Oplus_131072

ಮಹಿಳಾ ದೌರ್ಜನ್ಯ ವಿರೋಧಿ ದಿನ (ನವೆಂಬರ್ 25.)

 

ನಮ್ಮ ಭಾರತ ದೇಶದಲ್ಲಿ 2005ರಲ್ಲಿ ರೂಪುಗೊಂಡ ಕೌಟುಂಬಿಕ ದೌರ್ಜನ್ಯ ಕಾಯ್ದೆಯು ಹೆಣ್ಣು ಮಕ್ಕಳು ಮಾನಸಿಕ, ದೈಹಿಕ, ಭಾವನಾತ್ಮಕ, ಲೈಂಗಿಕ ಮತ್ತು ಆರ್ಥಿಕ ಶೋಷಣೆಗಳ ಹಿಂಸೆಯಿಂದ ಮುಕ್ತವಾಗಿ ಸ್ವಾಭಿಮಾನದ ಬದುಕನ್ನು ತಮ್ಮದಾಗಿಸಿಕೊಳ್ಳಬೇಕು ಎಂಬ ಆಶಯವನ್ನು ಹೊಂದಿದ್ದು ಪ್ರಸ್ತುತ ದಿನಮಾನಗಳಲ್ಲಿ ಈ ಕಾನೂನು ಆಶಾದಾಯಕವಾಗಿದ್ದರೂ ಪರಿಣಾಮಕಾರಿಯಾದ ಬದಲಾವಣೆ ತರಲು ಅದರ ಮೂಲ ಅನುಷ್ಠಾನದಲ್ಲಿ ಬಹಳಷ್ಟು ತೊಡಕುಗಳು ಇವೆ. ಕೇವಲ ಗಂಡ, ಅತ್ತೆ, ಮಾವ ಮಾತ್ರವಲ್ಲದೇ ಒಂದೇ ಸೂರಿನಡಿಯಲ್ಲಿ ವಾಸಿಸುತ್ತಿರುವ ಕುಟುಂಬದ ಯಾವುದೇ ಸದಸ್ಯರಿಂದ ಉಂಟಾಗುವ ತೊಂದರೆಗೆ ದೂರು ದಾಖಲಿಸುವ ಮತ್ತು ಪರಿಹಾರ ಕಂಡುಕೊಳ್ಳುವ ಅವಕಾಶ ಈ ಕಾನೂನಿನಲ್ಲಿದೆ.

 

ಘಟನೆ ಒಂದು:ಬೆಳ್ಳಂ ಬೆಳಗ್ಗಿನ ಜಾವವೇ ಮನೆಯ ಇತರೆಲ್ಲ ಸದಸ್ಯರಂತೆ ಸವಿನಿದ್ದೆಯಲ್ಲಿದ್ದ ಆಕೆಯನ್ನು ಪತಿ ಚಹಾ ಮಾಡಿಕೊಡಲು ಕೇಳಿದಾಗ ‘ರಾತ್ರಿ ತಡವಾಗಿ ಮಲಗಿದ್ದು ನಿದ್ದೆಯ ಮಂಪರು ಇನ್ನೂ ಇಳಿದಿಲ್ಲ, ತುಸು ತಡೆಯಿರಿ’ ಎಂದು ಹೇಳಿದ ಆಕೆಯ ಬೆನ್ನ ಮೇಲೆ ಜೋರಾಗಿ ಏಟು ಬಿದ್ದಾಗ ಗಡಬಡಿಸಿ ಎದ್ದಳಾಕೆ.

