Oplus_131072

ದಕ್ಷ ಜನಪರ ಆಡಳಿತಗಾರ ಎಸ್.ಎಂ.ಕೃಷ್ಣ.

ಸಂಗಮೇಶ ಎನ್ ಜವಾದಿ.ಚಿಟಗುಪ್ಪ

ರಾಜಕೀಯ ಮುತ್ಸದ್ದಿ ನಾಯಕ, ದಕ್ಷ ಜನಪರ ಆಡಳಿತಗಾರ, ಅಜಾತಶತ್ರು, ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಮಂತ್ರಿಗಳಾದ ಶ್ರೀ ಎಸ್.ಎಂ.ಕೃಷ್ಣ ಅವರು ನಿಧನರಾದ ಸುದ್ದಿ ಬಹಳ ನೋವು ತಂದಿದೆ. ಅವರ ಅಗಲಿಕೆ ರಾಜ್ಯ ರಾಜಕಾರಣಕ್ಕೆ ತುಂಬಲಾರದ ನಷ್ಟವಾಗಿದೆ. ಪಕ್ಷ ಭೇದ ಮಾಡದೇ, ಅಜಾತ ಶತ್ರುವಾಗಿ, ಸಜ್ಜನ ರಾಜಕಾರಣಿಯಾಗಿ ಶ್ರೀಯುತರು ನಾಡಿನಾದ್ಯಂತ ಹೆಸರು ಗಳಿಸಿದ್ದು ಯಾರು ಮರೆಯುವಂತಿಲ್ಲ. ಅತ್ಯಂತ ಅಧ್ಯಯನ ಶೀಲ ವ್ಯಕ್ತಿತ್ವ ಹೊಂದಿದ್ದ ಇವರು, ಸಜ್ಜನಿಕೆಯ ನಡವಳಿಕೆಯ ಸ್ವಭಾವದವರಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಶ್ರೀ ಎಸ್ಎಂ ಕೃಷ್ಣರವರು ಮದ್ದೂರಿನ ಸೋಮನಹಳ್ಳಿಯಿಂದ ದೆಹಲಿಯವರೆಗೂ ಬೆಳೆದು ಬಂದು, ಇಷ್ಟೊಂದು ಅಗಾಧ ರಾಜಕೀಯ ಸೇವೆ ಮಾಡಿರುವುದು ಎಂದೆಂದಿಗೂ ಮರೆಯಲಾಗದ ದೊಡ್ಡ ವ್ಯಕ್ತಿತ್ವ ಇವರದು.

ಎಸ್ ಎಂ ಕೃಷ್ಣ ಅವರು ಎಸ್‌ಸಿ ಮಲ್ಲಯ್ಯ ಅವರ ಪುತ್ರರಾಗಿ ಕರ್ನಾಟಕದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಎಂಬ ಗ್ರಾಮದಲ್ಲಿ ಜನಿಸಿದರು. ಇವರು ತಮ್ಮ ಪ್ರೌಢ ಶಾಲೆಯನ್ನು ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಮುಗಿಸಿದರು.ನಂತರ ಮೈಸೂರು ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದರು.
ತದನಂತರ ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು. ಇದಾದನಂತರ ಅಮೆರಿಕದ ಟೆಕ್ಸಸ್ ರಾಜ್ಯದಲ್ಲಿರುವ ಸದರ್ನ್ ಮೆಥಡಿಸ್ಟ್ ವಿಶ್ವವಿದ್ಯಾಲಯದಲ್ಲಿಯೂ ಸಹ ಓದಿದರು. ತರುವಾಯ ವಾಷಿಂಗ್ಟನ್ ನಲ್ಲಿರುವ ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಪ್ರತಿಷ್ಠಿತ ಫುಲ್‍ಬ್ರೈಟ್ ವಿದ್ಯಾರ್ಥಿವೇತನವನ್ನು ಪಡೆದಿದ್ದರು.

