ಹಗಲುಗಳ್ಳರು. (ಕತೆ)
ಮಚ್ಚೇಂದ್ರ ಪಿ ಅಣಕಲ್.
ಇನ್ನೇನು ಮದುವೆ ಮಂಟಪದಲ್ಲಿ ಅಕ್ಷತೆಯ ಸಮಯ ‘ಮಹಾಮುನಿ ಸ್ವಾಮಿಗಳು ಬರುತ್ತಾರೆ ‘ ಅಂತ ಜನ ಹಂದರದಲ್ಲಿ ಅಕ್ಷತೆ ಹಿಡಿದು ನಿಂತ್ತಿದ್ದರು.
ಪುರೋಹಿತರು ಎಲ್ಲ ತಯಾರಿ ಮಾಡಿಕೊಂಡು ಆ ಸ್ವಾಮಿಗಳಿಗಾಗಿ ಕಾಯುತ್ತಿದ್ದರು.
” ಅಕೋ ! ಬಂದ್ರು , ಸ್ವಾಮಿಗಳು ಬಂದ್ರು . ಏ ! ಬಾರಿಸ್ರೋ ! ” ಅಂತ ಬ್ಯಾಂಡಿನವರಿಗೆ ಕೂಗಿ ಹೇಳಿದ ಒಬ್ಬ. ಬ್ಯಾಂಡಿನವರು ಮಂಗಳವಾದ್ಯ ಸುರು ಮಾಡಿದರು.
ಆ ಮಹಾಮುನಿ ಸ್ವಾಮಿ ಐಷಾರಾಮಿ ಕಾರಿನಿಂದ ಇಳಿದು ಮದುವೆ ಮಂಟಪದೆಡೆಗೆ ಬರತೊಡಗಿದರು. ಅವರ ಹಿಂದೆ ನಾಕಾರು ಜನ. ಅದರಲೊಬ್ಬ ಅವರ ತಲೆಯ ಮೇಲೆ ಛತ್ರಿ ಹಿಡಿದುಕೊಂಡು ಬರತೊಡಗಿದ.
ಸ್ವಾಮಿಗಳು ಮದುವೆ ಮಂಟಪಕ್ಕೆ ಬಂದ್ರು. ಅಲ್ಲಿ ನೆರೆದ ಜನ ಎದ್ದು ನಿಂತು ಕೈ ಮುಗಿದು ಅವರ ಕಾಲಿಗೆ ಎರಗಿ ‘ಸೆಣ್ ‘ ಮಾಡತೊಡಗಿದರು. ಈ ಸ್ವಾಮಿಗಳೆಂದರೆ ಆ ಭಾಗಕ್ಕೆ ತುಂಬಾ ಪ್ರಭಾವಿ. ಆತನಿಗೆ ಜನ ನಡೆದಾಡುವ ದೇವರು ಕನ್ನಡದ ಕುವರ ಇನ್ನೂ ಏನೇನೊ ಕರೆಯುತ್ತಾರೆ. ಅಲ್ಲಿಯ ಜನ ತುಂಬ ಭಾವುಕರು .ಭಕ್ತಿ -ಭಾವದಿಂದ ಅವರನ್ನು ದೇವರೆಂದು ನಂಬಿದ್ದಾರೆ.
ಈ ರಾಜಮಂಡ್ರಿ ಗ್ರಾಮದಲ್ಲಿ ಅವರಿಲ್ಲದೆ ಯಾವುದೇ ಶುಭ ಕಾರ್ಯ ಮಾಡುವುದಿಲ್ಲ. ಮದುವೆ -ಮುಂಜಿ,ಗೃಹ -ಪ್ರವೇಶ, ವಾಸ್ತು -ದೋಷ ನಿವಾರಣೆ ಎಲ್ಲದಕ್ಕೂ ಅವರ ಪಾದದ ದೂಳು ತಾಗಬೇಕು ಅಂದಾಗ ಮಾತ್ರ ನಮ್ಮ ಮನೆ ಮನ ಪಾವನವಾಗುವುದು ಅನ್ನೋ ನಂಬಿಕೆ ಅವರದು. .
