ದೇವರ ಬ್ಯಾಂಕಿನಲ್ಲಿ…ಇರಲಿ ನಮ್ಮದೊಂದು ಖಾತೆ.
ಆತ ಓರ್ವ ಅತ್ಯಂತ ಶ್ರೀಮಂತ ವ್ಯಕ್ತಿ. ಮುಟ್ಟಿದ್ದೆಲ್ಲ ಚಿನ್ನವಾಗುವ ಮಿಡಾಸನ ಕಥೆಯಂತೆಯೇ ಆತ ಕೈಗೊಂಡ ಕಾರ್ಯಗಳೆಲ್ಲ ಯಶಸ್ವಿಯಾಗಿ ಹಣದ ಹೊಳೆಯೇ ಆತನ ಬದುಕಿನಲ್ಲಿ ಹರಿಯುತ್ತಿತ್ತು.
ಸುಸಜ್ಜಿತವಾದ ಆಕರ್ಷಕ ಮನೆ, ಓಡಾಡಲು ಕಾರು ನೆಚ್ಚಿನ ಮಡದಿ ಮಕ್ಕಳು,ಆಳುಕಾಳುಗಳು ಏರು ಗತಿಯಲ್ಲಿ ಸಾಗುತ್ತಿರುವ ವ್ಯಾಪಾರ-ವ್ಯವಹಾರ, ಸಮಾಜದಲ್ಲಿ ಉನ್ನತ ಸ್ಥಾನಮಾನ, ಕೀರ್ತಿ ಎಲ್ಲವೂ ಆತನಿಗೆ ಇತ್ತು.
‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ’ ಎಂಬ ಮಾತಿನಂತೆ ಇತ್ತೀಚೆಗೆ ಆತನಿಗೆ ತಾನು ಸತ್ತ ಮೇಲೆ ತನ್ನ ಎಲ್ಲಾ ಆಸ್ತಿ ಅಂತಸ್ತು ಸಂಪತ್ತನ್ನು ತಾನು ಹೊತ್ತೊಯ್ಯಲಾಗುವುದಿಲ್ಲ ಎಂಬ ಆತಂಕ ಕಾಡತೊಡಗಿತ್ತು. ಈ ಕುರಿತು ಸದಾಗಂಭೀರ ಯೋಚನೆಯಲ್ಲಿ ಮುಳುಗುತ್ತಿದ್ದ ಆತನ ಚರ್ಯೆಯನ್ನು ಗಮನಿಸಿದ ಪತ್ನಿ, ಮಕ್ಕಳು ಆತನನ್ನು ಪ್ರಶ್ನಿಸಿದಾಗ ಅವರ ಮಾತನ್ನು ಮಧ್ಯದಲ್ಲಿಯೇ ತಳ್ಳಿ ಹಾಕಿದ ಆತ ಮತ್ತಷ್ಟು ವ್ಯಾಕುಲನಾದ.
ಕೊನೆಗೊಂದು ದಿನ ಅತ್ಯಂತ ಮೇಧಾವಿಗಳಾದ ತನ್ನ ಕಚೇರಿಯ ಸಿಬ್ಬಂದಿಯನ್ನು ತನ್ನ ಕಚೇರಿಯ ಮೀಟಿಂಗ್ ಹಾಲ್ ಗೆ ಕರೆದು ನನ್ನ ಆಸ್ತಿ ಪಾಸ್ತಿಗಳನ್ನು, ಸಕಲ ವೈಭವಗಳನ್ನು ಸತ್ತ ನಂತರವೂ ಅನುಭವಿಸಲು ಮೇಲಿನ ಲೋಕಕ್ಕೆ! ಕೊಂಡೊಯ್ಯಲು ಸಾಧ್ಯವೇ? ಎಂದು ಪ್ರಶ್ನಿಸಿದನು.
ಇಲ್ಲಿಯವರೆಗೂ ಕಚೇರಿ ನಿರ್ವಹಣೆ, ಕಚೇರಿಗೆ ಸಂಬಂಧಪಟ್ಟ ದೇಶದ ವಿವಿಧ ಕಂಪನಿಗಳೊಂದಿಗೆ ವ್ಯಾಪಾರ ಮತ್ತು ತಮ್ಮ ಕೆಲಸ ಕಾರ್ಯಗಳ ಅಭಿವೃದ್ಧಿಯ ಕುರಿತು ಮಾತ್ರ ಯೋಚಿಸುತ್ತಿದ್ದ ಕಂಪನಿಯ ಸಿಬ್ಬಂದಿಗೆ ತಮ್ಮ ಕಂಪನಿಯ ಮಾಲೀಕನ ಈ ಪ್ರಶ್ನೆ ಸೋಜಿಗವನ್ನುಂಟು ಮಾಡಿತು. ಏನು ಉತ್ತರ ಕೊಡಬೇಕೆಂದು ಗೊತ್ತಾಗದೆ ಕಕ್ಕಾವಿಕ್ಕಿಯಾದರು.
