Oplus_131072

ಬೆಳಗಾವಿಯ ಕಾಂಗ್ರೆಸ್ ಸಮ್ಮೇಳನಕ್ಕೆ ಶತಮಾನೋತ್ಸವದ ಸಂಭ್ರಮ

ನಾಳೆ ಡಿಸೆಂಬರ್ 27ರ ದಿನ ಸ್ವಾತಂತ್ರ್ಯ ಹೋರಾಟದ ಅತ್ಯಂತ ಮಹತ್ವದ ಘಟ್ಟವಾದ ಕಾಂಗ್ರೆಸ್ ಕಮಿಟಿಯ ಸಮ್ಮೇಳನ ನಡೆದ ಶತಮಾನೋತ್ಸವದ ಮಹತ್ತರ ಘಳಿಗೆಯನ್ನು ಮತ್ತೊಮ್ಮೆ ಬೆಳಗಾವಿಯಲ್ಲಿ ಆಚರಿಸುತ್ತಿದ್ದು ಆ ಹಿನ್ನೆಲೆಯಲ್ಲಿ ಇಡೀ ಬೆಳಗಾವಿ ನಗರ ನವ ವಧುವಿನಂತೆ ಸಿಂಗಾರಗೊಂಡಿದೆ.

ಗಾಂಧೀಜಿಯವರ ಪರಮ ಶಿಷ್ಯರಲ್ಲಿ ಒಬ್ಬರಾದ ಗಂಗಾಧರ್ ದೇಶಪಾಂಡೆ ಅವರು ಬೆಳಗಾವಿ ಸಮೀಪದ ಹುದಲಿಯಲ್ಲಿ ಚರಕದಿಂದ ಖಾದಿ ಬಟ್ಟೆಯನ್ನು ತಯಾರಿಸುತ್ತಿದ್ದರು.ಮಂಗಳೂರಿನ ಕಟ್ಟಾ ಕಾಂಗ್ರೆಸಿಗರಾದ ಕಾರ್ನಾಡ ಸದಾಶಿವರಾಯರು ಗಾಂಧೀಜಿಯವರಿಗೆ ಅತ್ಯಂತ ಹತ್ತಿರದವರಾಗಿದ್ದು 1924ರ ಕಾಂಗ್ರೆಸ್ ಅಧಿವೇಶನ ಬೆಳಗಾವಿಯಲ್ಲಿಯೇ ನಡೆಯಬೇಕು ಎಂಬುದು ಇವರಿಬ್ಬರ ಒತ್ತಾಸೆಯಾಗಿತ್ತು. ಬೆಳಗಾವಿ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಯಲ್ಲಿದ್ದು ಪೋರ್ಚುಗೀಸರ ವಶದಲ್ಲಿದ್ದ ಗೋವಾಗಳಿಗೆ ಹತ್ತಿರದಲ್ಲಿದ್ದು ಬೆಳಗಾವಿಯಲ್ಲಿ ಹಿಂದಿ ಪ್ರಚಾರವನ್ನು ಸುಲಭವಾಗಿ ಮಾಡಬಹುದು ಮತ್ತು ಬೆಳಗಾವಿಯ ಹವಾಮಾನ ಬಹಳ ಚೆನ್ನಾಗಿ ಇದ್ದುದು ಅವರ ಈ ಒತ್ತಾಸೆಯ ಹಿಂದಿನ ಕಾರಣವಾಗಿತ್ತು. ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಹುಬ್ಬಳ್ಳಿಯ ಜನ ಇದಕ್ಕೆ ತಕರಾರು ತೆಗೆದು ಬೆಳಗಾವಿಯವರಿಗೆ ಸಮ್ಮೇಳನದ ಖರ್ಚು ವೆಚ್ಚಗಳನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದಾಗ ಗಂಗಾಧರ್ ರಾವ್ ದೇಶಪಾಂಡೆ ಅವರು 25 ಸಾವಿರ ರೂಪಾಯಿಗಳನ್ನು ಮೂರು ಜನ ಜೈನ ಮತ್ತು ಬ್ರಾಹ್ಮಣ ದಾನಿಗಳಿಂದ ಹಣವನ್ನು ಪಡೆದು ಬಾಂಡ್ ಬರೆದುಕೊಟ್ಟರು. ಈ ಮೊದಲು ಎರಡು ಬಾರಿ ಬೇರೆ ಬೇರೆ ಕಾರಣಗಳಿಗಾಗಿ ಬೆಳಗಾವಿಗೆ ಭೇಟಿ ನೀಡಿದ ಗಾಂಧೀಜಿಯವರು ಮುಂದೆ ಬೆಳಗಾವಿಯಲ್ಲಿ ಸಮ್ಮೇಳನವನ್ನು ನಡೆಸಲು ಅಧಿಕೃತ ಒಪ್ಪಿಗೆ ದೊರೆತ ಮೇಲೆ ಸಮ್ಮೇಳನಕ್ಕೆ ಭರದ ಸಿದ್ಧತೆ ನಡೆಯಿತು.
