ಮಹಾಮಹಿಮ ಮಹರ್ಷಿ ಅರವಿಂದರು
ಪ್ರಕೃತಿಯ ಜೀವಂತ ಪ್ರಯೋಗಾಲಯದಲ್ಲಿ ಮಾನವನನ್ನು ಸೃಷ್ಟಿಸಿದೆ. ಚಿಂತಿಸುವ ಮತ್ತು ಯೋಚಿಸುವ ಶಕ್ತಿಯನ್ನು ಹೊಂದಿರುವ ಮಾನವನೆಂಬ ಪ್ರಯೋಗಾಲಯವು
ಅತಿ ಮಾನವರನ್ನು ಮತ್ತು ದೇವತೆಗಳನ್ನು ಸೃಷ್ಟಿಸಿದೆ ಎಂದು ಅತಿ ಮಾನಸ ಶಕ್ತಿಯು ಮನುಷ್ಯ ಸೃಷ್ಟಿ ಎಂಬುದನ್ನು ಜಗತ್ತಿಗೆ ಸಾರಿ ಹೇಳಿದವರು ಮಹರ್ಷಿ ಅರವಿಂದರು.
ಸ್ವಾತಂತ್ರ್ಯ ಹೋರಾಟಗಾರನಾಗಿ, ಲೇಖಕನಾಗಿ, ಕವಿಯಾಗಿ, ಪತ್ರಕರ್ತನಾಗಿ, ತತ್ವಜ್ಞಾನಿಯಾಗಿ, ಯೋಗ ಗುರುವಾಗಿ, ಆಧ್ಯಾತ್ಮದ ಗುರುವಾಗಿ ಜಗತ್ತಿಗೆ ಪರಿಚಯಸಲ್ಪಟ್ಟ ಮಹರ್ಷಿ ಅರವಿಂದರ ಜೀವನ ಸಾಧನೆ ಭಾರತೀಯ ಇತಿಹಾಸದಲ್ಲಿ ಮಹತ್ವಪೂರ್ಣ
ಸ್ಥಾನವನ್ನು ಪಡೆದಿದೆ ಎಂದರೆ ತಪ್ಪಿಲ್ಲ.
ಜಗತ್ತಿನ ಮಹಾನ್ ಸಾಧಕರೆಲ್ಲರ ಜೀವನವನ್ನು ವಿಮರ್ಶಿಸಿರುವ ಮಹರ್ಷಿ ಅರವಿಂದರು ಯೋಗ ಸಾಧನೆಯನ್ನು ಯಾರು ಬೇಕಾದರೂ ಮಾಡಬಹುದು. ಯೋಗ ಸಾಧನೆ ಎಂಬುದು ಕೇವಲ ಆತ್ಮ ಸಾಕ್ಷಾತ್ಕಾರಕ್ಕಲ್ಲ… ಬದಲಾಗಿ ಮನುಕುಲದ ಉದ್ಧಾರಕ್ಕಾಗಿ ಎಂಬುದನ್ನು ಸ್ಪಷ್ಟಪಡಿಸಿದರು.
ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ 15 ಆಗಸ್ಟ್ 1872ರಲ್ಲಿ ಜನಿಸಿದ ಅರವಿಂದ ಅವರ ತಂದೆ ಕೃಷ್ಣ ಧನ ಘೋಷ ಮತ್ತು ತಾಯಿ ಸ್ವರ್ಣಲತಾ ದೇವಿ ಅವರ ನಾಲ್ಕು ಮಕ್ಕಳಲ್ಲಿ ಎರಡನೆಯವರಾಗಿ ಜನಿಸಿದರು.
