ದೀಪಾವಳಿ ಹಬ್ಬ (ಚಿಂತನೆ)
ದೀಪ ನಗುತ್ತಿತ್ತು , ಬೇರೆಯವರಿಗೆ ಬೆಳಕು ತಾ ಚೆಲ್ಲಿ
ಅದೇ ದೀಪ ನಲುಗುತ್ತಿತ್ತು , ಕತ್ತಲೆ ಕಂಡು ತನ್ನ ತಳದಲ್ಲಿ .
ದೀಪಕ್ಕೊಂದು ದೀಪ ಆಸರೆಯಾದಾಗ ದೀಪಗಳು
ನನಗು ನಗುತಾ ಉರಿಯುತ್ತಿದ್ದವು ಪರಸ್ಪರರಿಗೆ ಬೆಳಕ ಉಣಬಡಿಸಿ ಬೆಳಕಾದ ಆನಂದದ ಅಲೆಗಳಲ್ಲಿ.
ದೀಪಾವಳಿ (ದೀಪಗಳ ಸಾಲು) ದೀಪಗಳಿಂದ ದೀಪಗಳನ್ನು ಹಚ್ಚುವ ಹಬ್ಬ. ಇದನ್ನು ವಿಕ್ರಮಶಕೆಯ ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ. ವಿಕ್ರಮಶಕೆ ಉತ್ತರ ಭಾರತದಲ್ಲಿ ಉಪಯೋಗಿಸಲ್ಪಡುವುದರಿಂದ ಅಲ್ಲಿ ದೀಪಾವಳಿ ಹೊಸ ವರ್ಷದ ಹಬ್ಬವೂ ಹೌದು. ಭಾರತದಲ್ಲಿ ಸಾಂಪ್ರದಾಯಿಕವಾಗಿ ಪಂಚಾಂಗ ಚಂದ್ರಮಾನವನ್ನು ಅವಲಂಬಿಸಿವೆ. ಅಂದರೆ ಆಶ್ವಯುಜ ಮಾಸ ಕೃಷ್ಣಪಕ್ಷದ ಚತುರ್ದಶಿ, ಅಮಾವಾಸ್ಯೆ ಹಾಗೂ ಕಾರ್ತಿಕ ಮಾಸ ಶುಕ್ಲಪಕ್ಷದ ಪಾಡ್ಯ – ಈ ದಿನಗಳಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತಿದೆ.
ಅಸತೋಮಾ ಸದ್ಗಮಯಾ, ತಮಸೋ ಮಾ ಜ್ಯೋತಿರ್ಗಮಯ,
ಎಂಬ ನಾಣ್ಣುಡಿಯಂತೆ ಈ ಬೆಳಕಿನ ಹಬ್ಬ ದೀಪಾವಳಿ. ನಮ್ಮ ಜೀವನದ ಕಷ್ಟ, ನೋವು ನಲಿವುಗಳನ್ನು ಹೊಡೆದೋಡಿಸಿ ಜೀವನದಲ್ಲಿ ಬೆಳಕನ್ನು ಹುಡುಕುವ ಅಂದರೆ ಪರಿಹಾರವನ್ನು ಕಂಡು ಸಂಭ್ರಮಿಸುವಂತಹ ವಿಶೇಷ ಹಬ್ಬ. ಇದು ‘ಬೆಳಕಿನ ಹಬ್ಬ’ ಎಂದೇ ಕರೆಯಲ್ಪಡುತ್ತದೆ. ಬಹು ಹಿಂದಿನಿಂದಲೂ ಹಿರಿಯರು ಆಚರಣೆ ಮಾಡಿಕೊಂಡು ಬಂದಿರುವ ಈ ಹಬ್ಬದ ವೈಶಿಷ್ಟ್ಯ ಎಂದರೆ , ದೀಪಾವಳಿಯನ್ನು ನಾವು ಇಂದು ಮೂರು ದಿನಗಳಿಗೆ ಸೀಮಿತಗೊಳಿಸಿದರೂ ಮೂಲತಃ ಇದು ಐದು ದಿನಗಳ ಹಬ್ಬ.
ಐದು ದಿನಗಳಲ್ಲಿ ಮೊದಲ ದಿನ ನೀರು ತುಂಬುವುದು, ಎರಡನೇ ದಿನ ನರಕ ಚತುರ್ದಶಿ, ಮೂರನೇ ದಿನ ದೀಪಾವಳಿ ಅಮವಾಸ್ಯೆ , ನಾಲ್ಕನೇ ದಿನ ಬಲಿಪಾಡ್ಯಮಿ ಹಾಗೂ ಐದನೇ ದಿನ ಯಮದ್ವಿತೀಯ ಆಚರಣೆಯಾಗಿರುತ್ತದೆ.
