Oplus_131072

ಧರ್ಮ, ದೇವರು,ಸನ್ಯಾಸತ್ವ ಹಾಗೂ ಸತ್ಯವನು ಸಾಕ್ಷಾತ್ಕರಿಸಿದ ಭಾರತೀಯ ಸಂತ.

 

– ಡಾ.ರಾಜೇಂದ್ರಕುಮಾರ್ ಕೆ ಮುದ್ನಾಳ್, ಯಾದಗಿರಿ.

  

ವಿಶ್ವಕಂಡ ಅದ್ವಿತೀಯ ಸಂತರಲ್ಲಿ ಸ್ವಾಮಿ ವಿವೇಕಾನಂದರು ಒಬ್ಬರು. ಇವರ ಜನ್ಮದಿನವಾದ ಜನವರಿ 12 ನ್ನು ‘ರಾಷ್ಟ್ರೀಯ ಯುವಕರ ದಿನ’ವೆಂದು ಆಚರಿಸುತ್ತಿದ್ದೇವೆ. ಆದರೆ ವೈಚಾರಿಕ ಮಾರ್ಗದಲ್ಲಿ ನಾವು ನಡೆಯುತ್ತಿದ್ದೇವೆಯೇ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಧರ್ಮ, ದೇವರು, ಸನ್ಯಾಸ, ಸತ್ಯ ಇತ್ಯಾದಿ ಪರಿಕಲ್ಪನೆಗಳು ಇಂದು ಅಪವ್ಯಾಖ್ಯಾನಕ್ಕೆ ಗುರಿಯಾಗುತ್ತಿವೆ . ಇದರಿಂದ ಬಿಡುಗಡೆ ಹೊಂದಲು ವಿವೇಕಾನಂದರ ವಾಣಿಯನ್ನು ಮನನ ಮಾಡಿಕೊಳ್ಳುವುದು ಇಂದಿನ ತುರ್ತು ಅಗತ್ಯ. ವಿವೇಕಾನಂದರ ಅರಿವಿನ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಹೆಜ್ಜೆ ಇಡಬೇಕಾಗಿದೆ.

 

 

ವಿವೇಕಾನಂದರ ದೃಷ್ಟಿಯಲ್ಲಿ ಧರ್ಮ- ದೇವರು: ಧರ್ಮ ಎಂದರೆ ‘ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವುದು’ ಎಂದರು ಬಸವಣ್ಣ. ಇನ್ನೊಬ್ಬರಿಗೆ ನೋವಾಗದಂತೆ ನಡೆದುಕೊಳ್ಳಬೇಕೆಂಬ ಆಲೋಚನೆಯ ಕ್ರಮವೇ ಧರ್ಮವೆಂದು ಬಿಂಬಿತವಾಗಿದೆ. ಇದನ್ನು ಮುಂದುವರಿದು ವಿವೇಕಾನಂದರು ಅಳಸಿಂಗ್ ಪೇರುಮಾಳರಿಗೆ ಬರೆದ ಪತ್ರದಲ್ಲಿ ಹೀಗೆ ಉಲ್ಲೇಖಿಸುತ್ತಾರೆ.

 

