[ez-toc]ಕಲಬುರಗಿಯಲ್ಲೊಂದು ‘ಮಿನಿಭಾರತ’ ಪಂಚಶೀಲನಗರ.
– ಡಾ. ಶಿವರಂಜನ ಸತ್ಯಂಪೇಟೆ ಕಲಬುರಗಿ
ಇಂದಿನ ಕಾಲದ ಈ ಆಧುನಿಕ ಯುಗದಲ್ಲಿ ಒಬ್ಬರನ್ನೊಬ್ಬರ ಪ್ರೀತಿ ವಿಶ್ವಾಸ ಗೌರವ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿಯೂ’ ಹಮ್ ಸಬ್ ಏಕ್ ಹೈ’ ಎನ್ನುವಂತೆ ವಿವಿಧತೆಯಿಂದ ಏಕತೆಯಲ್ಲಿ ಬಾಳುತ್ತಿರುವ ಅಪರೂಪದ ಕುಟುಂಬಗಳು ನಮ್ಮ ಕಲಬುರಗಿಯ ಪಂಚಶೀಲ ನಗರದಲ್ಲಿ ಕಂಡು ಬರುತ್ತವೆ.
1974 ರಿಂದ ನಾವಿಲ್ಲಿ ವಾಸಿಸುತ್ತಿದ್ದು, ನಮ್ಮ ಮಕ್ಕಳು ಇಲ್ಲಿಯೇ ಹುಟ್ಟಿ,ಇಲ್ಲಿಯೇ ಬೆಳೆದು ದೊಡ್ಡವರಾಗಿದ್ದಾರೆ. ಸಣ್ಣ-ಪುಟ್ಟ ಬೀದಿ ಜಗಳ ಹೊರತುಪಡಿಸಿದರೆ ಎಲ್ಲರೂ ಪರಸ್ಪರ ಅನೋನ್ಯವಾಗಿದ್ದೇವೆ.”
– ವೆಂಕಟರಾವ ಕಾಂಬಳೆ, ಪಂಚಶೀಲ ನಗರ ನಿವಾಸಿ,
ಇಲ್ಲಿ ಅನೇಕ ಜಾತಿ, ಧರ್ಮ, ಸಂಸ್ಕೃತಿಗಳಿದ್ದರೂ ಕೂಡ ಅವರು ಅವುಗಳ್ಯಾವುದಕ್ಕೆ ಲೆಕ್ಕಿಸದೆ ಇಲ್ಲಿಯ ಜನ ಅಣ್ಣ- ತಮ್ಮ ಅಕ್ಕ – ತಂಗಿ ಕಾಕ ಚಿಕ್ಕಪ್ಪ – ದೊಡ್ಡಪ್ಪ ಇತ್ಯಾದಿ ಮನೋಭಾವನೆಯಿಂದ ನಿತ್ಯ ಜೀವನ ನಡೆಸುತ್ತಿದ್ದಾರೆ. ಈ ಓಣಿಯಲ್ಲಿ ಹಿಂದೂ,ಮುಸ್ಲಿಂ, ಸಿಖ್,ಲಿಂಗಾಯತ, ದಲಿತ ಮುಂತಾದ ವಿವಿಧ ಧರ್ಮ ಜಾತಿ ಜನಾಂಗೀಯ ಜನ ವಾಸಿಸುತ್ತಿದ್ದು ಅವರೆಲ್ಲ ‘ನಾವೆಲ್ಲ ಒಂದು ನಾವು ಭಾರತೀಯರು ‘ ಎನ್ನುವಂತೆ ವಿವಿಧತೆಯಲ್ಲಿಯೂ ಏಕತೆಯನ್ನು ತೊರುತ್ತಿರುವುದು ನೋಡಿದರೆ ಪ್ರಜಾಸತ್ತಾತ್ಮಕವಾದ ನಮ್ಮ ಸಂವಿಧಾನ ಮತ್ತು ಭಾರತ ದೇಶಕ್ಕೆ ಗೌರವಾರ್ಥಕವಾಗಿದೆ ಎಂದು ಹೇಳಬಹುದು.
ಈ ಪಂಚಶೀಲ ನಗರವು ಕಲಬುರಗಿ
ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಿಂದ ಹಳೆ ಜೇವರ್ಗಿ ರಸ್ತೆಯ ಮೂಲಕ ರಾಮಮಂದಿರದ ಕಡೆಗೆ ಹೋಗುವ ಮಾರ್ಗದಲ್ಲಿ ಬಲಗಡೆಗೆ ‘ಪಂಚಶೀಲ ನಗರ’ ಎಂಬ ನಾಮಫಲಕ ಕಣ್ಣಿಗೆ ಬೀಳುತ್ತದೆ. ಅದೂ ಸ್ಲಂ ಎರಿಯಾವಾಗಿದೆ.
