Oplus_131072

 

ರಂಗಣ್ಣನಿಗೆ ಕೆ.ಎಸ್.ಆರ್.ಟಿ.ಸಿ.ಬಸ್ ಡ್ರೈವರ್ ಹುದ್ದೆ ಸಿಕ್ಕಿದ ಕೂಡಲೆ ಆತನ ಹೆಂಡ್ತಿ ಪಾರುಗೆ ಎಲ್ಲಿಲ್ಲದ  ಖುಷಿ. ಅದು ಆಕೆಗೆ ತಡೆಯಲಿಕ್ಕೆ ಆಗಲಿಲ್ಲ.
” ದರಿದ್ರನಿಗೆ ಐಶ್ವರ್ಯ ಬಂದ್ರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಕ್ಕೊಂಡನಂತೆ ” ಅಂತಾರಲ್ಲ ? ಹಾಗೆ ಆಕೆ ಒಳಗೊಳಗೆ ಒಂದ್ ನಮೂನಿ ಖುಷಿಯಾಗಿ ಹುಚ್ಚೆದ್ದು ಕುಣಿದಾಡಿದಳು.
ಕಂಡಕಂಡವರಿಗೆಲ್ಲ ” ನನ್ ಗಂಡ ಗೌರ್ಮೆಂಟ್ ಸರ್ವೆಂಟ ಆದ.
ನಾನು ಈಗ ” ಗೌರ್ಮೆಂಟ್ ಸರ್ವೆಂಟನ ಹೆಂಡ್ತಿ ” ಅಂತ ಏನೆಲ್ಲ ಕನಸ ಕಾಣ್ತಾ ಊರಲೆಲ್ಲ ಮನೆಮನೆಗೂ ತಿರುಗಿ
ಪೇಡಾ ಹಂಚಿ  ಒಮ್ಮೆ ನಿರ್ಮೂಳಾಗಿ ನಿಟ್ಟುಸಿರು ಬಿಟ್ಟಳು.

ಈ ಮೊದಲು ರಂಗಣ್ಣ ಲಾರಿ ಡ್ರೈವರ್ ಆಗಿ ಭಾರಿ ವಾಹನ ಚಾಲನ ಪರವಾನಿಗಿ ಪಡೆದು ಮುಂಬೈ -ಹೈದರಾಬಾದ್, ಚೆನೈಯಂತ ನಗರಗಳಿಗೆ ಸರಕು ಸಾಗಾಣೆ ಮಾಡುತ್ತಾ ತಿರುಗಾಡುತ್ತಿದ್ದ. ಅಂತದ್ರಲ್ಲಿ ಕೆ.ಎಸ್.ಆರ್.ಟಿ.ಸಿ.ಯವರು ಡ್ರೈವರ್ ಕಂ.ಕಂಡಕ್ಟರ್ ಮತ್ತು ಬರಿ ಡ್ರೈವರ್ ಹುದ್ದೆಗೆ ಅರ್ಜಿ ಆಹ್ವಾನಿಸಿದರಿಂದ SSLC ಪಾಸ್ ಇದ್ದ ಕಾರಣ ಅವ ಅರ್ಜಿ ಹಾಕಿದ.
ಆ ವರ್ಷ ನೇಮಕಾತಿ ನಿಯಮದಲ್ಲಿ  ಕಡಿಮೆ ಅಂಕ ಪಡೆದು ತೇರ್ಗಡೆಯಾದವರಿಗೆ ಮೊದಲ ಆದ್ಯತೆ ಮೇರೆಗೆ ಆಯ್ಕೆಗೆ ಪರಿಗಣಿಸುತ್ತಿದ್ದರಿಂದ ರಂಗನ ಹೆಸರು ಆಯ್ಕೆ ಪಟ್ಟಿಯಲ್ಲಿ ಮೊದಲನೆಯದಾಗಿ ಸೇರ್ಪಡೆಯಾಗಿತ್ತು.ಇದನು ತಿಳಿದ ಪಾರುಗೆ ಖುಷಿಯೋ !  ಖುಷಿ .