ಘಟನೆ 2.. ಮನೆಯ ಎಲ್ಲಾ ಕೆಲಸಗಳನ್ನು ಮುಗಿಸಿ ಅಡುಗೆ ಮಾಡಿಟ್ಟು ಮಕ್ಕಳನ್ನು ಶಾಲೆಗೆ ಕಳುಹಿಸಿ ಚಹಾ ಕುಡಿದು ತಾನು ಕೆಲಸ ಮಾಡುವ ಮನೆಗಳಿಗೆ ಓಡೋಡಿ ಬಂದು ಅವರ ಮನೆಯ ಎಲ್ಲಾ ಕೆಲಸಗಳನ್ನು ನಿರ್ವಹಿಸಿ ಅವರು ಕೊಟ್ಟ ತಿಂಡಿಯನ್ನು ತಿಂದು ಮತ್ತೊಂದು ಮನೆಗೆ ಧಾವಿಸಿ ಅಲ್ಲೂ ಕೂಡ ಕೆಲಸ ಪೂರೈಸಿ ಮಕ್ಕಳು ಮನೆಗೆ ಬರುವ ಹೊತ್ತಿಗೆ ಮನೆ ಸೇರುವ ಆಕೆ ಮಕ್ಕಳ ಯೋಗ ಕ್ಷೇಮ, ಮನೆ ಕೆಲಸದಲ್ಲಿ ಮುಳುಗಿ ತುಸು ವಿಶ್ರಾಂತಿಗೆ ಜಾರಿದರೆ ಹೆಚ್ಚು…ಆಕೆಯ ಗಂಡ ಕುಡಿಯಲು ಕಾಸು ಕೊಡು ಎಂದು ಪೀಡಿಸಿ, ಕೊಡಲು ನಿರಾಕರಿಸಿದರೆ ಆಕೆಯನ್ನು ಹೊಡೆದು ಬಡಿದು ಹಣ ಕಸಿದು ಗಡಂಗಿನೆಡೆಗೆ ಓಡುತ್ತಾನೆ.

ಘಟನೆ ಮೂರು.. ತುಸು ಹೆಚ್ಛೇ ಶಿಸ್ತನ್ನು ಬಯಸುವ ಆ ಮನೆಯ ಯಜಮಾನ ಬಯಸುವುದು ತಾನು ಒಂದು ಕಡ್ಡಿಯನ್ನು ಎತ್ತಿ ಇಡದಿದ್ದರೂ ಮನೆಯ ಎಲ್ಲಾ ವಸ್ತುಗಳು ಓರಣವಾಗಿ ಇರಬೇಕು ಮತ್ತು ಅದನ್ನು ಹೆಂಡತಿ ಮಕ್ಕಳು ನಿರ್ವಹಿಸಬೇಕು ಎಂದು. ಸ್ವಲ್ಪ ಏರುಪೇರಾದರೂ, ಅಡುಗೆಯಲ್ಲಿ ಕೊಂಚ ವ್ಯತ್ಯಾಸವಾದರೂ ಆಕೆಯ ಮುಖಕ್ಕೆ ತಟ್ಟೆಯನ್ನು ಎಸೆದು ಊಟ ಬಿಟ್ಟು ಹೊರಡುವ ಆತ ದರ್ಶಿನಿಯಲ್ಲಿ ದುಡ್ಡು ಕೊಟ್ಟು ಹೊಟ್ಟೆ ತುಂಬಿಸಿಕೊಳ್ಳುತ್ತಾನೆ ನಿಜ. ಆದರೆ ಗಂಡನನ್ನು ಉಪವಾಸ ಕಳಿಸಿದೆ ಎಂಬ ಪಾಪಪ್ರಜ್ಞೆಯಿಂದ ಹೆಂಡತಿ ನರಳಿ ಉಪವಾಸ ಇರುವಂತೆ ಮಾಡುವಲ್ಲಿ ಹಿಂದೆ ಬೀಳುವುದಿಲ್ಲ.

