ಹನುಮನ ಯಶೋಗಾಥೆ ಸಾರುವ ಸುಂದರಕಾಂಡದ ಪಕ್ಷಿ ನೋಟ.
ಹನುಮ ಜಯಂತಿಯ ಪ್ರಯುಕ್ತವಾಗಿ ಈ ಲೇಖನ ಪ್ರಕಟಿಸಲಾಗಿದೆ. – ಸಂ.
– ವೀಣಾ ಹೇಮಂತ್ ಗೌಡ ಪಾಟೀಲ್
ಅಂಜನಾ ನಂದನಂ ವೀರಂ
ಜಾನಕೀಶೋಕ ನಾಶನಂ
ಕಪೀಶ ಮಕ್ಷ ಹಂತಾರ
ವಂದೇ ಲಂಕಾ ಭಯಂಕರಮ್
ಅಂಜನಿ ದೇವಿ ಮತ್ತು ವಾಯು ದೇವರ ಪುತ್ರ ಆಂಜನೇಯನು ಚೈತ್ರ ಶುದ್ಧ ಪೂರ್ಣಿಮೆಯ ದಿನ ಜನಿಸಿದನು. ಆಂಜನೇಯನ ಜೀವನವೇ ಒಂದು ಯಶೋಗಾಥೆ. ಮಹಾವೀರನಾದರೂ ವಿನಯಶೀಲ, ಅಷ್ಟಸಿದ್ದಿಗಳನ್ನು ಗಳಿಸಿದಾತ, ಬಲವಾನ, ರಾಮ ದೇವರ ಭಕ್ತ ರಾಮಭಂಟ ಹನುಮ. ಎಲ್ಲಿ ರಾಮನಿರುವನೋ ಅಲ್ಲೇ ಹನುಮನು ಎಲ್ಲಿ ಹನುಮನಿರುವನೋ ಅಲ್ಲೇ ರಾಮನು. ರಾಮನೆಡೆಗಿನ ಆಂಜನೇಯನ ಭಕ್ತಿ, ಶ್ರದ್ಧೆ, ನಂಬಿಕೆ ಅನನ್ಯ ಮತ್ತು ಅದ್ವಿತೀಯ.
ಶನಿವಾರದ ದಿನ ಪ್ರತಿ ಸಣ್ಣ ಹಳ್ಳಿಯಿಂದ ಹಿಡಿದು ಪಟ್ಟಣ, ನಗರ, ಮಹಾನಗರಗಳಲ್ಲಿ ಆಂಜನೇಯನನ್ನು ಪೂಜಿಸುತ್ತಾರೆ. ಹಳ್ಳಿಗಳಲ್ಲಂತೂ ಮುಂಜಾನೆ ಸ್ನಾನ ಮಾಡಿದ ಮಕ್ಕಳು, ಹಿರಿಯರು ಒಂದು ಪುಟ್ಟ ಲೋಟದಲ್ಲಿ ಕೊಂಚಎಣ್ಣೆಯನ್ನು, ಅದರಲ್ಲಿ ಬತ್ತಿಯನ್ನು ಹಾಕಿಕೊಂಡು ಎರಡು ಊದಿನ ಕಡ್ಡಿ ಕೈಯಲ್ಲಿ ಹಿಡಿದು ಹನುಮನ ಗುಡಿಗೆ ನಡೆಯುತ್ತಾರೆ. ಎಲ್ಲರಿಗೂ ಹನುಮನೆಂದರೆ ಅಷ್ಟು ಭಕ್ತಿ…. ತಮ್ಮನ್ನು ಕಾಡುವ ಎಲ್ಲಾ ರೀತಿಯ ದುಷ್ಟ ಗ್ರಹಗಳಿಂದ ವ್ಯಾಧಿಗಳಿಂದ ಹನುಮ ರಕ್ಷಿಸುತ್ತಾನೆ ಎಂಬ ಧೈರ್ಯ.
ದೇವರಾದ ಶ್ರೀರಾಮಚಂದ್ರನೇ ಹನುಮನನ್ನು ನಂಬುವನೆಂದರೆ ನಾವು ಸಾಮಾನ್ಯ ಜನರು ನಂಬದಿರುತ್ತೇವೆಯೇ!
