ಭವಿಷ್ಯದ ಐದು ವರ್ಷಗಳಲ್ಲಿ.
– ವೀಣಾ ಹೇಮಂತ್ ಗೌಡ ಪಾಟೀಲ್.
ಅತ್ಯಂತ ಸಂಭ್ರಮದಿಂದ ಆಚರಿಸಬೇಕಾಗಿದ್ದ ತನ್ನ 25ನೇ ಹುಟ್ಟುಹಬ್ಬದ ದಿನ ಆ ಯುವಕ ಅಸಂತೃಪ್ತಿಯಿಂದ ಬಳಲುತ್ತಾ ಕುಳಿತಿದ್ದ. ಆತನಿಗೆ ಅತಿ ದೊಡ್ಡ ಕನಸುಗಳಿದ್ದವಾದರೂ ಆತನ ಕೆಟ್ಟ ಚಟಗಳು ಆತನ ದಿನದ ಬಹುಪಾಲನ್ನು ನುಂಗಿ ಹಾಕುತ್ತಿದ್ದವು. ಈ ಕುರಿತು ಬಹಳವೇ ಯೋಚಿಸುತ್ತಿದ್ದ ಆತನಿಗೆ ಪರಿಹಾರ ಮಾತ್ರ ದೊರೆತಿರಲಿಲ್ಲ… ಇದು ಆತನನ್ನು ಮತ್ತಷ್ಟು ಉದಾಸೀನನನ್ನಾಗಿ ಮಾಡಿತ್ತು.
ಆತನ ಅನ್ಯ ಮನಸ್ಥಿತಿಯನ್ನು ಗಮನಿಸಿದ ಆತನ ಪ್ರೀತಿಯ ಅಜ್ಜ ಆತನಿಗೆ ಸರಳವಾದ ಆದರೆ ಅಷ್ಟೇ ಶಕ್ತಿಯುತವಾದ ಸಲಹೆಯೊಂದನ್ನು ಆತನಿಗೆ ನೀಡಿದ… “ಮುಂದಿನ ಐದು ವರ್ಷಗಳಲ್ಲಿ ನೀನು ಏನಾಗುವೆ ಎಂಬುದನ್ನು ನೀನು ಓದುವ ಪುಸ್ತಕಗಳು, ನಿನ್ನ ಜೊತೆಗಾರರು, ನೀನು ರೂಢಿಸಿಕೊಂಡ ಅಭ್ಯಾಸಗಳು, ನೀನು ಹೂಡಿಕೆ ಮಾಡುವ ಹಣ ಮತ್ತು ನಿನ್ನ ಬೆಳವಣಿಗೆಗಾಗಿ ನೀನು ಮಾಡುವ ತ್ಯಾಗಗಳು ನಿನ್ನ ಬದುಕಿನ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ” ಎಂದು ಆತ ಹೇಳಿದ.
ತನ್ನಜ್ಜ ಹೇಳಿದ ಈ ಮಾತುಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಆತ ತನ್ನ ಜೀವನಶೈಲಿಯನ್ನು ಬದಲಾಯಿಸಿಕೊಂಡು ತನ್ನ ಭವ್ಯ ಭವಿಷ್ಯದ ಸಾಧನೆಯ ಗುರಿಯತ್ತ ಗಮನವನ್ನು ಕೇಂದ್ರೀಕರಿಸಿ ಅದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಲಾರಂಭಿಸಿದ.
