲೊಂದು ವಿಸ್ಮಯ ದೃಶ್ಯ”

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