Oplus_131072

ಭರವಸೆ ಮೂಡಿಸಿರುವ ಕವನ ಸಂಕಲನ ‘ನಗು'(ಪುಸ್ತಕ ಪರಿಚಯ)

 

– ಡಾ.ಸಂಜೀವಕುಮಾರ ಅತಿವಾಳೆ.ಬೀದರ

 

ಪ್ರತಿಭೆಯೆಂಬುದು ಎಲ್ಲರಲ್ಲಿಯೂ ಇರುತ್ತದೆ. ಆದರೆ ಕೆಲವರನ್ನು ಮಾತ್ರ ಆಯ್ಕೆಮಾಡಿಕೊಂಡು ಹೊಸದನ್ನು ಸಮಾಜಕ್ಕೆ ನೀಡುವಂತೆ ಪ್ರೇರೆಪಿಸುತ್ತದೆ. ಆ ನಿಟ್ಟಿನಲ್ಲಿ ಗುಣೇಶ ಭಾರತೀಯ’ ಎನ್ನುವ ಪ್ರತಿಭೆಯು ತನ್ನಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭಾಶಕ್ತಿಯನ್ನು ಕಾವ್ಯದ ರೂಪದಲ್ಲಿ ತೆರೆದಿಡುವ ಪ್ರಯತ್ನ ಮಾಡಿರುವುದು
ಮೆಚ್ಚುವಂತದ್ದು.

ನಾಡು-ನುಡಿಯ ಬಗ್ಗೆ ಅಭಿಮಾನ ವ್ಯಕ್ತಪಡಿಸುವುದು ಕವಿಯಾದವನಿಗೆ ಸಹಜವಾದ ಗುಣವಾಗಿದೆ. ಗುಣೇಶನು ತನ್ನ ಕಾವ್ಯದಲ್ಲಿ ತಾಯಿ ನುಡಿಗಾಗಿ ಏನಾದರೂ ಮಾಡಬೇಕೆಂಬ ಸದಾಶಯ ಹೊಂದಿರುವುದು ಶ್ಲಾಘ ನೀಯ. ಸೂರ್ಯ, ಚಂದ್ರ, ಗಾಳಿ, ಬೆಳಕು, ಭೂಮಿ, ಗಿಡ, ಮರ, ಬಳ್ಳಿ, ಹಕ್ಕಿ, ಪ್ರಾಣಿ, ಕಾಮನ ಬಿಲ್ಲು ಹೀಗೆ ಅನೇಕ ಪ್ರಕೃತಿಯ ಅಂಶಗಳತ್ತ ತನ್ನದೇ ಆದ ಅನುಭಾವಾತ್ಮಕ ವಿಚಾರಗಳಿಗೆ ಈ ಸಂಕಲನದಲ್ಲಿ ಕಾವ್ಯದ ರೂಪ ಕೊಟ್ಟಿರುವುದು ಮಹತ್ವದ ಅಂಶವಾಗಿದೆ. ನಗುವು ಸಹಜವಾಗಿ ಎಲ್ಲರ ಮುಖದಲ್ಲಿ ಹೂವಿನ ಹಾಗೆ ಸದಾಕಾಲ ಅರಳಿರಬೇಕೆಂಬ ಉತ್ಕಟ ಇಚ್ಛೆಯನ್ನು ಕವಿಯು ಹೆಚ್ಚು
ಸಲ ತನ್ನ ಕಾವ್ಯದಲ್ಲಿ ವ್ಯಕ್ತಪಡಿಸಿರುವುದನ್ನು ನೋಡಿದರೆ ನಗುವಿನ ಮಹತ್ವವನ್ನು ಮನಗಂಡಿರುವುದು ಕಾಣುತ್ತೇವೆ.
ತನ್ನ ಬದುಕಿನಲ್ಲಿ ಉತ್ತಮ ವಿಚಾರಗಳನ್ನು ಅಳವಡಿಸಿ ಕೊಂಡು ಸತ್ಪಜೆಯಾಗಿ ದೇಶ ಸೇವೆಗೆ ಸದಾ ಸಿದ್ಧರಾಗಿರ ಬೇಕೆನ್ನುವ ಆಶಯ ಕವಿಗಿದೆ. ಕಷ್ಟಜೀವಿಗಳ ನೆರವಿಗೆ
ಧಾವಿಸಬೇಕೆಂಬ ಹಂಬಲ ಕವಿಗಿರುವುದು ಕಾವ್ಯದಿಂದ ಗೊತ್ತಾಗುತ್ತದೆ. ಲೋಕದ ಹಿತಚಿಂತನೆ, ಸೌಂದಯ್ಯ ಪ್ರಜ್ಞೆ, ಪರಿಸರ ಉಳಿವಿನ ಕಳಕಳಿ ಕಾವ್ಯದಲ್ಲಿ ಕಾಣುತ್ತೇವೆ.
ಕಷ್ಟ-ನಷ್ಟಗಳಿಂದ ಕೂಡಿದ ಬದುಕಿನ ಅರಿವಿದೆ. ಆ ಬದುಕಿನಲ್ಲಿ ಎಲ್ಲವನ್ನು ಮೆಟ್ಟಿನಿಂತು ಒಂದು ಹಂತಕ್ಕೆ ಮುಟ್ಟಿಸಬೇಕೆನ್ನುವ ಗುರಿಯಿದೆ. ಆ ನಿಟ್ಟಿನಲ್ಲಿ ಪ್ರಯತ್ನ
ಮುಂದುವರಿಸಬೇಕೆನ್ನುವ ಪ್ರಜ್ಞೆ ಕೂಡ ಕವಿಗೆ ಇದೆಯೆಂ ಬುದು ಗಮನಿಸಬೇಕಾದ ವಿಚಾರವಾಗಿದೆ. ತನಗನಿಸಿರುವ ವಿಚಾರಗಳಿಗೆ ಕಾವ್ಯದ ರೂಪದಲ್ಲಿ ಕವಿಯು ಕೊಟ್ಟಿರುವುದು ನೋಡುವಂತೆ ಸ್ತುತಿ-ನಿಂದನೆಗಳಿಗೆ ಕುಗ್ಗದ ಭಾವ ನಮ್ಮ ದಾಗಬೇಕು ಎನ್ನುವ ವಿಚಾರ ಕೂಡ ಒಬ್ಬ ಕವಿಗೆ ಇರಬೇ ಕಾದ ಜವಾಬ್ದಾರಿಯನ್ನುವುದು ಗುಣೇಶನು ತನ್ನ ಕಾವ್ಯದಲ್ಲಿ ಪ್ರಸ್ತಾಪಿಸಿರುವುದು ಗಮನಿಸಬೇಕಾದ ಅಂಶವಾಗಿದೆ. ದೀರ್ಘ ಕವನಗಳ ಜೊತೆಗೆ ಕಿರುಗವಿತೆಗಳನ್ನು ಬರೆಯುವ ಮೂಲಕ ಭಿನ್ನತೆಯನ್ನು ವ್ಯಕ್ತಪಡಿಸಿದಲ್ಲದೆ ವಸ್ತುವೈವಿದ್ಯತೆ ಯನ್ನು ಕಾವ್ಯದಲ್ಲಿ ಕಾಣುತ್ತೇವೆ.

