ಹೂವ ತಂದವರು.. ಲಿಂಗೈಕ್ಯ .ವಿಜಯಲಕ್ಷ್ಮಿ ಆರ್ ಪೊ. ಪಾಟೀಲ್
ಸುಮಾರು ಮೂರು ವರ್ಷಗಳ ಹಿಂದೆ ನನ್ನ ತಾಯಿಯನ್ನು ಕಳೆದುಕೊಂಡ ಸಮಯದಲ್ಲಿ ಬೆಂಗಳೂರಿನಲ್ಲಿದ್ದ ಆ ದಂಪತಿಗಳು ನನಗೆ ಕರೆ ಮಾಡಿ ಸಮಾಧಾನ ಮಾಡಿದರು. ತನ್ನದೇ ಆರೋಗ್ಯದ ಹೋರಾಟದಲ್ಲಿ ನಿರತರಾಗಿದ್ದ ಆಕೆ ಸುಮಾರು ಅರ್ಧ ಗಂಟೆಗಳ ಕಾಲ ನನ್ನ ನೋವಿನ ದನಿಗೆ ಕಿವಿಯಾದರೂ ತಮ್ಮ ನೋವನ್ನು ಹೇಳಿಕೊಳ್ಳಲೇ ಇಲ್ಲ. ಮುಂದೆ ಎಷ್ಟೋ ದಿನಗಳ ನಂತರ ನನಗೆ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬುದರ ಅರಿವಾದಾಗ ಕರೆ ಮಾಡಿ ಮಾತನಾಡಿ ಈ ಮೊದಲೇ ನನಗೆ ಹೇಳಲಿಲ್ಲವೇಕೆ ? ಎಂದು ಆಕ್ಷೇಪಿಸಿದೆ.
ಈಗಾಗಲೇ ಅಮ್ಮನನ್ನು ಕಳೆದುಕೊಂಡು ನೋವನ್ನು ಅನುಭವಿಸುತ್ತಿರುವ ನಿನಗೆ ಮತ್ತೇಕೆ ನನ್ನ ಆರೋಗ್ಯದ ಸಮಸ್ಯೆಯ ಕುರಿತು ಹೇಳಬೇಕು ಎಂದು ಹೇಳಲಿಲ್ಲಮ್ಮ ಎಂದು ಮರಳಿ ನನಗೇ ಸಮಾಧಾನ ಹೇಳಿದರು ಆ ಮಮತಾಮಯಿ. ಅವರೇ ನಮ್ಮ ಪ್ರೀತಿಯ ವಿಜಯಲಕ್ಷ್ಮಿ ಅಮ್ಮ. ಇಂದಿಗೆ ಅವರು ಲಿಂಗೈಕ್ಯರಾಗಿ ಎರಡು ವರ್ಷವಾಯಿತು.
ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲೂಕಿನ ಪುಟ್ಟ ಗ್ರಾಮ ಅಲಗಿಲವಾಡದ ಗೌಡರ ಮನೆತನದ ಪುಟ್ಟಬಸಪ್ಪ ಮತ್ತು ಈರಮ್ಮ ಪಾಟೀಲ ದಂಪತಿಗಳ ಮೊಮ್ಮಗಳಾಗಿ, ಸಿದ್ದಲಿಂಗನಗೌಡ ಸುವರ್ಣಮ್ಮ ದೇವಿಯವರ ಕೊನೆಯ ಮಗಳಾಗಿ ಡಿಸೆಂಬರ್ 15 1965 ರಂದು ಜನಿಸಿದ ವಿಜಯಕುಮಾರಿಯು ಚಿಕ್ಕಂದಿನಲ್ಲಿಯೇ ಭವಿಷ್ಯದ ಬಾಳಿಗೆ ಬೇಕಾದ ಗೃಹ ಶಿಕ್ಷಣ ಪಡೆದವರು. ತಂದೆ ತಾಯಿಗಳ ಪ್ರೀತಿಯ ಆಶ್ರಯದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿದ ವಿಜಯಕುಮಾರಿ ಹೈಸ್ಕೂಲಿಗೆ ಬರುವ ಹೊತ್ತಿಗೆ ತಂದೆ ತಾಯಿ ಇಬ್ಬರೂ ತೀರಿ ಹೋದರು. ಹೂವಿನ ಹಡಗಲಿಯಲ್ಲಿ ವಾಸವಾಗಿದ್ದ ತಾಯಿಯ ತಾಯಿ ಹೆಣ್ಣಜ್ಜಿ ನೀಲಮ್ಮ ಮತ್ತು ಆಕೆಯ ಮಕ್ಕಳಾದ ಸೋದರ ಮಾವಂದಿರು ಮತ್ತು ಅವರ ಪತ್ನಿಯರ ಕೂಡು ಕುಟುಂಬಕ್ಕೆ ಒಬ್ಬಳಾಗಿ ಬಂದ ವಿಜಯಕುಮಾರಿಯನ್ನು ಅವರು ತಮ್ಮ ಮಕ್ಕಳಿಗಿಂತ ಹೆಚ್ಚು ಪ್ರೀತಿಯಿಂದ ಬೆಳೆಸಿ ಹೈಸ್ಕೂಲು ಶಿಕ್ಷಣವನ್ನು ನೀಡಿದರು.
ತಾಯಿಯ ಆಶಯದ ಮೇರೆಗೆ ವರಾನ್ವೇಷಣೆಗೆ ತೊಡಗಿದ ಸೋದರ ಮಾವಂದಿರಿಗೆ ದೂರದ ಸಂಬಂಧಿ ಯಜಮಾನ್ ವಿರೂಪಾಕ್ಷಯ್ಯನವರ ಮೂಲಕ ಮುಂಡರಗಿಯ ಜಗದ್ಗುರು ಅನ್ನದಾನೀಶ್ವರ ವಿದ್ಯಾಸಂಸ್ಥೆಯಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ರಾಯನಗೌಡ ಪೊಲೀಸ್ ಪಾಟೀಲರನ್ನು ವಧುವನ್ನು ನೋಡಲು ಕರೆತಂದರು. ಸುಂದರ, ಸುಶೀಲ, ಸದ್ಗುಣವತಿಯಾದ ವಿಜಯ ಕುಮಾರಿಯನ್ನು ಒಪ್ಪಿ ಪೊಲೀಸ್ ಪಾಟೀಲರ ಕುಟುಂಬದವರಾದಿಯಾಗಿ ಎಲ್ಲರೂ ಒಪ್ಪಿ ಶುಭ ಮುಹೂರ್ತದಲ್ಲಿ ವಿವಾಹ ನೆರವೇರಿಸಿದ ಅಜ್ಜಿ ನೀಲಮ್ಮ ಬುದ್ಧಿಯ ಮಾತುಗಳ, ಗಂಡನ ಮನೆಯಲ್ಲಿ ಬಾಳುವ ರೀತಿ ನೀತಿಗಳನ್ನು ಮನದಟ್ಟು ಮಾಡಿಕೊಂಡು ವಿಜಯಕುಮಾರಿ ಪೋಲಿಸ್ ಪಾಟೀಲರ ಮನದನ್ನೆ ವಿಜಯಲಕ್ಷ್ಮಿಯಾಗಿ ಅವರ ಮನೆ ಮನ ತುಂಬಿದರು.
ಗುರು ಅನ್ನದಾನೀಶ್ವರರ ಕೃಪೆ, ಹಿರಿಯರ ಮಾರ್ಗದರ್ಶನದಲ್ಲಿ ಸಾಗಿದ ವಿಜಯಲಕ್ಷ್ಮಿ ಮತ್ತು ಪೊಲೀಸ್ ಪಾಟೀಲ್ ದಂಪತಿಗಳ ಮಧುರ ದಾಂಪತ್ಯದ ಪರಿಣಾಮವಾಗಿ ಉಷಾ,ಪಲ್ಲವಿ ಮತ್ತು ಕಿರಣರು ಜನಿಸಿದರು.