ಆತನ ಅಜ್ಜ ಹೇಳಿದ
ನೀನು ಓದಿದ ಪುಸ್ತಕಗಳು
ಆತ ಪುಸ್ತಕಗಳನ್ನು ಓದಲೆಂದೇ ಪ್ರತಿದಿನ ರಾತ್ರಿ ಕೆಲ ಸಮಯವನ್ನು ಮೀಸಲಾಗಿಟ್ಟ. ಮೊದಮೊದಲು ಲಘು ಕಾದಂಬರಿಗಳನ್ನು ಓದಲು ಆರಂಭಿಸಿದ ಆತ ನಿಧಾನವಾಗಿ ಜೀವನದ ಕುರಿತಾದ ವಿಭಿನ್ನ ಒಳನೋಟಗಳನ್ನು ಹೊಂದಿರುವ ಪುಸ್ತಕಗಳನ್ನು ಓದಲಾರಂಭಿಸಿದ. ನಾಯಕತ್ವ ಗುಣ,ಆರ್ಥಿಕ, ಸಾಮಾಜಿಕ ಮತ್ತು ವೈಯುಕ್ತಿಕ ಬೆಳವಣಿಗೆಗೆ ಅವಶ್ಯಕವಾದ ವ್ಯಕ್ತಿತ್ವ ವಿಕಸನದ ಪುಸ್ತಕಗಳು ಆತನ ಜ್ಞಾನದ ಹರಹನ್ನು ಹೆಚ್ಚಿಸಿದವು.ಮತ್ತಷ್ಟು ಅದ್ಭುತ ನಿರ್ಣಯಗಳನ್ನು ಕೈಗೊಳ್ಳುವ ಮತ್ತು ಪಾಲಿಸುವ ಮೂಲಕ ಜೀವನವನ್ನು ಅದ್ಭುತವಾಗಿ ಕಟ್ಟಿಕೊಳ್ಳಬಹುದು ಎಂಬ ಪುಸ್ತಕದಲ್ಲಿನ ಸೂಕ್ತಿಯೊಂದು ಆತನಿಗೆ ಸ್ಪೂರ್ತಿಯನ್ನು ತುಂಬಿ ಅಂತಹ ಸೂಕ್ತಿಗಳನ್ನು ಆತ ಬರೆದುಕೊಂಡು ಅವುಗಳನ್ನು ಬದುಕಿನಲ್ಲಿ ಪಾಲಿಸಲು ಆರಂಭಿಸಿದ. ಆತನ ಚಿಂತನೆಗಳ ಪರಿಣಾಮವಾಗಿ ಕೇವಲ ಒಂದೇ ವರ್ಷದಲ್ಲಿ ಆತ ಜ್ಞಾನ ಸಂಪತ್ತನ್ನು, ವೈಚಾರಿಕತೆಯನ್ನು ಹೊಂದಿದ ಹೊಸ ಮನುಷ್ಯನಾಗಿ ಪರಿವರ್ತಿತನಾಗಿದ್ದ.
ಆತ ಉಣ್ಣುವ ಆಹಾರ….
ಇದುವರೆಗೂ ತಾನು ಸೇವಿಸುತ್ತಿದ್ದ ಆಹಾರವನ್ನು ತ್ಯಜಿಸಿದ ಆತ ಒಳ್ಳೆಯ ಆರೋಗ್ಯಕರ ಆಹಾರಕ್ಕೆ ಆದ್ಯತೆ ನೀಡಿ ತಾನೇ ಅಡುಗೆ ಮಾಡಲು ಆರಂಭಿಸಿದ. ಪೋಷಕಾಂಶಯುಕ್ತ ಆಹಾರ ಆತನ ದೇಹಕ್ಕೆ ಅತ್ಯಗತ್ಯ ಎಂಬುದನ್ನರಿತ ಆತ ಆಹಾರದಲ್ಲಿ ಕೈಗೊಂಡ ಬದಲಾವಣೆ ತನ್ನ ಬದುಕಿನಲ್ಲಿ ಬೀರಿದ ಧನಾತ್ಮಕ ಪರಿಣಾಮದಿಂದಾಗಿ ಆರೋಗ್ಯವಂತ ಶರೀರವೇ ತನ್ನ ಅತಿ ದೊಡ್ಡ ಅಸ್ತ್ರ ಎಂದು ತಿಳಿದು ಹಣ್ಣು,ತರಕಾರಿಗಳು ಮತ್ತು ಪ್ರೋಟೀನ್ ಭರಿತ ಆಹಾರವನ್ನು ತನ್ನ ದೈನಂದಿನ ಊಟದಲ್ಲಿ ಬಳಸಲಾರಂಭಿಸಿದ. ಸತ್ವಯುತವಾದ ಆಹಾರ ಆತನ ಚೈತನ್ಯವನ್ನು ಹೆಚ್ಚಿಸಿ ಮುಖದ ಹೊಳಪು ಮತ್ತು ದೇಹದ ಕಾಂತಿಯನ್ನು ಕೂಡ ಹೆಚ್ಚಿಸಿತು. ಸಾತ್ವಿಕ ಆಹಾರವು ಮಾನಸಿಕವಾಗಿ ಶಾಂತಿಯನ್ನು ಹೆಚ್ಚಿಸಿ ಆತನಲ್ಲಿ ದೈಹಿಕ ಬಲವನ್ನು ತುಂಬಿತು.
