Oplus_131072

ಗಾಂಧಿ ಕೊಲೆಯಾದ.(ಮಿನಿಕತೆ)

– ವೀರಣ್ಣ ಮಂಠಾಳಕರ್, ಬಸವಕಲ್ಯಾಣ

ಗಾಂಧಿ ಅಂದ್ರೆ ಸ್ವಾತಂತ್ರ್ಯ ಹೋರಾಟಗಾರ ಗಾಂಧಿ ಅಂತೂ ಅಲ್ಲವೇ ಅಲ್ಲ. ಅಂದ್ರೆ ‘ಗಾಂಧಿ‘ ಎಂಬ ಶೀರ್ಷಿಕೆಯಡಿ ಅವನೊಂದು ಪುಸ್ತಕ ಪ್ರಕಟಿಸಿದ ಆವತ್ತಿನಿಂದ ಅವನಿಗೆ ಇಡೀ ಸಾಹಿತ್ಯ ಬಳಗದಲ್ಲಿ ಯುವ ಕುಡಿಗಳು

ಆಧುನಿಕ ಗಾಂಧಿ ಬಂದ ನೋಡ್ರಪ್ಪಾ” ಎಂದು ತೆರೆಮರೆಯಲ್ಲಿ ಲೇವಡಿ ಮಾಡುತಿದ್ದರು. ಅವನು ಯಾವುದೇ ಸಾಹಿತ್ಯ ಸಮಾರಂಭಗಳಲ್ಲಿ ಹೀಗೆ ಅವನ ಬರವಣಿಗೆಯನ್ನು ಕಂಡು ಒಳಗೊಳಗೆ ಕುದಿಯುತ್ತಿದ್ದರು. ಈ ಗಾಂಧಿ ಪುಸ್ತಕದ ಲೇಖಕನ ಬಗ್ಗೆ ಗೇಲಿ ಮಾಡಿಕೊಂಡು ತಮ್ಮ ಹೊಟ್ಟೆಯೊಳಗಿನ ಈರ್ಷೆಯ ಬೆಂಕಿ ತಣ್ಣಗಾಗಿಸಿಕೊಳ್ಳುತಿದ್ದರು.

ಒಮ್ಮೊಮ್ಮೆ ಮುಖಾ ಮುಖಿಯಾಗಿ ಭೇಟಿಯಾದ ಸಂದರ್ಭದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಮಾತ್ರ ಅವನ ಹತ್ತಿರ ಹೋಗುತಿದ್ದರು. ಅದೇಷ್ಷೋ ಯುವ ಸಾಹಿತಿ ಗಳೆನಿಸಿಕೊಂಡವರು ಆ ಗಾಂಧಿಯಿಂದ ಅನೇಕ ವಿಚಾರಗಳನ್ನು ಎರವಲು ಪಡೆದುಕೊಳ್ಳುತಿದ್ದರು. ಕಾವ್ಯ ಕಥೆ, ಲೇಖನಕ್ಕೆ ಬೇಕಾಗುವ ವಿಷಯ ವಸ್ತುಗಳ ಬಗ್ಗೆ ಅವನಿಂದ ಮಾರ್ಗದರ್ಶನ ಪಡೆಯುತಿದ್ದರು.

ವರ್ಷಗಳು ಉರುಳುತಿದ್ದಂತೆ ಆ ಗಾಂಧಿಯಿಂದ ಪಡೆದ ವಿಚಾರಗಳು ಅಕ್ಷರಗಳಲ್ಲಿ ಬರೆದು ಖ್ಯಾತ ಸಾಹಿತಿಗಳೆಂಬ ಬಿರುದು ಪಡೆದು ಮೆರೆಯುತಿದ್ದರು. ಸಾಹಿತ್ಯ ಕ್ಷೇತ್ರದಲ್ಲೂ ರಾಜಕೀಯ ನುಸುಳುತ್ತಿದೆ ಎಂದು ಬೇಸರಿಸಿದ ಆತ ಗಟ್ಟಿ ಬರಹಕ್ಕಿರುವ ಸ್ಥಾನಮಾನಕ್ಕಿಂತ ಜೊಳ್ಳು ಬರಹಗಾರರಗೆ ಗೌರವ ಹೆಚ್ಚಾಗಿದೆ. ಅಂಥವರಿಗೆ ಈ ಸಮಾಜದಲ್ಲಿ ಅವಕಾಶ ನೀಡುತಿದ್ದಾರೆ . ಎಂದು ತನ್ನ ಬರಹಗಳ ಮೂಲಕ ಆಕ್ರೋಷ ಹೊರ ಹಾಕುತಿದ್ದನು. ಬದಲಾದ ವ್ಯವಸ್ಥೆಗೆ ಈ ಆಧುನಿಕ ಗಾಂಧಿ ಪ್ರತಿಭಟಿಸಲು ಮುಂದಾದ.

