ಬೌದ್ಧ ಧರ್ಮದ ನಿಯಮಗಳು.
ಆಸೆಯೇ ದುಃಖಕ್ಕೆ ಮೂಲ ಎಂದು ಸಾರಿದ ಭಗವಾನ್ ಬುದ್ಧನು ಮಹಾರಾಜ ಶುದ್ಧೋದನ ಮತ್ತು ಮಾಯಾ ದೇವಿಯರ ಮಗ. ಇಂದಿನ ನೇಪಾಳ ರಾಜ್ಯದಲ್ಲಿನ ಲುಂಬಿನಿ ಎಂಬ ಪ್ರದೇಶದ ಕಪಿಲವಸ್ತುವಿನಲ್ಲಿ ಜನಿಸಿದ ಈ ಮಗು ಹುಟ್ಟಿದ ಒಂದು ವಾರಕ್ಕೆ ತಾಯಿಯನ್ನು ಕಳೆದುಕೊಂಡು ತಂದೆಯ ಮತ್ತೋರ್ವ ರಾಣಿಯಾದ ಗೌತಮಿಯ ಆರೈಕೆಯಲ್ಲಿ ಬೆಳೆದ ಆದ್ದರಿಂದ ಈತನನ್ನು ಗೌತಮಿಪುತ್ರ ಸಿದ್ದಾರ್ಥ ಎಂದು ಕರೆದರು.
ಹುಟ್ಟಿದ ಮಗುವನ್ನು ನೋಡಿದ ಜ್ಯೋತಿಷಿಗಳು ಈ ಮಗು ಜಗತ್ತಿನ ಜನರ ದುಃಖ ದಾರಿದ್ರ್ಯಗಳಿಗೆ ಉತ್ತರವಾಗಿ ಹುಟ್ಟಿರುವುದರಿಂದ ಈತ ಐಹಿಕ ಸುಖ ಭೋಗಗಳನ್ನು ಅನುಭವಿಸದೆ ಪಾರಮಾರ್ಥಿಕ ಜೀವನಕ್ಕೆ ಮನಸ್ಸು ಮಾಡುತ್ತಾನೆ ಎಂದು ಹೇಳಿದರು. ಇದರಿಂದ ಮಹಾರಾಜ ಶುದ್ಧೋದನ ಕಳವಳಗೊಂಡು ತನ್ನ ಮಗನ ಕಣ್ಣಿಗೆ ಲೋಕದ ದುಃಖ ದಾರಿದ್ರ್ಯಗಳು ಬೀಳದಂತೆ ಎಚ್ಚರಿಕೆಯಿಂದ ಬೆಳೆಸುತ್ತಾನೆ.
ಪ್ರಾಪ್ತ ವಯಸ್ಸಿಗೆ ಬರುತ್ತಲೇ ಗೌತಮನೊಂದಿಗೆ ಮನೆಯಲ್ಲಿಯೇ ಬೆಳೆದ ಜೊತೆಗಾತಿ ಯಶೋಧರೆಯೊಂದಿಗೆ ವಿವಾಹ ಏರ್ಪಡಿಸುತ್ತಾನೆ.
