Oplus_131072

ಜಾನಪದವು ಸಂಸ್ಕೃತಿಯ ಮೂಲಸೆಲೆ.

ಜಾನಪದ ಕ್ಷೇತ್ರದ ದಿಗ್ಗಜರಾದ ಡಾ. ಎಚ್‌.ಎಲ್.ನಾಗೇಗೌಡ, ಸಿಂಪಿ ಲಿಂಗಣ್ಣ , ಡಾ.ಎಂ.ಎಂ.ಕಲಬುರ್ಗಿ, ಡಾ. ಶಿವರಾಂ ಕಾರಂತ ಡಾ. ಕಾಳಿಂಗರಾಯರಂಥವರ ಕೊಡುಗೆ ಅವಿಸ್ಮರಣೀಯವಾಗಿದೆ.

ನಮ್ಮ ಭಾರತೀಯ ವಿವಿಧ ಸಮೂಹ ಸಂಸ್ಕೃತಿಗಳಿಗೆ ಜಾನಪದ ಕಲೆಯೂ ಒಂದು ಮೂಲ ಸೆಲೆಯಾಗಿರುವುದು ಕಂಡು ಬರುತ್ತದೆ. ಪರಂಪರೆ ತಲೆ ತಲಾಂತರದಿಂದ ನಡೆದು ಬಂದ ಈ ಜಾನಪದ ಸಾಹಿತ್ಯವು
ಒಬ್ಬರ ಬಾಯಿಂದ ಮತ್ತೊಬ್ಬರ ಬಾಯಿಗೆ ಹರಿದು ಬಂದು ತನ್ನದೇ ಆದ ವೈಶಿಷ್ಟ್ಯಗಳಿಂದ
ಇಂದು ಜನಪದರಲ್ಲಿ ಹಾಸುಹೊಕ್ಕಾಗಿದೆ.
ಹಿಂದಿನ ಕಾಲದ ಹಬ್ಬ ಹರಿದಿನಗಳಲ್ಲಿ ಸುಗ್ಗಿಯ ಸಂದರ್ಭಗಳಲ್ಲಿ ಮತ್ತು ಮದುವೆ ಸೋಬಾನ ಹಂದಿ ಕಟ್ಟುವಾಗ, ಕುಟ್ಟುವ ಬಿಸುವ ಮೊದಲಾದ ಸಂದರ್ಭದಲ್ಲಿ ಸಮಯಕ್ಕೆ ತಕ್ಕಂತೆ ಹಾಡುಗಳನ್ನು ಹಾಡಿ ಜನ ಜಾನಪದ ಕಲೆಗಳನ್ನು ಸಾಹಿತ್ಯಗಳ ಮೂಲಕ ಡೊಳ್ಳು ಕುಣಿತ, ಬುಲಾಯಿ ಕೊಲಾಟ ಯಕ್ಷಗಾನ ಮೊದಲಾದ ನೃತ್ಯಗಳನ್ನು ಪ್ರದರ್ಶಿಸಿಸಿ ಕೆಲಸದಿಂದಾದ ಆದ ದಣಿವನ್ನು ನಿವಾರಿಸಿಕೊಂಡು ತುಂಬ ಸಂತಸದಿಂದ ನಲಿಯುತ್ತಿದ್ದರು.

ಅವರು ನಿರ್ದಿಷ್ಟವಾದ ಚೌಕಟ್ಟನ್ನು ವಿಧಿಸಿಕೊಳ್ಳದೇ ತನ್ನದೇ ಆದ ಒಂದು ದಾಟಿಯಲ್ಲಿ ಸಾಹಿತ್ಯವನ್ನು ಕಂಠಪಾಠ ಮಾಡಿಕೊಂಡು ಹಾಡುತ್ತಾ ಕಾಲ ಕಳೆಯುತ್ತಿದ್ದರು. ಈ ಜಾನಪದ ಸಾಹಿತ್ಯವನ್ನು ಕಟ್ಟಿದ ಜಾನಪದರು ಇಂದು ನಮ್ಮ ಭಾರತೀಯ ಸಂಸ್ಕೃತಿಗೆ ಮೂಲ ಸೆಲೆಯಾಗಿದ್ದಾರೆ. ಆ ಜಾನಪದವು ಹಾಡುತ್ತಿದ್ದಂತೆ ಬೆಸರವು ಮರೆಯಾಗಿ ಮಾಡುವ ಕೆಲಸ ಕಾರ್ಯದಲ್ಲಿ ತೃಪ್ತಿಯನ್ನು ನೀಡುತ್ತವೆ.