ಸಾಹಿತ್ಯ ಕ್ಷೇತ್ರದಲ್ಲಿ ನಡೆಯುತ್ತಿರುವ ಜಾತಿ ತಾರತಮ್ಯ, ವರ್ಗ, ವರ್ಣ ಭೇದಗಳಿಂದ ಸಾಣೆ ಹಿಡಿಯುತ್ತಿರುವ ಸಾಹಿತ್ಯ ಪರಿಷತ್ತು, ಸಾಹಿತ್ಯ ಸಂಘಟಕರಲ್ಲಿ ತಕರಾರು ತೆಗೆದ ಆಧುನಿಕ ಗಾಂಧಿ. ಯಾಕೆಂದರೆ ಆಧುನಿಕ ಗಾಂಧಿ ಎನಿಸಿಕೊಂಡವನು ಶೂದ್ರ ಬರಹಗಾರನಾಗಿದ್ದ. ಇದರಿಂದ ಮೇಲ್ವರ್ಗದವರಲ್ಲಿ ಇಲ್ಲದ ವಿಚಾರ ಸಾಹಿತ್ಯಕ್ಕೆ ಬೇಕಾಗುವ ಪರಿಕರಗಳ ಅನುಭವ, ಬರವಣಿಗೆ ಕೌಶಲ್ಯತೆ, ಶಬ್ದ ಭಂಡಾರ ಢಾಳವಾಗಿ ಆಧುನಿಕ ಗಾಂಧಿಯ ಬರಹಗಳಲ್ಲಿ ಅಡಗಿದ್ದವು.

ಅವನ ಆ ಬರವಣಿಗೆಯ ಕೌಶಲ್ಯಲತೆ, ಪದ ಲಾಲಿತ್ಯ, ಬರಹಗಳಲ್ಲಿರುವ ಚಾಕಚಕ್ಯತೆ ಸಹಿಸಿಕೊಳ್ಳದವರು ಆಧುನಿಕ ಗಾಂಧಿ ಬರೆದ ಹಸ್ತಪ್ರತಿ ಬರಹಗಳನ್ನು, ಅನೇಕ ವಿಚಾರಗಳು, ಆತನ ಬದುಕಿನ ಅನುಭವಗಳನ್ನು ಪಡೆದವರು ಅವನಿಂದ ಎರವಲು ಪಡೆದ ಬರಹಗಳಿಂದ ಖ್ಯಾತ ಸಾಹಿತಿ, ಕವಿ, ಬರಹಗಾರರಾಗಿ , ಲೇಖಕರಾಗಿಯೋ ! ಖ್ಯಾತನಾಮರಂತೆ ಹೆಸರುವಾಸಿಯಾಗಿದ್ದರು.

ಯಾರೋ ! ಬರೆದಿದ್ದನ್ನು ಇನ್ಯಾರೋ ! ಕೃತಿಚೌರ್ಯ ಮಾಡಿ ಮೆರೆಯುತಿದ್ದವರಿಂದ ತೀವ್ರವಾಗಿ ನೊಂದುಕೊಂಡಿದ್ದ ಆಧುನಿಕ ಗಾಂಧಿ. ಒಂದಿನ ಇದ್ದಕಿದ್ದಂತೆ ನಾಪತ್ತೆಯಾದ. ಸೃಜನಶೀಲತೆಗೆ ಇಲ್ಲಿ ಬೆಲೆಯಿಲ್ಲ. ಎಂದು ಆಧುನಿಕ ಗಾಂದಿ ಬೇಸತ್ತು ಹೋದ. ವರ್ಷಗಳೇ ಉರುಳಿದವು. ಗಾಂಧಿ ಪುಸ್ತಕದ ಸಾಹಿತಿಯೊಬ್ಬ ಕಣ್ಮರೆಯಾದ.! ಎಂದು ಗುಸುಗುಸು ಶಬ್ದಗಳ ಗಾಸಿಪ್ ಗಳು ಶುರುವಾದವು.

