Oplus_131072

ದಾಸ ಸಾಹಿತ್ಯದ ಮೇರು ಶಿಖರ  ಕನಕದಾಸರು.

– ವೀಣಾ ಹೇಮಂತ್ ಗೌಡ ಪಾಟೀಲ್,

ಒಂದು ಸಾರಿ ತಿಮ್ಮಪ್ಪ ನಾಯಕರು ಕೆರೆ ಕಟ್ಟಿಸುವ ಸಲುವಾಗಿ ನೆಲವನ್ನು ಅಗೆಸುತ್ತಿದ್ದಾಗ  ಏಳು ಕೊಪ್ಪರಿಗೆ  ಚಿನ್ನಾಭರಣಗಳು ದೊರೆತವು. ಅದಷ್ಟೂ ಚಿನ್ನವನ್ನು ತನ್ನ ಕ್ಷೇತ್ರದ ಅಭಿವೃದ್ಧಿಗೆ ಸಂಪೂರ್ಣವಾಗಿ ವಿನಿಯೋಗಿಸಿದ ತಿಮ್ಮಪ್ಪ ನಾಯಕನನ್ನು ಜನರು ಕನಕರಾಯ, ಕನಕನಾಯಕ, ಕನಕದಾಸನೆಂದು ಕರೆದು ಗೌರವಿಸಿದರು.

ಆ ಪಾಠಶಾಲೆಯ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಅಬ್ರಾಹ್ಮಣನಾದ ವಿದ್ಯಾರ್ಥಿಯೋರ್ವನ ಮೇಲೆ ಯಾವತ್ತೂ ಅಸಮಾಧಾನ. ಇದನ್ನು ಪರಿಹರಿಸಲು ಜ್ಞಾನಿಯಾದ ಗುರುಗಳು ಎಲ್ಲರಿಗೂ ಒಂದೊಂದು ಬಾಳೆ ಹಣ್ಣನ್ನು ಕೊಟ್ಟು ಯಾರೂ ಇಲ್ಲದ ಜಾಗದಲ್ಲಿ ತಿಂದು ಬರಲು ಹೇಳಿದರು. ಅಂದು ಸಂಜೆ ಮತ್ತೆ ಎಲ್ಲರೂ ಸೇರಿದಾಗ ಗುರುಗಳು ಹಣ್ಣನ್ನು ಏನು ಮಾಡಿದಿರಿ ? ಎಂದು ಕೇಳಿದಾಗ, ಒಬ್ಬೊಬ್ಬರೂ ತಾವು ತಿಂದ ರೀತಿಯನ್ನು ಸವಿಸ್ತಾರವಾಗಿ ಹೇಳಿದರು. ಗುರುಗಳ ನೆಚ್ಚಿನ ಶಿಷ್ಯ ಮಾತ್ರ ಬಾಳೆ ಹಣ್ಣನ್ನು ಗುರುಗಳಿಗೆ ಮರಳಿಸುತ್ತಾ ಆ ದೇವರು ಸರ್ವಾಂತರ್ಯಾಮಿ ಹಾಗಾಗಿ ಯಾರೂ ನೋಡದ ಸ್ಥಳ ಈ ಜಗದಲ್ಲಿ ಯಾವುದು ಇಲ್ಲ ಎಂದು ಹೇಳಿದರು. ಆ ಶಿಷ್ಯನ ಮಾತನ್ನು ಕೇಳಿದ ಉಳಿದೆಲ್ಲ ಮಕ್ಕಳು ಕಕ್ಕಾವಿಕ್ಕಿಯಾಗಿ ಆತನನ್ನೇ ನೋಡಿದರೆ ಗುರುಗಳು ಹೆಮ್ಮೆಯಿಂದ ತಮ್ಮ ಶಿಷ್ಯನ ತಲೆ ಸವರಿದರು.ಆ ಶಿಷ್ಯನೇ ನಮ್ಮ ವಿಶ್ವ ಬಂಧುವೆನಿಸಿದ, ಕುಲದ ನೆಲೆಯನ್ನೇ ಪ್ರಶ್ನಿಸಿದ ದಾಸ ಸಾಹಿತ್ಯದ ಶ್ರೇಷ್ಠರಾದ ಕನಕದಾಸರು.