ಬೆಸರವಾದಾಗ ಹಾಡುವ ಈ ಹಾಡುಗಳು, ಯಕ್ಷಗಾನ,ಕೋಲಾಟ, ಬಯಲಾಟ, ದೊಡ್ಡಾಟ,
ಸಣ್ಣಾಟ, ನಾಟಕ ಮುಂತಾದವುಗಳಲ್ಲಿ ತೊಡಗಿಸಿಕೊಂಡು ಜನ ರಂಗಭೂಮಿಯ ಮೂಲಕ
ಅಭಿವೃದ್ಧಿಗೆ ನೆರವಾದರು. ವಿಜ್ಞಾನದ ಬೆಳವಣಿಗೆಯಲ್ಲಿ ಮೂಡಿಬಂದ ಹೊಸ ಹೊಸ ಸಂಶೋಧನೆಗಳಿಂದಾಗಿ ಯಂತ್ರಗಳ ಬಳಕೆ ಹೆಚ್ಚಾಗಿದ್ದರಿಂದ ಇಂದು
ಕುಟ್ಟುವ, ಬೀಸುವ, ಹಂತಿ ಪದಗಳು ಹಾಗೂ ಮದುವೆ, ಮುಂಜಿವ, ಸೋಬಾನೆ
ಪದಗಳು, ಇನ್ನಿತರ ಸಂಸ್ಕಾರಗಳಲ್ಲಿ ಹಾಡು ಹೇಳುವ ಜಾನಪದ ಸಾಹಿತ್ಯದ ಬಳಕೆ
ಈ ಮೂಲಕ ಹಾಡುವರಿಗೂ ಮತ್ತು ಕೇಳುಗರ ಮನಸ್ಸಿಗೂ ಮುದ ನೀಡುತ್ತವೆ.

 

