ಕರುನಾಡಿನ ‘ಯುವರತ್ನ’ ಅಪ್ಪು .
ಖ್ಯಾತ ನಟ ಡಾ. ಪುನೀತ್ ರಾಜ್‍ಕುಮಾರ್ ರವರು 29 ಅಕ್ಟೋಬರ್ 2021 ರಂದು ನಮ್ಮನ್ನೆಲ್ಲ ಅಗಲಿ ಇಂದಿಗೆ ಮೂರು ವರ್ಷವಾಯಿತ್ತು. ಅವರ ಸ್ಮರಣಾರ್ಥವಾಗಿ ಈ ಲೇಖನ ಪ್ರಕಟಿಸಲಾಗಿದೆ.
– ಸಂ.
2021 ಅಕ್ಟೋಬರ್ 29 ಕನ್ನಡಿಗರ ಪಾಲಿಗೆ ಕರಾಳ ದಿನ, ಕನ್ನಡದ ಕಣ್ಮಣಿ ಅಪ್ಪು ನಮ್ಮೆಲ್ಲರಿಂದ ದೂರವಾದ ದುರ್ದಿನ.ಆ ದಿನವನ್ನು ನೆನಪಿಸಿಕೊಳ್ಳಲೂ ಕಷ್ಟವಾಗುತ್ತದೆ. ಕರ್ನಾಟಕದ ರತ್ನ, ಕನ್ನಡ ನಾಡಿನ ಹೆಮ್ಮೆಯ ಪುತ್ರ ಇಷ್ಟು ಬೇಗ ಕನ್ನಡಿಗರನ್ನು, ಕನ್ನಡದ ನೆಲವನ್ನು ಬಿಟ್ಟು ಹೋಗುತ್ತಾರೆ ಎಂದು ಕನಸು ಮನಸಿನಲ್ಲೂ ಯಾರೂ ಎಣಿಸಿರಲಿಲ್ಲ. ಎಳೆವಯಸ್ಸಿನಲ್ಲೇ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿ, ರಾಷ್ಟ್ರಪ್ರಶಸ್ತಿ ವಿಜೇತನಾಗಿ,ಎಲ್ಲ ಪಾತ್ರಗಳಿಗೂ ಜೀವ ತುಂಬಿ,ಯಾವ ಪಾತ್ರವಾದರೂ ಸೈ ಎನ್ನುತ್ತ, ತಂದೆಯನ್ನೇ ಮೀರಿಸುವಂಥ ನಾಯಕ… ಗಾಯಕನಾಗಿ ಬೆಳೆದು ಎಲ್ಲರ ಪ್ರೀತಿಗೆ ಪಾತ್ರರಾದ ಅಪ್ಪು ಇಂದು ನಮ್ಮೊಂದಿಗಿಲ್ಲ ಎಂಬುದನ್ನು ನೆನೆಸಿಕೊಂಡರೆ ನಮ್ಮ ಕಣ್ಣಾಲಿಗಳು ದುಃಖದಿಂದ ಒದ್ದೆಯಾಗುತ್ತವೆ.
ನಟ, ಗಾಯಕ, ನಿರೂಪಕ, ನಿರ್ಮಾಪಕರಾಗಿ ಗುರ್ತಿಸಿಕೊಡ ಡಾ.ಪುನೀತ್ ರಾಜ್ ಕುಮಾರ್ ಅವರು ಬಾಲ್ಯದಲ್ಲಿಯೇ ತನ್ನ ತಂದೆ ಡಾ.ರಾಜಕುಮಾರ್ ಅಭಿನಯದ ಚಿತ್ರಗಳಲ್ಲಿ ಬಾಲನಟನಾಗಿ ಗುರುತಿಸಿಕೊಂಡಿದರು.
‘ಬಾನದಾರಿಯಲ್ಲಿ ಅಪ್ಪು ಜಾರಿ ಹೋದ
ನಮ್ಮ ಮನದಿ ನಿಂದ
ಸೂರ್ಯನಂತೆ ಬೆಳಗಿ ತಾರೆಯಂತೆ ಮಿನುಗಿ
ಚಂದ್ರನಂತೆ ತಂಪುಚೆಲ್ಲಿ ಸೂರೆಗೊಂಡ
ಮನವ ಸೂರೆಗೊಂಡ’.
