Oplus_131072

ಹನುಮಾನ್ ಚಾಲೀಸಾ… ಒಂದು ವೈಜ್ಞಾನಿಕ ವಿಶ್ಲೇಷಣೆ.

 

– ವೀಣಾ ಹೇಮಂತ್ ಗೌಡ ಪಾಟೀಲ್

 

ಕೆಲ ವರ್ಷಗಳ ಹಿಂದೆ ನೋಡಿದ *ಚಾಕ್ ಅಂಡ್ ಡಸ್ಟರ್* ಎಂಬ ಹಿಂದಿ ಚಲನಚಿತ್ರ ಶಿಕ್ಷಕರ ಮಹತ್ವವನ್ನು ತೋರುತ್ತದೆ. ಈ ಚಿತ್ರದಲ್ಲಿ ಶಿಕ್ಷಕರ ಜಾಣ್ಮೆಯನ್ನು ಪರೀಕ್ಷಿಸುವ ಒಂದು ಪ್ರಶ್ನೆ ಹನುಮಾನ್ ಚಾಲೀಸಾ ದಲ್ಲಿರುವ ಬ್ರಹ್ಮಾಂಡದ ಕುರಿತ ರಹಸ್ಯ ಯಾವುದು,…. ಉತ್ತರ ಸಿಗುವುದಿಲ್ಲ ಎಂದು ಎಲ್ಲರೂ ಗಾಬರಿಯಾದಾಗ ಶಿಕ್ಷಕಿ ಹನುಮಾನ್ ಚಾಲೀಸಾದ

ಯುಗ ಸಹಸ್ರಯೋಜನ ಪರ್ ಜಾನೂ
ಲೀಲ್ಯೋ ತೋ ಹೀ ಮಧುರ ಫಲ ಮಾನು’

ನುಡಿಯನ್ನು ಉಚ್ಚರಿಸುತ್ತಾ ಸೂರ್ಯ ಮತ್ತು ಭೂಮಿಯ ನಡುವಿನ ದೂರವನ್ನು ಲೆಕ್ಕ ಹಾಕಿ ಹೇಳಿ ಜಯಭೇರಿ ಗಳಿಸಿದರು. ಸುಮಾರು ಆರು ಶತಮಾನಗಳ ಹಿಂದೆಯೇ ತುಳಸಿದಾಸರು ರಚಿಸಿದ ಹನುಮಾನ್ ಚಾಲೀಸಾದಲ್ಲಿ ಇರುವ ಉಲ್ಲೇಖವು ಖಗೋಳ ವಿಜ್ಞಾನಿ ಗೆಲಿಲಿಯೋ ಹೇಳುವುದಕ್ಕೂ ಸರಿಸುಮಾರು ಐವತ್ತು ವರ್ಷಗಳ ಮುಂಚೆಯೇ ಹೇಳಿದ್ದು ನಮ್ಮ ಭಾರತೀಯ ವಿಜ್ಞಾನಿಗಳ ತಾಕತ್ತು.

