ಹಿರಿಯ ಸಾಹಿತಿಯೆಂಬ ಅಂಟುರೋಗ. (ಲಲಿತ ಪ್ರಬಂಧ)

ಮಚ್ಚೇಂದ್ರ ಪಿ ಅಣಕಲ್

ಹಿರಿಯ ಸಾಹಿತಿಯೆಂದರೆ ಯಾರು ?  
ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದಂತೆ ಎಸ್,ಎಲ್,ಭೈರಪ್ಪನವರ *`ಭೀಮಕಾಯ’* ಕಾದಂಬರಿ ಕಣ್ಣಿಗೆ ಬಿದ್ದಿತ್ತು. ಅದರ ಮುಖಪುಟದ ಮೇಲೆ *`ಉದಯೋನ್ಮುಖ ಭೈರಪ್ಪ’* ಅಂತ ಪ್ರಕಟವಾಗಿರುವುದ ನೋಡಿ ಒಮ್ಮೆ ಆಚರ್ಯಚಕಿತನಾದೆ.ಇವರು ಕನ್ನಡದ ಪ್ರಖ್ಯಾತ ಕಾದಂಬರಿಕಾರರು. ಆದರೂ ಹೀಗೆ ಬರೆದುಕೊಳ್ಳುತ್ತಾರಂದ್ರೆ ? ಎಂತಹ ವ್ಯಕ್ತಿತ್ವ ಇವರದು ? ‘ಎನಗಿಂತ ಕಿರಿಯರಿಲ್ಲ’ ಎಂಬ ಬಸವಣ್ಣನವರ  ಭಾವ ಕಂಡು ಬೆರಗಾದೆ. ಆದ್ರೆ ಇತ್ತಿಚ್ಚಿನ  ಸಾಹಿತಿಗಳಲ್ಲಿ ಈ ಗುಣ ಯಾಕೆ ಬೆಳೆದು  ಬರುತ್ತಿಲ್ಲ ? ಎಂದು ನನ್ನಲ್ಲಿ ನಾನೆ ಪ್ರಶ್ನೆಸಿಕೊಂಡೆ.
ಮೊನ್ನೆ ಒಬ್ಬ ಲೇಖಕರ ಕತೆ ವಿದ್ಯನ್ಮಾನ ಮಾಧ್ಯಮವೊಂದರಲ್ಲಿ ಪ್ರಕಟವಾಗಿರುವುದರಿಂದ ಅದನ್ನು ಓದಿ, ಅದರಲ್ಲಿಯ ಕೆಲವು ತಪ್ಪುಗಳು ಎತ್ತಿ ಅಭೀಪ್ರಾಯ ಬರೆದಿದೆ. ಅದಕ್ಕೆ ಆತ ಪೋನ್ ಮಾಡಿ ಯದ್ವಾ-ತದ್ವಾ ಬೈಯಬೇಕೆ ? ಛೇ ! ಬೆಸರವಾಗುತ್ತದೆ ಇಂಥ ಸಾಹಿತಿಗಳ ಮನೋಸ್ಥಿತಿ ಕಂಡು.
ಮತ್ತೆ ಅವನಿಗೆ `ಉದಯೊನ್ಮುಖ ಲೇಖಕ’ ಅಂತ ಸಂಭೋಧಿಸಿ ಬರೆದಿದ್ದಕ್ಕೆ  “ಯಾಕೆ ಸ್ವಾಮಿ, ತಲೆ
ಕೆಟ್ಟಿದ್ದೇಯಾ ? ನಾನು ಇಪ್ಪತ್ತು ವರ್ಷ ಆಯ್ತು ಈ ಸಾಹಿತ್ಯ ಲೋಕಕ್ಕೆ ಬಂದು‌ ಗೊತ್ತಾ ?   ಇನ್ನೊಮ್ಮೆ ಹಾಗೆ ಉದಯೋನ್ಮಖರು-ಗಿದಯೋನ್ಮಖರು ಅಂತ ಏನಾದರೂ ಬರೆದ್ರೆ ನೋಡಿ ಮತ್ತ ? ನನ್ನ ಹೆಂಡ್ತಿ ಪೋಲಿಸ್ ಹಳಾ. ನಿಮ್ಮ ಮ್ಯಾಲೆ ಕಂಪ್ಲೇಂಟ್ ಕೊಡಬೇಕಾಗತ್ತದ. ಹುಷಾರು”  ಅಂತ ಆತ ತನ್ನ ಹೆಂಡ್ತಿ ಪೋಲಿಸಮ್ಮಳ ಹೆಸ್ರು ಹೇಳಿ ಧರ್ಪ ಹಾಕಿದ.  ಆಗ ನಾನು ಏನ ಮಾಡಬೇಕೆಂದು ತೋಚದೆ “ಹಿರಿಯ ಸಾಹಿತಿಗಳಿಗೆ ನೋವಾದರೆ ಕ್ಷೇಮಿಸಬೇಕು” ಅಂತ ಮೇಸೆಜ್ ಹಾಕಿ ಸುಮ್ಮನಾದೆ. ನಂತರ ಆ ಕಡೆಯಿಂದ ಪೋನ್ ಕರೆ ಬರದೆ ಇದ್ದಿದ್ದರಿಂದ  `ಕಿರಿಕಿರಿ’ ತಪ್ಪಿತ್ತು ಅಂತ ನೆಮ್ಮದಿಯ ನಿಟ್ಟುಸಿರು ಬಿಟ್ಟೆ.