ಕೇವಲ 5 ವರ್ಷದವರಿದ್ದಾಗ ಲಂಡನ್ ಗೆ ವಲಸೆ ಹೋದ ಇವರು ಕೇಂಬ್ರಿಡ್ಜ್, ಮ್ಯಾಂಚೆಸ್ಟರ್ ಗಳಲ್ಲಿ ಸುಮಾರು 14 ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡಿದರು. ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಲ್ಲಿ ಪರಿಣತಿ ಪಡೆದ ಇವರು ಐಸಿಎಸ್ ಪರೀಕ್ಷೆಯಲ್ಲಿಯೂ ಕೂಡ ಅತ್ಯುತ್ತಮ ಅಂಕಗಳನ್ನು ಗಳಿಸಿದರಾದರೂ ಕುದುರೆ ಸವಾರಿಯಲ್ಲಿ ಪರಿಣತಿ ಪಡೆಯದ ಕಾರಣ ಅನರ್ಹರಾದರು.ಮುಂದೆ ಬರೋಡಾದ ಗಾಯಕವಾಡ ಮಹಾರಾಜರ ಆಹ್ವಾನದ ಮೇರೆಗೆ 1893 ರಲ್ಲಿ ಭಾರತಕ್ಕೆ ಆಗಮಿಸಿದ ಅರವಿಂದರು ಕೆಲ ಕಾಲ ಬರೋಡದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿರುವುದರ ಜೊತೆ ಜೊತೆಗೆ ಮಹಾರಾಜರ ಆಪ್ತ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದರು.
ಮುಂದೆ ತಂದೆಯವರ ಮರಣದ ನಂತರ ಕುಟುಂಬ ನಿರ್ವಹಣೆಯ ಜೊತೆ ಜೊತೆಗೆ ಬಂಗಾಳ ಭಾಷೆಯನ್ನು ಕಲಿತು ಬಂಕಿಮ್ ಚಂದ್ರ ಚಟರ್ಜಿ ರವೀಂದ್ರನಾಥ ಟ್ಯಾಗೋರ್, ಮಧುಸೂದನ ದತ್ತ ಮತ್ತು ವಿವೇಕಾನಂದರ ಕೃತಿಗಳನ್ನು ಮೂಲದಲ್ಲಿಯೇ ಅಧ್ಯಯನ ಮಾಡಿದ ಇವರನ್ನು ಸ್ವಾಮಿ ವಿವೇಕಾನಂದರ ವಿಚಾರಧಾರೆಗಳು ಹೆಚ್ಚು ಆಕರ್ಷಿಸಿದವು.
ರಾಮಕೃಷ್ಣ ಪರಮಹಂಸರ ವಚನಾಮೃತಸಾರ ಭರ್ತೃಹರಿಯ ನೀತಿ ಶತಕ ಮತ್ತು ಕಾಳಿದಾಸ ಕವಿಯ ವಿಕ್ರಮೋರ್ವಶೀಯ ಕೃತಿಗಳನ್ನು, ವಾಲ್ಮೀಕಿ ರಾಮಾಯಣ ಮತ್ತು ವ್ಯಾಸ ಭಾರತದ ಕೆಲವು ಗದ್ಯಗಳನ್ನು ಸಂಸ್ಕೃತದಿಂದ ಇಂಗ್ಲೀಷ್ ಗೆ ಭಾಷಾಂತರ ಮಾಡಿದರು. ಮೃಣಾಲಿನಿ ಎಂಬ ಓರ್ವ ಸುಸಂಸ್ಕೃತ ಕನ್ಯೆಯನ್ನು ವಿವಾಹವಾದರು.
ಮುಂದೆ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕೆಂಬ ಸಂಕಲ್ಪವನ್ನು ಹೊಂದಿದ ಅರವಿಂದರು ಮಾಸಿಕ 710 ರೂಪಾಯಿ ವೇತನವನ್ನು ಪಡೆಯುತ್ತಿದ್ದ ಬ್ರಿಟಿಷ್ ಸರ್ಕಾರದ ಬರೋಡದ ಕಾಲೇಜಿನ ಪ್ರಾಂಶುಪಾಲ ಹುದ್ದೆಗೆ ರಾಜೀನಾಮೆ ನೀಡಿ ರಾಷ್ಟ್ರೀಯ ವಿದ್ಯಾಲಯದಲ್ಲಿ ಕೇವಲ 150 ರೂಪಾಯಿ ಮಾಸಿಕ ಸಂಬಳದ ನೌಕರಿಯನ್ನು ಸೇರಿಕೊಂಡರು.