ಆ ಮದುವೆ ಕಾರ್ಯಕ್ರಮದ ವಿಡಿಯೋಗ್ರಾಫರ್ ಆಗಿ ಚಕ್ಕೂರಿನ ಮಾಂತ್ಯ ನಿಂತಿದ್ದ. ಸ್ವಾಮಿಗಳು ಹಂದರಕ್ಕೆ ಬಂದು ವಧು- ವರರಿಗೆ ಹರಸಿ ಅಕ್ಷತೆಯ ಕಾರ್ಯ ನೇರವೆರಿಸಿದರು. ಆಗ ಮದುಮಕ್ಕಳು ಒಬ್ಬರನೊಬ್ಬರು ಹಾರ ಬದಲಾಯಿಸಿಕೊಂಡರು. ಮತ್ತೆ ವರ,ವಧುವಿಗೆ ತಾಳಿ ಕಟ್ಟಿದ ತಕ್ಷಣ ಮಂಗಳವಾದ್ಯ ಮೋಳಗಿತ್ತು. ನೆರೆದ ಜನ ಅಕ್ಷತೆಯನ್ನು ಹಾಕಿ ಅಲ್ಲಿಂದ ಒಬ್ಬೊಬ್ಬರಾಗಿ ಊಟಕೊ! ಪೋಟೊ ತೆಗೆದುಕೊಳ್ಳುವುದಕ್ಕೊ ! ಚದುರಿ ಹೋದರು.
ಆಗ ವಧು -ವರರು ಸ್ವಾಮಿಯ ಕಾಲಿಗೆ ಎರಗಿ ನಮಸ್ಕರಿಸಿದರು.
” ದೇವರು ನಿಮಗೆ ಒಳ್ಳೆಯದು ಮಾಡಲಿ ” ಎಂದವರು ಹಾರೈಕೆಯ ಮಾತನಾಡಿ ವೇದಿಕೆಯಿಂದ ಕೆಳಗಿಳಿದು ಮದುವೆ ಮನೆಯ ಅಂಗಳದೆಡೆಗೆ ಬರುತ್ತಿದಂತೆ ಅಲ್ಲೆ ಇದ್ದ ಮನೆ ಯಜಮಾನ ರಾಮಪ್ಪ ” ಅಪ್ಪಾವ್ರೇ ! ಇಲ್ಲಿ ಬರ್ರೀ ! ” ಅಂತ ವರಾಂಡದೊಳಗೆ ಕರೆದು ಒಂದು ಉತ್ತಮ ಖುರ್ಚಿ ಹಾಕಿ ಕುಳ್ಳರಿಸಿದರು. ಮಾಂತ್ಯ ಪೋಟೊ ತೆಗೆಯಲು ಸ್ವಾಮಿಗಳ ಸುತ್ತಾಮುತ್ತ ಸುಳಿದಾಡುತ್ತಾ ಒಮ್ಮೆ ನಿಂತ್ತು ಬಿಟ್ಟ. ಗ್ರಾಮದ ಕೆಲವರಿಗೆ ಈ ಸ್ವಾಮಿಗಳು ಅಂದ್ರೆ ಎಲ್ಲಿಲ್ಲದ ಪ್ರೀತಿ . ಹಾಗಾಗಿ ಅವರಿಗೆ ತಿನ್ನಲು ಹಣ್ಣು- ಹಂಪಲುಗಳು ಕೊಡುವವರ ಸಂಖ್ಯೆ ತುಂಬ ದೊಡ್ಡದಿದೆ . ಇವರು ಎಲ್ಲೆ ಬರಲಿ ಇವರಿಗೆ ನೋಡಿದ ಕೂಡಲೇ ಜನ ಹಣ್ಣು ಖರಿದಿಸಿ ತಿನ್ನಲು ಕೊಡುವರು . ಅವರಿಗೆ ” ನಾನು ಕೊಟ್ಟ ಹಣ್ಣು ಅಪ್ಪಾವ್ರು ತಿನ್ನಲಿ ” ಅನ್ನೋ ಕಳಕಳಿ ತುಂಬ ಜಾಸ್ತಿನೆ ಇದೆ .