ಸುಮಾರು ಇಪ್ಪತ್ತು ವರ್ಷಗಳಿಂದ ನಾವಿಲ್ಲಿ ವಾಸವಾಗಿದ್ದೇವೆ. ಆದರೆ ಯಾರೊಂದಿಗೂ ಯಾವುದೇ ರೀತಿಯ ಮನಸ್ತಾಪ ಬೆಳೆಸಿಕೊಂಡಿಲ್ಲ. ಹಿಂದೂ-ಮುಸ್ಲಿಂರೆಲ್ಲರೂ ಕೂಡಿ ನಾವು ಭಾವೈಕ್ಯದಿಂದ ಇದ್ದೇವೆ.
–ಹುಮಾಯುನ್, ಪಂಚಶೀಲ ನಗರ ನಿವಾಸಿ, ಕಲಬುರಗಿ
ಈ ನಗರದಲ್ಲಿ ಪ್ರವೇಶ ಮಾಡಿದಾಗ ಅಲ್ಲಿ ಮೊದಲಿಗೆ ಕಂಡು ಬರುವ ದೃಶ್ಯಗಳೆಂದರೆ,
ಮಂದಿರ, ಮಸೀದಿ ಹಾಗೂ ಬುದ್ಧ ಮಂದಿರದ ಕಟ್ಟಡಗಳು ಕಾಣಿಸುತ್ತವೆ. ಒಳಹೊಕ್ಕು ನೋಡಿದರೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಹಾಗೂ ಸಿಖ್ ಜನಾಂಗದವರು ಇಲ್ಲಿ ಒಗ್ಗಟ್ಟಿನ ಸಹೋದರತೆಯಿಂದ ವಾಸಿಸುತ್ತಿರುವುದು ಕಂಡು ಬರುತ್ತದೆ.
ಸುಮಾರು 70ರ ದಶಕದಲ್ಲಿ ಪಂಜಾಬ್ ನಿಂದ, ಮಹಾರಾಷ್ಟ, ಹಾಗೂ ಇತರೆ ಕಡೆಗಳಿಂದ ಇಲ್ಲಿಗೆ ವಲಸೆ ಬಂದ ವಿವಿಧ ಜಾತಿ, ಧರ್ಮ ಹಾಗೂ ಹಿಂದೂ ಧರ್ಮದ ವಿವಿಧ ಸಮುದಾಯದ ಹಿಂದುಳಿದ ಜನರು ಇಂದಿಗೂ ಇಲ್ಲಿ ಒಟ್ಟಾಗಿ ಬಾಳುತ್ತಿರುವುದು ಈ ಕಾಲದ ಸೋಜಿಗವೆಂದೇ ಹೇಳಬೇಕಾಗುತ್ತದೆ.
ಹಿಂದೂ ಧರ್ಮದ ಪ್ರಮುಖ ಹಬ್ಬಗಳಾದ ಯುಗಾದಿ, ಶಿವರಾತ್ರಿ, ಮಹಾನವಮಿ, ದೀಪಾವಳಿ ಮುಂತಾದವುಗಳು ಮತ್ತು ಮುಸ್ಲಿಂರ ರಂಜಾನ್, ಮೋಹರಂ ಹಬ್ಬಗಳನ್ನು ಕೂಡ ಬಹಳ ಸ್ನೇಹ ಸೌಹಾರ್ದತೆಯಿಂದ ಆಚರಿಸುವ ಇಲ್ಲಿಯ ಜನ ‘ನವ ಚೇತನ’ ತರುಣ ಸಂಘ ಕಟ್ಟಿಕೊಂಡು ಗುರುನಾನಕ ಜಯಂತಿ, ಬುದ್ಧಪೂರ್ಣಿಮೆ, ಅಂಬೇಡ್ಕರ್ ಜಯಂತಿ, ಕನಕ ಜಯಂತಿ, ಅಂಬಿಗರ ಚೌಡಯ್ಯ ಜಯಂತಿ, ವಾಲ್ಮೀಕಿ ಜಯಂತಿ ಮುಂತಾದ ಉತ್ಸವ ಹಾಗೂ ಕಾರ್ಯಕ್ರಮಗಳನ್ನು ಎಲ್ಲರೂ ಸೇರಿ ಆಚರಿಸುತ್ತಾರೆ ಅನ್ನುವುದೇ ಒಂದು ವಿಶೇಷವಾಗಿದೆ.
