ಹೆಚ್ಐವಿ ಮುಕ್ತ ಭಾರತಕ್ಕೆ ಕೈಜೋಡಿಸೋಣ.
– ಅರವಿಂದ ಕುಲಕರ್ಣಿ ಬೀದರ
ಡಿಸೆಂಬರ್ 1 ವಿಶ್ವ ಏಡ್ಸ್ ದಿನಾಚರಣೆಯ ನಿಮಿತ್ತವಾಗಿ ಬರೆದ ಬೀದರದ ಬ್ರೀಮ್ಸ್ ಕೇಂದ್ರದ ಐಸಿಟಿಸಿ ಪ್ರಯೋಗ ಶಾಲಾ ತಂತ್ರಜ್ಞರು ಹಾಗೂ ಸಾಹಿತಿಗಳಾದ ಅರವಿಂದ ಕುಲಕಣಿಯವರು ಬರೆದ ವಿಶೇಷ ಲೇಖನ ಇಲ್ಲಿ ಪ್ರಕಟಿಸಲಾಗಿದೆ.
ಕರೆದರೆ ಮಾತ್ರ ಬರುವೆನು ನಾ
ಎಚ್ಐವಿ ಎಂದು ಕರೆಯುವರು ನನ್ನ
ನಾನು ಯಾರ ವೈರಿಯೂ ಅಲ್ಲ
ಕಂಡ ಕಂಡವರಲ್ಲಿ ಹೋಗುವುದು ಇಲ್ಲ
ಯೌವ್ವನವೆಂಬದು ಇರಲಿ ಜೋಪಾನ
ಕದಿಯಲು ಬರುವರು ನನ್ನಂತಹ ಬಹಳ ಜನ
ಮಧ್ಯಪಾನ, ಧೂಮ್ರಪಾನ ,ಟಿಬಿ, ಕ್ಯಾನ್ಸರ್ ಗೆ ಆಹ್ವಾನ
ವಯಸ್ಸಿಗೆ ಮುನ್ನ ನೀ ಬೆಳೆಸದಿರು ಅನೈತಿಕ ಸಂಬಂಧ
ಅದರಲ್ಲಿ ಸಿಗುವುದು ನಿನಗೆ ಕ್ಷಣದ ಆನಂದ
ವ್ಯೆಶ್ಯೆಯರ ಸಂಗ ನೀ ಮಾಡಬ್ಯಾಡ
ಯೌವ್ವನ ವೆನ್ನುವುದು ಇರಲಿ ಜೋಪಾನ
ಮದುವೆಗೆ ಮುನ್ನ ನೀ ತೋರದಿರು ಲೈಂಗಿಕ ಆಸಕ್ತಿ
ಅನೈತಿಕ ಸಂಬಂಧ ಇರುವುದರಲ್ಲಿಯೇ ಇದೆ ನನ್ನ ವಾಸಸ್ಥಾನ
ನೀ ಮಾಡಬ್ಯಾಡ ಇವರ ಸಂಗಾತಿ
ಎಚ್ಐವಿ ಎನ್ನುವುದು ಯಾಕೆ ಬರ್ತೈತಿ.
ಹೆಚ್ಐವಿ- ಹ್ಯೂಮನ್ ಇಮಿನೋ ಡಿಫಿಷಿಎನ್ಸಿ ವೈರಸ್
ಎಂದರೆ ಮನುಷ್ಯನ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುವ ವೈರಾಣು. ಈ ವೈರಾಣು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತಾ ಹೋಗುತ್ತದೆ. ಹೀಗೆ ಹಲವು ರೋಗಗಳಿಗೆ ಒಳಗಾಗುವ ಸ್ಥಿತಿಯನ್ನು’ ಏಡ್ಸ್ ‘ ಅಕ್ವಾಯ್ಡ್ ಇಮಿನೋ ಡಿಫಿಷಿಯನ್ಸಿ ಸಿಂಡೊರಂ ಎನ್ನುತ್ತಾರೆ.
ಎಚ್ಐವಿ ಸೋಂಕು ಕೇವಲ ನಾಲ್ಕು ವಿಧಾನಗಳಲ್ಲಿ ಹರಡುತ್ತದೆ.
1) ಎಚ್ಐವಿ ಸೋಂಕು ಶೇಕಡ 87 ರಕ್ಕಿಂತಲೂ ಹೆಚ್ಚು ಅಸುರಕ್ಷಿತ ಕಾಂಡೋಮ್ ರಹಿತವಾಗಿ ಲೈಂಗಿಕ ಸಂಬಂಧ ಮೂಲಕ ಹರಡುತ್ತದೆ.
2) ಎಚ್ಐವಿ ಸೋಂಕಿತ ರಕ್ತವನ್ನು ಪರೀಕ್ಷೆ ಮಾಡದೆ ಪಡೆಯುವುದರಿಂದ ಹರಡುತ್ತದೆ.
3) ಎಚ್ಐವಿ ಸೋಂಕಿತ ತಾಯಿಯಿಂದ ಮಗುವಿಗೆ ಗರ್ಭಾವಸ್ಥೆಯಲ್ಲಿ ಹೆರಿಗೆ ಸಮಯದಲ್ಲಿ ಅಥವಾ ಎದೆ ಹಾಲಿನ ಮೂಲಕ ಬಂದಿರುತ್ತದೆ.
4) ಎಚ್ಐವಿ ಸೋಂಕಿತ ಸೂಜಿ ,ಸಿರೇಂಜು ಹರಿತವಾದ ಸಲಕರಣೆಗಳನ್ನು ಸಂಸ್ಕರಿಸದೆ ಬಳಸುವುದರಿಂದ ಹರಡುತ್ತದೆ.
ಈ ನಾಲ್ಕು ವಿಧಾನಗಳನ್ನು ಹೊರತುಪಡಿಸಿ ಬೇರೆ ಯಾವುದೇ ಮಾರ್ಗದಿಂದ ಹೆಚ್ಐವಿ ರೋಗವು ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದಿಲ್ಲ.
ಭಾರತ ದೇಶದಲ್ಲಿ ಎಚ್ಐವಿ ಪ್ರಕರಣವು ಮೊಟ್ಟ ಮೊದಲು ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಕಂಡುಬಂದಿತ್ತು ತದನಂತರ 1987ರಲ್ಲಿ ಕರ್ನಾಟಕದ ಸೌದತ್ತಿ ಪಟ್ಟಣದಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು .
ದೇಶದಲ್ಲಿ ಎಚ್ಐವಿ ಸೋಂಕು, ಅತಿ ವೇಗವಾಗಿ ಹರಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಮಂಡಳಿಯನ್ನು ಸ್ಥಾಪಿಸಿ ಅದಕ್ಕೆ ಸಾಕಷ್ಟು ಅನುದಾನವನ್ನು ನೀಡಿ ಸೋಂಕು ಹತೋಟಿಗೆ ತರುವ ಪ್ರಯತ್ನಕ್ಕೆ ಮುಂದಾಗಿದೆ ,ಅದರಲ್ಲಿ ಸಾಕಷ್ಟು ಯಶಸ್ಸನ್ನು ಕಂಡಿದೆ. ಆದಾಗ್ಯೂ
ಮಾಹಿತಿ ಕೊರತೆಯಿಂದ ಹೆಚ್ಐವಿ ಬಗ್ಗೆ ಇನ್ನೂ ಅನೇಕ ಜನರು ಅನಗತ್ಯವಾಗಿ ಭಯಪಡುತ್ತಾರೆ.
ಸೋಂಕಿತರೊಂದಿಗೆ ಬದುಕಲು ಭಯಪಡುತ್ತಾರೆ ಹಾಗೂ ಸೋಂಕಿತರೊಂದಿಗೆ ಕಳಂಕ ಮತ್ತು ತಾರತಮ್ಯದಿಂದ ನಡೆದುಕೊಳ್ಳುತ್ತಿರುವುದು ಕಾಣಬಹುದು. ಆದ್ದರಿಂದ ಎಚ್ಐವಿ ರೋಗವನ್ನು ತಡೆಯಲು ಸೂಕ್ತ ಮಾಹಿತಿಯ ಕೊರತೆಯಿದೆ ಎಂದೇ ಹೇಳಬಹುದು.