ಅವನು ಆ ಜಿಲ್ಲೆ, ತಾಲೂಕು, ಊರಿನಿಂದ ಕಣ್ಮರೆಯಾದದ್ದೇ ಅಲ್ಲಿರುವ ಅದೆಷ್ಟೋ ಜೊಳ್ಳು ಬರಹಗಾರರಿಗೆ ಖುಷಿಯಾಗಿತ್ತು. ಬಹು ವರ್ಷಗಳಿಂದ, ಸಾಹಿತ್ಯ ಸಮಾರಂಭಗಳಾಗಲಿ, ಯಾವುದೇ ಕಾರ್ಯಕ್ರಮಗಳಲ್ಲೂ ಭಾಗಿಯಾಗದೇ ಸಾಹಿತ್ಯ ಸಮಾರಂಭಗಳ ಆಮಂತ್ರಣ ಪತ್ರಿಕೆಗಳಲ್ಲೂ ಅವನ ಹೆಸರು ಕಾಣಲಿಲ್ಲ. ಎರಡು ದಶಕಗಳ ನಂತರ ಜೊಳ್ಳು- ಪೊಳ್ಳು ಬರಹಗಳನ್ನು ಬರೆಯುತಿದ್ದವರು. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಹಿತಿ, ಬರಹಗಾರೆಂಬ ಖ್ಯಾತಿ ಪಡೆದಿದ್ದರು. ಅನೇಕ ಪ್ರಶಸ್ತಿಗಳಿಗೆ ಜೊಳ್ಳು ಬರಹಗಾರರು ಭಾಜನರಾಗಿ ಪ್ರಶಸ್ತಿಗಳು ಬಾಚಿಕೊಂಡಿದ್ದರು.

ಒಂದಿನ ರಾಜ್ಯ, ರಾಷ್ಟ್ರ ಮಟ್ಟದ ವಿವಿಧ ಸಾಹಿತ್ಯ ಪುರವಣಿಗಳಲ್ಲಿ ” ಗಾಂಧಿ ಕೊಲೆಯಾದ” ಪುಸ್ತಕದ ಕುರಿತು ವಿಮರ್ಶೆಗಳು ಪ್ರಕಟಗೊಂಡವು. ಆ ಪುಸ್ತಕದ ಕುರಿತು ಅನೇಕ ವಿಮರ್ಶಕರು ಪ್ರಶಂಶಿಸಿ ಬರೆದಿದ್ದರು. ಹಾಡಿ ಹೊಗಳಿ ಪುಸ್ತಕದ ಮುಖಪುಟದೊಂದಿಗೆ ಗಾಂಧಿ ಕೊಲೆಯಾದ ಎಂಬ ವಿಷಯದ ಬಗ್ಗೆ ವಿಮರ್ಶಾತ್ಮಕವಾದ ಬರಹಗಳು ಹಲವು ಸಾಹಿತ್ಯ ಪುರವಣಿಗಳಲ್ಲಿ ಪ್ರಕಟಗೊಂಡಿದ್ದವು.

ಆಧುನಿಕ ಗಾಂಧಿಯೆಂದೇ ಹೆಸರಾಗಿದ್ದ ಗಾಂಧಿ ಪುಸ್ತಕದ ಸಾಹಿತಿಯ ಜೀವನ ದೃಷ್ಠಾಂತ ಆತನ ಈ ಹಿಂದಿನ ಕೃತಿಗಳ ಬಗ್ಗೆ ಢಾಳವಾಗಿ ವಿಮರ್ಶೆ ಕಣ್ಣಿಗೆ ರಾಚುವಂತಿದ್ದವು.
” ಗಾಂಧಿ ಕೊಲೆಯಾದ” ಎಂಬ ಪುಸ್ತಕದ ಕುರಿತ ಪುಟಗಟ್ಟಲೆ ವಿಮರ್ಶೆಗಳು. ಇದರಿಂದ ಅವನ ಸುತ್ತಮುತ್ತ ಜೀವಿಸಿದ ಜೊಳ್ಳು ಬರಹಗಾರರಿಗೆ ನಡುಕ ಶುರುವಾಗಿತ್ತು. ಅವನು ಮತ್ತೆ ಹೇಗೆ ಪ್ರತ್ಯಕ್ಷಗೊಂಡನು ? ಎಂಬ ಪ್ರಶ್ನೆಗಳುದ್ಭವಿಸಿದವು. ಅನೇಕ ಪ್ರಶ್ನೆಗಳು ಜೊಳ್ಳು ಬರಹಗಾರರು, ಸಾಹಿತಿಗಳಲ್ಲಿ ಚಿಂತನೆ ಶುರುವಾಗಿಲ್ಲ. ಚಿಂತೆ ಮನೆ ಮಾಡಿಕೊಂಡಿತ್ತು.

–  ವೀರಣ್ಣ ಮಂಠಾಳಕರ್, ಬಸವಕಲ್ಯಾಣ