ಘಾಟ ಹಿಪ್ಪರಗಾ ರಾಮಲಿಂಗೇಶ್ವರ ದರ್ಶನ.
ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಬರುವ ‘ಬೀದರ ಜಿಲ್ಲೆಯು, ಕಲ್ಯಾಣ ನಾಡು,ಶರಣರ ನಾಡು, ಗವಿ-ಗದ್ದುಗೆಗಳ ಬೀಡು ಎಂಬ ಖ್ಯಾತಿಗೆ ಒಳಪಟ್ಟಿದೆ. ಈ ಜಿಲ್ಲೆಯ ಬಸವಕಲ್ಯಾಣ ಕ್ಷೇತ್ರವು ಧಾರ್ಮಿಕ ಮತ್ತು ಐತಿಹಾಸಿಕ ನಗರವಾಗಿ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿ ರಾಮಾಯಣ ಮಹಾಭಾರತ ಕಾಲದ ಪೌರಾಣಿಕ ಕತೆ ಹೇಳುವ ಹಲವಾರು ಸ್ಥಳಗಳು ಸಿಗುತ್ತವೆ. NH 9 ಮುಂಬಯಿ – ಹೈದರಾಬಾದ್ ರಸ್ತೆಯ ಬದಿಗೆ ಬರುವ ಚಂಡಕಾಪೂರ ಎಂಬ ಗ್ರಾಮದಲ್ಲಿ ರಾಮನ ಅಮೃತಕುಂಡ ಎಂಬ ದೇವಾಲಯವಿದ್ದು, ಇದು ‘ಮುಲ್ಲಾಮಾರಿ ನದಿಯ ಉಗಮ ಸ್ಥಳ ‘ವೆಂದು ಕರೆಯಲಾಗಿದೆ.
ಅದೇ ಮಾರ್ಗದಲ್ಲಿ ಕೆಳಗೆ ಸುಮಾರು 15 ಕೀ.ಮಿ.ದೂರದಲ್ಲಿ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಇರುವುದು ಕಂಡು ಬರುತ್ತದೆ. ಈ ಕ್ಷೇತ್ರವು ಬೀದರ ಕಲಬುರಗಿ ಮಹಾರಾಷ್ಟ್ರದ ಸೋಲ್ಲಾಪೂರ, ಲಾತೂರ ಜಿಲ್ಲೆಯ ಜನರಿಗೆ ಇದು ಕಾಶಿಯ ಪುಣ್ಯ ಕ್ಷೇತ್ರದಷ್ಟೇ ಪವಿತ್ರವಾಗಿದೆ. ಈ ದೇವಸ್ಥಾನವು ಬಸವಕಲ್ಯಾಣ ತಾಲೂಕಿನ ಘಾಟ ಹಿಪ್ಪರಗಾ ಗ್ರಾಮದ ಪೂರ್ವಕ್ಕೆ ಒಂದು ಕೀ.ಮೀ. ದೂರದಲ್ಲಿದೆ.
ಇಲ್ಲಿ ದಟ್ಟವಾದ ಆರಣ್ಯ ಅದರೊಳಗೆ ಎತ್ತರವಾದ ಮರ ಗಿಡಗಳು ಕಂಡುಬರುತ್ತವೆ. ಆ ಮರ ಗಿಡಗಳ ಟೊಂಗೆ ಟೊಂಗೆಗಳಲ್ಲಿ ಹೆಜ್ಜೇನುಗಳ ಗೂಡು ಇರುವುದು ಕಂಡು ಬರುತ್ತವೆ.