ವೈವಾಹಿಕ ಜೀವನದ ಪರಿಣಾಮವಾಗಿ ಗೌತಮನಿಗೆ ಮಗು ರಾಹುಲ ಜನಿಸಿ ಇವರ ಸಂತಸಕ್ಕೆ ಕಾರಣನಾದನು. ಮಗುವಿಗೆ ಇನ್ನೂ ಒಂದು ವರ್ಷ ತುಂಬುವ ಹೊತ್ತಿಗೆ ಒಂದು ದಿನ ತನ್ನ ಸಾರಥಿಯೊಂದಿಗೆ ಮೊದಲ ಬಾರಿಗೆ ಹೊರ ಸಂಚಾರಕ್ಕೆ ಬಂದ ಸಿದ್ದಾರ್ಥನು ಒಬ್ಬ ವೃದ್ಧ ರೋಗಿ ಓರ್ವ ಮೃತ ವ್ಯಕ್ತಿ ಮತ್ತು ಓರ್ವ ಸನ್ಯಾಸಿಯನ್ನು ಭೇಟಿಯಾದನು. ಜೀವನವನ್ನು ಆತ ನೋಡುವ ದೃಷ್ಟಿಕೋನವೇ ಬದಲಾಯಿತು. ಜನನ ಮರಣಗಳ ಚಕ್ರ ಮತ್ತು ಪ್ರಾಪಂಚಿಕ ಸುಖಗಳು ಎಂಬ ಭ್ರಮೆಯ ಹಿಂದೆ ಸುತ್ತುತ್ತಿರುವ ಮನುಷ್ಯ ಜೀವನ ಅದೆಷ್ಟು ಕ್ಷಣಿಕ ಎಂಬ ಅರಿವಾದಾಗ ಭೇಟಿಯಾದ ಸನ್ಯಾಸಿಯ ಮಾತು ಆತನ ಸಂಪೂರ್ಣ ಬದುಕನ್ನು ಬದಲಾಯಿಸಿತು.
ಮನದಲ್ಲಿಯೇ ಸಾಕಷ್ಟು ಚಿಂತನ ನಡೆಸಿದ ಸಿದ್ದಾರ್ಥ ಅಂದಿನ ರಾತ್ರಿಯೇ ತನ್ನ ಅರಮನೆಯನ್ನು ತೊರೆದು ತನ್ನ ಸಾರಥಿ ಚಂದಕ(ಚನ್ನ) ಮತ್ತು ಕುದುರೆ ಕಂದಕರೊಂದಿಗೆ ಹೊರಟು ಅರಣ್ಯದ ಮಧ್ಯ ಭಾಗಕ್ಕೆ ಬಂದು ಅವರನ್ನು ಮರಳಿ ಹೋಗಲು ಕೇಳಿಕೊಂಡು ತಾನು ಭಾರ್ಗವಾಶ್ರಮಕ್ಕೆ ಹೊರಟು ಹೋಗುತ್ತಾನೆ.
ಅಲ್ಲಿಂದ ಮುಂದೆ ಮಗಧ ದೇಶಕ್ಕೆ ಪ್ರಯಾಣಿಸಿ ಮಗಧದ ರಾಜಗೃಹದಲ್ಲಿ ಮೊದಲ ಬಾರಿ ಭಿಕ್ಷಾನ್ನವನ್ನುಂಡನು. ಮಗಧದ ಅರಾಡ ಕಾಲಾಮನೆಂಬ ತಪಸ್ವಿಯ ಬಳಿ ಕೆಲಕಾಲ ಶಿಷ್ಯನಾಗಿದ್ದನು. ಮುಂದೆ ವಿವಿಧ ಪಂಥಗಳ ಗುರುಗಳ ಬಳಿ ಸುಮಾರು ಆರು ವರ್ಷಗಳ ಕಾಲ ತಿರುಗಾಡಿ ದೇಹದಂಡನೆ ಮಾಡಿ ನಿರಾಹಾರ ಕಾಯಕ್ಲೇಶಗಳನ್ನು ಮಾಡಿದ ಆತನಿಗೆ ಅಂತಿಮವಾಗಿ ಅರಿವಾದದ್ದು ಇದಾವುದರಿಂದಲು ಸಿದ್ದಿ ಸಾಧ್ಯವಾಗುವುದಿಲ್ಲ ಎಂದು. ಸಾಧನೆಯ ದಾರಿಯನ್ನು ಹುಡುಕುವ ನಿಟ್ಟಿನಲ್ಲಿ ಆತ ಸುಜಾತ ಎಂಬ ಮಹಿಳೆ ತಂದುಕೊಟ್ಟ ಪಾಯಸವನ್ನು ಕುಡಿದು
ಬೋಧಿವೃಕ್ಷದ ಕೆಳಗೆ ಪದ್ಮಾಸನಸ್ಥಿತನಾಗಿ ಕುಳಿತ ಆತನಿಗೆ ಒಂದು ವಾರದ ಬಳಿಕ ವೈಶಾಖ ಶುದ್ಧ ಹುಣ್ಣಿಮೆಯ ದಿನ ಒಂದೇ ರಾತ್ರಿಯಲ್ಲಿ ನಾಲ್ಕು ಜಾವ ಗಳ ಅನುಭವದ ಮೂಲಕ ಸಂಕಲ್ಪ ಸಿದ್ಧಿಯಾಗಿ ಬದುಕಿನ ಪರಿಪೂರ್ಣ ಜ್ಞಾನೋದಯವನ್ನು ಪಡೆದುಕೊಂಡನು.
