ದಾಂಪತ್ಯದಲ್ಲಿ ವಿಷಮತೆ
ನಮ್ಮ ಭಾರತೀಯ ಸಭ್ಯತೆಯಲ್ಲಿ ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯ ಎಂಬ ಮಾತಿದೆ.
ಏಳೇಳು ಜನ್ಮಗಳ ಸಂಬಂಧ.. ಅನುಬಂಧ ಎಂದು ವೈವಾಹಿಕ ಬಂಧನವನ್ನು ದೈವಿಕವಾಗಿ ಕಾಣುವ ಭವ್ಯ ಪರಂಪರೆಯ ಭಾರತ ಮಾತೆಯ ಮಕ್ಕಳು ನಾವು.
ಆದರೆ ದೀಪದ ಕೆಳಗೆ ಕತ್ತಲು ಎಂಬ ಮಾತು ಕೇಳಿದ್ದೇವಷ್ಟೇ. ಕೆಲವು ಸಂಬಂಧಗಳು ಈ ಎಲ್ಲಾ ಸಾಂಪ್ರದಾಯಿಕ ಮಿತಿಯನ್ನು ಮೀರಿ ವಿಷಮಿಸುತ್ತವೆ. ಅವರಿಬ್ಬರ ಏಳೇಳು ಜನ್ಮದ ನಂಟು ಕಗ್ಗಂಟಾದಾಗ ಕವಲು ದಾರಿಯಲ್ಲಿ ನಡೆಯುವುದು ಅನಿವಾರ್ಯವಾಗುತ್ತದೆ.
ವೈವಾಹಿಕ ಸಂಬಂಧವನ್ನು ಶಿಥಿಲಗೊಳಿಸುವ ಅಂತಹ ಸಂಗತಿಗಳು ಏನಿರಬಹುದು ಎಂದರೆ
ಸಂಗಾತಿಗಳಲ್ಲಿ ಯಾರೇ ಆಗಲಿ ಒಬ್ಬರು ಮತ್ತೊಬ್ಬರ ಮೇಲೆ ದೈಹಿಕವಾಗಿ ಹಲ್ಲೆ ಮಾಡುವುದು ಮತ್ತು ಭಾವನಾತ್ಮಕವಾಗಿ ಕೀಳರಿಮೆಯಿಂದ ಬಳಲುವಂತೆ ಮಾಡುವುದು. ದಾಂಪತ್ಯ ದ್ರೋಹವೆಸಗುವುದು ತಪ್ಪು
ತಮ್ಮಿಬ್ಬರ ನಡುವಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳದಿರುವುದು,ಅತಿಯಾದ ನಿರ್ಲಕ್ಷ ಮತ್ತು ತುಚ್ಚ ಮನೋಭಾವವನ್ನು ಸಂಗಾತಿಗಳಲ್ಲಿ ಒಬ್ಬರು ತೋರಿದರೂ ಬದುಕು ಗಾಳಿಗಿಟ್ಟ ಸೊಡರಿನಂತೆ ಆಗುವುದರಲ್ಲಿ ಸಂಶಯವಿಲ್ಲ.
ಮಾದಕ ದ್ರವ್ಯಗಳ ವ್ಯಸನಿಯಾಗಿರುವುದು.
ಸಂಗಾತಿಯೊಂದಿಗೆ ಅಪ್ರಾಮಾಣಿಕ ನಡವಳಿಕೆ, ಭಾವನಾತ್ಮಕ ದೂರವನ್ನು ಹೊಂದಿರುವುದು *ಸಂವಹನದ ಕೊರತೆ, ಬಿದ್ದಿರಲಿ ಎಂಬಂತಹ ಅಗೌರವ ಭಾವ, ಅಹಂಕಾರಗಳು ದಂಪತಿಗಳಲ್ಲಿ ಅಸಹನೆಯನ್ನು ಹುಟ್ಟು ಹಾಕುತ್ತವೆ.
ಪ್ರೀತಿ ಮತ್ತು ಪ್ರೇಮರಾಹಿತ್ಯವು ಬದುಕನ್ನು ನಿಸ್ಸಾರಗೊಳಿಸುತ್ತದೆ.
