ಬೀದರ ಜಿಲ್ಲೆಗೆ ಕನ್ನಡ ಸಾಹಿತ್ಯದ ಕೊಡುಗೆ.
ಒಂದು ದೇಶದ ಪ್ರಗತಿಯನ್ನು ಪರಿಗಣಿಸಬೇಕಾದರೆ ಕೇವಲ ಆರ್ಥಿಕ ಸ್ಥಿತಿಯನ್ನು ಕಂಡು ನಿರ್ಧರಿಸಲಾಗದು, ಅದರೊಂದಿಗೆ ಸಾಹಿತ್ಯಕ ಸಾಂಸ್ಕೃತಿಕ ಸ್ಥಿತಿಯನ್ನು
ಪರಿಗಣಿಸಬೇಕಾಗುತ್ತದೆ. ಆವಾಗ ಮಾತ್ರ ದೇಶದ ಸಮಗ್ರತೆಯನ್ನು ಪರಿಗಣಿಸಲು ಸಾಧ್ಯವಾಗುತ್ತದೆ. ಅಂತೆಯೇ ಬೀದರ ಜಿಲ್ಲೆಯ ಪ್ರಗತಿಗೆ ಸಾಹಿತ್ಯ, ಸಂಸ್ಕೃತಿಯ ಕೊಡುಗೆಯೂ ಮಹತ್ತರವಾದುದ್ದಾಗಿದೆ.
ಬೀದರ ಒಂದು ಐತಿಹಾಸಿಕವಾದ ಜಿಲ್ಲೆಯಾಗಿದ್ದರೂ ಅನೇಕ ಸಾಹಿತ್ಯಕ ಅಂಶಗಳಿಂದಲೂ ಹೆಸರಾಗಿದೆ. ಆಗುತ್ತಲೇ ಇದೆ. ಅಳ್ವಿಕೆ ನಡೆಸಿದ ಅನೇಕ ರಾಜ ಮಹಾ ರಾಜರು ಸಾಹಿತ್ಯಕ್ಕೆ ತನ್ನದೇ ಆದ ಮನ್ನಣೆ ನೀಡುತ್ತಲೆ ಬಂದಿದ್ದಾರೆ. ಈ ಭಾಗದಲ್ಲಿ ಹಳೆಗನ್ನಡ ಕಾಲದ ಮೊದಲ ಗದ್ಯಕೃತಿಯೆನಿಸಿದ ‘ವಡ್ಡಾರಾಧನೆ’ ಯ ರಚನೆಕಾರ ಬೀದರ ಜಿಲ್ಲೆಯ ಹಳ್ಳಿಖೇಡ, ಗ್ರಾಮಕ್ಕೆ ಸೇರಿದವನಾಗಿ ದ್ದಾನೆಂದು ದಾಖಲೆಗಳಿಂದ ಸಾಬೀತಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.
ಕಲ್ಯಾಣಿ ಚಾಲುಕ್ಯರು ಸಾಹಿತ್ಯಕ ಚಟುವಟಿಕೆಗಳಿಗೆ ಎಲ್ಲಾ ರೀತಿಯ ನೆರವು ನೀಡಿದರು. ಅದರಿಂದಾಗಿ ಕಾಶ್ಮೀರದಿಂದ
ಬಂದ ಬಿಲ್ದಣನು ‘ಬಿಲ್ದಣ ಕಾವ್ಯ ಹಾಗೂ ವಿಕ್ರಮಾಂಕದೇವ ಚರಿತ’ ಎಂಬ ಎರಡು ಗ್ರಂಥಗಳನ್ನು ರಚಿಸಲು ಸಾಧ್ಯ ವಾಯಿತು. ವಿಜ್ಞಾನೇಶ್ವರರು ‘ಮಿತಾಕ್ಷರ ಸಂಹಿತ’ ಎಂಬ ಹಿಂದೂ ಕಾಯ್ದೆಯ ಮಹತ್ವದ ಗ್ರಂಥವನ್ನು ರಚಿಸಿ ಮಹತ್ವದ ಕೊಡುಗ ನೀಡಿದ್ದಾರೆ. ಆರನೇ ವಿಕ್ರಮಾದಿತ್ಯನ ಮಗನಾದ ಮೂರನೇ ಸೋಮೇಶ್ವರನು ‘ಮಾನಸೋಲ್ಲಾಸ ‘ ಎಂಬ ವಿಶ್ವಕೋಶವನ್ನು ರಚಿಸಿದ್ದಾನೆ.