ಈ ಹೆಜ್ಜೆನುಗಳ ವಿಶೇಷವೆಂದರೆ
“ಯಾರಾದರೂ ಪ್ರೇಮಿಗಳು ಅರಣ್ಯದೊಳಗೆ ಪ್ರೀತಿ ಪ್ರೇಮದ ಹೆಸರಿನಲ್ಲಿ ಅನೈತಿಕ ಚಟುವಟಿಕೆ ನಡೆಸಿದರೆ ಆ ಹೆಜ್ಜೇನುಗಳೆ ಕಚ್ಚಿ ಓಡಿಸುತ್ತವೆ ಅಂತೆ. ಹಾಗಾಗಿ ಯಾರು ಆ ಆರಣ್ಯದೊಳಗೆ ಭಕ್ತಿಯಿಲ್ಲದೆ ಒಳಹೊಗಲು ಹೆದರುತ್ತಾರೆ. ಇದು ಸುಳ್ಳು ಎಂದು ವಾದ ಮಾಡುವವರು ಒಮ್ಮೆ ಒಳ ಹೋಗಿ ಜೇನುನೊಣಗಳಿಂದ ಕಚ್ಚಿಸಿಕೊಂಡು ಮುಖ ಮುಸುಡಿ ಊದಿಸಿಕೊಂಡು ಎದ್ದೋ ! ಬಿದ್ದು ಎಂದು ಚಿರಾಡುತ್ತಾ ಓಡಿ ಬಂದ ಬಹಳಷ್ಟು ಉದಾಹರಣೆಗೆಗಳು ಇವೆ. ಇದು ನಂಬದೆ ಇರುವವರು ತಾವು ಕೂಡ ಒಮ್ಮೆ ಈ ಸಾಹಸ ಮಾಡಿ ಅನುಭವ ಪಡೆಯಬಹುದು ” ಎಂದು ಇಲ್ಲಿಯ ಜನ ನಗುತ್ತಾ ಈ ಕ್ಷೇತ್ರದ ಮಹಿಮೆಯ ಪರಿಚಯ ಮಾಡಿಕೊಡುತ್ತಾರೆ.
ಎತ್ತರ ಎತ್ತರವಾದ ಆ ಮರ ಗಿಡಗಳಲ್ಲಿ ಚಿಲಿಪಿಲಿ ಎಂದೊದುವ ಹಕ್ಕಿಗಳ ಕಲರವ ಒಂದೆಡೆಯಾದರೆ; ಸದಾ ಜುಳು ಜುಳು ಒಸರುವ ‘ಬತ್ತದ ಗಂಗೆ ‘ಎಂದೇ ಹೆಸರಾದ ಝರಿಯೊಂದು ಈ ದೇವಾಲಯದ ಎದುರಿನಲ್ಲಿ ಕಂಡು ಬರುತದೆ.
ಆ ಝರಿಯಿಂದಲೆ ರೂಪುಗೊಂಡ ಸಣ್ಣದೊಂದು ಕೆರೆಯು ಕೂಡ ಅಲ್ಲಿರುವುದು ಅದರ ವಿಶೇಷವಾಗಿದೆ.
ಈ ಕೆರೆ ದಾಟಿ ರಾಮಲಿಂಗೇಶ್ವರ ದೇಗುಲದೆಡೆಗೆ ಹೊದಂತೆಲ್ಲ. ಅಲ್ಲಲ್ಲಿ ಶಿವಲಿಂಗಗಳು ಕಂಡು ಬರುತ್ತವೆ. ಮತ್ತು ಅಲ್ಲಿ ಹಲವಾರು ಗುಹೆಗಳಿವೆ
ಆ ಗುಹೆಯೊಳಗೂ ಶಿವಲಿಂಗಗಳಿವೆ. ಇಲ್ಲಿರುವ ಐದು ಗುಹೆಗಳಲ್ಲಿ ಪಶ್ಚಿಮಕ್ಕೆ ಮುಖವಿರುವ ಗುಹೆಗೆ ಘಾಟಹಿಪ್ಪರಗಾ ಗ್ರಾಮಸ್ಥರಿಂದ ಮುಂದೆ ಚಾವಣಿ ಹಾಕಿ ರಕ್ಷಿಸಲಾಗಿದೆ. ಈ ಗುಹೆಯ ಒಳಗಡೆಯಲ್ಲಿ ಹಲವಾರು ಲಿಂಗಗಳುಂಟು, ಮತ್ತು ಅ ಗುಹೆಯೊಳಗೆ
ಶಿವಾ, ಪಾರ್ವತಿ,ರಾಮ, ಹನುಮಾನ, ಲಕ್ಷ್ಮಣ, ಕಾಳಿ ಮೊದಲಾದವರ ಹಿಂದು ದೇವತೆಗಳ ಧಾರ್ಮಿಕ ಶಿಲ್ಪ ಕಲೆಗಳು ಇರುವುದು ಗೊಚರಿಸುತವೆ.