ಆಂಜನೇಯನ ಯಶೋಗಾಥೆಯನ್ನು ಕುರಿತು ವಾಲ್ಮೀಕಿಯು ತನ್ನ ರಾಮಾಯಣ ಮಹಾಕಾವ್ಯದಲ್ಲಿ “ಸುಂದರಕಾಂಡ” ಎಂಬ ಒಂದು ವಿಶೇಷ ಅಧ್ಯಾಯವನ್ನೇ ಬರೆದಿದ್ದಾನೆ. ವಾನರಸೇನೆಯ ನಾಯಕನಾದ ಸುಗ್ರೀವನನ್ನು ಶ್ರೀರಾಮಚಂದ್ರನು ಭೇಟಿಯಾದ ನಂತರ ವಾಲಿಯನ್ನು ವಧಿಸಿ ಸುಗ್ರೀವನಿಗೆ ರಾಜನಾಗಿ ಪಟ್ಟ ಕಟ್ಟಿದನು. ತದ ನಂತರ ಸೀತೆಯನ್ನು ಹುಡುಕಲು ನಾಲ್ಕು ದಿಕ್ಕುಗಳಿಗೆ ದೂತರನ್ನು ಕಳುಹಿಸಿದರು. ಹೀಗೆ ಕಳುಹಿಸಲ್ಪಟ್ಟವರಲ್ಲಿ ಆಂಜನೇಯನು ಒಬ್ಬ…. ಸೀತೆಯನ್ನು ರಾವಣನು ಕೊಂಡೊಯ್ಯುವಾಗ ರಾವಣನೊಂದಿಗೆ ಹೋರಾಡಿ ಮೃತಪಟ್ಟ ಪಕ್ಷಿ ಜಟಾಯುವಿನ ಸೋದರ ಸಂಪಾತಿಯಿಂದ ಸೀತೆಯು ಅಪಹರಿಸಲ್ಪಟ್ಟು ಸ್ವರ್ಣ ಲಂಕೆಯಲ್ಲಿ ಬಂಧಿಯಾಗಿರಬಹುದು ಎಂಬ ಆಧಾರದ ಮೇಲೆ ರಾಮ ತನ್ನ ನಂಬುಗೆಯ ಭಂಟ ಹನುಮನ ಕೈಯಲ್ಲಿ ಮುದ್ರೆಯುಂಗುರವನ್ನು ಕೊಟ್ಟು ಕಳುಹಿಸಿದನು.
ಚಿಕ್ಕವನಿದ್ದಾಗ ತನ್ನ ಅಸಾಧ್ಯ ತುಂಟತನದಿಂದ ವಿಪರೀತ ಕೀಟಲೆಗಳನ್ನು ಮಾಡುತ್ತಿದ್ದ ಹನುಮನು ತನ್ನ ಶಕ್ತಿ ಸಾಮರ್ಥ್ಯಗಳನ್ನು ಮರೆಯುವಂತಹ ಶಾಪವನ್ನು ಪಡೆದಿದ್ದನು. ಇದೀಗ ಆತನ ಸ್ನೇಹಿತ ಜಾಂಬವಂತನು ನೂರು ಯೋಜನ ವಿಸ್ತಾರವಾದ ಸಮುದ್ರವನ್ನು ದಾಟಿ ಸ್ವರ್ಣ ಲಂಕೆಗೆ ಹೋಗಲು ಬೇಕಾಗುವ ಸಾಮರ್ಥ್ಯವನ್ನು ತಮ್ಮ ಗುಂಪಿನಲ್ಲಿ ಕೇವಲ ಹನುಮ ಪಡೆದಿದ್ದಾನೆ ಎಂದು ಹನುಮನಿಗೆ ನೆನಪಿಸಿದ. ತನ್ನೆಲ್ಲಾ ನೆನಪುಗಳನ್ನು, ಶಕ್ತಿಯನ್ನು ಮತ್ತೆ ಪಡೆದ ಹನುಮನು ನೂರು ಯೋಜನ ವಿಸ್ತಾರವಾದ ಸಮುದ್ರವನ್ನು ದಾಟಿ ಸ್ವರ್ಣ ಲಂಕೆಯಲ್ಲಿ ಕಾಲಿಟ್ಟನು. ಹನುಮನು ಶಕ್ತಿಶಾಲಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಹನುಮನು ನಿರ್ಭೀತನು ಹೌದು. ಸಮುದ್ರವನ್ನು ದಾಟುವಾಗ ಮಾರ್ಗ ಪದ್ಯದಲ್ಲಿ ಆತನಿಗೆ ಲಂಕಿಣಿ, ಸಿ0ಹಿಣಿ ಎಂಬ ರಾಕ್ಷಸರನ್ನು ಎದುರಿಸಿ ಹತಗೊಳಿಸಿದನು. ಆತ್ಮವಿಶ್ವಾಸಕ್ಕೆ ಇನ್ನೊಂದು ಹೆಸರು ಈ ಪವನಸುತ.