ಒಂದೊಂದು ಜಾವದಲ್ಲಿಯೂ ಆತನಿಗೆ ದೊರೆತ
ಅರಿವು
1.ಜನ್ಮಜನ್ಮಾಂತರಗಳ ತಿಳುವಳಿಕೆ
2. ನಿತ್ಯಾನಿತ್ಯ ವಸ್ತುಗಳ ವಿವೇಕೋದಯ
3. ಹುಟ್ಟು ಸಾವುಗಳ ದುಃಖಕ್ಕೆ ಮನುಷ್ಯನ ಕ್ಷಣಿಕ ಆಸೆಯೇ ಕಾರಣ
4. ಆಧ್ಯಾತ್ಮಿಕ ತತ್ವದ ಸಾಕ್ಷಾತ್ಕಾರಗಳು ಆತನಿಗೆ ದೊರೆತು ಆತ ಗೌತಮನಿಂದ ಬುದ್ಧನಾಗಿ ಪರಿವರ್ತಿತನಾದ. ತನ್ನೆಲ್ಲ ಅರಿವಿನ ಸಾರವನ್ನು ಕೆಲ ಸಂಹಿತೆಗಳ ಮೂಲಕ ಹಿಡಿದಿಟ್ಟು ಬೌದ್ಧ ಸೂತ್ರಗಳನ್ನು ಜನರ ಬದುಕಿನ ಸುಧಾರಣೆಗೆ ಮೀಸಲಾಗಿಟ್ಟನು.
ಮುಂದೆ ಸುಮಾರು 45 ವರ್ಷಗಳ ಕಾಲ ಆತ ಬೌದ್ಧ ತತ್ವಗಳನ್ನು ಬೋಧಿಸುತ್ತಾ ಜನರಲ್ಲಿ ಜ್ಞಾನದ ಅರಿವನ್ನು ಮೂಡಿಸುತ್ತ ಲೋಕ ಸಂಚಾರಿಯಾಗಿ, ಭಿಕ್ಷುವಾಗಿ ಜನರಲ್ಲಿ ಜ್ಞಾನದ ಬೆಳಕನ್ನು ಹಂಚಿದ.
ಬೌದ್ಧಿಕ ಜ್ಞಾನದ ಅರಿವಿನ ಹಾದಿಯಲ್ಲಿ ಆತ ಕೆಲ ಕಟ್ಟಳೆಗಳನ್ನು ರೂಢಿಸಿಕೊಂಡಿದ್ದು ಅವುಗಳು ಇಂತಿವೆ.
ಜೀವಿಗಳಲ್ಲಿಯೇ ಅತ್ಯಂತ ಬುದ್ಧಿವಂತ ಅನ್ನಿಸಿಕೊಂಡಿರುವ ಮಾನವ ಜೀವಿಯು ಯಾರನ್ನು ಹಿಂಸಿಸಬಾರದು, ಬೇರೊಬ್ಬರನ್ನು ನೋಯಿಸಬಾರದು ಎಂಬ ‘ಅಹಿಂಸಾ ಪರಮೋಧರ್ಮ’ ಎಂಬ ಮಾತು ಬುದ್ಧನ ಮೊದಲ ಕಟ್ಟಳೆಯಾಗಿತ್ತು.
