Oplus_131072

ಲೋಕದ ಲೆಕ್ಕ

ಗೆಳೆಯ ಇಲ್ಲಿ ಯಶಸ್ಸಿನ ಮಾನದಂಡ
ಮರಕೆ ಎಸೆದ ಕಲ್ಲುಗಳ ಸಂಖ್ಯೆಯಲಿಲ್ಲ
ನೆಲಕುದುರಿದ ಹಣ್ಣುಗಳ ಮೊತ್ತದಲ್ಲಿದೆ.!

ಗೆಳೆಯ ಇಲ್ಲಿ ಗೆಲುವಿನ ಮಾಪಕವದು
ಎದುರಿಸಿದ ಭೀಕರ ಅಲೆಗಳ ಎಣಿಕೆಯಲಿಲ್ಲ
ದಡ ಸೇರಿಸಿದ ದೋಣಿಗಳ ಲೆಕ್ಕದಲ್ಲಿದೆ.!

ಗೆಳೆಯ ಇಲ್ಲಿ ಚಾರಣದ ವಿಜಯವದು
ಜಾರಿ ಕೆಳಬಿದ್ದ ಪಾದಗಳ ಗಣಿತದಲಿಲ್ಲ
ಶೃಂಗವೇರಿ ನಿಂತ ಹೆಜ್ಜೆಯ ಮೊರೆತದಲ್ಲಿದೆ.!

ಗೆಳೆಯ ಇಲ್ಲಿ ಶ್ರೇಯಸ್ಸಿನ ಅಳತೆಯದು
ಬಿದ್ದ ಉಳಿಯ ಪೆಟ್ಟುಗಳ ಅಂಕಿಯಲಿಲ್ಲ
ಶಿಲೆಯದು ಶಿಲ್ಪವಾಗಿ ನಿಂತ ಭಂಗಿಯಲ್ಲಿದೆ.!

ಗೆಳೆಯ ಇಲ್ಲಿ ಸಮರವಿಜಯದ ಗುರುತು
ಬಳಸಿದ ಗುಂಡುಗಳ ಸರಮಾಲೆಯಲಿಲ್ಲ
ಸೀಳಿದ ಗುಂಡಿಗೆಗಳ ಪಟ್ಟಿಮಾಡಿದ್ದರಲ್ಲಿದೆ.!

ಗೆಳೆಯ ಇಲ್ಲಿ ಪಯಣದ ಸಾರ್ಥಕತೆಯದು
ದಾರಿಯ ಮೈಲುಗಲ್ಲುಗಳ ದಾಟುವುದರಲಿಲ್ಲ
ಅಂತಿಮ ಗುರಿ-ಗಮ್ಯಗಳ ಮುಟ್ಟುವುದರಲ್ಲಿದೆ.!

ಗೆಳೆಯ ಸೈನಿಕನ ಶೌರ್ಯ ಪರಾಕ್ರಮವದು
ಬಳಸಿದ ಬಾಣ-ಭರ್ಜಿಗಳ ರಾಶಿಯಲ್ಲಿಲ್ಲ
ಧರೆಗುರುಳಿಸಿದ ಶತೃಶಿರಗಳ ಲೆಕ್ಕಾಚಾರದಲ್ಲಿದೆ.!

ಗೆಳೆಯ ಪರೀಕ್ಷೆಯ ಫಲಿತಾಂಶ ಕೀರ್ತಿಯದು
ಬರೆದ ಅಗಣಿತ ಹಾಳೆಗಳ ಸಂಖ್ಯೆಯಲ್ಲಿಲ್ಲ
ಪಡೆದ ಅಂಕಪತ್ರದಿ ನಮೂದಿಸಿದ ಅಂಕೆಗಳಲ್ಲಿದೆ.!

ಯತ್ನ ಪ್ರಯತ್ನಗಳ ಕೇಳುವುದಿಲ್ಲ ಲೋಕ
ಪಟ್ಟ ಬವಣೆ ಬೇಗೆಗಳೂ ಅಲ್ಲ ಮುಖ್ಯ
ಪಡೆದ ಫಲಾಫಲಗಳಷ್ಟೇ ಅಕ್ಷರಶಃ ವೇದ್ಯ.!

ಗೆಳೆಯ ಜಗವಿದು ಬಲು ನಿರ್ದಯಿ ನಿಷ್ಕರುಣಿ
ಸುರಿಸಿದ ನೋವು ಕಂಬನಿಗಳ ಲೆಕ್ಕಿಸುವುದಿಲ್ಲ
ಗಳಿಸಿದ ಜಯಾಪಜಯಗಳಷ್ಟೇ ದಾಖಲಿಸುತ್ತದೆ!

ಎ.ಎನ್.ರಮೇಶ್. ಗುಬ್ಬಿ.

ವಿಳಾಸ :-
ಎ.ಎನ್.ರಮೇಶ್. ಗುಬ್ಬಿ
ಸಿ-1- ಗಂಗಾ- 9/4,
ಮಲ್ಟಿ ಸ್ಟೋರ್ಸ್. ಫೇಸ್-2
ಕೈಗಾ ವಸತಿ ಸಂಕೀರ್ಣ
ಮಲ್ಲಾಪುರ ಅಂಚೆ. ಕಾರವಾರ-581400.
ಮೋ- 9731873159 / 9448774867
anrameshkaiga@gmail.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