Oplus_131072

ಲಿಯೋ ಟಾಲ್ ಸ್ಟಾಯ್… ಜಾಗತಿಕ ಸಾಹಿತಿ

ರಷ್ಯಾದ ಪ್ರಖ್ಯಾತ ಕಾದಂಬರಿಕಾರ ಮತ್ತು ತತ್ವಜ್ಞಾನಿ. ಆತನ ‘ವಾರ ಅಂಡ್ ಪೀಸ್’ ಮತ್ತು
‘ಅನ್ನ ಕರೆನಿನ’ ಎಂಬ ಕೃತಿಗಳು ಜಗತ್ಪ್ರಸಿದ್ಧವಾಗಿದ್ದು ಜಾಗತಿಕವಾಗಿ ಪ್ರಮುಖ ಲೇಖಕ ಎಂದು ಗುರುತಿಸಲ್ಪಟ್ಟ ಲಿಯೋ ಟಾಲ್ ಸ್ಟಾಯ್ ಎಲ್ಲ ಕಾಲಕ್ಕೂ ಸಲ್ಲುವ ಸಾಹಿತ್ಯವನ್ನು ರಚಿಸಿದ ವಾಸ್ತವಿಕ ಚಳುವಳಿಗಾರನಾಗಿದ್ದನು.ಬಡ,ನಿರ್ಗತಿಕರಿಗೆ ಮತ್ತು ಭಿಕ್ಷುಕರಿಗೆ ಆಹಾರವನ್ನು ಒದಗಿಸಲು ಆತ ತನ್ನದೆಲ್ಲವನ್ನು ಮಾರಿದ ಉದಾರ ಮತ್ತು ಕರುಣಾಮಯಿ.

ರಷ್ಯಾದ ಕಾದಂಬರಿಕಾರ ಸೆಪ್ಟಂಬರ್ 9 1828 ರಲ್ಲಿ ಜನಿಸಿದನು. ನೈತಿಕ ಮೌಲ್ಯಗಳು ಮತ್ತು ಮಾನವೀಯತೆಗಳನ್ನು ಹೊಂದಿದ್ದ ಆತನ ಬರಹಗಳನ್ನು ಇಂದಿಗೂ ಕೂಡ ಪ್ರಪಂಚದಾದ್ಯಂತ ಎಲ್ಲ ಭಾಷೆಗಳಿಗೂ ತರ್ಜುಮೆಗೊಂಡು ಬಹಳಷ್ಟು ಜನರು ಓದುತ್ತಿರುವುದು ಹೆಮ್ಮೆಯ ಸಂಗತಿ. ಆತನ ಹಲವಷ್ಟು ಬರಹಗಳು ಮಾನವನಲ್ಲಿ ವೈಚಾರಿಕ ಚಿಂತನೆಯ ತಳಹದಿಯನ್ನು ಕೆದಕುವುದಲ್ಲದೆ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ.

ಅತ್ಯಂತ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಲಿಯೋ ಚಿಕ್ಕಂದಿನಲ್ಲಿಯೇ ತಂದೆ ತಾಯಿಯರನ್ನು ಕಳೆದುಕೊಂಡಿದ್ದು ಬದುಕಿನ ಅನಿಶ್ಚಿತತೆಯ ಬಗ್ಗೆ, ಹುಟ್ಟು ಸಾವುಗಳ ಕುರಿತಾದ ಚಿಂತನೆ ಅವರಲ್ಲಿ ಚಿಕ್ಕಂದಿನಲ್ಲಿಯೇ ಹುಟ್ಟಿತು. ಕಾನೂನು ಪದವಿಯನ್ನು ಅರ್ಧಕ್ಕೆ ಬಿಟ್ಟು ಮನೆಗೆ ಮರಳಿದ ಲಿಯೋ ಸಹೋದರ ಸಂಬಂಧಿಗಳೊಂದಿಗೆ ಆಸ್ತಿಯನ್ನು ಪಾಲು ಮಾಡಿಕೊಂಡಾಗ ಆತನ ಪಾಲಿಗೆ ಬಂದದ್ದು 300ಕ್ಕೂ ಹೆಚ್ಚು ಜೀತದಾಳುಗಳು ಮತ್ತು ಐದೂವರೆ ಸಾವಿರ ಎಕರೆ ಜಮೀನು. ಒಂದಷ್ಟು ವರ್ಷಗಳು ತಮ್ಮನ್ನು ತಾವು ಕೃಷಿಯಲ್ಲಿ ತೊಡಗಿಸಿಕೊಂಡ ಲಿಯೊ ಕೆಲ ತಿಂಗಳುಗಳ ಕಾಲ ಸೈನ್ಯಕ್ಕೆ ಸೇರಿದರು. ಚಂಚಲಚಿತ್ತರಾದ ಅವರು ಅಲ್ಲಿಯೂ ಕೂಡ ಬಹಳ ಕಾಲ ನಿಲ್ಲದೆ ಮರಳಿದರು. ಕೆಲ ದುಷ್ಟಚಟಗಳನ್ನು ಹೊಂದಿದ್ದ ಟಾಲ್ ಸ್ಟಾಯ್ ಅಂತಿಮವಾಗಿ ತಮ್ಮೆಲ್ಲ ಕೃತ್ಯಗಳಿಗೆ ಪಶ್ಚಾತಾಪ ಪಟ್ಟರು. ಸೋನಿಯಾ ಎಂಬ ಯುವತಿಯೊಂದಿಗೆ ವಿವಾಹವಾದ ಲಿಯೋ ಶಾಲೆಗಳನ್ನು ತೆರೆಯಲು, ಸಮುದಾಯದ ಅಭಿವೃದ್ಧಿಗೆ ಮತ್ತು ಹಳ್ಳಿಗಳ ಉದ್ಧಾರಕ್ಕಾಗಿ ಬಳಸಿದರು.