ಕನಕದಾಸರು

ಇನ್ನೊಂದು ಬಾರಿ ಕೂಡ ‘ಸ್ವರ್ಗಕ್ಕೆ ಯಾರು ಹೋಗುತ್ತಾರೆ ?’ ಎಂದು ಗುರುಗಳು ಕೇಳಿದಾಗ ‘ನಾನು’  ಹೋದರೆ ಹೋದೇನು ಎಂದು ಉತ್ತರಿಸಿದ ಅವರ ನೆಚ್ಚಿನ ಶಿಷ್ಯ. ‘ನಾನು’ ಎಂದರೆ ಅಹಂ ಎಂದೂ. ನಾನು ಎಂಬ ಅಹಂಕಾರವು ಮನುಷ್ಯನಲ್ಲಿ ಇಲ್ಲದೆ ಹೋದರೆ ಆತ ಸ್ವರ್ಗಕ್ಕೆ ಹೋಗಬಹುದು ಎಂದು ಮಾರ್ಮಿಕವಾಗಿ ಉತ್ತರಿಸಿದರು. ಇದು ಅವರು ಏರಿದ ಆಧ್ಯಾತ್ಮಿಕ ಔನ್ನತ್ಯಕ್ಕೆ ಸಾಕ್ಷಿ.

ಇಂದಿನ ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ 78 ಗ್ರಾಮಗಳ ಮಾಂಡಲೀಕ ರಾಗಿದ್ದ ಕುರುಬ ಸಮಾಜದ ಬೀರಪ್ಪನಾಯಕ ಮತ್ತು ಬಚ್ಚಮ್ಮ ದಂಪತಿಗಳಿಗೆ ತಿರುಪತಿಯ ತಿಮ್ಮಪ್ಪನ ಕೃಪಾಶೀರ್ವಾದದಿಂದ ಹುಟ್ಟಿದ ಪುತ್ರನೇ ತಿಮ್ಮಪ್ಪ ನಾಯಕ.

ಚಿಕ್ಕಂದಿನಿಂದಲೂ ತುಂಬ ಚೂಟಿಯಾಗಿದ್ದ ತಿಮ್ಮಪ್ಪ ನಾಯಕ ಕತ್ತಿವರಸೆ, ಕುದುರೆ ಸವಾರಿ ಮುಂತಾದ ಯುದ್ಧ ವಿದ್ಯೆಗಳ ಜೊತೆ ಜೊತೆಗೆ ಶಾಸ್ತ್ರ, ಸಂಗೀತ, ಸಾಹಿತ್ಯ, ಅಧ್ಯಯನಗಳಲ್ಲಿ ಸಾಕಷ್ಟು ಪರಿಣತಿಯನ್ನು ಹೊಂದಿದ್ದನು. ಆದರೆ ಪ್ರಾಪ್ತ ವಯಸ್ಕರಾಗುವ ಹೊತ್ತಿಗೆ ತಂದೆಯನ್ನು ಕಳೆದುಕೊಂಡದ್ದರಿಂದ ತಾಯಿಯ ಆಸರೆಯಲ್ಲಿ ತಂದೆಯ ಡಣ್ಣಾಯಕ ಹುದ್ದೆಯನ್ನು ಯಶಸ್ವಿಯಾಗಿ ನಿಭಾಯಿಸಲಾರಂಭಿಸಿದನು.
ಪ್ರಾಪ್ತ ವಯಸ್ಕರಾಗುತ್ತಲೆ ತಾಯಿ ಬಚ್ಚಮ್ಮ ತಿಮ್ಮಪ್ಪ ನಾಯಕರಿಗೆ ವಿವಾಹವನ್ನು ಮಾಡಿದರು.