ಘಟನೆ ನಾಲ್ಕು.. ಗಂಡನ ಮನೆಯ ಆಸರೆ ತಪ್ಪಿ ತವರಿಗೆ ಬಂದು ಉಳಿದ ಹೆಣ್ಣುಮಕ್ಕಳು ತವರಿನಲ್ಲಿ ತೊತ್ತಿಗಿಂತ ಕಡೆಯಾಗಿ ಮನೆಯ ಎಲ್ಲಾ ಕೆಲಸ ಕಾರ್ಯಗಳನ್ನು ನಿರ್ವಹಿಸಿಯೂ ಕೂಡ ಸಣ್ಣ ಪುಟ್ಟ ಮಾತುಗಳಿಗೆ ಏಟು ತಿನ್ನುವುದು ಸರ್ವೇಸಾಮಾನ್ಯ ಎಂಬಂತಾಗಿರುವುದು. ತಮ್ಮ ಸಹೋದರರಿಗೆ ಕುಡಿಯಲು ಹಣ ನೀಡುವುದು, ಅವರ ಹೆಂಡರು ಮಕ್ಕಳ ಚಾಕರಿಯನ್ನು ಮಾಡುವುದು ಅಷ್ಟೆಲ್ಲ ಮಾಡಿಯೂ ಹಂಗಿನ ಕೂಳನ್ನು ತಿನ್ನುತ್ತಿದ್ದಾರೆ ಎಂಬ ಭಾವದಲ್ಲಿ ಅವರೊಂದಿಗೆ ವರ್ತಿಸುವುದು.

ಹೀಗೆ ಎಣಿಸುತ್ತಾ ಹೋದರೆ ಲಕ್ಷಾಂತರ ಘಟನೆಗಳು ನಮ್ಮ ಕಣ್ಣ ಮುಂದೆ ಪ್ರತಿ ಮನೆಯ ಒಳ ಆವರಣಗಳಲ್ಲಿ ಕಂಡುಬರುತ್ತವೆ . ವಿಪರ್ಯಾಸವೆಂದರೆ ಈ ಮೇಲಿನ ಎಲ್ಲ ಘಟನೆಗಳಲ್ಲಿ ಹೆಣ್ಣು ಮಕ್ಕಳು ತಮ್ಮನ್ನು ತಾವು ತಪ್ಪಿತಸ್ಥರು ಎಂದು ಭಾವಿಸುವುದು ಮತ್ತು ಅದಕ್ಕೆ ಪುಷ್ಟಿ ನೀಡುವಂತೆ ಮನೆಯ ಇತರ ಸದಸ್ಯರು ಆಕೆಯನ್ನು ಹೀನಾಯವಾಗಿ ಕಾಣುವುದು. ಏಕೆ ಹೀಗೆ ನಮ್ಮ ಸಮಾಜ ಹೆಣ್ಣು ಮಕ್ಕಳನ್ನು ನಡೆಸಿಕೊಳ್ಳುತ್ತದೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಸಿಗುವ ಉತ್ತರಗಳು ಹಲವಾರು.

ಪುರುಷ ಪ್ರಧಾನ ವ್ಯವಸ್ಥೆ ಇರುವ ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ ಗಂಡಸು ಮನೆಯ ಯಜಮಾನಿಕೆಯನ್ನು ವಹಿಸಿದ್ದು ಮನೆಯ ಎಲ್ಲಾ ಆರ್ಥಿಕ ವ್ಯವಹಾರಗಳನ್ನು ನೋಡಿಕೊಳ್ಳುವ, ದುಡಿದು ತಂದು ಮನೆಯ ಖರ್ಚು ವೆಚ್ಚಗಳನ್ನು ನಿಭಾಯಿಸುವ ಮೂಲಕ ತನ್ನ ಅಧಿಪತ್ಯವನ್ನು ಸ್ಥಾಪಿಸಿದ್ದು ಮನೆಯ ಸದಸ್ಯರು ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳು ಮನೆಯ ಎಲ್ಲ ಕೆಲಸ ಕಾರ್ಯಗಳನ್ನು (ಸಂಬಳವಿಲ್ಲದೆಯೂ) ನಿರ್ವಹಿಸಿ, ಮಕ್ಕಳು ಮತ್ತು ಕುಟುಂಬದ ಎಲ್ಲರ ಯೋಗಕ್ಷೇಮವನ್ನು ನೋಡಿಕೊಂಡರೂ ಆರ್ಥಿಕವಾಗಿ ಯಾವುದೇ ರೀತಿಯ ಸಹಯೋಗ ನೀಡುತ್ತಿಲ್ಲ ಎಂಬ ಕಾರಣಕ್ಕೆ! ಮನೆಯ ಪುರುಷ ಸದಸ್ಯರಿಂದ ಹೀನಾಯವಾಗಿ ಕಾಣಲ್ಪಡುತ್ತಾರೆ.