ಹಾಗಾಗಿ ಈ ಮದುವೆ ಮಂಟಪದಲ್ಲಿ ಕಂಡ ಸ್ವಾಮಿಜಿಗೆ ಸಾಲು ಸಾಲಾಗಿ ಬಂದ ಜನ ಕಾಣಿಕೆಯ ರೂಪದಲ್ಲಿ ಹಣ್ಣುಗಳನ್ನು ನೀಡಿ ತಲೆಬಾಗಿ ನಮಸ್ಕರಿಸಿದರು. ಅವರು ನೀಡಿದ ಬಾಳೆಹಣ್ಣು,ಕಿತ್ತಳೆ, ಸೇಬು ಸಾಕಷ್ಟು ಜಮಾ ಆಗಿದ್ದವು. ಆ ಮೂರು ಪ್ರಕಾರದ ಹಣ್ಣುಗಳು ಮೂರು ಬುಟ್ಟಿಯಲ್ಲಿ ಶೇಖರಿಸಿ ಇಡುವ ಕೆಲಸ ಅವರ ಶಿಷ್ಯ ಮಾಡತೊಡಗಿದ .
ಆ ಬುಟ್ಟೆಗಳು ಹಣ್ಣಿನಿಂದ ತುಂಬಿದರಿಂದ ಅವು ಎಲ್ಲರ ಕಣ್ಣಿಗೆ ಗೋಚರಿಸುತ್ತಿದ್ದವು. ಮಾಂತ್ಯಾ ಇದನ್ನೆಲ್ಲ ವಿಡಿಯೋ ಮಾಡತೊಡಗಿದ. ಮದುವೆ ಮನೆಯಲ್ಲಿ ವಿಡಿಯೋ ಮಾಡುವ ಕೆಲಸ ಗಿಟ್ಟಿಸಿದ ಮಾಂತ್ಯ ಅಲ್ಲಿಯ ಎಲ್ಲ ದೃಶ್ಯಗಳು ಚಿತ್ರಿಸುತ್ತಾ ನಿಂತ್ತಿದ್ದ. ಆಗ ಸ್ವಾಮಿಗಳು ಕುಳಿತ್ತಿರುವಲ್ಲಿಗೆ ಜನ ಸಾಲು ಸಾಲಾಗಿ ಬಂದು ದರ್ಶನ ಪಡೆಯತೊಡಗಿದರು. ಗ್ರಾಮದ ಬಹಳಷ್ಟು ಜನ ಬಡವರಾಗಿರುವುದರಿಂದ ಕೆಲವರು ಬರಿಗೈಲಿಂದ ಬಂದು
” ಅಪ್ಪಾವ್ರೇ !” ಅಂತ ಕಾಲಿಗೆ ಎರಗಿ ಭಕ್ತಿ -ಭಾವ ತೋರ್ಪಡಿಸುತ್ತಿದ್ದರು. ಅಲ್ಲಿ ನೆರೆದ ಭಕ್ತರಿಗೆ ಸ್ವಾಮಿಗಳು ಒಂದೊಂದು ಬಾಳೆ ಹಣ್ಣನ್ನು ಪ್ರಸಾದವೆಂದು ಕೊಡುತ್ತಾ ಹೊದ್ರು ಆಗ ಬಾಳೆಹಣ್ಣಿನ ಬುಟ್ಟೆ ಖಾಲಿಯಾದಾಗ ಕಿತ್ತಳೆ ತುಂಬಿದ ಬುಟ್ಟೆಯಲ್ಲಿನ ಹಣ್ಣುಗಳನ್ನು ಕೊಡುತ್ತಾ ಅವರೊಂದಿಗೆ ಹಸನ್ಮುಖರಾಗಿ ಮಾತನಾಡುತ್ತಾ ಭಕ್ತರಿಗೆ ಸ್ವಾಮಿಗಳು ಸಾಕ್ಷಾತ್ ದೇವ ಸ್ವರೂಪಿಯಾಗಿ ಕಂಗೊಳಿ ಸಿದರು. ಆಗ ಕೆಲವೆ ಕ್ಷಣಗಳಲ್ಲಿ ಕಿತ್ತಳೆಯ ಬುಟ್ಟೆಯು ಖಾಲಿಯಾಯಿತ್ತು.