ಸುಮಾರು ಎರಡು ಸಾವಿರದಷ್ಟು ಜನಸಂಖ್ಯೆ ಹೊಂದಿರುವ ಈ ಬಡಾವಣೆಯನ್ನು ಸ್ಲಂ ಪ್ರದೇಶ ಎಂದು ಗುರುತಿಸಲಾಗುತ್ತಿದ್ದರೂ ಹಿಂದೂಗಳು ಹಬ್ಬದ ದಿನಗಳಲ್ಲಿ ಮಾಡುವ ಹೋಳಿಗೆ, ಹುಗ್ಗಿ, ಮಾಲ್ದಿ ಮುಂತಾದ ವಿಶೇಷ ಸಿಹಿ ಪದಾರ್ಥಗಳು, ಮುಸ್ಲಿಂರು ರಂಜಾನ್ ಹಬ್ಬದಲ್ಲಿ ಮಾಡುವ ಸುರಕುಂಬಾ, ಶಿಖ್ರು ಗುರುನಾನಕ ಜಯಂತಿ ವೇಳೆ ತಯಾರಿಸುವ ಲ್ಯಾಕ್ಟೋ ಇತ್ಯಾದಿ ಸಿಹಿ ಪದಾರ್ಥಗಳು ಇಲ್ಲಿ ಪರಸ್ಪರರು ಹಂಚಿಕೊಂಡು ತಿನ್ನುತ್ತಾರೆ.
ಇದು ಕೇವಲ ಆಹಾರ ಮತ್ತು ಉಡುಪಿಗೆ ಮಾತ್ರ ಸೀಮಿತವಾಗಿರದೆ, ಭಾಷೆ ಹಾಗೂ ಸಂಸ್ಕೃತಿಯಲ್ಲೂ ಮಿಳಿತಗೊಂಡಿದೆ.
ಹೀಗಾಗಿ ಈ ಬಡಾವಣೆ ಒಮ್ಮೆ ಸುತ್ತಾಡಿ ಬಂದರೆ ಸಾಕು ನೋಡಿದವರಿಗೆ ಅದೊಂದು
‘ಮಿನಿ ಭಾರತ’ ಎಂದೆನಿಸುತ್ತದೆ.
ಈ ಬಡಾವಣೆಯ ಅನೇಕ ಜನರು ಉತ್ತಮವಾಗಿ ಓದಿ ಅಧ್ಯಯನ ಪಡೆದು ಪದವಿಧರರಾಗಿರುವುದು ಅಷ್ಟೇಯಲ್ಲದೆ ಸರ್ಕಾರಿ ಹುದ್ದೆಗಳನ್ನು ಪಡೆದಿದ್ದಾರೆ. ಈಗ ಅವರಲ್ಲಿ ಕೆಲವರು ರೈಲ್ವೆ, ಶಿಕ್ಷಣ, ಕಂದಾಯ ಮುಂತಾದ ಇಲಾಖೆಯ ವಿವಿಧ ಹುದ್ದೆಗಳಲ್ಲಿ ನೌಕರಿ ಮಾಡುತ್ತಿದ್ದಾರೆ. ಈ ನಗರದ ನಂದಕುಮಾರ ಮಾಲಿಪಾಟೀಲ ಎನ್ನುವವರು ಕಲಬುರಗಿ ಮಹಾನಗರ ಪಾಲಿಕೆಯ ಉಪ ಮಹಾಪೌರರಾಗಿ ಕೂಡ ಕರ್ತವ್ಯ ನಿರ್ವಹಿಸಿದ್ದಾರೆ. ಹಾಗೆಂದ ಮಾತ್ರಕ್ಕೆ ಇಲ್ಲಿ ಎಲ್ಲವೂ ಪರಿಪೂರ್ಣವೆಂದಲ್ಲ.
ಆಗಾಗ ಇಲ್ಲಿನ ಯುವಕರು ಕೊಲೆ, ಸುಲಿಗೆ, ದರೋಡೆಯಂತಹ ಅಪರಾಧ ಪ್ರಕರಣಗಳಲ್ಲಿ ಕೂಡ ಭಾಗಿಯಾಗಿರುವುದು ಖೇದಕರವಾದ ಸಂಗತಿಯಾಗಿದೆ. ಅಂತಹ ಯುವಕರಿಗೆ ಉದ್ಯೋಗ ಮತ್ತು ಶಿಕ್ಷಣದ ಅವಶ್ಯಕತೆ ಇದೆ ಸರ್ಕಾರ ಈ ವಿಷಯದ ಕಡೆಗೆ ತುಂಬ ಗಮನಹರಿಸಬೇಕಾಗಿದೆ.
