Oplus_131072

ಕೌದಿ.

– ಬಸವರಾಜ ದಯಾಸಾಗರ.

ಹೊಸ ಕೌದಿ ಹೊದ್ದು ಮಲಗಿದರೂ ನಿದ್ದೆ ಬರದಾಗಿದೆ.
ಹಳೆಯ ನೆನಪುಗಳು ಕಾಡಿವೆ ಬಿಡದೆ ಎದೆಯೊಳಗೆ!

ಹಳೆಯ ಅರಿವೆಯ ಗಂಟುಗಳಲಿ
ಹರಿದಿರುವ ಬಟ್ಟೆಗಳ ಹುಡುಕಾಡಿ
ಹಲವು ವಿಸ್ಮಯಗಳನು ಅಡಗಿಸಿ!
ಅಡ್ಡಾದಿಡ್ಡಿಯಾದ ಅರಿವೆಗಳನ್ನು ಸರಿಪಡಿಸಿ
ಅಳತೆಗೆ ಸರಿಯಾಗುವಂತೆ ಹೊಂದಿಸಿ
ಹೊಲಿದಳು ಅವ್ವ ಕೌದಿ ಚೌಕಟ್ಟು ಚೊಕ್ಕಟವಾಗಿಸಿ!

ಜಾತ್ರೆಯಲಿ ಅಪ್ಪನಿಗೆ ಕಾಡಿಬೇಡಿ
ಖರೀದಿಸಿದ ಅಂಗಿಯಿದು ನೋಡಿ
ಹರಿದು ಚಿಂದಿಯಾಗುವ ಮುನ್ನವೇ
ಕೌದಿಯಲಿ ಅವಿತು ಚೆಂದವಾಗಿದೆ!

ತಂಗಿ ಹುಸಿ ಕೋಪದಲಿ ಜಗಳವಾಡುತ
ಅಂಗಿಯ ತೋಳಿಗೆ ಸಿಂಬಳ ಒರೆಸಿಕೊಳ್ಳುತ
ಆಕೆ ಓಡಾಡುತ್ತಿದ್ದಳು ಹಟ ಮಾಡಿ ಅಳುತ
ಅರಿವೆ ನೋಡಿ ಮುಖವಾಯಿತು ಮಂದಸ್ಮಿತ!

ಗಡಬಿಡಿಯಲಿ ಬಯಲಿಗೆ ಓಡಿ
ಪಟ್ಟಾಪಟ್ಟಿ ಚಡ್ಡಿ ಕಸಿ ಬಿಡಿಸದೆ ಒದ್ದಾಡಿ
ಹೊಟ್ಟೆಯ ಸಂಕಟ ತಾಳದೆ
ಕಸಿಯನ್ನೇ ಜೊರಾಗಿ ಹರಿದು ಎಸೆದೆ
ಆಮೇಲೆ ನನ್ನ ಮಾನ ಕಾಪಾಡದೆ ಪರಿತಪಿಸಿದೆ
ಇಂದು ಆ ನೆನೆಪಾಗಿ ಕೌದಿಯಲಿ ನಗು ಹರಡಿದೆ!

ಹರಿದ ಸೀರೆಯನ್ನೇ ದಿಂಡು ಹಾಕಿ ಉಟ್ಟು
ರೇಷ್ಮೆಯ ಸೀರೆ ಉಡುವ ಆಸೆಪಟ್ಟು
ಹಸಿವು ನುಂಗಿ ಖರೀದಿಸಿ ಪೆಟ್ಟಿಗೆಯಲ್ಲಿಟ್ಟು
ನುಸಿ ತಿಂದ ಸೀರೆಯ ನೋಡಿ ಸಂಕಟಪಟ್ಟು
ಕೌದಿಯಲಿ ನೆನಪಾಗಿಸಿ ಹೋದಳು ಅಜ್ಜಿ ಜಗವ ಬಿಟ್ಟು!

ನಾ ಏನನ್ನು ಹುಡಕಲಿ ಕಳೆದ ನೆನಹುಗಳಲಿ
ಹೊಲಿಯುವ ಸಂಯಮದ ಸಮಯದಲಿ
ಕೈಗೆ ಸೂಜಿ ಚುಚ್ಚಿ ರಕ್ತ ಒಸರಿದ ಆ ಕ್ಷಣದಲಿ
ಕೆಂಪು ಬಟ್ಟೆಯಲಿ ಬೆರೆತ ಖಲೆ ನಾ ಹೇಗೆ ಹುಡಕಲಿ!?

ಹೊರಟು ಹೋದ ಹಿರಿಯ ಜೀವಗಳ ಅರಿವೆಗಳಿಗೆ
ಸೂಜಿ ಚುಚ್ಚುವಾಗ ನೋವಿನ ಸಂಕಟವಳ ಎದೆಯಲಿ
ಇಂಗಿ ಹೋದ ಕಂಬನಿ ಹನಿಗಳು ಆ ಮುಖದಲಿ!

ಅವ್ವನ ಸೀರೆ, ಅಪ್ಪನ ದೋತರ
ತಂಗಿಯ ಅಂಗಿ ಅಣ್ಣನ ಲುಂಗಿ
ಅಜ್ಜನ ನಿಲುವಂಗಿಯಲಿ ಅರಳಿವೆ ಚಿತ್ತಾರಗಳು

ಅತ್ತೆಯ ಕುಪ್ಪಸದ ಕಣದಲಿ
ಮಾವನ ಮಾಂಜರಪಟ್ಟಿ ಚಾಟಿಯಲಿ
ಮಕ್ಕಳ ಬಟ್ಟೆಗಳಲಿ ಅಡಗಿವೆ ಲೆಕ್ಕವಿಲ್ಲದ ಉತ್ತರಗಳು!

ಅವ್ವ ಅರಳಿಸಿದ ಸೂಜಿಯ ದಾರಗಳಲಿ
ಅರಳಿವೆ ಕಾಗೆ ಗುಬ್ಬಿಗಳ ಕಾಲುಗಳು
ರೆಕ್ಕೆ ಇದ್ದರೂ ಹಾರದ ಹಕ್ಕಿಗಳು
ಹೊಯ್ದಾಟದ ಮನದಲಿ ಮುದುಡಿದ ಬಯಕೆಗಳು!

ಬಸವರಾಜ ದಯಾಸಾಗರ.
ಹುಮನಾಬಾದ

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