ಕನ್ನಡದ ಮೇರು ನಟ ಡಾ.ರಾಜಕುಮಾರ್ ಹಾಗೂ ಪಾರ್ವತಮ್ಮನವರ ಕಿರಿಯ ಪುತ್ರರಾದ ಪುನೀತ್ ತಾವು ಬದುಕಿದ ಅಲ್ಪಾಯುಷ್ಯದಲ್ಲೇ ಮಹತ್ತರವಾದ ಸಾಧನೆ ಮಾಡಿದ, ಸಾರ್ಥಕ ಬದುಕಿನ ಸಾಧಕ ಎಂದರೆ ತಪ್ಪಾಗಲಾರದು.
ಡಾ.ಪುನೀತ್ ರಾಜಕುಮಾರ ಅವರ ಬೆಟ್ಟದ ಹೂವು ಚಿತ್ರದ ಪಾತ್ರಕ್ಕೆ ಅತ್ಯುತ್ತಮ ಬಾಲ ಕಲಾವಿದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ , ಚಲಿಸುವ ಮೋಡಗಳು ಮತ್ತು ಎರಡು ನಕ್ಷತ್ರಗಳು ಚಿತ್ರಕ್ಕಾಗಿ ಕರ್ನಾಟಕ ರಾಜ್ಯ ಅತ್ಯುತ್ತಮ ಬಾಲ ಕಲಾವಿದ ಪ್ರಶಸ್ತಿಯನ್ನು ಪಡೆದಿದ್ದರು.
“ಆಡದಲೆ ಮಾಡುವನು ರೂಢಿಯೊಳಗುತ್ತಮನು” ಎಂಬ ಸರ್ವಜ್ಞನ ವಚನದ ಸಾಲಿನಂತೆ ಅಪ್ಪುತಾವು ಮಾಡುತ್ತಿದ್ದ ಸಮಾಜ ಸೇವೆಯ ಬಗ್ಗೆ ಎಲ್ಲಿಯೂ,ಯಾರ ಬಳಿಯೂ ಹೇಳಿಕೊಂಡಿರಲಿಲ್ಲ.’ದೇಹಿ’ ಎಂದು ಬಂದವರನ್ನು ಬರಿಗೈಲಿ ಕಳಿಸುತ್ತಿರಲಿಲ್ಲ. ಅಷ್ಟೇ ಏಕೆ ? ತಾವೇ ಸ್ವತಃ ಜನರ ಕಷ್ಟಗಳನ್ನರಿತು ಅವರ ನೆರವಿಗೆ ಧಾವಿಸುತ್ತಿದ್ದ ನಿಸ್ವಾರ್ಥ ಜೀವಿ.