ದೀರ್ಘಕಾಲದವರೆಗೆ ಇದೇ ರೀತಿ ಬದುಕು ನಡೆದರೆ ಸಂಬಂಧಗಳು ಬಿಡಿಸಿಕೊಳ್ಳಲಾಗದಷ್ಟು ಗೋಜಲಾಗುತ್ತವೆ ಇಲ್ಲವೇ ಮತ್ತೆಂದು ಜೋಡಿಸಲಾಗದಂತೆ ಬಿರುಕು ಬಿಡುತ್ತವೆ.
ಪತಿ ಪತ್ನಿಯರ ಸಂಬಂಧದಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ ಮತ್ತು ಭಾವನಾತ್ಮಕ ಜೊತೆಗಾರಿಕೆ ಬೇಕೇ ಬೇಕು. ಪರಸ್ಪರರಲ್ಲಿ ಗೌರವ,ಆಕರ್ಷಣೆ ಮತ್ತು ದೈಹಿಕ ಸಂತೃಪ್ತಿಯು ಅಷ್ಟೇ ಅವಶ್ಯಕ. ಈ ಪ್ರೀತಿಯಾದರೂ ಅಷ್ಟೇ ಹೂವಿಗೆ ನೀರೆರೆದು ಪೋಷಿಸುವಂತಿರಬೇಕೇ ಹೊರತು ಉಸಿರುಗಟ್ಟಿಸು ವಂತಿರಬಾರದು. ದಂಪತಿಗಳಲ್ಲಿ ಇಬ್ಬರೂ ತಮ್ಮ ತಮ್ಮ ದೈನಂದಿನ ಬದುಕನ್ನು ಸ್ವತಂತ್ರವಾಗಿ ನಿರ್ಭಿಡೆಯಿಂದ ನಡೆಸಿಕೊಂಡು ಹೋಗುವಷ್ಟು ಅವಕಾಶವನ್ನು ಪರಸ್ಪರರಿಗೆ ಒದಗಿಸಿಕೊಡಬೇಕು. ಏನು ಹೇಳಿದರೆ ಏನಾಗಿಬಿಡುತ್ತದೆಯೋ ಎಂಬಂತಹ ಭಯದ ಭಾವದಲ್ಲಿ ಸಂಗಾತಿ ನರಳಿದರೆ ಪ್ರೀತಿ ಉಸಿರುಗಟ್ಟಿ ಸಾಯುತ್ತದೆ.
ಪುರುಷ ಮುಖ್ಯವಾಗಿ ತನ್ನ ಭೌತಿಕ ಅವಶ್ಯಕತೆಗಳಿಗೆ ಸಂಗಾತಿಯನ್ನು ಬಯಸಿದರೆ ಸ್ತ್ರೀ ತನ್ನ ಭಾವನಾತ್ಮಕ ಅವಶ್ಯಕತೆಗಳಿಗೆ ಪತಿಯನ್ನು ಅವಲಂಬಿಸಿರುತ್ತಾಳೆ. ತಮ್ಮ ಸಂಗಾತಿಯಲ್ಲಿರುವ ಎಲ್ಲಾ ಗುಣಾವಗುಣಗಳ ಜೊತೆಗೆ ಅವರನ್ನು ಒಪ್ಪಿಕೊಂಡು ಬದುಕು ಸಾಗಿಸಬೇಕು.ತಪ್ಪಿದ್ದಲ್ಲಿ ನಯವಾಗಿ ತಿದ್ದಲು ಪ್ರಯತ್ನಿಸಬೇಕು. ದಾಂಪತ್ಯದಲ್ಲಿ ಪರಸ್ಪರ ಅಸಂತೃಪ್ತಿ ಮನೆ ಮಾಡಿದ್ದರೆ ಸಂತೋಷಕ್ಕೆ ಠಾವೆಲ್ಲಿ?
ದಾಂಪತ್ಯ ಬಿಗಡಾಯಿಸುವಲ್ಲಿ ಕೆಲವು ವೈಯುಕ್ತಿಕ ತೊಂದರೆಗಳು ಹೀಗಿವೆ.
ಉಸಿರು ಕಟ್ಟಿಸುವ ಮತ್ತು ಭಾವನಾತ್ಮಕತೆ ಇಲ್ಲದ ಸಂಬಂಧ,
*ವೈಯುಕ್ತಿಕ ಗುರುತಿಸುವಿಕೆ ಇಲ್ಲದೆ ಇರುವುದು, *ಸದಾ ಅಸಂತೋಷ, ಅತೃಪ್ತಿ ಮನೆ ಮಾಡಿರುವುದು *ಪರಿಹಾರವಿಲ್ಲದ ಸಮಸ್ಯೆಗಳು
*ಅತಂತ್ರ ಮತ್ತು ಅಸಹಕಾರ ಮನೋಭಾವಗಳು ದಾಂಪತ್ಯದಲ್ಲಿ ಇದ್ದರೆ ಅಂತಹ ದಾಂಪತ್ಯ ಬಹಳ ಕಾಲ ಉಳಿಯದು.
