ಗಜಲ್
ಪ್ರತಿ ಉಸಿರಿಗೊಂದು ಹೆಸರಿರಲು, ಯಾರ ಸ್ವರ್ಗ ಎಲ್ಲಿದೆ ?
ಹುಟ್ಟು, ಸಾವುಗಳು ಇಲ್ಲೇ ಇರಲು, ಯಾರ ಸ್ವರ್ಗ ಎಲ್ಲಿದೆ ?
ಅಜಾನ್, ಭಜನೆ ಒಂದೇ ಇರುವಾಗ, ಭೇದದ ಬೇಲಿ ಏತಕೆ ?
ನಮ್ಮೋಳಗೆ ನಾವೇ ಮುಳ್ಳಾಗಿರಲು, ಯಾರ ಸ್ವರ್ಗ ಎಲ್ಲಿದೆ ?
ಸಂಸ್ಕೃತಕೊಂದು ಸ್ವರ್ಗವಾದರೆ, ಬೇರೆ ಭಾಷೆಗೆ ಭಾವವಿಲ್ಲವೇ ?
ಮನಕ್ಕೆ ಸಂಸ್ಕೃತಿಯೇ ಇಲ್ಲದಿರಲು, ಯಾರ ಸ್ವರ್ಗ ಎಲ್ಲಿದೆ ?
ಮಕ್ಕಳನ್ನು ದೇವರೆನ್ನುತ್ತೇವೆ, ಜಾತಿ ಧರ್ಮದ ಉರುಲಿಕ್ಕುತ್ತೇವೆ
ಧರ್ಮದಡಿ ಅತ್ಯಾಚಾರ ನಡೆದಿರಲು, ಯಾರ ಸ್ವರ್ಗ ಎಲ್ಲಿದೆ ?
ದೇವರಿಗಲ್ಲ, ಬಡವ ಬಲ್ಲಿದರಿಗೆ, ಹೆಣ್ಣು ಗಂಡಿಗೆ, ಜಾತಿ ಧರ್ಮಗಳಿಗೆ
ಜೀವಕೋಟಿಗೂ ನಾನಾ ಭಾವವಿರಲು, ಯಾರ ಸ್ವರ್ಗ ಎಲ್ಲಿದೆ ?
ಪುನರ್ಜನ್ಮದ ಸರತಿಯಲ್ಲಿ, ಸ್ವರ್ಗ ಮುಟ್ಟಿ ಬಂದವರಾರುಂಟೆ ?
ಸಾಸಿವೆಯ ಸತ್ಯ ಅರಿಯಲಾಗದಿರಲು, ಯಾರ ಸ್ವರ್ಗ ಎಲ್ಲಿದೆ ?
ಸಾವೇ ಸ್ವರ್ಗದಲ್ಲಾಗಲಿ, ಕರೆದೊಯ್ಯುವರ್ಯಾರು “ಬೋದಿ”
ಮೂರ್ಖರ ಕೈಗೆ ಧರ್ಮ ಸಿಕ್ಕಿರಲು, ಯಾರ ಸ್ವರ್ಗ ಎಲ್ಲಿದೆ ?
ದೇವೇಂದ್ರ ಕಟ್ಟಿಮನಿ.
ಶಿಕ್ಷಕರು. ಕಮಲಾಪೂರ