ಕ್ರಿಸ್ತಶಕ 1511 ರಲ್ಲಿ ರಾಮಬೋಲಾ ದುಬೆ ಅಯೋಧ್ಯೆಯ ರಾಜಾಪುರದಲ್ಲಿ ಜನಿಸಿದರು.
ಇವರ ಪೂರ್ವ ನಾಮ ಗೋಸ್ವಾಮಿ ತುಳಸಿದಾಸ ಎಂದು. ತಂದೆ ಆತ್ಮರಾಮ ದುಬೆ ತಾಯಿ ಹುಲಸಿ ದುಬೆ. ಇವರು ಶ್ರೀ ವೈಷ್ಣವ ಪಂಥದ ಬ್ರಾಹ್ಮಣರಾಗಿದ್ದರು. ತಮ್ಮ ಶಿಕ್ಷಣವನ್ನು ಅಯೋಧ್ಯೆಯಲ್ಲಿಯೇ ಪೂರೈಸಿದ ತುಳಸಿದಾಸರು ಪ್ರಾಪ್ತವಯಸ್ಕರಾದಾಗ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಪತ್ನಿ ರತ್ನಾವಳಿಯ ಮೇಲಿನ ಅಗಾಧ ಮೋಹದಲ್ಲಿ ಮತ್ತರಾದ ತುಳಸಿದಾಸರ ಜ್ಞಾನದ ಕಣ್ಣು ತೆರೆಸಿದ್ದು ಅವರ ಪತ್ನಿಯೇ. ನನ್ನ ಮೇಲಿರುವ ಪ್ರೀತಿಯನ್ನು ಪ್ರಭು ಶ್ರೀ ರಾಮನೆಡೆ ತಿರುಗಿಸು ನಿನಗೆ ದೈವ ದರ್ಶನವಾಗುತ್ತದೆ ಎಂದು ಪತಿಗೆ ಹೇಳಿದ ಮಹಾನ್ ಸಂತಳು ಆಕೆ. ಮುಂದೆ ತುಳಸಿದಾಸರು ಮಹಾನ್ ರಾಮಭಕ್ತರಾಗಿ ಪರಿವರ್ತಿತರಾದರು. ರಾಮಚರಿತ ಮಾನಸ, ಹನುಮಾನ್ ಚಾಲೀಸಾ, ವಿನಯ ಪತ್ರಿಕ, ಗೀತಾವಳಿ, ದೋಹಾವಳಿ, ವೈರಾಗ್ಯ ಸಂದೀಪನಿ,ಜಾನಕಿ ಮಂಗಲ, ಪಾರ್ವತಿ ಮಂಗಲ ಮುಂತಾದ ಕೃತಿಗಳನ್ನು ರಚಿಸಿದರು.
ಅವರು ಹನುಮಾನ್ ಚಾಲೀಸಾ ಬರೆದದ್ದು ಕೂಡ ಒಂದು ಮಹಾನ್ ಸಾಹಸವೇ ಸರಿ.

ಮಹಾನ್ ಸಂತರಾದ ತುಳಸಿ ದಾಸರ ನಡೆಯನ್ನು ಒಪ್ಪದ ಮೊಘಲ್ ದೊರೆ ಅಕ್ಬರನು ತನ್ನ ಮತ್ತು ತುಳಸಿದಾಸರ ನಡುವೆ ನಡೆದ ವಾಗ್ವಾದದ ನಂತರ ತುಳಸಿದಾಸರನ್ನು ಸೆರೆಯಲ್ಲಿಟ್ಟು ನಿನ್ನ ಹನುಮನೇ ಬಂದು ನಿನ್ನನ್ನು ಬಿಡಿಸಿಕೊಂಡು ಹೋಗಲಿ ಎಂದು ಹೇಳಿದನು. ಅಂದಿನಿಂದ ಸುಮಾರು 40 ದಿನಗಳ ಕಾಲ ತುಳಸಿದಾಸರು ಸೆರೆಮನೆಯ ಗೋಡೆಗಳ ಮೇಲೆ ಪ್ರತಿ ದಿನ ಒಂದೊಂದರಂತೆ ಹನುಮಾನ್ ಚಾಲೀಸಾದ 40 ನುಡಿಗಳನ್ನು ಬರೆಯುತ್ತಾ ಹೋದರು. 40ನೇ ದಿನ ಸಾವಿರಾರು, ಲಕ್ಷಾಂತರ ಮಂಗಗಳು ರಾಜಧಾನಿ ದೆಹಲಿ ನಗರವನ್ನು ಆವರಿಸಿಕೊಂಡು ಮನೆ ಮನೆಗಳಲ್ಲಿ ಉಪಟಳವನ್ನು ನೀಡಲಾರಂಭಿಸಿದವು. ಖುದ್ದು ಬಾದಶಹನಾದ ಅಕ್ಬರನಿಗೂ ಕೂಡ ಕಪಿಗಳ ಕೋಟಲೆಯ ಬಿಸಿಯು ತಟ್ಟಿತು. ಆಗ ಸಂತ ತುಳಸಿದಾಸರನ್ನ ಸೆರೆಮನೆಯಿಂದ ಬಿಡಿಸಿ ಗೌರವ ಪೂರ್ವಕವಾಗಿ ಅರಮನೆಗೆ ಕರೆಸಿ ಅವರಿಗೆ ರಾಜಾತಿಥ್ಯವನ್ನು ನೀಡಿ ಸನ್ಮಾನಿಸಿ ಅಕ್ಬರನೆ ಕಳುಹಿಸಿಕೊಟ್ಟನು. ಇದು ಹನುಮಾನ್ ಚಾಲೀಸಾ ಬರೆದ ಸಂತ ತುಳಸಿದಾಸರ ಶಕ್ತಿಯಾದರೆ, ಹನುಮಾನ್ ಚಾಲೀಸಾದ ಒಂದೊಂದು ನುಡಿಯು ಅತ್ಯಂತ ಸಶಕ್ತವಾದುದು.