ಕೇವಲ ಮಾನವನ ದೇಹದಲ್ಲಿ ಮಾತ್ರ ಜೀವಿಸಬಹುದಾದ ಹರಡುವಿಕೆಯು ಶೇಕಡಾ 87 ರಷ್ಟು ಅಸುರಕ್ಷಿತ ಲೈಂಗಿಕ ಸಂಪರ್ಕದಿಂದಲೇ ಹರಡುತ್ತದೆ. ಎಂದು ವೈಜ್ಞಾನಿಕವಾಗಿ ಧ್ರೃಡಪಟ್ಟಿರುವುದರಿಂಧ ಮತ್ತು ಈ ರೋಗವು ಶಾಶ್ವತವಾಗಿ ಗುಣಪಡಿಸಲಾಗದೆ ಇರುವುದರಿಂದ ಇಂದಿಗೂ ವೈದ್ಯ ಲೋಕಕ್ಕೆ ಸವಾಲಾಗಿದೆ.
ಇನ್ನುಳಿದ ಶೇಕಡ 13% ರಷ್ಟು ಹರಡದಂತೆ ಸೋಂಕಿತ ತಾಯಿಯಿಂದ ಮಗುವಿಗೆ ಮತ್ತು ಮುಂಜಾಗ್ರತೆ ವಹಿಸದೆ ಸಂಸ್ಕರಿಸಲ್ಪಡದ ಸೂಜಿ ಸೀರೆಂಜುಗಳಿಂದ ಮಾದಕ ದ್ರವ ಇಂಜೆಕ್ಷನ್ ಮುಖಾಂತರ ಪಡೆಯುವುದು ಮತ್ತು ಸೋಂಕು ಪತ್ತೆ ಹಚ್ಚದ ರಕ್ತ ಪಡೆಯುವುದರಿಂದ ಹರಡುವ ಸಾಧ್ಯತೆಗಳಿರುತ್ತದೆ .ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದು ಬಹು ಮುಖ್ಯವಾಗಿದೆ.
ಅಸುರಕ್ಷಿತ ಲೈಂಗಿಕ ಸಂಬಂಧ ಮತ್ತು ಬಹು ಸಂಗಾತಿಯಿಂದ ಬಹುಬೇಗನೆ ಹರಡಬಲ್ಲ ಎಚ್ಎವಿ ರೋಗವನ್ನು ಕಳಂಕ ಮತ್ತು ತಾರತಮ್ಯದಿಂದ ಕಾಣುತ್ತಿರುವದರಿಂದ ಸೋಂಕಿತರು ಬೆಳಕಿಗೆ ಬರದೆ ಇರುವುದು ಕಾಣಬಹುದು.
ಸೋಂಕಿತನು ತಪಾಸಣೆ ಮತ್ತು ಚಿಕಿತ್ಸೆಗೆ ಒಳಪಡದೆ ಲೈಂಗಿಕ ಸಂಬಂಧ ರೋಗಗಳನ್ನು ಗುಪ್ತವಾಗಿರಿಸಿಕೊಂಡು ಇರುವದರಿಂದ ಇತರರಿಗೆ ತೀವ್ರಗತಿಯಲ್ಲಿ ಹರಡುತ್ತಿರುವುದು ವಾಸ್ತವದ ಸಂಗತಿ .ಕಳಂಕ ಮತ್ತು ತಾರತಮ್ಯ ಹೋಗಲಾಡಿಸುವುದು ಬಹು ಮುಖ್ಯ .ಈ ನಿಟ್ಟಿನಲ್ಲಿ ಅತಿ ಹೆಚ್ಚು ಜಾಗೃತಿ ಅವಶ್ಯಕ.
ಎಚ್ಐವಿ ಹರಡುವಿಕೆ ಹತೋಟಿಗೆ ತರಲು ಕೈಗೊಳ್ಳಬೇಕಾದ ಉಪಾಯಗಳು.