ಇಂದಿನ ಜನನಿಬಿಡ ತಿಲಕವಾಡಿ ಅಂದು ಸಂಪೂರ್ಣ ಖಾಲಿ ಮೈದಾನವಾಗಿದ್ದು ಆಗ ಬೆಳಗಾವಿಯ ಒಟ್ಟು ಜನಸಂಖ್ಯೆ ಕೇವಲ 30,000 ಇತ್ತು. ಇಂದಿನ ಪಾಕಿಸ್ತಾನ, ಬರ್ಮಾಗಳು ಕೂಡ ಭಾರತದ ಭಾಗಗಳೇ ಆಗಿದ್ದು ಸಮ್ಮೇಳನಕ್ಕೆ ಆರೂವರೆ ಸಾವಿರಕ್ಕೂ ಹೆಚ್ಚು ಜನ ಪ್ರತಿನಿಧಿಗಳಾಗಿ ಬರುವ ನಿರೀಕ್ಷೆಯಿದ್ದು ಲಾಹೋರ್ ರಂಗೂನ್ ಮತ್ತು ಶ್ರೀಲಂಕಾಗಳಿಂದಲೂ ಪ್ರತಿನಿಧಿಗಳು ಬೆಳಗಾವಿಗೆ ಬಂದಿದ್ದರು.
ಜವಾಹರ್ ಲಾಲ್ ನೆಹರು, ಮೋತಿಲಾಲ್ ನೆಹರು, ಅನಿಬೆಸೆಂಟ್, ಸರೋಜಿನಿ ನಾಯ್ಡು, ಚಕ್ರವರ್ತಿ ರಾಜಗೋಪಾಲಾಚಾರಿ, ಚಿತ್ರರಂಜನ್ ದಾಸ್, ಸೈಬುದ್ದೀನ್ ಕಿಚಲ್ಗೊರ್,ಲಾಲಾ ಲಜಪತ್ ರಾಯ್, ಮದನ್ ಮೋಹನ್ ಮಾಳವಿಯ, ಬಾಬು ರಾಜೇಂದ್ರ ಪ್ರಸಾದ್, ಮೌಲಾನಾ ಅಬುಲ್ ಕಲಂ ಮತ್ತು ಕಿಶನ್ ಸಿಂಗ್ ಬಂದವರಲ್ಲಿ ಪ್ರಮುಖರು. ಕಿಶನ್ ಸಿಂಗರ ಪುತ್ರ ಸ್ವಾತಂತ್ರ್ಯ ಸಂಗ್ರಾಮದ ವೀರಯೋಧ 17ರ ಹರೆಯದ ಭಗತ್ ಸಿಂಗ್ ಕೂಡ ಪತ್ರಕರ್ತರಾಗಿ ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ಅಧಿವೇಶನಕ್ಕೆ ಬರುವ ಜನರಿಗೆ ಊಟ, ವಸತಿ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಾಗಿದ್ದು ಬೆಳಗಾವಿಯ ತಿಲಕವಾಡಿಯಲ್ಲಿ ಒಂದು ಬಾವಿಯನ್ನು ತೋಡಲಾಗಿದ್ದು ಇದರ ವ್ಯವಸ್ಥೆಯನ್ನು ಲಿಂಗೋ ವಿರೂಪಾಕ್ಷ ದೇಶಪಾಂಡೆ ಅವರು ನೋಡಿಕೊಂಡರು. ನಾಲ್ಕು ಸಾವಿರ ವೆಚ್ಚದಲ್ಲಿ ನಿರ್ಮಾಣವಾದ ಆ ಬಾವಿಯನ್ನು ಇಂದಿಗೂ ‘ಕಾಂಗ್ರೆಸ್ ಬಾವಿ’ ಎಂದು ಕರೆಯಲಾಗುತ್ತದೆ.