ಒಂದು ಸಾರಿ ತಿಮ್ಮಪ್ಪ ನಾಯಕರು ಕೆರೆ ಕಟ್ಟಿಸುವ ಸಲುವಾಗಿ ನೆಲವನ್ನು ಅಗೆಸುತ್ತಿದ್ದಾಗ ಸುಮಾರು ಏಳು ಕೊಪ್ಪರಿಗೆ (ರಂಜಣಿಗೆ) ಯಷ್ಟು, ಚಿನ್ನಾಭರಣಗಳು ದೊರೆತವು. ಅದಷ್ಟೂ ಚಿನ್ನವನ್ನು ತನ್ನ ಕ್ಷೇತ್ರದ ಅಭಿವೃದ್ಧಿಗೆ ಸಂಪೂರ್ಣವಾಗಿ ವಿನಿಯೋಗಿಸಿದ ತಿಮ್ಮಪ್ಪ ನಾಯಕನನ್ನು ಜನರು ಕನಕರಾಯ, ಕನಕನಾಯಕ ಎಂದು ಕರೆದು ಗೌರವಿಸಿದರು. ಮುಂದೆ ಕೆಲ ತಿಂಗಳುಗಳಲ್ಲಿ ಕನಕ ನಾಯಕರು ತಾಯಿಯನ್ನು ಕಳೆದುಕೊಂಡರು. ಇನ್ನೇನು ತಾಯಿಯ ವಿಯೋಗ ದುಃಖದಿಂದ ಹೊರ ಬರುವಷ್ಟರಲ್ಲಿಯೇ ಅವರ ಪತ್ನಿಯೂ ಕೂಡ ಮರಣ ಹೊಂದಿದಳು. ಇದೇ ಸಮಯದಲ್ಲಿ ಕನಕ ನಾಯಕರು ವಿಜಯನಗರ ಸಾಮ್ರಾಜ್ಯದ ಒಂದು ಯುದ್ಧದಲ್ಲಿ ಅಪಾರ ಸೈನಿಕರ ಸಾವು ನೋವುಗಳನ್ನು ನೋಡಿ ಜೀವನದಲ್ಲಿ ಜಿಗುಪ್ಸೆ ಹೊಂದಿ ತಮ್ಮ ದಂಡನಾಯಕ ಹುದ್ದೆಯಿಂದ ನಿವೃತ್ತರಾದರು.

ಮುಂದೆ ವ್ಯಾಸರಾಯರ ಶಿಷ್ಯರಾಗಿ ಹರಿ ನಾಮ ಸ್ಮರಣೆಯನ್ನೇ ಜೀವನದ ಉಸಿರಾಗಿಸಿಕೊಂಡು ಕಾವ್ಯ, ಶಾಸ್ತ್ರ, ಮೀಮಾಂಸೆಗಳ ಅಧ್ಯಯನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡನು. ಅಲ್ಲಿಯೂ ಕೂಡ ಮೇಲ್ಜಾತಿಯ ಜನರಿಂದ ಉಪಟಳದ ಜೊತೆಗೆ ತಾಯಿ ಹೃದಯದ ಗುರುಗಳ ವಾತ್ಸಲ್ಯವನ್ನು, ಪ್ರೀತಿಯನ್ನು
ಅನುಭವಿಸಿದನು.