ಹದಿ ಹರೆಯದ ಶಾಲಾ-ಕಾಲೇಜು ಮತ್ತು ಎಲ್ಲಾ ವರ್ಗದ ಮಕ್ಕಳಲ್ಲಿ ಆರೋಗ್ಯದ ಅರಿವು ಮೂಡಿಸುವುದು ಲೈಂಗಿಕ ಶಿಕ್ಷಣ ಅಂದರೆ ಪ್ರೌಢಾವಸ್ಥೆಯಲ್ಲಿನ ದೇಹ ಮತ್ತು ಮಾನಸಿಕ ಬದಲಾವಣೆ ಅವುಗಳ ನಿಯಂತ್ರಣದ ಬಗ್ಗೆ ಕೂಲಂಕುಷವಾಗಿ ಮಾಹಿತಿ ನೀಡಬೇಕು ಮತ್ತು ಅಮೂಲ್ಯ ಸಂಪತ್ತಿನಂತಹ ಪ್ರೌಢಾವಸ್ದೆ ಕಾಪಾಡಿಕೊಳ್ಳಲು ಮಾನವೀಯ ಮೌಲ್ಯ, ಜೀವನದ ಮಹತ್ವ ,ಸಾಮಾಜಿಕ ಜವಾಬ್ದಾರಿ ಮುಂತಾದ ವಿಷಯಗಳ ಬಗ್ಗೆ ಮನದಟ್ಟಣೆ ಯಾಗುವಂತೆ ತಿಳಿಸಬೇಕು.
ಇದರಿಂದ ಯುವ ಪೀಳಿಗೆಯೂ ದುಶ್ಚಟಗಳಿಗೆ ಬಲಿಯಾಗದಂತೆ ತಡೆಯಲು ಸಾಧ್ಯವಾಗುತ್ತದೆ.
ಯೌವ್ವನ ಬಂದಾಗ ಜ್ಯೊಕ್ಯಾಗಿರಬೇಕ
ದುಶ್ಚಟಗಳಿಂದ ಬಹು ದೂರಿರಬೇಕ
ಸಜ್ಜನರ ಸಂಗದಲ್ಲಿ ನೀ ಕೂಡಿ ಇರಬೇಕ
ದುರ್ಜನರ ಸಹವಾಸದಿಂದ ನೀ ದೂರ ಇರಬೇಕ
ಯೌವ್ವನವೆಂಬುದು ಬಹುದೊಡ್ಡ ಆಸ್ತಿ
ಕಳಕೊಂಡು ದಾರಿದ್ರ್ಯ ನೀನಾಗಬೇಡ
ಕಾಲು ಜಾರುವ ಮುನ್ನ ಕೈತಪ್ಪಿ ಹೋಗುವ ಮುನ್ನ ಎಚ್ಚರದಿಂದ ನೀ ಇರಬೇಕ.
ಮಧ್ಯಮ ವಯಸ್ಸಿನವರು ಅಸುರಕ್ಷಿತ ಲೈಂಗಿಕ ಸಂಬಂಧ ಮತ್ತು ಬಹು ಸಂಗಾತಿಯರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿರುವುದು ಸರ್ವ ಸಾಮನ್ಯವಾಗಿದೆ .ಇಂತಹ ವಯೋಮಾನದವರಿಗೆ ಎಚ್ಎಐವಿ , ಎಸ್ ಟಿ ಐ, ಆರ್ ಟಿ ಐ ಮುಂತಾದ ರೋಗಗಳ ಬಗ್ಗೆ ಅರಿವು ಮೂಡಿಸಬೇಕು. ಲೈಂಗಿಕ ಕಾರ್ಯಕರ್ತರು, ವಲಸಿಗರು ,ಅಲೆಮಾರಿ ಜನಾಂಗದವರು, ವಿಚ್ಛೇದಿತ ಕುಟುಂಬದ ಸದಸ್ಯರು, ವಿಕೃತಕಾಮಿಗಳು ಮುಂತಾದ ಜನರಿಗೆ ಲೈಂಗಿಕ ಸುರಕ್ಷಾ ಕ್ರಮಗಳ ಬಗ್ಗೆ ಕಡ್ಡಾಯವಾಗಿ ತಿಳಿಸತಕ್ಕದ್ದು.
