ಮಗುವಿ ಹಸಿವು (ಮಿನಿಕತೆ)
‘ ಅಮ್ಮಾ , ಹಸಿವು !
ಮಗು ತಾಯಿ ಸೆರಗಿಡಿದು ಜಗ್ಗಿತ್ತು.
ಬೆಳಿಗ್ಗೆಯಿಂದ ತುತ್ತು ಅನ್ನವಿಲ್ಲದೆ ಬಳಲಿದ ಮಗು ಹಸಿವು ತಾಳಲಾರದೆ ಅಮ್ಮನ ಮುಖ ನೋಡಿ ಅಳತೊಡಗಿತ್ತು.
” ತಡೆದುಕೋ ! ಮಗಾ ,
ನಿಮ್ಮಪ್ಪಾ ಬರಲಿ.
ಎನಾದ್ರೂ ತಿನ್ನಲಿಕೆ ತರುತ್ತಾರೆ ” ಅಂತ ಬೆಳಿಗ್ಗೆಯಿಂದ ಮಗುವಿನ ಹಸಿವೆಯನ್ನು ಮುಂದೂಡುತ್ತಲೆ ಬಂದಿದ್ದಳು.
ಕೆಲ ಸಮಯದ ನಂತರ
” ಅಮ್ಮಾ ! ಅಪ್ಪಾ ,ಯಾವಾಗ ಬರತ್ತಾರೆ ? ” ಅಂತ ಮಗು ಮತ್ತೆ ಹಸಿವು ತಡೆಯಲಾಗದೆ ಕೇಳಿತ್ತು.
” ಬರತ್ತಾರೆ ಮಗಾ, ಬರುವಾಗ ನಿಂಗೆ ಊಟ ತರತ್ತಾರೆ.
ಸುಮ್ಕಿರು ಹಟ ಮಾಡಬೇಡ.” ಅಂತ ಸಮಧಾನಿಸಿದಳು.
ಲಕ್ಷ್ಮೀ ತನ್ನ ಗಂಡ ಕೆಲ್ಸ ಮಾಡಿ ಬರುವ ದಾರಿಯನ್ನೆ ಕಾಯುತ್ತಿದ್ದಳು.
ದೂರದಿಂದ ತಂದೆ ಬರುವುದನ್ನು ನೋಡಿದ ಮಗು,
” ಅಪ್ಪಾ ! ಬಂದ. ಅಪ್ಪಾ ! ಬಂದ.” ಅಂತ ಕುಣಿಯತೊಡಗಿತ್ತು.
ಗಂಡ ಬರಿಗೈಲಿ ಬಂದದ್ದು ನೋಡಿ ಲಕ್ಷ್ಮಿ ” ಯಾಕೆ ಏನೂ ತಂದಿಲ್ಲವೆ ? ” ಕೇಳಿದಳು.
” ಇಲ್ಲ .ಇವತ್ತು ಕೂಲಿ ಸಿಗಲಿಲ್ಲ. ಚೌಕಿನಲ್ಲಿ ನಿಂತು ನಿಂತು ಸಾಕಾಗಿ ಬಂದು ಬಿಟ್ಟೆ ” ಅಂದ ಹೇಳಿದ.
ಮಗು ಹಸಿವೆಯಿಂದ ತುಂಬ ಬಳಲಿ ಹೋಗಿದೆ. ಲಕ್ಷ್ಮಿಯೂ ಊಟ ಮಾಡದೆ ಹೊಟ್ಟೆ ಹುರಿ ಹಾಕಿಕೊಂಡಿದ್ದಳು.
ಗಂಡನ ಮುಖ ನೋಡಿದರೆ ಗೊತ್ತಾಗುತ್ತಿತ್ತು ಅವನು ಉಪವಾಸವೆಂದು .
ಮಗು ತೀವ್ರ ಹಸಿವೆಯಿಂದ ಬಳಲಿ ಮುಖ ಸಪ್ಪಗೆ ಮಾಡಿಕೊಂಡು ನಿತ್ರಾಣವಾಗಿತ್ತು.
ಒಮ್ಮೆ ಮಗುವಿನ ಮುಖ ನೋಡಿದ ಲಕ್ಷ್ಮಿ ಕಣ್ಣಲ್ಲಿ ನೀರು ತಂದುಕೊಂಡಳು.
ಅಮ್ಮನ ಕಣ್ಣಲ್ಲಿ ನೀರು ನೋಡಿದ ಮಗು ಕುಳಿತ ಜಾಗದಿಂದ
ಎದ್ದು ” ಅಮ್ಮಾ ! ನಂಗೆ
ಹಸಿವೆ ಹೋಯ್ತು.
ಹಸಿವೆ ಹೋಯ್ತು .” ಅಂತ ನಗುಮೊಗದಿಂದ ಅಮ್ಮನ ಕೆನ್ನೆಗೆ ಮುತ್ತುಕೊಟ್ಟಿತ್ತು.
– ಮಚ್ಚೇಂದ್ರ ಪಿ ಅಣಕಲ್.