ಇತ್ತೀಚಿನ ಈ ಆಧುನಿಕ ಕಾಲಘಟ್ಟದಲ್ಲಿ
ಸಾಹಿತಿಗಳೆನಿಸಿಕೊಂಡವರು ಇಂತಹ ಜಾನಪದರ ಹತ್ತಿರ ಹೋಗಿ ಅವರಿಂದ
ವೈಶಿಷ್ಟಪೂರ್ಣವಾದ ಜಾನಪದ ಸಾಹಿತ್ಯವನ್ನು ಸಂಗ್ರಹಿಸತೊಡಗಿ ಅದನ್ನು ಪುಸ್ತಕ
ರೂಪದಲ್ಲಿ ತರುವುದರ ಮೂಲಕ ಅದಕ್ಕೊಂದು ನೆಲೆಯನ್ನು ಒದಗಿಸಿದರು. ಆ
ಮೂಲಕ ಅವರು ಜಾನಪದ ಕ್ಷೇತ್ರದ ದಿಗ್ಗಜರೆನಿಸಿಕೊಂಡರು. ಡಾ. ಎಚ್‌.ಎಲ್.ನಾಗೇಗೌಡ,
ಸಿಂಪಿ ಲಿಂಗಣ್ಣ ಹಲಸಂಗಿ, ಡಾ.ಎಂ.ಎಂ.ಕಲಬುರ್ಗಿ,
ಡಾ. ಶಿವರಾಂ ಕಾರಂತ ಡಾ. ಕಾಳಿಂಗರಾಯರಂಥವರ ಕೊಡುಗೆ ಸ್ಮರಣೀಯವಾದುದು.
ಅತ್ಯಂತ ಹೃದಯಪೂರ್ಣವಾದ ಕ್ಷೇತ್ರವನ್ನು ಆವರಿಸಿಕೊಂಡಿದ ಜಾನಪದವನ್ನು
ನಮ್ಮ ನಾಡಿನ ಹಳ್ಳಿಗಾಡಿನವರು ಉಳಿಸಿ ಬೆಳೆಸಿಕೊಂಡು ಬರುತ್ತಿರುವಷ್ಟು ಪಾಶ್ಚಾತ್ಯ
ಸಂಸ್ಕೃತಿಯ ದಟ್ಟ ಪ್ರಭಾವಕೊಳಗಾಗಿ ಶಿಷ್ಟರೆನಿಸಿಕೊಂಡು ಬಾಳುತ್ತಿರುವ ನಗರವಾಸಿಗಳು,
ಹಚ್ಚಿಕೊಳ್ಳದೇ ಉತ್ತಮವಾದ ಈ ಜಾನಪದ ಸಂಸ್ಕೃತಿಯಿಂದ ವಂಚಿತರಾಗಿದ್ದಾರೆ. ಥಳಕು
ಬಳುಕಿನ ನಗರ ಜೀವನದಲ್ಲಿ ಕಾಣದ ಸಂತೃಪ್ತಿ, ಸಮಾಧಾನ, ಶಾಂತಿ, ನೆಮ್ಮದಿಯನ್ನು
ಹಳ್ಳಿಗಾಡಿನ ಜಾನಪದ ಸಂಸ್ಕೃತಿ, ಸಾಹಿತ್ಯದಿಂದ ಹಾಗೂ ಕಲೆಗಳಿಂದ ಪಡೆಯಬಹುದು.
ನಾಡಿನ ಅನ್ನದಾತರೆನಿಸಿಕೊಂಡ ರೈತಾಪಿ ಜನರು,

ಜಾನಪದ ಸಾಹಿತ್ಯದ ಸೊಗಡನ್ನು
ಹೆಚ್ಚಿಸಿದ್ದಾರೆ. ಇದನ್ನು ತಮ್ಮ ಜೀವದ ಉಸಿರಾಗಿಸಿ ಕೊಂಡವರಾಗಿದ್ದಾರೆ. ಪ್ರತಿಯೊಂದು
ಸಂದರ್ಭಕ್ಕನುಗುಣವಾಗಿ ಹಾಡುಗಳನ್ನು ಹಾಡಿ, ಕಲೆಗಳನ್ನು ಪ್ರದರ್ಶಿಸಿ
ಜಾನಪದಕ್ಕೊಂದು ವಿಶೇಷ ಕಳೆಯನ್ನು ತಂದುಕೊಟ್ಟಿದ್ದಾರೆ.
ಸೂರ್ಯೋದಯಕ್ಕಿಂತ ಮುಂಚೆ ಮಂಜಿನ ಹನಿ ಉದುರುವ ಸುಮದುರ
ಸಮಯದಲ್ಲಿ ಹಕ್ಕಿಗಳ ಕಲರವ ಶಬ್ದದಿಂದ ಎಚ್ಚರಗೊಂಡು ಮುಂಜಾನೆ ಸಮಯದಲ್ಲಿ ನ್ಯಾಯಾರಿ (ತಂಗಳ ಆಹಾರ) ಉಂಡು ರೊಟ್ಟಿ, ಗಟ್ಟಿ ಮೊಸರು ಅನ್ನ ತುಂಬ ಆನಂದದಿಂದ ಸವಿದಾದ ಮೇಲೆ ದನ ಹಸುಗಳ ಸಗಣಿ ಬಳಿದು ಬೆಳ್ಳಾಗಿನ ಎರಡೆತ್ತು ,ಬಿಳಿಯ ಬಾರಕೋಲು ಹಿಡಕೊಂಡು ಹೊಲದ ಕಡೆ ಹೆಜ್ಜೆ
ಹಾಕುತ್ತಾ ಹಾಡನ್ನು ಹಾಡುತ್ತಾ ಹೊರಟಾಗ ಊರಿನ ಜನರೆಲ್ಲ ಆ ಹಾಡಿನಿಂದ
ಎಚ್ಚೆತ್ತುಕೊಳ್ಳುತ್ತಿದ್ದರು.