ಗಂಡಸು ಮನೆಯ ಯಜಮಾನನಾದರೆ ಆತನ ಆಧೀನದಲ್ಲಿರುವ ಪ್ರತಿಯೊಬ್ಬರನ್ನು ತೊತ್ತಿನಂತೆ ಕಾಣುವ ಅಧಿಕಾರವನ್ನು ನಮ್ಮ ಸೋ ಕಾಲ್ಡ್ ಪುರುಷ ಪ್ರಧಾನ ವ್ಯವಸ್ಥೆ ಕಲ್ಪಿಸಿ ಕೊಟ್ಟಿದ್ದು ಇಂದಿಗೂ ಅದರ ಮುಂದುವರಿದ ಭಾಗವಾಗಿ ಪುರುಷ ಸ್ವಾಮ್ಯ ನಡೆದುಕೊಂಡು ಬರುತ್ತಿದೆ.
ಎಷ್ಟೋ ಬಾರಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗಿದಾಗ ಆಕೆ ಚೀರಾಡಿ, ಬೋರಾಡಿ ಅಳುತ್ತಾಳೆ. ನೋವಿನಿಂದ ನೊಂದು ಶಪಿಸಬಹುದು ಕೂಡ. ತನ್ನ ವಿರುದ್ಧದ ದೌರ್ಜನ್ಯಕ್ಕೆ ಹೋರಾಡಬಹುದು. ಪ್ರತಿಫಲವಾಗಿ ಆಕೆಗೆ ದೊರೆಯಬಹುದಾದ ಸಾಮಾಜಿಕ ಉತ್ತರ ‘ಮನೆ ಎಂದ ಮೇಲೆ ಇರೋದೇ ಇಷ್ಟು. ಹೊಂದಿಕೊಂಡು ಹೋಗಬೇಕು’ ಎಂದು.
ಗಂಡನ ದೌರ್ಜನ್ಯಕ್ಕೆ ಸಿಲುಕಿದ ಹೆಣ್ಣು ಮಕ್ಕಳು ತಂದೆ ತಾಯಿಗಳು ನಿಸ್ಸಹಾಯಕರು ಎಂಬ ಕಾರಣಕ್ಕೆ ಮಾತ್ರವಲ್ಲದೆ ಸಾಮಾಜಿಕ ಅಪಮಾನ,ನಿಂದೆಗಳಿಗೆ ಹೆದರಿ ತವರಿಗೆ ಮರಳಲು ಕೂಡ ಹೆದರುವರು.