೧೨ನೇ ಶತಮಾನದ ತುಂಬ ಪ್ರಭಾವಶಾಲಿ ಸಾಹಿತ್ಯ ವೆಂದರೆ ವಚನ ಸಾಹಿತ್ಯವಾ ಗಿದೆ. ಇದು ವಿಶ್ವ ಸಾಹಿತ್ಯಕ್ಕೆ ನೀಡಿದ ಬಹುದೊಡ್ಡ ಕೊಡುಗೆಯಾಗಿದೆ. ಬಸವಣ್ಣ, ಅಕ್ಕ ಮಹಾದೇವಿ.
ಅಲ್ಲಮಪ್ರಭು, ಸೊನ್ನಲಿಂಗ ಸಿದ್ಧರಾಮೇಶ್ವರ, ಮಾದರ ಚನ್ನಯ್ಯ,ಉರಿಲಿಂಗ ಪೆದ್ದಿ, ಸಮಗಾರ ಹರಳ್ಯ, ನೂಲಿ ಚಂದಯ್ಯ, ಮೊಳಿಗೆ ಮಾರಯ್ಯ, ಅಂಬಿಗರ ಚೌಡಯ್ಯ, ಬೊಮ್ಮರಿ ಕಿನ್ನಯ್ಯ, ಮುಂತಾದ ಸುಮಾರು 770 ಕ್ಕೂ ಹೆಚ್ಚು ವಚನಕಾರರು ಸಾವಿರಾರು ವಚನಗಳನ್ನು ರಚಿಸಿ ಬಸವಕಲ್ಯಾಣ ಮತ್ತು ಬೀದರ ಜಿಲ್ಲೆಯ ಕೀರ್ತಿ ದಶದಿಕ್ಕುಗಳಲ್ಲಿ ಹರಡುವಂತೆ ಮಾಡಿದ್ದಾರೆ.
ಬಸವಕಲ್ಯಾಣದಲ್ಲಿ ಅಂದು ಅಂತರ್ಜಾತಿ ವಿವಾಹದ ಮೂಲಕ ನಡೆದ ಹೋದ ಸಮಾನತೆಯ ಕ್ರಾಂತಿಗೆ ಬಸವಣ್ಣನವರು ಕಾರಣರಾಗಿದ್ದಾರೆ. ಮತ್ತು ಈ
12ನೇ ಶತಮಾನದಲ್ಲಿಯೂ ಕನ್ನಡ ಸಾಹಿತ್ಯ ಬೆಳೆದು ಬಂದಿರುವುದು ಕಾಣುತ್ತೇವೆ.
ನಂತರ ಬಹುಮನಿ ಅರಸರ ಕಾಲದಲ್ಲಿಯೂ ಅನೇಕ ಸಾಹಿತಿಗಳಿಗೆ ಮನ್ನಣೆಯಿತ್ತು ಆದರೆ ಅನ್ಯ ಭಾಷಿಕ ಬರಹಗಾರರಿಗೆ ಹೆಚ್ಚಿನ ಪ್ರೋತ್ಸಾಹವಿದ್ದುದರಿಂದ ಕನ್ನಡ ಸಾಹಿತ್ಯಕ್ಕೆ ಹೊಡೆತ ಬಿತ್ತೆಂದೇ ಹೇಳಬಹುದು.
ಆದಿ ಅನಾದಿ ಕಾಲದಿಂದಲೂ ಬೀದರ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯದ ಮೂಲಕ ಜನರಬಬದುಕು ಹಸನಾದುದು ಕಾಣುತ್ತೇವೆ. ಭಾಷೆ ಮತ್ತು ಸಾಹಿತ್ಯ ಜನರ ಜೀವನಾಡಿ ಯಾಗಿ ಪ್ರವಹಿಸುತ್ತಾ ಬರುತ್ತಿದೆ. ಆದರೂ ಮಧ್ಯದಲ್ಲಿ ರಾಜಕೀಯ ಧಾರ್ಮಿಕ ಪ್ರಭಾವಗಳಿಗೆ, ಸ್ಥಿತ್ಯಂತರಗಳಿಗೆ ಒಳಗಾಗಿ ಸುಂದರ, ಸರಳವಾದ ಕನ್ನಡ ಸಾಹಿತ್ಯವು ತನ್ನ ದಾರಿಯಲ್ಲಿ ಕಂಟಕವನ್ನು ಎದುರಿಸಿರುವುದು ಎದ್ದು ಕಾಣುತ್ತೇವೆ. ಹಾಗಾಗಿ ಅದು ಮತ್ತೊಮ್ಮೆ ಪ್ರವರ್ಧಮಾನಕ್ಕೆ ಬರಲು ತುಂಬಾ ವಿಳಂಬವಾಗಿರುವುದು ಸ್ಪಷ್ಟವಾಗುತ್ತದೆ.