ಬಹಳಷ್ಟು ಯೋಚಿಸಿದ ಮೇಲೆ ಎಲ್ಲರೂ ತಮಗೆ ತೋಚಿದ ಸಲಹೆಗಳನ್ನು ನೀಡಲಾರಂಭಿಸಿದರು. ಆದರೆ ಆ ಎಲ್ಲ ಸಲಹೆಗಳು ಸ್ಮಶಾನದವರೆಗೆ ಮಾತ್ರ ಎಂಬ ಸತ್ಯ ಮಾಲೀಕ ಮತ್ತು ಕೆಲಸಗಾರರಿಬ್ಬರಿಗೂ ಗೊತ್ತಿತ್ತು.
ಗಹನವಾದ ಚರ್ಚೆಯಲ್ಲಿ ತೊಡಗಿದ ಮಾಲೀಕ ಮತ್ತು ಸಿಬ್ಬಂದಿಗಳಿಗೆ ನೀರು, ಚಹಾ ಮತ್ತು ಬಿಸ್ಕೆಟ್ ನೀಡಲು ಓಡಾಡುತ್ತಿದ್ದ ವೃದ್ಧ ಜವಾನನೊಬ್ಬ ತನ್ನಲ್ಲಿಯೇ ತಾನು ಮುಗುಳ್ನಗುತ್ತಿರುವುದನ್ನು
ಗಮನಿಸಿದ ಮಾಲೀಕ ಸಿಡಿಮಿಡಿ ಗೊಂಡು ಆತನನ್ನು ಕರೆದನು.
ಅದೇಕೆ ಹಾಗೆ ನಗುತ್ತಿರುವೆ? ನಿನಗೇನಾದರೂ ಇದರ ಕುರಿತು ಅರಿವಿದ್ದರೆ ನೀನು ಕೂಡ ನಿನ್ನ ಅಭಿಪ್ರಾಯವನ್ನು ಹಂಚಿಕೊಳ್ಳಬಹುದು ಎಂದು ಹೇಳಿದ.
ಮಾಲೀಕನ ಕರೆ ಕೇಳಿ ಗಾಬರಿಯಿಂದಲೇ ಮಾಲೀಕನ ಬಳಿ ಬಂದ ಜವಾನ ಇದೀಗ ತುಸು ನಿರಾತಂಕದಿಂದ ತಲೆಯನ್ನು ಎತ್ತಿ “ಸರ್, ತಾವು ವ್ಯಾಪಾರದ ಅಭಿವೃದ್ಧಿಗಾಗಿ ವಿದೇಶಗಳಿಗೆ ಹೋಗುತ್ತಿರಲ್ಲವೇ” ಎಂದು ಕೇಳಿದ.
ಆತನ ಪ್ರಶ್ನೆಗೆ “ಹೌದು, ಹೋಗುತ್ತೇನೆ” ಎಂದು ಮಾಲೀಕರು ಹೇಳಿದರು.
“ಯಾವ್ಯಾವ ದೇಶಗಳಿಗೆ ಹೋಗಿದ್ದೀರಿ ಸರ್” ಎಂದು ಜವಾನ ಕೇಳಲು ಮಾಲೀಕರು ತುಸು ಹೆಮ್ಮೆಯಿಂದ ಅಮೆರಿಕ, ಇಂಗ್ಲೆಂಡ್, ರಷ್ಯಾ, ದುಬೈ ಎಂದು ಹಲವಾರು ದೇಶಗಳ ಹೆಸರನ್ನು ಹೇಳಿದರು.
ಆಗ ಜವಾನ ಸರ್ ಅಮೇರಿಕಾದಲ್ಲಿ ಭಾರತದ ರೂಪಾಯಿ ಹಣ ಚಲಾವಣೆ ಆಗುತ್ತದೆಯೇ?
ಎಂದು ಕೇಳಿದ.
“ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ನೀನು ಇಂಥ ಪ್ರಶ್ನೆ ಕೇಳಬಹುದೇ?
ಅಮೆರಿಕಾದಲ್ಲಿ ಡಾಲರ್ ಮಾತ್ರ ಬಳಸಲಾಗುತ್ತದೆ” ಎಂದು ಉತ್ತರಿಸಿದ.