ಬೇರೊಬ್ಬರ ಕುರಿತು ಮಾತನಾಡುವುದು, ಸುಳ್ಳು ಸುದ್ದಿಯನ್ನು ಹರಡುವುದು ಒರಟಾಗಿ ಮಾತನಾಡುವುದು ಅನವಶ್ಯಕ. ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂಬುದು ಬುದ್ಧನ ಎರಡನೆಯ ಕಟ್ಟಳೆಯಾಗಿತ್ತು.
ಲೈಂಗಿಕ ದುರ್ವರ್ತನೆಯಿಂದ ದೂರವಿರಬೇಕು.
ಕ್ಷಣಿಕ ಸುಖದ ಆಸೆಗಳು ಮನುಷ್ಯನನ್ನು ತಪ್ಪು ದಾರಿಗೆ ಎಳಸುವಂತೆ ಮಾಡುತ್ತವೆ. ಆದ್ದರಿಂದ ಕೌಟುಂಬಿಕ ಚೌಕಟ್ಟಿನಲ್ಲಿ, ಸರಿಯಾದ ಸಾಮಾಜಿಕ ನಿಯಮಗಳ ಮಾರ್ಗದಲ್ಲಿ ಐಹಿಕ ಭೋಗಗಳನ್ನು ಅನುಭವಿಸಬೇಕು ಎಂಬುದು ಬುದ್ಧನ ಮೂರನೇ ಕಟ್ಟಳೆಯಾಗಿತ್ತು.
ಅಮಲು ಬರಿಸುವ ಮಾದಕ ಪದಾರ್ಥ ಮತ್ತು ದುಶ್ಚಟಗಳಿಂದ ದೂರವಿರಬೇಕು. ಮಾದಕ ಪದಾರ್ಥಗಳು ಮೊದಮೊದಲು ಸುಖ ಕೊಟ್ಟಂತೆ ತೋರಿದರೂ ಮುಂದೆ ಚಟವಾಗಿ ಪರಿಣಮಿಸುತ್ತವೆ. ಈ ದುಶ್ಚಟಗಳು ಮನುಷ್ಯನನ್ನು ವಿನಾಶದ ಹಾದಿಗೆ ಕರೆದೊಯ್ಯುತ್ತವೆ. ಆದ್ದರಿಂದ ವ್ಯಕ್ತಿಯು ಮಾದಕ ವ್ಯಸನವನ್ನು ಹೊಂದಿರಲೇಬಾರದು ಎಂಬುದು ಬುದ್ಧನ ನಾಲ್ಕನೆಯ ಕಟ್ಟಳೆಯಾಗಿತ್ತು.
ನಮ್ಮದಲ್ಲದ ವಸ್ತುವಿಗೆ ಎಂದೂ ನಾವು ಆಶಿಸಬಾರದು ಎಂಬ ಅಪರಿಗ್ರಹ ಭಾವವನ್ನು ಹೊಂದಿರಬೇಕು.
ಹೀಗೆ ತನ್ನ ಜ್ಞಾನದ ಸಾರವನ್ನು 5 ನಿಯಮಗಳಲ್ಲಿ ಹಿಡಿದಿಟ್ಟ ಗೌತಮ ಬುದ್ಧನು ಮನುಕುಲವನ್ನು ಉದ್ದರಿಸಿದ ಮಹಾನ್ ಚೇತನಗಳಲ್ಲಿ ಒಬ್ಬನಾಗಿದ್ದಾನೆ. ಬುದ್ಧನ ಸಂದೇಶದ ಹೊಂಬೆಳಕಿನಲ್ಲಿ ನಾವು ಕೂಡ ನಡೆದು ನಮ್ಮ ಬದುಕನ್ನು ಸಾರ್ಥಕಗೊಳಿಸಿಕೊಳ್ಳೋಣ ಎಂಬ ಆಶಯದೊಂದಿಗೆ
– ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್.