” ನಾನೊಬ್ಬ ತ್ಯಾಗಿ ಸನ್ಯಾಸಿ ಆದರೆ ವಿಧವೆಯ ಕಣ್ಣೀರನ್ನು ಒರಿಸಲಾರದ ಅಥವಾ ಅನಾಥ ಶಿಶುಗಳಿಗೆ ಒಂದು ತುತ್ತು ಅನ್ನವನ್ನು ಉಣಿಸಲಾರದ ದೇವರಲ್ಲಿ ಧರ್ಮದಲ್ಲೂ ನನಗೆ ನಂಬಿಕೆ ಇಲ್ಲ ಬೋಧನೆಗಳು ಎಷ್ಟೇ ಉದಾತ್ತವಾಗಿರಲಿ ತತ್ವಗಳು ಅಚ್ಚುಕಟ್ಟಾಗಿ ಬೆಸೆಯಲ್ಪಟ್ಟಿರಲಿ ಎಲ್ಲಿಯವರೆಗೆ ಆ ಧರ್ಮವು ಕೇವಲ ಪುಸ್ತಕಗಳಿಗೆ ಮತ್ತು ಸಿದ್ಧಾಂತಗಳಿಗೆ ಸೀಮಿತವಾಗಿರುತ್ತದೆಯೋ ಅಲ್ಲಿಯವರೆಗೆ ಅದನ್ನು ನಾನು ಧರ್ಮವೆಂದು ಕರೆಯುವುದಿಲ್ಲ ಕಣ್ಣೀರು ಇರುವುದು ಮುಖದಲ್ಲಿ ಬೆನ್ನಿನಲ್ಲಿ ಅಲ್ಲ. ಆದ್ದರಿಂದ ನೇರವಾಗಿ ಮುನ್ನಡೆಯಿರಿ ಮತ್ತು ಯಾವುದನ್ನು ನೀವು ಧರ್ಮವೆಂದು ತುಂಬಾ ಜಂಬದಿಂದ ಹೇಳಿಕೊಳ್ಳುತ್ತಿರೋ ಅದನ್ನು ಅನುಷ್ಠಾನಕ್ಕೆ ತನ್ನಿ ದೇವರು ನಿಮಗೆ ಒಳ್ಳೆಯದು ಮಾಡಲಿ”.ಎಂಬ ಮಾತು ಹಲವು ಅಂಶಗಳನ್ನು ನಿರ್ದೇಶಿಸುತ್ತದೆ.

ಇಂದು ದೇವರ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಜಾತ್ರೆ, ಉತ್ಸವ, ವೈಭವ,ಆಡಂಬರಗಳು ಬಡವರ ಹಸಿವನ್ನು ತುಂಬಿಸುತ್ತಿಲ್ಲ.ನೊಂದವರ ನೋವನ್ನು ಕೇಳುವವರಿಲ್ಲ ಎಂಬುದೇ ಕಳವಳಕಾರ ಸಂಗತಿ. ದೇವಾಲಯಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಕಾಲು ತುಳಿತಕ್ಕೆ ಒಳಗಾಗಿ ಜನರು ಪ್ರಾಣ ಕಳೆದುಕೊಂಡಿದ್ದಾರೆ . ದೇವರ ದರ್ಶನ ಭಾಗ್ಯವು ಹಣಕಾಸಿನ ವ್ಯವಹಾರವಾಗಿರುವುದು ದುರಂತ. ‘ದೇಹವೇ ದೇವಾಲಯ’ವೆಂದು ಕರೆ ನೀಡಿದರೂ ಕೂಡ ಅದನ್ನು ನಂಬದ ಜನರು ನಾವಾಗಿದ್ದೇವೆ. ನಮ್ಮ ಮೂರ್ಖತನವೇ ಇದಕ್ಕೆಲ್ಲ ಕಾರಣವೆನಿಸುತ್ತದೆ. ಜಗತ್ತಿನ ಹಲವು ಧರ್ಮಗಳ ಜ್ಞಾನದ ಓದು ವಿವೇಕಾನಂದರಿಗೆ ಧಕ್ಕಿತ್ತು.ವಿವೇಕಾನಂದರ ದೃಷ್ಟಿಯಲ್ಲಿ ಧರ್ಮದ ಮೂಲ ಉದ್ದೇಶ ಮನುಷ್ಯನಿಗೆ ಶಾಂತಿಯನ್ನು ತಂದು ಕೊಡುವುದು ಮುಂದಿನ ಜನ್ಮದಲ್ಲಿ ಸುಖ ಸಿಕ್ಕಿತು ಎಂದು ಈ ಜನ್ಮದಲ್ಲಿ ನರಳುವುದು ಬುದ್ದಿವಂತಿಕೆಯಲ್ಲ.ಇಲ್ಲೇ ಈಗಲೇ ಶಾಂತಿ ದೊರಕುವಂತಾಗಬೇಕು ಯಾವ ಧರ್ಮ ಇದನ್ನು ತಂದುಕೊಡಬಲ್ಲದು ಅದೇ ನಿಜವಾದ ಧರ್ಮ ಎಂಬ ದೃಢ ನಿರ್ಧಾರ ವಿವೇಕಾನಂದರದು. ಹಾಗೆ ಹೇಳಿದರು ಹೇಳಿದಂತೆ ಬಾಳಿದರು ಅದು ಸನ್ಯಾಸತ್ವದ ಧೀಮಂತ ನಡೆಯಾಗಿತ್ತು.