ಆಕೆಯ ಸಂತಸಕ್ಕ ಪಾರವೆ ಇರಲಿಲ್ಲ.

” ಐ ! ವಿಶಾಲಾಕ್ಷಮ್ಮನವರೆ ! ಖರೇನು ನನ್ ಗಂಡ ಅದೇಟ್ಟು ಶಾಣ್ಯ ಅದಾನು ಗೊತ್ತೇನ್ರೀ ?
ಎಟ್ ಸಾಲಿ ಕಲ್ತುರು ನೌಕರಿ ಸಿಗದೆ ಇರೋ ಈ ಕಾಲದಾಗ ನನ್ ಗಂಡ ಒಂದೇ ಏಟಿಗಿ ‘ಮಾವಿನ ಕಾಯಿ’ ಉದುರಿಸಿದಾಂಗ ‘ಒಂದೇ ಸಲ’ ಪರೀಕ್ಷೆ ಬರದು ನೌಕರಿ ತಗೊಂಡಾನ ಅಂದ್ರಾ ಇದೇನು ಸುಮ್ಮನೇನಾ ?
ಇಕಾ ! ಇಲ್ನೋಡ್ರಿ ! ನನ್ ಗಂಡ ಡ್ರೈವರ್ ಡ್ರೆಸಲ್ಲಿ ಎಟ್ ಚಂದ‌ ಮುದ್ದ ಮುದ್ದಾಗಿ ಕಾಣ್ತಾನ ? ” ಅಂತ ಪಕ್ಕದ ಮನೆಯವಳಿಗೆ
ತನ್ ಗಂಡ ಡ್ಯೂಟಿ ಮೇಲಿದ್ದಾಗ ತೆಗೆದ ಸೇಲ್ಪಿ‌  ಪೋಟೊ ತೋರಿಸಿ ಖುಷಿ ಪಟ್ಟಳು.
ಒಂದಿನ ಪಾರು ಊರ ಕೆರೆಗೆ ಬಟ್ಟೆ ಒಗೆಯಲು ಹೋಗಿದಳು.
ಅಲ್ಲಿ ಆಕೆಯ ಮನೆ ನೆರೆಹೊರೆಯ ಹೆಂಗೆಳೆಯರಾದ ಲಕ್ಷ್ಮಿ ಮತ್ತು ಪ್ರಭಾ ಇದ್ದದ್ದು ನೋಡಿ ಮತ್ತೆ ತನ್ನ ಗಂಡಗ ನೌಕರಿಯಾದ ಖುಷಿಯಲ್ಲಿ ಮಾತಿಗಿಳಿದು
” ಏ , ಲಕ್ಷ್ಮಿ ! ನಿನ್ ಗಂಡ ಏನ್ ಮಾಡ್ತಿದ್ದಾನೆ ?  ಹಿನ್ನಾ ಲಾರಿ ಡ್ರೈವರೆ ಆಗೆ  ಹನಾ ಏನ್ ಮತ್ತ ? ನನ್ ಗಂಡ ನೋಡು, ಅದೇನೋ ಸಿ.ಟಿ.ಎಕ್ಸಾಮ್ ಬರ್ದು ಸರ್ಕಾರಿ  ನೌಕರಿ ತಗೊಂಡಾನ. ನೀನು ನಿನ್ ಗಂಡಗ ಬಸ್ಸಿನ ಡ್ರೈವರ್  ‘ಟ್ರಾಯ್ ‘ ಮಾಡ್ಲಿಕ್ ಹೇಳು ” ಅಂತ ಆಕೆ ತನ್ ಗಂಡ ರಂಗಣ್ಣನ ಬಗ್ಗೆ ಬಿಲ್ಡಾಪ ಕೊಟ್ಟು ಮಾತಾಡಿ ಕೆರಯ ಕಟ್ಟೆಯ ಕಲ್ಲಿನ ಮೇಲೆ ಬಟ್ಟೆಗೆ ಸಾಬೂನು ಹಚ್ಚಿ  ‘ಪರ್ ಪರ್ ‘ ಅಂತ ಬಗ್ಗಿ ತಿಕ್ಕತೊಡಗಿದಳು.