ಮುಂದೆ ವಿರಾಗಿಯಂತೆ ಜೀವಿಸಿದ ಟಾಲ್ ಸ್ಟಾಯ್
ಸುಮಾರು 23 ಸಣ್ಣ ಕಥೆಗಳನ್ನು ಬರೆದಿದ್ದು ಅವುಗಳನ್ನು ಜಾನಪದ, ಮಕ್ಕಳ ಕಥೆಗಳು, ಹಿರಿಯರ ಕುರಿತಾದ ಕಥೆಗಳು ಹೀಗೆ ಹಲವಾರು ವಿಭಾಗಗಳನ್ನಾಗಿ ಗುರುತಿಸಿದ್ದು ಸಾಂಪ್ರದಾಯಿಕ ಶೈಲಿಯಲ್ಲಿ ಇರುವ ಈ ಕಥೆಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದವು. ಈ ಕಥೆಗಳಲ್ಲಿ ಟಾಲ ಸ್ಟಾಯ್ ಅವರಲ್ಲಿ ಸಾಂಪ್ರದಾಯಿಕ ಮನಸ್ಥಿತಿ ಧಾರ್ಮಿಕ ಪ್ರಜ್ಞೆ ಮತ್ತು ಮಾನವೀಯ ಪ್ರಜ್ಞೆಗಳ ವಿಶಿಷ್ಟ ಛಾಯೆಗಳನ್ನು ಕಾಣಬಹುದು.

ನಂತರ ವಿರಾಗಿಯಂತೆ ತಿರುಗುವಾಗ ಇವರು ‘ವಾರ್ ಅಂಡ್ ಪೀಸ್’ ಮತ್ತು ‘ಅನ್ನ ಕರೆನಿನ’ ಕೃತಿಗಳನ್ನು
ರಚಿಸಿದರು. ‘ವಾರ್ ಅಂಡ್ ಪೀಸ್’ ಕೃತಿಯು ಸುಮಾರು 1500 ಪುಟಗಳನ್ನು ಹೊಂದಿದ್ದು ಮಾನವ ಜೀವನದ ಎಲ್ಲ ರೀತಿಯ ನೋವು ನಲಿವುಗಳನ್ನು ಕುರಿತ ಚಿತ್ರಣವಾಗಿದೆ.

1934 ರಲ್ಲಿ ಟಾಲ್ ಸ್ಟಾಯ್ ರವರ ಕೃತಿಗಳನ್ನು
ಜಿ. ಮಲ್ಲೇಶ್ ಎಂಬವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ತತ್ವಜ್ಞಾನಿಯಾಗಿಯೂ ಗುರುತಿಸಿಕೊಂಡಿದ್ದ ಟಾಲ್ಸ ಟಾಯ್ ಅವರ ಕೆಲ ಹೇಳಿಕೆಗಳು ಪ್ರಸಿದ್ಧವಾಗಿವೆ. ಅವುಗಳಲ್ಲಿ ಕೆಲವು ಹೀಗಿವೆ.

ನಿನ್ನ ಧರ್ಮದ ಕುರಿತು ನನಗೆ ಹೇಳಬೇಡ… ನಿನ್ನ ಕ್ರಿಯೆಗಳಲ್ಲಿ ನಿನ್ನ ಧರ್ಮವನ್ನು ಕಾಣಬಹುದು.

ನಿನಗೆ ನಿನ್ನ ನೋವಿನ ಅನುಭವವಾದರೆ ನೀನು ಬದುಕಿರುವೆ ಎಂದು ಅರ್ಥ, ನಿನಗೆ ಪರರ ನೋವಿನ ಅನುಭವವಾದರೆ ನೀನು ಮನುಷ್ಯನಾಗಿರುವೆ/ ಮಾನವನಾಗಿರುವೆ ಎಂದರ್ಥ.

ಸಾಹಿತ್ಯದ ಹೊರತಾಗಿಯೂ ಆತ ಸಮಾಜ ಸುಧಾರಕ ಮತ್ತು ತತ್ವಜ್ಞಾನಿಯಾಗಿದ್ದ. ಅಹಿಂಸಾ ವಿರೋಧದ ಕುರಿತ ಆತನ ಯೋಜನೆಗಳು ಮತ್ತು ಸರಳ ಜೀವನ ಶೈಲಿ ಸಾಕಷ್ಟು ಮಹಾನ್ ನಾಯಕರನ್ನು ಆಕರ್ಷಿಸಿದ್ದವು. ಮಹಾತ್ಮ ಗಾಂಧಿ ಮತ್ತು ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಲಿಯೋ ಟಾಲ ಸ್ಟಾ ಯ್ ಅವರ ಅಭಿಮಾನಿಗಳಾಗಿದ್ದರು.

ಇಂದಿಗೂ ಜಗತ್ತಿನ ಯುವ ಬರಹಗಾರರಿಗೆ ಸ್ಪೂರ್ತಿಯಾಗಿರುವ ಜಗತ್ತಿನ ಅತಿ ದೊಡ್ಡ ತತ್ವಜ್ಞಾನಿ, ದಾರ್ಶನಿಕ ಮತ್ತು ಅದ್ಭುತ ಕಥೆಗಾರ ಅಂದು ಇಂದು ಎಂದೆಂದಿಗೂ ಓದುಗರನ್ನು ತಮ್ಮ ಅತ್ಯಾಕರ್ಷಕ ಬರಹಗಳಿಂದ ಸೆರೆ ಹಿಡಿಯುವ ಟಾಲ್ ಸ್ಟಾಯ್ 20 ನವೆಂಬರ್ 1910 ರಲ್ಲಿ ನಿಧನರಾದರು.

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್.