ಇಲ್ಲಿಯ ಒಂದು ಗುಹೆ ನೋಡಿದಾಗ ಬೇಡರ ಕಣ್ಣ ಪ್ಪನ ಕತೆಯೇ ಇಲ್ಲಿ ನಡೆದಿರ ಬೇಕೆಂದು ಅನಿಸುತ್ತದೆ.
ಅದ್ಹೇಗೆ ಅಂದ್ರೆ ಬೇಡರ ಕಣ್ಣಪ್ಪನು ಶಿವರಾತ್ರಿಯ ದಿನ ಹಸಿವೆಗಾಗಿ ಬಳಲುತ ಎತ್ತರವಾದ ಮರ ಗಿಡಗಳಲ್ಲಿ ಬೇಟೆಗಾಗಿ ಕಾಯುತ್ತಾ ಬಿಲ್ವ ಪತ್ರೆಗಳು ಹರಿದು ಶಿವಲಿಂಗದ, ಮೇಲೆ ಎಸೆಯುತಾ ಶಿವನಾಮ ಜಪಿಸಿದ ಸ್ಥಳ ಇದೆ ಇರಬಹುದೇನೋ ? ಅನ್ನೋ ಕುರುಹಕ್ಕೆ ಈ ದೇವಾಲಯದ ಮರಗಿಡಗಳಲ್ಲಿಯ ಬಿಲ್ವ ಪತ್ರೆ ಗಿಡಗಳು ಸಾಕ್ಷಿಯಾಗಿ ನಿಂತಿವೆ.
ಮತ್ತು ಈ ದೇಗುಲದ ಮುಂಬಾಗಕ್ಕೆ ಒಂದು ನೀರಿನ ಗುಂಡವಿದೆ.
ಈ ಶಿಲ್ಪ ಕಲೆಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಶಿವನ ಲಿಂಗಗಳು ಇರುವುದರಿಂದ ಅವು ಶ್ರೀ ರಾಮನೇ ಸ್ಥಾಪಿಸಿದ ಎಂಬ ಪೌರಾಣಿಕ ಕತೆಯೊಂದು ಈ ಗ್ರಾಮದ ಜನ ಹೇಳುತ್ತಾರೆ.
ಈ ಚಿತ್ರಗಳು ಧಾರ್ಮಿಕವಾಗಿ ಕೂಡಿರುವುದರಿಂದ ಇಲ್ಲಿನ ಜನ ‘ ಶ್ರೀ ರಾಮಲಿಂಗೇಶ್ವರ’ ಎಂಬ ಹೆಸರಿನಿಂದ ಪೂಜೆ,ಪುನಸ್ಕಾರ,ಮತ್ತು ಹಬ್ಬ- ಹರಿದಿನ ಜಾತ್ರೆಗಳನ್ನು ತುಂಬ ವೈಭವದಿಂದ ಆಚರಿಸುತ್ತಾರೆ. ಮತ್ತು ಈ ದೇವಾಲಯದ ಬಗ್ಗೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಈ ರಾಮಲಿಂಗೇಶ್ವರರ ಕುರಿತಾದ ಹಲವಾರು ದಂತ ಕತೆಗಳಿವೆ. ಅವು ಪಕ್ಕದ ಸೀಮೆಯಲ್ಲಿರುವ ಬಗದುರಿಯ ಎಲ್ಲಮ್ಮನ ಪವಾಡವನ್ನು ಒಳಗೊಂಡಿವೆ. ಎನ್ನುವುದು ಜನ ತಿಳಿಸುತ್ತಾರೆ.
ಆದರೆ ಇಲ್ಲಿ ನನಗೆ ತೋರಿದಂತೆ ೧೨ನೇ ಶತಮಾನದ ಶರಣರು ನಡೆದಾಡಿರಬಹುದೆಂದು ಊಹೆ ಮೂಡುತ್ತದೆ.