“ಇಳೆಯಿಂದ ಮೊಳಕೆ ಒಗೆವಂದು ತಮಟೆಗಳಿಲ್ಲ
ಫಲ ಮಾಗುವಂದು ತುತ್ತೂರಿ ದನಿಯಿಲ್ಲ
ಬೆಳಕೀವ ಸೂರ್ಯ ಚಂದ್ರರದೊಂದು ಸದ್ದಿಲ್ಲ
ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ”
ಡಿ.ವಿ.ಜಿ.ಯವರ ‘ಮಂಕುತಿಮ್ಮನ ಕಗ್ಗ’ ದಲ್ಲಿರುವ ಈ ಸಾಲುಗಳು ಅಪ್ಪುವಿನಂಥವರಿಗೆ ಅನ್ವಯಿಸುತ್ತವೆ.ನಾವು ಬಿತ್ತಿದ ಬೀಜವು ಭೂಮಿಯಿಂದ ಮೊಳಕೆಯೊಡೆಯುವಾಗ ತಮಟೆಯ ಸದ್ದು ಕೇಳಿಸುವುದಿಲ್ಲ.ಮರದಲ್ಲಿ ಹಣ್ಣು ಪಕ್ವವಾಗುವಾಗ ತುತ್ತೂರಿಯ ಧ್ವನಿ ಇರುವುದಿಲ್ಲ.ಪ್ರತಿನಿತ್ಯ ನಮಗೆ ಬೆಳಕು ನೀಡುವ ಸೂರ್ಯ ಚಂದ್ರರು ಉದಯಿಸುವಾಗ ಯಾವುದೇ ರೀತಿಯ ಶಬ್ದ ಮಾಡುವುದಿಲ್ಲ. ಇವೆಲ್ಲವೂ ತಮ್ಮ ತಮ್ಮ ಕೆಲಸವನ್ನು ಕರ್ತವ್ಯವೆಂಬಂತೆ ಮೌನವಾಗಿಯೇ ಮಾಡುತ್ತವೆ.ಅದೇ ರೀತಿ ಅಪ್ಪು ಕೂಡ ಯಾವುದೇ ಪ್ರಚಾರ ಬಯಸದೆ, ಯಾರಿಗೂ ತಿಳಿಯದ ರೀತಿಯಲ್ಲಿ ಸಮಾಜ ಸೇವೆಯನ್ನು ಮಾಡುತ್ತಿದ್ದರು.ದಾನ, ಧರ್ಮ, ದಯೆ, ಕರುಣೆ, ಸರಳತೆ, ನಿಸ್ವಾರ್ಥ ಸೇವೆಯ ಪ್ರತೀಕವೇ ಅಪ್ಪು ಎಂದರೆ ಅತಿಶಯೋಕ್ತಿಯಾಗಲಾರದು.ಇಂದಿನ ಸಮಾಜದಲ್ಲಿ ಏನೂ ಕೆಲಸ ಮಾಡದೆ ಡಂಗುರ ಸಾರುತ್ತಾ ಪ್ರಚಾರ ಗಿಟ್ಟಿಸಿಕೊಳ್ಳುವ ಅನೇಕ ಜನರಿದ್ದಾರೆ.ಇಂಥವರನ್ನು ಕುರಿತು ಕವಿ ‘ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ’ ಎಂದು ಎಚ್ಚರಿಸಿದ್ದಾರೆ.
ಡಾ.ಪುನೀತ್ ರಾಜ್ ಕುಮಾರ್ ರವರು ಒಟ್ಟು 29 ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ವಸಂತ ಗೀತ (1980), ಭಾಗ್ಯವಂತ (1981), ಚಲಿಸುವ ಮೋಡಗಳು (1982), ಎರಡು ನಕ್ಷತ್ರಗಳು (1983), ಭಕ್ತ ಪ್ರಹ್ಲಾದ, ಯಾರಿವನು ಮತ್ತು ಬೆಟ್ಟದ ಹೂವು (1985) ಇತ್ಯಾದಿ ಚಿತ್ರಗಳಲ್ಲಿ ನಟಿಸಿದ್ದಾರೆ.
ಪರೋಪಕಾರಾಯ ಫಲಂತಿ ವೃಕ್ಷಾ:
ಪರೋಪಕಾರಾಯ ವಹಂತಿ ನದ್ಯ:।
ಪರೋಪಕಾರಾಯ ದುಹಂತಿ ಗಾವ:
ಪರೋಪಕಾರಾರ್ಥಮಿದಂ ಶರೀರಂ!
