ಹೌ ಟು ಟಾಕ್ ಸೊ ಕಿಡ್ಸ್ ವಿಲ್ ಲಿಸನ್ ಅಂಡ್ ಲಿಸನ್ ಸೋ ಕಿಡ್ಸ್ ವಿಲ್ ಟಾಕ್’ …. ಕೃತಿಯ ಕುರಿತು.
ಮಕ್ಕಳಲ್ಲಿ ಕೇಳಿಸಿಕೊಳ್ಳುವ ಮತ್ತು ಮಾತನಾಡುವ ಕಲೆಯನ್ನು ಬೆಳೆಸುವ ಪಾಲಕತ್ವದ ಕುರಿತಾದ ಒಂದು ಕೃತಿ “ಹೌ ಟು ಟಾಕ್ ಸೊ ಕಿಡ್ಸ್ ವಿಲ್ ಲಿಸನ್ ಅಂಡ್ ಲಿಸನ್ ಸೋ ಕಿಡ್ಸ್ ವಿಲ್ ಟಾಕ್” ಎಂಬುದಾಗಿದೆ. ಈ ಕೃತಿ ಅಡೆಲ್ ಫೇಬರ್ ಮತ್ತು ಎಲೈನ್ ಮ್ಯಾಜ್ಲಿಸ ಅವರು ಬರೆದಿದ್ದಾರೆ.
‘ ಅಯ್ಯೋ! ನಮ್ಮ ಮಕ್ಕಳು ನಮ್ಮ ಮಾತನ್ನ ಕೇಳೋದೇ ಇಲ್ಲ’ ಎಂದು ಬಹಳಷ್ಟು ಬಾರಿ ಆಪಾದಿಸುವ ಪಾಲಕರ ಮಾತನ್ನು ನಾವು ಅಲ್ಲಲ್ಲಿ ಕೇಳುತ್ತಲೇ ಇದ್ದೇವೆ.
‘ಅಯ್ಯೋ ನಮ್ಮ ಪಾಲಕರಿಗೆ ನಮ್ಮ ಭಾವನೆಗಳು ಅರ್ಥ ಆಗೋದೇ ಇಲ್ಲ… ಕುಳಿತು ಕೇಳಿದ್ರೆ ತಾನೇ ಅರ್ಥ ಆಗೋದು’ ಎಂಬ ಮಕ್ಕಳ ಗೊಣಗಾಟಗಳನ್ನು ಕೂಡ ನಾವು ನೋಡಿದ್ದೇವೆ.
ಹೀಗೆ ಪಾಲಕರು ಮತ್ತು ಮಕ್ಕಳು ಪರಸ್ಪರ ಆರೋಪ ಮಾಡಲು ಕಾರಣ ಅವರಿಬ್ಬರ ನಡುವಿನಲ್ಲಿ ಇರುವ ಸಂವಹನದ ಕೊರತೆ ಎಂದರೆ ಅಚ್ಚರಿ ಇಲ್ಲ.
ಅನಾದಿಕಾಲದಿಂದಲೂ ಪಾಲಕರು ಮತ್ತು ಮಕ್ಕಳ ನಡುವೆ ಒಂದು ಅಗೋಚರ ಅಹಮಿಕೆಯ ತಂತು ಇದ್ದು ಮಕ್ಕಳಿಗೇನು ಗೊತ್ತಾಗುತ್ತೆ, ನಮ್ಮ ವಯಸ್ಸಿನ ಅನುಭವ ಅವರಿಗೆ ಇದೆಯೇ ? ಎಂದು ಪಾಲಕರು ಕೇಳಿದರೆ ಮಕ್ಕಳು ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮ್ಮು ? ಎಂದು ಅಲವತ್ತುಕೊಳ್ಳುತ್ತಾರೆ. ಇದೀಗ ಇವರಿಬ್ಬರ ಸಮಸ್ಯೆಯನ್ನು ಬಗೆಹರಿಸುವ ಮೂಲಕ ಪಾಲಕರು ಮತ್ತು ಮಕ್ಕಳ ನಡುವಿನ ಭಾವನಾತ್ಮಕ ಅಂತರವನ್ನು ದೂರ ಮಾಡುವ ಪ್ರಯತ್ನವನ್ನು ಹೊಂದಿರುವ ಈ ಕೃತಿ ನಮ್ಮ ಮುಂದಿದೆ.