ಆಗ ಲಕ್ಷ್ಮಿ ” ನನ್ ಗಂಡ SSLC ಪಾಸಿಲ್ಲೆ ಯಕ್ಕಾ ! ಅದ್ಕೆ ಅವರು ಸುಮ್ಮಕ್ಕಾಗಿರೊದು.” ಅಂತ ಅವಳು ಕೆರೆಯಲ್ಲಿ ನಿಂತು ಬಟ್ಟೆ ಬಡೆಯತೊಡಗಿದಳು.
ಆಗ ಅವಳ ಮಾತಿಗೆ ಮರು ಮಾತಾಡದೆ ಅಲ್ಲಿ ಬಟ್ಟೆಗೆ ನಿರ್ಮಾ ಹಾಕಿ ಬಕೆಟ್ ನಲ್ಲಿ ಕಲಸುತ್ತಾ ‘ಬುರುಗ್ ‘ ಎಬ್ಬಿಸುತ್ತಿದ್ದ ಪ್ರಭಾಳ ಕಡೆಗೆ ನೋಡಿ
” ಏನ್ ಪ್ರಭಾ ! ನಿನ್ ಗಂಡ ಎಟ್ ಸಾಲಿ ಕಲ್ತಾನ , ಆದ್ರೂ ನೌಕರಿ ಸಿಗಲಿಲ್ಲ ? ಎಮ್ಮೇ. ಹೆಮ್ಮೆ.ಪುಲ್. ಪಿಚ್ಡಿ .ಸಾಲಿ ಕಲ್ತರನು ನೀ ಹಿನ್ನಾ ಕಷ್ಟ ಪಡ್ತಿರೊದು ನೋಡದ್ರೆ
ನಂಗೆ ಕರಳು ‘ಚುರ್’ ಅಂತಾದ ನೋಡು ಪಾಪ ! ” ಅಂತ ಆಕೆ ಪ್ರಭಾಳ ಕುರಿತು ಮರುಕ ವ್ಯಕ್ಯಪಡಿಸಿದಳು.
” ಏನ್ ಮಾಡ್ಲಾಕ್ ಆಗ್ತದ  ಯವ್ವಾ ! ನಮ್ ಹಣೆಬರಹನೆ ಇಷ್ಟು.
ಆ ಬೊಮ್ಮ , ಯಾರ್ಯಾರ್ ಹಣೆಬರಹ ಹ್ಯಾಂಗೆಂಗ್ ಬರದಿದ್ದಾನೋ ! ಯಾನೋ !
ಆ ಶಿವ್ನೆ ಬಲ್ಲ ” ಅಂತ ಆಕಿ ತನ್ ಕೆಲಸದಲ್ಲಿ ತಲ್ಲಿನಳಾದಳು.
ಆದ್ರೂ ಮಾತಿನ ಹುಚ್ಚು ಮಾತುಗಾರನಿಗೆ ಗೊತ್ತು .
ಹಾಂಗೆ ಆಕಿ ಮತ್ತೆ ಲಕ್ಷ್ಮಿ ಕಡೆಗೆ ತಿರುಗಿ.
” ಲಕ್ಷ್ಮಿ, ನಿನ್ ಗಂಡ ಏನಾರ್ ಬಂಗಾರ -ಗಿಂಗಾರ್ ಮಾಡಿಸಿದ್ನಾ ಹೆಂಗೆ ? ನನ್ ಗಂಡ ನೋಡು ನೌಕರಿ ಸೇರಿದಾಗ ಬಂದ ಮೊದಲನೇ ಸಲದ ಐದಾರು ತಿಂಗಳ ಪಗಾರದಲ್ಲಿ ನಂಗೆ ಅಂತಾನೆ ಮೂರ್ ತೊಲಿ ಗಂಟನ್ ಮಾಡಿಸಿ ಕ್ವಾಟ್ಟಾನ.