ಇವು ಕೇವಲ ಎರಡು ಸಾಲಿನ 40 ನುಡಿಗಳಲ್ಲ. ಪ್ರತಿಯೊಂದು ನುಡಿಯಲ್ಲು ಪ್ರಭು ಶ್ರೀ ರಾಮನ ದೂತನಾದ ಹನುಮನ ವರ್ಣನೆ ಇದೆ, ಆತ ನಡೆದು ಬಂದ ಹಾದಿಯಿದೆ, ಆತನ ಜೀವಿತದ ಅಗಾಧತೆಯ ಅರಿವಿದೆ.
ಈಗ ನಾವು ಹೇಳುವ ನ್ಯಾನೋ ಟೆಕ್ನಾಲಜಿಗೆ ಬಂದರೆ…. ನಮ್ಮ ರಾಮದೂತ ಹನುಮನು ಅಗಾಧ ಶಕ್ತಿವಂತ ಈತ ಅಷ್ಟ ಸಿದ್ದಿಗಳನ್ನು ಹೊಂದಿದ್ದ. ಆ ಅಷ್ಟಸಿದ್ದಿಗಳು ಯಾವುವೆಂದರೆ

ಅಣಿಮಾ … ಅಣುವಿಗಿಂತ ಚಿಕ್ಕದಾದ ಶರೀರವನ್ನು ಹೊಂದುವುದು
ಲಘಿಮಾ… ಅತ್ಯಂತ ಹಗುರವಾಗಿ ಗಾಳಿಯಲ್ಲಿ ತೇಲುವ ಶಕ್ತಿಯನ್ನು ಹೊಂದುವುದು
ಗರಿಮಾ…. ಬೃಹತ್ ಶರೀರವನ್ನು ಹೊಂದುವುದು
ಮಹಿಮಾ…. ಮಹತ್ತರವಾದ ಶಕ್ತಿಯನ್ನು ಹೊಂದಿರುವುದು
ಲಘಿಮಾ… ಅತ್ಯಂತ ಹಗುರವಾಗಿ ಗಾಳಿಯಲ್ಲಿ ತೇಲುವ ಶಕ್ತಿಯನ್ನು ಹೊಂದುವುದು
ಪ್ರಾಪ್ತಿ –

ಎಲ್ಲ ಸ್ಥಳಗಳಲ್ಲಿ ಅನಿರ್ಬಂಧಿತವಾದ ಪ್ರವೇಶ ದೊರಕಿಸಿಕೊಳ್ಳುವದು
ಪ್ರಾಕಾಮ್ಯ – ಇಷ್ಟಪಟ್ಟಿದ್ದನ್ನು/ಬಯಸಿದ್ದನ್ನು ದೊರಕಿಸಿಕೊಳ್ಳುವದು
ಈಶಿತ್ವ – ಎಲ್ಲದರ ಮೇಲೆ ಸಂಪೂರ್ಣವಾದ ಒಡೆತನ ಹೊಂದುವದು/ಅಧಿಕಾರ ಹೊಂದುವುದು
ವಶಿತ್ವ – ಎಲ್ಲವನ್ನು ಜಯಿಸುವ ಶಕ್ತಿ ಹೊಂದುವದು/ಮನಸ್ಸಿನ ಮೇಲೆ ಕೂಡ ಜಯಗಳಿಸುವುದು.