ಆತನ ಹವ್ಯಾಸಗಳು…. ಒಳ್ಳೆಯ ಹವ್ಯಾಸಗಳನ್ನು ಹೊಂದುವುದು ಮೊದಮೊದಲು ತುಸು ಕಷ್ಟ ಎಂದೆನಿಸಿದರೂ ಆತ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳುವಲ್ಲಿ ಪುಟ್ಟ ಪುಟ್ಟ ಹೆಜ್ಜೆಗಳನ್ನು ಇರಿಸಲಾರಂಭಿಸಿದ. ನಸುಕಿನ ಜಾವದಲ್ಲಿಯೇ ಏಳಲಾರಂಭಿಸಿದ ಆತ ತನ್ನ ಆ ದಿನದ ಗುರಿಗಳನ್ನು ಒಂದು ಪುಸ್ತಕದಲ್ಲಿ ಬರೆಯುತ್ತಿದ್ದ. ಪ್ರತಿ ಮುಂಜಾನೆ ಕೃತಜ್ಞತಾಪೂರ್ವಕವಾಗಿ ದೇವರನ್ನು ನೆನೆಯುತ್ತಿದ್ದ ಆತ ಒಳ್ಳೆಯ ಹವ್ಯಾಸಗಳನ್ನು ಒಂದೊಂದಾಗಿ ತನ್ನದಾಗಿಸಿಕೊಂಡ. ದೈನಂದಿನ ಆತನ ವ್ಯಾಯಾಮ, ನಡಿಗೆಗಳು ಆತನ ಮನಸ್ಸನ್ನು ಉಲ್ಲಸಿತವಾಗಿರಿಸಲು, ಮತ್ತು ಬದುಕಿನಲ್ಲಿ ಕ್ರಮಬದ್ಧತೆಯನ್ನು ತರಲು ಸಹಾಯಕವಾದವು. ಕೆಲವೇ ದಿನಗಳಲ್ಲಿ ಆತನ ಒಳ್ಳೆಯ ಹವ್ಯಾಸಗಳು ಆತನ ದೈನಂದಿನ ಬದುಕಿನ ಅತ್ಯವಶ್ಯಕ ಕ್ರಿಯೆಗಳಾದವು.ಇದು ಆತನಲ್ಲಿ ಹೆಚ್ಚಿನ ಶಿಸ್ತನ್ನು, ಸಮರ್ಪಕತೆಯನ್ನು ಮತ್ತು ಉತ್ಪಾದಕತೆಯನ್ನು ಹೆಚ್ಚಿಸಿತ್ತು…
ಪರಿಣಾಮವಾಗಿ ಈ ಹಿಂದೆ ಮಾಡಲಸಾಧ್ಯವೆನಿಸಿದ ಎಷ್ಟೋ ಕೆಲಸಗಳು ಲೀಲಾಜಾಲವಾಗಿ ಆತನಿಂದ ಮಾಡಲ್ಪಟ್ಟವು.
ಆತನ ಸ್ನೇಹ ಬಳಗ… ಆತ ತನ್ನ ಬಿಡುವಿನ ಸಮಯವನ್ನು ಕಳೆಯುತ್ತಿದ್ದ ಸ್ನೇಹ ಬಳಗದಲ್ಲಿ ಕೇವಲ ಹಾಳು ಹರಟೆಯಲ್ಲಿ ಬದುಕನ್ನು ಕಳೆಯುವವರಿದ್ದರು. ತನ್ನ ಬದುಕಿಗೆ ಸ್ಪೂರ್ತಿಯನ್ನೀಯುವ ಮತ್ತು ತನ್ನ ಬೆಂಬಲದಿಂದ ಬದುಕನ್ನು ಉನ್ನತಗೊಳಿಸಿಕೊಳ್ಳುವ ಸ್ನೇಹಿತರ ವಲಯದಲ್ಲಿ ತನ್ನನ್ನು ತಾನು ಗುರುತಿಸಿಕೊಂಡ ಆತ ತನ್ನ ಗುರಿಯೆಡೆಗೆ ಮತ್ತಷ್ಟು ವೇಗದಿಂದ ಸಾಗತೊಡಗಿದ.