ಮತ್ತೆ ಮುಂದಿನ ಸಲ ಬಂಗಾರ ಬಳೆ ಮಾಡಿಸ್ತಿನಿ ಅಂದಾರ ” ಅಂತ ಹಸನ್ಮುಖಳಾಗಿ ನುಡಿದಾಗ ಲಕ್ಷ್ಮಿ ‘ಹೌದಾ ‘ ಅಂತ ತಲೆ ಅಲ್ಲಾಡಿಸಿ ” ನನ್ ಗಂಡಾನು ಮಾಡಸ್ತಿನಿ ಅಂದಾರ ” ಅಂತ ಆಕೆ ಗಂಡನಿಗೆ ಬಿಟ್ಟು ಕೊಡದೆ ಹೇಳಿದಳು. ಆಗ ಮತ್ತೆ ಆಕೆ ಪ್ರಭಾಳ ಕಡೆಗೆ ನೋಡಿ
” ಪ್ರಭಾ ನಿನೇನು ಮಾಡಿಕೊಂಡೆ ? ಅಂತ ಅನ್ನುತ್ತಾ ಬಗ್ಗಿ ಒಗೆದ ಬಟ್ಟೆ ಎಡ್ಡು ಕೈಗಳಿಂದ ಒಡ್ಡಮುರ್ದು
ಬಟ್ಟೆ ಹಿಂಡುತ್ತಾ
” ನಿಂಗೇನ್ ಆಗ್ತದ ಬಿಡು.
ಪಾಪ ! ನಿನ್ ಗಂಡಂಗೆ ನೌಕರಿ ಇಲ್ಲ.  ಚಾಕರಿ ಇಲ್ಲ .ನಿನೊಬ್ಬಳು ಸಿಕ್ಕಿದಿ  ಚೊಕರಿ. ” ಅಂತ ಲೇವಡಿ ಮಾಡಿ ಒಂದ ನಮೂನಿ ನಕ್ಕು ಮತ್ತೆ ಮುಂದುವರೆದು
” ಏಟ್ ಓದಿದ್ರು ಅಟೇ  ಅದಾ .ಓದಿ ಓದಿ ಕೆಟ್ಟ ಖೂಚ್ ಭಟ್ ” ಅಂತ ಹೇಳ್ತಾರೆ . ಏಟ್ಟು ಓದ್ತಾರೆ ನಿನ್ ಗಂಡ ? ಜರಾ ಓದೊದು ಬಿಟ್ಟು ಯಾವುದಾದ್ರೂ ಲಾರಿನೋ ! ಬಸ್ಸೋ !  ಕಲ್ತು ಡ್ರೈವರ್ ಹುದ್ದೆಗೆ ಸೇರಕ್ಕೊ ! ಅಂತ ಹೇಳಬಾರದೆ ? ” ಅಂತ ಆಕೆ ಕೊಂಕು ನುಡಿದು ನನ್ನ ಗಂಡನೆ ಗವರ್ನಮೆಂಟ್ ಸರ್ವೆಂಟ ಹನಾ ಈ ಊರಲ್ಲಿ . ನಾನೇ ಅದೃಷ್ಟವಂತೆ ಇವರೆಲ್ಲ ನನಗಿಂದ ಕನಿಷ್ಠರು ಅನ್ನೋ ಮನೋಭಾವದಲ್ಲಿ‌ ತೆಲಾಡಿದಳು. ಇವಳ ಮಾತು ಪ್ರಭಾಳಿಗೆ ನೋವಾದರು  ತೋರ್ಪಡಿಸದೆ ಸುಮ್ಮನಾಗಿದಳು.

ಒಂದಿನ ರಂಗಣ್ಣನ ಹೆಂಡ್ತಿ  ಪಕ್ಕದೂರಿಗೆ   ಪ್ರಭಾ,ಲಕ್ಷ್ಮಿ ರಾಧಾ
ಕಾವೇರಿಯವರ ಜೋತೆಗೂಡಿ ಮದುವೆಗೆಂದು ಹೋಗಿದಳು.