ಇನ್ನು ಅನೇಕ ಮಧ್ಯಮ ವರ್ಗದ ಮಹಿಳೆಯರು ತಾವು ಆರ್ಥಿಕವಾಗಿ ಸಬಲರಾಗಿದ್ದರೂ ಕೂಡ ಹೆದರುವುದು ಇದೇ ಸಾಮಾಜಿಕ ನಿಂದೆಯ ಕಾರಣಕ್ಕೆ.ರಾಜಕುಮಾರಿಯಂತೆ ತಮ್ಮ ಹೆಣ್ಣು ಮಕ್ಕಳನ್ನು ಪೋಷಿಸುವ ಪಾಲಕರು ಕೂಡ ಗಿಡುಗನ ಕೈಯಲ್ಲಿ ಗಿಳಿಯನ್ನು ಕೊಟ್ಟಂತೆ ಎಂದು ನಿಟ್ಟುಸಿರು ಬಿಡುತ್ತಾರೆಯೇ ಹೊರತು ಮಗಳಿಗೆ ಆಸರೆ, ಭಾವನಾತ್ಮಕ ಬೆಂಬಲ ನೀಡಲು ಹಿಂಜರಿಯುತ್ತಾರೆ. ಇನ್ನು ಹೆಣ್ಣುಮಕ್ಕಳೇನಾದರೂ ತಮ್ಮ ಮೇಲಿನ ದೌರ್ಜನ್ಯದ ಕುರಿತಾಗಿ ದೂರು ನೀಡಲು ಹೋದರೆ ಅವರನ್ನು ನಿಕೃಷ್ಟವಾಗಿ ಕಾಣಲಾಗುತ್ತದೆ. ಗಂಡನ ಮನೆಯಲ್ಲಿ ಬಾಳಲಾಗದವಳು ಎಂಬಂತೆ ನಡೆಸಿಕೊಳ್ಳಲಾಗುತ್ತದೆ. ಗಂಡನ ಮನೆಯಲ್ಲಿ ಗಂಜಿ ಕುಡಿದರೂ ಲೇಸು ಎಂಬ ಹಳೆಯ ಸವಕಲು ನಾಣ್ಯವನ್ನು ಚಲಾಯಿಸಲು ಪ್ರಯತ್ನಿಸಿ ಯಶಸ್ವಿಯಾಗುವ ಹಿರಿಯರು ಕೂಡ ಹೆಣ್ಣು ಮಕ್ಕಳಿಗೆ
ಹೊಂದಿಕೊಂಡು ಹೋಗುವಂತೆ ಬುದ್ಧಿ ಹೇಳುತ್ತಾರೆಯೇ ಹೊರತು ಗಂಡು ಮಕ್ಕಳಿಗಲ್ಲ. ಅದರಲ್ಲೂ ದೂರು ಕೊಟ್ಟ ಹೆಣ್ಣು ಮಗಳು ವಿದ್ಯಾವಂತೆಯಾಗಿದ್ದರಂತೂ ಮುಗಿದೆ ಹೋಯಿತು… ‘ಹೆಚ್ಚಿಗೆ ಕಲಿಸಬಾರದು’ ಅಂತ ಹೇಳೋದು ಇದಕ್ಕೆ ಎಂದು ಸಾಮೂಹಿಕ ಷರಾ ಬರೆದುಬಿಡುತ್ತಾರೆ.

ಇದಲ್ಲದರ ಪರಿಣಾಮವಾಗಿ ಹೆಣ್ಣು ಮಕ್ಕಳು ತಮ್ಮ ಮೇಲಾಗುವ ದೌರ್ಜನ್ಯವನ್ನು ತುಸು ಅತ್ತು ಕರೆದು ಒಪ್ಪಿಕೊಳ್ಳುತ್ತಾರೆ ಇಲ್ಲವೇ ಹಲ್ಲು ಮುಡಿ ಕಚ್ಚಿ ಸಹಿಸಿಕೊಳ್ಳುವುದರ ಜೊತೆ ಜೊತೆಗೆ ಇದೆಲ್ಲಾ ಬದುಕಿನಲ್ಲಿ ಸಾಮಾನ್ಯ ಎಂಬಂತೆ ಭಾವಿಸಿ ತಮ್ಮ ಸ್ವಾಭಿಮಾನವನ್ನು ಅಡುಗೆಮನೆಯ ಒಲೆಯ ಉರಿಯಲ್ಲಿ ಸುಟ್ಟು ಹಾಕುತ್ತಾರೆ.

ಪುರುಷ ಪ್ರಧಾನ ವ್ಯವಸ್ಥೆಯ ಈ ಅನಿಷ್ಟ ನಡವಳಿಕೆಯು ಶತಶತಮಾನಗಳಿಂದ ಪ್ರಪಂಚದ ಬಹುತೇಕ ಹೆಣ್ಣು ಮಕ್ಕಳನ್ನು ದೈಹಿಕವಾಗಿ, ಮಾನಸಿಕವಾಗಿ ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ಕುಗ್ಗಿಸಿದ್ದು… ಸಾಕಪ್ಪ! ಈ ಹೆಣ್ಣು ಜೀವನ, ಮುಂದಿನ ಜನ್ಮ ಅಂತ ಇರುವುದಾದರೆ ಗಂಡಸಾಗಿ ಹುಟ್ಟಿಸು ಎಂದು ಅಂತರಂಗದ ಕೋಣೆಯಲ್ಲಿ ನಿಡುಸುಯ್ಯುತ್ತಾ ಕಾಣದ ದೇವರಲ್ಲಿ ಬೇಡಿಕೊಳ್ಳುವ ಮಟ್ಟಿಗೆ ಪರಿಸ್ಥಿತಿ ವಿಷಮಿಸಿದೆ ಎಂದರೆ ವ್ಯವಸ್ಥೆಯ ಲೋಪ ದೋಷಗಳ ತೀವ್ರತೆಯನ್ನು ನಾವು ಅರಿಯಬಹುದು.

ಇದನ್ನೆಲ್ಲಾ ಮನಗಂಡು 1960 ರಲ್ಲಿ ವಿಶ್ವಸಂಸ್ಥೆಯು ಮಹಿಳೆಯರ ಮೇಲೆ ಉಂಟಾಗುವ ಅತ್ಯಾಚಾರ, ಕೌಟುಂಬಿಕ ದೌರ್ಜನ್ಯ,ಮಾನಸಿಕ ಆಘಾತಗಳನ್ನು ಮರೆಮಾಚಲಾಗುವ ಸಾಮಾಜಿಕ ವ್ಯವಸ್ಥೆಯ ಕುರಿತಾದ ಜಾಗೃತಿ ಪ್ರಜ್ಞೆಯನ್ನು ಜನರಲ್ಲಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ನವೆಂಬರ್ 25ರಂದು ಅಂತರಾಷ್ಟ್ರೀಯ ಮಹಿಳಾ ದೌರ್ಜನ್ಯ ವಿರೋಧಿ ದಿನಾಚರಣೆಯನ್ನು ಆಚರಿಸಲು ಕರೆ ನೀಡಿತು.