ಅಡುಗೆ ಮನೆ ಎಂಬ ವಿಶ್ವವಿದ್ಯಾಲಯದಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ಪಳಗಿದ ವಿಜಯಲಕ್ಷ್ಮಿ ಉತ್ತಮ ಗೃಹಿಣಿಯಾಗಿ ಒಳ್ಳೆಯ ಪಾಕ ಪರಿಣಿತರಾದರು. ಮಾತೃದೇವೋಭವ, ಪಿತೃ ದೇವೋಭವ, ಆಚಾರ್ಯ ದೇವೋಭವ ಎಂಬ ಸಾಲುಗಳಿಗೆ ಅತಿಥಿಗಳನ್ನು ಕೂಡ ಸೇರಿಸಿ ಮನೆಗೆ ಬರುವ ಯಾರೇ ಆಗಿರಲಿ ಅವರಿಗೆ ಊಟೋಪಚಾರದಲ್ಲಿ ಅತಿಥಿ ಸತ್ಕಾರದಲ್ಲಿ ಯಾವುದೇ ಕೊರತೆ ಇಲ್ಲದಂತೆ ನೋಡಿಕೊಳ್ಳುವ ವಿಜಯಲಕ್ಷ್ಮಿ ಅವರು ಅತಿಥಿ ದೇವೋಭವ ಎಂಬ ವಾಕ್ಯವನ್ನು ತಮ್ಮ ಬದುಕಿನ ಮಹತ್ತರ ಸಾಧನವನ್ನಾಗಿಸಿಕೊಂಡರು. ಅತ್ಯಂತ ಮೃದು ಮತ್ತು ನಿಧಾನ ಸ್ವಭಾವವನ್ನು ಹೊಂದಿದ್ದ ಅವರು ಪತಿಯ ಜವಾಬ್ದಾರಿಗಳ ಜೊತೆಗೆ ಅವರ ಸ್ವಭಾವವನ್ನು ಕೂಡ
ಅರಿತು ಬದುಕು ನಡೆಸುತ್ತಿದ್ದರು.
ಸತಿಪತಿಗಳೊಂದಾದ ಭಕ್ತಿಯು ಹಿತವಪ್ಪುದು ಶಿವಂಗೆ ಎಂಬಂತೆ ನಿಗರ್ವಿ, ಜ್ಞಾನಿ, ಶಿಸ್ತು, ಸಮಯ ಪ್ರಜ್ಞೆ,ಕಾಯಕ ಮತ್ತು ಉತ್ತಮ ಮೌಲ್ಯಗಳ ಗಣಿಯಾಗಿದ್ದ ಪೊಲೀಸ್ ಪಾಟೀಲರ ಹೆಜ್ಜೆಯಲ್ಲಿ ಹೆಜ್ಜೆ ಇಟ್ಟು ಅನುಗಾಲ ನಡೆದರು. ಇಂತಹ ಪತಿಯನ್ನು ಪಡೆದ ನಾನೇ ಧನ್ಯ ಎಂದು ಹೇಳುವ ಅವರು ಮುಂದಿನ ಜನ್ಮ ಇರುವುದಾದರೆ ಅವರೇ ಮತ್ತೆ ಪತಿಯಾಗಿ ದೊರೆಯಲಿ ಎಂಬ ಆಸೆಯನ್ನು ಹೊಂದಿದ್ದರು.