ಬುದ್ಧನ ಕುರಿತು ವಿವೇಕಾನಂದರ ಮಾತು:

ಬುದ್ಧನ ಆಲೋಚನೆಯನ್ನು ಆನಂದಿಸಿದ ವಿವೇಕಾನಂದರು, “ನಾವು ನಮ್ಮ ಸ್ವಂತ ಕಾಲಿನ ಮೇಲೆ ನಿಲ್ಲಬೇಕೆಂದು ಆತ ಪ್ರಪಂಚದ ಇತರ ಗುರುಗಳೆಲ್ಲರಿಗಿಂತ ಹೆಚ್ಚಾಗಿ ಬೋದಿಸಿದನು. ಅವನು ನಮ್ಮನ್ನು ನಮ್ಮ ತೋರಿಕೆಯ ವ್ಯಕ್ತಿತ್ವದ ಬಂಧನದಿಂದ ಪಾರು ಮಾಡಿದುದು ಮಾತ್ರವಲ್ಲ. ದೇವರುಗಳೆಂಬ ಅಗೋಚರ ವ್ಯಕ್ತಿಗಳ ಹಿಡಿತದಿಂದ ನಮ್ಮನ್ನು ಸ್ವತಂತ್ರರನ್ನಾಗಿ ಮಾಡಿದ. ನಿರ್ವಾಣವೆಂಬ ಆ ಅವಸ್ತೆಯನ್ನು ಪಡೆಯಲು ಎಲ್ಲರಿಗೂ ಆಹ್ವಾನವಿತ್ತ .ಎಲ್ಲರೂ ಒಂದು ದಿನ ಅದನ್ನು ಪಡೆಯಲೇಬೇಕು. ಅದೇ ಮಾನವನ ಪರಮ ಗುರಿ “ಎಂಬ ತಿಳುವಳಿಕೆಯನ್ನು ನೀಡಿದ ಬುದ್ಧನನ್ನು ವಿವೇಕಾನಂದರು ಅರಿತಿದ್ದರು.

ಬುದ್ಧ ದೇವರ ಅಸ್ತಿತ್ವವನ್ನು ಪುನರ್ ವ್ಯಾಖ್ಯಾನಿಸಿ, ದೈವ ಮಹಿಮೆಯನ್ನು ಸಾಮಾನ್ಯೀಕರಿಸಿದ ತಾತ್ಮಿಕ ಚಿಂತಕ. ಭವ ಬಂಧನಗಳ ಬೆಸುಗೆಯನ್ನು ನಿರ್ಮಿಸಿದ ಯೋಗಿವರ್ಯ ಬುದ್ಧ ಎಂಬುದನ್ನು ವಿವೇಕಾನಂದರು ಕಂಡುಕೊಂಡಿದ್ದರು.

ವಿವೇಕಾನಂದರು ಕಂಡುಕೊಂಡ ಸತ್ಯದರ್ಶನ :ವಿವೇಕಾನಂದರು ಬೆಳಗಾವಿಗೆ ಬಂದು ಹರಿಪದ ಬಾಬುವಿನ ಮನೆಯಲ್ಲಿ ತಂಗಿದ್ದರು. ಹರಿಪದ ಬಾಬು ಸ್ವಾಮೀಜಿ ಗೆ, ‘ನನ್ನ ನಂಬಿಕೆ ಏನೆಂದರೆ ಸತ್ಯವು ದೇವರು ಒಂದೇ. ಅದು ನಿರಪೇಕ್ಷವಾದದ್ದು ಎಂದು. ಆದರೆ ಆ ಸತ್ಯಕ್ಕೆ ದಾರಿ ಎಂದು ಹೇಳಲಾಗುವ ಹಲವಾರು ಧರ್ಮಗಳೆಲ್ಲವೂ ಏಕಕಾಲಕ್ಕೆ ನಿಜವಾಗಿರಲು ಹೇಗೆ ಸಾಧ್ಯ? ಎಂಬ ಪ್ರಶ್ನೆಗೆ ವಿವೇಕಾನಂದರ ಉತ್ತರ ಹೀಗಿತ್ತು.