ಬೇರೆಯವರಿಗೆ ಉಪಕಾರ ಮಾಡಲೆಂದೇ ಮರಗಳು ಹಣ್ಣುಗಳನ್ನು ನೀಡುತ್ತವೆ,ನದಿಗಳು ಹರಿದು ಜೀವ ಸಂಕುಲವನ್ನು ರಕ್ಷಿಸುತ್ತವೆ,ಹಸುಗಳು ಹಾಲನ್ನು ಕೊಡುತ್ತವೆ.ಅದೇ ರೀತಿ ಮನುಷ್ಯನ ಶರೀರವೂ ಕೂಡ ಪರೋಪಕಾರಕ್ಕಾಗಿಯೇ ಜನ್ಮ ತಾಳುತ್ತದೆ.ಹಾಗೆಂದು ಭೂಮಿಯ ಮೇಲೆ ಹುಟ್ಟಿದವರೆಲ್ಲರೂ ಪರೋಪಕಾರಿಗಳಾಗಿಯೇ ಇರುವುದಿಲ್ಲ.ಅಪ್ಪುವಿನಂಥವರು ಮಾತ್ರ ಈ ರೀತಿ ಬದುಕಲು ಸಾಧ್ಯ.ತಾವು ಬದುಕಿರುವಷ್ಟು ದಿನವೂ ಪರೋಪಕಾರವೆಸಗುತ್ತಾ,ಸಾವಿನಲ್ಲೂ ಸಾರ್ಥಕತೆಯನ್ನು ಮೆರೆದ ಪುಣ್ಯಜೀವಿ ಈ ರಾಜಕುಮಾರ.ತಂದೆಯವರ ಮಾರ್ಗದಲ್ಲೇ ನಡೆದು, ಸಾವಿನ ನಂತರ ನೇತ್ರದಾನ ಮಾಡಿ, ಅಂಧರ ಬಾಳಿಗೆ ಬೆಳಕಾಗಿ,ಅಭಿಮಾನಿಗಳೆಲ್ಲರಿಗೂ ಸ್ಫೂರ್ತಿಯ ಸೆಲೆಯಾಗಿ ‘ಧನ್ಯಜೀವಿ’ ಎನಿಸಿಕೊಂಡಿದ್ದಾರೆ.
ಡಾ.ಪುನೀತ್ ರಾಜಕುಮಾರ ಅವರು 2002 ರಲ್ಲಿ ‘ಅಪ್ಪು ‘ ಚಲನ ಚಿತ್ರದಲ್ಲಿ ಪ್ರಥಮ ಬಾರಿಗೆ ನಾಯಕ ನಟನಾಗಿ ಕಾಣಿಸಿಕೊಂಡು ಜನಮನದಲ್ಲಿ ನೆಲೆಸಿದರು.
ಅವರು ಬದುಕಿದ್ದರೆ ಇನ್ನೂ ಎಷ್ಟೋ ಸಮಾಜಮುಖಿ ಕಾರ್ಯಗಳಾಗುತ್ತಿದ್ದವು.ಎಷ್ಟೋ ಕುಟುಂಬಗಳಿಗೆ ಆಸರೆ ಸಿಗುತ್ತಿತ್ತು.ಆದರೆ ವಿಧಿಲಿಖಿತವೇ ಬೇರೆಯಾಗಿತ್ತು.’ತಾನೊಂದು ಬಗೆದರೆ ದೈವವೊಂದು ಬಗೆಯಿತು’ ಎನ್ನುವಂತೆ ದೇವರ ಪಾದಕ್ಕೆ ಆ ಬೆಟ್ಟದ ಹೂವೇ ಬೇಕಾಗಿತ್ತೇನೋ.ಬಾಳಿ ಬದುಕಬೇಕಾಗಿದ್ದ ಭಾಗ್ಯವಂತನನ್ನು ಅವಸರವಾಗಿ ತನ್ನ ಬಳಿ ಕರೆಸಿಕೊಂಡ ಆ ಭಗವಂತ.
‘ಚಲಿಸುವ ಮೋಡದಲಿ ಮರೆಯಾದ ಚಂದ್ರಮ
ಕನ್ನಡ ನಾಡಿಗೆ ಅವನ ಸೇವೆ ಅನುಪಮ
ಆಕಾಶದಲಿ ಹೊಳೆಯುವ ತಾರೆಯಾಗಿ
ಅಂಧರ ಬಾಳನು ಬೆಳಗಿದ ಜ್ಯೋತಿಯಾಗಿ
ನಂದಾದೀಪವಾಗಿ’.