1906ರಲ್ಲಿ ನಡೆದ ಕಾಂಗ್ರೆಸ್ ಸಮ್ಮೇಳನದಲ್ಲಿ ‘ಪೂರ್ಣ ಸ್ವಾತಂತ್ರ್ಯವೇ ಕಾಂಗ್ರೆಸ್ ನ ಧ್ಯೇಯ” ಎಂದು ಸಾರುವಲ್ಲಿ ಅರವಿಂದರು ಪ್ರಮುಖ ಪಾತ್ರ ವಹಿಸಿದರು. ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಅವರು ಸ್ವಾತಂತ್ರ್ಯ ಚಳುವಳಿಗೆ ಸಿದ್ಧರಾಗಲು ಜನರನ್ನು ಹುರಿದುಂಬಿಸುವ ನಿಮಿತ್ತ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗುವಾಗ ಮುಂಬೈಯಲ್ಲಿ ವಿಷ್ಣು ಭಾಸ್ಕರ ಲೀಲೆ ಎಂಬ ಯೋಗಿಯ ಪರಿಚಯವಾಯಿತು. ಯೋಗ ಪ್ರಾಣಾಯಾಮ ಮುಂತಾದ ಆಧ್ಯಾತ್ಮಿಕ ಸಾಧನೆಗಳನ್ನು ಮಾಡುವ ಮೂಲಕ ಸಿದ್ಧಿಯನ್ನು ಪಡೆದುಕೊಂಡ ಅವರು ಬ್ರಹ್ಮತೇಜಸ್ಸಿನಿಂದಲೇ ಪರಿಪೂರ್ಣ ಸ್ವಾತಂತ್ರ್ಯ ಲಭಿಸುತ್ತದೆ ಎಂದು ಭಾವಿಸಿದರು. ಮುಂದೆ ಬಿಪಿನ್ ಚಂದ್ರ ಪಾಲರ ಸಂಪಾದಕತ್ವದ ‘ವಂದೇ ಮಾತರಂ’ ಪತ್ರಿಕೆಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸಿ ಸ್ವಾತಂತ್ರ್ಯ ಪಡೆಯಲು ಬೇಕಾದ ತೇಜೋಪೂರ್ಣವಾದ ಲೇಖನಗಳನ್ನು ಬರೆದು ಪ್ರಕಟಿಸಿ ಯುವ ಜನತೆಯನ್ನು ಹುರಿದುಂಬಿಸಿದರು. ರಾಜದ್ರೋಹದ ಆಪಾದನೆಯ ಮೇಲೆ ಪತ್ರಿಕೆಯ ಸಂಪಾದಕರ ಜೊತೆಗೆ ಅರವಿಂದರನ್ನು ಕೂಡ ಬಂಧಿಸಲಾಯಿತು.
ಆದರೆ ಸರಿಯಾದ ಸಾಕ್ಷ್ಷ್ಯಾಧಾರಗಳಿಲ್ಲದೆ ಅವರನ್ನು ಬಿಡುಗಡೆಗೊಳಿಸಿದರು. ಮುಂದೆ ಕೊಲ್ಕತ್ತಾಕ್ಕೆ ಬಂದು ಕರ್ಮ ಯೋಗಿ ಎಂಬ ಇಂಗ್ಲಿಷ್ ವಾರಪತ್ರಿಕೆಯನ್ನು ಆರಂಭಿಸಿದರು.
ಯೋಗ ಸಾಧನೆಯಲ್ಲಿ ತಮ್ಮನ್ನು ತೀವ್ರವಾಗಿ ತೊಡಗಿಸಿಕೊಂಡ ಅರವಿಂದರು ಮುಂದೆ ರಾಜಕೀಯ ಕಾರ್ಯಗಳಿಂದ ಸ್ವಯಂ ನಿವೃತ್ತಿ ಪಡೆದು ಪಾಂಡಿಚೆರಿಗೆ ತೆರಳಿ ಅಲ್ಲಿಯೇ ನೆಲೆಯಾದರು. ಸಮಗ್ರ ಯೋಗ ಎಂಬ ಆಧ್ಯಾತ್ಮಿಕ ಅಭ್ಯಾಸವನ್ನು ಆರಂಭಿಸಿದವರು ಯೋಗ ಮತ್ತು ಆಧ್ಯಾತ್ಮಿಕ ಸಾಧನೆಯ ಮೂಲಕ ದೈವಿಕ ದೇಹದಲ್ಲಿ ದೈವಿಕ ಜೀವನಕ್ಕೆ ವಿಕಸನಗೊಳಿಸುವುದು ಎಂದು ಅವರು ನಂಬಿದ್ದರು. ಅವರು ರಚಿಸಿದ ‘ದಿ ಲೈಫ್ ಡಿವೈನ್’ ಎಂಬ ಪುಸ್ತಕ ಸಾರ್ವಕಾಲಿಕ ಜನಪ್ರಿಯ ಕೃತಿಯಾಗಿದೆ. ಗೀತಾ ಪ್ರಬಂಧಗಳು, ಯೋಗ ಸಮನ್ವಯ,ದಿವ್ಯ ಜೀವನ, ಸಾವಿತ್ರಿ ಮುಂತಾದ ಕೃತಿಗಳನ್ನು ಅವರು ರಚಿಸಿದ್ದಾರೆ.