ಈ ಜನರ ಬದುಕು
ಹಿಂದಿ ಭಾಷೆಯ “ತಾರಕ್ ಮೆಹ್ತಾ ಕಾ ಉಲ್ಟಾ ಛಸ್ಮಾ” ಎಂಬ ಪ್ರಸಿದ್ಧ ಧಾರಾವಾಹಿಯಲ್ಲಿ ನಡೆಯುವ ಎಲ್ಲ ಬಗೆಯ ಪ್ರಸಂಗಗಳು, ಅವಗಡಗಳು ಇಲ್ಲಿ ದಿನನಿತ್ಯ ನಡೆಯುತ್ತಿದ್ದರೂ ಎಲ್ಲರೂ ಒಗ್ಗಟ್ಟಿನಿಂದ ವಾಸಿಸುತ್ತಿರುವುದು ಮಾತ್ರ ಭವ್ಯ ಭಾರತದ ವರ್ತಮಾನದಲ್ಲಿ ಇದು ಅಗತ್ಯವಾಗಿ ಗೋಚರಿಸುತ್ತಿದೆ ಎಂದು ಹೇಳಬಹುದು.
– ಡಾ.ಶಿವರಂಜನ ಸತ್ಯಂಪೇಟೆ.ಕಲಬುರಗಿ.
ಲೇಖಕರ ಪರಿಚಯ:
‘ಶರಣ ಮಾರ್ಗ ‘ಮಾಸ ಪತ್ರಿಕೆಯ ಸಂಪಾದಕ, ಪತ್ರಕರ್ತ- ಲೇಖಕರಾದ ಡಾ.ಶಿವರಂಜನ್ ಸತ್ಯಂಪೇಟೆ ಅವರು ಕಲ್ಯಾಣ ಕರ್ನಾಟಕದ ಸಾಂಸ್ಕೃತಿಕ ವಲಯದಲ್ಲಿ ಚಿರಪರಿಚಿತರು. 1973ರ ಏಪ್ರಿಲ್ 1ರಂದು ಶಹಾಪುರದಲ್ಲಿ ಜನಿಸಿದರು. ತಂದೆ ಹೆಸರಾಂತ ಸಾಹಿತಿ ಪತ್ರಕರ್ತ-ವಿಚಾರವಾದಿ ಲಿಂಗಣ್ಣ ಸತ್ಯಂಪೇಟೆ. ತಂದೆಯ ಪ್ರಖರ ವೈಚಾರಿಕತೆಯ ಬೆಳಕಿನಲ್ಲಿ ಬೆಳೆದ ಶಿವರಂಜನ್’ ಅವರು ಎಂ.ಎ.ಪಿ.ಎಚ್.ಡಿ ಪದವೀಧರರು
ಶಹಾಪುರದ ಚರಬಸವೇಶ್ವರ ಪದವಿ ಪೂರ್ವ ಕಾಲೇಜು ಮತ್ತು ಬಾಪುಗೌಡ ದರ್ಶನಾಪುರ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವಾಗಲೇ ಹವ್ಯಾಸಿ ಪತ್ರಕರ್ತರಾಗಿದ್ದರು. ಸಂಜೆವಾಣಿ ಪತ್ರಿಕೆಯ ಶಹಾಪುರದ ವರದಿಗಾರರಾಗಿದ್ದರು. ನಂತರ ಪೂರ್ಣ ಪ್ರಮಾಣದಲ್ಲಿ ಪತ್ರಿಕಾ ವೃತ್ತಿಗೆ ಬಂದ ಅವರು ಉಷಾಕಿರಣ, ಪ್ರಜಾವಾಣಿ, ವಿಜಯವಾಣಿ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಅವರು ’ಶರಣ ಮಾರ್ಗ’ ಮಾಸ ಪತ್ರಿಕೆಯ ಸಂಪಾದಕರಾಗಿದ್ದಾರೆ.
’ಒಂದು ಮುಂಜಾವು’, ’ಎಲೆಮರೆ’, ’ಅರಿವಿನ ಹಣತೆ’, ’ನಾಡೋಜ ಪಾಟೀಲ ಪುಟ್ಟಪ್ಪ’, ’ಮುಖಾಮುಖಿ’ ಮುಂತಾದ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.