ಅಲ್ಲಿ ಪ್ರಭಾಳ ಸಂಬಂಧಿ ತುಕ್ಕಮ್ಮಾ ಅನ್ನೋ ಮಹಿಳೆಯೊಬ್ಬಳು ಪರಿಚಯವಾಗಿದಳು .
ಅಲ್ಲಿ ಮದುವೆ ಮುಗಿಸಿಕೊಂಡು ಎಲ್ಲರೂ ಜೋತೆಗೂಡಿ ಬಸ್ ನಿಲ್ದಾಣದ ಕಡೆಗೆ ನಡೆದು ಬರುವಾಗ ಎದುರಿಗೆ ಒಂದು ಬಸ್ಸು ದೂರದಿಂದ ಬರತೊಡಗಿತು.
ಅದನ್ನು ನೋಡಿದ ಆಕೆಯ ಮಕ್ಕಳು ಆ ಬಸ್ಸನು ನೋಡಿ
” ಮಮ್ಮಿ ಬಸ್ ಬಂತ್ತು . ಬಸ್ಸು ..! ” ಅಂತ ಚೀರಿ ಹೇಳಿದ್ದೆ ತಡ
” ಹಾ ! ಬಂತ್ತು ಬಂತ್ತು ನಿಮ್ಮಪ್ಪಂದೆ ಬಸ್ ಬಂತ್ತು. ನೋಡು ನೋಡು ಅಲ್ನೋಡು .
ನಿಮ್ಮಪ್ಪನೆ ಬಸ್ ನಡಸ್ತಾ ಇದ್ದಾನೆ ” ಅಂತ ಅಲ್ಲಿದ್ದ ಎಲ್ಲರಿಗೂ ಕೇಳಿಸುವಂತೆ ಏರು ಧ್ವನಿಯಲ್ಲಿ ಹೇಳಿದ್ದೆ ತಡ

” ಅವ್ವಾ ! ಇವ್ಳ ಗಂಡ ಬಸ್ಸಿನ ಡ್ರೈವರ್ ಹನಾ ಏನೆ ತಂಗಿ ” ವಯಸ್ಸಾದ ತುಕ್ಕಮಾಜ್ಜಿ ಆಚರ್ಯ ಚಕಿತಳಾಗಿ ಕೇಳಿದಳು.
ಆಗ ಆಕೆ ” ಹೂಂ ರ್ರೀ ! ನನ್ ಗಂಡ ಬಸ್ಸಿನ ಡ್ರೈವರ್ ಹನಾ ” ಅಂತ ಹಮ್ಮಿನಿಂದ ಹೇಳಿದಳು.
ಆಗ ಆಕೆ
” ಐ ! ಬಿಡೇ ತಂಗಿ. ನಿನ್ಗೇನ್ ಕಮ್ಮಿ ಅದಾ . ನೀ ಗವರ್ನಮೆಂಟ್ ಸರ್ವೆಂಟನ ಹೆಂಡ್ತಿ ಆದಿ.
ನಿಂಗೇನ್ ಕುದಿ ಅದಾ ಈಗ ? ನಮ್ದು  ಈ ಪ್ರಭಾಳದು ದುಡಿದು ತಿನ್ನೋ ಕಷ್ಟದ ಜೀವನ ಅದಾ ನೋಡು ” ಅಂತ ಅನ್ನುತ್ತಿದಂತೆ ಪಾರುವಿನ ಮುಖದಲ್ಲಿ ಒಂದು ನಮೂನೆಯ ನಗೆಯ ಬೇಳಕು ಚೆಲ್ಲಿತ್ತು.
ಆಗ ಅಲ್ಲಿ ಹೋಗೊರೆಲ್ಲ ಇವಳ ಕುರಿತು ಮಾತಾಡುವುದನ್ನು ಕೇಳಿ
ಒಮ್ಮೆ ಪಾರುವಿನ ಕಡೆಗೆ ತಿರುಗಿ ವಾರೆಗಣ್ಣಿನಿಂದ ನೋಡಿ
ಹೆಜ್ಜೆ ಹಾಕತೊಡಗಿದರು.