ಪರಿಣಾಮವಾಗಿ ಆತನ ಹೊಸ ಸ್ನೇಹಿತರ ಬಳಗ ಆತನ ಅಭಿವೃದ್ಧಿಗೆ ಕಾರಣವಾಯಿತು.ಪರಸ್ಪರ ಸ್ಪರ್ಧಾ ಸ್ಪೂರ್ತಿಯಿಂದ ಅವರೆಲ್ಲರೂ ತಮ್ಮ ಹೊಸ ಸವಾಲುಗಳನ್ನು ಎದುರಿಸಲು ಸಿದ್ದರಾಗಿ ಯಶಸ್ಸಿನೆಡೆ ಮುನ್ನಡೆದರು.
ಆತನ ದೈಹಿಕ ಅಂಗಸಾಧನೆ…. ಮೊದಮೊದಲು ಸ್ನೇಹಿತರೊಂದಿಗೆ ಒಂದೆರಡು ಕಿಲೋಮೀಟರ್ ನಡೆಯಲು ಪ್ರಯತ್ನಿಸುತ್ತಿದ್ದ ಆತ ನಡಿಗೆಯ ಮಹತ್ವಗಳನ್ನು ಅರಿತುಕೊಂಡ. ವ್ಯಾಯಾಮ ಬದುಕಿನಲ್ಲಿ ತುಂಬುವ ಹುಮ್ಮಸ್ಸಿನಿಂದ ಉತ್ತೇಜಿತನಾದ ಆತ ತನ್ನ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ವ್ಯಾಯಾಮ ಶಾಲೆಗೆ ಸೇರಿಕೊಂಡ… ಪರಿಣಾಮವಾಗಿ ಹೆಚ್ಚಿದ ದೈಹಿಕ ಸಾಮರ್ಥ್ಯದಿಂದ ಆತ ಮತ್ತಷ್ಟು ಆತ್ಮವಿಶ್ವಾಸವನ್ನು ಪಡೆದುಕೊಂಡ.
ಆತ ಹೂಡಿಕೆ ಮಾಡುವ ಹಣ… ತನ್ನ ಓದುವಿಕೆಯ ಮೂಲಕ ವಾಣಿಜ್ಯಾತ್ಮಕ ವಿಷಯಗಳ ಕುರಿತು ಅಪಾರ ಜ್ಞಾನವನ್ನು ಸಂಪಾದಿಸಿದ ಆತ ಎಲ್ಲೆಲ್ಲಿ ಹಣವನ್ನು ಹೂಡಿದರೆ, ಉಳಿತಾಯ ಮಾಡಿದರೆ ಲಾಭದಾಯಕ ಎಂಬುದನ್ನು ಅರಿತಿದ್ದು ಅದರಂತೆ ಹೂಡಿಕೆ ಮಾಡಿದನು. ಆರ್ಥಿಕ ವ್ಯವಹಾರಗಳ ನಿರ್ವಹಣೆಯನ್ನು ಮಾಡುವ ತರಬೇತಿಗೆ ಹಾಜರಾಗಿ ತನ್ನ ವಾಣಿಜ್ಯ ಜ್ಞಾನವನ್ನು ವಿಸ್ತರಿಸಿಕೊಂಡು ಆರ್ಥಿಕ ಸ್ಥಿತಿಗತಿಗಳನ್ನು ಉತ್ತಮಪಡಿಸಿಕೊಂಡನು. ಪರಿಣಾಮವಾಗಿ ಮುಂದಿನ ಐದು ವರ್ಷಗಳಲ್ಲಿ ಆತನಲ್ಲಿ ಸಾಕಷ್ಟು ಗಳಿಕೆಯ ಹಣದ ಜೊತೆಗೆ ಉಳಿಕೆಯ ಹಣವು ಇದ್ದು ಅದು ಆತನಿಗೆ ಪಾರ್ಶ್ವ ಆದಾಯಕ್ಕೆ ದಾರಿ ಮಾಡಿಕೊಟ್ಟಿತು.
