ದೇವೇಂದ್ರ ಕಟ್ಟಿಮನಿ ಅವರ ಗಜಲ್ ಗಳಲ್ಲಿ ಕ್ರೀಡಾ ಮನೋಭಾವ.
ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್ ಓರ್ವರ ಪರಿಚಯದೊಂದಿಗೆ!! ಮತ್ತೇಕೆ ಮಾತಾಯಣ, ಬನ್ನಿ.. ಗಜಲ್ ಗಂಗೋತ್ರಿಯಲ್ಲಿ ಮೀಯಲು…
“ನೀವು ಜೀವನದ ಆಟದಲ್ಲಿ ಯಾವಾಗಲೂ ಆಡುತ್ತಿರಿ
ಸೋಲು-ಗೆಲುವು ಯಾವುದೂ ಅಂತಿಮವಲ್ಲ”
-ಹಸ್ತಿಮಲ್ ಹಸ್ತಿ
ಆಟ ಎಂದಾಗ ಏಳುವುದು, ಬೀಳುವುದು ಸಹಜ. ಅದು ಆಟದ ಮೈದಾನದಲ್ಲಾಗಬಹುದು ಅಥವಾ ಜೀವನದ ಹೋರಾಟದಲ್ಲಾಗಬಹುದು. ಆದರೆ ಗೆಲುವು ನಿರ್ಧಾರವಾಗುವುದು ನಾವು ಬಿದ್ದಾಗ ಏಳುವ ಪ್ರಕ್ರಿಯೆಯ ಆಧಾರದ ಮೇಲೆ. ಇದಕ್ಕೆ ಬೇಕಿರುವುದು ಆತ್ಮವಿಶ್ವಾಸವೆಂಬ ಚಿರಾಗ್. ಹಠವು ವೈಫಲ್ಯವನ್ನು ಅಸಾಮಾನ್ಯ ಸಾಧನೆಯಾಗಿ ಬದಲಾಯಿಸುವ ಅದಮ್ಯ ಶಕ್ತಿಯನ್ನು ಹೊಂದಿದೆ. ಆಟ ಆಡುವಾಗ ವ್ಯಕ್ತಿ ಬೀಳುವುದು ಅಂಥಹಾ ಪ್ರಮಾದವೇನಲ್ಲ, ಪ್ರಯತ್ನಿಸದೆ ಬೀಳುವುದು, ಸೋಲುವುದು ಇದೆಯಲ್ಲ ; ಅದೊಂದು ಸ್ವಯಂಕೃತ ಅಪರಾಧವೇ ಸರಿ! ಇಲ್ಲಿ “ವಿಜೇತರು ಎಂದಿಗೂ ತೊರೆಯುವುದಿಲ್ಲ ಮತ್ತು ತೊರೆದವರು ಎಂದಿಗೂ ಗೆಲ್ಲುವುದಿಲ್ಲ” – ಎಂಬ ಅಮೇರಿಕನ್ ವೃತ್ತಿಪರ ಫುಟ್ಬಾಲ್ ತರಬೇತುದಾರ ವಿನ್ಸ್ ಲೊಂಬಾರ್ಡಿ ಯವರ ಮಾತನ್ನು ಸ್ಮರಿಸಬಹುದು. ಈ ನೆಲೆಯಲ್ಲಿ ನಮ್ಮ ನಿಜವಾದ ಸಾಮರ್ಥ್ಯವನ್ನು ಬಹಿರಂಗಪಡಿಸಬೇಕಾದರೆ ಮೊದಲು ನಮ್ಮ ಇತಿ-ಮಿತಿಗಳನ್ನು ನಾವು ಅರಿಯಬೇಕು, ನಂತರ ಮುನ್ನುಗ್ಗಬೇಕು. ಏಕೆಂದರೆ ನಾವು ಯಾವಾಗಲೂ ನಮ್ಮ ಜೇಬಿನಲ್ಲಿ ಹಣವನ್ನು ಇಟ್ಟುಕೊಂಡು ಓಡಲಾಗುವುದಿಲ್ಲ, ಓಡಲೂ ಬಾರದು. ಹೃದಯದಲ್ಲಿ ಭರವಸೆ ಮತ್ತು ತಲೆಯಲ್ಲಿ ಕನಸುಗಳೊಂದಿಗೆ ಓಡಬೇಕು. ಆವಾಗ ನಾವು ನಮ್ಮ ಗೋಲ್ ರೀಚ್ ಆಗಲು ಸಾಧ್ಯ. ಒಬ್ಬ ಮನುಷ್ಯನಿಗೆ ಜೀವನದಲ್ಲಿ ಕೆಲವು ಬಾರಿ ಭಯ ಪ್ರೇರೇಪಿಸಬಹುದು, ಮತ್ತೆ ಕೆಲವೊಮ್ಮೆ ಪ್ರತಿಫಲ ಪ್ರೇರೇಪಿಸಲೂ ಬಹುದು. ಆದರೆ ಈ ಎರಡೂ ವಿಧಾನಗಳು ಕೇವಲ ತಾತ್ಕಾಲಿಕವಷ್ಟೇ. ಶಾಶ್ವತವಾದ ಏಕೈಕ ವಿಷಯವೆಂದರೆ ಅದು ಸ್ವಯಂ ಪ್ರೇರಣೆ. ಅದರಿಂದ ಮಾತ್ರ ಮನುಷ್ಯ ತಾನು ಬಯಸಿದ್ದನ್ನು, ಇಚ್ಛಿಸಿದನ್ನೂ ಸಾಧಿಸಬಹುದು. ಇದರಿಂದ ಯಶಸ್ವಿ ಮನುಷ್ಯನ ದೊಡ್ಡ ಆಸ್ತಿಯೆಂದರೆ ಅವನ ದೈಹಿಕ ಸಾಮರ್ಥ್ಯದೊಂದಿಗೆ ಮಾನಸಿಕ ಸಾಮರ್ಥ್ಯವೂ ಮುಖ್ಯ ಎಂಬುದು ಮನವರಿಕೆಯಾಗುತ್ತದೆ. ಸಾಧನೆಯ ಪಥಿಕರಿಗೆ ಶಿಸ್ತು, ಸಮರ್ಪಣೆ ಮತ್ತು ತಾಳ್ಮೆ ಬಹು ಅವಶ್ಯಕವಾದ ಸದ್ಗುಣಗಳಾಗಿವೆ. ಅಂತೆಯೇ “ಗೆಲುವು ಕಷ್ಟವಾದಷ್ಟೂ ಗೆಲುವಿನ ಖುಷಿಯೂ ಹೆಚ್ಚುತ್ತದೆ” ಎಂಬ ಬ್ರೆಜಿಲಿಯನ್ ಫುಟ್ಬಾಲ್ ಆಟಗಾರ ಪೀಲೆ ಯವರ ಅನುಭವದ ನುಡಿ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಗೆಲ್ಲುವ ಇಚ್ಛೆಯುಳ್ಳವರು ಅದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಳ್ಳಬೇಕು ಎಂಬುದು ಸರ್ವವಿಧಿತ. ಈ ಹಿನ್ನೆಲೆಯಲ್ಲಿ ಗಮನಿಸಿದಾಗ ದೇಹ ಮತ್ತು ಮನಸ್ಸು ಒಂದಕ್ಕೊಂದು ಪೂರಕವಾಗಿದ್ದು ವ್ಯಕ್ತಿಯ ವ್ಯಕ್ತಿತ್ವ ವಿಕಸನದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ದೇಹದ ಸದೃಢತೆಗೆ ಕ್ರೀಡೆ, ವ್ಯಾಯಾಮ ಎಷ್ಟು ಮುಖ್ಯವಾಗುತ್ತದೆಯೋ ಮನಸ್ಸಿನ ಪ್ರಪುಲ್ಲತೆಗೆ ಸಾಹಿತ್ಯ, ಸಂಗೀತ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು, ವಾತಾವರಣ ಮುಖ್ಯವಾಗುತ್ತವೆ. ಅಂತೆಯೇ ಸಾಹಿತ್ಯವು ಕ್ರೀಡೆಯ ಜೊತೆ ಜೊತೆಗೆ ಮಾನಸಿಕ ಆರೋಗ್ಯ ವೃದ್ಧಿಸುವುದನ್ನೂ ಕಾಣಬಹುದು. ಇದಕ್ಕೆ ಮರುಭೂಮಿಯ ಮಂದಾರ ಹೂವು ಗಜಲ್ ಕೂಡ ಹೊರತಲ್ಲ. ಇಂದು ಕರುನಾಡಿನಲ್ಲಿ ಅಸಂಖ್ಯಾತ ಬರಹಗಾರರು ಗಜಲ್ ಮೇನಿಯಾ ಗೆ ಒಳಗಾಗಿರುವುದನ್ನು, ಒಳಗಾಗುತ್ತಿರುವುದನ್ನೂ ನೋಡಿದಾಗ ದಿಲ್ ಖುಷ್ ಆಗುತ್ತದೆ. ಅದರಲ್ಲೂ ಪ್ರಯೋಗಗಳು ಯಥೇಚ್ಛವಾಗಿ ನಡೆಯುತ್ತಿವೆ. ಅಂತಹ ಅಗಣಿತ ಬರಹಗಾರರಲ್ಲಿ ದೇವೇಂದ್ರ ಕಟ್ಟಿಮನಿ ಅವರೂ ಒಬ್ಬರು.