ಮತ್ತೊಂದು ದಿನ ನಾನು ತಾಲೂಕು ಸಾಹಿತ್ಯ ಸಮ್ಮೇಳನ ಕವಿಗೊಷ್ಠಿಯ ನೀರೂಪಕನಾಗಿ ಅತಿಥಿ ಮಹೋದಯರಿಗೆ ವೇದಿಕೆಗೆ ಆಹ್ವಾನಿಸುತ್ತಿದ್ದೆ. ಆಗ ಆ ಕಾರ್ಯಕ್ರಮ ಆಯೋಜಕರು ನಡುವೆ ಬಂದು ಚೀಟಿ ಕೊಟ್ಟು  “ಎಲ್ಲ ಅತಿಥಿಗಳನ್ನು ಹಿರಿಯ ಸಾಹಿತಿಗಳೆಂದು ಕರೆಯಿರಿ” ಅಂತ ಮೆಲ್ಲಗೆ ಕಿವಿಯಲ್ಲಿ ಹೇಳಿ ದೂರ ಸರಿದರು. ಅವರ ಮಾತಿಗೆ ಬೆಸರವಾದರು ತೊರ್ಪಡಿಸದೆ ಹಗ್ಗದಿಂದ ಕಟ್ಟಿದ ಗಂಗಿ ಎತ್ತಿನಂತೆ  ತಲೆ ಅಲ್ಲಾಡಿಸಿ, ಅನಿವಾರ್ಯವಾಗಿ ಹಾಗೆ ಮಾಡಿದೆ. ಮೊದಲಿಗೆ ಒಬ್ಬರನ್ನು ಹಿರಿಯ ಸಾಹಿತಿ *`ಕುರ‍್ರಕವಿ’* ಅಂತ ಕರೆದೆ. ಆಗ `ನೀರೊಳಗಿಂದ ಬೆರ್ವತಂ ಉರಗ ಪತಾಕಂ’ ಎಂಬಂತೆ ಸಭೆಯೊಳಗಿಂದ ಎದ್ದನೊಬ್ಬ, ಕರ‍್ರಗೆ,ದಪ್ಪಗೆ ಕುಳ್ಳಗಿನ ವ್ಯಕ್ತಿ.ಆತ ನಗುಮೊಗದಿಂದ ವೇದಿಕೆಯೇರಿ ಸಭೀಕರೆಡೆಗೆ ತನ್ನೆರಡು ಕರ ಮುಗಿದು ಪೂರ್ವ ಪಶ್ಷೀಮಗಳೆರಡು ಒಮ್ಮೆ ದಿಟ್ಟಿಸಿ ಒಂದು ಮಾಡಿ ಉತ್ತರದೆಡೆಗೆ ಮುಖಮಾಡಿ ಕುಳಿತು ಬಿಟ್ಟ. ಅವನ ವಯಸ್ಸು ಸುಮಾರು ನಲವತೈದರ ಆಸುಪಾಸಿರಬಹುದು ಅಷ್ಟೇ. ಈಗ ಮತ್ತೆ ಮುಂದುವರೆದು ಅದೇ ವಯಸ್ಸಿನ  `ಸೂರಪ್ಪ, ಹಿರಿಯ ಕವಿಗಳು ” ಅಂತ ಹೇಳಿದ್ದೆ ತಡ, ಆತ ತುಂಬ ಗಂಭೀರತೆಯಿಂದ ‘ಹಿರಿಯ ಸಾಹಿತಿ’ ಯೆಂಬ ಹಮ್ಮಿನಲ್ಲಿ ಗಂಟು ಮೊರೆ ಮಾಡಿಕೊಂಡು ಬಂದು ಕುಳಿತ. ಬಹಳ ಸಮಯದ ನಂತರ ಗೊತ್ತಾತು. ಈತ ಒಂದೂ ಪುಸ್ತಕ ಬರೆದಿಲ್ಲವೆಂದು. ಆದರೂ ಅವನನ್ನು ಹಿಂದೊಮ್ಮೆ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ, ಆನೆಯ ಮೇಲೆ ಮೆರವಣಿಗೆ ತೆಗೆದಿದ್ದರಿಂದ ಇವನಲ್ಲಿನ ಆ ಹಮ್ಮು-ಬೀಮ್ಮು ಇನ್ನೂ ಕಡಿಮೆಯಾದಂತೆ ತೊರಲಿಲ್ಲ. ಆತನನ್ನು ನೋಡಿದ ನನಗೆ ಒಮ್ಮೆ ಅವನೆದೆಯ ಮೇಲಿನ ಅಂಗಿ ಹಿಡಿದು ಹೊರ ತಳ್ಳಬೇಕೆಂದು ಊಹಿಸಿದೆ. ಆದರೆ ಇದು ಸಭೀಕರೆದುರು ಅಸಭ್ಯ ವರ್ತನೆಯಾಗುತ್ತದೆಯೆಂದು ಸುಮ್ಮನಾದೆ. ಸಾಹಿತ್ಯ ಸಮ್ಮೇಳನದ ಆಯೋಜಕರು ಯಾಕೆ ಹೀಗೆ ಮಾಡುತ್ತಾರೆಂದು ಅವರ ಮೇಲೆ ಸ್ವಲ್ಪ ಕೋಪವು ಬಂದಿತ್ತು, ಆದರೂ ಕವಿಗೋಷ್ಠಿ ಪ್ರಾರಂಭಿಸಿದೆ. ವೇದಿಕೆಯ ಮೇಲೆ ಕುಳಿತವರು ಒಂದೂ ಪುಸ್ತಕ ಬರೆಯದೆ ‘ಹಿರಿಯ ಸಾಹಿತಿ’ ಎನಿಸಿಕೊಂಡು ತುಂಬ ಖುಷಿಯಲಿ ಅಕ್ಕ- ಪಕ್ಕದವರ ಜೋತೆ ಠಿವಿಲೆ  ಮಾತು ಸುರು ಮಾಡಿದರು. ಮತ್ತೆ ಸಭೀಕರೆದುರು  ಹಿರಿಯ ಸಾಹಿತಿಯೆಂಬ ಅಹಮ್ಮಿನಲ್ಲಿ ತೆಲಾಡಿದರು. ಅದನ್ನು ನೋಡಿಯು ನೋಡದಂತೆ ಸುಮ್ಮನಾಗಿ  `ನಾಗೇಂದ್ರ ’ ಎಂಬ ಕವಿಯ ಹೆಸರು ನೇರವಾಗಿ ಕೂಗಿ ಕರೆದೆ. ಆತ ಬಂದು ಕವನ ವಾಚನ ಮಾಡಿದ. ಇಲ್ಲಿ ಈತನಿಗೆ ‘ಹಿರಿಯ ಕವಿ’ ಪದ ಬಳಕೆ ಮಾಡದೆ ಇರುವುದರಿಂದ ಆಯೋಜಕರು ಒಮ್ಮೆ ನನ್ನನ್ನು ದುರುಗುಟ್ಟಿ ನೋಡಿ, ಇರಲಿ ಎನ್ನುವಂತೆ ಸುಮ್ಮನಾಗಿದ್ದರು. ಮತ್ತೆ ಮುಂದಿನ ಕವಿಯ ಹೆಸರು ಹೇಳುತ್ತಿದ್ದಂತೆ ಆಯೋಜಕರು ಎಲ್ಲಿಂದಲೋ ! `ಟುಣಕನೆ’ ಹಾರಿ ಬಂದು ”ಇವರು  ಪುಸ್ತಕ ಬರೆದಿಲ್ಲ. ಆದರೂ ಇವರಿಗೆ ಅರವತೈದು ವರ್ಷ ವಯಸ್ಸಾಗಿದೆ. ಪಾಪ ! ತುಂಬ ಚನ್ನಾಗಿ ಕವನ ಬರಿತ್ತಾರೆ. ಇರ್ಲಿ, ಹಿರಿಯ ಕವಿ ಅಂತನೆ ಕರೆಯಿರಿ” ಅಂತ ಮತ್ತೆ ಕಿವಿ ಊದಿದರು. ಹಾಗೆ ಹೇಳಿದೆ. ಆ ಮುದುಕ ಬಂದು ಕವಿತೆ ಓದಿದ. ಅದಕ್ಕೆ ತಳ ಬುಡ ಒಂದೂ ಇರಲಿಲ್ಲ.
ಕೆಲ ಸಾಹಿತಿಗಳು
ಯುವಕರಾಗಿದ್ದಾಗ ಕವಿತೆ ಬರೆಯೋದು‌ ಬಿಟ್ಟು ಮುದುಕರಾದ ಮೇಲೆ  ಕವನ ಸಂಕಲನವೋ ! ಎಂಥವೋ ! ಪ್ರಾಸಿಗೆ ಬಿದ್ದು, ತ್ರಾಸು ತಗೊಂಡು ಒಂದೆರಡು ಪುಸ್ತಕ ಪ್ರಕಟಿಸಿ ಈ ‘ಹಿರಿಯ ಸಾಹಿತಿ’  ಅನ್ನೋ ಪದಪಟ್ಟ ಕಟ್ಟಿಕೊಂಡು ಅಷ್ಟರಲ್ಲೇ ಖುಷಿ ಪಡ್ತಿರುವುದು ಕಂಡು ಬರುತ್ತಿದೆ.ಆದರೆ  ಅವರ ಈ
ಖುಷಿ ಹಾಳು ಮಾಡಬಾರದೆಂದು ಕೆಲವರು ಸೂಕ್ತ ಮಾರ್ಗದರ್ಶನ ನೀಡದೆ ಇರೋದು ಒಂದು ವಿಪರ್ಯಾವೇ ಸರಿ.  ಮತ್ತೆ ಕೆಲವರು ಸೃಜನಶೀಲ ಬರಹ ಬರೆಯದೆ ಸುಖಾ ಸುಮ್ಮನೆ ಕಂಡ ಕಂಡವರ ಕತೆ,ಕವನ,ಲೇಖನಗಳು ಸಂಗ್ರಹಿಸಿ ಸಂಪಾದನೆ,ಸ್ಮರಣ ಸಂಚಿಕೆ, ಅಭೀನಂದನಾ ಗ್ರಂಥಗಳು ಪ್ರಕಟಿಸಿ  “ನಾನು ಅಷ್ಟು ಪುಸ್ತಕ ಬರೆದೆ. ಇಷ್ಟು ಪುಸ್ತಕ ಬರೆದೆ ” ಅಂತ ಒಣ ಪ್ರತಿಷ್ಠೆಯಿಂದ ಹಿರಿಯ ಕವಿ, ಖ್ಯಾತ ಕವಿ, ಅಂತ ಇನ್ನು ಏನೇನೋ ! ಮುನ್ನುಡಿ, ಬೆನ್ನುಡಿಯಲಿ ಅನ್ವರ್ಥನಾಮಗಳು ಬರೆಸಿಕೊಂಡು ಬೀಗುವವರು ನಮ್ಮ  ಸುತ್ತ ಮುತ್ತಲಿನಲ್ಲಿಯೇ ಇದ್ದಾರೆ. ಇರುವರನ್ನು ನೋಡಿದ್ರೆ *`ನಗುವು ಬರುತ್ತಿದೆ ಎನಗೆ, ನಗುವು ಬರುತ್ತಿದೆ !’* ಎಂಬ ದಾಸರ ಹಾಡು ನೆನಪಾಗದೆ ಉಳಿಯದು.