ಆ ರೈತಣ್ಣ ತಂಪಾದ ಸಮಯದಲ್ಲಿ ತನ್ನ ಹೊಲದ ಕಾರ್ಯ
ಮುಗಿಸಿಕೊಂಡು ದಣಿವಾರಿಸಿಕೊಳ್ಳಲೆಂದು ಹೊಲದ ಕಟ್ಟೆಗೆ ಗಿಡದ ನೆರಳಿನಲ್ಲಿ ಕುಳಿತಾಗ,
ಮದ್ಯಾನ್ಹದ ಬುತ್ತಿಗಂಟನ್ನು ಹೆಂಡತಿ ತರುವ ದಾರಿಕಡೆ ಆಸೆಗಣ್ಣಿನಿಂದ ನೋಡುತ್ತಿರುವಾಗ
ಅತ್ತ ಹೆಂಡತಿಯಾದವಳು.

” ಬುತ್ತಿ ತಗೊಂಡ ಹೋಗ್ತಿನಿ ಹೊಲಕ
ನಾ ಬರೀನಿ ಹೊತ್ತು ಮುಣಗುದಕ
ಬುತ್ತಿ ತಗೊಂಡ ಹೋಗ್ತಿನಿ ಹೊಲಕ
ಹೊಳಿ ದಂಡಿಮ್ಯಾಗ ನಮ್ಮ ಹೊಲಾ
ಬೆಳೆದು ನಿಂತೈತಿ ಬಿಳಿಜೋಳ
ಎಲ್ಲಾ ತೆನಿಗಳು ಮುತ್ತಿನ ಗೊಂಚಲಾ
ಅದನ ನೋಡೋದ ಹಿಗ್ಗಿ ಹಾಡುದಕ
“ಬುತ್ತಿತೊಗೊಂಡು ಹೋಗ್ತಿನಿ ಹೊಲಕ” 

ಎಂಬ ಅರ್ಥಗರ್ಭಿತ ಹಾಡು ಮತ್ತು
ಸಮಯಕ್ಕೆ ಹೋಲಿಕೆಯಾಗುವಂತಹ ಹಾಡನ್ನು ಹಾಡುತ್ತಾ ಬರುತ್ತಾಳೆ. ತನ್ನ ಹೊಲವು ಹೊಳಿ ದಂಡಿಮ್ಯಾಗ ಇದೆ. ಬೆಳೆದ ಬಿಳಿಜೋಳದ ತೆನೆಯನ್ನು ಮುತ್ತಿಗೆ ಹಾಗೂ
ಚಿನ್ನದಂತ ನೆಲವೆಂದು ಭೂಮಿಗೆ ವರ್ಣಿಸಿರುವುದು ಮತ್ತು ಅದನ್ನು ನೋಡಿಯೇ ನಾನು ಹಿಗ್ಗಿ ಹಾಡುತ್ತೇನೆ ಎನ್ನುವ ಪರಿಯನ್ನು ಎಂತಹ ಶಿಷ್ಟ ಹಾಗೂ ಶ್ರೇಷ್ಠ
ಸಾಹಿತಿಯನ್ನು  ಮೀರಿಸುವಂತಹದು. ಅಲಂಕಾರ ಛಂದಸ್ಸು ಶಾಸ್ತ್ರಬದ್ಧವಾದ
ಹೋಲಿಕೆಯನ್ನು ತಮ್ಮ ಜಾನಪದದಲ್ಲಿ ಬಳಸಿ ಸಾಹಿತ್ಯ ರಚಿಸಿರುವುದು ಈ ಮೇಲಿನ
ಪದ್ಯಭಾಗದಿಂದ ಅರಿಯಬಹುದು.
ಅಪಾರವಾದ ಲೋಕಜ್ಞಾನವನ್ನು ಶ್ರೇಷ್ಟವಾದ ಸಂಸ್ಕೃತಿಯನ್ನು ತಮ್ಮ ಅನುಭವವ
ಮೂಸೆಯಲ್ಲಿ ಅಭಿವ್ಯಕ್ತಿಗೊಳಿಸಿದ್ದು ಜನಪದಿಯರ ಈ ಸಂಸ್ಕೃತಿಯ ಯು ತುಂಬ ವೈಶಿಷ್ಟ್ಯವಾಗಿದೆ.