ಅಧಿವೇಶನಕ್ಕೆ ಬಂದವರ ಊಟದ ವ್ಯವಸ್ಥೆಯನ್ನು ಕಾಮೋಜಿರಾವ್ ಗೋಡ್ಸೆ ಅವರು ವಹಿಸಿಕೊಂಡರು.
ಅವರು ನಿರ್ಮಿಸಲಾಗಿದ್ದ ಟೆಂಟ್ಗಳು ಅತ್ಯಂತ ವಿಶಾಲವಾಗಿಯೂ ಅಚ್ಚುಕಟ್ಟಾಗಿಯೂ ಇದ್ದವು ಎಂದು ಗಾಂಧೀಜಿಯವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಶ್ಲಾಘಿಸಿದ್ದರು.
ತಿಲಕವಾಡಿಯ ಮೈದಾನದಲ್ಲಿ ರೈಲು ಹಳಿಯು ಹಾದು ಹೋಗಿದ್ದು ಸಮ್ಮೇಳನಕ್ಕೆ ಬರುವವರ ಅನುಕೂಲಕ್ಕಾಗಿ ಅಲ್ಲೊಂದು ತಾತ್ಕಾಲಿಕ ರೈಲು(ಫ್ಲ್ಯಾಗ್ ಲೈನ್ ) ನಿಲ್ದಾಣದ ವ್ಯವಸ್ಥೆಯನ್ನು ಮಾಡಿದ್ದರು. ಇಡೀ ಸಮ್ಮೇಳನದ ಸಭಾಂಗಣವನ್ನು ವಿಜಯನಗರ ಸಾಮ್ರಾಜ್ಯದ ನೆನಪಿನಲ್ಲಿ ನಿರ್ಮಿಸಲಾಗಿದ್ದು ಸಮ್ಮೇಳನದ ಮೈದಾನವನ್ನು ‘ವಿಜಯನಗರ’ವೆಂದೇ ಹೆಸರಿಡಲಾಗಿದ್ದು ಸಭೆ ನಡೆಯುವ ಸ್ಥಳವನ್ನು ‘ವೀರ ಸೌಧ’ ಎಂದು ಕರೆಯಲಾಗಿತ್ತು . ಅಧಿವೇಶನದ ಮಂಟಪದಲ್ಲಿ ವಿರೂಪಾಕ್ಷ ದೇವಸ್ಥಾನದ ಪ್ರತಿ ಕೃತಿಯನ್ನು ನಿರ್ಮಾಣ ಮಾಡಲಾಗಿದ್ದು ಸಭಾಂಗಣವನ್ನು ಪ್ರವೇಶಿಸುವವರಿಗೆ ವಿರೂಪಾಕ್ಷ ದೇವಸ್ಥಾನದ ಒಳಗೆ ಪ್ರವೇಶ ಮಾಡಿದಂತೆ ಭಾಸವಾಗುತ್ತಿತ್ತು. ಖರ್ಚನ್ನು ಕಡಿಮೆ ಮಾಡಲು ಈ ಹಿಂದೆ ಕಾಕಿನಾಡದಲ್ಲಿ ಬಳಸಿದ ಟೆಂಟುಗಳನ್ನು ಸಮ್ಮೇಳನಕ್ಕೆ ಬಳಸಿಕೊಂಡಿದ್ದರೂ ಶಾಮಿಯಾನಕ್ಕಾಗಿ ಹನ್ನೊಂದು ಸಾವಿರ ರೂ ಹಣ ಖರ್ಚಾಗಿತ್ತು.ಸಮ್ಮೇಳನದ ಅಧ್ಯಕ್ಷತೆಯಲ್ಲಿ ನಡೆದ ಈ ಸಮ್ಮೇಳನವನ್ನು ಗಾಂಧೀಜಿಯವರು