ಮಾಂತ್ಯ ಈ ಕಾರ್ಯಕ್ರಮದ ವಿಡಿಯೋ ಚಿತ್ರಿಕರಿಸುತ್ತಲೆ ಇದ್ದ. ಈಗ ಸೇಬಿನ ಹಣ್ಣಿನ ಬುಟ್ಟೆ ಮಾತ್ರ ಜನವರಿಗೆ ಪ್ರಸಾದ ರೂಪದಲ್ಲಿ ಖಾಲಿಯಾಗಬೇಕಾಗಿತ್ತು. ಆದ್ರೆ ಆ ಬುಟ್ಟಿ ಸ್ವಾಮಿಗಳ ಎಡಗಡೆಯ ಬೆನ್ನ ಹಿಂದೆ ಇರುವುದರಿಂದ ಅದನ್ನು ಹಾಗೆ ಲಯವಾಗಿ ತಮ್ಮ ಎಡಗೈಯಿಂದ ಹಿಂದಕ್ಕೆ ನೂಕಿದರು. ಈ ನೂಕುವಿಕೆಯನ್ನು ಗಮನಿಸಿದ ಅವರ ಶಿಷ್ಯ ಸುಬ್ರಹ್ಮಣ್ಯ ಆ ಬುಟ್ಟೆಯ ಸೇಬುಗಳನ್ನು ತನ್ನ ಒಂದು ಜೋಳಿಗೆಯಲ್ಲಿ ಹಾಕಿಕೊಂಡು ಅಲ್ಲಿಂದ ದೂರ ಸರಿದು ಸ್ವಾಮಿಯ ಕಾರಿನೊಳಗೆ ಇಟ್ಟು ಬಂದ. ಇದನ್ನು ಮಾಂತ್ಯ ಸೂಕ್ಷ್ಮವಾಗಿ ಗಮನಿಸಿದ .ಮತ್ತು ಆ ಬುಟ್ಟಿ ಹಿಂದೆ ಸರಿಸುವ ಸ್ವಾಮಿಯ ಕೈಗಳ ಶೂಟಿಂಗ್ ಮಾಡತೊಡಗಿದ. ಆಗ ಅವರ ಶಿಷ್ಯ ಮಾಂತ್ಯನನ್ನೆ ದುರುಗುಟ್ಟಿ ನೋಡತೊಡಗಿದ.
ಜನ ಮತ್ತೆ ಮತ್ತೆ ಸಾಲು ಸಾಲಾಗಿ ದರುಶನಕ್ಕೆ ಬರುತ್ತಲೆ ಇದ್ದರು. ಆಗ ಅವರ ಶಿಷ್ಯ ಕಾರಿನೊಳಗಿನ ರುದ್ರಾಕ್ಷಿ ಮಣಿಗಳನ್ನು ತಂದು ಖಾಲಿಯಾದ ಆ ಒಂದು ಬುಟ್ಟಿಯಲ್ಲಿ ಹಾಕಿದ . ಸ್ವಾಮಿಯು ಈಗ ಭಕ್ತ ಜನರಿಗೆ ಹಣ್ಣುಗಳ ಬದಲಿಗೆ ರುದ್ರಾಕ್ಷಿ ಮಣಿಗಳನ್ನು ಕೊಡುತ್ತಾ
” ಇದನ್ನು ಜೋಪಾನವಾಗಿಟ್ಟುಕೊಂಡು ಕೊರಳಲ್ಲಿ ಹಾಕಿಕೊಳ್ಳಬೇಕು ” ಅಂತ ಹೇಳತೊಡಗಿದರು. ಆ ರುದ್ರಾಕ್ಷಿ ಮಣಿಗಳೂ ಖಾಲಿಯಾದಂತೆ ಅವರ ಶಿಷ್ಯ ಮತ್ತೆ ಕಾರಿನಲ್ಲಿನ ಕೆಲವು ವಿಭೂತಿ ಉಂಡೆಗಳನ್ನು ತಂದಿಟ್ಟ.
ಅವು ಕೆಲವು ಜನರಿಗೆ ಕೊಟ್ಟರು.ಆದ್ರೆ ಜನರ ಸರದಿ ಮುಗಿಯಲೆ ಇಲ್ಲ.ವಿಭೂತಿ ಉಂಡೆಗಳು ಮುಗಿದು ಹೋಗಿರುವಾಗ ಈಗ ಅವರಲ್ಲಿ ಕೊಡಲು ಏನೂ ಇಲ್ಲ !
ಅದಾದ ಮೇಲೆ ಸ್ವಾಮಿಗಳು ಎದ್ದು ನಿಂತ್ತು ” ನಾವಿನ್ನೂ ಬರುತ್ತೇವೆ ” ಎಂದು ಹೇಳುತ್ತಿದ್ದಾಗ ಅಲ್ಲಿ ನೆರೆದ ಜನ ಸ್ವಾಮಿಗಳ ಕಾಲಿಗೆ ಒಬ್ಬೊಬ್ಬರಾಗಿ ಬಿಳುತ್ತಲೆ ಇದ್ದರು.