ರಾಜಕೀಯ ಬದುಕು :
ಭಾರತಕ್ಕೆ ಮರಳಿದ ನಂತರ ಬೆಂಗಳೂರಿನ ರೇಣುಕಾಚಾರ್ಯ ಕಾಲೇಜಿನಲ್ಲಿ ಸ್ವಲ್ಪ ಕಾಲ ಅಂತಾರಾಷ್ಟ್ರೀಯ ನ್ಯಾಯದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ತದನಂತರ ರಾಜಕೀಯ ಪ್ರವೇಶ ಮಾಡಿ 1962 ರಲ್ಲಿ ವಿಧಾನಸಭೆಗೆ ಮೊದಲ ಬಾರಿಗೆ ಆಯ್ಕೆಯಾಗಿದ್ದರು.1968 ರಲ್ಲಿ ಲೋಕಸಭಾ ಸದಸ್ಯರಾಗಿ ಎಸ್​ಎಂಕೃಷ್ಣ ಆಯ್ಕೆಗೊಂಡರು.1972 ರಲ್ಲಿ ಕೇಂದ್ರ ಸಚಿವರಾಗಿದ್ದರು. 1989 ರಿಂದ 1992ರವರೆಗೆ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು.1992 ರಿಂದ 1994ರವರೆಗೆ ಡಿಸಿಎಂ ಆಗಿದ್ದರು.

1996 ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು.
ಒಟ್ಟಾರೆಯಾಗಿ ಪ್ರಮುಖ 10 ಚುನಾವಣೆಗಳನ್ನು ಎದುರಿಸಿದ್ದಾರೆ. 6 ವಿಧಾನಸಭಾ ಚುನಾವಣೆಗಳನ್ನು ಎದುರಿಸಿ ಇವುಗಳಲ್ಲಿ 4 ರಲ್ಲಿ ಗೆಲುವು, 2 ಚುನಾವಣೆಯಲ್ಲಿ ಸೋಲನುಭವಿಸಿದ್ದಾರೆ.4 ಲೋಕಸಭಾ ಚುನಾವಣೆಗಳನ್ನು ಎದುರಿದ್ದು ಈ ಪೈಕಿ 3 ಚುನಾವಣೆಯಲ್ಲಿ ಗೆಲುವು ಪಡೆದು, 1 ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ.ಮದ್ದೂರು ಕ್ಷೇತ್ರದಿಂದ 3 ಬಾರಿ ಹಾಗೂ ಚಾಮರಾಜಪೇಟೆಯಿಂದ 1 ಬಾರಿ ಶಾಸಕರಾಗಿದ್ದಾರೆ.ಮೂರು ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿದ್ದಾರೆ.1 ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. 2 ಬಾರಿ ರಾಜ್ಯಸಭಾ ಸದಸ್ಯರಾಗಿದ್ದಾರೆ.1995ರ ವಿಧಾನಸಭಾ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಎಸ್ಎಂಕೃಷ್ಣ ಸೋಲು ಅನುಭವಿಸಬೇಕಾಯಿತು. ಆ ವೇಳೆ ರಾಜಕೀಯದಲ್ಲಿ ಉನ್ನತ ಮಟ್ಟದಲ್ಲಿದ್ದ ಕೃಷ್ಣ ಅವರ ಸೋಲು ವ್ಯಾಪಕ ಚರ್ಚೆಗೂ ಸಹ ಕಾರಣವಾಯಿತು.ಬಳಿಕ 1999 ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗುತ್ತಾರೆ. ಪಾಂಚಜನ್ಯ ರಥಯಾತ್ರೆ ಕೈಗೊಂಡು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರು. (ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಯಶಸ್ವಿಯಾಗಿ ಮುನ್ನಡಿಸಿದರು) ಪ್ರಯುಕ್ತ, ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 132 ಸೀಟುಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆಯಿತು. ಕೃಷ್ಣಾ ರವರು ರಾಜ್ಯದ ಮುಖ್ಯ ಮಂತ್ರಿಗಳಾಗಿ ಜನಪರ ಆಡಳಿತ ನೀಡಿದರು.