ಅ ಕವಿಗೋಷ್ಠಿ ಮುಗಿದ ನಂತರ *`ಕುರ‍್ರಕವಿ’* ಹೊರಗಡೆ ಬಂದು ಟಿ.ಸ್ಟಾಲ್ ಹತ್ತಿರ ಕಾಫಿ ಹಿರುತ್ತಾ , ಚರ್ಚೆಗಿಳಿದಿದ್ದ. ತಾನು ನೂರಾರು ಪುಸ್ತಕಗಳು  ಪ್ರಕಟಿಸಿದ್ದು , ಉದಯೋನ್ಮುಖ ಮರಿ ಸಾಹಿತಿಗಳಿಗೆ ಹೇಳಿ ಜಂಭ ಕೊಚ್ಚಿಕೊಳ್ಳುತ್ತಿದ್ದ. ನನಗೆ ಅವರ ಚಾಳಿ ಗೊತ್ತಿದ್ದು ಬೇಕೂ ಅಂತಲೆ  ಮಧ್ಯೆ ನುಳುಸಿ `ನಮಸ್ಕಾರ ಸರ್ ! ಹೇಗಿದೆ ನಿಮ್ಮ ಸಾಹಿತ್ಯ ? ಎಷ್ಟು ಪುಸ್ತಕ ಬರೆದಿದ್ದಿರಿ ? ಮತ್ತೇ ಮುಂದೆ ಯಾವ್ಯಾವ ಪುಸ್ತಕಗಳು ಬರುತ್ತಿವೆ ? ” ಅಂತ ಎನೇಲ್ಲ ಪ್ರಶ್ನೆಗಳ ಸುರಿಮಳೆ ಹಾಕಿದೆ. ಆತ ನಸುನಗತ್ತಾ “ ನಮ್ದೇನು ಇಲ್ಲಾ ರ‍್ರೀ !  ಎಲ್ಲಾ, ನಿಮ್ದೇ ಅದಾ ” ಅಂತ ಒಂದ್ ನಮೂನಿ ನಕ್ಕು ಹ್ಹಿ ಹ್ಹಿ ಹ್ಹಿ ! ಅಂತ ಹಲ್ಲು ಕಿರಿದು ಮತ್ತೆ ಮಾತು ಮುಂದುವರೆಸಿ ” ನಮ್ದೂ, ಈಗ ಏನಿಲ್ಲಂದ್ರೂ ನೂರು ಪುಸ್ತಕಾ ಆದ್ವು. ಈಗ ನಾವು ಹಿರಿಯ ಸಾಹಿತಿಗಳು. ಇನ್  ಮುಂದೆ ನಿಮ್ದು ಅದಾ ನೋಡ್ರಿ. ನೀವೂ ಬೇಗ ಬೇಗ  ಪುಸ್ತಕ ಮಾಡ್ರಿ. ನಿಮ್ಗೂ ನಮ್ ಗತಿ  ”ಹಿರಿಯ ಸಾಹಿತಿ’ ಅಂಬೋ ಕಾಲ ಬರಲಿ.” ಅಂದರು. ನನಗೆ ಒಮ್ಮೆ ಶಾಕ್ ಆಯ್ತು.
“ಸರ್ !  ನಿಮ್ದು ಸ್ವಂತ  ಪುಸ್ತಕಗಳೆಷ್ಟು ? ಮತ್ತೆ ಸಂಪಾದನೆ ಎಷ್ಟು ? ” ಅಂದೆ.
” ನಮ್ದೂ ಒಂದೆರಡು ಬಿಟ್ರೆ ಎಲ್ಲ ಸಂಪಾದನೆಯೆ ಅವಾ ರ‍್ರೀ ! ಯಾರ್ ಬರಿಲಾಕ್ ಹೋಗ್ಯಾರ್ ಈಗಿನ ಕಾಲದಾಗ್ ? ಸುಮ್ನೆ ಅವರದೊಂದು ಇವರದೊಂದು ಕತೆ.ಕವನ ತಗೊಂಡು ಸೂಡು ಕಟ್ಟಿದರಾತು ಒಂದು ಪುಸ್ತಕ
ಆಗ್ತದೆ  ” ಅಂದ.
“ಸೂಡು ಕಟ್ಟೊದು ಅಂದ್ರೆ ಏನು ಸರ್ ? ” ಕೇಳಿದೆ.