ಯಾವುದೇ ಕಾರಣಗಳು ಇಲ್ಲದೆ ಇದ್ದಾಗ್ಯೂ ಕೂಡ
ಕೆಲ ಸಂಗತಿಗಳು ಪತಿ-ಪತ್ನಿಯರ ನಡುವಿನ ಸಂಬಂಧಕ್ಕೆ ವಿಷಮತೆಯನ್ನು ತಂದಿಡುತ್ತವೆ
ಎಂದೂ ಸರಿ ಹೋಗದ ಪರಸ್ಪರರ ಕುರಿತ ಅಭಿಪ್ರಾಯಗಳು,ಮೌಲ್ಯಗಳು ಮತ್ತು ಗುರಿಗಳು ಇಲ್ಲದ ಜೀವನ, ಪರಸ್ಪರ ನಂಬಿಕೆ ಮತ್ತು ಗೌರವ ಇಲ್ಲದೆ ಇರುವುದು, ವಿಪರೀತ ವಾದ ಜಗಳಗಳಲ್ಲಿ ಪರಿವರ್ತನೆಯಾಗುವುದು, ಅವರಿಬ್ಬರ ಮಧ್ಯದಲ್ಲಿ ಸ್ನೇಹ, ಸಾಂಗತ್ಯರಾಹಿತ್ಯತೆ ಕಂಡು ಬರುವ ತೊಂದರೆಗಳು ತಲೆದೋರಿದರೆ ಜೊತೆಯಾಗಿ ಬಾಳುವುದು ಕಷ್ಟವಾಗುತ್ತದೆ.
ಬಿಟ್ಟು ಬಿಡುವುದೇ ಒಳಿತು ಎಂಬ ಭಾವ ಬರುವುದು
ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಗಂಡಾಂತರದಲ್ಲಿ ಇದೆ ಎಂದು ಅನಿಸಿದಾಗ, ಯಾವುದೇ ರೀತಿಯ ಉತ್ತಮ ಬೆಳವಣಿಗೆ ಇಲ್ಲದ ಸಮಾಲೋಚನೆಗಳಿಂದ ದಣಿದಾಗ,
ಇಬ್ಬರ ಸಂಬಂಧ ಇನ್ಯಾವತ್ತೂ ಸರಿ ಹೋಗದು ಎಂದು ಸಂಗಾತಿಗಳಲ್ಲಿ ಇಬ್ಬರೂ ಭಾವಿಸಿದಾಗ, ಭಾವನೆಗಳಿಲ್ಲದ ಬರಡು ಬದುಕನ್ನು ಬದುಕುವುದು ಬೇಡವೆನಿಸಿದಾಗ, ಇದಕ್ಕಿಂತಲೂ ಉತ್ತಮ ಸಂಗಾತಿ ನನಗೆ ದೊರೆಯಬಹುದು ಎಂಬ ಭಾವ ಬಂದಾಗ ಖಂಡಿತವಾಗಿಯೂ ಸಂಬಂಧ ಹಳಸಿದ್ದು ದೂರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಅರಿಯಬಹುದು.
ಪರಸ್ಪರ ಒಪ್ಪಿಗೆಯ ಮೇರೆಗೆ ಕಾನೂನಾತ್ಮಕವಾಗಿ ದಂಪತಿಗಳು ಬೇರೆಯಾದ ನಂತರ ಕೂಡಲೇ ಮತ್ತೊಂದು ಸಂಬಂಧಕ್ಕೆ ಎಳಸಬಾರದು. ಹಳೆಯ ಬದುಕನ್ನು ಮರೆಯುವ ಸಲುವಾಗಿ ಅನಾರೋಗ್ಯಕರ ಹವ್ಯಾಸಗಳಿಗೆ ತಮ್ಮನ್ನು ತಾವು ಈಡು ಮಾಡಿಕೊಳ್ಳದೆ ವೈಯುಕ್ತಿಕ ಕಾಳಜಿ ಮತ್ತು ಮನದ ಗಾಯ ಮಾಯುವವರೆಗೆ ತಡೆಯಬೇಕು ಆಪ್ತರ ಮತ್ತು ಸಂಬಂಧಿಕರ ಭಾವನಾತ್ಮಕ ಬೆಂಬಲವನ್ನು ಪಡೆಯಬೇಕು
ವೈಯುಕ್ತಿಕ ಪ್ರಗತಿ ಮತ್ತು ಬೆಳವಣಿಗೆಯತ್ತ ಗಮನ ಹರಿಸಬೇಕು. ವೈಯುಕ್ತಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು.