“ಹಾಗಾದರೆ ನೀವು ರುಪಾಯಿ ಹಣವನ್ನು ಹೇಗೆ ಡಾಲರ್ ಗೆ ಪರಿವರ್ತಿಸುತ್ತೀರಿ ” ಎಂದು ಜವಾನ ಕೇಳಲು ತುಸು ಅಸಹನೆಯಿಂದಲೇ ಮಾಲೀಕ
” ಏರ್ಪೋರ್ಟ್ ನ ಕರೆನ್ಸಿ ಎಕ್ಸ ಚೇಂಜ್ ವಿಭಾಗದಲ್ಲಿ
ಭಾರತದ ಹಣವನ್ನು ನೀಡಿದರೆ ಅದಕ್ಕೆ ಸರಿಸಮನಾದ ಮೊತ್ತದ ಅಮೆರಿಕದ ಡಾಲರಗಳನ್ನು
ನೀಡುತ್ತಾರೆ, ಆದರೆ ಈಗೇಕೆ ಇಂತಹ ಅಸಂಬದ್ಧ ಪ್ರಶ್ನೆ?” ಎಂದು ಕೇಳಿದ.
ಹೇಳುತ್ತೇನೆ ಸರ್… ಭಾರತದ ರೂಪಾಯಿ ಅಮೆರಿಕದಲ್ಲಿ ಡಾಲರ್ ಆಗಿ, ಇಂಗ್ಲೆಂಡಿನಲ್ಲಿ ಪೌಂಡ ಆಗಿ, ದುಬೈನಲ್ಲಿ ದಿರ್ಹಮ್ ಆಗಿ ಚಲಾಯಿಸಲ್ಪಡುತ್ತದೆ ಅಲ್ಲವೇ? ಎಂದು ಪ್ರಶ್ನಿಸಲು
ಮಾಲೀಕನೊಂದಿಗೆ ಆತನ ಎಲ್ಲ ಸಿಬ್ಬಂದಿಗಳು ಹೌದೆಂದು ತಲೆ ಆಡಿಸಿದರು.
ಕೂಡಲೇ ಜವಾನ “ಹಾಗೆಯೇ ದೇವರ ಲೋಕದಲ್ಲಿ ನಮ್ಮ ಹಣಕ್ಕೆ ಯಾವುದೇ ಮೌಲ್ಯ ಇರುವುದಿಲ್ಲ. ಅದು ಅಲ್ಲಿ ಚಲಾವಣೆ ಆಗುವುದೂ ಇಲ್ಲ… ಅಲ್ಲಿ ಚಲಾವಣೆ ಆಗುವುದು ಬೇರೆಯದೇ ವಸ್ತು. ಅದನ್ನು ನಾವು ನಮ್ಮ ದೇಶದಲ್ಲಿ ವಿನಿಯೋಗಿಸುವ ಮೂಲಕ ಅಲ್ಲಿ ಪಡೆದುಕೊಳ್ಳಬಹುದು” ಎಂದು ಹೇಳಿದ.
ಮಾಲೀಕ ಲಗುಬಗೆಯಿಂದ “ಹಾಗಾದರೆ ಆ ಪದ್ಧತಿ ಯಾವುದು” ಎಂದು ಕೇಳಿದ.
” ನಿಮ್ಮಲ್ಲಿರುವ ಸಂಪತ್ತಿನ ಕೆಲ ಭಾಗವನ್ನು ವಿನಿಯೋಗಿಸಿ ಬಡವರಿಗೆ, ದೀನ ದಲಿತರಿಗೆ, ಅಸಹಾಯಕರಿಗೆ,ಅಂಗವಿಕಲರಿಗೆ ದಾನ ಧರ್ಮಗಳನ್ನು ಮಾಡಬೇಕು., ನಿರ್ಗತಿಕ ಬಡ ಮಕ್ಕಳಿಗೆ ಓದಿಸುವ ಮೂಲಕ ನಿಮ್ಮ ಹಣವನ್ನು ಸದ್ವಿನಿಯೋಗ ಮಾಡಬೇಕು. ಆಗ ನಿಮಗೆ ನೆಮ್ಮದಿ, ತೃಪ್ತಿ ಸಂತಸ ದೊರೆಯುತ್ತದೆ. ಇದರ ಜೊತೆಗೆ ನೀವು ಮಾಡಿದ ಒಳ್ಳೆಯ ಕರ್ಮಗಳು, ದಾನಗಳು ಪುಣ್ಯದ ರೂಪದಲ್ಲಿ ದೇವರ ಲೋಕದಲ್ಲಿನ ನಿಮ್ಮ ಕರ್ಮದ ಖಾತೆಗೆ ಜಮಾ ಆಗುತ್ತವೆ” ಎಂದು ಅತ್ಯಂತ ಸರಳವಾಗಿ ಉತ್ತರಿಸಿದನು ಆ ವೃದ್ಧ ಜವಾನ.