ಇಂದಿಗೂ ಹಳ್ಳಿ ಹಳಿಗಳಲ್ಲಿ
ಹಿರಿಯ ತಲೆಮಾರಿನ ಅಜ್ಜ-ಅಜ್ಜಿಯರ ಹತ್ತಿರ ಹೋಗಿ ಅವರಲ್ಲಿ ಅಡಗಿರುವ
ಅಪಾರವಾದ ಜಾನಪದ ಸಾಹಿತ್ಯದ ಸೊಬಗು, ಸೌಂದರ್ಯವನ್ನು ಸವಿಯಬಹುದು.
ಆದರೂ ಪಾಶ್ಚಾತ್ಯ ಸಂಸ್ಕೃತಿಯ ದಟ್ಟವಭಾವಕ್ಕೊಳಗಾದ ಇಂದಿನ ಯುವಕರಾದಿಯಾಗಿ
ಯಾರು ಅಂತಹವರ ಹತ್ತಿರ ಹೋಗುವುದಿರಲಿ ಅವರನ್ನು ಕಂಡರೂ ಮಾತಾಡದಷ್ಟು
ದೂರವಾಗಿದ್ದಾರೆ. ಹೀಗಾಗಿ ಅಪಾರವಾದ ಜಾನಪದ ಸಿರಿ ಸಂಪತ್ತನ್ನು ಅವರೊಂದಿಗೆ
ಮೂಲ ಸಮೇತ ಅಳಿದುಹೋಗುತ್ತಿರುವುದು ವಿಷಾದದ ಸಂಗತಿ.

ಬಹುವಿಶಿಷ್ಟಪೂರ್ಣವಾದ ಹಾಗೂ ಲೋಕಾನುಭವದ ಗಣಿಯಿಂದ ಮೂಡಿಬಂದ ಈ
ಜಾನಪದ ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ಅದರ ಮೂಲ ನೆಲೆಯಲ್ಲಿ ಸಂಗ್ರಹಿಸಿ
ವ್ಯವಸ್ಥಿತ ರೂಪದಲ್ಲಿ ಕಾಲಾಂತರದವರೆಗೂ ಅಸ್ಥಿತ್ವದಲ್ಲಿರುವಂತೆ ನೋಡಿಕೊಳ್ಳಬೇಕಾದ
ಮಹತ್ವಪೂರ್ಣವಾದ ಕಾರ್ಯವನ್ನು ಈ ಕ್ಷೇತ್ರದಲ್ಲಿ ಆಸಕ್ತಿ ಇರುವ ಪ್ರತಿಯೊಬ್ಬರೂ,
ಮಾಡಬೇಕಾದದ್ದು, ಇಂದು ಅತಿ ಜರೂರಿಯಾಗಿದೆ.