ಎಲ್ಲರನ್ನೂ ತಮ್ಮವರೆಂದು ತಿಳಿದು, ಎಲ್ಲರಿಗೂ ತಮ್ಮ ಪ್ರೀತಿ ಹಂಚಿ, ಸದಾ ನಗುಮೊಗದಿಂದ, ಆತ್ಮೀಯತೆಯಿಂದ ಮಾತನಾಡಿಸುತ್ತಿದ್ದ ಧೀಮಂತ ವ್ಯಕ್ತಿ,ಸ್ವಲ್ಪವೂ ಅಹಂಭಾವವಿಲ್ಲದ ಅಜಾತಶತ್ರು ಇಂದು ನಮ್ಮೆಲ್ಲರಿಂದ ದೂರವಾಗಿದ್ದರೂ ಅವರ ನೆನಪು ಮಾತ್ರ ಅಜರಾಮರ.ತಂದೆ ತಾಯಿಯರ ‘ಪ್ರೇಮದ ಕಾಣಿಕೆ’ಯಾಗಿ ‘ಭೂಮಿಗೆ ಬಂದ ಭಗವಂತ’ ಅಪ್ಪು.ನಾಯಕನಾಗಿ, ಗಾಯಕನಾಗಿ,ಎಲ್ಲರ ಮನೆ ಮಾತಾಗಿ ‘ಆಕಾಶ’ದೆತ್ತರಕ್ಕೆ ಬೆಳೆದ ‘ಅಭಿ’. ಕನ್ನಡಿಗರ ಬಾಳಲ್ಲಿ ‘ಹೊಸ ಬೆಳಕು’ ಮೂಡಿಸಿದ ‘ದೊಡ್ಮನೆ ಹುಡುಗ’.ಬಾನ ದಾರಿಯಲ್ಲಿ ಸಾಗುತ್ತಾ ‘ಚಲಿಸುವ ಮೋಡಗಳ’ಲ್ಲಿ ಮರೆಯಾದ ಕರ್ನಾಟಕದ ‘ಯುವರತ್ನ’ನ ಆದರ್ಶದ ಬದುಕು ವಿಶ್ವಕ್ಕೇ ಮಾದರಿ.ಭಾರತೀಯ ಚಿತ್ರ ರಂಗದವರು, ಗಣ್ಯಾತಿಗಣ್ಯರು, ಜನಸಾಮಾನ್ಯರು ಕಂಬನಿ ಮಿಡಿದಿರುವುದು ಅಪ್ಪುವಿನ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅಪ್ಪುವಿನ ಜನ್ಮ ದಿನವನ್ನು ‘ಸ್ಫೂರ್ತಿಯ ದಿನ’ವನ್ನಾಗಿ ಆಚರಿಸುತ್ತಿರುವುದು ಅಭಿಮಾನಿಗಳೆಲ್ಲರಿಗೂ ಸಂತಸದ ವಿಷಯ.ನಿಜವಾಗಿಯೂ ಅವರು ಯುವಕರೆಲ್ಲರಿಗೂ ಸ್ಫೂರ್ತಿಯೇ ಸರಿ. ಕೇವಲ ಹೆಸರಿನಿಂದಷ್ಟೇ ಅಲ್ಲ, ತಾವು ಮಾಡಿದ ಸಮಾಜ ಸೇವೆಯಿಂದ ತಮ್ಮ ಬಾಳನ್ನೇ ಪುನೀತವಾಗಿಸಿಕೊಂಡ ಪುನೀತ್ ಮತ್ತೊಮ್ಮೆ ಕನ್ನಡ ತಾಯಿಯ ಗರ್ಭದಲ್ಲಿ ಹುಟ್ಟಿ ಬರಲಿ, ಕನ್ನಡಿಗರಿಗೆ ಸಂತಸ ತರಲಿ ಎಂದು ಆಶಿಸೋಣ.
– ಜಿ.ಎಸ್.ಗಾಯತ್ರಿ.
ಶಿಕ್ಷಕಿ. ಬಾಪೂಜಿ ಶಾಲೆ
ಹರಿಹರ.