ಬೌದ್ಧರಲ್ಲಿರುವ ಹಲವಾರು ಪಂಗಡಗಳು ದೀಪಾವಳಿಯ ಮೂರು ದಿನ ಪೂಜೆ ಮಾಡುತ್ತಾರೆ. ಸಿಖ್ಖರು ಕೂಡ ಆಚರಿಸುತ್ತಾರೆ. ಒಟ್ಟಿನಲ್ಲಿ ಇದು ನಮ್ಮ ದೇಶದಲ್ಲಿ ಹುಟ್ಟಿರುವ ಮೂಲತಃ ಭಾರತೀಯರು, ಬುಡಕಟ್ಟು ಜನಾಂಗದಿಂದ ಹಿಡಿದು ಜೈನರು, ಬೌದ್ಧರು ಸಿಖ್ಖರು, ಹಿಂದೂಗಳು, ಕಾಡಿನಿಂದ ಹಿಡಿದು ನಾಡಿನ ಜನರವರೆಗೂ ಆಚರಿಸುವ ಪುರಾತನ ಹಬ್ಬವಾಗಿದೆ. ಇದನ್ನು ‘ಕಾರ್ತಿಕ ದೀಪೋತ್ಸವ’ ಎಂದೂ ಕರೆಯಲಾಗುತ್ತದೆ.
ಕಾರ್ತಿಕ ಮಾಸದಲ್ಲಿ ಸೂರ್ಯಾಸ್ತ ಬೇಗನೆ ಆಗುತ್ತದೆ. ಹೀಗಾಗಿ ದೀಪಗಳ ಆವಳಿ ಅಂದರೆ ಸಾಲು ಸಾಲು ದೀಪಗಳನ್ನು ಬೆಳಗಿ ಕತ್ತಲೆಯನ್ನು ಹೋಗಲಾಡಿಸಲು ನಾವು ದೀಪ ಬೆಳಗುತ್ತೇವೆ.
ದೀಪಾವಳಿ ಕಳೆದ ನಂತರದ ಕಾಲ ಚಳಿಗಾಲ ಆರಂಭವಾಗುತ್ತದೆ.
ಈ ಹಬ್ಬದ ಇನ್ನೊಂದು ಮಹತ್ವದ ಆಚರಣೆ ಅಂದರೆ ಅದು ಲಕ್ಷ್ಮೀ ಪೂಜೆ ಮಾಡುವ ಕ್ರಮ. ಮನುಜರು ತಮ್ಮ ಬಡತನದ ದಾರಿದ್ರ್ಯ ಕಳೆದು ಐಶ್ವರ್ಯ ಸಂಪತ್ತು ಸುಖ ಸಮೃದ್ಧಿ ಲಭಿಸಲಿ ಅಥವಾ ಲಭಿಸುತ್ತದೆ ಎನ್ನುವ ಉದ್ದೇಶ ಭಾವದಿಂದ ಎಲ್ಲರೂ ಹಣದ ಅಧಿದೇವತೆಯಾದ ಧನಲಕ್ಷ್ಮೀಯನ್ನು ಭಕ್ತಿ ಭಾವದಿಂದ ಪೂಜೆ ಮಾಡುತ್ತಾರೆ.