ಶ್ರೀ ದೇವೇಂದ್ರ ಕಟ್ಟಿಮನಿ ಅವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹಿಪ್ಪರಗಬಾಗ ಗ್ರಾಮದಲ್ಲಿ ಶ್ರೀ ಅಂಬಣ್ಣ ಕಟ್ಟಿಮನಿ ಹಾಗೂ ಶ್ರೀಮತಿ ಕಾಶಿಬಾಯಿ ಕಟ್ಟಿಮನಿಯವರ ಪುತ್ರರಾಗಿ ೨೯೮೩ ಸೆಪ್ಟೆಂಬರ್ ೦೫ ರಂದು ಜನಿಸಿದ್ದಾರೆ. ಇವರು ತಮ್ಮ ಹುಟ್ಟೂರಿನಲ್ಲಿಯೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಪೂರೈಸಿ, ಪಿಯುಸಿ ಹಾಗೂ ಪದವಿ ಶಕ್ಷಣವನ್ನು ಕಮಲಾಪುರದಲ್ಲಿ, ಬಿ.ಪಿ.ಇಡಿ ಶಿಕ್ಷಣವನ್ನು ರಾಯಚೂರಿನಲ್ಲಿ ಮತ್ತು ಶಿವಮೊಗ್ಗದ ಕುವೆಂಪು ವಿ.ವಿ.ಯಲ್ಲಿ ಎಂ.ಎ. ಪದವೀಧಯನ್ನು ಪೂರ್ಣಗೊಳಿಸಿದ್ದಾರೆ. ಸದ್ಯ ಸರಕಾರಿ ಕನ್ಯಾ ಪ್ರೌಢಶಾಲೆ ಕಮಲಾಪುರ ದಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಕಥೆ, ಕವನ, ಗಜಲ್, ಯೋಗಾಭ್ಯಾಸ, ರೆಡ್ ಕ್ರಾಸ್ ಮತ್ತು ಸ್ಕೌಟಿಂಗ್ ಮೂಲಕ ಸಾಹಿತ್ಯ ಮತ್ತು ಕ್ರೀಡೆಯಲ್ಲಿ ಪ್ಯಾರಲಲ್ ಆಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ೨೦೧೯ ರಿಂದ ಶಾಲಾ ಮಕ್ಕಳ ಪ್ರತಿಭಾ ಪುರಸ್ಕಾರಕ್ಕಾಗಿ ಶ್ರೀ ಅಂಬಣ್ಣ ಕಟ್ಟಿಮನಿ ಸ್ಮರಣಾರ್ಥ ‘ಅಭಿಜ್ಞಾನ ಪ್ರಶಸ್ತಿ’ಯನ್ನು ಪ್ರಾರಂಭಿಸಿದ್ದಾರೆ. ೨೦೨೦ ರಲ್ಲಿ ರಾಯಚೂರಿನಲ್ಲಿ ಶ್ರೀ ಕೆ.ತಿಮ್ಮಯ್ಯ ಸ್ಮರಣಾರ್ಥ ಮಾಸ್ಕ್ ಬ್ಯಾಂಕ್ ಸಂಘಟಿಸಿ ೯೫೦೦ ಮಾಸ್ಕಗಳನ್ನು ಶಿಕ್ಷಣ ಸಚಿವರಿಗೆ ಹಸ್ತಾಂತರಿಸಿರುವುದು ಇವರ ಸಾಮಾಜಿಕ ಕೊಡುಗೆಯಾಗಿದೆ. ‘ಭೀಮಾಮೃತ’ (ಅಂಬೇಡ್ಕರ ಕುರಿತ ಖಂಡ ಕಾವ್ಯ), ‘ಸುಣ್ಣದ ಸಾಲು’ (ಕ್ರೀಡಾ ಗಜಲ್ ಗಳು) ಎಂಬ ಕೃತಿಗಳನ್ನು ರಚಿಸಿ ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ.
