Oplus_131072

ಕನ್ನಡಮ್ಮನ ಸೇವೆಯಿಂದ ಬದುಕು ಸಾರ್ಥಕ ಪಡಿಸಿಕೊಂಡ ಕನ್ನಡ ಶಿಕ್ಷಕ.

– ಜಿ.ಎಸ್.ಗಾಯತ್ರಿ.ಹರಿಹರ

ನವೆಂಬರ್ ತಿಂಗಳು ಬಂತೆಂದರೆ ಕನ್ನಡಿಗರಿಗೆ ಹಬ್ಬವೋ ಹಬ್ಬ. ಅನೇಕ ಸಂಘ ಸಂಸ್ಥೆಗಳಲ್ಲಿ , ಶಾಲಾ ಕಾಲೇಜುಗಳಲ್ಲಿ , ನಗರ ಪಾಲಿಕೆಗಳಲ್ಲಿ , ರಾಜ್ಯದ ಮೂಲೆ ಮೂಲೆಗಳಲ್ಲಿ ಕನ್ನಡ ರಾಜ್ಯೋತ್ಸವದ ಜೊತೆಗೆ ಅನೇಕ ಕನ್ನಡಪರ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಅಂತೆಯೇ ನವೆಂಬರ್ 9 ರಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕೇವಲ ರಾಜ್ಯೋತ್ಸವವಾಗಿರದೆ ಪ್ರತಿಯೊಬ್ಬ ಕನ್ನಡಿಗನಲ್ಲೂ ಕನ್ನಡಾಭಿಮಾನವನ್ನು ಮೂಡಿಸುವ ಕಾರ್ಯಕ್ರಮವಾಗಿತ್ತು.
ಇದನ್ನು ಅಚ್ಚುಕಟ್ಟಾಗಿ ನಡೆಸಿ ಎಲ್ಲರ ಮನೆಮಾತಾಗುವಂತೆ ಮಾಡಿದವರು ಆ ಶಾಲೆಯ ಕನ್ನಡ ಭಾಷಾ ಶಿಕ್ಷಕರಾದ ನಾಗಪ್ಪ ಕಮದೋಡ್ .

ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ, ಎಲ್ಲೇ ಇರಲಿ ಹೇಗೇ ಇರಲಿ ಕನ್ನಡವೆ ನನ್ನ ಉಸಿರಲ್ಲಿ’

ಎನ್ನುತ್ತಾ 13 ವರ್ಷಗಳಿಂದ ಸತತವಾಗಿ ಕನ್ನಡ ಡಿಂಡಿಮ ಬಾರಿಸಿ ಕನ್ನಡಮ್ಮನ ಸೇವೆ ಮಾಡುತ್ತಿರುವ ನಾಗಪ್ಪ’ ರವರ ಕನ್ನಡ ಪ್ರೇಮ ಅನನ್ಯ, ಅಗಾಧ. ಯಾವ ಪ್ರತಿಫಲಾಪೇಕ್ಷೆಯಿಲ್ಲದೆ, ಯಾರ ಸಹಾಯವನ್ನೂ ಪಡೆಯದೆ ತಮ್ಮ ಸ್ವಂತ ಖರ್ಚಿನಲ್ಲಿ ಕಾರ್ಯಕ್ರಮ ನಡೆಸುವುದು ಸುಲಭದ ಮಾತಲ್ಲ.

ಮನೆಯು ಚಿಕ್ಕದಾಗಿರಬೇಕು ಮನಸು ದೊಡ್ಡದಾಗಿರಬೇಕು’ ಎಂಬ ಉಕ್ತಿಯಂತೆ ಚಿಕ್ಕ ವೇದಿಕೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಮಾಡಿರುವುದು ಅವರ ಹೃದಯ ವೈಶಾಲ್ಯತೆಯನ್ನು ಎತ್ತಿ ತೋರಿಸುತ್ತದೆ.