“ ಅದೇ ರ‍್ರೀ ! ಅವರ‍್ದೊಂದು ಇವರ‍್ದೊಂದು ಸಾಹಿತ್ಯ ತಗೊಂಡು ನೂರು ಇನ್ನೂರು ಪುಟದ ಪುಸ್ತಕ ಮಾಡೊದಕ್ಕೆ ನಾವು ನಮ್ಮ ಭಾಷೆಯಲಿ `ಸೂಡು ಕಟ್ಟೊದು’ ಅಂತ ಹೇಳ್ತಿವಿ. ಮತ್ತೇ ಇನ್ನೊಂದಿದೆ ‘ಹೋರೆ ಕಟ್ಟೊದು’ ಅಂತ ಹೇಳುತ್ತಿದಂತೆ ನಾನು ಮಧ್ಯೆದಲ್ಲಿ ಬಾಯಿ ಹಾಕಿ
“ ಅಂದ್ರೆ ?” ಅಂತ ಪ್ರಶ್ನೆ ಮಾಡಿದೆ.
“ ನೋಡ ತಮ್ಮಾ ! ಹೊರೆ ಕಟ್ಟೊದು ಅಂದ್ರೆ ಸಾವಿರ ಪುಟದಕ್ಕಿಂತ ಜಾಸ್ತಿ. ಏನಾದ್ರೂ ಸಂಗ್ರಹಿಸಿ ಪುಸ್ತಕ ಪ್ರಕಟಿಸಿದೆಯೋ ! ಅದ್ಕೆ ನಾವು `ಹೊರೆ ಕಟ್ಟೊದು’ ಅಂತ ಕರಿತ್ತಿವಿ. ಈ ಸೂಡು, ಹೊರೆಗಳು ಎಲ್ಲಿ ಮಾರಾಟ ಆಗ್ತಾವೆ ಅಂದ್ರೆ ಅದ್ಕೆ ಒಂದು ಸಗಟು ವ್ಯಾಪಾರ ಕೇಂದ್ರವು ಇದೆ. ಅದು ನಿಮ್ಗೆ ಆಮೇಲೆ ಹೇಳ್ತೇನಿ.  ಮೊದ್ಲು ನೀವು ಪುಸ್ತಕ ರೆಡಿ ಮಾಡ್ರಿ. ಎಲ್ಲವು ಕಣ್ಣ ಮುಚ್ಚಿ ಮಾರಾಟ ಆಗ್ತಾವೆ. ನೀವು ಮೈನತಿ ಇಲ್ಲದ ಇಂತಹ ಕೆಲ್ಸ ಮಾಡಿ ಹೆಸ್ರು, ದುಡ್ಡು ಒಟ್ಟಿಗೆ ಗಳಿಸಿ,ಸಾಹಿತಿಯಾಗಿ ಮತ್ತೆ  ಶ್ರೀಮಂತರು ಆಗಿ” ಅಂತ. ಯಂಡಮೂರಿ ವೀರೆಂದ್ರನಾಥ
ಹಣ ಗಳಿಸುವುದು ಹೇಗೆ ? ಅನ್ನೋ ತರಹ ಹೇಳತೊಡಗಿದರು. ನನಗೆ ಮತ್ತೆ ನಗು, ಒಮ್ಮೆ ಸಿಟ್ಟು ಬಂದರು ಸುಮ್ಮನಾಗಿ ಮರು ಮಾತಾಡದೆ
”  ಓಕೆ ! ಬರ‍್ತಿನಿ ಹಿರಿಯ ಸಾಹಿತಿಗಳೆ !” ಅಂತ ಅಲ್ಲಿಂದ ಕಾಲು ಕಿತ್ತಿದೆ.

ಬಹಳ ದಿನಗಳ ನಂತರ ಕವಿಮಿತ್ರ ಬೀರ ಸಿಕ್ಕಿದ. ಅವನ ಕೈಯಲ್ಲಿ ಇಪ್ಪತ್ತು ಪುಟದ  ಸಾಹಿತ್ಯ ಸಮ್ಮೇಳನದ ಕಾರ್ಡು ಇರುವುದು ನೋಡಿ ಒಮ್ಮೆ  ಕಣ್ಣಾಡಿಸಿದೆ. ಎಲ್ಲ ಸಾಹಿತಿಗಳ ಹೆಸರಿನೊಂದಿಗೆ ಅದೇ `ಹಿರಿಯ ಸಾಹಿತಿಗಳು’ ಎಂಬ ಪದ ಅಂಟಿಕೊಂಡಿದ್ದವು. ಸುಮಾರು ಮೂರು ದಿನ ನಡೆಯುವ ಆ ಕಾರ್ಯಕ್ರಮದ ಕಾರ್ಡಿನಲ್ಲಿಯ ಆ ಪದಗಳು ತೆಗೆದರೆ ಒಂದೆರಡು ಪುಟಗಳಾದರು ಕಡಿಮೆ
ಮಾಡಬಹುದಿತ್ತೇನೋ ! ಎನಿಸಿ ಅದರ ಎಲ್ಲ ಪುಟಗಳು ತಿರುವಿ ಹಾಕಿದೆ. ಅದರಲ್ಲಿ ಪ್ರಕಟವಾದ ಬೀರನ ಹೆಸರಿಗೂ ಆ ಪದ ಅಂಟಿಕೊಂಡಿರುವುದು ನೋಡಿ, “ಅಲ್ಲೋ ! ಬೀರ, ನಿನಗಿನ್ನೂ ನಲವತ್ತೆ ಆಗಿದೆ.ನಿನಗೂ ‘ಹಿರಿಯ ಸಾಹಿತಿಗಳು’ ಅಂತ ಬಳಸ್ಯಾರಲ್ಲೋ ?’’ ಅಂದೆ.
ಬೀರ ನಕ್ಕ.