ಒಂದೇ ಒಂದು ಕ್ಷಣವು ಗಲಿಬಿಲಿಗೊಳ್ಳದೆ, ಹೆಸರು ಕೇಳಿದ ಇಂದ್ರಾದಿ ದೇವತೆಗಳೇ ಹೆದರಿ ನಡುಗುತ್ತಿದ್ದ ರಾಕ್ಷಸೇಂದ್ರ ರಾವಣನನ್ನು ತಾನು ಭೇಟಿಯಾಗಲು ಅಪಾರ ಆತ್ಮವಿಶ್ವಾಸವನ್ನು ಹೊಂದಿದ್ದ ಹನುಮಂತ ಸಮುದ್ರವನ್ನು ಹಾರಿ ಆಚೆಯ ದಡದಲ್ಲಿದ್ದ ಸ್ವರ್ಣ ಲಂಕೆಯ
ಅಶೋಕವನದಲ್ಲಿ ಹೆದರಿದ ಆದರೆ ನಿಶ್ಚಲವಾಗಿ ಕುಳಿತ ಸೀತೆಯೊಂದಿಗೆ ಆರ್ಭಟಿಸುತ್ತಾ ಮಾತನಾಡುತ್ತಿದ್ದ ರಾವಣನನ್ನು ಕಂಡನು. ರಾವಣನ ನಿರ್ಗಮನದ ನಂತರ ಸೀತಾಮಾತೆ ತನ್ನನ್ನು ರಾವಣನ ಮಾಯಾ ರೂಪ ಎಂದು ಅನುಮಾನಿಸಬಹುದು ಎಂಬ ಶಂಕೆಯಿಂದ ಆಕೆಗೆ ತುಸುದೂರದಲ್ಲಿ ಕುಳಿತು ಮೆಲುದನಿಯಲ್ಲಿ ರಾಮಕಥೆಯನ್ನು ಹೇಳಲಾರಂಭಿಸಿದ. ಎಲ್ಲ ಕಥೆಯನ್ನು ಹೇಳಿದ ನಂತರ ನಿಧಾನವಾಗಿ ವಿನೀತ ಭಾವದಿಂದ ಸೀತಾಮಾತೆಯ ಮುಂದೆ ಕೈಮುಗಿದು ನಿಂತನು. ರಾಮನು ತನ್ನ ದೂತನ ಮುಖಾಂತರ ಸೀತಾಮಾತೆಗೆ ಕೊಟ್ಟ ಮುದ್ರೆಯುಂಗುರವನ್ನು ಆಕೆಗೆ ನೀಡಿ ಆಕೆಯ ಯೋಗ ಕ್ಷೇಮವನ್ನು ವಿಚಾರಿಸಿದನು. ಆಕೆಯ ಕ್ಷೇಮದ ಕುರಿತು ಪ್ರಭು ಶ್ರೀ ರಾಮನ ಕಳವಳವನ್ನು ವಿವರವಾಗಿ ವಿಷದ ಪಡಿಸಿದನು. ಸೀತಾಮಾತೆಯು ಅಪ್ಪಣೆ ನೀಡಿದರೆ ತಾನು ಆಕೆಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡೊಯ್ಯಬಲ್ಲೆ ಎಂದು ಆಕೆಗೆ ಮನವರಿಕೆ ಮಾಡಿಕೊಟ್ಟನು. ಆದರೆ ಸೀತಾಮಾತೆಯ ಇಚ್ಛೆಯಂತೆ ಪ್ರಭು ಶ್ರೀ ರಾಮನೇ ಆಕೆಯನ್ನು ರಾವಣನ ಕೈಯಿಂದ ಬಿಡಿಸಿಕೊಂಡು ಹೋಗಲಿ ಎಂಬ ನಿಸ್ವಾರ್ಥ ಮನೋಭಾವ ಹನುಮನದು. ಆತ ತನ್ನನ್ನು ತಾನು ರಾಮದೂತ, ರಾಮ ಭಂಟ ಎಂದು ಹೇಳಿಕೊಂಡನಲ್ಲದೆ ತಾನೋರ್ವ ಶೂರ,ವೀರ ಕಲಿ ಎಂದು ಹೇಳಿಕೊಳ್ಳಲಿಲ್ಲ. ತುಂಬಾ ನಿಷ್ಠೆ, ಸ0ಯಮದಿಂದ ಆತ ನಡೆದುಕೊಂಡನು. ತಾಯಿಯ ಮುಂದೆ ಮಗ ಹೇಗೆ ಇರುತ್ತಾನೆಯೋ ಹಾಗೆಯೇ ವಿನಯ, ವಿಧೇಯತೆ ಮತ್ತು ಪ್ರಭು ಶ್ರೀ ರಾಮನೆಡಗಿನ ತನ್ನ ಭಕ್ತಿಯನ್ನು ಮಾತ್ರ ಹನುಮನು ವ್ಯಕ್ತಪಡಿಸಿದನು. ಮುಂದೆ ಸೀತಾಮಾತೆಯಿಂದ ಚೂಡಾಮಣಿಯನ್ನು ಪಡೆದುಕೊಂಡು ಹೊರಬಂದ ಹನುಮನು ಅಶೋಕ ವನದಲ್ಲಿದ್ದ ರುಚಿಕರ ಹಣ್ಣುಗಳನ್ನು ತಿಂದು ಹೊಟ್ಟೆ ತುಂಬಿಸಿಕೊಂಡನು.
ಆತನಿಗೊಂದು ಯುಕ್ತಿ ಹೊಳೆಯಿತು. ಅಶೋಕವನವನ್ನು ತಾನು ಧ್ವಂಸಗೊಳಿಸಿದರೆ ರಾವಣನ ಮುಂದೆ ತನ್ನನ್ನು ಹಾಜರುಪಡಿಸುತ್ತಾರೆ ಅಲ್ಲಿಗೆ ಆತನ ಸೈನ್ಯದ ಬಲಾಬಲಗಳ ಕುರಿತು ಮಾಹಿತಿ ದೊರೆಯುತ್ತದೆ ಎಂದು ಯೋಚಿಸಿ ಇಡೀ ಅಶೋಕವನದ ಗಿಡ ಮರಗಳನ್ನು ಧ್ವಂಸಮಾಡಲಾ ರಂಭಿಸಿದ. ಸೈನಿಕರು ನೂರಾರು ಸಂಖ್ಯೆಯಲ್ಲಿ ಬಂದು ಆತನನ್ನು ಎದುರಿಸಿ ಸೋತರು. ಮತ್ತೆ ಸಾವಿರಾರು ಸಂಖ್ಯೆಯ ಸೈನಿಕರನ್ನು ಆತ ಎದುರಿಸಿದನು. ಕೊನೆಗೆ ರಾವಣನ ಪುತ್ರ ಇಂದ್ರಜಿತನ ಕೈಗೆ ಸ್ವ ಇಚ್ಛೆಯಿಂದಲೇ ಸೆರೆ ಸಿಕ್ಕನು.
ಒಂದು ಪುಟ್ಟ ಕೋತಿ ಇಷ್ಟೆಲ್ಲಾ ಹಾಳು ಮಾಡಲು ಸಾಧ್ಯವೇ ಎಂಬ ಅನುಮಾನದಿಂದ ರಾವಣನ ಆಸ್ಥಾನಕ್ಕೆ ಆತನನ್ನು ಕರೆದು ತರಲು ರಾವಣನ ಮುಂದೆ ಪ್ರಭು ಶ್ರೀ ರಾಮನ ದೂತನಾಗಿ ನಿಂತನು ನಮ್ಮ ಹನುಮ. ಮುಂದೆ ರಾವಣನ ಆಣತಿಯಂತೆ ಲಂಕೆಯ ಸೈನಿಕರೆಲ್ಲ ಸೇರಿ ಆತನ ಬಾಲಕ್ಕೆ ಬಟ್ಟೆಯನ್ನು ಸುತ್ತಿ ಬೆಂಕಿ ಇಡಲು ಇಡೀ ಲಂಕೆಯನ್ನು ಬೆಂಕಿಯ ಆಹುತಿಯಲ್ಲಿ ಮುಳುಗಿಸಿದನು. ರಾವಣನ ಸೈನ್ಯದ ತಾಕತ್ತನ್ನು ತಿಳಿದುಕೊಳ್ಳಬೇಕೆಂಬ ಸ್ಪಷ್ಟ ಗುರಿ ಆತನಿಗಿತ್ತು. ಸಮುದ್ರ ತಟದಲ್ಲಿ ತನ್ನ ಬಾಲವನ್ನು ಅದ್ದುವಾಗ ಆತನಿಗೆ ರಾವಣನ ಸೋದರ ವಿಭೀಷಣನ ಭೇಟಿಯಾಯಿತು.