ಕೇಳಿಸದೆ ಕಲ್ಲುಕಲ್ಲಿನಲಿ ಕನ್ನಡ ನುಡಿ, ಕಾಣಿಸದೆ ಹೊನ್ನ ಚರಿತೆಯಲಿ ಹಂಪೆಯ ಗುಡಿ’

ಎಂದು ಕನ್ನಡದ ವೈಭವವನ್ನು ಮೆರೆಸುವಂತೆ ಶಾಲೆಯ ಗೋಡೆಗಳ ಮೇಲೆ, ಕಂಬಗಳ ಮೇಲೆ ಹಾಗೂ ಮರಗಿಡಗಳ ಮೇಲೆ ಕನ್ನಡ ಕವಿಗಳ, ಜ್ಞಾನ ಪೀಠ ಪ್ರಶಸ್ತಿ ವಿಜೇತರ, ರಾಷ್ಟ್ರ ನಾಯಕರ, ವೀರ ವನಿತೆಯರ, ಕನ್ನಡಕ್ಕಾಗಿ ದುಡಿದ ಮಹನೀಯರ, ಪರಿಸರ ಪ್ರೇಮಿಗಳ ಭಾವಚಿತ್ರಗಳನ್ನು ವಿವರಣೆ ಸಹಿತವಾಗಿ ತೂಗು ಹಾಕಿ ಅಲ್ಲಿ ನೆರೆದಿರುವ ಪ್ರತಿಯೊಬ್ಬರಲ್ಲೂ ಕನ್ನಡ ಪ್ರೇಮವನ್ನು ಜಾಗೃತಗೊಳಿಸಿರುವುದು ಒಂದು ವಿಶೇಷ.
ಎಲ್ಲಿ ನೋಡಿದರಲ್ಲಿ ಕನ್ನಡದ ವೈಭವ. ಒಬ್ಬ ಉತ್ತಮ ಭಾಷಾ ಶಿಕ್ಷಕ ಏನೆಲ್ಲಾ ಕಾರ್ಯ ಚಟುವಟಿಕೆಗಳನ್ನು ಮಾಡಬಹುದು ಎಂಬುದನ್ನು ನಾಗಪ್ಪ ಸರ್ ಸಾಧಿಸಿ ತೋರಿಸಿದ್ದಾರೆ. ಅವರ ಜೊತೆಗೆ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕವೃಂದದವರು, ವಿದ್ಯಾರ್ಥಿ.. ವಿದ್ಯಾರ್ಥಿನಿಯರು, ಗ್ರಾಮಸ್ಥರು ಉತ್ಸಾಹದಿಂದ ಕೈ ಜೋಡಿಸಿ ‘ಒಗ್ಗಟ್ಟಿನಲ್ಲಿ ಬಲವಿದೆ ‘ ಎಂಬುದನ್ನು ಸಾಬೀತು ಪಡಿಸಿದ್ದಾರೆ.

ಒಂದೇ ವೇದಿಕೆಯಲ್ಲಿ ಕನ್ನಡ ರಾಜ್ಯೋತ್ಸವ, ಕವಿಗೋಷ್ಠಿ, ಪ್ರತಿಭಾ ಪುರಸ್ಕಾರ, ಹಳೆಯ ವಿದ್ಯಾರ್ಥಿಗಳಿಗೆ, ಕನ್ನಡ ಭಾಷಾ ಶಿಕ್ಷಕರಿಗೆ, ಪರಿಸರ ಪ್ರೇಮಿಗಳಿಗೆ ಹಾಗೂ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಕವಿಗಳಿಗೆ ಸನ್ಮಾನ… ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಒಬ್ಬರೇ ನಿರ್ವಹಿಸಿ ಆದರ್ಶ ಶಿಕ್ಷಕರೆನಿಸಿದ್ದಾರೆ.