ಬೀದರ ಜಿಲ್ಲೆಯಲ್ಲಿ ಅನ್ಯಭಾಷೆಗಳಾದ ಉರ್ದು, ಪಾರ್ಷಿ, ಮರಾಠಿ, ತೆಲುಗುವಿನ ದಟ್ಟ ಪ್ರಭಾವದಿಂದ ತನ್ನದೇ ಆದ ಸ್ವಂತಿಕೆ ಉಳಿಸಿಕೊಳ್ಳಲಾಗದೆ, ಮಿಶ್ರಿತ ಭಾಷೆಯಾಗಿ
ಬೆಳೆದು ಬಂದಿರುವುದು ನೋಡುತ್ತೇವೆ. ಹಾಗಾಗಿ ಇದೊಂದು ವೈಶಿಷ್ಟ್ಯಪೂರ್ಣವಾಗಿ ರೂಪಗೊಂಡಿದೆ.
ಇಲ್ಲಿ ಸಾಹಿತ್ಯವು ಬರಹ ರೂಪಕ್ಕೆ ಬರಲು ತುಂಬಾ ವಿಳಂಬವಾಗಿದ್ದರೂ ಕೂಡ ಅನೇಕ ಅನುಭಾವಿಗಳು, ಶರಣರು, ಸಂತರು, ತಮ್ಮದೇ ಆದ ರೀತಿಯಲ್ಲಿ ಸಾಹಿತ್ಯವನ್ನು ರಚಿಸಿ ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ.ಜಿಲ್ಲೆಯ ಜನಪದ ಸಾಹಿತ್ಯವು ಜಾನಪದರ ಮೌಖಿಕ ಪರಂಪರೆಯಲ್ಲಿ ಸಾಹಿತ್ಯದ ಮೂಲಕ ಮಹತ್ವದ ಕೊಡುಗೆಯನ್ನು ನೀಡಿದೆ.
ಕನ್ನಡ ಭಾಷೆಯ ಹೆಸರಿನೊಂದಿಗೆ
ಸಾಹಿತ್ಯಕವಾಗಿ ಜಿಲ್ಲೆಗೆ ಕೊಡುಗೆ ನೀಡಿದ್ದವರಲ್ಲಿ ಭಾಲ್ಕಿಯ ಚನ್ನಬಸವ ಪಟ್ಟದ್ದೇವರು ಪ್ರಮುಖರಾಗಿದ್ದಾರೆ.
ಹಾಗೆಯೇ ಮಹಾರಾಷ್ಟ್ರ ಸೋಲಾಪುರದ ಮೂಲದ ಕನ್ನಡ ಸಾಹಿತಿ ಜಯದೇವಿತಾಯಿ ಲಿಗಾಡೆ, ಮರಾಠವಾಡ ಪ್ರಾಂತ್ಯದ ಪ್ರಭುರಾವ
ಕಂಬಳಿವಾಲೆ, ಭೀಮಣ್ಣ ಖಂಡ್ರೆ, ಸೇರಿದಂತೆ ಅನೇಕ ದುರಿಣರು ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸಿ ಈ ಭಾಗದಲ್ಲಿ ಸಾಹಿತ್ಯ ಬೆಳವಣಿಗೆಗೆ ಕಾರಣರಾಗಿದ್ದಾರೆ. ನಂತರ ವಸಂತ ಕುಷ್ಟಗಿ,
ಬಿಟಿ ಸಾಸನೂರು, ಹಣಮಂತಪ್ಪ ಪಾಟೀಲ, ಪಂಚಾಕ್ಷರಿ ಪುಣ್ಯಶೆಟ್ಟಿ, ರಾಜ ಮಾಸ್ತರ, ಸಿದ್ಧಲಿಂಗಪ್ಪ ಕಾಕನಾಳೆ ಹೀಗೆ ಅನೇಕ ಮಹನೀಯರು ಆ ಕಾಲದಲ್ಲಿಯೇ ಕನ್ನಡ ಭಾಷೆ, ಸಾಹಿತ್ಯದ ಮೂಲಕ ಮಹತ್ವದ ಕೊಡುಗೆ ಕೊಟ್ಟಿದ್ದಾರೆ. ಇಂತಹ ಮಹತ್ವದ ಹೆದ್ದಾರಿಯಲ್ಲಿ ಹೆಸರಿಸಲಾಗದ ಅನೇಕ ಮಹನೀಯರ ಕೊಡುಗೆ ಸ್ಮರಣಾರ್ಹವಾದುದಾಗಿದೆ.