“ನೋಡು ಯಾವುದೇ ವಿಷಯದ ಬಗ್ಗೆ ನಮಗೆ ಈಗಿರುವ ಜ್ಞಾನವಾಗಲಿ ಮುಂದೆ ನಾವು ತಿಳಿಯಬಹುದು ನಮ್ಮ ಈ ಸಾಂತ ಬುದ್ಧಿಶಕ್ತಿಗೆ ಅನಂತ ಸತ್ಯವನ್ನು ಗ್ರಹಿಸಲು ಸಾಧ್ಯವಿಲ್ಲ. ಆದ್ದರಿಂದ ಸತ್ಯವು ನಿರಪೇಕ್ಷವಾದಂತೆ ಆದರೂ ಬೇರೆ ಬೇರೆ ಮನಸ್ಸುಗಳಿಗೆ ಹಾಗೂ ಬುದ್ಧಿ ಶಕ್ತಿಗಳಿಗೆ ಅದು ವಿಭಿನ್ನವಾಗಿ ತೋರುತ್ತದೆ. ಸತ್ಯದ ಎಲ್ಲಾ ಮುಖಗಳು ನಿರಪೇಕ್ಷ ಸತ್ಯದ ಪರಮ ಸತ್ಯದ ವರ್ಗಕ್ಕೆ ಸೇರಿದವುಗಳು. ಅದು ಹೇಗೆಂದರೆ ಒಬ್ಬನೇ ಸೂರ್ಯನ ಛಾಯಾಚಿತ್ರಗಳನ್ನು ಬೇರೆ ಬೇರೆ ಸಮಯಗಳಲ್ಲಿ ಬೇರೆ ಬೇರೆ ದಿಕ್ಕುಗಳಲ್ಲಿ ತೆಗೆದರೆ ಪ್ರತಿಯೊಂದು ಚಿತ್ರದಲ್ಲೂ ಆತ ವಿಭಿನ್ನವಾಗಿ ಕಾಣುವುದಿಲ್ಲವೇ? ಹೀಗೆ ಈ ಬೇರೆ ಬೇರೆ ತುಲನಾತ್ಮಕ ಸತ್ಯಗಳು ಆ ಪರಮ ಸತ್ಯದೊಂದಿಗೆ ಏಕ ರೀತಿಯ ಸಂಬಂಧ ಉಳ್ಳವುಗಳಾಗಿವೆ. ಆದ್ದರಿಂದ ಪ್ರತಿಯೊಂದು ಧರ್ಮವು ಸತ್ಯ ಏಕೆಂದರೆ ಅದು ಒಂದೇ ಪರಮಧರ್ಮದ ಒಂದೊಂದು ರೂಪ”ಎಂದು ತಿಳಿಸಿದರು.

ನೀರು ದ್ರವವಾಗಿ, ಘನ ರೂಪವಾಗಿ ಆವಿಯಾಗಿ ಆವಿರ್ಭವಿಸುವ ಹಲವು ರೂಪಗಳು ನಮ್ಮ ಕಣ್ಣಮುಂದಿವೆ. ಹಾಗೆ ಸತ್ಯವು ಕೂಡ ಎಲ್ಲಾ ಧರ್ಮಗಳ ತಳಹದಿ ಆಗಿರುತ್ತದೆ ಎಂಬ ನಿಲುವು ಕಂಡುಕೊಳ್ಳಬೇಕೇಂಬುದು ವಿವೇಕಾನಂದರ ನಿಲುವಾಗಿತ್ತು.

ಸನ್ಯಾಸತ್ವದ ನಾಲ್ಕು ವಿಧಗಳು :

ಶಾಸ್ತ್ರಗಳು ಸನ್ಯಾಸತ್ವದಲ್ಲಿ ನಾಲ್ಕು ವಿಧಗಳನ್ನು ಗುರುತಿಸುತ್ತವೆ. ವಿದ್ವತ್ ಸನ್ಯಾಸ,ವಿವಿಧಿಶ ಸನ್ಯಾಸ, ಮರ್ಕಟ ಸನ್ಯಾಸ ಮತ್ತು ಆತುರ ಸನ್ಯಾಸ.