ನೆಮ್ಮದಿಯಿಂದ ಬದುಕಲು ಬಿಡದ ಎಚ್ಐವಿ ರೋಗವು ಬಿರುಗಾಳಿಯಂತೆ ಹಬ್ಬಿದೆ ಅರಿವಿನ ಕೊರತೆಯಲ್ಲಿ ಜೀವಗಳು ನಲುಗಿ ಹೋಗಿವೆ.
ಮುತ್ತಿನಂತ ಮಾತೊಂದು ಹೇಳ್ತೀನಿ ನಾನ,
ಚಿತ್ತ ಇಟ್ಟು ಕೇಳಿರಿ ನೀವು ಕುಂತ ಜನ ,
ಆರೋಗ್ಯವೇ ಮಹಾಭಾಗ್ಯ ಅಂತ ಹೇಳ್ತಾರೆ ಗುರು ಹಿರಿಯ ಜನ
ವ್ಯಸನಕ್ಕೆ ಬಲಿಯಾಗಬೇಡಿ ಅಂತ ಕೈಮುಗಿದು ಕೇಳುವೆನು ನಾನ ,
ಸ್ವಸ್ಥ ಭಾರತಕ್ಕೆ ಕೈಜೋಡಿಸೋಣ ಎಚ್ಐವಿ ಏಡ್ಸ್ ಕೊನೆಗೊಳಿಸೋಣ
ಮಾನವನ ಜನ್ಮ ಇದು ದೇವರ ವರದಾನ
ಯೌವ್ವನವೆಂಬದು ಇರಲಿ ಬಹಳ ಜೋಪಾನ
ಕಂಡ ಕಂಡವರು ಹಾಕುವರು ಇದರ ಮೇಲೆ ಕಣ್ಣ, ಬಂಗಾರದಂತ ಬದುಕು ಆಗುವುದು ಮಣ್ಣ, ಸ್ವಸ್ಥ ಭಾರತಕ್ಕೆ ಕೈಜೋಡಿಸೋಣ ,ಎಚ್ಐವಿ ಏಡ್ಸ್ ಕೊನೆಗೊಳಿಸೋಣ.
ಭಾರತ ಸರ್ಕಾರವು ಅಂದಾಜು 2.40 ಮಿಲಿಯನ್ ಭಾರತೀಯರು ಎಚ್ಐವಿ 1.93 ರಿಂದ 3.04 ಮಿಲಿಯನ್ ಜೊತೆಗೆ 0.31% ವಯಸ್ಕರಲ್ಲಿ ಹರಡುವುಕೆಯಿಂದ ವಾಸಿಸುತ್ತಿದ್ದಾರೆ . ಮಕ್ಕಳು 15 ವರ್ಷಗಳ ಮೇಲ್ಪಟ್ಟು ಎಲ್ಲ ಸೋಂಕುಗಳಲ್ಲಿ 3.5ಷ್ಟಿದ್ದರೆ ಆದರೆ 83% ರಷ್ಟು 15 ರಿಂದ 49 ವಯಸ್ಸಿನವರು ಎಲ್ಲಾ ಎಚ್ಐವಿ ಸೋಂಕುಗಳಲ್ಲಿ 39% ಮಹಿಳೆಯರಲ್ಲಿ ಇದೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ಸಾಂಕ್ರಾಮಿಕ ಎಚ್ಐವಿ ಹೆಚ್ಚಿನ ಅಪಾಯದಲ್ಲಿರುವ ದುರ್ಬಲ ಜನಸಂಖ್ಯೆಯ ನಡುವೆ ಕೇಂದ್ರೀಕೃತವಾಗಿದೆ .