ಕಥೆ ಪುರಾಣಗಳು ಏನೇ ಹೇಳಿದರೂ ಅದರ ಹೊರತಾಗಿಯೂ ನಾವು ಈ ಹಬ್ಬವನ್ನು ನೋಡುವುದಾದರೆ
ಪ್ರತಿ ಜೀವಿಯೂ ತನ್ನ ಬದುಕನ್ನು ನಡೆಸಲು ಬೆಳಕಿನ ಅಗತ್ಯತೆ ಇದೆ. ಹಗಲು ಸೂರ್ಯನ ಬೆಳಕು ಬದುಕಿಗೆ ದೀಪವಾದರೆ ರಾತ್ರಿ ಚಂದ್ರನ ಬೆಳಕು ಸ್ವಲ್ಪ ಆಸರೆಯಾಗುತ್ತದೆ. ಆದರೆ ಚಂದ್ರನ ಬೆಳಕು ಅಮಾವಾಸ್ಯೆ ಮತ್ತು ಹುಣ್ಣಿಮೆಯ ಪ್ರಕೃತಿಯ ಪ್ರಕ್ರಿಯೆಯಲ್ಲಿ ಬೆಳಕು ಸಂಪೂರ್ಣ ಸಿಗುವುದಿಲ್ಲ. ಹಾಗಾಗಿ ಮನುಷ್ಯ ತನ್ನ ಜೀವನಕ್ಕೆ ದೀಪವನ್ನು ಕಂಡುಕೊಳ್ಳುವ ಪ್ರಯತ್ನ ಮಾಡಿ ಆ ಮೂಲಕ ಬೆಳಕು ಮಾಡಿಕೊಂಡು ಜೀವನ ಸಾಗಿಸುತ್ತಾ ನಡೆದು ಬಂದ ದಾರಿ. ಇಲ್ಲಿ ದೀಪದ ಸಂಕೇತವನ್ನು ಅಥವಾ ಬೆಳಕಿನ ಸಂಕೇತವನ್ನು ಮನುಷ್ಯನಲ್ಲಿರುವ ಅಂಧಕಾರ, ಅಜ್ಞಾನ, ಬುದ್ಧಿ, ಆಚಾರ, ವಿಚಾರಗಳಿಗೆ ಅಂಟಿಕೊಂಡಿರುವಂತಹ ಕತ್ತಲೆಯನ್ನು ಹೋಗಲಾಡಿಸುವಂತಹದ್ದು ಎಂಬರ್ಥ ಕೂಡ ನೋಡಲಾಗುತ್ತದೆ. ಜೀವನದ, ಮನದ ಎಲ್ಲಾ ಋಣಾತ್ಮಕ ಅಂಶಗಳನ್ನು ಹೋಗಲಾಡಿಸಲು ಈ ದೀಪ ಬೆಳಗುತ್ತದೆ ಎಂಬ ನಂಬಿಕೆ ಅಪಾರವಾಗಿದೆ.
ದೀಪಾವಳಿ ಹಬ್ಬದ ಸಡಗರದಲ್ಲಿ ಪ್ರತಿಯೊಬ್ಬರೂ ದೀಪ ಹಚ್ಚುವ ಮೂಲ ಉದ್ದೇಶ ಇಷ್ಟೇ ,
‘ದೀಪದಿಂದ ದೀಪ ಹಚ್ಚಬೇಕು ಮಾನವ’ ಎನ್ನುವ ಸಾಲುಗಳು ಈ ಹಬ್ಬದ ವಿಶೇಷತೆಯನ್ನು ಸಾರುತ್ತದೆ.
ದೀಪ ತಾ ಉರಿದರೆ ತನ್ನ ಬಿಟ್ಟು ಉಳಿದೆಲ್ಲ ಕಡೆ ಬೆಳಕು ಚೆಲ್ಲುತ್ತದೆ. ಆ ದೀಪದಿಂದ ಮತ್ತೊಂದು ದೀಪ ಹಚ್ಚಿದಾಗ ಎರಡೂ ದೀಪಗಳಿಗೆ ಬೆಳಕು ಪಸರಿಸುತ್ತದೆ. ಅದೇ ರೀತಿಯಾಗಿ ಒಬ್ಬರು ಇನ್ನೊಬ್ಬರ ಮನೆ, ಮನ ಬೆಳಗುತ್ತಿರಲಿ ಎನ್ನುವ ಉದ್ದೇಶದಿಂದ. ಅಂದರೆ ಒಬ್ಬರ ನೋವು ನಲಿವುಗಳಿಗೆ ಮತ್ತೊಬ್ಬರ ಸ್ಪಂದನೆ ಇದ್ದರೆ ಖಂಡಿತ ಪರಸ್ಪರರ ಜೀವನ ಸುಖಮಯವಾಗಲಿದೆ.
ದೀಪ ತನಗಾಗಿ ಅಲ್ಲದಿದ್ದರೂ ಪರರಿಗಾಗಿ ಬೆಳಗುವಂತೆ ಪ್ರತಿಯೊಬ್ಬರೂ ಜೀವನದಲ್ಲಿ ಸಹಾಯ , ಸಹಕಾರ , ಸನ್ಮಾರ್ಗದ ಮನೋಭಾವದಿಂದ ನಡೆದುಕೊಂಡರೆ ಅದೇ ಮಾನವೀಯತೆ ಮೆರೆದ ಹಾಗೆ. ಆಗಲೇ ಈ ದೀಪಾವಳಿ ಹಬ್ಬಕ್ಕೂ ಒಂದು ಅರ್ಥ ಪೂರ್ಣ ಕೊಡುಗೆ ನೀಡಿದಂತಾಗುತ್ತದೆ. ಜೀವನ ಪಾವನವಾಗುತ್ತದೆ .
– ಡಾ. ಮಹೇಂದ್ರ ಕುರ್ಡಿ
ಹಟ್ಟಿ ಚಿನ್ನದ ಗಣಿ. ರಾಯಚೂರು