ಮಕ್ಕಳಲ್ಲಿ ಕೇಳಿಸಿಕೊಳ್ಳುವ ಮತ್ತು ಮಾತನಾಡುವ ಕಲೆಯನ್ನು ಬೆಳೆಸುವ ಪಾಲಕತ್ವದ ಕುರಿತಾದ ಒಂದು ಕೃತಿ “ಹೌ ಟು ಟಾಕ್ ಸೊ ಕಿಡ್ಸ್ ವಿಲ್ ಲಿಸನ್ ಅಂಡ್ ಲಿಸನ್ ಸೋ ಕಿಡ್ಸ್ ವಿಲ್ ಟಾಕ್” ಎಂಬ ಕೃತಿಯ ರಚನೆಕಾರರಾದ ಅಡೆಲ್ ಫೇಬರ್ ಮತ್ತು ಎಲೈನ್ ಮ್ಯಾಜ್ಲಿಸ ತಮ್ಮ
ಪ್ರಾಯೋಗಿಕ ಸಂವಹನ ಮಕ್ಕಳ ಮತ್ತು ಪಾಲಕರ ನಡುವಿನ ಮಾತುಕತೆಯಲ್ಲಿ ಹೇಗಿರಬೇಕು ಎಂಬುದರ ಕುರಿತು ಹೇಳಿದ್ದು ಪ್ರಸ್ತುತ ಈ ಕೃತಿ ಪಾಲಕತ್ವದ ಮಹತ್ವವನ್ನು ಪಾಲಕರು ಮತ್ತು ಮಕ್ಕಳ ಸಂಬಂಧ ವೃದ್ಧಿಯಲ್ಲಿ ಪಾಲಕರು ಕೈಗೊಳ್ಳಬಹುದಾದ ಕಾರ್ಯಗಳ ಕುರಿತ ವಿವರಗಳನ್ನು ನಾವಿಲ್ಲಿ ಕಾಣಬಹುದು.
ಪುಸ್ತಕದ ಕೆಲ ಪಾಠಗಳು ಇಂತಿವೆ.
೧ . ಮಕ್ಕಳ ಭಾವನೆಗಳನ್ನು ಅರಿತುಕೊಳ್ಳಬೇಕು. ಇಲ್ಲಿ ಕರ್ತೃಗಳು ಮಕ್ಕಳ ಭಾವನೆಗಳನ್ನು ಅರಿತು ಅದಕ್ಕೆ ಸೂಕ್ತವಾಗಿ ಸ್ಪಂದಿಸುವ ಮೂಲಕ ಅವರನ್ನು ಗೌರವಿಸಬೇಕು… ಇದು ಮಕ್ಕಳ ಮತ್ತು ಪಾಲಕರ ನಡುವಿನ ಮುಕ್ತ ಸಂವಹನಕ್ಕೆ ಅತ್ಯುತ್ತಮ ದಾರಿಯಾಗುತ್ತದೆ.
೨. ವಿವರಣಾತ್ಮಕ ಭಾಷೆಯನ್ನು ಬಳಸಬೇಕು… ಮಕ್ಕಳ ಕ್ರಿಯೆಗಳನ್ನು ಸೋಮಾರಿತನ, ಮಳ್ಳು, ಸೊಕ್ಕು ಧಿಮಾಕು ಎಂದೆಲ್ಲಾ ಹಣೆಪಟ್ಟಿ ಹಚ್ಚದೆ, ಅವರ ನಡವಳಿಕೆಯನ್ನು ವಿಪರೀತ ಖಂಡಿಸದೆ ಅವರು ಮಾಡುತ್ತಿರುವ ತಪ್ಪುಗಳನ್ನು ಆರೋಪಾತ್ಮಕ ಧ್ವನಿಯಲ್ಲಿ ಹೇಳದೆ ವಿವರಣಾತ್ಮಕವಾಗಿ ಅರ್ಥೈಸಿ ಪ್ರಸ್ತುತ ಅವರು ತಮ್ಮನ್ನು ತಾವು ಹೇಗೆ ಬದಲಿಸಿಕೊಳ್ಳಬಹುದು ಎಂಬುದನ್ನು ಸೂಕ್ಷ್ಮವಾಗಿ ತಿಳಿ ಹೇಳಬೇಕು.