ನಂತರದ ದಿನಗಳಲ್ಲಿ ಕನ್ನಡ ಸಾಹಿತ್ಯದಲ್ಲಿ ನವೋದಯ, ಪ್ರಗತಿಶೀಲ, ನವ್ಯ, ದಲಿತ, ಬಂಡಾಯದ ರೀತಿಯಲ್ಲಿ ಸಾಹಿತ್ಯ ರಚನೆಯಾಗಿರುವುದು ಕಾಣುತ್ತೇವೆ . ಆದರೆ ಬೀದರ ಜಿಲ್ಲೆಯಲ್ಲಿ ಸಾಹಿತ್ಯ ರಚನೆ ಈ ಸಂದರ್ಭದಲ್ಲಿ ತುಂಬಾ ವಿಳಂಬವಾಗಿದೆ. ಅದಕ್ಕೆ ಸ್ಪಷ್ಟವಾದ ಕಾರಣವೆಂದರೆ ಹೈದ್ರಾಬಾದ ನಿಜಾಮನ ಆಡಳಿತವಾಗಿದೆ. ಉರ್ದು ಭಾಷೆಯ ಹೆರಿಕೆಯಿಂದಾಗಿ ಕನ್ನಡದಲ್ಲಿ ಸಾಹಿತ್ಯ ರಚನೆ ಸಾಧ್ಯವಾಗದೇ ಹೋಗಿದೆ. ನಂತರದಲ್ಲಿ ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆದವು. ಅಂತಹ ಪ್ರಯತ್ನವಾದಿಗಳಾಗಿ ಹೊರ ಹೊಮ್ಮಿದವರಲ್ಲಿ ಡಾ.ಮಾಣಿಕರಾವ ಧನಶ್ರೀ ದಿ. ಬಸವರಾಜ ಸೈನಿರ, ಡಾ. ಜಿ.ಬಿ. ವಿಸಾಜಿ , ಕೆ.ಜಿ. ಮಾಶೆಟ್ಟಿ ಎದ್ದು ಕಾಣುತ್ತಾರೆ.
ನಂತರ ದಿನಗಳಲ್ಲಿ ಪ್ರೊ, ವೀರೇಂದ್ರ ಸಿಂಪಿ, ಎಂ.ಜಿ. ಗಂಗನಪಳ್ಳಿ, ಎಂ.ಜಿ. ದೇಶಪಾಂಡೆ, ದೇಶಾಂಶ ಹುಡಗಿ, ವಿ.ಎಂ. ಡಾಕುಳಗಿ, ಪಂಡಿತ ಬಸವರಾಜ ಹೀಗೆ ಅನೇಕರು ಸಾಹಿತ್ಯ ರಚನೆಯಲ್ಲಿ ತೊಡಗಿ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಈ ಜಿಲ್ಲೆಗೆ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಸಾಹಿತ್ಯವನ್ನೇ ಉಸಿರಾಗಿಸಿಕೊಂಡು ಅದರ ಮೂಲಕ ಜಿಲ್ಲೆಗೆ ಕೊಡುಗೆ ನೀಡುತ್ತಾ ಇರುವವರು ಅನೇಕರಿದ್ದಾರೆ.