ಹಿಂದಿನ ತಪ್ಪುಗಳು ಮತ್ತೆ ಮರುಕಳಿಸಿದಂತೆ ಬದುಕಿನಲ್ಲಿ ಜಾಗ್ರತೆ ವಹಿಸಬೇಕು
ಅಂತಿಮವಾಗಿ ದಾಂಪತ್ಯ ಎಂಬ ಚಕ್ಕಡಿಯ ಎರಡು ಗಾಲಿಗಳು ಜೊತೆಯಾಗಿ ಸಾಗಬೇಕೆ ಹೊರತು ಎತ್ತು ಏರಿಗೆಳೆದರೆ ಕೋಣ ಕೆರೆಗಿಳಿಯಿತು ಎಂಬಂತೆ ಆಗಬಾರದು. ಅದಾಗದಿದ್ದರೆ ಪರಸ್ಪರರ ಭಾವನೆಗಳಿಗೆ ಬೆಲೆ ಕೊಟ್ಟು ಮಾತುಕತೆಯ ಮೂಲಕ ಕಾನೂನಾತ್ಮಕವಾಗಿ ದೂರವಾಗುವುದು ಲೇಸು…. ಸಾಧ್ಯವಾದಷ್ಟು ಮೊದಲನೆಯ ಹಾದಿ ಅತ್ಯುತ್ತಮವಾದುದು.
ದಂಪತಿಗಳು ಒಬ್ಬರಿಗೊಬ್ಬರು ಸೋತು ಜೀವನದಲ್ಲಿ ಗೆಲ್ಲಬೇಕು, ವಿವಾಹ ಎಂಬ ಸುಮಧುರ ಬಂಧನ ಚಿರಕಾಲ ಸಾಗಲಿ ಎಂಬ ಆಶಯದೊಂದಿಗೆ
– ವೀಣಾ ಹೇಮಂತಗೌಡ ಪಾಟೀಲ್ ಮುಂಡರಗಿ ಗದಗ್.
ಲೇಖಕಿಯರ ಪರಿಚಯ:
ವೀಣಾ ಹೇಮಂತ್ ಗೌಡ ಪಾಟೀಲ್ , ರವರು ಗದಗ ಜಿಲ್ಲೆ ಮುಂಡರಗಿ ನಿವಾಸಿ. ಇವರು ಮನಃಶಾಸ್ತ್ರ ಮತ್ತು ಮಾನವ ಶಾಸ್ತ್ರಗಳ ಪದವಿಧರರು. ‘ ಚೈತನ್ಯ ‘ ಎಂಬ ಶಿಕ್ಷಣ ಸಂಸ್ಥೆ ಹೊಂದಿರುವ ಇವರು ಅಬಾಕಸ್ ಮತ್ತು ವೇದ ಗಣಿತಗಳನ್ನು ಮಕ್ಕಳಿಗೆ ಕಲಿಸಿಕೊಡುತ್ತಾರೆ. ನರ್ಸರಿ ಟೀಚರ್ಸ್ ಟ್ರೈನಿಂಗ್ ತರಗತಿ ಹಾಗೂ ನುರಿತ ಶಿಕ್ಷಕರಿಂದ ಭರತ ನಾಟ್ಯ ಶಾಸ್ತ್ರೀಯ ನೃತ್ಯ ಮತ್ತು ಪಾಶ್ಚಾತ್ಯ ನೃತ್ಯ ಗಳಲ್ಲಿ ಮಕ್ಕಳಿಗೆ ತರಬೇತಿ ನೀಡುತ್ತಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿರುವ ಇವರು ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ.
‘ ವೀಣಾಂತರಂಗ ‘ ಎಂಬ ಪುಸ್ತಕ ಪ್ರಕಟಿಸಿದ್ದಾರೆ.