ಲೈಂಗಿಕ ಕಾರ್ಯಕರ್ತರು ಮತ್ತು ಅವರ ಗ್ರಾಹಕರ ನಡುವಿನ ಅಸುರಕ್ಷಿತ ಲೈಂಗಿಕ ಸಂಬಂಧ ಮತ್ತು ಕಲುಷಿತ ಚುಚ್ಚುಮದ್ದಿನ ಉಪಕರಣಗಳೊಂದಿಗೆ ಮಾದಕ ದ್ರವ್ಯದ ಬಳಕೆಯಿಂದ ಕೇಂದ್ರೀಕೃತ ಸಾಂಕ್ರಾಮಿಕ ರೋಗಗಳು ನಡೆಸಲ್ಪಡುತ್ತವೆ. ಅಪಾಯದಲ್ಲಿರುವ ಹಲವಾರು ಗುಂಪುಗಳು ಹೆಚ್ಚಿನ ಮತ್ತು ಇನ್ನು ಹೆಚ್ಚುತ್ತಿರುವ ಎಚ್ಐವಿ ಹರಡುವಿಕೆಯ ಪ್ರಮಾಣವನ್ನು ಹೊಂದಿದೆ .ಭಾರತೀಯ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯ ಪ್ರಕಾರ, ಭಾರತದಲ್ಲಿ ಹೆಚ್ಚಿನ ಎಚ್ಐವಿ ಸೋಂಕುಗಳು ಅಸುರಕ್ಷಿತ ಭಿನ್ನಲಿಂಗಿ ಸಂಭೋಗದ ಸಮಯದಲ್ಲಿ ಸಂಭವಿಸುತ್ತವೆ.
ಕರ್ನಾಟಕ ರಾಜ್ಯದಲ್ಲಿ ಎಚ್ಐವಿ ಮತ್ತು ಏಡ್ಸ್ ಕಡಿಮೆಗೊಳಿಸಲು ಮತ್ತು ಹೊಸ ಪ್ರಕರಣಗಳು ಬೆಳೆಯದಂತೆ ಕರ್ನಾಟಕ ರಾಜ್ಯ ಏಡ್ಸ್ನ ಪ್ರಿವೆನ್ಷನ್ ಸೊಸೈಟಿಯ ಮಾಹಿತಿ ಶಿಕ್ಷಣ ಸಂವಹನ ವಿಭಾಗವು ರಾಜ್ಯಾದ್ಯಂತ ಎಚ್ಐವಿ ಏಡ್ಸ್ ಕುರಿತಾಗಿ ಜಾಗೃತಿ ಮೂಡಿಸಲು ಶ್ರಮಿಸುತ್ತಿದೆ .
ಮಾಹಿತಿ ಮತ್ತು ಸಂವಹನ ವಿಭಾಗದ ಕಾರ್ಯತಂತ್ರಗಳು ತಡೆ ಮತ್ತು ನಿರ್ಮೂಲನೆ ಪೂರಕವಾದ ಮತ್ತು ಬೆಂಬಲಿತ ವಾತಾವರಣವನ್ನು ಸೃಷ್ಟಿಸುವ, ಈ ನಿಟ್ಟಿನಲ್ಲಿ ಸಮುದಾಯ ಹಾಗೂ ಯುವಜನತೆ ಮತ್ತು ಮಹಿಳೆಯರಲ್ಲಿ ಅರಿವು ಮೂಡಿಸಿ ಸರಿಯಾದ ಮಾಹಿತಿಯನ್ನು ನೀಡುವ ಮೂಲಕ ಅವರನ್ನು ಸುರಕ್ಷಿತ ಲೈಂಗಿಕ ನಡವಳಿಕೆಯನ್ನು ಅಳವಡಿಸಿಕೊಳ್ಳುವುದರಲ್ಲಿ ಸೂಕ್ತವಾದ ನಿರ್ಧಾರಗಳನ್ನು ಸಶಕ್ತರನ್ನಾಗಿಸುವ ಗುರಿಯನ್ನು ಹೊಂದಿದೆ.