ಉತ್ತಮ ಕ್ರೀಡಾಪಟುವಾದ ದೇವೇಂದ್ರ ಕಟ್ಟಿಮನಿ ಅವರು ಹತ್ತು ಹಲವಾರು ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದು, ಕವಿಗೋಷ್ಠಿ, ಗಜಲ್ ಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಸಾಹಿತ್ಯದ ಒಲವನ್ನು ಹಂಚಿಕೊಂಡಿದ್ದಾರೆ. ಇವರ ಹಲವು ಬರಹಗಳು ನಾಡಿನ ಅನೇಕ ಪತ್ರಿಕೆಗಳಲ್ಲಿ, ಸ್ಮರಣೆ ಸಂಚಿಕೆ, ಸಂಪಾದಿತ ಗ್ರಂಥಗಳಲ್ಲಿ ಪ್ರಕಟಗೊಂಡಿವೆ. ಇವರ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಗಮನಿಸಿ ರಾಜ್ಯದ ವಿವಿಧ ಸಂಘ ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿ ಸತ್ಕರಿಸಿವೆ. ಅವುಗಳಲ್ಲಿ ೨೦೧೫ ರಲ್ಲಿ ಉತ್ತಮ ಸ್ಕೌಟ್ ಮಾಸ್ಟರ್ ಪ್ರಶಸ್ತಿ, ೨೦೧೯ ರಲ್ಲಿ ರೊಟರಿ ಕ್ಲಬ್ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, 2024 ರಲ್ಲಿ “ಶಿಕ್ಷಣ ರತ್ನ” ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.
ಸಂಗೀತ ಎನ್ನುವುದು ಹೃದಯದ ಪಿಸುಮಾತು. ಇದು ಹೃದಯಗಳನ್ನು ಬೆಸೆಯುವ ಸೇತುಬಂಧ. ಅಂತೆಯೇ ಇದನ್ನು ಮನುಕುಲದ ಸಾರ್ವತ್ರಿಕ ಭಾಷೆ ಎನ್ನಲಾಗುತ್ತದೆ. ಇದು ಪದಗಳಲ್ಲಿ ಹೇಳಲಾಗದ ಮತ್ತು ಮೌನವಾಗಿರಲು ಸಾಧ್ಯವಾಗದ ಭಾವವನ್ನು ವ್ಯಕ್ತಪಡಿಸುತ್ತದೆ. ಈ ಕಾರಣಕ್ಕಾಗಿಯೇ ಗಜಲ್ ಸಂಗೀತವನ್ನು ಧ್ಯಾನಿಸುತ್ತದೆ, ಪ್ರೀತಿಸುತ್ತದೆ ಹಾಗೂ ಪೂಜಿಸುತ್ತದೆ. ಇದಕ್ಕೆ ಪೂರಕವಾಗಿ ಸಹಜವಾಗಿಯೇ ಗಜಲ್ ಮೃದು, ಮಧುರ ಮತ್ತು ಭಾವದೀಪ್ತಿಯನ್ನು ಬಯಸುತ್ತದೆ, ಸದಾ ಹಂಬಲಿಸುತ್ತದೆ. ಪ್ರೇಮಿಯ ಸ್ಪರ್ಶದಲ್ಲಿ ಎಲ್ಲರೂ ಗಜಲ್ ಗೋ ಆಗುತ್ತಾರೆ ಎನ್ನುವುದು ಈ ಕಾರಣಕ್ಕಾಗಿಯೇ! ಗಜಲ್ ಎಂದರೆ ಕಂಗಳಿಂದ ನೋಡುವುದಕ್ಕಿಂತ ಹೃದಯದಿಂದ ಅನುಭವಿಸುವ ಚಿತ್ರ. ಪ್ರತಿಯೊಬ್ಬರ ಹೃದಯದಲ್ಲಿ ಬರೆದ ಶಾಶ್ವತ ಬರಹವಾದ ಇದು ಕಾರಣಾಂತರಗಳಿಂದ ಉಂಟಾದ ಗಾಯಗಳನ್ನು ಗುಣಪಡಿಸುವ ದಿವ್ಯ ಔಷಧಿಯಾಗಿದೆ. ಆದರೆ ಕಾಲಾಂತರದಲ್ಲಿ, ಪ್ರಯೋಗದ ಹೆಸರಲ್ಲಿ ಗಜಲ್ ತನ್ನ ಭಾಷೆ, ಭಾವವನ್ನು ತೊರೆದು ಕವಲೊಡೆದ ಮಾರ್ಗದಲ್ಲಿ ಸಾಗುತ್ತಿದೆ. ಮೃದುತ್ವವನ್ನೇ ಮರೆತು ಮೂಲ ರೂಪವನ್ನೇ ಕಳಚಿಕೊಳ್ಳುತ್ತಿದೆಯೇನೊ ಎಂಬ ಆತಂಕ, ದುಗುಡವನ್ನು ಸಹೃದಯ ರಸಿಕರಲ್ಲಿ ಮೂಡಿಸುತ್ತಿದೆ. ‘ಆಧುನಿಕತೆ’ ಎಂಬುದು ಗಜಲ್ ಲೋಕದಲ್ಲಿ ಮನಸ್ಸಿಗೆ ಮುದ ನೀಡುವ ಗುಲ್ಜಾರ್ ಆಗಬೇಕಾಗಿದೆ. ಈ ನೆಲೆಯಲ್ಲಿ ಸುಖನವರ್ ದೇವೇಂದ್ರ ಕಟ್ಟಿಮನಿಯವರ ‘ಸುಣ್ಣದ ಸಾಲು’ ಎಂಬ ಕ್ರೀಡಾ ಗಜಲ್ ಗಳನ್ನು ಗಮನಿಸಬಹುದು. ಇಲ್ಲಿ ವಿವಿಧ ರೂಪದ ಕ್ರೀಡೆಗಳನ್ನು ಗಜಲ್ ರೂಪದಲ್ಲಿ ಸುಣ್ಣದ ಗೆರೆ ಹಾಕಿ ಚಿತ್ರಿಸಲಾಗಿದೆ. ಇಲ್ಲಿಯ ಹಲವು ಗಜಲ್ ಗಳು ಖೋಖೋ, ಕಬಡ್ಡಿ, ವಾಲಿಬಾಲ್, ಪುಟ್ಬಾಲ್, ಒಲಿಂಪಿಕ್, ರಿಲೇ… ಮುಂತಾದ ಆಟಗಳೊಂದಿಗೆ ದೈಹಿಕ ಶಿಕ್ಷಣ, ವ್ಯಾಯಾಮ, ಯೋಗ, ಫಿಟ್ ಇಂಡಿಯಾ, ಕ್ರೀಡಾ ಮನೋಭಾವ, ಐಕ್ಯತೆ, ಬದುಕಿನ ಹೋರಾಟದ ಮೇಲೆ ಕ್ಷ-ಕಿರಣವನ್ನು ಬೀರುತ್ತವೆ.