ಇಂಗ್ಲಿಷನಲ್ಲಿ ಭಾಷಣ ಮಾಡಿದ್ದು ಗೊತ್ತುವಳಿಗಳಲ್ಲಿ ಮೋ.ಕ.ಗಾಂಧಿ ಎಂದು ಕನ್ನಡದಲ್ಲಿ ಸಹಿ ಮಾಡಿದ್ದರು ಎಂಬುದು ವಿಶೇಷವಾಗಿದ್ದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿತ್ತು. ಎ ಐ ಸಿ ಸಿ ಸದಸ್ಯತ್ವ ಪಡೆಯಲು ಅಲ್ಲಿಯವರೆಗೆ ಹತ್ತು ರೂಪಾಯಿ ಹಣ ನಿಗದಿಯಾಗಿದ್ದು ಬೆಳಗಾವಿಯ ಸಮ್ಮೇಳನದ ಸಮಯದಲ್ಲಿ ಈ ಮೊತ್ತ ದುಬಾರಿ ಎಂದು ಗಾಂಧೀಜಿಯವರು ಈ ಸದಸ್ಯತ್ವ ಶುಲ್ಕವನ್ನು ಒಂದು ರೂಪಾಯಿಗೆ ಇಳಿಸಿದ್ದರು.
ಇದೇ ಅಧಿವೇಶನದಲ್ಲಿ ಮೊತ್ತ ಮೊದಲಬಾರಿ ವಂದೇ ಮಾತರಂ ಗೀತೆಯನ್ನು ಸಾಮೂಹಿಕವಾಗಿ ವಿಷ್ಣು ದಿಗಂಬರ ಪುಲಸ್ಕರ್ ಅವರ ನೇತೃತ್ವದಲ್ಲಿ ಹಾಡಿದರು. ಈ ಮೊದಲು ದಾದಾಬಾಯಿ ನವರೋಜಿ ಅವರ ನೇತೃತ್ವದಲ್ಲಿ ನಡೆದ ಕಲ್ಕತ್ತಾ ಅಧಿವೇಶನದಲ್ಲಿ ರವೀಂದ್ರನಾಥ್ ಟ್ಯಾಗೋರ್ ಅವರು ಹಾಡಿದ ವಂದೇಮಾತರಂ ಗೀತೆಗಿಂತ ಇದು ಭಿನ್ನವಾಗಿತ್ತು. ಇಲ್ಲಿಗೆ ನಮ್ಮ ಗದುಗಿನ ಹುಯಿಲಗೋಳ ನಾರಾಯಣರಾಯರು ಬರೆದ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಹಾಡನ್ನು ಪ್ರಾರ್ಥನೆಯಾಗಿ ಹಾಡಲಾಗಿದ್ದು, ಹಾಡುಗಾರರ ತಂಡದಲ್ಲಿ ಹತ್ತು ವರ್ಷದ ಪುಟ್ಟ ಬಾಲಕಿ ಗಂಗೂಬಾಯಿ ಹಾನಗಲ್ ಅವರು ಇದ್ದರು ಎಂಬುದು ಹೆಮ್ಮೆಯ ವಿಷಯವಾಗಿತ್ತು.

