(ಇಂದು ಗುರು ದತ್ತಾತ್ರೇಯನ ಜಯಂತಿ ಪ್ರಯುಕ್ತ ಈ ಕವಿತೆ ಪ್ರಕಟಿಸಲಾಗಿದೆ- ಸಂ)
ಗುರುದೇವ ದತ್ತಾತ್ರೇಯ ಶರಣೆಂಬೆ
ಅತ್ರಿ ಮಹರ್ಷಿಅನುಸೂಯ ಪುತ್ರ
ದುಃಖ ನಿವಾರಕ ಭಕ್ತರ ಆಪ್ತಮಿತ್ರ
ಪೀಠಾಪುರ ಗಾಣಗಾಪುರ ಕ್ಷೇತ್ರ
ಶ್ರೀ ಗುರು ಪಾದಕೆ ಶರಣೆಂಬೆ //
ಪರಶುರಾಮನಿಗೆ ಶ್ರೀ ವಿದ್ಯಾ ಮಂತ್ರ
ಭಕ್ತ ಪ್ರಹ್ಲಾದನಿಗೆ ನಿಷ್ಕಾಮ ಯೋಗ
ಬೋಧಿಸಿ ಉದ್ಧರಿಸಿದ ಮಹಾಗುರು
ಗುರುದೇವನ ಚರಣಕೆ ಶರಣೆಂಬೆ//
ಭಾಗವತ ನಾಥ ಭಕ್ತಿಸಾರ ಗ್ರಂಥ
ಪುಣ್ಯ ಗ್ರಂಥಗಳಲಿ ನಿನ್ನ ವರ್ಣನೆ
ಕಾರಂಜಾದಿಂದ ಗಿರನಾರವರೆಗೆ
ನೀನೇ ನೀನು ಗುರು ಶರಣೆಂಬೆ //
ಮಧ್ಯಾಹ್ನದ ಭೋಜನಕೆ ಅತಿಥಿ
ಸ್ವಾಮಿ ಮಹಾರಾಜರ ಸಾರಥಿ
ಗುರುದೇವ ದತ್ತ ಮಂತ್ರದಿ ಮುಕ್ತಿ
ನೀಡುವ ಗುರು ಪಾದಕೆ ಶರಣೆಂಬೆ//
ತ್ರಿಮೂರ್ತಿ ರೂಪ ಗುರುನಾಥದತ್ತ
ತ್ರಿಲೋಕ ಸಂಚಾರಿ ದತ್ತಾವಧೂತ
ಅದ್ವೈತತತ್ವ ಪ್ರತಿಪಾದಕ ಆದಿನಾಥ
ಶ್ರೀ ಗುರುವೇ ನಿನಗೆ ಶರಣೆಂಬೆ//
ನಂಬಿದವರ ಕೈ ಬಿಡದೆ ಮುನ್ನಡೆಸು
ಹಂಬಲಿಸುತಿರುವೆ ದಾರಿ ತೋರಿಸು
ಬೆಂಬಿಡದೆ ಸಾಧನೆ ಮಾರ್ಗ ತಿಳಿಸು
ಅನುಗ್ರಹಿಸು ಗುರುವೆ ಶರಣೆಂಬೆ//
– ಅನ್ನಪೂರ್ಣ ಸುಭಾಶ್ಚಂದ್ರ ಸಕ್ರೋಜಿ ಪುಣೆ