“ಸೋಲು ಗೆಲುವಿನ ಮೂಲವರಿತರದು ಬದುಕು ಸಂಪನ್ನ
ಪೈಪೋಟಿ ಗುಣಮನದ ತಾಣದಲಿ ಕುಣಿವ ನಾದವೆ ಕ್ರೀಡೆ”
ಜೀವನದಲ್ಲಿ ಯಶಸ್ಸು ವೇಗವಾಗಿ ಓಡುವವರಿಗೆ ದೊರೆಯದು, ಬದಲಿಗೆ ಓಡುತ್ತಲೇ ಇರುವವರಿಗೆ ಲಭಿಸುತ್ತದೆ. ಅಂತೆಯೇ ಆಟವು ಸದಾ ಸಕ್ರೀಯತೆಯ ಪರ ಇರುತ್ತದೆ. ಸಕ್ರೀಯ ಆಟಗಾರನಿಗೆ ಸೋಲು-ಗೆಲುವು ಯಾವತ್ತೂ ಮುಖ್ಯವಾಗುವುದಿಲ್ಲ. ಹಾಗೆ ನೋಡಿದರೆ ಆಟದಲ್ಲಿ ‘ಸೋಲು’ ಎಂಬುದು ಇರುವುದಿಲ್ಲ. ಅಲ್ಲಿ ಏನಿದ್ದರೂ ಗೆಲುವು ಇಲ್ಲವೆ ಕಲಿಕೆ. ಇದರ ಜೊತೆ ಜೊತೆಗೆ ನಾವು ಆಟದ ಕುರಿತು ಎಷ್ಟು ತಿಳಿದಿದ್ದೇವೆ ಎಂಬುದಕ್ಕಿಂತ ಎಷ್ಟನ್ನು ಅಳವಡಿಸಿಕೊಂಡಿದ್ದೇವೆ ಎಂಬುದು ಮುನ್ನೆಲೆಗೆ ಬರುತ್ತದೆ. ಕಾರಣ ಈ ಜೀವನವು ಅನ್ವಯಿಕ ಜ್ಞಾನದ ಗಣಿಯಾಗಿದೆ. ಇಲ್ಲಿ ಬಿಟ್ಟುಕೊಡದೆ ಮುನ್ನುಗ್ಗಬೇಕು. ಇದುವೇ ಜೀವನದ ಮೂಲ ಮಂತ್ರ ಎಂಬುದನ್ನು ಗಜಲ್ ಗೋ ದೇವೇಂದ್ರ ಕಟ್ಟಿಮನಿಯವರು ತಮ್ಮ ಈ ಷೇರ್ ನಲ್ಲಿ ದಾಖಲಿಸಿದ್ದಾರೆ. ಇಲ್ಲಿಯ ‘ಕ್ರೀಡೆ’ ಎಂಬುದು ಮನುಷ್ಯನ ಬದುಕನ್ನು ಸಾಕ್ಷಿಕರಿಸುತ್ತದೆ.
“ಬದುಕಿನಾಟದ ಬಲೆಯ ಸುಳಿಯಲಿ ಸುತ್ತುತ್ತಿದೆ ಬುಗುರಿ
ಬಲದಿ ಹೊಡೆದಷ್ಟು ಗುರುತ್ವದಲಿ ಬಿದ್ದು ಆಡುತ್ತಿದೆ ಬುಗುರಿ”
ಈ ಮೇಲಿನ ಷೇರ್ ನಲ್ಲಿ ‘ಬುಗುರಿ’ ಎಂಬುದು ರದೀಫ್ ಆಗಿ ಬಳಕೆಯಾಗಿದೆ. ಇದೊಂದು ಮೇಲ್ನೋಟಕ್ಕೆ ಆಟಿಕೆ ವಸ್ತು ಎಂದು ತೋರಿಬಂದರೂ ಸೈದ್ಧಾಂತಿಕ ನೆಲೆಯಲ್ಲಿ ಬಾಳನ್ನು ಪ್ರತಿಧ್ವನಿಸುತ್ತದೆ. ಇಲ್ಲಿ ಸುಖನವರ್ ಕಟ್ಟಿಮನಿಯವರು ‘ಸುತ್ತುತ್ತಿದೆ’, ‘ಆಡುತ್ತಿದೆ’ ಎಂಬ ಕವಾಫಿ ಮೂಲಕ ಬದುಕು ಯಾವ ದಿಕ್ಕಿನಲ್ಲಿ ಸಾಗುತ್ತಿದೆ, ಸಾಗಬೇಕು ಎಂಬುದನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಬುಗುರಿ ಆಡಿಸುವ ದಾರ, ಜಾಳಿಗಿಯನ್ನು ಮನುಷ್ಯನ ಡೆಸ್ಟಿನಿಯೊಂದಿಗೆ ಸಂಕೇತಿಸಿ ಬರೆದಿರುವುದನ್ನು ಗಮನಿಸಬಹುದು. ಇನ್ನೂ ಮುಂದುವರೆದು ಆ ಡೆಸ್ಟಿನಿಯನ್ನು ನಿರ್ಧರಿಸುವುದು ಆಟಗಾರನ ಮನೋಬಲ ಎಂಬುದನ್ನು ಸೂಕ್ಷ್ಮವಾಗಿ ಹೇಳಿದ್ದಾರೆ.