ಸಮ್ಮೇಳನದಲ್ಲಿ ಒಟ್ಟು ಇಪ್ಪತ್ತೊಂದು ಠರಾವುಗಳನ್ನು ತೆಗೆದುಕೊಳ್ಳಲಾಯಿತು. ಮೊದಲನೆಯದಾಗಿ ಅಸಹಕಾರ ಚಳುವಳಿಯ ಮೂಲಕ ಬ್ರಿಟಿಷರನ್ನು ಹಿಮ್ಮೆಟ್ಟಿಸುವುದು, ಎರಡನೆಯದಾಗಿ ಹಿಂದೂ ಮುಸ್ಲಿಂ ಸಂಘಟನೆಗಳು ಒಟ್ಟುಗೂಡಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಬೇಕು ಎನ್ನುವುದು ಪ್ರಮುಖ ಠರಾವುಗಳಾಗಿದ್ದವು.

ಸಮ್ಮೇಳನದ ನಂತರ 1925 ರ ಜನವರಿ ಒಂದನೇ ತಾರೀಕು ಯಂಗ್ ಇಂಡಿಯಾ ಪತ್ರಿಕೆಯನ್ನು ಸ್ಥಾಪಿಸಿದ್ದು ತಮ್ಮ ಮೊದಲ ಲೇಖನದಲ್ಲಿ ಗಾಂಧೀಜಿಯವರು ಬೆಳಗಾವಿ ಸಮ್ಮೇಳನದಲ್ಲಿ ಭಾಗಿಯಾಗಿದ್ದ ಜನರ ಉತ್ಸಾಹ, ಸಂಯಮ ಮತ್ತು ರಾಷ್ಟ್ರಭಕ್ತಿಯನ್ನು ಮೆಚ್ಚಿ ಬರೆದ ಲೇಖನ ಪ್ರಕಟವಾಗಿತ್ತು.

ಅಧಿವೇಶನದಲ್ಲಿ ಸ್ವಚ್ಛತಾ ಸಮಿತಿಯನ್ನು ನಿರ್ಮಾಣ ಮಾಡಲಾಗಿದ್ದು ಕಾಕಾ ಕಾರ್ಲೇಕರ್ ಅವರು ಈ ತಂಡದ ನೇತೃತ್ವವನ್ನು ವಹಿಸಿಕೊಂಡಿದ್ದರು.
ಸುಮಾರು 70 ಜನರ ತಂಡದಲ್ಲಿ 40 ಜನ ಬ್ರಾಹ್ಮಣರು ಮತ್ತು 30 ಜನ ಇತರೆ ಜಾತಿಯವರು ಇದ್ದದ್ದು ಈ ಸಮ್ಮೇಳನದ ವೈಶಿಷ್ಟವಾಗಿದ್ದು ಸ್ವಚ್ಛತಾ ಕಾರ್ಯ ಕೇವಲ ದಲಿತರದ್ದು ಮಾತ್ರವಲ್ಲ ಎಂದು ಈ ಸಮ್ಮೇಳನದ ಮೂಲಕ ತೋರಿಸಿದ ಸ್ವಾತಂತ್ರ್ಯ ಹೋರಾಟಗಾರರ ಮಾದರಿ ಪ್ರಶಂಸೆಗೆ ಪಾತ್ರವಾಗಿತ್ತು.
ಅಧಿವೇಶನದ ಬಾವಿ ತೋಡಿಸಲು ಅಂದಿನ ಕಾಲಕ್ಕೆ 4370 ರೂ ಹಣ ಖರ್ಚಾಗಿದ್ದು 1924 ಡಿಸೆಂಬರ್ 26 27ರ ಎರಡು ದಿನದ ಸಮ್ಮೇಳನಕ್ಕೆ ಒಟ್ಟು ಖರ್ಚು 2,20,829 ಹಣ ಖರ್ಚಾಗಿದ್ದು ಈ ಎಲ್ಲ ವ್ಯವಹಾರವನ್ನು ನೋಡಿಕೊಂಡ ಲಿಂಗೋ ವಿರೂಪಾಕ್ಷ ದೇಶಪಾಂಡೆಯವರು ಈ ಎಲ್ಲಾ ಲೆಕ್ಕಪತ್ರಗಳನ್ನು ಎ ಐ ಸಿ ಸಿ ಗೆ ನೀಡಿದರು.