ಜಾತಿ, ಮತ, ಧರ್ಮಗಳ ಹೆಸರಿನಲ್ಲಿ ನಡೆಯುವ ಬೇಧ ಭಾವಗಳನ್ನು ಖಂಡಿಸುತ್ತಾ ಭಕ್ತನ ಭಕ್ತಿಯನ್ನು ಮೀರಿದ್ದು ಯಾವುದೂ ಈ ಜಗದಲ್ಲಿ ಇಲ್ಲ ಎಂಬ ಸತ್ಯವನ್ನು ಜಗಕ್ಕೆ ಸಾರಿದನು. ಅಪಾರ ಪ್ರಮಾಣದ ದಾಸ ಸಾಹಿತ್ಯದ ಸೃಷ್ಟಿಯ ಜೊತೆ ಜೊತೆಗೆ ಮುಂಡಿಗೆಗಳನ್ನು ಕೂಡ ಬರೆದನು. ತಿರುಮಕೂಡಲು, ಮೈಸೂರು, ಬನ್ನೂರು, ಮದನಪಲ್ಲಿ, ಕಾಗಿನೆಲೆ, ಬಾಡ, ಬಂಕಾಪುರ, ವಿಜಯನಗರ, ಹೀಗೆ ವಿಜಯನಗರ ಸಾಮ್ರಾಜ್ಯದಲ್ಲೆಲ್ಲ ಸಂಚರಿಸುತ್ತ ಕಾವ್ಯಗಳನ್ನು ರಚಿಸುತ್ತಾ, ಸಮಾಜದ ಅಂಕುಡೊಂಕುಗಳನ್ನು ತಿದ್ದುತ್ತಾ ಜನರನ್ನು ಜಾಗೃತಗೊಳಿಸಿದ. ಸೊಂಟದ ಮೇಲೊಂದು ಪಂಜೆ ಹೆಗಲ ಮೇಲೊಂದು ಕರಿ ಕಂಬಳಿ, ಹಣೆಯ ಮೇಲೆ ನಾಮ ಅವರ ವೇಷಭೂಷಣವಾಗಿತ್ತು. ನೀರಿನ ಹಸಿಬೆ ಮತ್ತು ಮರದ ತಣಿಗೆ (ತಟ್ಟೆ) ಅವರ ಆಸ್ತಿಗಳಾಗಿದ್ದವು.
ದಾಸ ಸಾಹಿತ್ಯವು ಕನ್ನಡ ಸಾಹಿತ್ಯಕ್ಕೆ ನೀಡಿದ ಅತಿ ದೊಡ್ಡ ಸಾಹಿತ್ಯಿಕ ಕೊಡುಗೆ. ಅಲ್ಲಿಯವರೆಗೂ ಭಕ್ತಿ ಸಾಹಿತ್ಯ ರಚನೆಯೇ ದಾಸ ಸಾಹಿತ್ಯದ ಮೂಲವಾಗಿದ್ದರೆ ಕನಕದಾಸರು ವಿಡಂಬನೆ ಮತ್ತು ವೈಚಾರಿಕತೆಗಳನ್ನು ಒಳಗೊಂಡ ಸಾಹಿತ್ಯವನ್ನು ಸೃಷ್ಟಿಸುತ್ತ ಸಮಾಜದ ವಿಪರೀತ ನಡಾವಳಿಗಳನ್ನು ಪ್ರಶ್ನಿಸುವಂತಹ ವೈಚಾರಿಕ ದಾಸ ಸಾಹಿತ್ಯವನ್ನು ಸೃಷ್ಟಿಸಿದರು.

ಕುಲ ಕುಲ ಕುಲ ವೆಂದು ಹೊಡೆದಾಡದಿರಿ ಆಯ್ಯ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಬಲ್ಲಿರಾ… ! ಎಂದು ಜಾತಿ, ಕುಲ ಧರ್ಮಗಳನ್ನು ಪ್ರಶ್ನಿಸಿದರೆ

‘”ಕಿಲುಬುವ ಬಟ್ಟಲೊಳು ಹುಳಿ ಕಲಸಿ
ಉಣಬಹುದೆ”

ತಲ್ಲಣಿಸದಿರು ಕಂಡ್ಯ ತಾಳು ಮನವೇ ಎಲ್ಲರನು ಸಲಹುವನು’

ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ”

ಡೊಂಕು ಬಾಲದ ನಾಯಕರೇ ನೀವೇನೂಟವ ಮಾಡುವಿರಿ

ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತ್ತು

ಹೀಗೆ ಹಲವಾರು ಕಾವ್ಯಗಳನ್ನು ರಚಿಸಿದರು. ರಾಮಧಾನ್ಯ ಚರಿತೆಯಲ್ಲಿ ರಾಗಿಗೆ ರಾಮಧಾನ್ಯದ ಸ್ಥಾನ ನೀಡಿದರು.

ಪಂಚ ಮಹಾಕಾವ್ಯಗಳಾದ
ರಾಮಧಾನ್ಯಚರಿತ(ಜಾತಿ ಮತ ಧರ್ಮಗಳ ಕುರಿತು), ಮೋಹನ ತರಂಗಿಣಿ(ದಾಂಪತ್ಯದ ಕುರಿತು)
ನಳ ಚರಿತ್ರೆ ,
ಹರಿಭಕ್ತಿಸಾರ,
ನರಸಿಂಹ ಸ್ತವ

ಗಳನ್ನು ರಚಿಸಿದರು. ಈ ಎಲ್ಲಾ ಸಾಹಿತ್ಯಗಳನ್ನು ಅವರು ಷಟ್ಪದಿ, ಸಾಂಗತ್ಯ ಮೊದಲಾದ ಛಂದೋಬಂಧಗಳಿಂದ ರಚಿಸಿದರು.