೩.ತೊಂದರೆ ನಿವಾರಣೆಗೆ ಪ್ರೋತ್ಸಾಹ ಮಾಡಬೇಕು.. ಮಕ್ಕಳನ್ನು ಸಶಕ್ತರಾಗಿಸುವ ನಿಟ್ಟಿನಲ್ಲಿ ಅವರ ಎಲ್ಲ ತೊಂದರೆಗಳಿಗೆ ಪಾಲಕರೆ ಪರಿಹರಿಸಬಾರದು. ಮಕ್ಕಳು ತಮ್ಮ ಸಮಸ್ಯೆಗಳಿಗೆ ತಾವೇ ಪರಿಹಾರ ಹುಡುಕಿಕೊಳ್ಳುವ ನಿಟ್ಟಿನಲ್ಲಿ ಸಲಹೆ ನೀಡುವ ಮೂಲಕ, ಮಾರ್ಗದರ್ಶನ ನೀಡಬೇಕು. ಇದು ಮಕ್ಕಳಲ್ಲಿ ವಿವೇಚನ ಶಕ್ತಿ ಬೆಳೆಯುವಲ್ಲಿ ಸಹಕಾರಿ ಮತ್ತು ಮಕ್ಕಳು ಇದರಿಂದ ಆತ್ಮ ನಿರ್ಭರರಾಗುತ್ತಾರೆ.
೪.ಇತರ ಆಯ್ಕೆಗಳು… ಮಕ್ಕಳಲ್ಲಿ ಸ್ವಂತಿಕೆ ಮತ್ತು ಜವಾಬ್ದಾರಿಯ ಪ್ರಜ್ಞೆ ಹುಟ್ಟಲು ಇತರ ಆಯ್ಕೆಗಳನ್ನು, ಅವಕಾಶಗಳನ್ನು ತೋರಬೇಕು. ಇದು ಮಕ್ಕಳಲ್ಲಿ ಮುಕ್ತವಾಗಿ ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ಜೊತೆಗೆ ಸಹಕರಿಸುವ ಮತ್ತು ಹೊಂದಾಣಿಕೆಯ ಮನೋಭಾವವನ್ನು ಕೂಡ ಬೆಳೆಸುತ್ತದೆ.
ಪಾಲಕತ್ವದ ಅಹಮಿಕೆ ಬೇಡ…. ನಾವು ಹಿರಿಯರು ಮಕ್ಕಳು ನಮ್ಮ ಮಾತನ್ನು ಕೇಳಲೇಬೇಕು, ನಮಗೆ ಗೌರವ ಕೊಡಲೇಬೇಕು ಎಂಬ ಅಹಮಿಕೆ ಖಂಡಿತ ಬೇಡ. ಪಾಲಕರು ಮತ್ತು ಮಕ್ಕಳು ಪರಸ್ಪರ ಗೌರವ ಭಾವನೆ ಮತ್ತು ಅರ್ಥಮಾಡಿಕೊಳ್ಳುವಿಕೆಯ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಬೇಕು ಮತ್ತು ಆ ಮೂಲಕ ಕ್ಲಿಷ್ಟ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು.