ಪರಿಣಾಮವಾಗಿ ಆತ ತನ್ನ ಗುರಿಯನ್ನು ಮುಟ್ಟಲು ಬೇಕಾಗುವ ಓದು, ಪ್ರಯಾಣ ಮುಂತಾದ ಖರ್ಚು ವೆಚ್ಚಗಳಿಗೆ ಸಾಕಷ್ಟು ಹಣವನ್ನು ಹೊಂದಿದ್ದ.
ಆತ ಮಾಡುವ ತ್ಯಾಗಗಳು… ಉನ್ನತ ಯಶಸ್ಸಿಗೆ ಬೇಕಾಗುವುದು ಕೇವಲ ಬದ್ಧತೆ ಮತ್ತು ನಿರಂತರ ಪರಿಶ್ರಮ ಮಾತ್ರವಲ್ಲ ಅದರ ಜೊತೆಗೆ ಕೆಲ ಅನವಶ್ಯಕ ವಸ್ತು ಮತ್ತು ವಿಷಯಗಳನ್ನು ತ್ಯಾಗ ಮಾಡುವುದು ಎಂಬುದು ಈಗಾಗಲೇ ಆತನಿಗೆ ಅರಿವಾಗಿತ್ತು. ಆತ ದುಬಾರಿ ವೆಚ್ಚದ ಮೋಜಿನ ಔತಣ ಕೂಟಗಳಿಗೆ ಹೋಗುವುದನ್ನು ನಿಲ್ಲಿಸಿದ, ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಹೆಚ್ಚಿನ ಸಮಯ ಸೋರಿ ಹೋಗುವುದನ್ನು ಗಮನಿಸಿ ಅಲ್ಲಿಯೂ ಕೂಡ ಇಂತಿಷ್ಟೇ ಸಮಯ ಎಂದು ಕಟ್ಟುನಿಟ್ಟಾಗಿ ಸಮಯದ ಮಿತಿ ಹಾಕಿಕೊಂಡು ಅವುಗಳನ್ನು ಬಳಸಲಾರಂಭಿಸಿದ. ಮೊದಮೊದಲು ತನಗೆ ತಾನು ಹಾಕಿಕೊಳ್ಳುವ ಈ ರೀತಿಯ ಮಿತಿಗಳನ್ನು ಪಾಲಿಸಲು ಸಾಕಷ್ಟು ಕಿರಿಕಿರಿ ಎನ್ನಿಸಿದರೂ ಕೂಡ ಗುರಿ ಸಾಧನೆಗೆ ಈ ತ್ಯಾಗಗಳನ್ನು ಮಾಡುವುದು ಅತ್ಯವಶ್ಯಕ ಎಂಬ ಉದ್ದೇಶದಿಂದ ಆ ಕಿರಿಕಿರಿಗಳನ್ನು ಪರಿಗಣನೆಗೆ ತೆಗೆದುಕೊಳ್ಳದೇ ಧನಾತ್ಮಕ ಮತ್ತು ಮೌಲ್ಯವರ್ಧಿತ ವಿಷಯಗಳತ್ತ ಚಿತ್ತಹರಿಸಿದ
ಪರಿಣಾಮವಾಗಿ ಉತ್ತಮ ಫಲಿತಾಂಶವನ್ನು ಪಡೆದ.
ಮುಂದಿನ ಐದು ವರ್ಷಗಳಲ್ಲಿ ತನ್ನ ಅಗಾಧ ಬೆಳವಣಿಗೆಯನ್ನು ಒಂದು ಬಾರಿ ಅವಲೋಕಿಸಿದ ಆತನಿಗೆ ತನ್ನನ್ನು ಬೆಂಬಲಿಸುವ ಸ್ನೇಹಿತರ ಮತ್ತು ಸಂಬಂಧಿಗಳ ಬಳಗ, ತೃಪ್ತಿದಾಯಕ ಜೀವನ ಶೈಲಿ ಆರೋಗ್ಯಕರ ಮತ್ತು ಬಲಿಷ್ಠ ಸಂಬಂಧಗಳು ಒಳ್ಳೆಯ ಉದ್ಯೋಗ, ವ್ಯವಹಾರ ಮತ್ತು ಆರ್ಥಿಕ ಸದೃಢತೆ ಯನ್ನು ಹೊಂದಿರುವುದು ಆತ್ಮತೃಪ್ತಿಯನ್ನು ತಂದಿತ್ತು.