ಶ್ರೇಷ್ಠ ಭಕ್ತ, ಚಿಂತಕ, ಸಾಹಿತಿ ಆದ ಕನಕದಾಸರು ಪುರಂದರದಾಸರ ಸಮಕಾಲೀನರು. ದಾಸ ಸಾಹಿತ್ಯದ ಅಶ್ವಿನಿ ದೇವತೆಗಳು ಎಂದೇ ಇವರಿಬ್ಬರು ಹೆಸರಾದವರು. ಇಬ್ಬರೂ ವ್ಯಾಸರಾಯರ ನೆಚ್ಚಿನ ಶಿಷ್ಯರು. ಶ್ರೇಷ್ಠ ಸಂತರು ಕೀರ್ತನಕಾರರು, ಮಹಾ ಮಾನವತಾವಾದಿ ಕನಕದಾಸರು 15 -16ನೇ ಶತಮಾನದ ಮಹಾನ್ ಸಂತರು.
ಮುಂದೆ ತಮ್ಮ ಜೀವಿತದ ಕೊನೆಯ ಕಾಲದಲ್ಲಿ ತಮ್ಮ ಊರಾದ ಬಾಡದಲ್ಲಿ ನೆಲೆಸಿ, ಅಲ್ಲಿಯೇ ತಮ್ಮ ಆರಾಧ್ಯ ದೈವವಾದ ಕಾಗಿನೆಲೆ ಆದಿಕೇಶವನ ದೇಗುಲ ಸ್ಥಾಪಿಸಿ ‘ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು
ಪದುಮನಾಥನ ಪಾದದೊಲುಮೆ ಎನಗೆ ದೊರಕಿತು’ ಎಂದು ಭಜಿಸುತ್ತಾ ಸುಮಾರು ನೂರು ವರ್ಷಗಳ ಕಾಲ ಜೀವಿಸಿ ಆದಿ ಕೇಶವನಲ್ಲಿ ಮುಕ್ತಿ ಹೊಂದಿದರು.

ಕೆಲವು ವರ್ಷಗಳ ಹಿಂದೆ ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ ಕನಕದಾಸರು ದಾಸ ಸಾಹಿತ್ಯಕ್ಕೆ ನೀಡಿದ ಶ್ರೇಷ್ಠ ಕೊಡುಗೆಯ ಸ್ಮರಣಾರ್ಥವಾಗಿ ಬೃಹದಾಕಾರದ ಕೋಟೆ ಗೋಡೆಯನ್ನು ಮತ್ತು ಸ್ಮಾರಕ ಭವನವನ್ನು ನಿರ್ಮಿಸಲಾಗಿದೆ. ಸ್ಮಾರಕ ಭವನದ ಗೋಡೆಗಳಲ್ಲಿ ಕನಕದಾಸರ ಜೀವನದ ಮುಖ್ಯಘಟ್ಟಗಳನ್ನು ಉಬ್ಬು ಚಿತ್ರಗಳಲ್ಲಿ ರಚಿಸಲಾಗಿದೆ. ಭವನದ ಮುಖ್ಯ ಭಾಗದಲ್ಲಿ ಶಿಲಾ ಫಲಕಗಳಲ್ಲಿ ಅವರ ಸಾಹಿತ್ಯದ ರಚನೆಗಳನ್ನು ಒಡಮೂಡಿಸಲಾಗಿದೆ. ಭವನದ ಕೇಂದ್ರ ಸ್ಥಾನದಲ್ಲಿ ಕನಕದಾಸರ ಬೃಹತ್ ಶಿಲಾ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.

ಇಂಥ ಮಹಾನ್ ಚೇತನವನ್ನು ಪಡೆದ ಕನ್ನಡ ನಾಡು ಧನ್ಯ. ಕನಕದಾಸರ ವೈಚಾರಿಕ ಮನೋಭಾವ, ಮಾನವತಾವಾದ, ವಿಶ್ವಬಂಧುತ್ವ ನಮಗೆ ದಾರಿದೀಪವಾಗಲಿ ಎಂಬ ಆಶಯದೊಂದಿಗೆ

ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ ಗದಗ್.

( ದಿನಾಂಕ 18-11-2024 ಕನಕದಾಸರ ಜಯಂತಿ ಪ್ರಯುಕ್ತ ಈ ಲೇಖನ ಪ್ರಕಟಿಸಲಾಗಿದೆ.)

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