ನಮ್ಮ ಭಾರತ ದೇಶದಲ್ಲಿ ಪ್ರತಿ 20 ನಿಮಿಷಕ್ಕೆ ಓರ್ವ ಮಹಿಳೆ ದೌರ್ಜನ್ಯಕ್ಕೆ ಒಳಗಾದರೆ, ಪ್ರತಿ 77 ನಿಮಿಷಕ್ಕೆ ಓರ್ವ ಮಹಿಳೆ ಪುರುಷ ದೌರ್ಜನ್ಯಕ್ಕೆ ಬಲಿಯಾಗುತ್ತಾಳೆ. 2005ರಲ್ಲಿ ಅನುಷ್ಠಾನಕ್ಕೆ ತಂದ ಕಾನೂನಿನಿಂದಾಗಿ ಸ್ತ್ರೀಯ ಮೇಲಿನ ಹೊಡೆತ ಬಡಿತ ಗಳಂತಹ ಪ್ರಕರಣಗಳು ಕಡಿಮೆ ಆಗಿವೆ ಎಂದು ಮೇಲ್ನೋಟಕ್ಕೆ ತೋರಿದರೂ ದೌರ್ಜನ್ಯದ ಸ್ವರೂಪ ಬದಲಾಗಿದೆ… ಮೇಲ್ನೋಟಕ್ಕೆ ಕಾಣುವ ದೌರ್ಜನ್ಯಗಳು ಕಡಿಮೆಯಾಗಿದ್ದರೂ ಆಕೆಯ ಅವಶ್ಯಕತೆ ಸೌಲಭ್ಯಗಳಿಗೆ ಕತ್ತರಿ ಹಾಕುವ, ಶೀಲವನ್ನು ಶಂಕಿಸುವ, ಅವಹೇಳನದ ಮಾತುಗಳನ್ನು ಆಡುವ ಮೂಲಕ ಆಕೆಯನ್ನು ಮಾನಸಿಕವಾಗಿ ಇಂಚಿಂಚಾಗಿ ಕೊಲ್ಲಲಾಗುತ್ತಿದೆ.
ತನ್ನ ತಾಯಿ, ಅಕ್ಕ, ಅತ್ತೆ, ಅಜ್ಜಿ ಇವರಿಗೆ ಆಗುತ್ತಿರುವ ಮಾನಸಿಕ ಮತ್ತು ಕೌಟುಂಬಿಕ ದೌರ್ಜನ್ಯಗಳನ್ನು ನೋಡುತ್ತಿರುವ ಇಂದಿನ ಹೆಣ್ಣು ಮಕ್ಕಳು ವಿವಾಹವನ್ನು ಬಂಧನ ಎಂಬಂತೆ ಪರಿಗಣಿಸುತ್ತಿದ್ದು
ಒಳ್ಳೆಯ ವಿದ್ಯಾಭ್ಯಾಸವನ್ನು ಹೊಂದಿ ಆರ್ಥಿಕ ಸ್ವಾತಂತ್ರ್ಯವನ್ನು ಹೊಂದಿರುವ ಅವರು ವೈವಾಹಿಕ ಜೀವನಕ್ಕೆ ಕಾಲಿಡಲು ಹೆದರಿಸುತ್ತಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರುತ್ತದೆ.

ನಮ್ಮ ಭಾರತ ದೇಶದಲ್ಲಿ 2005ರಲ್ಲಿ ರೂಪುಗೊಂಡ ಕೌಟುಂಬಿಕ ದೌರ್ಜನ್ಯ ಕಾಯ್ದೆಯು ಹೆಣ್ಣು ಮಕ್ಕಳು ಮಾನಸಿಕ, ದೈಹಿಕ, ಭಾವನಾತ್ಮಕ, ಲೈಂಗಿಕ ಮತ್ತು ಆರ್ಥಿಕ ಶೋಷಣೆಗಳ ಹಿಂಸೆಯಿಂದ ಮುಕ್ತವಾಗಿ ಸ್ವಾಭಿಮಾನದ ಬದುಕನ್ನು ತಮ್ಮದಾಗಿಸಿಕೊಳ್ಳಬೇಕು ಎಂಬ ಆಶಯವನ್ನು ಹೊಂದಿದ್ದು ಪ್ರಸ್ತುತ ದಿನಮಾನಗಳಲ್ಲಿ ಈ ಕಾನೂನು ಆಶಾದಾಯಕವಾಗಿದ್ದರೂ ಪರಿಣಾಮಕಾರಿಯಾದ ಬದಲಾವಣೆ ತರಲು ಅದರ ಮೂಲ ಅನುಷ್ಠಾನದಲ್ಲಿ ಬಹಳಷ್ಟು ತೊಡಕುಗಳು ಇವೆ. ಕೇವಲ ಗಂಡ, ಅತ್ತೆ, ಮಾವ ಮಾತ್ರವಲ್ಲದೇ ಒಂದೇ ಸೂರಿನಡಿಯಲ್ಲಿ ವಾಸಿಸುತ್ತಿರುವ ಕುಟುಂಬದ ಯಾವುದೇ ಸದಸ್ಯರಿಂದ ಉಂಟಾಗುವ ತೊಂದರೆಗೆ ದೂರು ದಾಖಲಿಸುವ ಮತ್ತು ಪರಿಹಾರ ಕಂಡುಕೊಳ್ಳುವ ಅವಕಾಶ ಈ ಕಾನೂನಿನಲ್ಲಿದೆ.