ಅವರ ಆಧ್ಯಾತ್ಮಿಕ ಸಹಯೋಗಿ ಮಿರ್ರಾ ಆಲ್ಫನ್ಸಾ ಅವರ ಸಹಯೋಗದೊಂದಿಗೆ 1926 ರಲ್ಲಿ ಅರವಿಂದಾಶ್ರಮವನ್ನು ಸ್ಥಾಪಿಸಲಾಯಿತು. ಸಾಹಿತ್ಯ ಕೃತಿಗಳಿಗಾಗಿ 1943ರಲ್ಲಿ ಮತ್ತು ಶಾಂತಿಗಾಗಿ 1950ರಲ್ಲಿ ನೊಬೆಲ್ ಪ್ರಶಸ್ತಿಗೆ ಅವರ ಹೆಸರನ್ನು ನಾಮನಿರ್ದೇಶನ ಮಾಡಲಾಗಿತ್ತು.
ಮುಂದೆ ಡಿಸೆಂಬರ್ 5, 1950 ರಲ್ಲಿ ಪುದುಚೇರಿಯ ಆಶ್ರಮದಲ್ಲಿ ನಿಧನರಾದರು.
ಆಂಗ್ಲಮಯ ವಾತಾವರಣವೇ ಸರ್ವ ಶ್ರೇಷ್ಠ ಎಂಬ ಕಲ್ಪನೆಯ ತಂದೆ ಕೃಷ್ಣಧನ ಘೋಷರ ಪುತ್ರ 14 ವರ್ಷಗಳ ಕಾಲ ಇಂಗ್ಲೆಂಡಿನಲ್ಲಿದ್ದು ಕೂಡ ಭಾರತ ದೇಶಕ್ಕೆ ಮರಳಿ ಭವ್ಯ ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ, ಹಲವಾರು ಉತ್ಕೃಷ್ಟ ಲೇಖನಗಳ ಮೂಲಕ ಜನರನ್ನು ಹುರಿದುಂಬಿಸಿ, ಭಾರತದ ಆಧ್ಯಾತ್ಮ ಪರಂಪರೆ ಮತ್ತು ಪ್ರಾಚೀನ ಸಭ್ಯತೆಯನ್ನು ಎತ್ತಿ ಹಿಡಿಯುವ ಮಹತ್ತರ ಕೃತಿಗಳನ್ನು ರಚಿಸಿದ ಅರವಿಂದ ಘೋಷರು ಮುಂದೆ ಮಹರ್ಷಿ ಅರವಿಂದರಾಗಿ ಭಾರತೀಯ ಸನಾತನ ಸಂಸ್ಕೃತಿಯ ಹಿರಿಮೆ ಗರಿಮೆಗಳನ್ನು ಜಗತ್ತಿಗೆ ಸಾರಿದ ಮಹಾಮಹಿಮರಾಗಿ ಹೊರಹೊಮ್ಮಲು ಕಾರಣವಾಗಿದ್ದು ಭಾರತದ ನೆಲದ ಮಹಿಮೆ ಎಂದರೆ ತಪ್ಪಾಗಲಿಕ್ಕಿಲ್ಲ. ಮತ್ತೆ ಮತ್ತೆ ಇಂತಹ ಮಹಾಮಹಿಮರು ಭಾರತದ ನೆಲದಲ್ಲಿ ಜನಿಸಲಿ ಎಂಬ ಆಶಯದೊಂದಿಗೆ
– ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್.