ಗಂಡನ ಮನೆಯ ಅತಿ ದೊಡ್ಡ ಕೌಟುಂಬಿಕ ಬಳಗ ಮತ್ತು ತನ್ನ ತವರಿನ ಬಳಗ ಎಲ್ಲರೊಂದಿಗೆ ಹೊಂದಾಣಿಕೆಯ ಬದುಕು ಸಾಗಿಸುತ್ತಾ ಮನೆಯೇ ಮಂತ್ರಾಲಯ ಎಂದು ಭಾವಿಸಿದ ವಿಜಯಲಕ್ಷ್ಮಿಯವರು ತನ್ನ ಪತಿಯ ಎಲ್ಲಾ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತರು.
2002-03ರ ಸಾಲಿನಲ್ಲಿ ತಮ್ಮ ಪತಿ ಎಂ ಫಿಲ್ ಮಾಡಲು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ತೆರಳಿದಾಗ ಒಂದು ವರ್ಷ ಕಾಲ ಇಡೀ ಮನೆಯ ಜವಾಬ್ದಾರಿಯನ್ನು ಹೊತ್ತು ನಡೆಸಿದರು.
ವೈಯುಕ್ತಿಕವಾಗಿ ಸಂತೃಪ್ತ ಮನಸ್ಥಿತಿಯುಳ್ಳ ವಿಜಯಲಕ್ಷ್ಮಿ ಅವರು ಗುರು, ಲಿಂಗ, ಜಂಗಮದಲ್ಲಿ ಅತ್ಯಂತ ಭಕ್ತಿಭಾವವನ್ನು ಹೊಂದಿದ್ದವರು. ತನ್ನ ತವರೂರಿನ ದೈವವಾದ ಎಡೆಯೂರು ಸಿದ್ದಲಿಂಗೇಶ್ವರನಲ್ಲಿ ಅಪಾರ ಭಕ್ತಿಯಿರಿಸಿದ ವಿಜಯಲಕ್ಷ್ಮಿಯವರು ತನ್ನ ಪತಿಗೆ ಉದ್ಯೋಗ ನೀಡಿ ಬದುಕಿನ ನಿರ್ವಹಣೆಗೆ ಅನುವು ಮಾಡಿಕೊಟ್ಟ ಮುಂಡರಗಿಯ ಜಗದ್ಗುರು ಅನ್ನದಾನೀಶ್ವರರಲ್ಲಿ ಕೂಡ ಅಷ್ಟೇ ಭಕ್ತಿ ಭಾವವನ್ನು ಹೊಂದಿದ್ದರು. ಮುಂಡರಗಿಯಲ್ಲಿ ನೆಲೆಯಾಗಲು ಕಾರಣವಾದ ಗುರು ಅನ್ನದಾನೀಶರನ್ನು ಭಕ್ತಿಯಿಂದ ನೆನೆಯುವ, ಪೂಜಿಸುವ ವಿಜಯಲಕ್ಷ್ಮಿ ಅಮ್ಮನ ಬದುಕಿನಲ್ಲಿ ಸ್ನಾನ,ಪೂಜೆ,ಲಿಂಗಪೂಜೆ, ಅತಿಥಿ ಸತ್ಕಾರಗಳು ವಿಶೇಷ ಸ್ಥಾನ ಪಡೆದಿದ್ದವು. ಕಷ್ಟವೇ ಬರಲಿ ಸುಖವೇ ಇರಲಿ ಗುರು ಅನ್ನದಾನಿಯ ದಯೆ ಸದಾ ತನ್ನ ಕುಟುಂಬದ ಮೇಲಿರಲಿ ಎಂದು ಅವರು ಆಶಿಸುತ್ತಿದ್ದರು. ಉಪಕಾರ ಮಾಡಿದವರ ಸ್ಮರಣೆ ಸದಾ ಇರಬೇಕು ಎಂಬುದಕ್ಕಾಗಿ ಮನೆಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಜಗದ್ಗುರುಗಳ ಸಾನಿಧ್ಯದಲ್ಲಿಯೇ ಪೂರೈಸಲು ಹಂಬಲಿಸುತ್ತಿದ್ದ ವಿಜಯಲಕ್ಷ್ಮಿ ಅಮ್ಮ ಆಶ್ರಯದಾತರಾದ ಗುರು ಅನ್ನದಾನೀಶ್ವರರ ಅಪ್ಪಣೆಯಂತೆ ನಾವು ನಡೆದುಕೊಳ್ಳಬೇಕಾದ್ದು ನಮ್ಮ ಕರ್ತವ್ಯ ಎಂಬಂತೆ ಜೀವನದ ಕೊನೆಯವರೆಗೂ ಪಾಲಿಸಿದರು.
ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಆತನ ಪತ್ನಿ ಇರುತ್ತಾಳೆ ಎಂಬ ಮಾತಿನಂತೆ ಪೊಲೀಸ್ ಪಾಟೀಲ್ ಗುರುಗಳ ನೌಕರಿಯ ಜವಾಬ್ದಾರಿಗಳ ಜೊತೆ ಜೊತೆಗೆ ಓದು,ಬರಹ,ಅಧ್ಯಯನ,ಉಪನ್ಯಾಸಗಳ ಅವಿರತ ಕಾರ್ಯಗಳಲ್ಲಿ ತೊಡಗಿ ಕೊಂಡಾಗ ಯಾವುದೇ ರೀತಿಯ ಕೌಟುಂಬಿಕ ಅಡ್ಡಿ ಆತಂಕಗಳು ಕಾಡದಂತೆ ತಡೆಗೋಡೆಯಾಗಿ ನಿಂತವರು ಅವರು.
ತಮ್ಮ ಮಕ್ಕಳಲ್ಲಿಯೂ ಉನ್ನತ ಸಂಸ್ಕಾರಗಳನ್ನು ಬೆಳೆಸಿದ ಆಕೆ ಗುರು,ಲಿಂಗ, ಜಂಗಮರ ಮೇಲೆ ಮಕ್ಕಳಲ್ಲಿಯೂ ಭಕ್ತಿ ಹುಟ್ಟಲು ಕಾರಣವಾಗಿ ಆದರ್ಶ ಮತ್ತು ಅನುಕರಣೆಯ ಬಾಳನ್ನು ಸಾಗಿಸಿ ಅನಾರೋಗ್ಯದ ಕಾರಣ ಕಳೆದೆರಡು ವರ್ಷದ ಹಿಂದೆ ದೀಪಾವಳಿ ಲಕ್ಷ್ಮಿ ಪೂಜೆಯ ಸಮಯದಲ್ಲಿ ಲಿಂಗೈಕ್ಯರಾದರು. ಅಪಾರ ಸಂಖ್ಯೆಯಲ್ಲಿ ಸೇರಿದ ಸಂಬಂಧಿಗಳ ಸಮ್ಮುಖದಲ್ಲಿ ಪೊಲೀಸ್ ಪಾಟೀಲ್ ಪರಿವಾರ ಅವರನ್ನು ಶಾಶ್ವತವಾಗಿ ಬೀಳ್ಕೊಂಡಿತು.