ತಪ್ಪು ಅಭಿಪ್ರಾಯವನ್ನು ಹೋಗಲಾಡಿಸಿ ಎಚ್ಬಐವಿ ಸೋಂಕಿತರೊಂದಿಗೆ ಬದುಕುತ್ತಿರುವವರನ್ನು ಕಳಂಕಿತರನ್ನಾಗಿ ಮತ್ತು ತಾರತಮ್ದೆಯಿಂದ ನೋಡುವ ಮನೋಭಾವನೆಯನ್ನು ಹೋಗಲಾಡಿಸುವ ಉದ್ದೇಶವನ್ನು ಹೊಂದಿದೆ . ಕರ್ನಾಟಕವು ದೇಶದಲ್ಲಿ 9ನೇ ಅತಿ ಹೆಚ್ಚು ಎಚ್ಐವಿ ಸೋಂಕಿತರನ್ನು ಹೊಂದಿದೆ , ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ ನಾಗಾಲ್ಯಾಂಡ್ ಅತಿ ಹೆಚ್ಚು ಎಚ್ಐವಿ ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಆಗ್ರ ಸ್ಥಾನದಲ್ಲಿದೆ .ಕರ್ನಾಟಕ ಒಂಬತ್ತನೇ ಸ್ಥಾನದಲ್ಲಿದೆ .ಮಿಜೋರಾಂ ,ಮೇಘಾಲಯ, ದೆಹಲಿ ,ತ್ರಿಪುರಾ,ಚಂಡಿಗಡ್, ಆಂಧ್ರಪ್ರದೇಶ, ಮಣಿಪೂರಕ, ಈ ರಾಜ್ಯಗಳು ಭಾರತ ದೇಶದಲ್ಲಿ ಅತಿ ಹೆಚ್ಚು ಎಚ್ಐವಿ ಸೋಂಕಿತ ವ್ಯಕ್ತಿಯನ್ನು ಹೊಂದಿರುತ್ತವೆ.
ಹೆಚ್ಐವಿ ರೋಗವು ಶಾಪಗ್ರಸ್ತ ರೋಗವಲ್ಲ. ಈ ರೋಗವು ನಮ್ಮ ನಡವಳಿಕೆಯ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ಸುರಕ್ಷಾ ಕ್ರಮವನ್ನು ವಹಿಸದೆ ಬೇಜವಾಬ್ದಾರಿತನದಿಂದ ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಾಗಿದೆ ಎಚ್ಐವಿ ರೋಗಕ್ಕೆ ಜಾಗೃತಿಯೇ ದಿವ್ಯ ಔಷಧ.
2030 ರ ವರೆಗೆ ಎಚ್ಐವಿ ಮುಕ್ತ ಭಾರತ ನಿರ್ಮಾಣ ಮಾಡಲು ಪ್ರತಿಯೊಬ್ಬ ವ್ಯಕ್ತಿ ಎಚ್ಐವಿ ಸ್ಥಿತಿಯನ್ನು ತಿಳಿದುಕೊಳ್ಳಲು ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು ಇದು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಐಸಿಟಿಸಿ ಕೇಂದ್ರಗಳು ಲಭ್ಯವಿದ್ದು ಇಲ್ಲಿ ಉಚಿತ ಪರೀಕ್ಷೆಯನ್ನು ಮಾಡಲಾಗುತ್ತದೆ ಎಚ್ಐವಿ ರೋಗವು ಬರದಂತೆ ಪ್ರತಿಯೊಬ್ಬ ಮನುಷ್ಯನು ಮದುವೆಗೆ ಮುಂಚೆ ಬ್ರಹ್ಮಚರ್ಯ ಪಾಲಿಸುವುದು ಮತ್ತು ಅನೈತಿಕ ಲೈಂಗಿಕ ಸಂಬಂಧಗಳಲ್ಲಿ ತೊಡಗದೆ ಇರುವುದು ಸುರಕ್ಷಿತ ಲೈಂಗಿಕ ಕ್ರಿಯೆಗಳನ್ನು ಚಾಚು ತಪ್ಪದೇ ಅನುಸರಿಸುವುದು ಯುವಜನತೆಯಲ್ಲಿ ಜಾಗೃತಿ ಮೂಡಿಸುವುದು ಮುಂತಾದವುಗಳಿಂದ ಹೊಸ ಪ್ರಕರಣಗಳು ಬರದಂತೆ ಮಾಡಲು ಸಾಧ್ಯವಾಗುತ್ತದೆ ಸೋಂಕಿತರು ಸಾಮಾನ್ಯರಂತೆ ಬದುಕಲು ಸಮಾಜದಲ್ಲಿ ಅವರಿಗೆ ಕಳಂಕ ಮತ್ತು ತಾರತಮ್ಯ ದೃಷ್ಟಿಯಿಂದ ನೋಡದೆ ಬದುಕಿ ಬದುಕಲು ಬಿಡಿ ಎನ್ನುವ ನಾನ್ನುಡಿಯಂತೆ ಅವರಲ್ಲಿ ಆತ್ಮಸ್ಥೈರ್ಯ ತುಂಬುವುದು ಅತಿ ಮುಖ್ಯ ವಾಗಿದೆ.