”ಹ್ಞೂಂ. ಮತ್ತ ?  ಅವ್ರು ಬಳಸಲೆ ಬೇಕು. ಯಾಕೆಂದ್ರೆ ಏನೂ ಬರೆಯದೆ ವಯಸ್ಸಾದ ಮುದುಕರಿಗೆಲ್ಲ `ಹಿರಿಯ ಕವಿಗಳು’ ಅಂತ ಬಳಸ್ತಾರೆ, ಮತ್ತೆ ಅವರಿಗೆ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯು  ಮಾಡ್ತಾರೆ .ಅಂದ್ರೆ ಇದ್ಯಾವ ನ್ಯಾಯ ?  ನಿಜವಾಗಿ ನೋಡಿದ್ರೆ ನಾನೇ ಹಿರಿಯ ಕವಿ.”  ಅಂತ ಮತ್ತೆ ನಗತೊಡಗಿದ.
” ಅದ್ಯಾಗೆ ? ”
” ಸುಮಾರು ಇಪ್ಪತ್ತು ವರ್ಷಗಳಿಂದ ಕತೆ, ಕವನ, ಗಜಲ್ ಬರೆದು ಹತ್ತಾರು ಪುಸ್ತಕ ಪ್ರಕಟಿಸಿದ್ದೇನೆ. ಅದ್ಕೆ ಮೊದ್ಲು  ನನಗೆ ಹಿರಿಯ ಕವಿಗಳು ಅಂತ ಕನಸಲ್ಟು ಮಾಡಬೇಕು ಬೇಡ್ವೋ ?  ಪುಸ್ತಕ ಬರೆದವರ ಮುಂದೆ ಏನೂ ಬರೆಯದ ಮುದುಕರ ಕೈಯಲ್ಲಿ ಕಾಗದ ಕೊಟ್ಟು, ಕವಿಗೋಷ್ಠಿಯಲ್ಲಿ  `ಹಿರಿಯ ಕವಿಗಳು’ ಅಂತ ಹೇಳೊದು ನಾನೇಷ್ಟು ಸಲ ಕೇಳಿಸಿಕೊಂಡಿಲ್ಲ ? ನೀವು ಕೊಟ್ಟ ಚೀಟಿ ಗಾಳಿಗೆ ಹಾರಿ ಬಂದು, ಕೋಳಿ ಪುಕ್ಕದ ತರಹ ನನ್ನ ಮುಂದೆ ಬಿದ್ದಾಗ ನಾನೇಷ್ಟು ಸಲ ಓದಿಲ್ಲ ? ನೀವು ಇನ್ ಮುಂದ ಕವಿಗೋಷ್ಠಿ ಕಾರ್ಡಿನಲ್ಲಿ  ನನ್ ಹೆಸ್ರಿನ್ ಮುಂದೆ ಆ ಪದ  ಸೇರಿಸಲಿಲ್ಲ ಅಂದ್ರೆ  ನೋಡ್ರಿ ಮತ್ತ !  ನಾ ಬಂದಕೇಸಿ ಕವಿಗೋಷ್ಠ್ಯಾಗ ನಿಮ್ ಮ್ಯಾಲೆನೆ ಕವಿತಾ ಓದ್ತಿನಿ. ತಿಳ್ಕೊರ‍್ರಿ ” ಅಂತ ರಾತ್ರಿ ಹೊತ್ತಿನ್ಯಾಗ ಎಣ್ಣಿ ಹಾಕಿ ದಬಾಯ್ಸಿ ಜಾಡ್ಸಿ ಹಾಕಿದ್ನೆ , ಮಕ್ಳು ಹೆದರ‍್ಕೊಂಡು ನನ್ ಹೆಸ್ರಿಗೂ ಗೌರವ ಕೊಡೊದು ಕಲ್ತಿದ್ದಾರೆ. ಇಲ್ನೋಡು `ಬೀರಣ್ಣ ಹಿರಿಯ ಸಾಹಿತಿಗಳು’ ಅಂತ ಹ್ಯಾಂಗ್ ಹಾಕ್ಯಾರು” ಅಂತ ತೋರಿಸಿ ಕುಹಕ ನಗೆ ಬಿರಿದ.
“ಯಾಕೋ ! ನಿನಗ್ಯಾಕೋ ! ಆ ಹುಚ್ಚು ? ” ಅಂದ್ರೆ
“ನಿಂಗೊತ್ತಿಲ್ಲ ಮಾರಾರ‍್ರೆ ! ಈ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನು  ಆಯ್ಕೆ ಮಾಡಬೇಕಾದ್ರೆ ಇದೂ ಒಂದು ಮಾನದಂಡ ಮಾಡಿಕೊಂಡಾರ ಅವ್ರು. ಸಾಹಿತಿಗಳಾದವರು ಹೆಚ್ಚು ಪುಸ್ತಕ ಬರೆದಿರಬೇಕು. ಇಲ್ಲಾ `ಹಿರಿಯ ಸಾಹಿತಿ’ ಅಂತ ಅನಸ್ಕೊಂಡಿರಬೇಕು . ಅಂತ ಅನ್ನೋ ! ವಿಷಯ ನಿಂಗ್ ಗೊತ್ತಿಲ್ವೇನು ? ಇರ‍್ಲಿ, ಮುಂದಿನ ಸಮ್ಮೇಳನದ ಕಾರ್ಡಿನಲ್ಲಿ ನಿನ್ ಹೆಸ್ರಿಗೂ ‘ಹಿರಿಯ ಸಾಹಿತಿಗಳು’ ಅಂತ ಬರಿಯೋಕೆ
ಹೇಳ್ತಿನಿ.” ಅಂತ ಏನೇನೋ ಹೇಳತೊಡಗಿದ್ದ.