ಆದ್ರೆ ಆ ಬಸ್ಸು ಹತ್ತಿರ ಹತ್ತಿರ ಬರುತ್ತಿದಂತೆ ಅದರ ಡ್ರೈವರ್   ಅವಳ ಗಂಡ ಅಲ್ಲ. ಬೇರೆ ಯಾರೋ ಅನ್ನೋದು ತಿಳಿದು ನೀರಾಸೆಯಾಗಿ ಆಕೆ ಮುಖ ಕೆಳಗೆ ಮಾಡಿದಳು. ಆಕೆಯ ಮಗಳು ಒಮ್ಮೆ ಅಮ್ಮನ ಮುಖ ನೋಡಿ
” ಮಮ್ಮಿ ಪಪ್ಪ ಅಲ್ಲ ” ಅಂದಿತ್ತು ಮೆಲ್ಲಗೆ
” ನಿಮ್ಮ ಪಪ್ಪಾಂದೆ ಬಸ್ ಅದಾ !  ಇವತ್ತು ಬೇರೆಯವರಿಗೆ ನಡಸಲಾಕ್ ಕ್ವಾಟ್ಟಾರಂತ ಕಾಣಿಸ್ತದ
ನಡಿ ಮುಂದೂಕ್ ನಡಿ ” ಅಂತ ಮಗಳ ಕೈ ಹಿಡಿದೆಳೆದು ರಸ್ತೆ ದಾಟಿ ಎಲ್ಲರೊಂದಿಗೆ ಆಚೆಗೆ  ಹೋಗಿ ಊರಿಗೆ ಹೋಗುವ ಬಸ್ಸಿಗಾಗಿ ಕಾಯುತ್ತಾ ನಿಂತಳು.

ಪಾರು ಮದುವೆಗೂ ಮುಂಚೆ ತನ್ನ ತವರು ಮನೆಯಲ್ಲಿ ಕೂಲಿ-ನಾಲಿ ಮಾಡಿಕೊಂಡು ಕಷ್ಟ ಪಡ್ತಿರುವಾಗ ಈ ರಂಗಣ್ಣನ ಜೋತೆಗೆ ಮದುವೆ ಮಾಡಿಕೊಟ್ಟಿದ್ರು  ಮದುವೆಗೂ ಮುಂಚೆ ರಂಗಣ್ಣ ಲಾರಿ ಡ್ರೈವರ್ ಆಗಿ ಕೆಲಸ ಮಾಡ್ತಿದ್ಷ . ಅವನ ಊರಲ್ಲಿ ಯಾರಿಗೂ ಸರ್ಕಾರಿ ನೌಕರಿ ಇಲ್ಲದ ಕಾಲದಲ್ಲಿ ಇದ್ದಕ್ಕಿದ್ದಂತೆ ಬಸ್ ಡ್ರೈವರ್ ಹುದ್ದೆಗೆ ಆಯ್ಕೆ ಆದಾಗಿನಿಂದ ರಂಗಣ್ಣನಕ್ಕಿಂತ ಅವನ ಹೆಂಡ್ತಿನೆ ತೊಲ್ ಜಂಭ ಕೊಚ್ಚಕೊಳ್ತಾ ಇದ್ದಳು.
” ಈ ಊರಲ್ಲಿ ನಾನೆ ಗವರ್ನಮೆಂಟ್ ಸರ್ವೆಂಟನ
ಹೆಂಡ್ತಿ ” ಅನ್ನೋ ಮನೋಭಾವದಲ್ಲಿ ವರ್ತಿಸುತ್ತಿದ್ದಳು.

ಒಂದು ದಿನ ಪಾರುವಿನ
ಎದಿರು ಮನೆಯ ಪ್ರಭಾಳ ಗಂಡನಿಗೆ ನೇರವಾಗಿ ಸರ್ಕಾರಿ ಕಾಲೇಜಿನ ಉಪನ್ಯಾಸಕ ಹುದ್ದೆಗೆ ಆಯ್ಕೆಯಾಗಿದ್ದರಿಂದ ಅವಳು ಕುಟುಂಬ ಸಮೇತ ಬೀದರದಲ್ಲಿ ಉಳಿದು ಜೀವನ ಮಾಡತೊಡಗಿದಳು.
