ಕಣ್ಣು ಕಂಡದ್ದೇ ಸತ್ಯ.
ಒಂದು ದಿನ ಕೃಷ್ಣದೇವರಾಯರು ತನ್ನ ಆಸ್ಥಾನ
ಪಂಡಿತರೊಂದಿಗೆ ಮಾತನಾಡುತ್ತ
ಕುಳಿತಿದ್ದಾಗ ‘ಪಂಡಿತರೆ, ನನಗೊಂದು ಸಂಶಯ ಬಂದಿದೆ. ಸತ್ಯ ಮತ್ತು ಅಸತ್ಯಗಳ ಬಗೆಗೆ ನಾವುಗಳೆಲ್ಲ ಏನೇನೋ ಹೇಳಿಕೊಳ್ಳುತ್ತೇವೆ, ಆದರೆ ಸತ್ಯ ಅಸತ್ಯಗಳಲ್ಲಿ ಎಷ್ಟು ಅಂತರವಿದೆ? ಯಾಕೆ ಇವುಗಳಿಗೆ ಪ್ರಾಧಾನ್ಯತೆ ಸಿಕ್ಕಿದ ಹೇಳುವಿರಾ?’ ಎಂದು ಕೇಳಿದರು.
ಆಗ ಪಂಡಿತರು ‘ಪ್ರಭು ಸತ್ಯಕ್ಕೂ ಅಸತ್ಯಕ್ಕೂ ಅಜಗಜಾಂತರ ಅಂತರವಿದೆ. ಸತ್ಯದಿಂದ ನಡೆದುಕೊಂಡವರ ಆತ್ಮ ಸಂತುಷ್ಟಗೊಂಡಿರುತ್ತದೆ. ಅವರು ಯಾವಾಗಲೂ ಉಲ್ಲಸಿತರಾಗಿರುತ್ತಾರೆ. ಇನ್ನು ಅಸತ್ಯದಿಂದ ನಡೆದುಕೊಂಡವರು ಜೀವಿಸಿದ್ದರೂ ಸತ್ತಂತೆ ಆಗಿರುತ್ತಾರೆ. ಹೀಗೆ ಸತ್ಯ ಮತ್ತು ಅಸತ್ಯದ ನಡುವೆ ಬಹಳಷ್ಟು ಅಂತರವಿದೆ’ ಎಂದು ಹೇಳಿದರು.
ಪಂಡಿತರೊಡನೆ ಇದ್ದವರೂ ಇದೇ ರೀತಿ ವಾಖ್ಯೆ ಮಾಡಿ ಉದ್ದುದ್ದ ಭಾಷಣ ಮಾಡಿದರು.
ಆಗ ಮಹಾರಾಜರು ಅಲ್ಲಿಯೇ ಕುಳಿತಿದ್ದ ರಾಮಕೃಷ್ಣನಿಗೂ ಇದೇ ಪ್ರಶ್ನೆ ಹಾಕಿದರು. ಆಗ ರಾಮಕೃಷ್ಣ ‘ಮಹಾರಾಜ ಸತ್ಯಕ್ಕೂ ಅಸತ್ಯಕ್ಕೂ ಅಂತರ ಬಹಳಿಲ್ಲ. ಕೇವಲ ಮೂರು ಬೆರಳಿನಷ್ಟು ಅಂತರವಿದೆ’ ಎಂದು ಹೇಳಿದ.
‘ಮೂರು ಬೆರಳಿನಷ್ಟು ಅಂತರವೆ? ಅದು ಹೇಗೆ? ಎಂದು ಮಹಾರಾಜರು ಕುತೂಹಲದಿಂದ ಕೇಳಿದರು.
`ನಿಮ್ಮ ಮಾತುಗಳಲ್ಲೇ ಉತ್ತರವಿದೆ ಮಹಾರಾಜ, ಕಣ್ಣಿಗೆ ಕಾಣಿಸುವುದು ಸತ್ಯವಾದದ್ದು, ಕಿವಿ ಕೇಳುವುದು ಸತ್ಯವೆಂದು ನಂಬಲು ಆಗಲಾರದ್ದು. ಆದುದರಿಂದ ಸತ್ಯ ಅಸತ್ಯಗಳೆಂದರೆ ನಮ್ಮ ಕಣ್ಣು-ಕಿವಿಗಳೇ ಆಗಿವೆ. ಇವೆರಡರ ನಡುವಿನ ಅಂತರ ಕೇವಲ ಮೂರು ಬೆರಳಿನಷ್ಟು’ ಎಂದು ರಾಮಕೃಷ್ಣ ತನ್ನ ಬಲಗೈಯನ್ನೆತ್ತಿ, ಮೂರು ಬೆರಳುಗಳನ್ನು ಕಿವಿ-ಕಣ್ಣುಗಳ ಮಧ್ಯ ಇಟ್ಟು ತೋರಿಸಿದನು. ಕೃಷ್ಣದೇವರಾಯರು ಅವನ ಮಾತಿಗೆ ತಲೆದೂಗಿದರು. ಪಂಡಿತರು ಕೆಳಗೆ ಮುಖ ಹಾಕಿಕೊಂಡು ಕುಳಿತಿದ್ದರು.
ಸಂಗ್ರಹ: ವಿಶ್ವನಾಥ ಕೋಟಿ, ಧಾರವಾಡ