“ಇರ‍್ಲಿ ಬಿಡು ಮಾರಾಯ. ನಾನು ಕಿಲ್ಲಿ ಕಾಲೇಜನ್ಯಾಗ ನಮ್ ಸಾಹಿತಿ ಗುರಪ್ಪನ್ನೊರು ಇದ್ದಾರೆ ಅಂತ ಗೊತ್ತಾತ್ತು  ಅವ್ರ ತನಕ
ಹೋಗಿ ಬರ‍್ತಿನಿ” ಅಂತ ಆ  ಕಡೆಗೆ ಹೆಜ್ಜೆ ಹಾಕಿದ್ದೆ. ಕಾಲೇಜಿನಲ್ಲಿ ಗುರಪ್ಪ ಮಾಸ್ತರ್ ಕನ್ನಡ  ವಿದ್ಯಾರ್ಥಿಗಳಿಗೆ ಪಾಠ ಮಾಡತೊಡಗಿದರು.ಅದನ್ನು ನೋಡಿದ ನಾನು ಡಿಸ್ಟ್ರಬ್ ಮಾಡಬಾರದೆಂದು ಕಿಟಕಿ ಪಕ್ಕ ನಿಂತು ಅವರ ಪಾಠ ಕೇಳತೊಡಗಿದೆ. ಯಾಕೆಂದ್ರೆ ಅವರು ತುಂಬ ಚನ್ನಾಗಿ ಪಾಠ ಮಾಡ್ತಾರೆ ಅಂತ ಗೊತ್ತಿತ್ತು. ಯಾಕೋ ! ಕೇಳಬೇಕು ಅನಿಸಿ, ಹಾಗೆ ಸುಮ್ಮನೆ ನಿಂತು ಬಿಟ್ಟೆ. ಒಳಗೆ ಅವರು ಪಾಠ ಮುಂದುವರೆಸಿ ಪೀಠಿಕೆಯಲ್ಲಿ ಒಂದು ಪ್ರಶ್ನೆ ಹಾಕಿದರು. ಅದೇನಂದ್ರೆ  “ನಿಮ್ಗೆ ಸಾಹಿತಿ ಎಂದರೇನು ಗೊತ್ತಾ ?’’ ಅಂತ . ವಿದ್ಯಾರ್ಥಿಗಳಿಗೆ ಉತ್ತರ ಕೊಡಲು ಆಗದೆ ಗೊಂದಲದಲ್ಲಿ ಸಿಲುಕಿ ಸುಮ್ಮನಾದರು.ಆಗ ಅವರೆ ಮುಂದುವರೆದು  “ಇರ‍್ಲಿ, ನಿಮ್ಗೆ ಕುವೆಂಪು ಅಂದ್ರೆ ಗೊತ್ತಾ ?’’ ಅಂತ ಕೇಳಿದರು.ವಿಧ್ಯಾರ್ಥಿಗಳು  “ಹ್ಞೂಂ ಸರ್,’’ ಅಂದ್ರು ಒಟ್ಟಿಗೆ.
ಆಗ “ಹೇಳಿ ಹೇಳಿ”  ಎಂದಾಗ
“ಕುವೆಂಪು ಎಂದರೆ ಕುಪ್ಪಳ್ಳಿ ವೆಂಕಟಪ್ಪನವರ ಮಗ ಪಾಟೀಲ್ ಪುಟ್ಟಪ್ಪ. ಇವರು ನಮ್ಮ ರಾಷ್ಟ್ರ ಕವಿ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು.” ಎಂದು ಹೇಳುತ್ತಿದ್ದಾಗ ಮಧ್ಯ ಪ್ರವೇಶಿಸಿದ
ಮಾಸ್ತರರು  “ನೋಡಿ, ನೀವು ಇವರಿಗೆ `ರಾಷ್ಟ್ರಕವಿ’ ಎಂದು ಕರೆದಿದ್ದಿರಲ್ಲ ? ಕವಿ ಎಂದರೆ ಸಾಹಿತಿ ಅಂತ ಅರ್ಥ.ಇವರು ನಮ್ಮ ಕನ್ನಡದ ಸಾಹಿತಿಯಾಗಿದ್ದಾರೆ. “ ಎಂದಾಗ ವಿದ್ಯಾರ್ಥಿಗಳು ಹೌದೆನ್ನುವಂತೆ ತಲೆ ಅಲ್ಲಾಡಿಸಿ ಸುಮ್ಮನಾದರು. ಆಗ ಮಾಸ್ತರರು “ನಾನು ಕೂಡ ಹಲವಾರು ಪುಸ್ತಕಗಳು ಬರೆದಿದ್ದೇನೆ.ನಿಮ್ಗೆ ಗೊತ್ತಾ ? “ ಅಂತ ಪಾಠದ ಮಧ್ಯೆ ವೈಯಕ್ತಿಕ ವಿಷಯ ಬಿಟಾಕಿದರು, ಒಬ್ಬ ವಿದ್ಯಾರ್ಥಿ ಎದ್ದು “ಹ್ಞಾ ! ಸರ್, ಮೊನ್ನೆ ರಂಗಮಂದಿರದ ಕವಿಗೋಷ್ಠಿಯಲ್ಲಿ ನಿಮ್ಮನ್ನ ‘ಹಿರಿಯ ಸಾಹಿತಿಗಳು’ ಅಂತ ಕರೆಯುವುದು ನಾನು ಕೇಳಿದ್ದೇನೆ.  ಸರ್, ನೀವು ಕುವೆಂಪು ಅವರಿಗೆ ಬರಿ, ಸಾಹಿತಿ ಅಂತ ಕರೆದರೆ ನಿಮಗ್ಯಾಕೆ ‘ಹಿರಿಯ ಸಾಹಿತಿಗಳು’ ಅಂತ ಕರೆಯುತ್ತಾರೆ ? ಅಂತ ಪ್ರಶ್ನೆ ಮಾಡಿದ. ಆ ಪ್ರಶ್ನೆಗೆ ಉತ್ತರಿಸಲು ಆಗದೆ ತಡವರಿಸುತ್ತಾ, ಕಿಟಕಿ ಕಡೆಗೆ  ನೋಡಿದ.ಅಲ್ಲಿ ನಾನೀರುವುದು ಗಮನಿಸಿ