ವಿದ್ವತ್ ಸನ್ಯಾಸ: ಹಠತ್ತಾಗಿ ನಿಜವಾದ ವೈರಾಗ್ಯ ಹುಟ್ಟಿದ್ದು ಆಗ ಸನ್ಯಾಸತ್ವ ತೆಗೆದುಕೊಂಡು ಹೊರಟು ಹೋಗುವುದು.

ವಿವಿದಿಷಾ ಸನ್ಯಾಸ : ಆತ್ಮ ತತ್ವವನ್ನು ತಿಳಿಯುವ ಪ್ರಬಲವಾದ ಆಸೆಯಿಂದ ಶಾಸ್ತ್ರ ಪಾಠ ಸಾಧನಾಧಿಗಳ ಮೂಲಕ ಯಾರಾದರೂ ಬ್ರಹ್ಮ ಜ್ಞಾನ ಪುರುಷರ ಹತ್ತಿರ ಸನ್ಯಾಸವನ್ನು ಸ್ವೀಕರಿಸಿ ಅಧ್ಯಯನ ಸಾಧನ ಭಜನೆಗಳನ್ನು ಮಾಡುವುದಕ್ಕೆ ತೊಡಗಿರುವುದು.

ಮರ್ಕಟ ಸನ್ಯಾಸ : ಸಂಸಾರದಲ್ಲಿ ಏಟು ತಿಂದು ನೆಂಟರಿಷ್ಟರನ್ನು ಕಳೆದುಕೊಂಡು ಅಥವಾ ಮತ್ತಾವ ಕಾರಣದಿಂದಲೂ ಕೆಲವರು ಹೋಗಿ ಸನ್ಯಾಸ ತೆಗೆದುಕೊಳ್ಳುವರು ಆದರೆ ಈ ವೈರಾಗ್ಯ ಸ್ಥಿರವಾಗಿರುವುದಿಲ್ಲ.

ಆತುರ ಸನ್ಯಾಸ : ಕಾಯಿಲೆಯಿಂದ ನರಳುತ್ತಿರುವ ವ್ಯಕ್ತಿಗೆ ಈ ಲೋಕ ತ್ಯಜಿಸುವಾಗ ಅವನಿಗೆ ಸನ್ಯಾಸತ್ವ ಕೊಡುವುದು. ಒಂದು ವೇಳೆ ಬದುಕಿದರೆ ಅವನು ಬ್ರಹ್ಮ ಜ್ಞಾನವನ್ನು ಪಡೆಯಬೇಕಾದರೆ ಸನ್ಯಾಸಿಯಾಗಿ ಕಾಲ ಕಳೆಯಬೇಕು.

ಹಾಗೆಯೇ ಸನ್ಯಾಸಿ ಯಾವ ಧರ್ಮಕ್ಕೂ ಸೇರಲಾರ. ಏಕೆಂದರೆ ಅವನು ಸ್ವತಂತ್ರ.ಅವನು ಒಳ್ಳೆಯದಾಗಿರುವದನ್ನು ಎಲ್ಲಾ ಧರ್ಮಗಳಿಂದಲೂ ಸ್ವೀಕರಿಸುವನು. ಸಾಕ್ಷಾತ್ಕಾರಕ್ಕೆ ದಾರಿ ಹಿಡಿದ ಜೀವನ ಅವನದು. ಅದು ಬರಿಯ ಸಿದ್ಧಾಂತವಲ್ಲ. ಮೂಢ ನಂಬಿಕೆಯೂ ಅಲ್ಲ. ಎಂಬುದು ವಿವೇಕಾನಂದರ ಅಗ್ರವಾಣಿಯಾಗಿತ್ತು.