ಅಕ್ಕ ಮಹಾದೇವಿ, ಬಸವಣ್ಣ, ಅಲ್ಲಮಪ್ರಭು, ಉರಿಲಿಂಗ ಪೆದ್ದಿ, ಮಾದಾರ ಚನ್ನಯ್ಯ,ಮಡಿವಾಳ ಮಾಚಿದೇವ, ಸಮಗಾರ ಹರಳಯ್ಯ ಮೊದಲಾದ ಕಲ್ಯಾಣ ನಾಡಿನ ಶರಣರ ಗವಿಗಳಂತೆ ಈ ಗವಿಗಳು ಇರುವುದರಿಂದ ಇವು ಅಂದು ಶರಣರು ವಾಸ ಮಾಡಿದ ಗವಿಗಳು ಯಾಕಾಗಿರಬಾರದು ? ಎಂಬ ಪ್ರಶ್ನೆ ನನ್ನಲ್ಲಿ ಮೂಡುತ್ತದೆ.
“ಕಲ್ಯಾಣದ ಶಿವ ಶರಣರು ನಡೆದಾಡಿ ವಾಸವಾಗಿದ ಗುಹೆಯಂತಹ ಕೆಲವು ಕುರುಹುಗಳು ಇಲ್ಲಿ ಕಂಡುಬರುತ್ತವೆ. ” ಎಂದು ಆ ಗ್ರಾಮದ ಗಣೇಶ ಪಾಟೀಲ್ ಮತ್ತು ರಾಮಲಿಂಗ ಭಂಡಾರಿಯವರು ಕೂಡ ಹೇಳುತ್ತಾರೆ. ಇವು ಕಲ್ಯಾಣದ ಬಿಜ್ಜಳನ ಕಾಲದಲ್ಲಿ ಸ್ಥಾಪಿತವಾಗಿರಬೇಕೆಂದು ಅವರು ಹೇಳುತ್ತಾರೆ.
ಅದೇನೆ ಇರಲಿ ಇಲ್ಲಿಯ ಗವಿ, ಗದ್ದುಗೆ, ಶಿಲ್ಪ ಕಲೆಗಳು ಹಾಳಾಗುವ ಹಂತದಲ್ಲಿವೆ. ಅವುಗಳು ರಕ್ಷಿಸುವ ಕಾರ್ಯ ಕರ್ನಾಟಕ ಸರ್ಕಾರ ಮಾಡಬೇಕಾಗಿದೆ. ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಅನುಭವ ಮಂಟಪ ನಿರ್ಮಿಸುತ್ತಿರುವುದರೊಂದಿಗೆ ಸರ್ಕಾರ ಇತ್ತಕಡೆಯು ಗಮನ ಹರಿಸಬೇಕಾಗಿದೆ. ಇಲ್ಲಿಯ ಬಸವಕಲ್ಯಾಣ ಅಭೀವೃದ್ಧ ಪ್ರಾಧಿಕಾರವು ಇದನ್ನು ಶರಣರ ಕುರುಹುವೆಂದು ತನ್ನ ವ್ಯಾಪ್ತಿಗೆ ತೆಗೆದುಕೊಂಡು ಅಭಿವೃದ್ಧಿ ಮಾಡುವಂತಾಗಲಿ . ಎನ್ನುವುದು ಗ್ರಾಮಸ್ಥರು ಹಾಗೂ ಈ ಪುಣ್ಯ ಕ್ಷೇತ್ರದ ದರ್ಶನ ಪಡೆಯಲು ಬರುವ ಭಕ್ತರ ಆಶಯವಾಗಿದೆ. ಬೀದರ ಜಿಲ್ಲೆಯ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸುವರೇ ?
ಚಿತ್ರ ಲೇಖನ- ಮಚ್ಚೇಂದ್ರ ಪಿ.ಅಣಕಲ್.
ಪುರಾತನ ಹಿಂದು ಸ್ಮಾರಕಗಳನ್ನ ರಕ್ಷಣೆ ಮಾಡುವುದು
ಮುಂದಿನ ತಲೆಮಾರಿಗೆ ಉಳಿಸಿಕೊಂಡು ಹೋಗುವುದು
ಸರ್ಕಾರ ಹಾಗೂ ನಮ್ಮೆಲ್ಲರ ಜವಬ್ದಾರಿ.
ಲೇಖನ ತುಂಬ ಅದ್ಭುತವಾಗಿದೆ ತಾವುಗಳು ಇದೇ
ತರದ ಕಾರ್ಯದಲ್ಲಿ ಪ್ರವೃತ್ತರಾಗಿ ಬೆಳೆಯಲ್ಲಿ ಎಂದು ಆಶಿಸುವೆ