Oplus_131072

ದೇವರಹಳ್ಳಿ ಗ್ರಾಮ ದೇವತೆ ಶ್ರೀ ರೇಣುಕಾ ಯಲ್ಲಮ್ಮಳ ಸಂಭ್ರಮದ ಜಾತ್ರೆ .

ಭಾರತೀಯ ಹಿಂದೂ ಧರ್ಮದ ಮಹಾಭಾರತ ಮತ್ತು ಹರಿವಂಶ ಭಾಗವತ್ ಪುರಾಣಗಳಲ್ಲಿ ಬರುವ
ಶ್ರೀ ರೇಣುಕಾ ಯಲ್ಲಮ್ಮಳ ಚರಿತ್ರೆಯು ಜಗತ್ ಪ್ರಸಿದ್ಧಿಯಾಗಿದೆ.

ರೇಣುಕಾ/ರೇಣು ಅಥವಾ ಯೆಲ್ಲಮ್ಮ ಅಥವಾ ಎಕ್ವಿರಾ ಅಥವಾ ಎಲ್ಲೈ ಅಮ್ಮನ್ ಅಥವಾ ಎಲ್ಲೈ ಅಮ್ಮ (ಮರಾಠಿ:ಶ್ರೀ. ರೇಣುಕಾ/ ಯೆಳ್ಳುಐ, ಕನ್ನಡ: ಶ್ರೀ ಎಲ್ಲಮ್ಮ ರೇಣುಕಾ, ತೆಲುಗು: ಶ್ರೀ ರೇಣುಕ/ ಎಲ್ಲಮ್ಮ, ತಮಿಳು: ರೇಣು/ರೇಣು) ಎಂದು ಹಿಂದೂ ಧರ್ಮದಲ್ಲಿ ಅವಳನ್ನು ಪೂಜಿಸಲಾಗುತ್ತದೆ. . ಯೆಲ್ಲಮ್ಮ ದಕ್ಷಿಣ ಭಾರತದ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಪೋಷಕ ದೇವತೆ. ಆಕೆಯ ಭಕ್ತರು ಅವಳನ್ನು “ವಿಶ್ವದ ತಾಯಿ” ಅಥವಾ “ಜಗದಂಬಾ” ಎಂದು ಗೌರವಿಸುತ್ತಾರೆ.
ಇಂತಹ ಚರಿತ್ರೆಯುಳ್ಳ ಈ ರೇಣುಕಾ ಯಲ್ಲಮ್ಮ ತಾಯಿಯ ಜಾತ್ರೆ ಇಲ್ಲಿ ಬಹು ವಿಜೃಂಭಣೆಯಿಂದ ಆಚರಿಸುತ್ತಾರೆ. ಆ ಗ್ರಾಮವೇ ದೇವರಹಳ್ಳಿ.
ಈ ದೇವರ ಹಳ್ಳಿ ಗ್ರಾಮವು ಯಾದಗಿರಿ ಜಿಲ್ಲೆಯ ಗುರಮಿಠಕಲ್ ತಾಲ್ಲೂಕಿನಲ್ಲಿರುವ ಒಂದು ಪುಟ್ಟ ಗ್ರಾಮವಾಗಿದೆ. ಈ ಗ್ರಾಮಕ್ಕೆ ಗುರಮಿಠಕಲ್ ತಾಲ್ಲೂಕಿನಿಂದ 14 ಕಿ.ಮಿ.ಇದೆ. ಇಲ್ಲಿ ಈ ಗ್ರಾಮದ ಜನತೆ ಅಷ್ಟೇಯಲ್ಲದೆ ಸುತ್ತಮುತ್ತಲಿನ ಹತ್ತಾರು ಹಳ್ಳಿಯ ರೈತಾಪಿ ಜನರು ಸೇರಿ ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ ಈ ಜಾತ್ರೆ ಆಚರಿಸುತ್ತಾರೆ. ಈ ವರ್ಷ ನವೆಂಬರ್ 12 ನೇ ತಾರಿಖೀನಂದು ಜಾತ್ರೆ ಇರುವುದರಿಂದ ಜನರಿಗೆ ಎಲ್ಲಿಲ್ಲದ ಖುಷಿ ಮತ್ತು ಹಬ್ಬದ ಸಂಭ್ರಮದ ಸಂತಸ ಮನೆ ಮಾಡಿದೆ.
ಈ ದಿನ ಕುಟುಂಬದ ಹಿರಿಯರು, ಮಕ್ಕಳು, ಮಹಿಳೆಯರು ಒಟ್ಟು ಸೇರಿ ರಂಗು ,ರಂಗಿನ ಹೊಸ ಬಟ್ಟೆಗಳನ್ನ ಧರಿಸಿಕೊಂಡು ದೇವಿಗೆ ನೈವಿದ್ಯವನ್ನು ಸಮರ್ಪಿಸಿ, ಬಂಧು ಬಾಂಧವರೊಂದಿಗೆ ಸೇರಿ ಔತಣಕೂಟ ಮಾಡಿ ಸಂಭ್ರಮಿಸುವ ಪರಿ ಬಹು ರೋಚಕ ವಾಗಿರುತ್ತದೆ.