ಮೈಸೂರು ಮಹಾರಾಜರಿಗೆ ಸತ್ಯದ ಪಾಠ ಹೇಳಿದ್ದ ವಿವೇಕಾನಂದರು :

ಮೈಸೂರು ಮಹಾರಾಜರು ತಮ್ಮ ಆಸ್ತಾನಿಕರ ಕುರಿತಾಗಿ ಅಭಿಪ್ರಾಯವನ್ನು ಕೇಳಿದಾಗ ವಿವೇಕಾನಂದರು ಹೀಗೆ ಹೇಳುತ್ತಾರೆ. ನಿಮ್ಮ ಆಸ್ಥಾನ ತುಂಬಾ ಹೊಗಳುಬಟ್ಟರೆ ತುಂಬಿದ್ದಾರೆ ಎಂದು ನೇರವಾಗಿ ಹೇಳಿದರು. ಈ ತರದ ಮಾತುಗಳನ್ನು ಆಡುವುದರಿಂದ ನಿಮ್ಮ ಜೀವಕ್ಕೆ ಅಪಾಯ ಎಂದು ಮಹಾರಾಜರು ತಿಳಿಸಿದಾಗ, ವಿವೇಕಾನಂದರು ಸಂಕಷ್ಟಗಳು ಬಂದು ಒದಗಿದರೂ ಕೂಡ ಪ್ರಾಮಾಣಿಕತೆಯನ್ನು ಮೀರಬಾರದು,ಸತ್ಯವನ್ನು ಎಂದಿಗೂ ಸತ್ಯವಾಗಿ ಹೇಳಬೇಕು ಹೊರತು ಅಸತ್ಯ ಎಂದಿಗೂ ಮಾತಾಡಬಾರದೆಂದು ಮಹಾರಾಜರಿಗೆ ಸತ್ಯದ ಪಾಠ ಹೇಳಿದರು. ಮಹಾರಾಜರು ಮತ್ತು ದಿವಾನರು ವಿವೇಕಾನಂದರಿಗೆ ರಾಜಾತಿತ್ಯ ವೈಭವಗಳನ್ನು ಕೊಡಲು ಸಿದ್ಧವಾಗಿದ್ದರು ಕೂಡ ವಿವೇಕಾನಂದರು ಅದರಿಂದ ವಿಮುಖರಾಗಿದ್ದರು. ಒಮ್ಮೆ ದಿವಾನರು ಸಾವಿರ ರೂಪಾಯಿ ಉಡುಗರೆ ಕೊಡಿಸಲು ನಿರ್ಧರಿಸಿದಾಗ ಅವರು ತೆಗೆದುಕೊಂಡಿದ್ದು ಒಂದು ರೂಪಾಯಿಯ ಸಿಗಾರನ್ನು ಮಾತ್ರ. ವಿವೇಕಾನಂದರು ಮೈಸೂರನ್ನು ಬಿಟ್ಟು ಹೋಗುವಾಗ ಅವರ ಇಚ್ಛೆಯಂತೆ ಅವರಿಗೆ ಬೀಟೆ ಮರದ ಹುಕ್ಕ ಕೊಡಿಸಿದರು. ಬೇಡಿದ್ದನ್ನೆಲ್ಲಾ ಕೊಡುವ ಶಕ್ತಿ ಮಹಾರಾಜರಿಗೆ ಇತ್ತು. ಆದರೆ ಅವರು ಕೊಟ್ಟಿದ್ದನ್ನೆಲ್ಲ ಸ್ವೀಕರಿಸುವ ಇಚ್ಚಾ ಶಕ್ತಿ ವಿವೇಕಾನಂದರಲ್ಲಿ ಇರಲಿಲ್ಲ. ಸರ್ವಸಂಗ ಪರಿತ್ಯಾಗಿಗೆ ಅವುಗಳ ಅವಶ್ಯಕತೆಯೂ ಇರಬೇಕಿಲ್ಲ. ‘ಆಸೆ ಎಂಬುದು ಅರಸಂಗಲ್ಲದೆ ಶಿವಭಕ್ತರಿಗೆ ಉಂಟೆ ಅಯ್ಯ ‘ ಎಂಬ ಆಯ್ದಕ್ಕಿ ಲಕ್ಕಮ್ಮನ ಮಾತು ನೆನಪಾಗುವಂತಿತ್ತು ನಡೆಯಲ್ಲಿ ನುಡಿಯಲ್ಲಿ ಸತ್ಯದರ್ಶನದ ರೂವಾರಿಯಾಗಿದ್ದರೂ ವಿವೇಕಾನಂದರು .ಮಹಾರಾಜರು ವಿವೇಕಾನಂದರ ಪಾದ ಪೂಜೆಯನ್ನು ಮಾಡಬೇಕೆಂದು ವಿನಂತಿಸಿ ಕೊಂಡಾಗ ಅದನ್ನು ಸಾರಸಗಟವಾಗಿ ನಿರಾಕರಿಸಿ ವ್ಯಕ್ತಿ ಪೂಜೆಯನ್ನು ವಿರೋಧಿಸಿದರು. ಇಂದಿನ ದಿನಮಾನಗಳಲ್ಲಿ ವ್ಯಕ್ತಿ ಪೂಜೆ ಶ್ರೇಷ್ಠವಾಗಿ ವಿಚಾರ ತನ್ನತನವನ್ನು ಕಳೆದುಕೊಳ್ಳುತ್ತಿದೆ. ಪ್ರತಿಯೊಂದರಲ್ಲೂ ವ್ಯಕ್ತಿ ಮುಂದೆ ಬಂದು ವಿಚಾರ ಹಿನ್ನಡೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಸಮಷ್ಟಿ ಪ್ರಜ್ಞೆ ಅರಿವು ಎಲ್ಲರಲ್ಲಿ ಒಡಮೂಡಬೇಕೆಂಬುದು ವಿವೇಕಾನಂದರ ಕನಸಾಗಿತ್ತು. ಅದು ಇಂದಿಗೂ ನನಸಾಗದೆ ಕನ ವರಿಸುತ್ತಿದೆ. ಸ್ವಾಮಿ ವಿವೇಕಾನಂದರ ರಚಿಸಿದ ‘ಸಾಂಗ್ ಆಫ್ ದಿ ಸನ್ಯಾಸಿಸಂ ‘ ಇಂಗ್ಲಿಷ್ ಅವತ್ತರಿಣಿಕೆಯ ಕೆಲವು ಸಾಲುಗಳನ್ನು ಕುವೆಂಪು ಅವರು ಹೀಗೆ ಕನ್ನಡಿಸಿದ್ದಾರೆ.