ಅಪ್ಪಟ ಗಜಲ್ ನಮಗೆ ಅರ್ಥವಾಗುವ ಮುನ್ನವೇ ನಮ್ಮೊಂದಿಗೆ ಸಂವಹಿಸಬಲ್ಲದು, ಸಂವಹಿಸಬೇಕು. ಯಾವಾಗಲೂ ಇದು ಸುಂದರವಾದ ಶಾಂತಿಯನ್ನು ಪ್ರವಹಿಸುತ್ತದೆ. ಇದು ಸಾಧ್ಯವಾಗಬೇಕಾದರೆ ಒಬ್ಬ ಸುಖನವರ್ ಎಲ್ಲಕ್ಕಿಂತ ಮೊದಲು ಭಾಷೆಯನ್ನು ಉತ್ಕಟವಾಗಿ ಪ್ರೀತಿಸುವ ವ್ಯಕ್ತಿಯಾಗಬೇಕು. ಈ ದಿಸೆಯಲ್ಲಿ ಶಾಯರ್ ದೇವೇಂದ್ರ ಕಟ್ಟಿಮನಿಯವರಿಂದ ಮತ್ತಷ್ಟು, ಮೊಗೆದಷ್ಟೂ ಗಜಲ್ ಗಳು ಮೂಡಿಬರಲಿ ಎಂದು ತುಂಬು ಹೃದಯದಿಂದ ಶುಭ ಹಾರೈಸುತ್ತೇನೆ.
“ವಿಧಿ ವಿಚಿತ್ರ ಆಟಗಳನ್ನು ತೋರಿಸುತ ನಡೆಯಿತು
ಯಾರೂ ನಗುತ್ತಿದ್ದರೊ ಅವರನ್ನು ಅಳಿಸುತ ನಡೆಯಿತು”
-ಲತಾ ಹಯಾ
ಹೃದಯದ ಪಿಸುಮಾತಾದ ಗಜಲ್ ನ ವಿವಿಧ ಆಯಾಮಗಳ ಕುರಿತು ಯೋಚಿಸುವುದಾಗಲಿ, ಮಾತಾಡುವುದಾಗಲಿ ಹಾಗೂ ಬರೆಯುವುದಾಗಲಿ ಮಾಡ್ತಾ ಇದ್ದರೆ ಈ ಸಮಯ ಸರಿಯುವುದೇ ಗೊತ್ತಾಗುವುದಿಲ್ಲ. ಆದಾಗ್ಯೂ ಆ ಗಡಿಯಾರದ ಮಾತು ಕೇಳಲೆಬೇಕಲ್ಲವೇ. ಅಂತೆಯೇ ಈ ಬರಹಕ್ಕೆ ಸದ್ಯ ವಿಶ್ರಾಂತಿ ನೀಡುತ್ತಿರುವೆ. ಯಥಾಪ್ರಕಾರ ಮತ್ತೇ ಮುಂದಿನ ಗುರುವಾರ ತಮ್ಮ ಮುಂದೆ ಹಾಜರಾಗುವೆ. ಅಲ್ಲಿಯವರೆಗೆ ಬಾಯ್, ಟೇಕೇರ್…!!
ಡಾ. ಮಲ್ಲಿನಾಥ ಎಸ್.ತಳವಾರ,ರಾವೂರ
ಕನ್ನಡ ಪ್ರಾಧ್ಯಾಪಕರು,
ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯ,
ಕಲಬುರಗಿ