ಸ್ವಾಮಿಗಳು ಸುಮ್ಮನೇ ಕೈಗಳಿಂದ ಪರಮಾತ್ಮನಂತೆ ಆರ್ಶಿವಾದದ ಹಸ್ತ ತೋರಿಸುತ್ತಿದ್ದರು. ಮನೆಯ ಮಾಲಿಕ ರಾಮಪ್ಪ ಮದುಮಕ್ಕಳ ಸಮೇತ ಮತ್ತೆ ಸ್ವಾಮಿಗಳಲ್ಲಿಗೆ ಬರುತ್ತಿದಂತೆ ಸ್ವಾಮಿಯ ಶಿಷ್ಯ ಸುಬ್ರಹ್ಮಣ್ಯನು ರಾಮಪ್ಪ ನವರ ಕಿವಿಯಲ್ಲಿ ಏನೋ ಉಸುರಿದ. ಆಗ ಅವರು ಆಯ್ತು ಅಂತ ತಲೆ ಅಲ್ಲಾಡಿಸುತ್ತಾ ಮದುಮಗನ ಕಡೆಗೆ ಸನ್ನೆ ಮಾಡಿದರು. ಆಗ ಮದುಮಗ ಶಾಂತಲಿಂಗ ತನ್ನ ಬೆರಳಿಗೆ ಮದುವೆಯಲ್ಲಿ ಮಾವ ಉಡುಗೊರೆಯಾಗಿ ತೊಡಿಸಿದ ಎರಡು ಉಂಗುರಗಳಲ್ಲಿಯ ಒಂದು ತೊಲೆಯ ಉಂಗುರು ತೆಗೆದು ಹೆಂಡ್ತಿಯೊಂದಿಗೆ ಆ ಸ್ವಾಮಿಯ ಕಾಲಿಗೆ ಮತ್ತೊಮ್ಮೆ ನಮಸ್ಕರಿಸಿ ದಕ್ಷಿಣೆಯಾಗಿ ಬಂಗಾರದ ಉಂಗುರ ಅವರ ಕಿರುಬೆರಳಿಗೆ ತೊಡಿಸುತ್ತಿದ್ದಾಗ ಮಾಂತ್ಯ ಪೋಟೋ ‘ಕ್ಲಿಕ್’ ಮಾಡಿದ ಆ ಸ್ವಾಮಿ ಪೋಜು ಕೊಡದೆ ಗಡಿಬಿಡಿಯಲ್ಲಿ ಪೋಟೊಗ್ರಾಫರ್ ಮಾಂತ್ಯನ ಕಡೆಗೆ ಬೆನ್ನು ಮಾಡಿದರು. ಆದ್ದರಿಂದ ಪೋಟೊ ಸರಿಯಾಗಿ ಬಿಳಲಿಲ್ಲ.
ಇನ್ನೊಮ್ಮೆ ನೋಡಿ ಅಂತ ಮಾಂತ್ಯ ಎತ್ತರದ ಧ್ವನಿಯಲ್ಲಿ ಹೇಳಿದರು ಆತನ ಮಾತಿಗೆ ಕವಡೆ ಕಿಮ್ಮತ್ತು ಕೊಡಲಿಲ್ಲ.
ಸ್ವಾಮಿ ಆ ಉಂಗುರ ಧರಿಸಿಕೊಂಡು ಹಸನ್ಮುಖರಾಗಿ ನಗುತಾ ಮುಂದೆ ಹೆಜ್ಜೆ ಹಾಕಿದರು. ಅವರ ಶಿಷ್ಯ ಛತ್ರಿ ಹಿಡಿದು ಕೈ ಬೆರಳು ಕ್ಯಾಮರಾದೊಳಗೆ ಬರದಂತೆ ನೋಡಿಕೊಳ್ಳುತ್ತಾ ಬೇಗ ಬೇಗನೇ ಅಲ್ಲಿಂದ ಕರೆದು ಕೊಂಡು ಹೋದ. ಅವರು ಹಗಲು ಕಳ್ಳರಂತೆ ಮಿಂಚಿ ಮರೆಯಾದರು.
– ಮಚ್ಚೇಂದ್ರ ಪಿ.ಅಣಕಲ್.