ಈ ಒಂದು ಸಮಯದಲ್ಲಿ ವೀರಪ್ಪನ್​ನಿಂದ ರಾಜ್​​ಕುಮಾರ್ ಘಟನೆ ಜರುಗಿತ್ತು. ಡಾ. ರಾಜ್‌ಕುಮಾರ್ ಅವರನ್ನು ವೀರಪ್ಪನ್ ಮೂರು ತಿಂಗಳ ಕಾಲ ಅಪಹರಣ ಮಾಡಿದ್ದ. ಆಗ ರಾಜ್ಯದ್ಯಾಂತ ಸರಕಾರದ ವಿರುದ್ಧ ಹೋರಾಟಗಳು ನಡೆದವು. ಬಳಿಕ ಕೃಷ್ಣ ಅವರು ಅಂದಿನ ತಮಿಳುನಾಡು ಸಿಎಂ ಜಯಲಲಿತ ಅವರೊಂದಿಗೆ ಮಾತುಕತೆ ನಡೆಸಿ, ಬಳಿಕ ವೀರಪ್ಪನ್ ಸಂಪರ್ಕ ಮಾಡಿ ರಾಜ್‌ಕುಮಾರ್ ಅವರನ್ನು ಕ್ಷೇಮವಾಗಿ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅದೇ ರೀತಿ ಬರಗಾಲ, ಮೋಡ ಬಿತ್ತನೆ ಹಾಗೂ ಕಾವೇರಿ ನೀರಿಗಾಗಿ ಹೋರಾಟಗಳು ನಡೆದವು ಈ ವೇಳೆ ರಾಜ್ಯಕ್ಕೆ ಬರಗಾಲವು ಸಹ ಬಂದೊದಗಿತ್ತು. ಆ ವೇಳೆ ರಾಜ್ಯ ಜನರ ರಕ್ಷಣೆಗೆ ವೈಜ್ಞಾನಿಕವಾಗಿ ಮೋಡ ಬಿತ್ತನೆ ಮಾಡಿ ಮಳೆ ಬರಿಸಲು ಸಹ ಕೃಷ್ಣ ಅವರು ಮುಂದಾಗಿದ್ದರು. ಆದರೆ ದುರಾದೃಷ್ಟವಶಾತ್ ಈ ಪ್ಲಾನ್ ಕೈಕೊಟ್ಟಿತು. ಈ ವೇಳೆ ತಮಿಳುನಾಡು ಕಾವೇರಿ ನೀರಿಗಾಗಿ ಕ್ಯಾತೆಯನ್ನು ಸಹ ತೆಗೆಯಿತು. ಮಂಡ್ಯ ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ತೀವ್ರ ಸ್ವರೂಪದ ಹೋರಾಟಗಳು ಸಹ ಜರುಗಿದವು. ಇವುಗಳ ಮಧ್ಯೆ ಭೂ ದಾಖಲೆಗಳನ್ನು ಡಿಜಿಟಲೀಕರಣ ಗೊಳಿದ್ದು, ಸರಕಾರಿ ಶಾಲೆ ಮಕ್ಕಳಿಗೆ ಬಿಸಿಯೂಟ, ಯಶಸ್ವಿನಿ ಯೋಜನೆ, ಬೆಂಗಳೂರು- ಮೈಸೂರು  ಹೆದ್ದಾರಿ, ಬೆಂಗಳೂರನ್ನು ಸಿಲಿಕಾನ್ ಸಿಟಿಯನ್ನಾಗಿ ಮಾಡಿದ್ದು, ಐಟಿ ಬಿಟಿಯಲ್ಲಿ ಬಹುದೊಡ್ಡ ಕ್ರಾಂತಿ ಸೇರಿದಂತೆ ಇನ್ನೂ ಹತ್ತಾರು ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ ಶ್ರೇಯಸ್ಸು ಇವರದು.

2004 ರಲ್ಲಿ ಮಹಾರಾಷ್ಟದ ರಾಜ್ಯಪಾಲರಾಗಿ ನೇಮಕಗೊಂಡಿದ್ದರು. 2008 ರಲ್ಲಿ ರಾಜ್ಯಪಾಲರ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯಸಭೆಗೆ ಪ್ರವೇಶಿಸುತ್ತಾರೆ. ನಂತರ 2009 ರಲ್ಲಿ ಮನಮೋಹನ ಸಿಂಗ್ ಅವರ ಸಂಪುಟದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. 2012 ರಂದು ವಿದೇಶಾಂಗ ಸಚಿವ ಸ್ಥಾನಕ್ಕೂ ಕೃಷ್ಣ ಅವರು ರಾಜಿನಾಮೆ ನೀಡಿದ್ದರು. ವಿದ್ಯಾಭ್ಯಾಸದ ದೃಷ್ಟಿಯಿಂದ ಹೇಳುವುದಾದರೆ, ಕರ್ನಾಟಕ ರಾಜ್ಯದ ಅತ್ಯಂತ ಹೆಚ್ಚು ಸುಶಿಕ್ಷಿತ ಮುಖ್ಯಮಂತ್ರಿಗಳಲ್ಲಿ ಕೃಷ್ಣ ಒಬ್ಬರು. ಇವರು ಬಹುಕಾಲ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾಗಿದ್ದರು, ಬದಲಾದ ರಾಜಕೀಯ ಸನ್ನಿವೇಶಗಳ ಕಾರಣಾಂತರಗಳಿಂದ ಮಾರ್ಚ್ 2017ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದರು. 2022 ಜನವರಿ 7 ರಂದು ಎಸ್ಎಂ ಕೃಷ್ಣ ತಮ್ಮ 60 ವರ್ಷಗಳ ಸುದೀರ್ಘ ರಾಜಕೀಯ ಜೀವನಕ್ಕೆ ನಿವೃತ್ತಿ ಘೋಷಣೆ ಮಾಡಿದ್ದರು. ಹೀಗೆ ರಾಜಕಾರಣದಲ್ಲಿ ಇನ್ನೂ ಅನೇಕ ಜವಾಬ್ದಾರಿಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿ ತನ್ನದೆ ಆದ ಛಾಪು ಮೂಡಿಸಿದ್ದ ಶ್ರೀ ಎಸ್ಎಂ ಕೃಷ್ಣರವರ ಸೇವಾ ಕೈಂಕರ್ಯಗಳು ಅಪಾರ ಎಂಬುದು ಮರೆಯಲಾಗದು.

ವಿದ್ಯಾರ್ಥಿ ದೆಸೆಯಲ್ಲಿ ಅಮೆರಿಕಾದ ಅಧ್ಯಕ್ಷರ ಚುನಾವಣೆಯಲ್ಲಿ ಚುನಾವಣಾ ಕಾರ್ಯದಲ್ಲಿಯೂ ಪಾಲ್ಗೊಂಡ ಹೆಗ್ಗಳಿಕೆ ಶ್ರೀ ಎಸ್ಎಂ ಕೃಷ್ಣರವರದು. ರಾಜಕಾರಣದಲ್ಲಿ ಒಂದೊಂದೇ ಮೆಟ್ಟಿಲು ಏರುತ್ತಾ ಮಂತ್ರಿ, ಮುಖ್ಯಮಂತ್ರಿ, ಕೇಂದ್ರ ಸಚಿವ ಸ್ಥಾನ ತಲುಪಿದ್ದು ರಾಜ್ಯಕ್ಕೆ ಮಾದರಿಯಾಗಿದ್ದಾರೆ. ರಾಜ್ಯದ ಸಮಗ್ರ ಅಭಿವೃದ್ಧಿ ಬಯಸಿ ಕೈಗೊಂಡ ಕಾರ್ಯಕ್ರಮಗಳು ಹಲವಷ್ಟಿವೆ. ರಾಜಧಾನಿಗೆ ಸಿಲಿಕಾನ್ ಸಿಟಿ, ಐಟಿ ಸಿಟಿ ಎಂಬ ಹಿರಿಮೆ ಬರಲು ಅವರ ಕೊಡುಗೆ ಅಪಾರ.

ಎಸ್ ಎಂ ಕೃಷ್ಣ ರವರ ಚಾಣಕ್ಯ ಬುದ್ಧಿವಂತಿಕೆ ಮತ್ತು ಶಿಸ್ತಿನ ಮನೋಭಾವ, ದೂರದೃಷ್ಟಿ ಸರ್ವರಿಗೂ ಸ್ಫೂರ್ತಿ ನೀಡುತ್ತದೆ. 2023ರ ಸಾಲಿನ ಪದ್ಮವಿಭೂಷಣ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಗೌರವ ನುಡಿ :- ಕೇಂದ್ರ ಸಚಿವರಾಗಿ, ರಾಜ್ಯಪಾಲರಾಗಿ, ಕರ್ನಾಟಕದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸ್ಪೀಕರ್, ಕೈಗಾರಿಕೆ, ವಾಣಿಜ್ಯ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಅಂತೆಯೇ ಕನ್ನಡಿಗರ  ಪಾಲಿಗೆ ‘ಐಟಿ ಮತ್ತು ಬಿಟಿ’ ದೊರೆಯಾಗಿ, ಕನ್ನಡ ನಾಡು ಮರೆಯದ ನಾಯಕನಾಗಿ, ಕನ್ನಡಿಗರ ರಾಜಧಾನಿ ಬೆಂಗಳೂರಿಗೆ ‘ಐಟಿ’ ತವರು ಎಂಬ ಬಿರುದು ಸಿಗಲು ಕಾರಣವಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಇಂದು ನಮ್ಮನ್ನೆಲ್ಲಾ ಬಿಟ್ಟು ಅಗಲಿದ್ದಾರೆ. ಕರ್ನಾಟಕದ ಕೀರ್ತಿ ಪತಾಕೆಯನ್ನು ಆಧುನಿಕ ಕಾಲ ಘಟ್ಟದಲ್ಲಿ ಜಗತ್ತಿನ ಮೂಲೆ ಮೂಲೆಗೂ ಹಬ್ಬಿಸಿದ್ದ ಕೀರ್ತಿ ಶ್ರೀಯುತರಿಗೆ ಸಲ್ಲುತ್ತದೆ. ಇಂತಹ ಶ್ರೇಷ್ಠ ರಾಜಕಾರಣಿಯನ್ನು, ರಾಜಕೀಯ ಮುತ್ಸದ್ದಿಯನ್ನು ಇಂದು ನಾವು ಕಳೆದುಕೊಂಡಿದ್ದೇವೆ.ಮತ್ತೆ ಇಂಥ ರಾಜಕೀಯ ಮುತ್ಸದ್ದಿಗಳು ಸಮಾಜಕ್ಕೆ ದೊರಕುವುದು ಅಪರೂಪವೆಂದೇ ಹೇಳಬಹುದು.ಅವರ ಅಗಲಿಕೆಯಿಂದ ನೋವು ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿಯನ್ನು ಸೃಷ್ಟಿಕರ್ತ ಕರುಣಿಸಲಿ ಎಂದು ಪ್ರಾರ್ಥಿಸೋಣ.

ಸಂಗಮೇಶ ಎನ್ ಜವಾದಿ
ಬರಹಗಾರರು, ಚಿಂತಕರು, ಹೋರಾಟಗಾರರು.
ಬೀದರ ಜಿಲ್ಲೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