ಬಹಳ ದಿನಗಳ ನಂತರ ಪಾರುವಿಗೆ ಗೊತ್ತಾಗಿತ್ತು.
ನಿಜವಾಗಿ “ಗವರ್ನಮೆಂಟ್ ಸರ್ವೆಂಟನ ಹೆಂಡ್ತಿ ” ಪ್ರಭಾ ಅನ್ನೋದು.
ತನ್ನ ಗಂಡ ಅರೆಸರ್ಕಾರಿ ದಿನಗೂಲಿ ನೌಕರಿಯಲ್ಲಿದ್ದಾನೆಂದು ಆಕೆಯ ಗಂಡ  ಒಂದು ದಿನ ಟಿ.ವಿ.ಯಲ್ಲಿ ಕೆ.ಎಸ್.ಆರ್.ಟಿ.ಸಿ.ನೌಕರರು ನಡೆಸಿದ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಆತನೆ ನೇರವಾಗಿ ಮಾತಾಡುತ್ತಿದ್ದ.
” ನಮಗೂ ಸರ್ಕಾರಿ ನೌಕರರೆಂದು ಪರಿಗಣಿಸಿ. ಸರ್ಕಾರಿ ನೌಕರರಿಗೆ ನೀಡುವ ಸವಲತ್ತುಗಳನ್ನು ನೀಡಿ  ಸಹಾಯ ಸಹಕಾರ ಮಾಡಿ.ನಮ್ಮ ಕೆ.ಎಸ.ಆರ್.ಟಿ.ಸಿ .ಸಿಬ್ಬಂದಿಯವರ ಕುಟುಂಬದವು ತುಂಬ ಅತಂತ್ರದಲ್ಲಿವೆ .ನಮಗೂ ಸೇವಾ ಭದ್ರತೆ ಒದಗಿಸಿ. ನಮ್ಮ ಡ್ರೈವರ್-ಕಂಡಕ್ಟರ ಕುಟುಂಬಗಳಿಗೆ ರಕ್ಷಣೆ ನೀಡಿ. ಮತ್ತೆ ನಮಗೆ
‘ಅರೆಸರ್ಕಾರಿ ನೌಕರರು’ ಅನ್ನೋ ಪದ ತೆಗೆದು ಪೂರ್ಣ ಪ್ರಮಾಣದ ಸರ್ಕಾರಿ ನೌಕರರೆಂದು ಘೋಷಣೆ ಮಾಡಿ.ಎಲ್ಲಿಯವರೆಗೆ ನೀವು ನಮಗೆ ‘ ಸರ್ಕಾರಿ ನೌಕರರು’ ಅಂತ ಘೋಷಣೆ ಮಾಡುವುದಿಲ್ಲವೋ !  ಅಲ್ಲಿಯವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ” ಅಂತ ಹೇಳಿ ರಂಗಣ್ಣ ತನ್ನ ಭಾಷಣ ಮುಗಿಸಿದ.
ಈ ಮಾತುಗಳನ್ನು ನೇರವಾಗಿ ಎಲ್ಲಾ ಟಿ.ವಿ ಚಾನಲ್ ಗಳಲ್ಲಿ ಬಿತ್ತರವಾಗತೊಡಗಿತ್ತು.
ಇದನ್ನು ಕೇಳಿದ ಪಾರುವಿಗೆ ಈಗ ನಿಜವಾಗಿಯೂ ಅರ್ಥವಾಗಿತ್ತು.
ಈಗ ನಮ್ಮೂರಲ್ಲಿ  “ಪ್ರಭಾ ಮಾತ್ರ ಗವರ್ನಮೆಂಟ್ ಸರ್ವೆಂಟನ
ಹೆಂಡ್ತಿ  ” ಅಂತ.

       –ಮಚ್ಚೇಂದ್ರ ಪಿ ಅಣಕಲ್

          –

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