ಕವಿಗೋಷ್ಠಿಗೂ ಮೊದಲು ನಮಗೆಲ್ಲರಿಗೂ ಅರಿಶಿನ..ಕುಂಕುಮ ಕೊಟ್ಟು , ಕೈಗೆ ಕಂಕಣ ಕಟ್ಟಿ , ಕನ್ನಡದ ಶಾಲು ಹೊದಿಸಿ ಗೌರವಿಸಿದ್ದಲ್ಲದೆ ಕವಿಗೋಷ್ಠಿಯ ನಂತರ ಎಲ್ಲರಿಗೂ ಭುವನೇಶ್ವರಿಯ ಸುಂದರವಾದ ಭಾವಚಿತ್ರ ಹಾಗೂ ಅಭಿನಂದನಾ ಪತ್ರವನ್ನು ಕೊಟ್ಟು , ಶಾಲು, ಹಾರ ಹಾಕಿ ಸನ್ಮಾನಿಸಿದಾಗ ನಮಗೆ ಇದೊಂದು ಅಭೂತಪೂರ್ವ ಕಾರ್ಯಕ್ರಮ ಅನ್ನಿಸಿತು. ಭುವನೇಶ್ವರಿಯ ದೊಡ್ಡ ಭಾವಚಿತ್ರ ಹಾಗೂ ಅಭಿನಂದನಾ ಪತ್ರವನ್ನು ಪಡೆದ ನಮ್ಮ ಮನದಲ್ಲಿ ನಾಗಪ್ಪ ಸರ್ ಹಾಗೂ ಶಾಲಾ ಮಂಡಳಿಯ ಬಗ್ಗೆ ಧನ್ಯತಾ ಭಾವ ಮೂಡಿ ಕಂಗಳಿಂದ ಆನಂದಾಶ್ರುಗಳು ಉದುರಿದವು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಮ್ಮ ಬದುಕು ಸಾರ್ಥಕವಾದಂತೆನಿಸಿತು. ಆ ಶಾಲೆಯ ಮಕ್ಕಳಂತೂ ಕಾರ್ಯಕ್ರಮ ಮುಗಿಯುವವರೆಗೂ ಸ್ವಲ್ಪವೂ ಗಲಾಟೆ ಮಾಡದೆ ಸಮಾಧಾನದಿಂದ ಕುಳಿತಿದ್ದುದನ್ನು ನೋಡಿದಾಗ ಆ ಮಕ್ಕಳ ಬಗ್ಗೆ ಹೆಮ್ಮೆಯೆನಿಸಿತು.

ಕನ್ನಡಕೆ ಹೋರಾಡು ಕನ್ನಡದ ಕಂದ
ಕನ್ನಡವ ಕಾಪಾಡು ನನ್ನ ಆನಂದ
ಜೋಗುಳದ ಹರಕೆಯಿದು ಮರೆಯದಿರು ಚಿನ್ನ
ಮರೆತೆಯಾದರೆ ಅಯ್ಯೋ ಮರೆತಂತೆ ನನ್ನ’

ಎಂಬ ಕವಿವಾಣಿಯನ್ನು ಪಾಲಿಸಿದ ಅಪ್ಪಟ ಕನ್ನಡಿಗ ನಾಗಪ್ಪ ಕಮದೋಡ್ ರವರ ಮೇಲೆ ತಾಯಿ ಭುವನೇಶ್ವರಿಯ ಕೃಪಾಶೀರ್ವಾದ ಸದಾ ಇರಲಿ, ಭಗವಂತನು ಅವರಿಗೆ ಆಯುರಾರೋಗ್ಯ ಭಾಗ್ಯ ಕೊಟ್ಟು ಕಾಪಾಡಲಿ ಎಂದು ನಾವೆಲ್ಲರೂ ಹಾರೈಸೋಣ.

ಜಿ.ಎಸ್.ಗಾಯತ್ರಿ
ಶಿಕ್ಷಕಿ.. ಬಾಪೂಜಿ ಶಾಲೆ
ಹರಿಹರ.ದಾವಣಗೆರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