೬. ಮಕ್ಕಳಲ್ಲಿ ಧನಾತ್ಮಕ ಬಲ ಹೆಚ್ಚಲು ಅವಕಾಶ ವೀಯಬೇಕು… ಮಕ್ಕಳು ತೋರುವ ಧನಾತ್ಮಕ ಮತ್ತು ಒಳ್ಳೆಯ ನಡವಳಿಕೆಗಳನ್ನು ಗುರುತಿಸಿ ಅವರನ್ನು ಮುಕ್ತವಾಗಿ ಪ್ರಶಂಸಿಸಬೇಕು. ಇದು ಮಕ್ಕಳಲ್ಲಿ ಬಲವನ್ನು ಹೆಚ್ಚಿಸುವುದಲ್ಲದೆ ಮತ್ತಷ್ಟು ಉತ್ತಮ ನಡವಳಿಕೆಗಳನ್ನು ಹೊಂದಲು ಸ್ಪೂರ್ತಿಯನ್ನು ನೀಡುತ್ತದೆ ಎಂದು ಈ ಪುಸ್ತಕದಲ್ಲಿ ವಿಶೇಷವಾಗಿ ಚರ್ಚಿಸಲಾಗಿದೆ.
೭. ಲಕ್ಷ್ಯ ಕೊಡಿ…ಮಕ್ಕಳು ಏನನ್ನಾದರೂ ಹೇಳುವಾಗ ಮಧ್ಯದಲ್ಲಿ ಮಾತನ್ನು ತುಂಡರಿಸದೆ, ತೀವ್ರವಾಗಿ ಪ್ರತಿಕ್ರಿಯಿಸದೆ ಅವರ ಮಾತನ್ನು ಆಸಕ್ತಿಯಿಂದ,ಗಮನವಿಟ್ಟು ಕೇಳುವ ಮೂಲಕ ಅವರ ಯೋಚನೆ ಮತ್ತು ಅನಿಸಿಕೆಗಳನ್ನು ಗೌರವಿಸಿ. ಇದು ಪಾಲಕರು ಮತ್ತು ಮಕ್ಕಳ ನಡುವಿನ ನಂಬಿಕೆಯನ್ನು ಹೆಚ್ಚಿಸಿ ಮತ್ತಷ್ಟು ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ.
೮. ಮಕ್ಕಳ ಕುರಿತಾದ ನಿಮ್ಮ ನಿರೀಕ್ಷೆಗಳಲ್ಲಿ ಸ್ಪಷ್ಟತೆ ಇರಲಿ… ಈ ರೀತಿ ಸ್ಪಷ್ಟತೆ ಇದ್ದಾಗ ಮಕ್ಕಳೊಂದಿಗೆ ಸಂವಹನ ಅತ್ಯಂತ ಸುಲಭ ಸಾಧ್ಯವಾಗಿದ್ದು ಮಕ್ಕಳು ಕೂಡ ತಾವು ಏನು ಮಾಡಬೇಕು ಎಂಬುದರ ಕುರಿತು ಅತ್ಯಂತ ಸ್ಪಷ್ಟವಾದ ತಿಳುವಳಿಕೆಯನ್ನು ಹೊಂದುತ್ತಾರೆ. ಮಕ್ಕಳ ಕುರಿತಾದ ನಮ್ಮ ನಿರೀಕ್ಷೆಗಳನ್ನು ಯಾವ ರೀತಿ ಧನಾತ್ಮಕವಾಗಿ ವ್ಯಕ್ತಪಡಿಸಬೇಕು ಎಂಬುದನ್ನು ಈ ಪುಸ್ತಕವು ನಮಗೆ ತಿಳಿಹೇಳುತ್ತದೆ.