” ಓಹೋ ! ಮಹಾಕವಿಗಳು ಬರಬೇಕು. ನಮ್ಮ ಮಕ್ಕಳಿಗೆ ನಿಮ್ಮ ಪರಿಚಯ ಮಾಡಿಕೊಡುವೆ.ಬನ್ನಿ ! ಬನ್ನಿ ! .’’ ಅಂತ ಬಾಗಿಲುವರೆಗೆ ಬಂದರು. ನಾನು  “ಬೇಡ, ಬೇಡ ಸರ್ !  ನೀವು ಪಾಠ ಮುಂದುವರೆಸಿ.ನಾನು ಅಲ್ಲಿವರೆಗೂ ನಿಮ್ಮ ಚೆಂಬರಿನಲ್ಲಿ ಕುಳಿತ್ತಿರುತ್ತೇನೆ.” ಅಂತ ಹೇಳಿ ಆಫೀಸನಲ್ಲಿ ಹೋಗಿ ಕುಳಿತೆ. ಅವರು ಪಾಠ ಮುಂದುವರೆಸಿದರು.ಅದು ನಾನೀರುವಲ್ಲಿಗೂ ಕೇಳಿಸುತ್ತಿತ್ತು.
“ಮಕ್ಕಳೇ ! ಸಾಹಿತಿಗಳೆಂದರೆ ಕತೆ,ಕಾದಂಬರಿ,ಕವನ,ನಾಟಕ ಮೊದಲಾದ ಸೃಜನಶೀಲ ಬರಹಗಳು ಬರೆಯುವವರಿಗೆ `ಸಾಹಿತಿಗಳು’ ಅಂತ ಕರೆಯುತ್ತಾರೆ. ನಾನು ಕುವೆಂಪು ತರಹ ನೂರಾರು ಪುಸ್ತಕಗಳು ಬರೆದಿದ್ದೇನೆ.ಆದ್ದರಿಂದ ಜನ ನನಗೆ ಗೌರವದಿಂದ `ಹಿರಿಯ ಸಾಹಿತಿ’ ಅಂತ ಕರೆಯುತ್ತಾರೆ ಹಾಗಾಗಿ ನಾನು ನಿಮ್ಮ ತಾಲ್ಲೂಕಿನಲ್ಲಿ ಒಬ್ಬ ಕುವೆಂಪು ಇದ್ದ ಹಾಗೆ ಅಂತ ಹೇಳುತ್ತಿದ್ದ . ಅವರ ಮಾತು ಕೇಳಿದೆ.ಇಲ್ಲೂ ಇವರಿಗೆ ಆ `ಹಿರಿಯ ಸಾಹಿತಿ’ ಅನ್ನೋ ಅಂಟುರೋಗ ಇರುವುದನ್ನು ಗಮನಿಸಿ  ಮೆಲ್ಲನೆ ಅಲ್ಲಿಂದ ಜಾರಿಕೊಂಡು ಮನೆ ಸೇರಿದೆ. ಯಾಕೋ ಮನಸ್ಸು ಬೆಜಾರಾಗಿ ಮೊಬೈಲ್ ನಲ್ಲಿ ‘ಫೇಸ್ ಬುಕ್’  ಓಪನ್ ಮಾಡಿದೆ. ಶರಣಪ್ಪ ಎಂಬ ಸಾಹಿತಿ ಲೈವ್ ನಲ್ಲಿರುವುದು ಕಾಣಿಸಿತ್ತು. ಕ್ಲಿಕ್ ಮಾಡಿದೆ. ಆಗ ಅವರು ತನ್ನೆರಡು ಕೈ ಜೋಡಿಸಿ ಮುಗ್ದರಾಗಿ  “ನಮಸ್ಕಾರ ! ನಾನು ನಿಮ್ಮ ಜಿಲ್ಲೆಯ `ಹಿರಿಯ ಸಾಹಿತಿ’ ಚರಣಪ್ಪ ಮಾಡುವ ಚರಣು
ಚರಣಾರ್ಥಿಗಳು “ ಅಂತ ತೊದಲು ತೊದಲಾಗಿ ಮಾತು ಸುರುಮಾಡಿದರು. ಇದನ್ನು ಕೇಳಿದ ನನಗೆ ಒಮ್ಮೆ ತಲೆ ದಿಮ್ಮೆಂದು ಬೆಸರಿಸಿ ಮೊಬೈಲ್ ಸ್ವಿಚ್ ಆಫ್ ಮಾಡಿದೆ.

          – ಮಚ್ಚೇಂದ್ರ ಪಿ.ಅಣಕಲ್.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