ಅಧಿವೇಶನದ ನಂತರ ಗಾಂಧೀಜಿಯವರು ಗೋಕಾಕ್ ತಾಲೂಕಿನ ಹುದಲಿಯಲ್ಲಿ ಕೆಳದಿನಗಳ ಕಾಲ ವಾಸ್ತವ್ಯ ಮಾಡಿ ಅಲ್ಲಿನ ಖಾದಿ ಕೇಂದ್ರವನ್ನು ಬಲಪಡಿಸಿದರು.
ಇಲ್ಲಿಯೇ ಅವರನ್ನು ಭೇಟಿಯಾದ ಹರ್ಡೇಕರ್ ಮಂಜಪ್ಪ ಮತ್ತು ಸರ್ ಸಿದ್ದಪ್ಪ ಕಂಬಳಿಯವರು ಬಸವಣ್ಣನವರ ವಚನಗಳ ಸಾಮಾಜಿಕತೆಯನ್ನು ತಿಳಿಸಿದರು. ಬಸವಣ್ಣನವರ ಸಮಾಜೋ ಕ್ರಾಂತಿಯ ವಿವರಗಳನ್ನು ಪಡೆದ ಗಾಂಧಿ ದಂಗಾದರು. ಎಲ್ಲ ಮಾತುಕತೆಗಳು ಮುಗಿದ ನಂತರ ಹರ್ಡೇಕರ್ ಮಂಜಪ್ಪನವರು
ಗಾಂಧೀಜಿಯವರನ್ನು ‘ಕನ್ನಡದ ಜನರಿಗೆ ತಾವೇನಾದರೂ ವಿಶೇಷವಾಗಿ ಹೇಳುವುದಿದೆಯೇ?ಎಂದು ಕೇಳಿದಾಗ ಜಗಜ್ಯೋತಿ ಬಸವೇಶ್ವರನ ನಾಡಿನಲ್ಲಿ ಹುಟ್ಟಿದ ಜನರಿಗೆ ಅವರ ವಚನಗಳ ಮೂಲಕ ಎಲ್ಲವ ನ್ನೂ ಶರಣರು ತಿಳಿಸಿಕೊಟ್ಟಿದ್ದು ಅವುಗಳ ಅನುಸರಣೆಯಲ್ಲಿಯೇ ಎಲ್ಲವನ್ನು ಕಂಡುಕೊಳ್ಳಬೇಕು’ ಎಂದು ಅತ್ಯಭಿಮಾನದಿಂದ ಗಾಂಧೀಜಿಯವರು ಹೇಳಿದರು.
ಇದೀಗ ಗಾಂಧೀಜಿಯವರು ಅಧ್ಯಕ್ಷರಾಗಿದ್ದ ಮೊದಲ ಮತ್ತು ಏಕೈಕ ಕಾಂಗ್ರೆಸ್ ಸಮ್ಮೇಳನದ ಶತಮಾನೋತ್ಸವ ಕಾರ್ಯಕ್ರಮವನ್ನು ಬೆಳಗಾವಿಯಲ್ಲಿ ಹಮ್ಮಿಕೊಳ್ಳಲಾಗಿದ್ದು ಕರ್ನಾಟಕ ಕನಸರ್ಕಾರವು ಮಹಾತ್ಮ ಗಾಂಧೀಜಿಯವರ ವಿಶೇಷ ಪುತ್ತಳಿಯನ್ನು ಅನಾವರಣ ಮಾಡಲಿದೆ.
ಕನ್ನಡ ನಾಡಿನ ಈ ಸಂಭ್ರಮದಲ್ಲಿ ಪಾಲ್ಗೊಳ್ಳೋಣ.

ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ, ಗದಗ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