ಗ್ರಾಮದ ಶ್ರೀ ರೇಣುಕಾ ಯಲ್ಲಮ್ಮ ದೇವಿ ಮಂದಿರ

ಕೆಲವೇ ಗಂಟೆಗಳಲ್ಲಿ ಮಾತ್ರ ಈ ಜಾತ್ರೆ ಇರುವುದರಿಂದ ಇಲ್ಲಿಗೆ ಬರುವ ನೂರಾರು ಜನ ಭಾಗಿಯಾಗಿ ದೇವಿಗೆ ಭಕ್ತಿ-ಭಾವದಿಂದ ಗೌರವ ಸಮರ್ಪಿಸುತ್ತಾರೆ.
ನವೆಂಬರ್ 12 ಮತ್ತು 13 ರಂದು ಎರಡು ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಗ್ರಾಮೀಣ ಕಲೆ ಮತ್ತು ಗ್ರಾಮೀಣ ಕ್ರೀಡೆಗಳು ಏರ್ಪಡಿಸುತ್ತಾರೆ. ಅಷ್ಟೇಯಲ್ಲದೆ
ಅನೇಕ ವಿಧದ ಸಿಹಿ ತಿಂಡಿಗಳ ಅಂಗಡಿಗಳು ಬರುವುದರಿಂದ ವ್ಯಾಪಾರಿಗಳಿಗೆ ಮಾರಾಟದೊಂದಿಗೆ ಗ್ರಾಮೀಣ ಸಂಸ್ಕೃತಿಯ ಅನಾವರಣವಾಗುತ್ತದೆ.

ನವೆಂಬರ್ 13 ರಂದು ಶ್ರೀ ರೇಣುಕಾ ಯಲ್ಲಮ್ಮಳ ಪಲ್ಲಕಿ ಮೂರ್ತಿ ಉತ್ಸವ ನಡೆದು ಗ್ರಾಮದ ಸುತ್ತಲೂ ಮೆರವಣಿಗೆ ಹೊರಟು ಮರಳಿ ದೇವಾಲಯ ಪ್ರವೇಶಿಸುವುದರೊಂದಿಗೆ ಜಾತ್ರೆಯು ಸಂಪನ್ನವಾಗುತ್ತದೆ.