ಶೇಕಡ 90ರಷ್ಟು ಎಚ್ಐವಿ ಸೋಂಕು ಇರುವ ವ್ಯಕ್ತಿಗಳು ತಮ್ಮ ಎಚ್ಐವಿ ಸ್ಥಿತಿ ತಿಳಿದಿರಬೇಕು, ಅಂದರೆ ವೈದ್ಯರ ಸಲಹೆಯಂತೆ ಅವರು ಸಿಡಿ4 ಪರೀಕ್ಷೆಗಳನ್ನು ಮಾಡಿಸಿಕೊಂಡು ರೋಗದ ಸ್ಥಿತಿಯನ್ನು ತಿಳಿದುಕೊಳ್ಳಬೇಕು, ಶೇಕಡ 90ರಷ್ಟು ಎ ಆರ್ ಟಿ ಚಿಕಿತ್ಸೆ ಪಡೆಯುತ್ತಿರುವವರು ತಮ್ಮ ವೈರಲ್ ರೋಡ್ ಪ್ರಮಾಣ ಹೆಚ್ಚಾಗದಂತೆ ಜಾಗೃತಿ ವಹಿಸಬೇಕು, ವೈದ್ಯರ ಸಲಹೆಯಂತೆ ವೈರ ಲೋಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು.ಹೀಗೆ ಎಲ್ಲಾ ಅನುಸರಣೆಗಳನ್ನು ಪಾಲಿಸಿಕೊಂಡು ದೈನಂದಿನ ಜೀವನದಲ್ಲಿ ಉತ್ತಮ ಆಹಾರ ಯೋಗ ,ಪ್ರಾಣಾಯಾಮ, ಧ್ಯಾನ, ಮತ್ತು ಸಾತ್ವಿಕ ಜೀವನವನ್ನು ನಡೆಸಿದಲ್ಲಿ ಎಚ್ಐವಿ ಸೋಂಕಿತರು ಸಾಮಾನ್ಯರಂತೆ ದೀರ್ಘಕಾಲಿನವರಿಗೆ ಬದುಕಲು ಖಂಡಿತ ಸಾಧ್ಯವಾಗುತ್ತದೆ ಆದ್ದರಿಂದ ಎಚ್ಐವಿ ಬಗ್ಗೆ ಅನಗತ್ಯ ಹೆದರಿಕೆ ಬೇಡ .ಹೆಚ್ಐವಿ ಯಿಂದ ಕಾಪಾಡಿಕೊಳ್ಳಲು ಮತ್ತು ಬಂದ ಮೇಲೆ ಅದರೊಂದಿಗೆ ಜೀವಿಸುವುದನ್ನು ಕಲಿಯಬೇಕು ಹೀಗೆ ಎಲ್ಲಾ ಸಮುದಾಯದ ಜನರು ಅನುಸರಿಸಿದಲ್ಲಿ 2030 ರವರೆಗೆ ಎಚ್ಐವಿ ಮುಕ್ತ ಭಾರತವನ್ನು ಮಾಡಲು ಸಾಧ್ಯವಾಗುತ್ತದೆ ಬನ್ನಿ ಎಚ್ಐವಿ ಮುಕ್ತ ಭಾರತಕ್ಕೆ ಕೈ ಜೋಡಿಸೋಣ.
– ಅರವಿಂದ ಕುಲಕರ್ಣಿ
ಪ್ರಯೋಗಶಾಲಾ ತಂತ್ರಜ್ಞ ಅಧಿಕಾರಿ
ಐಸಿಟಿಸಿ ಕೇಂದ್ರ.ಬ್ರೀಮ್ಸ್ ಬೀದರ,