ಮುಂದೆ ಸಮುದ್ರ ಲಂಘನ ಮಾಡಿ ಪ್ರಭು ಶ್ರೀ ರಾಮನ ಮುಂದೆ ಎಲ್ಲವನ್ನು ವರದಿ ಒಪ್ಪಿಸಿದ ಹನುಮನು ತನ್ನೆಲ್ಲ ಕಪಿ ಬಾಂಧವರ ಮೆಚ್ಚುಗೆ, ಹೊಗಳಿಕೆಗಳಿಗೆ ಸ್ಥಿತಪ್ರಜ್ಞನಾಗಿದ್ದನು.
ಇದು ಸುಂದರ ಕಾಂಡದ ಒಂದು ಪಕ್ಷಿ ನೋಟ.
ಶಕ್ತಿ, ಯುಕ್ತಿ, ಆತ್ಮವಿಶ್ವಾಸ, ವಿನಯ, ವಿಧೇಯತೆ, ಸ್ಪಷ್ಟ ಗುರಿ,ನಿರ್ಭೀತ ಮತ್ತು ನಿಸ್ವಾರ್ಥಮನೋಭಾವ ಮತ್ತು ಸ್ಥಿತಪ್ರಜ್ಞನಾಗಿದ್ದ ಹನುಮ ಎಂದೆಂದಿಗೂ ರಾಮನ ಭಕ್ತನಾಗಿಯೇ ಉಳಿದನು. ಆದ್ದರಿಂದಲೇ ಆತನಿಗೆ ದೈವತ್ವ ಪ್ರಾಪ್ತಿಯಾಯಿತು. ಅಂತೆಯೇ ಶ್ರೀ ರಾಮನ ಭಕ್ತರೆಲ್ಲರಿಗೂ ಹನುಮ ದೇವರಾದನು.
ಆಂಜನೇಯ, ಪವನಪುತ್ರ, ಮಾರುತಿ, ಕಪೀಶ, ಹನುಮಾನ್ ಹನುಮಪ್ಪ , ಭಜರಂಗಿ ಎಂಬ ಹಲವಾರು ನಾಮಗಳಿಂದ ಕರೆಯಲ್ಪಡುವ ಆಂಜನೇಯನ ಕುರಿತು ಮಹಾನ್ ಆಂಜನೇಯ ಭಕ್ತರಾದ ಸಂತ ತುಳಸಿದಾಸರು ಹನುಮಾನ್ ಚಾಲೀಸಾವನ್ನು ರಚಿಸಿದರು. ಭಾರತ ದೇಶದ ಪ್ರತಿ ಹಳ್ಳಿಗಳಲ್ಲೂ ಹನುಮನ ದೇಗುಲವಿದೆ. ಹನುಮ ನಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳನ್ನು ಕಳೆವ ದೈವವಾಗಿ ಜನಮನದಲ್ಲಿ ಸದಾ ನೆಲೆಸಿದ್ದಾನೆ.
“ಬುದ್ದಿರ್ಬಲಮ್ ಯಶೋಧೈರ್ಯಂ ನಿರ್ಭಯತ್ವಂ ಮರೋಗತಃ
ಅಜಾಡ್ಯಮ್ ವಾಕ್ಪಟುತ್ವಂಚ
ಹನುಮದ ಸ್ಮರಣಾದ್ಭವೇತ್
ಹನುಮ ಜಯಂತಿಯ ಈ ಶುಭ ಸಂದರ್ಭದಲ್ಲಿ ನಾವೆಲ್ಲರೂ ಆತನನ್ನು ಪೂಜಿಸಿ ಕೃಪೆಗೆ ಪಾತ್ರರಾಗೋಣ.
-ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್.