ಅಂತಹವರಲ್ಲಿ ದಿ. ಯಶೋದಮ್ಮ ಸಿದ್ದಬಟ್ಟೆ ಚಂದ್ರಪ್ಪ ಹೆಬ್ಬಾಳಕರ್, ಎಸ್.ಎಮ್,ಜನವಾಡಕರ್, ಗುರುನಾಥ ಅಕ್ಕಣ್ಣ ಡಾ. ಸೋಮನಾಥ ನುಚ್ಚಾ, ಡಾ.ವೈಜಿನಾಥ ಭಂಡೆ, ಎಸ್. ಬಿ. ಜ್ಯಾಂತೆ, ಬಾ.ನಾ. ಸೋಲಾಪೂರೆ, ಡಾ ಪ್ರೇಮಾ ಸಿರ್ಸಿ, ಹೆಚ್. ಕಾಶಿನಾಥರೆಡ್ಡಿ,
ಸುಬ್ಬಣ್ಣಾ ಅಂಬೆಸಿಂಗೆ, ಭಾರತಿ ವಸ್ತ್ರದ ಮುಂತಾದವರಿ ದ್ದಾರೆ. ಪತ್ರಿಕೆಯ ಮೂಲಕ ಈ ನಿಟ್ಟಿಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿವಶರಣಪ್ಪ ವಾಲಿ, ಹೆಚ್.ಸಿ. ಖಡ್ಡೆ, ಶಿವರಾಜ ಕನಶೆಟ್ಟಿ ನಾಗಶೆಟ್ಟಿ ಧರಂಪೂರ, ಎಂ.ಪಿ. ಮುದಾಳೆ ಪ್ರಮುಖರಾಗಿದ್ದಾರೆ. ಮತ್ತು ಡಾ. ವಿಕ್ರಮ ವಿಸಾಜಿ,
ಡಾ. ಕಾಶಿನಾಥ ಅಂಬಲಗೆ, ನೀಲಾ, ಕೆ. ಕ್ಷಿತಿಜ್ ಬೀದರ, ಡಾ. ರಾಜೇಂದ್ರ ಯರನಾಳೆ, ಡಾ ಶಿವಗಂಗಾ ರುಮ್ಮಾ ಮುಂತಾದವರಿದ್ದಾರೆ. ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಜಿಲ್ಲೆಯ ಏಳಿಗೆಗೆ ಸಾಹಿತ್ಯದ ಮೂಲಕ ತನ್ನದೇ ಆದ ಕೊಡುಗೆಯನ್ನು ಸಾಹಿತಿಗಳು ನೀಡುತ್ತಿದ್ದಾರೆ. ದಿ.ಮ.ಮಾ. ಬೋರಾಳಕರ್,
ಶ್ರೀಕಾಂತ ಪಾಟೀಲ, ಯಶೋದಮ್ಮ ಸಿದ್ಧಬಟ್ಟೆಯವರ ಕೊಡುಗೆಯೂ ಗಣನೀಯವಾಗಿದೆ.ಮತ್ತು ಸಾಹಿತ್ಯ ರಚನೆಯಲ್ಲಿ ಸಾಹಿತಿಗಳು ಇಂದಿಗೂ ತಮ್ಮ ಬರವಣಿಗೆಯ ಮೂಲಕ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅಂಥವರಲ್ಲಿ ಎಂ.ಜಿ.ದೇಶಪಾಂಡೆ, ಡಾ. ರಘುಶಂಖ ಭಾತಂಬ್ರಾ, ಡಾ. ಬಸವರಾಜ ಬಲ್ಲೂರ, ವೀರಣ್ಣಾ ಮಂಠಾಳಕರ್, ಹಂಶಕವಿ, ವೀರಶೆಟ್ಟಿ ಎಂ.ಪಾಟೀಲ್, ಮಚ್ಚೇಂದ್ರ ಪಿ ಅಣಕಲ್, ಬಾಲಾಜಿ ಕುಂಬಾರ, ರಘುನಾಥ ಹಡಪದ, ರಮೇಶ ಬಿರಾದಾರ, ಶಿವಕುಮಾರ ಕಟ್ಟೆ, ಶಿವಕುಮಾರ ನಾಗವಾರ, ಡಾ. ವಜ್ರಾ ಪಾಟೀಲ, ಪ್ರೇಮಾ ಹೂಗಾರ, ಉಮಾದೇವಿ ಬಾಪೂರೆ,ಅಜೀತ ನೇಳಗೆ ಹೀಗೆ ಅನೇಕರು ಕಾವ್ಯ, ಕಥೆ, ಪ್ರಬಂಧ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ತಮ್ಮ ಬರಹವನ್ನು ಗಟ್ಟಿಗೊಳಿಸುತ್ತಾ ಸಾಗಿದ್ದಾರೆ. ಜಿಲ್ಲೆಯ ವಿವಿಧ ಸಮಸ್ಯೆಗಳ ಬಗ್ಗೆ ಐತಿಹಾಸಿಕತೆಯ ಬಗ್ಗೆ ಮಹತ್ವಗಳ ಬಗ್ಗೆ ನೂರಾರು ಕವಿಗಳು ಸಾಹಿತಿಗಳು ತಮ್ಮ ಲೇಖನಿಯ ಮೂಲಕ ಸೆರೆಹಿಡಿದಿದ್ದಾರೆ. ಆ ಮೂಲಕ ಜಿಲ್ಲೆಯ ಏಳೆಗೆ ತಮ್ಮದೆ ಕೊಡುಗೆ ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮೂರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು,
ಒಂದು ಅಖಿಲ ಭಾರತ ಜಾನಪದ ಸಮ್ಮೇಳನ ಹಾಗೂ 16 ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನಗಳು, ಎರಡು ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳಗಳು, ಒಂದು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿವೆ. ಡಾ| ಜಗನ್ನಾಥ ಹೆಬ್ಬಾಳೆ,
ಪ್ರೊ. ಸಿದ್ರಾಮಪ್ಪ ಮಾಸಿಮಾಡೆ, ಸುರೇಶ ಚನಶೆಟ್ಟಿ, ಡಾ. ಬಸವರಾಜ ಬಲ್ಲೂರ, ಡಾ.ಸಂಜೀವಕುಮಾರ ಅತಿವಾಳೆ, ಶಾಮರಾವ ನೆಲವಾಡೆ ಸೇರಿದಂತೆ ನೂರಾರು ಕನ್ನಡಾಭಿಮಾನಿಗಳು ಸೇರಿ ಇಂತಹ ಮಹತ್ವದ ಸಮ್ಮೇಳನಗಳನ್ನು ಜರುಗಲು
ಕಾರಣಿಭೂತರಾಗಿದ್ದಾರೆ. ಧರಿನಾಡು ಕನ್ನಡ ಸಂಘ, ಚುಟುಕು ಸಾಹಿತ್ಯ ಪರಿಷತ್ತು ಜಾನಪದ ಪರಿಷತ್ತು, ನೃಪತುಂಗ ಬಳಗ, ಕರುನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ದಾಸ ಸಾಹಿತ್ಯ ಪರಿಷತ್ತುಗಳು ಕೂಡ ತಮ್ಮದೇ ಆದ ರೀತಿಯಲ್ಲಿ ಸಮ್ಮೇಳನಗಳನ್ನು ಆಯೋಜನೆ ಮಾಡಿ ಸಾಹಿತ್ಯದ ಅಭಿವೃದ್ಧಿಗೆ ಕೈಜೋಡಿಸಿ ಆ ಮೂಲಕ ಜಿಲ್ಲೆಗೆ ಮಹತ್ವದ ಕೊಡುಗೆ ನೀಡಿವೆ. ಆ ಮುಖೇನ ಜನರ ಬದುಕನ್ನು ಹಸನು ಮಾಡಿವೆ. ಮಠ ಮಾನ್ಯಗಳ ಕೊಡುಗೆಯೂ ಈ ನಿಟ್ಟಿನಲ್ಲಿ ಗಣನೀಯವಾಗಿದೆ. ಹೀಗೆ ಅನೇಕ ರೀತಿಯಲ್ಲಿ ಬೀದರ ಜಿಲ್ಲೆಗೆ ಕನ್ನಡ ಸಾಹಿತ್ಯವು ತನ್ನದೇ ಆದ ಮಹತ್ವದ ಕೊಡುಗೆಯನ್ನು ಕೊಟ್ಟಿದೆ ಎಂದು ಹೇಳಬಹುದು.
ಡಾ.ಸಂಜೀವಕುಮಾರ ಅತಿವಾಳೆ ಬೀದರ