ಇಂದಿನ ಎಲ್ಲಾ ಶಿಷ್ಟ ಬರಹಗಾರರು
ಜಾನಪದವನ್ನು ತಮ್ಮ ಬರವಣಿಗೆಗೆ ಏಣಿಯಾಗಿ ಮಾಡಿಕೊಂಡು ಬೆಳೆದರೂ ಅದರ
ಸಂಪೂರ್ಣ ಸಂಗ್ರಹ, ಸಂಶೋಧನಾ ಕಾರ್ಯದಲ್ಲಿ ಅಷ್ಟಾಗಿ ಆಸಕ್ತಿವಹಿಸದಿರುವುದು
ಎದ್ದು ಕಾಣುತ್ತದೆ.
ಜಾಗತೀಕರಣ, ಪಾಶ್ಚಾತೀಕರಣ, ಔದ್ಯೋಗಿಕರಣ, ಉದಾರೀಕರಣಗಳ ಹೊಸ್ತಿಲಲ್ಲಿ
ನಿಂತಿರುವ ನಾವುಗಳು ನಮ್ಮತನ ಕಳೆದುಕೊಳ್ಳುತ್ತಿದ್ದೇವೆ. ಈ ಮೂಲಕ ಸಂಸ್ಕೃತಿಯ
ಮೂಲ ಸೆಲೆಯಾಗಿರುವ ಜಾನಪದ, ಸಾಹಿತ್ಯ, ಕಲೆಯನ್ನು ಮರೆಯುತ್ತಿರುವುದು
ತುಂಬಾ ದೌರ್ಭಾಗ್ಯಪೂರ್ಣವಾದದ್ದು. ಇದನ್ನು ಉಳಿಸಿ ಬೆಳೆಸಿಕೊಂಡು ಬರುವಲ್ಲಿ
ನಮ್ಮಿಂದ ಏನೂ ಮಾಡಲಿಕ್ಕಾಗದಿದ್ದರೂ ಅದರ ಬಗೆಗೆ ಪ್ರೀತಿಯನ್ನಾದರೂ ನಮ್ಮ
ಹೃದಯಮಂದಿರದಲ್ಲಿ ಶಾಶ್ವತವಾಗಿಟ್ಟುಕೊಂಡರೆ ಸಾಕು,
ಏಕೆಂದರೆ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ರವರು ಹೇಳಿದಂತೆ ” ಇತಿಹಾಸವನ್ನು
ಮರೆತವರು ಇತಿಹಾಸವನ್ನು ನಿರ್ಮಿಸಲಾರರು.” ಎಂಬ ಮಾತು ನೆನಪಿನಲ್ಲಿ ಇಟ್ಟುಕೊಂಡು ಆ ನಿಟ್ಟಿನಲ್ಲಿ ಕಾರ್ಯ ಪ್ರವರ್ತಕರಾಗಬೇಕಾಗಿದೆ. ಹಾಗಾಗಿ
ಆ ನಿಟ್ಟಿನಲ್ಲಿ ನಾವೆಲ್ಲರೂ
ಕಾರ್ಯಾನ್ನೂಖರಾಗೋಣವೆಂಬ ಆಶೆಯನ್ನಿಟ್ಟುಕೊಳ್ಳೋಣ.
ಜಾನಪದ ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ ರಕ್ಷಿಸಬೇಕಾಗಿದೆ.

ಡಾ.ಸಂಜೀವಕುಮಾರ ಅತಿವಾಳೆ. ಬೀದರ

ಲೇಖಕರ ಪರಿಚಯ:

ಡಾ. ಸಂಜೀವಕುಮಾರ ಅತಿವಾಳೆಯವರು.

ಸಾಹಿತಿ ಡಾ. ಸಂಜೀವಕುಮಾರ ಅತಿವಾಳೆ ಯವರು. ಬೀದರ್ ತಾಲ್ಲೂಕಿನ ಅತಿವಾಳ ಗ್ರಾಮದವರು. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿರುವ ಇವರು ಭಾಲ್ಕಿ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆ ಸಹ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಸ್ವಾತಂತ್ಯ್ರ(ಕವನ ಸಂಕಲನ), ಚೌಕಟ್ಟಿನಾಚೆ(ಲೇಖನಗಳ ಸಂಕಲನ), ಪ್ರಬಂಧ , ಲೋಕ ನುಡಿ ಕಿಡಿ (ಸಂಪಾದಿತ) ಮುಂತಾದ ಕೃತಿಗಳು ಪ್ರಕಟಿಸಿದ್ದಾರೆ. ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ನೀಡಿ ಗೌರವಿಸಲಾಗಿದೆ.