ಅಷ್ಟ ಸಿದ್ದಿಗಳನ್ನು ಪಡೆದ ಹನುಮನು ತನ್ನ ದೇಹವನ್ನು ಅಣುವಿನಷ್ಟೇ ಚಿಕ್ಕದಾಗಿಸಿಕೊಳ್ಳಬಲ್ಲವನಾಗಿ, ಅತ್ಯಂತ ದೊಡ್ಡ ಶರೀರವನ್ನು ಕೂಡ ಹೊಂದಬಲ್ಲವನಾಗಿದ್ದ.
ಲಂಕೆಗೆ ಸೀತಾನ್ವೇಷಣೆಗಾಗಿ ಹಾರಿ ಹೋಗುವಾಗ ಆಂಜನೇಯ ಈ ಅಷ್ಟ ಸಿದ್ದಿಗಳನ್ನು ಬಳಸಿದ. ಅತ್ಯಂತ ಹಿರಿದಾದ ದೇಹವನ್ನು ಹೊಂದಿದ್ದರೂ ಕೂಡ ಅತ್ಯಂತ ಹಗುರವಾದ ಶರೀರವನ್ನಾಗಿಸಿಕೊಂಡು ಸಮುದ್ರ ಲಂಘನ ಮಾಡಿದ.

ಶ್ರೀರಾಮಚಂದ್ರ ಸಹೋದರ ಲಕ್ಷ್ಮಣನು ಯುದ್ಧದಲ್ಲಿ ಇಂದ್ರಜಿತು ಹೊಡೆದ ಬಾಣಕ್ಕೆ ಮೂರ್ಛೆ ಹೋದಾಗ ಆತನನ್ನು ಬದುಕಿಸಲು ಅವಶ್ಯಕವಾದ ಸಂಜೀವಿನಿ ಸಸ್ಯವನ್ನು ತರಲು ಇಡೀ ಪರ್ವತವನ್ನೇ ಹೊತ್ತು ತಂದಾತ ಆಂಜನೇಯ.

ಇಂದಿಗೂ ಹನುಮನ ಪೂಜೆ ಹಳ್ಳಿಯಿಂದ ದಿಲ್ಲಿಯವರೆಗೆ ಎಲ್ಲಾ ಊರುಗಳಲ್ಲಿ ನಡೆಯುತ್ತದೆ. ಕಷ್ಟ, ಭಯ, ಭೂತ ಚೇಷ್ಟೆಗಳು, ರೋಗ ರುಜಿನಗಳು, ಗಾಳಿಯ ಸೋಂಕು ಏಕೆ ಎಲ್ಲಾ ತೊಂದರೆಗಳಿಗೂ ಹನುಮನೆ ಪರಿಹಾರ.
ನಾಲ್ಕು ಯುಗಗಳಲ್ಲಿಯೂ ಪೂಜಿಸಲ್ಪಡುತ್ತಿರುವ ಏಕೈಕ ದೇವರು… ಅದು ಹನುಮ. ಸಾಧು ಸಂತರನ್ನು ಕಾಯುವ ಮತ್ತು ರಕ್ಕಸರನ್ನು ಶಿಕ್ಷಿಸುವ ದೇವರು ಹನುಮ.ಸಂಕಟಹರ, ರಾಮಭಕ್ತ ,ಮೂರು ಲೋಕಗಳಲ್ಲಿ ಪೂಜಿಸಲ್ಪಡುವ ಹನುಮ ನಮ್ಮನ್ನು ರಕ್ಷಿಸಲಿ.

ಬುದ್ಧಿರ್ಬಲಂ ಯಶೋಧೈರ್ಯಂ
ನಿರ್ಭಯತ್ವಂ ಮರೋಗತಃ
ಅಜಾಡ್ಯಂ ವಾಕ್ಪಟುತ್ವಂ ಚ
ಹನುಮದ್ ಸ್ಮರಣಾದ್ಭವೇತ್

ಬುದ್ಧಿಯ ಬಲವನ್ನು ಹೆಚ್ಚಿಸುವ, ಯಶಸ್ಸನ್ನು ಧೈರ್ಯವನ್ನು ಕೊಡುವ ನಿರ್ಭಯನಾಗುವಂತ ಶಕ್ತಿಯನ್ನು ನೀಡುವ ರೋಗರಹಿತವಾದ, ಉತ್ತಮ ಸ್ಮರಣ ಶಕ್ತಿ, ಮಾತಿನ ಶಕ್ತಿಯನ್ನು ಕೊಡುವ ಹನುಮಂತನನ್ನು ಪ್ರತಿದಿನ ಭಜಿಸಿ ಪೂಜಿಸುವ, ನೆನೆಸುವ.

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