೯. ಹೊಂದಾಣಿಕೆ ಮನೋಭಾವವನ್ನು ರೂಡಿಸಿಕೊಳ್ಳಬೇಕು… ಯಾವತ್ತಿಗೂ ಮನೆಯಲ್ಲಿ ಸೌಹಾರ್ದಯುತ ವಾತಾವರಣ ಮತ್ತು ಹೊಂದಾಣಿಕೆ ಮನೋಭಾವ ಇರಬೇಕು ಎಂಬುದನ್ನು ಫೇಬರ್ ಮತ್ತು ಮೆಜೆಲಿಶ್ ಒತ್ತು ಕೊಟ್ಟು ಹೇಳುತ್ತಾರೆ. ಪರಸ್ಪರ ಸಹಕಾರ ಭಾವವನ್ನು ಹೊಂದಿರುವುದು ಕುಟುಂಬದಲ್ಲಿ ಬಹಳಷ್ಟು ಮುಖ್ಯ ಮತ್ತು ಅಂತಹ ವಾತಾವರಣದಲ್ಲಿ ಬೆಳೆಯುವ ಮಕ್ಕಳು ಯಾವುದೇ ಹಿಂಜರಿಕೆಗಳಿಲ್ಲದೆ ತಮ್ಮ ಮನಸ್ಸಿನ ಮಾತುಗಳನ್ನು ಅಭಿವ್ಯಕ್ತಿಸುವ ಮೂಲಕ ಸುರಕ್ಷಿತತೆಯನ್ನು ಅನುಭವಿಸುತ್ತಾರೆ.
೧೦.ನಿಮ್ಮ ನಡವಳಿಕೆ ಮಕ್ಕಳಿಗೆ ಮಾದರಿಯಾಗಿರಲಿ
ತಮ್ಮ ಮಕ್ಕಳೊಂದಿಗೆ ಮಾತುಕತೆ ನಡೆಸುವಾಗ ಪಾಲಕರ ನಡವಳಿಕೆ ಮಾದರಿಯದಾಗಿರಲಿ. ಗೌರವಪೂರ್ವಕ ಮತ್ತು ಸಹಾನುಭೂತಿಯುಳ್ಳ ಸಂವಹನ ಕಲೆಯನ್ನು ಕರಗತ ಮಾಡಿಕೊಂಡಿರುವ ಪಾಲಕರು ಮಕ್ಕಳ ಪಾಲಿಗೆ ಆದರ್ಶ ಮಾದರಿಗಳಾಗಬಲ್ಲರು.
ಒಟ್ಟಿನಲ್ಲಿ “ಹೌ ಟು ಟಾಕ್ ಸೊ ಕಿಡ್ಸ್ ವಿಲ್ ಲಿಸನ್ ಅಂಡ್ ಲಿಸನ್ ಸೋ ಕಿಡ್ಸ್ ವಿಲ್ ಟಾಕ್ “… ಎಂಬ ಕೃತಿಯು ಮಕ್ಕಳು ಮತ್ತು ಪಾಲಕರ ನಡುವಿನ ಪರಿಣಾಮಕಾರಿಯಾದ ಸಂವಹನ ಕುರಿತಾದ ಪ್ರಾಯೋಗಿವಾಗಿ ಅಳವಡಿಸಿಕೊಳ್ಳಬಹುದಾದ ಮೌಲಿಕ ಸಲಹೆಗಳನ್ನು ಮತ್ತು ತಂತ್ರಗಳನ್ನು ಒಳಗೊಂಡಿದ್ದು ಪಾಲಕರು ಮತ್ತು ಮಕ್ಕಳ ನಡುವಿನಲ್ಲಿ ಪರಸ್ಪರ ಅರ್ಥ ಮಾಡಿಕೊಳ್ಳುವ ಸಹಕಾರ ಮನೋಭಾವ ಹೊಂದಿರುವ ಮತ್ತು ಆರೋಗ್ಯಕರ ಸಂಬಂಧವನ್ನು ಸೃಷ್ಟಿಸುವ ಜೊತೆ ಜೊತೆಗೆ ಪಾಲಕರು ಮತ್ತು ಮಕ್ಕಳ ಸಂಬಂಧವನ್ನು ಒಂದೇ ತಂತುವಿನಲ್ಲಿ ಬೆಸೆಯುವ ಕೃತಿಯಾಗಿದೆ.
– ವೀಣಾ ಹೇಮಂತ್ ಗೌಡ ಪಾಟೀಲ್. ಮುಂಡರಗಿ. ಗದಗ್.