ಅದೊಂದು ದಿನ ಕುಟುಂಬದ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಆತನ ಈ ಬೆಳವಣಿಗೆಯನ್ನು ಕಂಡು ‘ಏನು ಮಾಡಿದೆ ನೀನು’ ಎಂದು ಆತನ ಅಜ್ಜ ಕೇಳಲು ನಸುನಗುತ್ತಾ ಅಜ್ಜನಿಗೆ ಆತ ಉತ್ತರಿಸಿದ್ದು ಹೀಗೆ
” ನೀವು ಹೇಳಿದ ಮಾತುಗಳನ್ನು ನಾನು ಅಕ್ಷರಶಃ ಪಾಲಿಸಿದೆ… ಓದಿನ ಮೂಲಕ ಒಳ್ಳೆಯ ಪುಸ್ತಕಗಳ ಜ್ಞಾನವನ್ನು ಪಡೆದೆ, ಸತ್ವಯುತ ಆಹಾರ ಸೇವನೆ ಮೂಲಕ ಉತ್ತಮ ಆರೋಗ್ಯವನ್ನು ಹೊಂದಿದೆ. ಒಳ್ಳೆಯ ಹವ್ಯಾಸಗಳು ನನ್ನನ್ನು ಇನ್ನಷ್ಟು ಉತ್ತಮ ವ್ಯಕ್ತಿಯನ್ನಾಗಿ ನಿರ್ಮಿಸಿದವು ದೈಹಿಕ ವ್ಯಾಯಾಮ ನನ್ನನ್ನು ಕ್ರಿಯಾಶೀಲ ಮತ್ತು ಸದೃಢ ವ್ಯಕ್ತಿಯನ್ನಾಗಿಸಿದವು, ಒಳ್ಳೆಯ ಸ್ನೇಹಿತರ ಸಂಗ ನನ್ನನ್ನು ಬೆಂಬಲಿಸಿತು ಎಂದು ಹೇಳಿದಾಗ ಅಜ್ಜ ಅತ್ಯಂತ ತೃಪ್ತಿಯಿಂದ ಆತನ ಬೆನ್ನು ಚಪ್ಪರಿಸಿದನು. ಅಜ್ಜನ ಮುಖದಲ್ಲಿನ ತೃಪ್ತಿಯ ನಗೆ ಮೊಮ್ಮಗನ ಮುಖದಲ್ಲಿಯೂ ಪ್ರತಿಫಲಿಸಿತು.
ನೋಡಿದಿರಾ ಸ್ನೇಹಿತರೆ, ಬದುಕಿನಲ್ಲಿ ನಾವು ಕೈಗೊಳ್ಳುವ ಕೆಲವು ಒಳ್ಳೆಯ ನಿರ್ಣಯಗಳು ನಮ್ಮ ಬದುಕಿನ ದಿಕ್ಕನ್ನೇ ಬದಲಾಯಿಸಿ ಯಶಸ್ಸಿನತ್ತ ಕೊಂಡೊಯ್ಯುತ್ತವೆ ಎಂಬುದಕ್ಕೆ ಮೇಲಿನ ಕಥೆಯೇ ಸಾಕ್ಷಿ. ಅಂತಹ ಉತ್ತಮ ನಿರ್ಣಯಗಳನ್ನು ನಾವು ಕೂಡ ನಮ್ಮ ಬದುಕಿನಲ್ಲಿ ಕೈಗೊಳ್ಳುವ ಮೂಲಕ ಬದುಕನ್ನು ಉನ್ನತವಾಗಿ ಕಟ್ಟಿಕೊಳ್ಳೋಣ ಮತ್ತು ಬೇರೆಯವರಿಗೆ ಸ್ಪೂರ್ತಿಯಾಗೋಣ ಎಂಬ ಆಶಯದೊಂದಿಗೆ
– ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್.