ತಮ್ಮ ಮನಸ್ಸಿನ ಭಾವನೆಗಳನ್ನು ಲೇಖನಗಳ ಮೂಲಕ ಒಂದೆಡೆ ಬರೆದು ಸಂಗ್ರಹಿಸಿಟ್ಟಿರುವ ವಿಜಯಲಕ್ಷ್ಮಿ ಅಮ್ಮನವರು ತಾನು ಸದಾ ಪೂಜಿಸುವ ಯಡಿಯೂರು ಸಿದ್ದಲಿಂಗೇಶ್ವರರ ಜೀವನ ಚರಿತ್ರೆಯನ್ನು ಸಂಕ್ಷಿಪ್ತವಾಗಿ ಬರೆದಿದ್ದರೆ ಆರಾಧ್ಯ ದೈವ ಗುರು ಅನ್ನದಾನೀಶ್ವರರ ಕುರಿತು
ಭಕ್ತಿ ಪೂರ್ವಕ ನುಡಿಗಳನ್ನು ಬರೆದಿಟ್ಟಿದ್ದಾರೆ. ತನ್ನ ಪಾಲಕರ ಮರಣದ ನಂತರ ತಮ್ಮನ್ನು ಸಾಕಿ ಸಲುಹಿದ ನೀಲಮ್ಮಜ್ಜಿ ಮತ್ತು ಆಕೆಯ ಮಕ್ಕಳಾದ ಮೂರು ಜನ ಸೋದರ ಮಾವಂದಿರನ್ನು ಬ್ರಹ್ಮ, ವಿಷ್ಣು, ಮಹೇಶ್ವರರು ಎಂದು ಅತ್ಯಂತ ಗೌರವದಿಂದ ಸಂಭೋಧಿಸಿರುವ ಆಕೆ ಅವರೆಲ್ಲರ ಪ್ರೀತಿ, ವಾತ್ಸಲ್ಯ ಮತ್ತು ಕಾಳಜಿಯ ಪ್ರತಿಫಲವಾಗಿ ತನಗೆ ಪೊಲೀಸ್ ಪಾಟೀಲರು ವರವಾಗಿ ದೊರೆತರು ಎಂದು ಹೇಳಿಕೊಂಡಿದ್ದಾರೆ.
ಒಂದಷ್ಟು ಕವನಗಳನ್ನು ಕೂಡ ಬರೆದಿರುವ ಅವರ ಮರಣ ನಂತರ ಒಂದು ಪುಸ್ತಕದಲ್ಲಿ ಈ ಎಲ್ಲ ಲೇಖನಗಳು ದೊರೆತಿದ್ದು ಅವರ ಮೊದಲ ವರ್ಷಾಚರಣೆಯಲ್ಲಿ ಆರ್ ಎಲ್ ಪೊಲೀಸ್ ಪಾಟೀಲರ ಸಂಪಾದನೆಯಲ್ಲಿ ಪುಣ್ಯಕೋಟಿ ಎಂಬ ಸಂಸ್ಮರಣ ಗ್ರಂಥವಾಗಿ ಲೋಕಾರ್ಪಣೆಗೊಂಡಿದೆ.
ಅವರಿಲ್ಲದ ಶೂನ್ಯವನ್ನು ತುಂಬಿಸಲು ಅಸಾಧ್ಯವಾದರೂ ಅವರು ನಡೆದು ಬಂದ ಹಾದಿಯ ಅವಲೋಕನ ಮಾಡುವ ಮೂಲಕ ಅವರನ್ನು ಪುನಹ ಪುನಹ ನೆನಪಿಸಿಕೊಳ್ಳುವುದು, ಅವರು ತೋರಿದ ದಾರಿಯಲ್ಲಿ ಎಲ್ಲ ಮಹಿಳೆಯರು ತಮ್ಮ ಕುಟುಂಬದ ಏಳಿಗೆಗಾಗಿ, ಗುರು ಲಿಂಗ ಜಂಗಮದ ಕೃಪೆಗೆ ಪಾತ್ರರಾಗಲು ಪ್ರಯತ್ನಿಸಬೇಕು.
ಎಲ್ಲಾ ಗೃಹಿಣಿಯರಿಗೂ ಮಾದರಿಯಾಗುವಂತಹ ಜೀವನ ಶೈಲಿಯನ್ನು, ಜೀವನೋತ್ಸಾಹವನ್ನು ಹೊಂದಿದ್ದ ವಿಜಯಲಕ್ಷ್ಮಿ ಅಮ್ಮನವರ ನೆನಪಿನ ದೀಪ ಸದಾ ಹೃದಯದಲ್ಲಿ ಬೆಳಗುತ್ತಿರಲಿ ಎಂಬ ಆಶಯದೊಂದಿಗೆ
– ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್