ಕುಟ್ಟಿ ಪುಡಿ ಪುಡಿ ಮಾಡು ಮಾಯೆಯು ಕಟ್ಟಿ ಬಿಗಿದಿಹ ಹಗ್ಗವ

ಕಿತ್ತು ಬಿಸುಡೈ ಹೊಳೆವ ಹೊನ್ನಿನ ಹೆಣ್ಣು ಮಣ್ಣಿನ ಕಗ್ಗವ!”

ನಮ್ಮಲ್ಲಿರುವ ಅಂಧಕಾರ ಶಕ್ತಿಗಳಾದ ಅಜ್ಞಾನ, ಮೂಢ ನಂಬಿಕೆ, ಹೊಟ್ಟೆಕಿಚ್ಚು, ದ್ವೇಷ,ಹಿಂಸೆ, ಅಸೂಯೆ, ಜಾತಿ,ಧರ್ಮ,ಪಂಥ, ಮೇಲು, ಕೀಳು, ಹೆಣ್ಣು,ಗಂಡು ಬಡವ ಬಲ್ಲಿದ ಎಂಬೆಲ್ಲಾ ವರ್ಗಗಳನ್ನು ತೆಗೆದುಹಾಕಿ ಸರ್ವಧರ್ಮ ಸಮಾನತೆಯ ಸರ್ವಧರ್ಮ ಗುಣದ ನಾಡನ್ನು ಕಟ್ಟೋಣವೆಂಬ ಶಪಥ ವೀರ ಸನ್ಯಾಸಿಯದಾಗಿತ್ತು . ಅದನ್ನ ನನಸು ಮಾಡಬೇಕಾದ ಕಾರ್ಯ ಯುವಕರದ್ದು ಹಾಗೂ ಸಮಾನ ಮನಸ್ಸಿನ ಪ್ರಜೆಗಳದು.

ಡಾ.ರಾಜೇಂದ್ರಕುಮಾರ್ ಕೆ ಮುದ್ನಾಳ್,ಶಿಕ್ಷಕರು ಸಂಶೋಧಕರು ಯಾದಗಿರಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