ಮುಖ್ಯವಾಗಿ ಬದಲಾಗಬೇಕಾಗಿರುವುದು ಸಾಮಾಜಿಕ ಮಾನಸಿಕತೆ, ಲಿಂಗ ಸಮಾನತೆಯ ನಿಟ್ಟಿನಲ್ಲಿ ಹೆಣ್ಣು ಮಕ್ಕಳು ಕುಟುಂಬದ ಭಾಗವಾಗಿದ್ದು ಅವರಿಗೆ ಕೂಡ ಸಮಾನವಾದ ಹಕ್ಕು ಮತ್ತು ಅವಕಾಶಗಳನ್ನು ಕಾನೂನಾತ್ಮಕವಾಗಿ ಮಾತ್ರವಲ್ಲವೇ ಸಾಮಾಜಿಕವಾಗಿಯು ನೀಡಬೇಕಾದ ಅವಶ್ಯಕತೆ ಇದ್ದು ಈ ನಿಟ್ಟಿನಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳಲ್ಲಿ ಯಾವುದೇ ರೀತಿಯ ಭೇದ ಭಾವವನ್ನು ಹೊಂದದೆ ಸಮಾನ ಸ್ಥಾಯಿಯಲ್ಲಿ ಕಾಣಬೇಕಾಗಿದೆ.
ಮುಖ್ಯವಾಗಿ ಮನೆಯಲ್ಲಿ ತಮ್ಮ ಗಂಡು ಮಕ್ಕಳನ್ನು ಹೆಣ್ಣು ಮಕ್ಕಳ ವಿಷಯದಲ್ಲಿ ಸಮಾನವಾಗಿ ಕಾಣುವ, ವಿಶಾಲ ಮನೋಭಾವ, ಗೌರವ ಪ್ರೀತಿ ವಿಶ್ವಾಸಗಳನ್ನು ಹೊಂದಿರುವ ಮತ್ತು ಸಂವೇದನಾಶೀಲ ನಾಗರಿಕರನ್ನಾಗಿ ಬೆಳೆಸುವ ಅವಶ್ಯಕತೆ ಇದ್ದು ಆ ನಿಟ್ಟಿನಲ್ಲಿ ಮಹಿಳೆಯರು ಯೋಚಿಸಬೇಕಾಗಿದೆ.

ಆದರೂ ನಮ್ಮ ಸುತ್ತಮುತ್ತನ ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ಎಲ್ಲೇ ಅನ್ಯಾಯ, ದೌರ್ಜನ್ಯಗಳು ನಡೆಯುತ್ತಿದ್ದರೆ ನಮಗ್ಯಾಕೆ ಬಿಡು ಎಂಬ ಭಾವದಿಂದ
ಸುಮ್ಮನಿರದೇ, ದೌರ್ಜನ್ಯ ಮಾಡುತ್ತಿರುವ ಜನರ ಕುರಿತು ಸೂಕ್ತ ಮಾಹಿತಿಯನ್ನು ಸಂಬಂಧಪಟ್ಟ ಇಲಾಖೆಗೆ ತಲುಪಿಸುವಷ್ಟಾದರೂ ಹೊಣೆಗಾರಿಕೆಯನ್ನು ನಾವು ಹೊತ್ತುಕೊಳ್ಳೋಣ. ಪಕ್ಕದ ಮನೆಗೆ ಹತ್ತಿದ ಬೆಂಕಿ.. ನಮ್ಮ ಮನೆಗೆ ಬರಲು ಬಹಳಷ್ಟು ಸಮಯ ಬೇಕಿಲ್ಲ ಎಂಬ ಅರಿವಿನ ಪ್ರಜ್ಞೆಯನ್ನು ಹೊಂದೋಣ ಎಂಬ ಆಶಯದೊಂದಿಗೆ.

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