ಜವಾನನ ಮಾತು ತಮಗೆಲ್ಲ ಒಪ್ಪಿಗೆಯಾಯಿತು ಎಂಬಂತೆ ಎಲ್ಲ ಸಿಬ್ಬಂದಿ ವರ್ಗದವರು ಚಪ್ಪಾಳೆ ಹೊಡೆದರೆ “ಎರಡೆರಡು ಡಿಗ್ರಿ ಪಡೆದು ಮ್ಯಾನೇಜ್ಮೆಂಟ್ ಕಲಿತು ಸಾಕಷ್ಟು ಹಣ ಸಂಪಾದಿಸಿದ ನಾವೇ ಜಾಣರು ಎಂಬಂತೆ ವರ್ತಿಸುತ್ತಿದ್ದ ನಮಗೆಲ್ಲಾ ಜೀವನಾನುಭವ ಎಲ್ಲಕ್ಕಿಂತ ದೊಡ್ಡ ವಿದ್ಯೆ ಎಂಬ ಪಾಠವನ್ನು ನೀನು ಕಲಿಸಿಕೊಟ್ಟೆ” ಎಂದು ಸಂತಸದಿಂದ ಆ ಜವಾನನನ್ನು ತಬ್ಬಿಕೊಂಡ ಮಾಲೀಕ ಆತನನ್ನು ಮುಕ್ತವಾಗಿ ಪ್ರಶಂಶಿಸಿದ.
ಮುಂದೆ ತನ್ನ ಸಂಪತ್ತಿನ ಬಹಳಷ್ಟು ಭಾಗವನ್ನು
ಸಾಮಾಜಿಕ ಕಾರ್ಯಗಳಲ್ಲಿ ವಿನಿಯೋಗಿಸಿದ ಆತನನ್ನು ಎಲ್ಲರೂ ಕೊಂಡಾಡುತ್ತಿದ್ದರು. ಅದೆಲ್ಲಕ್ಕಿಂತ ಹೆಚ್ಚಾಗಿ ತನ್ನ ಸಾಮಾಜಿಕ ಕಾರ್ಯಗಳ ಉಪಯೋಗ ಪಡೆದುಕೊಂಡವರ ಕಣ್ಣುಗಳಲ್ಲಿ ಮೂಡುತ್ತಿದ್ದ ಭರವಸೆಯ ಬೆಳಕನ್ನು ಕಂಡಾಗ ಆತನಿಗೆ ಪರಮಾನಂದದ ಅನುಭವವಾಗುತ್ತಿತ್ತು.
ಹೌದಲ್ಲವೇ ಸ್ನೇಹಿತರೆ?
ಜನ ಸೇವೆಯಲ್ಲಿಯೇ ಜನಾರ್ಧನನ ಸೇವೆ ಇದೆ, ನಮ್ಮ ಕೈಲಾದಷ್ಟು ಜನರ ಬದುಕಿನ ಬವಣೆಗಳನ್ನು ನೀಗಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು. ಸೇವೆಯಲ್ಲಿಯೂ ಮೂರು ವಿಧಗಳಿದ್ದು ತನು ಮನ ಧನ ಸೇವೆಗಳು ಎಂದು ಹೇಳಬಹುದು. ಸಾಕಷ್ಟು ಹಣವನ್ನು ಹೊಂದಿರುವ ವ್ಯಕ್ತಿ ಧನ ಸಹಾಯವನ್ನು ಮಾಡಿದರೆ,ಹಣ ಸಹಾಯ ಮಾಡದಿದ್ದರೂ ಮಾನಸಿಕವಾಗಿ ಮತ್ತು ದೈಹಿಕವಾಗಿ ಶ್ರಮವನ್ನು ಹಾಕುವ ಮೂಲಕ ನಾವು ತನು ಮನ ಸೇವೆಯನ್ನು ಮಾಡಬಹುದು. ಸಮಾಜ ಸೇವೆ ಎನ್ನುವುದು ಪ್ರತಿಯೊಬ್ಬರ ಬದುಕಿನ ಸಾಮಾಜಿಕ ಜವಾಬ್ದಾರಿ ಎಂಬ ಪರಿಕಲ್ಪನೆಯ ಮೂಸೆಯಲ್ಲಿ ಹೊಸ ಹುಟ್ಟನ್ನು ಕಾಣಬೇಕು. ಆಗ ಮಾತ್ರ ಆ ಪರಮಾತ್ಮನ ಕರ್ಮದ ಬ್ಯಾಂಕಿನಲ್ಲಿ ನಮ್ಮ ಖಾತೆಯನ್ನು ತೆರೆದದ್ದಕ್ಕೂ ಸಾರ್ಥಕವಾಗುತ್ತದೆ.
ಏನಂತೀರಾ?
– ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್.