ಗೆದ್ದದ್ದು ಬದುಕು ಭಾವವಲ್ಲ.
–ಶಾರದ ಎಸ್.ಜಿ. ಶಿಕ್ಷಕಿ.
ಪಾಲಿಗಿದ್ದ ಒಂದಷ್ಟು ಹೂಲಿಗಳು
ಬದುಕಿನಾಚೆಗಿನ ಶೂನ್ಯಕ್ಕೆ
ಭಾವನೆಗಳು ಶಿರಸಾ ವಹಿಸಿವೆ
ಬದುಕು ಭಾವದ ಕದನದಲ್ಲಿ
ಕಾದಾಡುವಿಬ್ಬರಲ್ಲಿ ಗೆದ್ದದ್ದು
ಬದುಕು ಭಾವವಲ್ಲ
ಅವರವರಿಗವರ ಬದುಕಿನ ಪುಟ
ತಿರುವಲು ಬಿಡುವು ಇಲ್ಲದಿರಲೂ
ಚಿತ್ತು ಬದುಕಿನ ಬರಹ ಓದುವರುಂಟೆ?
ಬರಿಯ ನರಳಾಟ ಮರುಳಾಟದ ಪುಟಗಳು
ಒಳಹೊಕ್ಕು ಇಣಕಿ ನೋಡುವ ಮಾತೇಲ್ಲಿ ?
ಅಂದ ಚಂದಕ್ಕೆ ಬೆಲೆ ಇಲ್ಲಿ !
ಮನ ದಿಟ್ಟಿಸಿದ ದಿಟ ಗೆರೆಯಲ್ಲಿ
ಮೂಡದ ಬಾಳ ಆಕಾರ
ಪಟ್ಟ ಪಾಡು ಉಸಿರೆತ್ತಿತು ಬದುಕಾಗಿ
ಮೌನದೊಳಗಿದ ಮಾತಿನ ಉನ್ಮಾದ
ಕೇಳುಗರಿಲ್ಲದ ಒರಟು ಅನುಭೂತಿ
ಮೌನದ ಸೆರಗಿಗೆ ಮಾತೊರಗಿ ಕೂತಿದೆ
ಹಡದಿ ಹಾಸಿ ಮಲಗಿದ ಭಾವನೆಗಳಿಗೆ
ಕಾಲನ ಲೀಲೆಗಳೇ ಬಾಳ ಸೋಪಾನವೆಂದು
ನೇವರಿಸಿ ದೂಡಬೇಕಿದೆ ಬಾಳನು ಓದಿಸಿಕೊಂಡಂತೆ.
– ಶಾರದ ಎಸ್.ಜಿ. ಶಿಕ್ಷಕಿ.
ಕುರಳಗೇರ.ತಾ.ಯಡ್ರಾಮಿ ಜಿ.ಕಲಬುರಗಿ
ಕವಯತ್ರಿ ಪರಿಚಯ:
ಉದಯೋನ್ಮುಖ ಕವಯತ್ರಿಯರಾದ ಶಾರದ ಎಸ್.ಜಿ.ಯವರು ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ಕಕ್ಕೇರ ಗ್ರಾಮದವರು. ಎಂ.ಎ ಸ್ನಾತಕೋತ್ತರ ಪದವಿಧರರಾದ ಇವರು ಸದ್ಯ ಯಡ್ರಾಮಿ ತಾಲ್ಲೂಕಿನ ಕುರಳಗೇರ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯ ರಚನೆಯಲ್ಲಿ ಆಸಕ್ತರಾದ ಇವರು
ಕತೆ ಕವನ ಲೇಖನಗಳನ್ನು ಬರೆಯುತ್ತಿದ್ದಾರೆ. ಅಷ್ಟೇಯಲ್ಲದೆ ‘ಬದುಕು ಭಾವ’ ಎಂಬ ಕವನ ಸಂಕಲನ ರಚಿಸಿದ್ದಾರೆ. ಇವರಿಗೆ ತಾಲ್ಲೂಕು ಮಟ್ಟದ ತವನಿಧಿ ಪ್ರಶಸ್ತಿ ಲಭಿಸಿದೆ.