ರವಿ ಕಾಣದನ್ನು ಕವಿ ಕಾಣುತ್ತಾನೆ ಎನ್ನುವ ಉಕ್ತಿಗೆ ಸೂಕ್ತ ಉದಾಹರಣೆಯಾಗಿ ಕವಿ ಗುಣೇಶನು ಕಂಡುಬರುತ್ತಾನೆ. ಕಲ್ಪನಾ ಲಹರಿ ಇದೆ, ಭಾವುಕತೆಯಿದೆ, ಲಯ, ಪ್ರಾಸಗಳ ಬಳಕೆ ಕೂಡ ಈ ಸಂಕಲನದಲ್ಲಿ ಆಗಿದೆ. ದೃಢವಾದ ಗುರಿ, ಸಾಧಿಸುವ ಛಲ, ಸಹಜ ಕನಸು ಹೀಗೆಲ್ಲಾ ಕವಿ ತನ್ನ ಕಾವ್ಯದಲ್ಲಿ ಚಿಂತಿಸಿರುವುದು ಮೆಚ್ಚುವಂತಹದ್ದು. ಅಜ್ಜ-ಅಜ್ಜಿ, ಅಪ್ಪ-ಅಮ್ಮ, ಅಕ್ಕ-ತಂಗಿ ಹೀಗೆ ತನ್ನ ಕುಟುಂಬದ ಒಡನಾಡಿ ಗಳೆಲ್ಲರನ್ನು ಕಾವ್ಯದಲ್ಲಿ ಎಳೆದು ತಂದು ಕಾವ್ಯದಲ್ಲಿ ಆಪ್ತತೆಯನ್ನುಂಟು ಮಾಡಿರುವುದಲ್ಲದೆ, ವಯೋಸಹಜ ಕಲ್ಪನೆಗಳಿಗೆ, ಭಾವನೆಗಳಿಗೆ ಕಾವ್ಯದ ರೂಪ ಕೊಡಲು ಪ್ರಯತ್ನಿಸಿರುವುದು ಸ್ಪಷ್ಟವಾಗಿ ಕಾಣುತ್ತೇವೆ. ಮನುಷತ್ವದ ಪ್ರಜ್ಞೆ, ಭಾರತೀಯತೆ ಪ್ರಜ್ಞೆ ಕವಿ ಜವಾಬ್ದಾರಿಯುತ ಸ್ಥಾನದಲ್ಲಿದ್ದಾನೆ ಎಂಬುದು ಸಾಬಿತುಪಡಿಸುತ್ತದೆ. ವಿದ್ಯಾರ್ಥಿದೆಸೆಯಿಂದಲೆ ಕಾವ್ಯದ ಮೂಲಕ ಸಾಹಿತ್ಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವುದು ಕವಿ ಗುಣೇಶ ಭಾರತೀಯನು ನಾಳಿನ ಸತ್ಪಜೆಯಾಗಬೇಕೆಂಬ ಸದಾಶಯ ಹೊಂದಿರುವುದು ಸ್ಪಷ್ಟವಾಗುತ್ತದೆ. ಇನ್ನು ಹೆಚ್ಚಿನ ಕಾವ್ಯದ ಅಧ್ಯಾಯನದಿಂದ ಕಾವ್ಯ ರಚಿಸುವ ಶಕ್ತಿಯ ಹರವು ವಿಸ್ತರಿಸಿಕೊಂಡು ಕನ್ನಡ ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಲೆಂದು ಶುಭ ಹಾರೈಸುತ್ತೇನೆ.

ಡಾ.ಸಂಜೀವಕುಮಾರ ಅತಿವಾಳೆ.ಬೀದರ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