ಈ ದೇವರಹಳ್ಳಿ ಗ್ರಾಮದ ಐತಿಹಾಸಿಕ ಹಿನ್ನೆಲೆ ಹೀಗಿದೆ :-
ಪುರಾತನ ಕಾಲದಲ್ಲಿ ಕೇವಲ ಒಂದೇ ಕುಟುಂಬ ವಾಸವಾಗಿದ್ದ ಈ ಪ್ರದೇಶವನ್ನು “ಹಳ್ಳಿ” ಎನ್ನುತ್ತಿದ್ದರು. ಎಂದು ತಿಳಿದು ಬರುತ್ತದೆ. ಈ ಹಳ್ಳಿಯಲ್ಲಿ ವಾಸವಿದ್ದ ಕುಟುಂಬದ ಜನ ಕೃಷಿ ಕಾರ್ಯಕ್ಕಾಗಿ ಹಾಗೂ ಉಪಜೀವನಕ್ಕಾಗಿ ಪಕ್ಕದ ತೆಲಂಗಾಣ ರಾಜ್ಯದ ಬುನೇಟು ಎಂಬ ಗ್ರಾಮದ ಪಕ್ಕದಲ್ಲಿನ ಚೆನ್ನೂರು ಎಂಬ ಹಳ್ಳಿಯಿಂದ ಒಂದು ಸಮುದಾಯದ ಅನೇಕ ಕುಟುಂಬಗಳು ಹಳ್ಳಿಗೆ ವಲಸೆ ಬಂದಿರುವ ಇತಿಹಾಸವಿದೆ.
ಆ ಸಂದರ್ಭದಲ್ಲಿ ಅಲ್ಲಿನ ಗ್ರಾಮ ದೇವತೆ ಯಲ್ಲಮ್ಮ ದೇವಿಯು ಈ ಗ್ರಾಮಸ್ಥರೊಂದಿಗೆ ಇಲ್ಲಿಗೆ ಬಂದು ನೆಲೆಸಿದಳು ಎಂಬ ಪ್ರತಿತಿಯಿದೆ. ಹಾಗಾಗಿ ಆ ದೇವರು ನೆಲೆಸಿದ ಹಳ್ಳಿಯೇ ಮುಂದೆ “ದೇವರಹಳ್ಳಿ” ಯಾಗಿ ಮಾರ್ಪಟ್ಟಿತು. ಎಂಬ ಕತೆ ಇಲ್ಲಿಯ ಜನ ಹೇಳುತ್ತಾರೆ.

ದೀಪಾವಳಿ ಹಬ್ಬದ ನಂತರ ಆಚರಿಸುವ ಈ ಜಾತ್ರೆ ರೈತಾಪಿ ಜನರ ಬಹುಪಾಲು ಕೃಷಿ ಕಾರ್ಯಗಳು ಯಶಸ್ವಿಯಾಗಿರುವ ಪ್ರಯುಕ್ತ ಶ್ರೀ ರೇಣುಕಾ ಎಲ್ಲಮ್ಮ ದೇವಿಗೆ ಭಕ್ತಿ ಭಾವದಿಂದ ದೇವಕಾರ್ಯವನ್ನು ಮಾಡಿ ತೃಪ್ತರಾಗುತ್ತಾರೆ.
ಈ ಜಾತ್ರೆಯಲ್ಲಿ ಬಯಲಾಟ ಹಾಗೂ ಗ್ರಾಮೀಣ ಕ್ರೀಡೆ ಕೈ ಕುಸ್ತಿಯೊಂದಿಗೆ ಮುಂಬರುವ ಪೀಳಿಗೆಗೆ ಈ ಸಂಸ್ಕೃತಿಯನ್ನು ಮುಂದುವರಿಸುವ ಬಹು ವಿಭಿನ್ನ ಜಾತ್ರೆ ಇದಾಗಿದೆ.
ಈ ಜಾತ್ರೆಯನ್ನು ನೋಡಬಯಸುವವರು ತಾಲೂಕು ಕೇಂದ್ರ ಗುರುಮಠಕಲ್ ದಿಂದ ಗಾಜರಕೋಟ ಮಾರ್ಗವಾಗಿ ಅನೇಕ ವಾಹನಗಳ ಸೌಲಭ್ಯ ಇದೆ, ಜಿಲ್ಲಾ ಕೇಂದ್ರ ಯಾದಗಿರಿಯಿಂದ ಮುಂಜಾನೆ 9:00 ಗಂಟೆಗೆ ಸಾರ್ವಜನಿಕ ಬಸ್ ವ್ಯವಸ್ಥೆ ಇರುತ್ತದೆ. ದೇವಿಯ ಆರಾಧ್ಯ ಭಕ್ತ ವೃಂದದವರು ಜಾತ್ರೆಗೆ ಆಗಮಿಸಿ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ದರ್ಶನ ಪಡೆದು ಪುನಿತರಾಗಲೆಂದು ಹಾರೈಸೋಣ.

ಚಂದ್ರಕಾಂತ ಹೊಟ್ಟಿ. ಶಿಕ್ಷಕರು

ದೇವರಹಳ್ಳಿ.ತಾ.ಗುರಮಿಠಕಲ್.